ಬಣ್ಣಗಳ ಮಧ್ಯೆ 'ಪ್ರೀತಿ' ಹುಡುಕುವ ಮನಸ್ಥಿತಿ: ಆಮಿರ್ ಬನ್ನೂರು ಅವರ ಬ್ಯಾರಿ ಭಾಷೆಯ ಕವಿತೆ


"'ಕಪ್ಪು ವರ್ಣಿಯ' ಎನ್ನುವ ಕಾರಣಕ್ಕಾಗಿ, ಕೆಳ ಜಾತಿಯ ಎನ್ನುವ ಕಾರಣಕ್ಕಾಗಿ, ನಿಂದನೆ ಮಾಡುವ ಜನಾಂಗದ ಬಾಯಿಯಲ್ಲಿರುವ ಹಲವು ಸಾಂಪ್ರದಾಯಿಕ ಮಡಿವಂತಿಕೆಯ ವಿಚಾರ ಬಹು ಸೂಕ್ಷ್ಮವಾಗಿ ಎತ್ತಿ ಹಿಡಿಯುವ ಪ್ರಯತ್ನ ಈ ಕವಿತೆ ಮಾಡುತ್ತದೆ," ಎನ್ನುತ್ತಾರೆ ಮೈಬೂಬಸಾಹೇಬ ವೈ.ಜೆ. ಅವರು ಆಮಿರ್ ಬನ್ನೂರು ಅವರ ಬ್ಯಾರಿ ಭಾಷೆಯ ಕವಿತೆ ಕುರಿತು ಬರೆದಿರುವ ಸಾಲುಗಳಿವು.

ಇಂದಿನ ಜಾತಿ, ಅಸಮಾನತೆ, ಲಿಂಗಭೇದ, ಜನಾಂಗೀಯ ಭೇದ, ಬಹುದೊಡ್ಡ ಕಂದಕ ಸೃಷ್ಟಿಸಿದೆ ಎನ್ನುವುದಕ್ಕೆ ಜಗದ ನ್ಯಾಯ ಗ್ರಂಥ ಎದೆಯಲ್ಲಿಟ್ಟು ಪ್ರೀತಿಸುತ್ತಿರುವ ಆತ್ಮೀಯ ಗೆಳೆಯ ಆಮಿರ್ ಅಶ್ಅರೀ ಬನ್ನೂರು ಅವರ ಹೊಟ್ಟೆಯಲ್ಲಿ ಹುಟ್ಟಿದ ಸಮತೆಯ ಬ್ಯಾರಿ ಕವಿತೆ ಅಮ್ಮ ಕೃಷಿ ಮಾಡಿದ್ದಲ್ಲಿ ಗಮನಿಸಬಹುದಾಗಿದೆ.

ಬ್ಯಾರಿ ಭಾಷೆಯಿಂದ ಕನ್ನಡ, ತುಳು, ಮಲಯಾಳಂ, ಹಿಂದಿ, ಇಂಗ್ಲೀಷ್, ಮಲಾಮೆ ಸೇರಿ ಏಳುಕ್ಕೂ ಹೆಚ್ಚು ಭಾಷೆಗಳಲ್ಲಿ ತರ್ಜುಮೆಗೊಂಡಿರುವ ಈ ಕವಿತೆ ಹೆಣ್ಣು ಎನ್ನುವ ಕಾರಣಕ್ಕಾಗಿ,'ಕಪ್ಪು ವರ್ಣಿಯ' ಎನ್ನುವ ಕಾರಣಕ್ಕಾಗಿ, ಕೆಳ ಜಾತಿಯ ಎನ್ನುವ ಕಾರಣಕ್ಕಾಗಿ, ನಿಂದನೆ ಮಾಡುವ ಜನಾಂಗದ ಬಾಯಿಯಲ್ಲಿರುವ ಹಲವು ಸಾಂಪ್ರದಾಯಿಕ ಮಡಿವಂತಿಕೆಯ ವಿಚಾರ ಬಹು ಸೂಕ್ಷ್ಮವಾಗಿ ಎತ್ತಿ ಹಿಡಿಯುವ ಪ್ರಯತ್ನ ಈ ಕವಿತೆ ಮಾಡುತ್ತದೆ. ದೇಹಕ್ಕೆ ಬಣ್ಣಗಳಿರಬಹುದು ಭಾವಗಳು ಭಿನ್ನವಾಗಿರಬಹುದು ಆಕಾರ ಆಕೃತಿಗಳು ವ್ಯತ್ಯಾಸದಲ್ಲಿ ಇರಬಹುದು ಆದರೆ ಮನುಷ್ಯತ್ವಕ್ಕೆ ಯಾವುದೇ ಇಲ್ಲ ಎನ್ನುವ ವಿಚಾರವನ್ನು ಕವಿತೆಯಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ ಕವಿ

