Date: 07-05-2023
Location: ಬೆಂಗಳೂರು
" ಕನ್ನಡದ ಸೃಜನಶೀಲ ಬರಹಗಾರರಾದ ಶ್ರೀಕೃಷ್ಣಆಲನಹಳ್ಳಿಯವರ ಪ್ರಸಿದ್ಧ ಕಾದಂಬರಿ ಭುಜಂಗಯ್ಯನ ದಶಾವತಾರ ಅವರ ಬಾಲ್ಯದ ಅನುಭವಗಳ ಸಂವೇದನೆ, ಪ್ರಕೃತಿಯ ಸೂಕ್ಷ್ಮತೆಗಳ ವಿವರಗಳೊಡನೆ ಒಡಮೂಡಿದ ವಿಶೇಷ ಕೃತಿ" ಎನ್ನುತ್ತಾರೆ ವರಲಕ್ಷ್ಮಿಪರ್ತಜೆ. ಅವರು ಲೇಖಕ ಶ್ರೀಕೃಷ್ಣಆಲನಹಳ್ಳಿ ಅವರ ‘ಭುಜಂಗಯ್ಯನ ದಶಾವತಾರಗಳು’ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
ಕಥಾನಾಯಕ ಭುಜಂಗಯ್ಯ ಮೈಸೂರು ಸಮೀಪದ ಮಾದ ಹಳ್ಳಿಯ ರೈತ. ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಾ ಜೀವನವನ್ನು ನಡೆಸುವ ಕೃಷಿಕ. ತಾನು ದುಡಿದು ಜೀವಿಸಿ, ತನ್ನ ಹಳ್ಳಿಯ ಇತರರಿಗೂ ದುಡಿದು ಜೀವಿಸಲು ಪ್ರೋತ್ಸಾಹ ಸಹಕಾರ ಕೊಡುತ್ತ ಹಲವಾರು ವೃತ್ತಿಗಳಲ್ಲಿ ನಿಪುಣನಾಗಿರುವ, ಇತರರ ಕಷ್ಟಕ್ಕೆ ಮರುಗುತ್ತಾ ನೆರವಾಗುತ್ತಾ,ತಾಯಿ ಮಡದಿ ಮಕ್ಕಳನ್ನು ಪ್ರೀತಿಸುತ್ತಾ ಜೀವಿಸುವಾತ. ಮಡದಿ ಶ್ರೀಮಂತ ಮನೆತನದ ಮಗಳಾದ ಪಾರ್ವತಿ ಘಟವಾಣಿ ಸ್ತ್ರೀ. ಆಕೆಗೆ ಪತಿಯ ಸಹವಾಸಗಳು ಚರ್ಚೆ ಗಳು ಯಾವುದೂ ಸಹ್ಯವಲ್ಲ.
