ಬದುಕನ್ನು ತಕ್ಕಡಿಯಲ್ಲಿಟ್ಟು ತೂಗಿ ನಿಖರ ವ್ಯತ್ಯಾಸ ಹೇಳುವ ಈ ಜ್ಞಾನಿ 'ಅವಿಜ್ಞಾನಿ'


'ಬಂದೇ ಬರುತಾವ ಕಾಲ' ಎಂಬ ಸಾಲು ನಿಜವಾಗಿ ಕೆಲ ತಿಂಗಳ ಹಿಂದೆ 'ಈ ಹೊತ್ತಿಗೆ ಕಾವ್ಯ 'ಪ್ರಶಸ್ತಿಯು ಅದ್ಭುತ ಬರಹಗಾರನನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿತು ಎನ್ನುತ್ತಾರೆ ಹಸೀನಾ ಮಲ್ನಾಡ್ ಅವರು ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್'

ಈ ಸಾಲು ಓದುವಾಗ ನನ್ನ ನೆನಪಿಗೆ ಬರುವ ಕೆಲವರಲ್ಲಿ ಅವಿಜ್ಞಾನಿಯೂ ಒಬ್ಬ. ಓದುವಿಕೆಯಲ್ಲಿ ಆಸಕ್ತಿ ಕಡಿಮೆಯಾದರೂ ಬರೆಯುವುದರಲ್ಲಿ ವಿಶೇಷತೆಯನ್ನು, ನಿರಂತರತೆಯನ್ನು ಉಳಿಸಿಕೊಂಡವನು. ಇವನು ಬರೆದ ಒಂದೆರೆಡು ಕವಿತೆಗಳನ್ನು ಓದಿದರೂ ಸಾಕು ಇವನ ಬರಹದಲ್ಲಿ ಇರುವ ಸೆಳೆತ ನಿಮ್ಮ ಅರಿವಿಗೆ ಬರದೇ ಇರದು!.

ತಾನಾಯಿತು, ತನ್ನ ಬರವಣಿಗೆಯಾಯಿತು ಎಂದು ಮರೆಯಲ್ಲಿಯೇ ಕುಳಿತು ಅಪರೂಪದ ಕವಿತೆಗಳನ್ನು ಬರೆಯುತ್ತಾ, 'ಅವಿಜ್ಞಾನಿ,' ಎಂಬ ಕಾವ್ಯನಾಮದೊಂದಿಗೆ ತಾನು ಬರೆದ ಕವಿತೆಗಳನ್ನು ಜಾಲತಾಣದಲ್ಲಿ ತೇಲಿ ಬಿಡುತಿದ್ದ ಈ ವ್ಯಕ್ತಿ ಯಾರಾಗಿರಬಹುದು? ಎಂಬ ಅವ್ಯಕ್ತ ಕುತೂಹಲ ಓದುಗರಲ್ಲಿ ಎಂದೋ ಹುಟ್ಟಿಕೊಂಡಿತ್ತು.

ಆ ಕುತೂಹಲಕ್ಕೆ ತೆರೆ ಎಳೆದು, ಪರದೆಯನ್ನು ಸರಿಸಿ ಅಪರೂಪದ ಕವಿಯೊಬ್ಬನನ್ನು ಬೆಳಕಿಗೆ ತರುವ ಪ್ರಯತ್ನ ಇದೀಗ ಆಗಿದೆ ಎಂಬುದು ಖುಷಿಯ ವಿಷಯ.  ಏನೋ ಒಂದೆರೆಡು ಸಾಲು ಗೀಚಿದ ಕೂಡಲೇ ಫ್ಯಾನ್ ಪೇಜ್ , ಪುಸ್ತಕ ಬಿಡುಗಡೆ, ಪ್ರಶಸ್ತಿ, ಪ್ರಚಾರದ ಬಗೆಗೆಲ್ಲ ಹಪಿಸುವವರ ಮಧ್ಯೆ ಇವನೊಬ್ಬ 'ಗುಂಪಿಗೆ ಸೇರದ ಪದ'.