ನಾನು ಬಿಳಿಯ ನಿಲ್ಲವೆಂದು
ನನ್ನ ಯಾರು ಒಪ್ಪುವುದಿಲ್ಲ
ವಧು ಪರೀಕ್ಷೆಗೆ ಬಂದವರಿಗೆ
ಮನುಷ್ಯತ್ವ ಇಲ್ಲವಾಗಿರಬೇಕು !

ಎಂದು ಹೇಳುವ ಮೂಲಕ ವಿಕಸಿತಗೊಂಡಿರುವ ಮಾನವ ತನ್ನ ಭಾವನೆಗಳನ್ನು ಸಂಕುಚಿತ ಮಾಡಿಕೊಂಡಿದ್ದಾನೆ, ಪವಿತ್ರವಾದ ದೇಹ ಮನಸ್ಸುಗಳನ್ನ ಹೊಲತು ಪಡಿಸಿದೆ, ಬಣ್ಣಗಳಿಗೆ ಮಾರು ಹೋಗುತ್ತಾನೆ, ಹೋಗುತ್ತಿರುತ್ತಾನೆ, ಇದು ಮಾನವೀಯ ಕುಲದ ಅವನತಿಯ ಮೊದಲ ಹಂತ ಎಂದು ಕವಿಯ ಯೋಕ್ತಿಯಾಗಿದೆ. ಇದು ಮನುಷ್ಯನ ಮನುಷ್ಯತ್ವದ ಕೊನೆಯ ಕಾಲ "we are technology sound, spiritually count down" ಎನ್ನುವಂತೆ ನಾವು ಪ್ರಗತಿ ಹೊಂದುತ್ತಾ ಮಾನವತವಾದದ ವಿಕಾಸದ ಮೇಲ್ಮಟ್ಟಕ್ಕೆ ಬಂದಿದ್ದೇವೆ. ಮಾನವೀಯ ಮೌಲ್ಯಗಳು ಕುಸಿಯುವಂತೆ ಮಾಡಿದ್ದೇವೆ. ಇದು ಮನುಷ್ಯನ ದುರ್ಬುದ್ಧಿಯ ಸಂಕೇತ, ಹೆಣ್ಣು ಗಂಡಿನ ನಡುವೆ, ಮನುಷ್ಯ ಮನುಷ್ಯರ ನಡುವೆ, ಜಾತಿ ವಿಜಾತಿಯ ಮಧ್ಯ, ಬಹುದೊಡ್ಡ ಕಂದಕ ನೆಲೆಸುವಂತೆ ಮಾಡಿದ್ದೇವೆ ಇದಕ್ಕೆ ಕಾರಣ ನಮ್ಮ ಅಂತರಿಕತೆಯಲ್ಲಿ ಅಡಗಿಕೊಂಡಿರುವ ಸಣ್ಣತನ. ಅದಕ್ಕಾಗಿ ಬಸವಣ್ಣ 'ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ' ಎನ್ನುವ ಸತ್ವ ಹಿತವಾದ ಸತ್ಯ ಸಾರಿ ಸಮಾಜವನ್ನು ಮರು ಕಟ್ಟುವ ಪ್ರಯತ್ನ ಮಾಡಿರುವುದು. 12ನೇ ಶತಮಾನದಲ್ಲಿ ಸಫಲಗೊಂಡಿತ್ತು. ಅಂತಹ ಕಂದಕಗಳು ಇಂದು ಮತ್ತೆ ಸೃಷ್ಟಿಯಾಗಿವೆ. ಇಂತಹ ಕಹಿ ಸತ್ಯಗಳನ್ನ ಗ್ರಹಿಸಿಕೊಂಡಿರುವ ಕವಿ ಜಿ.ಎಸ್.ಶಿವರುದ್ರಪ್ಪನವರು
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ,
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿಮತಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?
ಹೌದಲ್ಲವೇ ಸಖಿ?

