ಬದುಕು-ಸಾವುಗಳ ಸಹಜ ಲಯ ತಪ್ಪಿಸುವ ಅಸಂಗತ-ಅರ್ಥಶೂನ್ಯ


ಸದ್ಯ ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟು  ಮಾನವ ಸಮುದಾಯಕ್ಕೆ ಮುಖಾಮುಖಿಯಾದ ಮೊದಲ ಸವಾಲು-ಸಮಸ್ಯೆ-ಸಂಕಟವೇನಲ್ಲ. ಸಹಜ ಬದುಕಿನ ಲಯವನ್ನು ತಪ್ಪಿಸುವ ಸಾವು-ನೋವು, ಆತಂಕಕ್ಕೆ ಈಡು ಮಾಡುವ ಈ ಗಳಿಗೆಗಳಿಗೆ ಸಾಹಿತ್ಯ-ಅಕ್ಷರಲೋಕ ಮುಖಾಮುಖಿಯಾಗುತ್ತ ಬಂದಿದೆ. ಅಸಂಗತ-ಅರ್ಥಶೂನ್ಯ ಎನ್ನಿಸುವ ಕ್ಷಣದಲ್ಲಿಯೂ ಮನುಷ್ಯರಿಗೆ ಪ್ರೀತಿಸುವ-ಖುಷಿ ಪಡುವ ಮೂಲಭೂತ ಹಕ್ಕು ಇದ್ದೇ ಇರುತ್ತದೆ. ಅರಿವನ್ನು ಮೀರುವ ಸಂಗತಿಗಳನ್ನು ರೂಪಕವಾಗಿಸಿ ಅರ್ಥ-ಕಾರಣಗಳ ವ್ಯಾಖ್ಯಾನ ಹುಡುಕುತ್ತೇವೆ ಎನ್ನುವ ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಸಾಹಿತ್ಯಕೃತಿಗಳ ಬೆಳಕಿನಲ್ಲಿ ಕಟ್ಟಿಕೊಳ್ಳಬೇಕಾದ-ನೋಡಬೇಕಾದ ವರ್ತಮಾನವನ್ನು ವಿವರಿಸಿದ್ದಾರೆ. ಇದೊಂದು ಅಭ್ಯಾಸಪೂರ್ಣ -ಓದುಗರ ಅರಿವಿನ ಕ್ಷಿತಿಜ ವಿಸ್ತರಿಸುವ ಬರಹ.


