ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

Date: 07-02-2020

Location: ಕಲಬುರಗಿ


ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ)

ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ್ಮೇಳನಾಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಶ್ರೀಶೈಲ ನಾಗರಾಳ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ’ಗಾಂಧಿ-ಅಂಬೇಡ್ಕರ್‌ ಕಂಡ ಕನಸು ಜಾರಿಗೆ ತರಲು ಪ್ರಯತ್ನಿಸಬೇಕು. ಅಮರ್ತ್ಯಸೇನ್‌ ಅವರು ಪ್ರತಿಪಾದಿಸಿದ ಆಲ್‌ ಇನ್‌ಕ್ಲುಸಿವ್‌- ಅಖಂಡತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಿಎಎ ಕುರಿತ ವಿದ್ಯಮಾನವು ಭಾರತದಲ್ಲಿ ಈಗ ಬಹುಚರ್ಚೆಯ ಸಂಗತಿ. ಇಡೀ ಸಮುದಾಯಕ್ಕೆ ಸ್ಪಷ್ಟವಾದ ಅರಿವು ಮೂಡಿಸುವುದು ಪ್ರಭುತ್ವದ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.

ಸಾಮಾಜಿಕ-ರಾಜಕೀಯ ಪ್ರಶ್ನೆಗಳಿಗೆ ಹಾರಿಕೆಯ ಅಥವಾ ತೇಲಿಸುವ ಉತ್ತರ ನೀಡಿದ ಕವಿಗಳು ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸಿದರು.

ಲೇಖಕ ಜೋಗಿ ಅವರು ಕೇಳಿದ ಕವಿಯು ಶುದ್ಧ ಕವಿತೆ ಬರೆದರೆ ಸಾಕೆ? ಅಥವಾ ಕವಿಯು ರಾಜಕೀಯ ಸೈನಿಕ-ಪ್ರಚಾರಕರಾಗಬೇಕೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ’ಚಳವಳಿಯಲ್ಲಿ ಭಾಗವಹಿಸುವುದು ಅಗತ್ಯ-ಅನಿವಾರ್ಯವೇ? ಎಂಬುದು ಸೂಕ್ಷ್ಮ ಪ್ರಶ್ನೆ. ಕವಿಯು ಕಲಿಯೂ ಆಗಲು ಸಾಧ್ಯ; ಪಂಪನ ಹಾಗೆ. ನಿಜವಾದ ಕವಿಯ ಕೆಚ್ಚು ಕರ್ತವ್ಯ ಬರವಣಿಗೆಯೇ ಆಗಿರಬೇಕು. ಬರವಣಿಗೆಯಲ್ಲಿಯೇ ಬದ್ಧತೆ ತೋರಬೇಕು. ಸಮಾಜಕ್ಕೆ ಹಿತವಾಗುವ ರೀತಿಯಲ್ಲಿ ಬರವಣಿಗೆ ಮಾಡುವುದೇ ಸಾಮಾಜಿಕ-ರಾಜಕೀಯ ಬದ್ಧತೆ. ಕವಿ ಕಲಿ ಆಗಬಹುದು. ಆದರೆ, ಆಗಲೇ ಬೇಕಿಲ್ಲ. ಕವಿ ಆಗಬೇಕಾದದ್ದು ಕವಿ ಮಾತ್ರ. ತನ್ನ ಅಂತರಂಗದ ಅಭಿವ್ಯಕ್ತಿಯು ಸಮೃದ್ಧವಾಗಿ ಮಾಡಲು ಯತ್ನಿಸಬೇಕು ಎಂದು ಹೇಳಿದರು.

ಕವಿಗಳ ಮೇಲೆ ಅಂಬೇಡ್ಕರ್‌ ಅವರ ಪ್ರಭಾವ ಆಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ’ಗಾಳಿ-ಬೆಳಕು-ಮಳೆಗಳು ಕವಿಯ ಸೂಕ್ಷ್ಮ ಸಂವೇದನೆಯ ಮೇಲೆ ಪ್ರಭಾವ ಬೀರಿದ ಹಾಗೆಯೇ ಮಹಾವ್ಯಕ್ತಿಗಳಾದ ಗಾಂಧಿ, ಸಂತರ-ಮಹಾನ್‌ ಚಿಂತಕರ ಪ್ರಭಾವವೂ ಆಗಿದೆ. ಅಂಬೇಡ್ಕರ್‌ ಅವರ ಪ್ರಭಾವ ಕೂಡ ಹೊರತಾಗಿಲ್ಲ ಎಂದು ಹೇಳಿದರು.