ಎನ್ನುವ ಚಿಂತನೆ ಹೊರಹಾಕಿದ್ದಾರೆ ಇದು ಮನುಕುಲಕ್ಕೆ ಇಂದಿನ ಅಗತ್ಯಗಳಲ್ಲಿ ಬಹು ಅಗತ್ಯ ಎಂದು ನಾವು ಭಾವಿಸಿಕೊಳ್ಳಬೇಕು ಅಮೀರ್ ಅವರ ಈ ಕವಿತೆಯು ಹೆಣ್ಣು ಬಣ್ಣಗಳ ಮಧ್ಯೆ, ವರದಕ್ಷಿಣೆ ಬಡತನ, ಮಧ್ಯ ಬೆಲೆ ಏರಿಕೆ ಮತ್ತು ಹಸಿವಿನ ಮಧ್ಯ ಬಹುದೊಡ್ಡ ಚಿಂತನೆ, ಸಂಘರ್ಷವನ್ನು ಏರ್ಪಡಿಸುತ್ತದೆ.
ಚರ್ಮ ಕಪ್ಪಗಿದ್ದರೂ
ಮನಸ್ಸು ಬೆಳ್ಳಗಿದೆಯೆಂದು
ಅರಿಯದೆ ಹೋದರು
ಮನಸ್ಸು ಅರಿಯಬೇಕಾದವರು ದೇಹದ ಸೌಂದರ್ಯವನ್ನು ಇಷ್ಟಪಟ್ಟರು. ಕಪ್ಪಾದರೆ ಏನಂತೆ ನಾನು ಮನಸ್ಸಿನಿಂದ ಬಿಳಿಯಳಾಗಿದ್ದೇನೆ. ಒಪ್ಪುವುದಾದರೆ ನನ್ನ ತಪ್ಪುಗಳನ್ನು ಒಪ್ಪಿದಂತೆ ಕಪ್ಪು ಸಹಿತ ಒಪ್ಪಿಕೊಳ್ಳಿ ಎನ್ನುವ ಈ ಕವಿತೆ ಮಹಿಳೆ ಅನುಭವಿಸಿಕೊಂಡು ಬಂದಿರುವ, ಹಿಂದಿನ ಕಾಲದಿಂದ ಇಂದಿನವರೆಗೆ ಅದೇ ಸನ್ನಿವೇಶವನ್ನು ದಾಟಿಕೊಂಡು ಬರುತ್ತಿರುವ, ನೋವಿನ ವಿಚಾರಗಳನ್ನು ತೋರಿಸುತ್ತದೆ ಚಿಂತನೆಗೆ ಹಚ್ಚುತ್ತದೆ.
ಅದಕ್ಕಾಗಿ ಅಲ್ಲಮಪ್ರಭು ಒಂದು ಮಾತು ಹೇಳುತ್ತಾನೆ
ಮೊಲೆ ಮುಡಿ ಬಂದರೆ ಹೆಣ್ಣೆಂಬರು,
ಗಡ್ಡ ಮೀಸೆ ಬಂದರೆ ಗಂಡೆಂಬರು,
ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂದು ಆತ್ಮದ ಸಮಾನತೆಯಲ್ಲಿ ಜೀವದ ಘನತೆಯನ್ನು ಗೌರವಿಸಿ ಮಾತನಾಡಿದ್ದಾನೆ. ಇದು ಗತಕಾಲದಿಂದ ಮಹಿಳೆ ಅನುಭವಿಸಿಕೊಂಡು ಬಂದಿರುವ ಶೋಷಣೆಯ ಒಂದು ರೂಪ. ಇಂತಹ ಸಾಕಷ್ಟು ಶೋಷಣೆ, ಅಸಮಾನತೆ, ಮಹಿಳೆ ಅನುಭವಿಸುತ್ತಿದ್ದಾಳೆ. ಈಗಲೂ ಅದು ಹಾಗೆಯೇ ಇದೆ.
ಕವಿ ಕೊನೆಯಲ್ಲಿ ತನ್ನ ಆತ್ಮದ ಅಭಿಮಾನವನ್ನ ತೋರ್ಪಡಿಸುತ್ತಾ ಹೀಗೆ ಹೇಳುತ್ತಾನೆ.