ಚರಿತ್ರೆಯಲ್ಲಿ ಪಿಡುಗುಗಳು ಬಂದಾಗಲೆಲ್ಲ ಮನುಷ್ಯನ ಅಸ್ತಿತ್ವದ ಬಗ್ಗೆ, ಬದುಕಿನ ಅರ್ಥದ ಬಗ್ಗೆ, ನೈತಿಕತೆ ಹಾಗೂ ಕ್ರಿಯೆಗಳ ಬಗ್ಗೆ ಗಾಢವಾದ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹೀಗೆ ಆಗುವುದಕ್ಕೆ ಮುಖ್ಯ ಕಾರಣವೆಂದರೆ ಪಿಡುಗುಗಳು ಅನಿರೀಕ್ಷಿತವಾಗಿರುತ್ತವೆ. ನಿತ್ಯದ ಬದುಕು ಹೀಗೇ ಇರುತ್ತದೆಯೆನ್ನುವ ನಂಬಿಕೆ ಮಾತ್ರದಿಂದ ಸಾಗುವ ಜೀವನದ ಸಾಮಾನ್ಯತೆಯ ಮಧ್ಯ ಪಿಡುಗು ಧುತ್ತೆಂದು ಪ್ರತ್ಯಕ್ಷವಾಗಿ ಆಮೇಲೆ ನಮ್ಮನ್ನು ಹೇಗೆ ತೊತ್ತಳ ತುಳಿಯುತ್ತದೆಯೆಂದರೆ ನಮ್ಮ ಅರಿವು ಮತ್ತು ಕಲ್ಪನೆಯ ಶಕ್ತಿಯನ್ನು ಮೀರಿ ಹೋಗಿಬಿಡುತ್ತದೆ. ಅದಕ್ಕೇ ಪಿಡುಗುಗಳಲ್ಲಿ ಬದುಕಿ ಉಳಿದವರು, “ಕಾಲ ಕೆಳಗಿಂದ ಭೂಮಿ ಇದ್ದಕ್ಕಿಂದಂತೆ ಜರುಗಿ ಹೋಗಿ” ಅನುಭವವಾಯಿತು ಎಂದು ಹೇಳುತ್ತಾರೆ. ಫ್ರೆಂಚ್ ಬರಹಗಾರ ಆಲ್ಪರ್ಟ್ ಕಾಮ್ಯೂ ‘The Plague’ ಕಾದಂಬರಿಯಲ್ಲಿ ಆಗುವುದು ಹೀಗೆಯೆ. ಅಲ್ಜೀರಿಯಾದ ಓರಾನ್ ಎನ್ನುವ ಸಮುದ್ರ ತೀರದ ನಗರವು ಎಲ್ಲಾ ಆಧುನಿಕ ಬೂರ್ಜ್ವಾ ನಗರಗಳಂತೆ ಚಹರೆ ಇಲ್ಲದ ಒಂದು ನಗರ. ನಿರೂಪಕ ಹೇಳುವಂತೆ ಅದರ ಮುಖ್ಯ ಲಕ್ಷಣವೆಂದರೆ ಲಕ್ಷಣವೇ ಇಲ್ಲದಿರುವುದು, ದುಡ್ಡು ಮಾಡುವುದು, ದೇಹಕ್ಕೆ ಬೇಕಾದ ಸುಖಗಳನ್ನು ಅನುಭವಿಸುವುದು ಇವುಗಳ ಆಚೆಗೆ ಏನನ್ನೂ ಯೋಚಿಸದ ನಾಗರೀಕರ ನಗರವಿದು. ಒಂದು ದಿನ ಈ ನಗರದ ಡಾಕ್ಟರ್ ಬರ್ನಾರ್ಡ್ ರಿಯ್ ಮೆಟ್ಟಿಲಿಳಿದು ಬರುವಾಗ ಸತ್ತ ಇಲಿಯನ್ನು ನೋಡುತ್ತಾನೆ. ಕೆಲವು ದಿನಗಳಲ್ಲಿ ನಗರದಲ್ಲಿ ಇಲಿಗಳು ದೊಡ್ಡ ಸಂಖ್ಯೆಯಲ್ಲಿ ಸಾಯತೊಡಗುತ್ತವೆ. ನಾವೆಲ್ಲ ಮಾಡುವಂತೆ ನಾಗರೀಕರು ನಗರಸಭೆ, ಆಡಳಿತಗಳ ಅಲಕ್ಷ್ಯದ ಬಗ್ಗೆ ಪತ್ರಿಕೆಗಳಿಗೆ ಬರೆಯತೊಡಗುತ್ತಾರೆ. ಅಷ್ಟರಲ್ಲಿ ರೋಗವು ಹಬ್ಬತೊಡಗುತ್ತದೆ. ವಾಸ್ತವವಾದಿಯಾದ ಡಾಕ್ಟರ್ ರಿಯ್‌ನಿಗೆ ಇದು ಪ್ಲೇಗ್ ಎಂದು ಹೊಳೆದರೂ 1940ರ ದಶಕದಲ್ಲಿ ಆಧುನಿಕ ನಗರವೊಂದರಲ್ಲಿ ಪ್ಲೇಗ್ ಬಂದಿದೆ ಎಂದು ನಂಬುವುದು ಹೇಗೆ? ಪಿಡುಗುಗಳು ಬಂದಾಗ ಹುಟ್ಟುವ ಸಮಸ್ಯೆಯೇ ಇದು-ನಾಮಕರಣದ ಸಮಸ್ಯೆ, ನಮ್ಮ ಪ್ರಜ್ಞೆಯ ಆಳದಲ್ಲಿ ಯಾವುದನ್ನೂ ನಂಬಲು ಬಯಸುವುದಿಲ್ಲವೋ ಅದರ ಹೆಸರನ್ನು ನುಡಿಯುವ ಸಮಸ್ಯೆ, ಅನಂತಮೂತಿರ್ಯಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಅಗ್ರಹಾರದ ಬ್ರಾಹ್ಮಣರು ಪಾರಿಜಾತಪುರಕ್ಕೆ ಹೋಗಿ ಅಲ್ಲಿ ಮಂಜಯ್ಯರಿಗೆ ನಾರಣಪ್ಪನ ಸಾವು, ಇಲಿಗಳ ಸಾವು ಇವುಗಳನ್ನು ವಿವರಿಸಿದಾಗ “ಆ ಎರಡಕ್ಷರದ ರೋಗದ” ಹೆಸರು ಹೊಳೆದು ಭೀತಿಯಾದರೂ ಅವರು ಅದನ್ನು ನಂಬುವುದಿಲ್ಲ, ಮುಂದೆ ಅನೇಕ ಬ್ರಾಹ್ಮಣರು ಸತ್ತಮೇಲೆ ‘ತಾಯಿನಾಡು’ ಪತ್ರಿಕೆಯಲ್ಲಿ “ಶಿವಮೊಗ್ಗೆಯಲ್ಲಿ ಪ್ಲೇಗ್” ಎಂಬ ವರದಿಯನ್ನು ನೋಡಿ ತೀರ್ಥಳ್ಳಿಗೆ ಗಾಡಿ ಕಟ್ಟಿಸಿ ಹೊರಡುತ್ತಾರೆ. ಕೊರೋನಾ ಪಿಡುಗು ಭಾರತಕ್ಕೆ ಬರುವುದಿಲ್ಲವೆಂದು ನಾವೆಲ್ಲಾ ನಂಬಿರಲಿಲ್ಲವೆ?