ಭುಜಂಗಯ್ಯನ ಹಳ್ಳಿಯಲ್ಲಿ ಮಳೆ ಇಲ್ಲದೆ ಬರ ಬಂದಾಗ ಆತನೂರಿನ ಬಡ ಕೂಲಿಕಾರರು ವಲಸೆ ಹೋಗುವುದು ಅರಿತ ಆ ಊರಿನ ಕರಿಗೌಡ ಆತನಲ್ಲಿದ್ದ ಧವಸ ಗಳನ್ನು ನೀಡಿ ಸಹಾಯ ಮಾಡುತ್ತಾ ಬದುಕುವ ಭರವಸೆಯನ್ನು ತುಂಬುತ್ತಾನೆ. ಇಂತಹ ಕಾರ್ಯಗಳೆಲ್ಲವೂ ಕರಿ ಗೌಡರ ಹಿರಿ ಮಗನಾರಾಯಣನಿಗೆ ಹಿತವಲ್ಲ. ಆ ಊರಿಗೆ ಬರುತ್ತಿದ್ದ ಬಸ್ಸಿನ ಡ್ರೈವರ್ನ ಮಾತಿನಿಂದ ಭುಜಂಗಯ್ಯ ಸ್ಪೂರ್ತಿ ಹೊಂದಿ ಕರಿ ಗೌಡ ರಿಂದ ಸಾಲ ಪಡೆದು ಹೋಟೆಲ್ ತೆರೆದು ನಡೆಸಿ ಯಶಸ್ವಿಯಾಗುವುದರಿಂದ ದೊರೆತ ಹಣದಿಂದ ಗಂಜಿ ಕೇಂದ್ರ ಸ್ಥಾಪಿಸಿ ವಲಸೆ ಹೋಗುವ ಊರಿನ ಬಡವರಿಗೆ ಉಚಿತವಾಗಿ ಆಹಾರವನ್ನು ಪೂರೈಸುತ್ತಾನೆ. ಜೊತೆಗೆ ಊರವರನ್ನು ಸೇರಿಸಿಕೊಂಡು ನಾಟಕವನ್ನು ಮಾಡಿ ಹಣ ಸಂಗ್ರಹಿಸಿ ಅವರಿಗೆ ಸಹಾಯ ಮಾಡುತ್ತಾನೆ. ಇದೆಲ್ಲವೂ ಆ ಊರಿನ ಪಟೇಲ ಶ್ಯಾನುಬೋಗರಿಗೂ ಅವರ ಚೀಲಗಳಿಗೂ ಅಸೂಯೆಯನ್ನುಂಟು ಮಾಡುತ್ತದೆ.
ಹೋಟೆಲ್ಗೆ ಕಾಯಂ ಆಗಿ ಬರುತ್ತಾ ಇದ್ದ ಬಳೆಗಾರ,ಭುಜಂಗಯ್ಯನ ಊರಿನಲ್ಲಿ ತೀರಿ ಹೋದಾಗ ಬಳೆಗಾರನ ಮಗಳು ಸುಶೀಲ ಅನಾಥಳಾಗುತ್ತಾಳೆ... ಭುಜಂಗಯ್ಯ ಆಕೆಗೆ ತನ್ನ ಹೋಟೆಲ್ ನಲ್ಲಿದ್ದ ಖಾಲಿ ಕೋಣೆಯನ್ನುಬಿಟ್ಟು ಕೊಟ್ಟು ವಾಸಿಸಲು ಸಹಕರಿಸುತ್ತಾನೆ. ಆಕೆಯನ್ನು ಹೋಟೆಲ ಸಹಾಯಕ ಬಯಸಿದಾಗ ಆಕೆ ಆತನಿಗೆ ಕಪಾಳ ಮೋಕ್ಷ ಮಾಡುತ್ತಾಳೆ. ಹೋಟೆಲ್ ನ ಸಹಾಯಕ ಭುಜಂಗಯ್ಯನ ಮಡದಿಯೊಂದಿಗೆ ಸುಶೀಲಾಳ ಬಗ್ಗೆ ಇಲ್ಲಸಲ್ಲದ ಚಾಡಿಗಳನ್ನು ಹೇಳಿದಾಗ, ಭುಜಂಗಯ್ಯನ ಮಡದಿ ಪಾರ್ವತಿ ಊರ ಜನರೊಂದಿಗೆ ಪಂಚಾಯಿತಿಗೆ ನಡೆಸುತ್ತಾಳೆ.
