ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು


"ಸ್ವತಂತ್ರದ ಸೋಗಿನಲ್ಲಿ ಹೆಣ್ಣಿನ ಭಾವಗಳ ಬಂಧನದ ಕೀಲಿ ತೆರೆದಿದ್ದಾರೆ. ದೇಶ ಹಾಗೂ ನಾಡಿನ ಭಕ್ತಿಯನ್ನು ಮೆರೆದಿದ್ದಾರೆ. ಪ್ರೇಮಧಾರೆಯ ಸಿಂಚನವನ್ನು ಹನಿಸಿದ್ದಾರೆ. ಲೋಕಕ್ಜೆ ಅನ್ನವೀಯುವ ರೈತನ ದುಡಿತದ ಸುಣ್ಣದ ಒಳ ಸುಡುವಿಕೆಯನ್ನು ಪ್ರಶ್ನಿಸಿದ್ದಾರೆ. ಹಾಗೇ ಸೋತ ಬದುಕುಗಳಿಗೆ ಭರವಸೆಯ ದೀಪವಿತ್ತಿದ್ದಾರೆ. ಹೀಗೆ 40 ಕವಿತೆಗಳು ನಲವತ್ತು ತಿಳಿವಿನ ಅರಿವಾಗಿದೆ. ಅದರಲ್ಲಿ ಕೆಲವು ಮೆಚ್ಚಿನ ಸಾಲುಗಳು ಇಂತಿದೆ....," ಎನ್ನುತ್ತಾರೆ ಭವಾನಿ ಪ್ರಭು, ಹುಬ್ಬಳ್ಳಿ. ಅವರು ಡಿ.ಶಬ್ರಿನಾ ಮಹಮದ್ ಅಲಿಯವರ "ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ" ಕೃತಿ ಕುರಿತು ಬರೆದ ವಿಮರ್ಶೆ.

ಬರಹವೆಂಬುದು ಕೇವಲ ಅಕ್ಷರಗಳ ಅಥವಾ ಪದಗಳ ಜೋಡಣೆಯಲ್ಲ; ಅದು ಬಿರಿದ ಭಾವದ ಹರಕೆಯಾಗಿರಬೇಕು.ಹಾಗೆಯೇ ಕೃತಿಯೆಂದರೆ ಅದು ಕೇವಲ ಪ್ರತಿಷ್ಠೆಯ ಗುರುತಲ್ಲ;ಅದು ಸಮಾಜಕ್ಕೆ ಒದಗುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸೂತ್ರವಾಗಿರಬೇಕು.ಈ ನಿಟ್ಟಿನಲ್ಲಿ ಕವಯಿತ್ರಿ ಡಿ.ಶಬ್ರಿನಾ ಮಹಮದ್ ಅಲಿಯವರ ಚೊಚ್ಚಲ ಕವನ ಸಂಕಲನ "ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ" ಸಂಪೂರ್ಣತೆ ಕಂಡುಕೊಂಡಿದೆಯೆಂದರೆ ತಪ್ಪಿಲ್ಲ. ಪ್ರಸ್ತುತ ಓರ್ವ ಸಮಾಜಮುಖಿ ಲೇಖಕಿ ಹಾಗೂ ಕೈಗನ್ನಡಿ ಮನಸ್ಸಿನ ಸಹೃದಯಿ ಶಬ್ರಿನಾರವರ ಈ ಕವನ ಸಂಕಲನದ ಪ್ರತೀ ಕವನ ಹಾಗೂ ಕವನದ ಸಾಲುಗಳು ಬಿಳಿ ಹಾಳೆಯಂತ ಸ್ವಚ್ಛ ಮನಸ್ಸಿನ ನಿವೇದನೆಗಳು ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸುವಲ್ಲಿ ಅಕ್ಷರಶಃ ರೈಟು ಹಾಕಿದ ಕೆಂಪು ಶಾಯಿಯಂತಿದೆ. ಸುಮಾರು 40 ಕವಿತೆಗಳಿರುವ ಈ ಸಂಕಲನದಲ್ಲಿ ಕವಯಿತ್ರಿ ತಮ್ಮನ್ನು ಕಾಡುತ್ತಿರುವ ಪ್ರಶ್ನೆಗಳನ್ನು ಕುಟುಕಿದ್ದಾರೆ. ಬಡವ, ದೀನ- ದಲಿತರ ಕೊರಗನ್ನು ಕೂಗಿ ಸಾರಿದ್ದಾರೆ. ಲಿಂಗ ಭೇದದ ಕಟ್ಟಳೆಗಳಿಗೆ ಬರೆ ಹಾಕಿದ್ದಾರೆ. ಜಾತಿ, ಮತ, ಪಂಥಗಳ ಕೋಮಿನ ಸಣ್ಣತನವನ್ನು ಬಯಲಿಗೆಳೆದಿದ್ದಾರೆ. ಸ್ವತಂತ್ರದ ಸೋಗಿನಲ್ಲಿ ಹೆಣ್ಣಿನ ಭಾವಗಳ ಬಂಧನದ ಕೀಲಿ ತೆರೆದಿದ್ದಾರೆ. ದೇಶ ಹಾಗೂ ನಾಡಿನ ಭಕ್ತಿಯನ್ನು ಮೆರೆದಿದ್ದಾರೆ. ಪ್ರೇಮಧಾರೆಯ ಸಿಂಚನವನ್ನು ಹನಿಸಿದ್ದಾರೆ. ಲೋಕಕ್ಜೆ ಅನ್ನವೀಯುವ ರೈತನ ದುಡಿತದ ಸುಣ್ಣದ ಒಳ ಸುಡುವಿಕೆಯನ್ನು ಪ್ರಶ್ನಿಸಿದ್ದಾರೆ. ಹಾಗೇ ಸೋತ ಬದುಕುಗಳಿಗೆ ಭರವಸೆಯ ದೀಪವಿತ್ತಿದ್ದಾರೆ. ಹೀಗೆ 40 ಕವಿತೆಗಳು ನಲವತ್ತು ತಿಳಿವಿನ ಅರಿವಾಗಿದೆ. ಅದರಲ್ಲಿ ಕೆಲವು ಮೆಚ್ಚಿನ ಸಾಲುಗಳು ಇಂತಿದೆ....

ಹಿಂದಿನ ಕಷ್ಟಗಳ ಅನುಭವವೇ ಮುಂದಿನ ಸವಾಲುಗಳಿಗೆ ಧೈರ್ಯದ ದೀವಿಗೆಯಾಗಬೇಕು ಎಂಬುದನ್ನು ಹೇಳುತ್ತಾ "ಧೈರ್ಯಂ ಸರ್ವತ್ರ ಸಾಧನಂ" ಎಂಬ ಸಾರ ಸೂಸಿದೆ ಮೊದಲ ಕವನ 'ಬದುಕೆಂದರೆ ಭಯವಲ್ಲ ಭರವಸೆ' ಎಂಬುದು. ಹುಟ್ಟು ನಮ್ಮ ನಿರ್ಧಾರವಲ್ಲ ಅದು ಜೀವಾಣುಗಳ ಪ್ರಕ್ರಿಯೆಯೆಂಬ ಸಣ್ಣ ಅರಿವಿರದ ಮನುಜನಿಗೆ ತಾಯಿ, ಸಹೋದರಿ, ಅಜ್ಜಿ, ಮಡದಿಯಾಗಿ ಹೆಣ್ಣು ಬೇಕು ಆದರೆ ಮಗಳಾಗಿ ಬೇಡವೆಂದರೆ ಹೇಗೆ? ಎಂಬ ಪ್ರಶ್ನೆಯಿದೆ 'ನಾ ಕೇಳದ ಹುಟ್ಟಿಗೇಕೆ ಶಿಕ್ಷೆ? 'ಕವನದ ಸಾಲುಗಳು

"ಚಾಕರಿಗಾಗಿ ಹೆಣ್ಣಂತೆ
ನೌಕರಿಗಾಗಿ ಗಂಡಂತೆ
ಕಥೆ ಪುರಾಣಗಳಲ್ಲಿ
ಹೆಣ್ಣು ಆದಿಶಕ್ತಿಯಂತೆ!"
ಎಂಬಲ್ಲಿ ಮನುಜನ ಮಾನಸಿಕ ಅಯ್ಕೆಯನ್ನು ತೋರಿಸಿದೆ.