ಪಿಡುಗು ಒಂದು ರೂಪಕವಲ್ಲ, ಅದು ಬದುಕು, ಸಾವುಗಳ ಸಹಜ ಲಯವನ್ನು ತಪ್ಪಿಸಿಬಿಡುವಂಥ ನಮ್ಮ ಅವರಿಗೆ ಸವಾಲಾಗಿಬಿಡುವಂಥ ವಿದ್ಯಮಾನ. ಆದರೆ ಒಬ್ಬ ತತ್ವಜ್ಞಾನಿ ಹೇಳಿರುವಂತೆ ಯಾವುದು ನಮ್ಮ ಅರಿವನ್ನು ಮೀರುತ್ತದೆಯೋ ಅದನ್ನು ರೂಪಕವಾಗಿಸಿ ಅದಕ್ಕೆ ಅರ್ಥ ಹಾಗೂ ಕಾರಣಗಳ ವ್ಯಾಖ್ಯಾನವನ್ನು ನಾವು ಹುಡುಕತೊಡಗುತ್ತೇವೆ. 14ನೇ ಶತಮಾನದಲ್ಲಿ ಇಟಲಿಯ ಫ್ಲೋರೆನ್ಸ್ ನಗರದಲ್ಲಿ ಬದುಕಿದ್ದ ಜಿಯೋವನ್ನಿ ಬೋಕಾಟ್ಸಿಯೋ ಯೂರೋಪಿನ ಚರಿತ್ರೆಯನ್ನು ಅಮೂಲಾಗ್ರವಾಗಿ ಬದಲಾಯಿಸಿದ ಮಹಾ ಪ್ಲೇಗ್‌ಗೆ ಸಾಕ್ಷಿಯಾಗಿದ್ದ. ಹಲವು ವರ್ಷಗಳ ನಂತರ ಜಗತ್ತಿನ ಸುಪ್ರಸಿದ್ಧ “ಡೆಕಾಮೆರನ್” ಎನ್ನುವ ಸರಣ ಕತೆಗಳ ಕೃತಿಯನ್ನು ರಚಿಸಿದ. ಈ ಕೃತಿಯ ಆರಂಭಕ್ಕೆ ಒಂದು ಕಥಾ ಚೌಕಟ್ಟಿದೆ. ಫ್ಲೋರೆನ್ಸ್ ನಗರಕ್ಕೆ ಪ್ಲೇಗ್ ಬಂದು ಬಿಟ್ಟಿದೆ, 1348ನೇ ಇಸ್ವಿಯಲ್ಲಿ, ಜನರು ವಿಚಿತ್ರವಾದ ಕಾಯಿಲೆಯಿಂದ ಭೀತಿ ಹುಟ್ಟಿಸುವ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. “ಕಂಕುಳಲ್ಲಿ ಮೊಟ್ಟೆ ಗಾತ್ರದ ಬಾವುಗಳು” ವಿಪರೀತ ಭಯ, ಸಾವು ಖಂಡಿತ ಎಂದು ಅವನು ವಿವರಿಸುತ್ತಾನೆ. ಅದು ಹೇಗೆ ಹರಡುತ್ತಿದೆಯೆಂದರೆ ರೋಗಿಯ ಬಟ್ಟೆ ತಗುಲಿದರೆ, ಉಸಿರು ತಾಗಿದರೆ ಹರಡುತ್ತಿದೆ. ಮೈಮೇಲೆ ಕಪ್ಪು ಕಲೆಗಳು ಹರಡುತ್ತವೆ. “ಅವು ಬರಲಿರುವ ಸಾವಿನ ಸಂಕೇತಗಳು”, ಬೀದಿಗಳಲ್ಲಿ ಹೆಣಗಳು ಬೀಳತೊಡಗುತ್ತವೆ. 

“ಮನುಷ್ಯನಿಗೆ ಇರುವ ಎಲ್ಲ ಬುದ್ಧಿಶಕ್ತಿಯನ್ನು ಉಪಯೋಗಿಸಿ ನಗರವನ್ನು ಶುಚಿಗೊಳಿಸಿ, ರೋಗಬಂದವರ ಮೇಲೆ ನಿರ್ಭಂಧ ಹೇರಿ” ಹೀಗೆಲ್ಲಾ ಏನು ಮಾಡಿದರೂ ಪಿಡುಗು ಹಬ್ಬುವುದು ನಿಲ್ಲುವುದಿಲ್ಲ. ಯಾಕೆ ಈ ಪಿಡುಗು ಬಂದಿತು ಎಂದು ಯಾರಿಗೂ ಗೊತ್ತಿಲ್ಲ. (1348ರಲ್ಲಿ ಬಂದ ಪ್ಲೇಗ್ ಫ್ಲಾರೆನ್ಸ್ನ ಜನಸಂಖ್ಯೆಯ 70 ಪ್ರತಿಶತ ಜನರನ್ನು ಕೊಂದಿತು, ಹಾಗೂ ಒಟ್ಟು ಯೂರೋಪಿನ ಜನಸಂಖ್ಯೆಯ 1/2 ರಷ್ಟು ಜನರನ್ನು ಕೊಂದಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಅದು ಒಂದು ಬ್ಯಾಕ್ಟೀರಿಯಾನಿಂದ ಬರುತ್ತದೆಯೆಂದು ಗೊತ್ತಾಗಿದ್ದು ಇಪ್ಪತ್ತನೇಯ ಶತಮಾನದಲ್ಲಿ). ಹೀಗಾಗಿ ಅನೇಕ ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತವೆ. “ಇದಕ್ಕೆ ಆಕಾಶದಲ್ಲಿಯ ಗೃಹಗಳ ಪ್ರಭಾವ ಕಾರಣವೋ, ನಾವು ಮನುಷ್ಯರು ಮಾಡುವ ಪಾಪಗಳಿಗೆ ದೇವರು ಕ್ರೋಧಗೊಂಡು ಹೇರಿದ ಪ್ರಾಯಶ್ಚಿತ್ತಗಳು ಕಾರಣವೋ” ಎಂದು ಜಿಯೋವನ್ನಿ ಬರೆಯುತ್ತಾನೆ. 