'ಬಂದೇ ಬರುತಾವ ಕಾಲ' ಎಂಬ ಸಾಲು ನಿಜವಾಗಿ ಕೆಲ ತಿಂಗಳ ಹಿಂದೆ 'ಈ ಹೊತ್ತಿಗೆ ಕಾವ್ಯ 'ಪ್ರಶಸ್ತಿಯು ಈ ಅದ್ಭುತ ಬರಹಗಾರನನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿತು. ಇವನ್ಯಾರವ? ಎಂದು ಇವನ ಬಗ್ಗೆ ಕುತೂಹಲ ಹೊಂದಿದವರಿಗೆಲ್ಲ 'ಇವ ನಮ್ಮವನೇ' ಎಂದು ಆಗಲೇ ತಿಳಿಯಿತು ಎನ್ನಬಹುದು.

ಪದಪ್ರಕಾಶನದ ಮುತುವರ್ಜಿಯಲ್ಲಿ ಈ ಕವಿಯ ಚೊಚ್ಚಲ ಕಾವ್ಯ ಸಂಕಲನವಾದ 'ಅನಾಮಧೇಯ ಗೀರು' ಬಿಡುಗಡೆಯಾಯಿತು. ಸುಮಾರು ಐವತ್ತು ಕವನಗಳನ್ನು ತುಂಬಿಕೊಂಡಿರುವ ಈ ಪುಸ್ತಕವನ್ನು Express ಬಸ್ಸಿನಲ್ಲಿ ಕುಳಿತು ಓದಲು ಶುರು ಮಾಡಿದರೆ ನಿಮ್ಮ ಸ್ಟಾಪ್ ಬರುವಷ್ಟರಲ್ಲಿ ಒಂದೋ, ಎರಡೋ ಕವನವನ್ನಷ್ಟೇ ನೀವು ಓದಿ ಮುಗಿಸಬಲ್ಲಿರಿ. ಏಕೆಂದರೆ ಈ ಕವಿಯ ಬರಹದ ಒಂದೊಂದು ಪದಗಳು, ಅದರ ಒಳಾರ್ಥ, ಒಳ ತಿರುಳನ್ನು ಸುಲಭವಾಗಿ ಅರ್ಥೈಸಲು ಸಾಮಾನ್ಯ ಓದುಗನಿಗೆ ಒಮ್ಮೆಗೇ ಸಾಧ್ಯವಾಗದು. ಒಂದೊಂದು ಸಾಲನ್ನು ಎರಡೆರೆಡು ಸಲವಾದರೂ ಓದಲೇಬೇಕು.

ಈ ಪುಸ್ತಕದಲ್ಲಿರುವ ಒಂದು ಕವಿತೆಯ ಕೆಲ ಸಾಲುಗಳನ್ನೇ ನೋಡಿ,

"ಒಂದು ಗೆರೆ ಎಳೆದುಕೊಂಡಿದ್ದೇನೆ
ಅಂತ್ಯದ್ದೋ ಆರಂಭದ್ದೋ
ಈ ಗೆರೆಗೆ ಪರಿಧಿಯಿಲ್ಲ
ಜ್ಯಾಮಿತಿಗೊಳಪಡದ
ವೃತ್ತ ವಕ್ರ ಚತುರ್ಭುಜ"

ಅಂತ್ಯ ಆರಂಭ ಆರಂಭ ಅಂತ್ಯ

ಹೀಗೇ ಈ ಕವಿತೆ ಮುಂದುವರೆದು, ಹಲವು ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಾ , "ಪುನಃ ಯಥಾವತ್ತು" ಎಂಬ ಪದದೊಂದಿಗೆ ಕೊನೆಗೊಳ್ಳುತ್ತೆ. ಕವಿ ಹೇಳಬೇಕಾದ ಮುಖ್ಯ ವಿಷಯ ಕವಿತೆಯ ಪ್ರಾರಂಭದಲ್ಲೇ ಇದೆ ಎಂದು ನಮಗೆ ಭಾಸವಾದರೂ ಅದು ತೆಗೆದುಕೊಳ್ಳುವ ಯು ಟರ್ನ್ ಗಳೆಲ್ಲವೂ ನಮ್ಮನ್ನು ಓದುವ ಮಧ್ಯೆ ಅಲ್ಲಲ್ಲಿ ನಿಲ್ಲಿಸಿಬಿಡುತ್ತವೆ.

ಕೆಸರಿನಲ್ಲಿ ಅರಳಿದ ಹೂವನ್ನು ಮಾತ್ರ ಕವಿತೆಯ ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವ ಈ ಕಾಲದಲ್ಲಿ ಕೆಸರೊಳಗೂ ಇರುವ ಉಸಿರಿನ ಕಡೆಗೆ ಕವಿ ತನ್ನ ಚಿಂತನೆಯನ್ನು ಹರಿಯಬಿಟ್ಟಿದ್ದಾನೆ. ಅಷ್ಟೇ,ಕವಿತೆ ಅದಾಗಿಯೇ ಹುಟ್ಟಿಕೊಂಡಿದೆ!.