ಪತ್ರಕರ್ತ ಗಣೇಶ್‌ ಅಮೀನಗಡ ಅವರು ’ಕಾವ್ಯಕ್ಕೆ ಕೊಟ್ಟ ಮನ್ನಣೆ ನಾಟಕಕ್ಕೆ ಏಕೆ ಕೊಡಲಿಲ್ಲ?’ ಎಂಬ ಪ್ರಶ್ನೆಗೆ ’ನಾನು ಎಲ್ಲ ಮಾಧ್ಯಮಗಳಿಗೆ ಸಮಾನ ಮನ್ನಣೆ ಗೌರವ ನೀಡಿದ್ದೇನೆ. ಕಾವ್ಯ ಹೆಚ್ಚು ನಾಟಕ ಕಡಿಮೆ ಅಂತೇನಿಲ್ಲ. ವಿಮರ್ಶಕರು ನನ್ನ ಕಾವ್ಯಕ್ಕೆ ಕೊಟ್ಟ ಮಹತ್ವ ನಾಟಕಗಳಿಗೆ ಕೊಡಲಿಲ್ಲ ಅನ್ನೋ ಮಾತು ಗಾಳಿಯಲ್ಲಿದೆ. ಅದು ಕೂಡ ನಿಜವಲ್ಲ. ನನ್ನ ರಂಗಕೃತಿಗಳು ಸಂಖ್ಯೆಯಲ್ಲಿ ಕಡಿಮೆ ಇರಬಹುದು. ಆದರೆ ರಂಗದ ಮೇಲೆ ಪ್ರಭಾವಶಾಲಿಯಾಗಿ ಮೂಡಿ ಬಂದಿವೆ’ ಎಂದು ಪ್ರತಿಕ್ರಿಯಿಸಿದರು.

ಕನ್ನಡದ ಎಲ್ಲ ಮಕ್ಕಳೂ ಸಾಮಾನ್ಯ ಶಾಲೆಯಲ್ಲಿ ಸಮಾನ ಶಿಕ್ಷಣ ಪಡೆಯುವ ಮತ್ತು ಎಲ್ಲರೂ ಕನ್ನಡ ಓದುವ ಶುಭ ಕಾಲ ಬರಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಳೆಗನ್ನಡ ಕಾವ್ಯವನ್ನು ಹೊಸಗನ್ನಡಕ್ಕೆ ಅನುವಾದಿಸುವುದರಿಂದ ಛಂದಸ್ಸಿಗೆ ಕುಂದುಂಟಾಗುವುದಿಲ್ಲವೇ? ಎಂಬ ರಮೇಶ ಮೂಲಗೆ ಅವರ ಪ್ರಶ್ನೆಗೆ ’ನಾನು ಪಂಪನ ಕಾವ್ಯವನ್ನು ತಿದ್ದಿ ಬರೆದಿಲ್ಲ. ಹಳೆಗನ್ನಡ ಕಾವ್ಯದ ಬಗ್ಗೆ ರುಚಿ ಹುಟ್ಟಿಸುವ ಕೆಲಸ ಮಾಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಸಂಪರ್ಕ ಭಾಷೆಯಾಗಿ ಸಂಸ್ಕೃತ-ಪ್ರಾಕೃತ ಬೆಳೆಸಬೇಕು ಎನ್ನುವ ತಡಸದ ಅವರ ಪ್ರಶ್ನೆ ಹಾಗೂ ಶಿವರಂಜನ್‌ ಸತ್ಯಂಪೇಟೆ ಅವರ ’ಸಂಸ್ಕೃತವನ್ನು ಪ್ರತಿಪಾದಿಸುವುದರ ಹಿಂದಿನ ಮರ್ಮ ಏನು?’ ಎಂಬ ಪ್ರಶ್ನೆಗೆ ವೆಂಕಟೇಶಮೂರ್ತಿ ಅವರು ’ಭಾರತದ ಪ್ರಾಂತ್ಯಗಳ ನಡುವೆ ಸೇತುವೆ ನಿರ್ಮಾಣಕ್ಕಾಗಿ ಒಂದು ಪ್ರಾಂತ್ಯದ ಭಾಷೆಯಾಗಿರದ ಸಂಸ್ಕೃತ-ಪ್ರಾಕೃತ ರೂಪಿಸಬಹುದು ಎಂಬುದು ನನ್ನ ಸಲಹೆಯಾಗಿತ್ತು. ನನ್ನ ನಿಲುವು ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿದ್ದಲ್ಲ. ಅದು ಸಲಹೆ ಮಾತ್ರ. ಒಳಕೂಟ-ಮರ್ಮವೇನಿಲ್ಲ ಎಂದು ಹೇಳಿದರು.