17ನೇ ಶತಮಾನದಲ್ಲಿ ಲಂಡನ್ ನಗರಕ್ಕೆ ಭೀಕರವಾದ ಪ್ಲೇಗ್ ಬಂದಿತು. ಅದಕ್ಕೆ ಸಾಕ್ಷಿಯಾಗಿದ್ದವನು ಸರಕಾರದ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ, ಶುದ್ಧ ಲೌಕಿಕನೂ, ರಸಿಕನೂ, ಯಶಸ್ಸು, ಸಾಮಾಜಿಕ ಅಂತಸ್ತು ಇವುಗಳನ್ನೇ ನೆಚ್ಚಿಕೊಂಡಿದ್ದ ಸ್ಯಾಮುವೆಲ್ ಪೀಪ್ಸ್ (Samuel Pepys) ಎಂಬ ವ್ಯಕ್ತಿ. ಅವನು ಶಾರ್ಟ್ಹ್ಯಾಂಡ್‌ನಲ್ಲಿ ಬರೆದಿಟ್ಟಿದ್ದ ದಿನಚರಿಗಳನ್ನು ಎಷ್ಟೋ ಕಾಲದ ಮೇಲೆ ಓದಲಾಯಿತು. ಅವು ಈಗ ಇಂಗ್ಲೀಷ್ ಸಾಹಿತ್ಯದ ಮುಖ್ಯ ಕೃತಿಗಳಾಗಿವೆ. ಪ್ಲೇಗ್ ಬಂದಕೂಡಲೇ ನಗರದ ಶ್ರೀಮತರೆಲ್ಲ ದೂರದ ತಮ್ಮ ಭವ್ಯ ಎಸ್ಟೇಟ್ ಮನೆಗಳಿಗೆ ಹೊರಟು ಬಿಡುತ್ತಾರೆ. ಅವನು ತನ್ನ ಹೆಂಡತಿಯನ್ನು ದೂರದ ಊರಿಗೆ ಕಳುಹಿಸುತ್ತಾನೆ. ಇದಕ್ಕೆ ಇನ್ನೊಂದು ಕಾರಣವೆಂದರೆ ಲಂಡನ್ ನಗರದ ಉದ್ದಕ್ಕೂ ಅವನ ಪ್ರೇಯಸಿಯರಿದ್ದಾರೆ! ದಿನಚರಿಯ ಒಂದು ಟಿಪ್ಪಣ ಯಲ್ಲಿ “ಸುತ್ತಲೂ ಪ್ಲೇಗ್ ಭೀಕರವಾಗಿ ಹರಡಿದ್ದರೂ ನಾನು ಅವಳ ಜೊತೆ (ಪ್ರೇಯಸಿ) ಸಂಭೋಗ ಮಾಡಿದೆ” ಎಂದು ಪ್ರಾಮಾಣ ಕವಾಗಿಯೇ ಬರೆದುಕೊಂಡಿದ್ದಾನೆ. ಆ ಕಾಲದಲ್ಲಿಯೂ home quarantine ಕಡ್ಡಾಯವಾಗಿತ್ತು. ಪ್ಲೇಗ್ ರೋಗಿಗಳಿರುವ ಮನೆಗಳ ಮೇಲೆ ಕೆಂಪು ಬಣ್ಣದಲ್ಲಿ ಒಂದು ಕ್ರಾಸ್ ಬರೆದು “The Lord have mercy upon us”(ದೇವರು ನಮ್ಮ ಮೇಲೆ ಕರುಣೆ ತೋರಿಸಲಿ) ಎಂದು ಬರೆಯಲಾಗುತ್ತಿತ್ತು. ಅಲ್ಲದೆ ಮನೆಗೆ ಬೀಗಜಡಿದು ಒಬ್ಬ ಕಾವಲುಗಾರರನ್ನು ನೇಮಿಸಲಾಗುತ್ತಿತ್ತು. ಒಳಗಿನಿಂದ ನೋವು, ಸಾವಿನ ಈತ್ಕಾರಗಳು ಕೇಳಿಬರುತ್ತಿದ್ದವು. ಲೌಕಿಕ ಸ್ವಭಾವದ ಪೀಪ್ಸ್ ತನ್ನಂಥ ಮನುಷ್ಯರ ಭಯ ಭೀತಿಗಳನ್ನು ವಿವರಿಸುತ್ತಾನೆಯೆ ಹೊರತು ತಾತ್ವಿಕ ಪ್ರಶ್ನೆಗಳನ್ನು ಕೇಳುವುದಿಲ್ಲ. ಆದರೆ ಲಂಡನ್ ಪ್ಲೇಗ್ ಬಂದಾಗ ನಾಲ್ಕು ವರ್ಷದ ಮಗುವಾಗಿದ್ದ ಡೇನಿಯಲ್ ಡಿಫೋ ತನ್ನ 62ರ ವಯಸ್ಸಿನಲ್ಲಿ ಬರೆದ ‘A Journal of the Plague Year’’ ನಲ್ಲಿ ಈ ಪ್ರಶ್ನೆಗಳನ್ನು ಕೇಳುತ್ತಾನೆ. 