ನನ್ನ ಕಪ್ಪು ಬಣ್ಣ ನನಗೆ ಒಮ್ಮೆಯೂ
ಅವಮಾನವೆನಿಸಲಿಲ್ಲ
ನನ್ನ ಬಣ್ಣದ ಬಗ್ಗೆ ಅಭಿಮಾನ
ಕಮ್ಮಿಯಾಗುವುದಿಲ್ಲ!

ಒಟ್ಟು ಕವಿತ್ವದ ಆಶಯವನ್ನು ಗಮನಿಸುತ್ತಾ ಹೋದಾಗ ಬಂಡಾಯದ ಸೂಕ್ಷ್ಮ ಎಳೆಗಳು ಮಹಿಳಾ ಪರವಾಗಿ ಮಾತನಾಡುವ ಫೆಮಿನಿಸ್ಟ್ವಾದದ ಸರಂಜಾಮು ಹೊತ್ತು ತಂದಿದ್ದಾನೆ ಎನ್ನುವ ವಿಚಾರ ಆಗ್ರಹಿತ.

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?
ತಮ್ಮೆಲ್ಲರನ್ನು ಹಡೆದವಳು ಹೆಣ್ಣಲ್ಲವೆ?
ಕಾಪಾಡಿದವಳು ಹೆಣ್ಣಲ್ಲವೆ ?

ಹೀಗಿರುವಾಗ ಹೆಣ್ಣು ಹೆಣ್ಣು ಎಂದು ಯಾಕೆ ನಿಕೃಷ್ಟರಾಗಿ ಕಾಣುತ್ತಾರೋ ಕಣ್ಣು ಕಾಣದ ಈ ಮೂರ್ಖರು, ಎಂಬ ಮಾತಿನಲ್ಲಿ ಹೊನ್ನಮ್ಮ ಮುಖ್ಯವಾಗಿ ಗಂಡಸರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳು ಭಾವನೆಯನ್ನು ಬೆಳೆಯಿಸಿದ ಮನೋಧರ್ಮವನ್ನು ಹೊನ್ನಮ್ಮ ಖಂಡಿಸಿದ ಈ ಮಾತು ಹೊಸತಾಗಿದೆ. ಇದೊಂದು ಮಾತನ್ನು ಬಿಟ್ಟರೆ ಇವಳ ಕೃತಿ ಹೆಣ್ಣಿನಲ್ಲಿ ಯಾವ ವೈಚಾರಿಕ ಜಾಗೃತಿಯನ್ನಾಗಲಿ, ಹೆಚ್ಚಿನ ಆತ್ಮಾಭಿಮಾನಗಳನ್ನಾಗಲಿ ಪ್ರೇರಿಸದೆ, ಪತಿಪಾದಸೇವೆಯನ್ನು ಮಾಡಿಕೊಂಡು, ಉತ್ತಮ ಗೃಹಿಣಿಯಾಗಿ ಹೆಣ್ಣು ಹೇಗೆ ಬಾಳಬೇಕೆಂಬುದನ್ನು ಹೇಳಿಕೊಂಡು ಹೋಗುತ್ತದೆ. ಇಂತಹ ಪ್ರೇರಕ ಶಕ್ತಿಗಳಿಗೆ ಕವಿ ಮಣಿದು ಹೆಣ್ಣಿನ ಆಂತರಿಕ ಸೌಂದರ್ಯ ಬಹುಮುಖ್ಯ ಎನ್ನುವ ಸತ್ಯ ಮತ್ತು ಸತ್ವಯುತವಾದ ವಿಚಾರವನ್ನು ವ್ಯಕ್ತಪಡಿಸುತ್ತಾ ಮಹಿಳೆಗೆ ಮತ್ತು ಮಹಿಳೆಯ ಸೌಂದರ್ಯಕ್ಕೆ ಬೆಂಬಲ ನೀಡುವುದು ಆಕೆಗೆ ಸಮಾನ ಸ್ಥಾನಮಾನ ಕಲ್ಪಿಸುವುದು, ಪುರುಷನೋರ್ವನ ಜವಾಬ್ದಾರಿ ಎನ್ನುವ ಸತ್ಯ ವ್ಯಕ್ತಪಡಿಸಿದ್ದಾರೆ. ಕಾವ್ಯದ ಮುಖ್ಯ ಉದ್ದೇಶ ಬಣ್ಣ ಬಣ್ಣಗಳ ಮಧ್ಯ ಜಾತಿ ಜಾತಿಗಳ ಮಧ್ಯ ದೇಶ ಪಂಥಗಳ ಮಧ್ಯ ಭಿನ್ನತೆಯನ್ನ ವ್ಯಕ್ತಪಡಿಸದೆ ನಾವೆಲ್ಲರೂ ಒಂದು ನಾವೆಲ್ಲರೂ ಭಾರತೀಯರು ನಾವೆಲ್ಲರೂ ಮನುಷ್ಯ ಕುಲದವರು ಎನ್ನುವ ಚಿಂತನೆ ಹೊಂದಿದಾಗ ಭಾರತೀಯ ಪರಂಪರೆಗೆ ಹೊಸ ಪಥಗಳನ್ನ ಕಾಪಿಟ್ಟುಕೊಳ್ಳಬಹುದು ಕಾಪಾಡಿಕೊಳ್ಳಬಹುದು ಎನ್ನುವ ವ್ಯಕ್ತಿಗತ ಮತ್ತು ಸಾರ್ವತ್ರಿಕ ಚಿಂತನೆ ವ್ಯಕ್ತಪಡಿಸಿದ್ದಾರೆ.