ಇದನ್ನು ಅರಿತ ಭುಜಂಗಯ್ಯ ತನ್ನಿಂದಾಗಿ ಸುಶೀಲಳಿಗೆ ಅಪವಾದ ಬಂದದ್ದಕ್ಕಾಗಿ ಬೇಸರಿಸಿ ಆಕೆಯನ್ನು ಆಕೆ ಊರಿಗೆ ತೆರಳಲು ಕೇಳಿಕೊಂಡಾಗ, ಆ ಮೊದಲೇ ಭುಜಂಗಯನ ಸ್ವಭಾವದಿಂದ ಆಕರ್ಷಿತಳಾದ ಆಕೆ ಆತನಲ್ಲಿ ಅನುರಾಗ್ತಳಾಗಿದ್ದುದಕೆ ತನ್ನನ್ನೇ ಆತನಿಗೆ ಅರ್ಪಿಸಿಕೊಳ್ಳುತ್ತಾಳೆ. ವಿರಸ ದಾಂಪತ್ಯದ ಫಲ ಭುಜಂಗಯ್ಯ ಸುಶೀಲಳನ್ನು ತನ್ನ ಮಡದಿಯಂತೆ ನಡೆಸಿಕೊಳ್ಳುತ್ತಾನೆ. ಇದನ್ನರಿತ ಪಾರ್ವತಿ ತವರಿಗೆ ಮಕ್ಕಳೊಂದಿಗೆ ನಡೆಯುತ್ತಾಳೆ... ಜೊತೆಗೆ ಭುಜಂಗಯ್ಯನ ತಾಯಿ ಆ ಮನೆ ಸೊಸೆ ಪಾರ್ವತಿ ಎಂದು ತೀರ್ಮಾನಿಸಿ ತಾನೊಬ್ಬಳೇ ಜೀವಿಸುತ್ತಾ ಭುಜಂಗಯ್ಯನನ್ನು ಮನೆಯಿಂದ ಹೊರ ಹಾಕುತ್ತಾಳೆ. ಭುಜಂಗಯ್ಯ ತನ್ನ ಹೋಟೆಲಿನಲ್ಲಿ ಜಾತಿ ಭೇದವನ್ನು ಇಲ್ಲ ವಾಗಿಸಿ ಎಲ್ಲರನ್ನೂ ಒಂದೇ ಸಮನಾಗಿ ಕಂಡದ್ದಕ್ಕಾಗಿ ಊರಿನ ಪಟೇಲ ಶಾನುಭೋಗ ಮತ್ತು ಅವರ ಚೇಲಾಗಳು ಊರವರನ್ನು ಸೇರಿಸಿ ಹೋಟೆಲಿಗೆ ಬೆಂಕಿ ಇಡುತ್ತಾರೆ.
ಇತ್ತ ಭುಜಂಗಯ್ಯನ ತಾಯಿ ತನ್ನ ಅಂತಿಮ ಅವಸ್ಥೆಯಲ್ಲಿ ಮೊಮ್ಮಕ್ಕಳನ್ನು ನೋಡಲು ಆಸೆ ಪಡುತ್ತಾಳೆ. ಭುಜಂಗಯ್ಯ ಹೆಂಡತಿಯ ತವರು ಮನೆಯಲ್ಲಿ ಹೋಗಿ ಮಡದಿ ಮಕ್ಕಳನ್ನು ಕಳುಹಿಸುವಂತೆ ಕೇಳಿಕೊಂಡಾಗ ಮಾವ ಹಾಕಿದ ಶರತ್ತಿನಂತೆ ಮನೆಯನ್ನು ಪಾರ್ವತಿಯ ಹೆಸರಿಗೆ ಬರೆಸಲು ಒಪ್ಪಿಕೊಂಡು ಮಡದಿ ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದಾಗ ತಾಯಿಯ ಮರಣ ಆತನನ್ನು ಸ್ವಾಗತಿಸುತ್ತಿತ್ತು.
ಜೀವನೋಪಾಯದ ದಾರಿಯೂ ಮುಚ್ಚಿದ ಬೇಸರ, ತಾಯಿಯನ್ನು ಕಳೆದುಕೊಂಡು ಉಂಟಾದ ದುಃಖದಿಂದ ಶೋಕಿಸುತ್ತಿದ್ದ ಭುಜಂಗಯನಿಗೆ ತಾಯಿಯ ನುಡಿಯೊಂದು ಸ್ಪೂರ್ತಿಯಾಗಿ ತನ್ನ ಜಮೀನಿನಲ್ಲಿದ್ದ ಬಂಡೆಯನ್ನು ಡೈನಾಮೈಟ್ ನಿಂದ ಸಿಡಿಸಿ ಬಾವಿ ತೆಗೆದಾಗ ಅಲ್ಲಿ ನೀರು ತುಂಬುವುದು. ಮುಂದೆ ಜೀವನೋಪಾಯಕ್ಕಾಗಿ ಡೈನಮೈಟ್ ಸಿಡಿಸಿ ಬಾವಿ ತೋಡುವ ವೃತ್ತಿಯನ್ನು ಮುಂದುವರಿಸಿದಾಗ ಉಂಟಾದ ಅಪಘಾತದಿಂದ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡನು .
ಜೀವನೋಪಾಯಕ್ಕಾಗಿ ಹಳ್ಳಿಹಳ್ಳಿ ತಿರುಗಿ ಬಳೆ ವ್ಯಾಪಾರ ಮಾಡುತ್ತಿದ್ದ ಸುಶೀಲ ಒಂಟಿಯಾಗಿ ಸಿಕ್ಕಿದಾಗ ಹೊಂಚು ಹಾಕಿ ನಾರಾಯಣಗೌಡ ಆಕೆಯ ಮಾನಹರಣವನ್ನು ಗೈಯುತ್ತಾನೆ. ಮೊದಲೇ ಮಗುವನ್ನು ಕಳೆದುಕೊಂಡ ಸುಶೀಲೆಯನ್ನು ಭುಜಂಗಯ್ಯ ಎದೆಗಪ್ಪಿ ಸಂತೈಸುತ್ತಾನೆ. ನಾರಾಯಣಗೌಡನಿಗೆ ಹಾವು ಕಚ್ಚಿದಾಗ ಆತನೊಂದಿಗೆ ಪ್ರತೀಕಾರ ತೋರಿಸದ ಭುಜಂಗಯ್ಯ ಆತನಿಗೆ ಔಷದವನ್ನು ಕೊಟ್ಟು ಬದುಕಿಸುತ್ತಾನೆ. ಆದರೆ ಔಷಧಿ ಮುಗಿದು, ಭುಜಂಗಯ್ಯ ಕಣ್ಣಿದ್ದಾಗಲೇ ಔಷಧಿಯನ್ನು ಯಾರಿಗೂ ತೋರಿಸದೆ, ಪರಿಚಯಿಸದೆ, ಶೇಖರಿಸದೆ ಇದ್ದ ಕಾರಣ ಭುಜಂಗಯ್ಯನಿಗೆ ಔಷದ ದೊರೆಯದೆ ಮರಣವನಪ್ಪುತ್ತಾನೆ.
ಭುಜಂಗಯ್ಯ - ಭುಜಂಗಯ್ಯನದು ಬಹುಮುಖ ಪ್ರತಿಭೆಯುಳ್ಳ, ಸಾಹಸ ಪ್ರವೃತ್ತಿಯಿಂದ ಕೂಡಿದ ವ್ಯಕ್ತಿತ್ವ... ತನ್ನ ಜೀವನದಲ್ಲಿ ಬಂದ ಪರಿಸ್ಥಿತಿಗಳಲ್ಲಿ, ನೀರಿನಂತೆ ಪಾತ್ರಕ್ಕೆ ಬೇಕಾದ ಆಕೃತಿಯನ್ನು ತಾಳುವಂತೆ ನಿಭಾಯಿಸುವ ಆತನ ಒಂದೊಂದು ಕೃತಿಯು ಆತನ ಅವತಾರಗಳು ಅನಿಸಿಕೊಳ್ಳುವಂತಾಗುತ್ತದೆ ವಾಸ್ತವಿಕತೆಗೆ ಹೊಂದಿಕೊಳ್ಳುತ್ತಾ,ಹಳೆಯ ಕಂದಾಚಾರಗಳಿಗೆ ಜೋತು ಬೀಳದ, ಪರರ ಕಷ್ಟಗಳಿಗೆ ನೆರವಾಗುವ ಹೃದಯವಂತ ವ್ಯಕ್ತಿ... ಕ್ರಿಯಾಶೀಲನಾದ ಆತ ಹತ್ತು ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ನಿಪುಣ ಅದರಲ್ಲಿ ಒಂದು ಹಾವು ಕಚ್ಚಿದವರ ವಿಷ ಹೀರಿ ಔಷಧೋಪಚಾರ ಮಾಡಿ, ವಿಷ ಜಂತು ಕಡಿದ ವ್ಯಕ್ತಿಯನ್ನು ಅಹೋ ರಾತ್ರಿ ನಿದ್ರೆ ಮಾಡದಂತೆ ನೋಡಿಕೊಂಡು, ವಿಷ ಹೀರಿದ್ದಕ್ಕಾಗಿ ತಾನು ಔಷಧಿ ತೆಗೆದುಕೊಂಡು ಬದುಕುತ್ತಾ ಬಾಳುವವನು ಆ ಸತ್ಕರ್ಮವೇ ಆತನಿಗೆ ಮುಳುವಾದದ್ದು ವಿಪರ್ಯಾಸ. ವ್ಯವಸಾಯ ಹೋಟೆಲ್ ಉದ್ಯಮ ಮುಂತಾದವುಗಳನ್ನು ಜೊತೆಯಾಗಿ ನಿಭಾಯಿಸುವಂತ ಸಾಮರ್ಥ್ಯವಂತ ತನ್ನನ್ನು ಹೀಯಾಳಿಸಿದವರು ಎದುರೆ ಎತ್ತರಕ್ಕೆ ಏರುವ ಛಲಗಾರ ಸಾಹಸ ಪ್ರವರ್ತಿಯವನದ ಭುಜಂಗಯ್ಯ ಊರವರ ತಾತ್ಸಾರದ ಎದುರು ಬ0ಡೆಗಳಡೆಯಲ್ಲಿ ಬಾವಿ ತೋಡಿ ನೀರು ತುಂಬಿ ತನ್ನತನವನ್ನು ಸಾಬೀತುಪಡಿಸುವವ ತನ್ನ ಸಹಜ ಸ್ವಭಾವ, ಸ್ವಾಮಿಗಳ ಉಪದೇಶದಿಂದ ಹೊಂದಿದ ಆಧ್ಯಾತ್ಮಿಕ ಮನೋಭಾವದಿಂದ ಭುಜಂಗಯ್ಯ, ತನ್ನ ಪ್ರಾಣಕ್ಕೆ ಸಮಾನಳಾದ ಸುಶೀಲಳ ಶೀಲ ಕೆಡಿಸಿದ ನಾರಾಯಣಗೌಡನನ್ನು ಬದುಕಿಸಿ ತನ್ನ ಪ್ರಾಣವನ್ನು ಕಳೆದುಕೊಂಡ ಭುಜಂಗಯ್ಯನ ವ್ಯಕ್ತಿತ್ವ ಓದುಗರ ದೃಷ್ಟಿಯಲ್ಲಿ ಬಹಳ ಎತ್ತರಕ್ಕೆ ಏರುವುದು.
ಪಾರ್ವತಿ - ಶ್ರೀಮಂತ ಮನೆತನದ ಹೆಣ್ಣು ಮಗಳಾದ ಪಾರ್ವತಿ ಹಣದ ಮೇಲಿನ ವ್ಯಾಮೋಹದಿಂದ ಪತಿಯ ಬಗ್ಗೆ ಅಸಡ್ಡೆ ಬೆಳೆಸಿಕೊಳ್ಳುತ್ತಾಳೆ. ಆತನ ಸ್ವಭಾವದಿಂದಾಗಿ ಆಕೆಯೊಳಗೆ ಉಂಟಾಗದ ಆಕ್ರೋಶದ ವರ್ತನೆಯಿಂದಾಗಿ ಆಕೆ ಎಂದೂ ಪತಿಯ ಮನದಲ್ಲಿ ಸ್ಥಾನ ಗಳಿಸಲೇ ಇಲ್ಲ.... ಆಕೆಯ ತಪ್ಪು ಆಕೆಗೆ ಅರಿವಾದಾಗ ಆಕೆಯ ಪತಿ ಆಕೆಯ ಕೈತಪ್ಪಿ ಹೋಗಿ ಪ್ರೇಯಸಿಯ ಮಡಿಲಲ್ಲಿ ಸುಖವಾಗಿದ್ದ ಮತ್ತು ಮತ್ತು ಪತಿಗಾಗಿ ಹಂಬಲಿಸಿದಾಗ ಆತ ಈ ಲೋಕದಿಂದಲೇ ತೆರಳಿದ್ದ.