ಇದೊಂದು ಅದ್ಭುತವಾದ ಕೃತಿ. ತಾನು ಬರೆಯುತ್ತಿರುವುದು ಕಾಲ್ಪನಿಕ ಕಥಾನಕವಾದರೂ ಅದನ್ನು    H.F. ಎಂಬ ವ್ಯಕ್ತಿಯ ದಿನಚರಿಯೆಂದು ಡಿಫೋ ವಣ ðಸುತ್ತಾನೆ. ಅದೆಷ್ಟು ವಾಸ್ತವಿಕವಾಗಿ ಪ್ಲೇಗ್ ಪಿಡುಗಿನ ವಿವರಗಳನ್ನು ಕೊಡುತ್ತಾನೆಂದರೆ ಅದು ಜೀವಂತ ಸಾಕ್ಷಿಯ ದಿನಚರಿ ಆಗಿರಲೇಬೇಕು ಎನಿಸುತ್ತದೆ. ಇದು ಕೇವಲ ಬರಹದ ಒಂದು ತಂತ್ರವಾಗಿದ್ದರೂ ಈ ಕೃತಿಯ ವಾಸ್ತವಾಂಶಗಳ ಬಗ್ಗೆ ನಿರುಪಯೋಗಿ ಚರ್ಚೆಗಳು ಈಗಲೂ ನಡೆಯುತ್ತಿವೆ. ಇಂಗ್ಲೆಂಡ್ ಹಾಗೂ ಅಮೇರಿಕದ ಬಹು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇಂಥ ಪೆದ್ದು ಚರ್ಚೆಗಳು ಇತ್ತೀಚಿಗೆ ಹೇರಳವಾಗಿ ಬಂದಿದ್ದನ್ನು ನೋಡಿ ವೈಯಕ್ತಿಕವಾಗಿ ನನಗೆ ಖುಷಿಯಾಯಿತು, ಪಶ್ಚಿಮದಲ್ಲಿಯೂ ನಮ್ಮಂಥ ದಡ್ಡರೇ ಇದ್ದಾರಲ್ಲವೆಂದು ಸಮಾಧಾನವಾಯಿತು! ಸ್ಯಾಮುವೆಲ್ ಪೀಪ್ಸ್ನ ದಿನಚರಿ ಹಾಗೂ ಡಿಫೋನ ಕಾಲ್ಪನಿಕ ಕೃತಿಯನ್ನು ಹೋಲಿಸಿದರೆ ಡಿಫೋನ ಕೃತಿ ಆಳವಾದ ತಾತ್ವಿಕ ಸತ್ಯಗಳನ್ನು ಹೇಳುತ್ತದೆಯೆನ್ನುವುದು ಸ್ಪಷ್ಟವಾಗುತ್ತದೆ. ಇಂಗ್ಲೀಷ್ ಕಾದಂಬರಿಯ ಜನಕರಲ್ಲಿ ಒಬ್ಬನಾದ ಡಿಫೋ ಮೂಲತಃ ಒಬ್ಬ ಪತ್ರಕರ್ತನಾಗಿದ್ದ. ಹೀಗಾಗಿ ವಾಸ್ತವದ ವರದಿಯಂತೆ ಕಾಣುವ ವಾಸ್ತವವಾದಿ ಕಾದಂಬರಿಯ ಶೈಲಿಯನ್ನು ರೂಪಿಸಿದ. ಹೀಗಾಗಿ ಈ ಕೃತಿಯಲ್ಲಿ ನಿರೂಪಕನು ಲಂಡನ್ ಪ್ಲೇಗ್ ಹರಡಿದ್ದನ್ನು ಆ ಕಾಲದಲ್ಲಿ ನಗರದ ಆಯಾ parishಗಳಲ್ಲಿ ಕಲೆಹಾಕಿ ಹೊರಡಿಸುತ್ತಿದ್ದ ಸಾವಿನ ಅಂಕಿಸಂಖ್ಯೆಗಳ ಪಟ್ಟಿಗಳನ್ನು ಕೊಡುವುದರ ಮೂಲಕ ವಿವರಿಸುತ್ತಾನೆ. ಈಗ ಬೆಳಿಗ್ಗೆ ಎದ್ದ ಕೂಡಲೇ ನಾವು Covid Tracker  ನೋಡುವಂತೆ ಲಂಡನ್ ನಾಗರೀಕರು ಈ ಪಟ್ಟಿಗಳಿಗಾಗಿ ಕಾಯುತ್ತಿದ್ದರು. ಲಂಡನ್‌ನ ಹೊರಭಾಗಗಳಲ್ಲಿ, ಬಡಜನರು ವಾಸಮಾಡುತ್ತಿದ್ದ ಸ್ಥಳಗಳಲ್ಲಿ ಪ್ಲೇಗ್ ಹರಡತೊಡಗುತ್ತದೆ. ಆದರೆ ನಿಧಾನವಾಗಿ ನಗರದ ಶ್ರೀಮಂತ ಬಡಾವಣೆಗಳಿಗೂ ಕಾಲಿಡುತ್ತದೆ. ಅಷ್ಟರಲ್ಲಿ ಇಂಗ್ಲೆಂಡ್‌ನ ಪ್ರಭುವೂ ಸೇರಿದವಂತೆ ಶ್ರೀಮಂತ ವರ್ಗದವರು ಲಂಡನ್ ನಗರವನ್ನು ತೊರೆದಿದ್ದಾರೆ. ಅಷ್ಟು ಮಾತ್ರವಲ್ಲ, ವೈದ್ಯರು ಹಾಗೂ ಬಹುಪಾಲು ಪಾದ್ರಿಗಳೂ ಕೂಡ. ಪೀಪ್ಸ್ನ ದಿನಚರಿಯಲ್ಲಿ ಪ್ಲೇಗ್ ಮುಗಿದ ಮೇಲೆ ವಾಪಸ್ಸು ಬಂದ ಒಬ್ಬ ವೈದ್ಯ ಹೇಳುತ್ತಾನೆ “ಹೇಗಿದ್ದರೂ ನಾನು ನೋಡಿಕೊಳ್ಳುವ ಶ್ರೀಮಂತ ವರ್ಗದವರು ಲಂಡನ್‌ನಿAದ ಹೊರಟುಹೋಗಿದ್ದರಿಂದ ನಾನೂ ಹೊರಟುಹೋದೆ”. ಆದರೆ ಡಿಫೋನ ಕೃತಿಯಲ್ಲಿ ತಮ್ಮನ್ನು ಸಾಯಲು ಬಿಟ್ಟು ಓಡಿಹೋದ ವೈದ್ಯರು ಹಾಗೂ ಪಾದ್ರಿಗಳ ಮನೆಗಳ ಮೇಲೆ “To Let” (ಬಾಡಿಗೆಗಿದೆ) ಎಂದು ಬರೆದು ಬಡಜನರು ತಮ್ಮ ಸಿಟ್ಟನ್ನು ತೋರಿಸುತ್ತಾರೆ.