ನೋವು, ಹತಾಶೆ, ನಿರ್ಲಿಪ್ತತೆಯನ್ನು ತುಂಬಿಕೊಂಡು ಇಲ್ಲಿ 'ಬದುಕು ದುಸ್ತರ" ಎಂದು ಕವಿ ಅಭಿಪ್ರಾಯ ಪಟ್ಟಂತೆ ಕಂಡರೂ, ಎಲ್ಲವನ್ನು ಸಹ್ಯ ಮಾಡಿಕೊಳ್ಳುವುದರ ಬಗ್ಗೆ ಮತ್ತೊಂದು ಕವಿತೆಯಲ್ಲಿ ಆಶಾವಾದವನ್ನೂ ಹುಟ್ಟುಹಾಕುತ್ತಾನೆ. 

"ಮುಳ್ಳ ದಾರಿಯಾದರೂ ಸರಿ
ಸಾವಿಗೆ ರಿಯಾಯಿತಿ ಕೇಳುತ್ತೇನೆ "
ಎಂಬ ಈ ಸಾಲು ಕವಿಯ ಆಶಾವಾದಿತನವನ್ನು ಪ್ರತಿಧ್ವನಿಸುತ್ತದೆ.

ಇಷ್ಟು ಸಣ್ಣ ಪ್ರಾಯದಲ್ಲಿ ಬದುಕನ್ನು ತಕ್ಕಡಿಯಲ್ಲಿಟ್ಟು ತೂಗಿ ನಿಖರ ವ್ಯತ್ಯಾಸ ಹೇಳುವ ಈ ಜ್ಞಾನಿ  'ಅವಿಜ್ಞಾನಿ ' ಎಂಬ ಹೋಲಿಕೆ ಇಲ್ಲದ ಹೆಸರನ್ನೇಕೆ ಇಟ್ಟುಕೊಂಡಿರುವುದು? ಎಂದು ಈ ಪುಸ್ತಕ ಓದಿದ ಯಾರಾದರೂ ಪ್ರಶ್ನಿಸದೇ ಇರಲಾರರು.!

MORE FEATURES

ಹರಿಹರನ ರಗಳೆಗಳು ಓದಿ ಆನಂದ ಪಡುವತ್ತ ತಮ್ಮದೇ ವೈಶಿಷ್ಟ್ಯ ಹೊಂದಿವೆ

21-05-2024 ಬೆಂಗಳೂರು

‘ತನ್ನ ಭಕ್ತಿ ಭಾವೋನ್ಮಾದದ ಜಲಪಾತಕ್ಕೆ ರೂಪ ಕೊಡಲು ಹರಿಹರ ಶಬ್ದಗಳ ಜಲಪಾತವನ್ನೇ ಧುಮ್ಮಿಕ್ಕಿಸುತ್ತಾನೆ’ ಎ...

'ನಂಕು'ವಿನ ಅಕ್ಷರ ಭಾವಕೆ 'ರಾಂಕೊ' ರೇಖಾ ಭಾವ

21-05-2024 ಬೆಂಗಳೂರು

'ಭಾವರೇಖೆಯಲ್ಲಿ ಪ್ರೀತಿ ಇದೆ. ಅವಳಿದ್ದಾಳೆ, ಅದೇ ಮುಂಗುಳಿನಲ್ಲಿ ಕಾಡಿದವಳು, ಸೂರ್ಯನಿಗಿಂತ ಪ್ರಕರವಾಗಿ ಕಂಡವಳು ಹೀ...

ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಬೇಕಾದ ಶಕ್ತಿ ತನುಮನಗಳಲ್ಲಿ ಪ್ರವಹಿಸುತ್ತದೆ

21-05-2024 ಬೆಂಗಳೂರು

‘ಮಕ್ಕಳಿಗೆ ಕುವೆಂಪು ಅವರನ್ನು ಪರಿಚಯಿಸುವಾಗ ಹೆಸರಿಗೂ ಮುನ್ನ 'ನಮ್ಮ' ಎಂದು ಗುರುತಿಸಿರುವುದರಲ್ಲಿಯೇ ಒ...