ಅದೇ ರೀತಿ 'ಕತ್ತಿಗಿಂತ ಮೊನಚು ಮೌನ' ಎಂಬ ಕವಿತೆಯ ಸಾಲುಗಳು ಮಾತಿಗಿಂತ ಮೌನ ಲೇಸು ಎಂಬುದನ್ನು ಹೇಳಿದೆ. ಮೌನ ನೂರು ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆಯೆಂಬುದು ಪ್ರತಿಬಿಂಬಿತವಾಗಿದೆ.

ಜೋರು ಮಳೆ
ನಿಲ್ಲಲೇಬೇಕು
ಮಾತಿಗಿಳಿದವರು
ಸೋಲಲೇಬೇಕು..,.

ಪ್ರತಿಯೊಬ್ಬರ ಬದುಕಿನಲ್ಲಿ ನೆನಪುಗಳ ಎಂದೂ ಮುಗಿಯದ ತುತ್ತಿನ ಬುತ್ತಿಯಿರುತ್ತದೆ. ಹಾಗೆಯೇ ಶಬ್ರಿನಾರವರ 'ಮರೆಯದ ಆ ದಿನಗಳು' ಕವಿತೆಯ ಸಾಲುಗಳು ಅವರ ಕಳೆದ ಬಾಲ್ಯ ಹರೆಯದ ದಿನಗಳ ನೆನಹಿನ ಸುರುಳಿ ಸಾಲುಗಳಲ್ಲಿ ಬಿಚ್ಚಿದೆ.

ದೋಸೆ ಮಾಡಿದರೆ ಯುಗಾದಿ ಅಮವಾಸ್ಯೆ
ಸಜ್ಜಿರೊಟ್ಟಿ ಬಡಿದರೆ ಮಕರ ಸಂಕ್ರಾಂತಿ
ಪಾನಕ ಕೋಸಂಬರಿಯೆಂದರೆ ರಾಮನವಮಿ......

ಇಲ್ಲಿ ಬಯಲುಸೀಮೆಯ ಅಡುಗೆ ವಿಶೇಷತೆಯ ಮೆಲುಕಿನೊಂದಿಗೆ ಮಧ್ಯಮ ವರ್ಗದ ಕುಟುಂಬದ ಅಂದಿನ ದಿನಗಳ ಬದುಕಿನ ಚಿತ್ರಣವಿದೆ.

ಓರ್ವ ಗುರುವಾಗಿ ಗುರುವನ್ನು ಸ್ಮರಿಸುವುದನ್ನು ಮರೆಯದ ಲೇಖಕಿ ತಮ್ಮ 'ಗುರುನಮನ' ಕವನದ ಶರಷಟ್ಪದಿಯ ಸಾಲುಗಳಲ್ಲಿ ಸ್ಮರಿಸಿದ್ದಾರೆ.

ಕಾದಿಹ ವಿದ್ಯೆಯ
ನಾದದಲರುಹುತ
ಮಾಡದೆ ತಿಳಿಸುವರು
ಹಾದಿಗು ಬೀದಿಗು
ಸಾದರಪಡಿಸುತ
ನಾದದ ಕನ್ನಡ ಮೊಳಗಿಹರು|