ಸುಶೀಲ - ಅನಾಥೆ ಯಾದ ಸುಶೀಲಾ, ಭುಜಂಗಯ್ಯನ ಹೋಟೆಲ್ನ ಕೋಣೆಯಲ್ಲಿ ವಾಸಿಸುತ್ತಾ, ಆತನ ಚೆರ್ಯಗಳನ್ನು ವೀಕ್ಷಿಸುತ್ತಾ ಆತನಲ್ಲಿ ಆಕೆ ಅನುರಕ್ತಳಾಗುತ್ತಾಳೆ... ಆರಾಧಿಸುತ್ತಾಳೆ... ಅಪವಾದ ಬಂದಾಗ ತನ್ನನ್ನೇ ಆತನಿಗೆ ಅರ್ಪಿಸಿ ಆತನೊಳಗೆ ಒಂದಾಗುತ್ತಾಳೆ... ಮಡದಿ ನೀಡದ ಸಂಸಾರಿಕ, ಮಾನಸಿಕ,ಆರ್ಥಿಕ ಅಸಹಕಾರದಿಂದ ಬಳಲಿದ ಭುಜಂಗಯ್ಯ ಆಕೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಿ ತನ್ನ ಮನದಲ್ಲಿಆಕೆಗೆ ಭದ್ರವಾದ ಸ್ಥಾನವನ್ನು ನೀಡುತ್ತಾನೆ... ಸುಶೀಲ ಭುಜಂಗಯ್ಯನ ಎಲ್ಲಾ ಕೆಲಸ ಕಾರ್ಯಗಳಲ್ಲೂ ತನ್ನ ತ್ರಿಕರಣಪೂರ್ವಕ ಸಹಕಾರ ನೀಡುತ್ತಾಳೆ.
ಭುಜಂಗಯ್ಯ ಅಂಧನಾದಾಗಲೂ ಪ್ರತಿಯೊಂದರಲ್ಲೂ ಆತನ ಬೆನ್ನಿಗೆ ನಿಲ್ಲುತ್ತಾಳೆ. ಕೊನೆಗೆ ನಡೆದಆಕೆಯ ಶೀಲಹರಣ, ಭುಜಂಗಯ್ಯನ ಮರಣ ಎರಡು ಆಕೆಗೆ ತಡೆಯಲಾರದ ಹೊಡೆತಗಳು. ಈ ಮೂರು ಪಾತ್ರಗಳಲ್ಲದೆ ಇನ್ನೂ ಅನೇಕ ಉಪ ಪಾತ್ರಗಳೊಂದಿಗೆ ಹೆಣೆದ ಈ ಕತೆ ನೀಡುವ ಆಧ್ಯಾತ್ಮಿಕ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವೇ...
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ (kannada Pustaka Pradhikara) ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚ...
ಮಕ್ಕಳಿಗೆ ದೆವ್ವ, ಭೂತ ಮುಂತಾದ ಸಂಗತಿಗಳನ್ನು ಹೇಳಬಾರದೆಂದು ಹೇಳುತ್ತ ಅವರಲ್ಲಿ ಮತ್ತಷ್ಟು ಹೆದರಿಕೆ ಹುಟ್ಟಿಸಿರುತ್ತೇವೆ...
ಲಂಡನ್: ದಕ್ಷಿಣ ಭಾರತದ ಸಾಹಿತ್ಯ ಲೋಕ, ಅದರಲ್ಲೂ ಕನ್ನಡ ಸಾಹಿತ್ಯದ ಪಾಲಿಗೆ ಮೇ 20, 2025 ಸುವರ್ಣಾಕ್ಷರದಲ್ಲಿ ಬರೆದಿಡಬೇ...
©2025 Book Brahma Private Limited.