ಜಿಯೋವನ್ನಿ ಬೋಕಾಟ್ಸಿಯೋನ ಕೃತಿಯಲ್ಲಿ ಕೂಡ ಪ್ಲಾರೆನ್ಸ್ನ ಶ್ರೀಮಂತರು ನಗರ ತೊರೆದು ಹೋಗುತ್ತಾರೆ. ‘ಡೆಕಾಮರನ್’ ಕೃತಿಯಲ್ಲಿರುವ ನೂರು ನೀಳ್ಗತೆಗಳನ್ನು ಹೇಳುವವರು ಹೀಗೆಯೆ ನಗರ ತೊರೆದು ಐಷಾರಾಮಿನ ಅರಮನೆಯಂಥ ಜಾಗದಲ್ಲಿ ಹತ್ತು ದಿನ ಕಾಲಕಳೆಯುವ ಏಳು ಜನ ಯುವತಿಯರು ಹಾಗೂ ಮೂವರು ಯುವಕರು. ಜಿಯೋವನ್ನು ಪ್ಲೇಗ್ ಪಿಡುಗಿಗೆ ಜನರ ವಿಭಿನ್ನ ಪ್ರತಿಕ್ರಿಯೆಗಳನ್ನು ವಣ ðಸುತ್ತಾನೆ. ಕೆಲವರು ಪಿಡುಗಿನ ಕಾಲದಲ್ಲಿ ಬೇಕಾಗಬಹುದಾದ ಆಹಾರ, ಮದ್ಯ ಇವೆಲ್ಲವನ್ನು ಶೇಖರಿಸಿಕೊಂಡು ಬಾಗಿಲು ಹಾಕಿಕೊಂಡು ಪಿಡುಗು ಮುಗಿಯುವ ವರೆಗೆ ಹೊರಬರುವುದಿಲ್ಲ. ಇನ್ನು ಕೆಲವರು ಹೀಗೇ ಮಾಡುತ್ತಾರೆ, ಆದರೆ ಮಿತವ್ಯಯದಿಂದ. ಇನ್ನು ಕೆಲವರು ರೋಗಬರುವುದು ಕೆಟ್ಟ ವಾಸನೆಯ ಗಾಳಿಯಿಂದ ಎಂದು ನಂಬಿ ಹೂವು, ಸುವಾಸನೆ ದ್ರವ್ಯಗಳು ಇವುಗಳನ್ನು ಆಘ್ರಾದಿಸುತ್ತಾ ಓಡಾಡುತ್ತಾರೆ. ಇನ್ನೂ ಕೆಲವರು ಹೇಗಿದ್ದರೂ ಸಾವು ತಪ್ಪದು ಎಂದು ರಾತ್ರಿಯೆಲ್ಲಾ ಮೋಜಿನ ಪಾರ್ಟಿಗಳನ್ನು ಮಾಡುತ್ತಾ, ಹಾಡು ಹೇಳುತ್ತಾ ಕಾಲ ಕಳೆಯುತ್ತಾರೆ. ಇದಾವುದಕ್ಕೂ ಕ್ಯಾರೆ ಅನ್ನದ ಪಿಡುಗು ಸರ್ವರಿಗೆ ಸಮಪಾಲಿನ ಸಾವನ್ನು ತರುತ್ತದೆ.  ಆಲ್ಪರ್ಟ್ ಕಾಮ್ಯೂನ ಕಾದಂಬರಿಯಲ್ಲಿಯೂ ಓರಾನ್‌ನ ಜನರು ಅದೇ ಚಲನಚಿತ್ರವನ್ನು ಮತ್ತೆ ಮತ್ತೆ ನೋಡಿ ಅತಿಯಾಗಿ ಕುಡಿಯುತ್ತಾ ಪ್ಲೇಗ್‌ನ ಭೀತಿಯನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಸಾವಿನ ಭೀತಿಯಿಂದಲೇ ಮನುಷ್ಯರು ಸುಖಗಳನ್ನು ಹುಡುಕುತ್ತಾರೆ ಅಲ್ಲವೆ? ಆ ಸುಖಗಳು ತಾತ್ಕಾಲಿಕವೆಂದು ಗೊತ್ತಿದ್ದರೂ.

14ನೇ ಶತಮಾನದ ಜಿಯೋವನ್ನಿ 18ನೇ ಶತಮಾನದ ಡಿಫೋ ಗಮನಿಸುವುದೇನೆಂದರೆ ಪ್ಲೇಗ್‌ನಿಂದಾಗಿ ದಿಢೀರನೇ ವೈದ್ಯರು, ಬಾಬಾ ರಾಮದೇವರಂಥವರು ಹುಟ್ಟಿಕೊಂಡು ಜನಸಾಮಾನ್ಯರಲ್ಲಿ ಮೂಢನಂಬಿಕೆಗಳನ್ನು ಹುಟ್ಟಿಸುತ್ತಾರೆ. ಡಿಫೋನ ನಿರೂಪಕ ಒಂದು ದಿನ ಲಂಡನ್ ರಸ್ತೆಯಲ್ಲಿ ಸಾಗುತ್ತಿದ್ದ ಗುಂಪನ್ನು ಕುತೂಹಲದಿಂದ ಸೇರಿಕೊಳ್ಳುತ್ತಾನೆ. ಅದರಲ್ಲಿ ಒಬ್ಬಳು “ಅಲ್ಲಿ ನೋಡಿ, ಆಗಸದಲ್ಲಿ ಬಿಳಿ ಉಡುಪಿನ ದೇವದೂತ ತೇಲುತ್ತಿದ್ದಾನೆ” ಎಂದು ಹೇಳಿದ್ದರಿಂದ ಎಲ್ಲರೂ ಹೌದು ಎಂದು ಅದನ್ನು ವರ್ಣಿಸತೊಡಗಿದ್ದಾರೆ. ನಿರೂಪಕನಿಗೆ ಏನು ಕಾಣುವುದಿಲ್ಲ. ಅವನ ಅಪನಂಬಿಕೆಯನ್ನೂ ಕಂಡ ಗುಂಪಿನ ಜನ ಅವನನ್ನು ಪಾಪಿಯೆಂದು ದೂಷಿಸತೊಡಗುತ್ತಾರೆ. ಇನ್ನೊಬ್ಬನು ಬಡವರಿಗೆ ಉಚಿತವಾದ ಔಷಧಿಯೆಂದು ಜಾಹೀರಾತು ಮಾಡಿ ಆಮೇಲೆ ದುಡ್ಡು ಕೀಳತೊಡಗುತ್ತಾನೆ. ಒಬ್ಬಳು ಗಟ್ಟಿಗಿತ್ತಿ ಅವನು ಉಚಿತವಾಗಿ ಕೊಡುವವರೆಗೆ ಸತ್ಯಾಗ್ರಹ ಮಾಡುತ್ತಾಳೆ.