ವೇದಗಳ ಕಾಲದಿಂದ ಹಿಡಿದು ತಾಂತ್ರಿಕ ಯುಗದ ವರೆಗೆ ಮನುಕುಲ ವಿಕಸವಾಗುತ್ತಾ ಬಂದರೂ ಸಹಿತ ಕೀಳರಿಮೆಯ ಮೇಲು ಕೀಳಿನ ಭಾವನೆ ಶಮನ ಮಾಡಲಾಗಿಲ್ಲ ದೇಶ ಪ್ರಗತಿ ಹೊಂದಲು ಹೇಗೆ ಸಾಧ್ಯ ಸಮಾಜ ಸಮಾನತೆಯನ್ನು ಸಾಧಿಸಲು ಹೇಗೆ ಸಾಧ್ಯ ಅದಕ್ಕಾಗಿ ನಾವು 'ಒಂದು ಭಾರತ ಬಂಧು ಭಾರತ' ಎನ್ನುವ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಅದರ ಪರವಾಗಿ ಕೆಲಸ ಮಾಡಲು ತತ್ಪರರಾಗಬೇಕು ಎನ್ನುವುದು ಕವಿ ಕವಿತ್ವದ ಧ್ಯೇಯವಾಗಬೇಕು ಎನ್ನುವ ಸಚಿಂತನೆ ವ್ಯಕ್ತಪಡಿಸುತ್ತದೆ.

- ಮೈಬೂಬಸಾಹೇಬ. ವೈ.ಜೆ

MORE FEATURES

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...

ಅಕಾಲದಲ್ಲೊಂದು ಸಕಾಲಿಕ ಪುಸ್ತಕ ‘ಗಾಂಧೀಜಿಯ ಹಂತಕ: ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ'

19-05-2024 ಬೆಂಗಳೂರು

ಗಾಂಧಿ ಹತ್ಯೆ – ಆ ಕಾಲದ ರಾಜಕೀಯದಲ್ಲಿ ಸಾವರ್ಕರ್ ಪಾತ್ರ – ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಪಾತ್ರ &nd...

ತಲೆ ಮೇಲೆ ಸುರಿದ ನೀರು ಕಾಲಿಗೆ ಬಂದೇ ಬರುತ್ತದೆ: ವಿ. ಗಣೇಶ್

19-05-2024 ಬೆಂಗಳೂರು

`ಇಂದು ಜಗತ್ತಿನಾದ್ಯಂತ ಎದ್ದುಕಾಣುತ್ತಿರುವ ಹಿರಿಯರ, ಅದರಲ್ಲೂ ಇಳಿ ವಯಸ್ಸಿನ ತಂದೆ-ತಾಯಿಂದಿರ ನಿರ್ಲಕ್ಷತನ ಕಾದಂಬರಿಯಲ್...