ಭಗವದ್ಗೀತೆಯನ್ನು ಆಪ್ತಗೀತೆಯಾಗಿಸಿಕೊಂಡಿದ್ದೇನೆ. ಅಮ್ಮ ನಾನು ಬೆಣ್ಣೆ ಕದ್ದಿಲ್ಲಮ್ಮ ಎಂಬ ಕವಿತೆಗೆ ಸೂರದಾಸರ ಕವಿತೆಯೇ ಪ್ರೇರಣೆ ಎಂದು ವಿವರಿಸಿದರು.

ವಸುಧೇಂದ್ರ ಅವರ ಪ್ರಭುತ್ವ-ಅಭಿವ್ಯಕ್ತಿಯ ಸಂಬಂಧ ಕುರಿತ ಪ್ರಶ್ನೆಗೆ ವೆಂಕಟೇಶಮೂರ್ತಿ ಅವರು ’ಬಸವಣ್ಣನವರ ಆನು ಒಲಿದಂತೆ ಹಾಡುವೆ ಎಂಬ ಸಾಲಿನ ಹಾಗೆ ಕವಿಯು ತನಗೆ ಇಷ್ಟವಾದದ್ದನ್ನು ಬರೆಯಬೇಕು. ತಕರಾರು-ವಿವಾದ-ಪ್ರಶ್ನೆ ಹುಟ್ಟಿದ ಸಂದರ್ಭದಲ್ಲಿ ಕವಿ ಅದಕ್ಕೆ ಉತ್ತರ ನೀಡಬೇಕಿಲ್ಲ. ಬದಲಿಗೆ ಓದಿದ ಜನ-ತಜ್ಞರು ಉತ್ತರಿಸಬೇಕು. ಲೇಖಕನಿಗೆ ಅವನಿಗೆ ತೋಚಿದ ಹಾಗೆ ಬರೆಯಲು ಬಿಡಬೇಕು’ ಎಂದರು.

ಪತ್ರಕರ್ತ ಓಂಕಾರ ಕಾಕಡೆ ಅವರು ಕೇಳಿದ ’ನಿಮಗೆ ಸಿಟ್ಟು ಬರುವುದಿಲ್ಲವೇ?’ ಎಂಬ ಪ್ರಶ್ನೆಗೆ ’ಸಿಟ್ಟು ನಿಯಂತ್ರಣದಲ್ಲಿರುತ್ತದೆ. ರಾಗ-ದ್ವೇಷಗಳು ಇರುವುದು ಸಹಜ. ಕೋಪ ಇದೆ. ಅದನ್ನು ವಿಧ್ವಂಸಕ ಕೋಪವಾಗಿಸದೇ ಸಾತ್ವಿಕವಾಗಿ ಪರಿವರ್ತಿಸುವೆ ಎಂದರು.

ಗಣೇಶ್ ಪವಾರ್‍, ಸುಜಾತಾ ಜಂಗಮಶೆಟ್ಟಿ ಅವರ ಸ್ತ್ರೀ ಸಂವೇದನೆ ಕುರಿತ ಪ್ರಶ್ನೆಗಳಿಗೆ ’ನಾನು ಮಾತೃಗೋತ್ರದ ಕವಿ. ತಾಯಿಯ ಮಗನೇ ಹೊರತು ತಂದೆಯ ಮಗನಲ್ಲ’ ಎಂದು ಹೇಳಿದರು.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...

ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನ ನಿರ್ವಹಣೆಗೆ ಸಂಸ್ಥೆ- ಶೆಟ್ಟರ್ ಆಗ್ರಹ

06-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಕನ್ನಡಕ್ಕೆ ಬಹುಬೇಡಿಕೆಯ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಅದರ ಅನುಷ್ಠಾನ ಹಾ...