ನಿರೂಪಕನ ಜಿಜ್ಞಾಸೆಯು ಬಹಳ ಮುಖ್ಯವಾಗಿದೆ. ಅವನಿಗೆ ದೇವರಲ್ಲಿ ನಂಬಿಕೆ ಇದೆ. ಆದರೆ ಅವನು ಆಧುನಿಕನೂ ಕೂಡ. ಹೀಗಾಗಿ ನಂಬಿಕೆಯೆAದರೆ ಏನು ಅದರ ಮಿತಿಗಳೇನು ಎನ್ನುವುದು ಅವನನ್ನು ಬಾಧಿಸುತ್ತದೆ. ಬಹಳ ಜನ ಪ್ಲೇಗ್ ದೇವರು ನಮ್ಮನ್ನು ಎಚ್ಚರಿಸಲು ನೀಡಿದ ಶಿಕ್ಷೆಯೆಂದೇ ನಂಬಿದ್ದಾರೆ. ಇದು ನಿಜವೆ? ಬೀದಿಯ ವೈದ್ಯರು ಮಾರುವ ಔಷಧಿಗಳನ್ನು ನಂಬುವವರ ನಂಬಿಕೆ ಯಾಕೆ ನಿಜವಲ್ಲ? ಇಂಥ ಅಪಾರವಾದ ಸಾವು ನೋವಿನಿಂದಲೇ ದೇವರು ನಮ್ಮನ್ನು ಎಚ್ಚರಿಸಬೇಕೆ?

ಇದೇ ಪ್ರಶ್ನೆ ಕಾಮ್ಯೂನ ಕಾದಂಬರಿಯಲ್ಲಿ ಅದ್ಭುತವಾಗಿ ಚರ್ಚೆಯಾಗುತ್ತದೆ. ಓರಾನ್‌ನ ಪಾದ್ರಿ ಫಾದರ್ ಪ್ಯಾನಲೂ ನಿಷ್ಠಾವಂತ, ಪ್ರಾಮಾಣ ಕ ಪಾದ್ರಿ. ಜೊತೆಗೆ ಒಬ್ಬ ವಿದ್ವಾಂಸ ಕೂಡ. ಪ್ಲೇಗ್ ಬಂದ ಮೇಲೆ ಮೊದಲ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಅವನು ತನ್ನ ಧಾರ್ಮಿಕ ಪ್ರವಚನದಲ್ಲಿ ಹೇಳುವುದೆಂದರೆ ಪ್ಲೇಗ್ ಮೂಲಕ ದೇವರನ್ನು ಮರೆತ ನಮ್ಮೆಲ್ಲರಿಗೆ ದೇವರೇ ಕೊಟ್ಟ ಎಚ್ಚರ ಹಾಗೂ ಶಿಕ್ಷೆ, ಮಧ್ಯಯುಗದ ಚಿತ್ರಗಳಲ್ಲಿ ಸಾವನ್ನು ಕುಡುಗೋಲು ಹಿಡಿದು ಒಕ್ಕಲು ಮಾಡಲು ಬರುತ್ತಿರುವ ಭೀಕರವಾದ ಅಸ್ತಿಪಂಜರದ ಹಾಗೆ ಚಿತ್ರಸಲಾಗುತ್ತಿತ್ತು. ಇಂಥದೇ ರೂಪಕವನ್ನು ಬಳಸಿ ಫಾದರ್ ಪ್ಯಾನಲೂ ಓರಾನ್‌ನ ಜನರನ್ನು ಎಚ್ಚರಿಸುತ್ತಾನೆ. ಆದರೆ ನಂತರದ ದಿನದಲ್ಲಿ ಒಂದು ಮುಗ್ಧ ಬಾಲಕನು ಪ್ಲೇಗ್‌ನಿಂದ ನರಳಿ ಸಾಯುವುದಕ್ಕೆ ಸಾಕ್ಷಿಯಾಗುತ್ತಾನೆ. ಆಗ ಅವನನ್ನು ಬಾಧಿಸುವ ಪ್ರಶ್ನೆಯೆಂದರೆ ಪ್ಲೇಗ್ ಬಂದಿರುವುದು ದೇವರ ಉದ್ದೇಶದಿಂದಾದರೆ ಪ್ಲೇಗ್ ನಿವಾರಣೆಗೆ ಚಿಕಿತ್ಸೆ ಕೊಡುವುದು ಯಾಕೆ? ಹಾಗೆಂದು ನರಳುವ ರೋಗಿಗಳನ್ನು ಹಾಗೆ ಬಿಡಬಹುದೆ? ತನ್ನ ಎರಡನೇ ಪ್ರವಚನದಲ್ಲಿ ಅವನ ಧಾಟಿ ಬದಲಾಗಿದೆ. ಅಹುದು, ಪ್ಲೇಗ್ ದೇವರೇ ಕಳಿಸಿದ ಎಚ್ಚರಿಕೆ. ಆದರೆ ಅದನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು. ಅದು ನಮ್ಮ ನೈತಿಕ ಧರ್ಮ. ಡಾಕ್ಟರ್ ರಿಯ್‌ನಿಗೆ ಇದು ವೈಚಾರಿಕ ಗೊಂದಲವಾಗಿ ಕಾಣುತ್ತದೆ. ತಾನೂ ಪ್ಲೇಗ್ ಸ್ವಯಂಸೇವಕರ ತಂಡವನ್ನು ಸೇರಿಕೊಂಡು ಪ್ಲೇಗ್ ನಿವಾರಣೆಯ ಕೆಲಸದಲ್ಲಿ ತೊಡಗಿಕೊಂಡ ಫಾದರ್ ಪ್ಯಾನಲೂಗೆ ಸೋಂಕು ತಾಗಿ ಸಾಯುತ್ತಾನೆ. ಅವನ ಸಾವಿನ ವರದಿಯಲ್ಲಿ “Doubtful case” ಎಂದು ಬರೆಯಲಾಗುತ್ತದೆ. 

ಡಾಕ್ಟರ್ ರಿಯ್‌ನ ಪ್ರಕಾರ ಮನುಷ್ಯರು ಅರ್ಥಶೂನ್ಯವಾದ, ಅಸಂಗತ ಜಗತ್ತಿನಲ್ಲಿ ಬದುಕುತ್ತಾರೆ. ಇಲ್ಲಿ ಪ್ಲೇಗ್ ಯಾಕೆ ಬರುತ್ತದೆ ಯಾಕೆ ಹೋಗುತ್ತಿದೆಯೆಂದು ಯಾರೂ ಹೇಳಲಾಗದು. ಅದರ ವಿರುದ್ಧ ಹೋರಾಡಿ ಗೆಲ್ಲುತ್ತೇವೆ ಎನ್ನುವುದು ಕೂಡ ಅಸಂಗತವೇ. ಹಾಗಿದ್ದರೆ ಒಬ್ಬ ವೈದ್ಯನಾಗಿ ಅವನು ದಣ ವಿಲ್ಲದೆ ಪ್ಲೇಗ್ ವಿರುದ್ಧ ಹೋರಾಡುವುದು ಏಕೆ? ಅವನ ಉತ್ತರವೆಂದರೆ “ನಾನು ವೈದ್ಯನಾಗಿ ಸಾಯುವ ಅಂತಿಮ ಕ್ಷಣದಲ್ಲಿ ಮನುಷ್ಯರನ್ನು ನೋಡಿದ್ದೇನೆ. ಅವರು ಸಾವಿಗೆ “ಇಲ್ಲ, ಬೇಡ” ವೆನ್ನುತ್ತಾರೆ. ಆದ್ದರಿಂದ ನಾನು ಸಾವಿನ ಪರವಾಗಿ ಇರಲಾರೆ.” ಅವನ ಸಂಗಾತಿಯಾದ ತಾರೂನಿಗೆ ಕಾಡುವ ಪ್ರಶ್ನೆಯೆಂದರೆ ದೇವರಲ್ಲಿ ನಂಬಿಕೆ ಇಲ್ಲದೆಯೆ, ಗೆಲ್ಲುತ್ತೇನೆ ಎನ್ನುವ ಅಹಂಕಾರವೂ ಇಲ್ಲದೆ ಬದುಕಿನ ಪರವಾಗಿ ಇರುವ ಸಂತನಾಗುವುದು ಹೇಗೆ?

ಓರಾನ್‌ನ ಪ್ಲೇಗ್ ಮುಗಿದು ಹೋಗಿ ಜನರೆಲ್ಲಾ ಸಮುದ್ರ ತೀರದಲ್ಲಿ ಸೇರಿ ಸಂಭ್ರಮದ ಆಚರಣೆಯಲ್ಲಿದ್ದಾರೆ. ಪ್ಲೇಗ್‌ನಿಂದ ದೂರವಾಗಿದ್ದ ಪ್ರೇಮಿಗಳು ಒಂದಾಗಿದ್ದಾರೆ. ನಿರೂಪಕ ಬರ್ನಾರ್ಡ್ ರಿಯ್ ಹೇಳುತ್ತಾನೆ, ನಮ್ಮ ತಾತ್ವಿಕ ಚಿಂತನೆಯು ಏನೇ ಇರಲಿ, ಮನುಷ್ಯರಿಗೆ ಪ್ರೀತಿಸುವ, ಖುಷಿಪಡುವ ಮೂಲಭೂತವಾದ ಹಕ್ಕು ಇದ್ದೇ ಇದೆ. ನಾವು ಅದರ ಪರವಾಗಿರಬೇಕು.

ರಿಯ್‌ನ ಹೆಂಡತಿ ಪ್ಲೇಗ್ ಶುರುವಾಗುವ ಮೊದಲು ದೂರದ ಆರೋಗ್ಯಧಾಮಕ್ಕೆ ಹೋದವಳು ಅಲ್ಲಿಯೇ ತೀರಿ ಹೋಗಿದ್ದಾಳೆ. ರಿಯ್‌ನ ಕೊನೆಯ ಮಾತುಗಳು. “ಪ್ಲೇಗ್‌ನ ರೋಗಾಣುಗಳು ಸಾಯುವುದಿಲ್ಲ. ಅವು ಕೇವಲ ಸುಷುಪ್ತಿಯಲ್ಲಿ ಇರುತ್ತವೆ. (dormant)  ನೀವು ಕುಳಿತ ಕುರ್ಚಿಯ ಮೇಲಿನ ದಿಂಬಿನಲ್ಲೂ”. ಹೀಗೆ.

**

MORE FEATURES

ಮಕ್ಕಳಿಗೆ ಮನೋಜ್ಞವಾಗಿ ಕತೆ ಕೇಳಿಸು...

04-08-2020 ಬೆಂಗಳೂರು

ಒಂದೂರಲ್ಲಿ ಒಬ್ಬ ರಾಜ ಇದ್ದ... ಹೀಗೆ ಕತೆಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ. ಆತುರತೆ, ಒತ್ತಡ ಎಂದು ಓಡುವ ಇಂದಿನ ದಿನಗಳಲ...

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾ...

04-08-2020 ಬೆಂಗಳೂರು

ಭಾರತೀಯ ಸಂಗೀತದಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಬಹು ದೊಡ್ಡ ಪರಂಪರೆಯಿದೆ.  ಲಿಂಗತಾರತಮ್ಯ, ಜಾತಿ ಮತ್ತು ಧರ್ಮದ ಭೇ...

ತುಸು ನಿಂತು ನೋಡು,  ಅನುಭವ ಪಡೆ......

03-08-2020 ಬೆಂಗಳೂರು

ಗಣೇಶ ಅಮೀನಗಡ ಅವರ ತುಸುವೆ ಕುಡಿವ ಗಂಡನ್ನ ಕೊಡು ತಾಯಿ... ಲಲಿತ ಪ್ರಬಂಧಗಳ ಸಂಕಲನದ ಕುರಿತು ರಾಜೀವ ತಾರಾನಾಥ ಅವರು ಬರೆದ...

Comments

Magazine
With us

Top News
Exclusive
Top Events