ಹೆತ್ತ ತಂದೆ ತಾಯಿಯರನ್ನು ಕವಿ ಸಾಲುಗಳಲ್ಲಿ ವರ್ಣಿಸುವ ಸಂಭ್ರಮ ಸವಿಯೂಟದಂತೆ. ಪದಗಳಿಗೆ ನಿಲುಕದ ಆ ವ್ಯಕ್ತಿತ್ವವನ್ನು ಹಿಡಿದಿಡುವ ಸಾಹಸದಿ ಸೋತರೂ ಅಲ್ಲಿಯೂ ಸುಖ ಕಾಣುವ ಬರಹ ಅಮ್ಮನ ಕುರಿತು ಬರೆಯುವುದಾಗಿದೆ. ಇಲ್ಲಿಯೂ ಸಹ ಕವಯತ್ರಿ ತನ್ನ ತಾಯಿಯನ್ನು ಸ್ವರ್ಗದ ತೊಟ್ಟಿಲು ಎಂಬ ರೂಪಕದ ಶೀರ್ಷಿಕೆಯಲ್ಲಿ ತನ್ನ ತಾಯಿಯ ಕುರಿತು ಮನದುಂಬಿ ವರ್ಣಿಸಿದ್ದಾರೆ.

ವರ್ತಮಾನದ ನನ್ನ
ಹಸನಾದ ಬದುಕಿಗೆ
ಭದ್ರಬುನಾದಿ ಹಾಕಿದವಳು...

ಹಡೆದವ್ವನ ಮೇಲಿನ ಅಪಾರವಾದ ಗೌರವ, ಪ್ರೀತಿ ಅಭಿಮಾನದ ಸಾಲುಗಳಿವು.ಇನ್ನೊಂದು ಕವಿತೆ 'ನನ್ನರಸಿ ಸೀತೆ'. ಅಲ್ಲಿ ದೇವಸ್ವರೂಪಿ ಶ್ರೀರಾಮನ ಧರ್ಮಪತ್ನಿ ಸೀತೆಯ ಸಕಲ ಗುಣ ಸಂಪನ್ನತೆಯನ್ನು ಪುನಃ ಶರ ಷಟ್ಪದಿಯಲ್ಲಿ ಲೀಲಾಜಾಲವಾಗಿ ವರ್ಣಿಸಿದ್ದಾರೆ.

ಹಾಗೆಯೇ 'ಮುಕುತಿಯ ಕರುಣಿಸೆಮಗೆ' ಎಂಬ ಕವಿತೆಯು ಭಾಮಿನಿ ಷಟ್ಪದಿಯಲ್ಲಿ ಮೂಡಿ ಬಂದಿದ್ದು ದೈವಸ್ಮರಣೆ ಮನಮುಟ್ಟುವಂತಿದೆ. 'ತನು ಕನ್ನಡ ಮನ ಕನ್ನಡ' ಕವಿತೆಯು ಅವರ ಅಪ್ಪಟ ಕನ್ನಡತನವನ್ನು ಬಿಂಬಿಸಿದೆ. ಅಲ್ಲಿನ 'ನಿನ್ನ ನುಡಿಯದೆ ನಾ ಹೆಗೆ ಉಸಿರಾಡಲಿ' ಎಂಬ ಸಾಲು ಕನ್ಬಡತನವನ್ನು ಎದೆ ತಟ್ಟಿ ಹೇಳಿದೆ.

ಮನುಜಸಹಜ ಪ್ರೇಮ ಕಾಮನೆಗಳೂ ಶಬ್ರಿನಾರವರ 'ನನ್ನುಸಿರಿನ ಬಿಸಿಯುಸಿರು ನೀನು' ಹಾಗೂ 'ಆತ್ಮವಿರದ ದೇಹ ಭೂಮಿ ಮೇಲೇಕೆ?' ಎಂಬಂತ ಕವಿತೆಗಳಲ್ಲಿ ಮೂಡಿ ಬಂದಿದೆ. ಅದೇ ರೀತಿ ದೇಶಪ್ರೇಮವನ್ನು ಉಕ್ಕಿಸುವ ಕವನಗಳು ಹಾಗೂ ವಿನಾಶದತ್ತ ಸಾಗುತ್ತಿರುವ ನಿಸರ್ಗದ ಮೇಲಿನ ಕಳಕಳಿ ಹಾಗೂ ಈ ಹಿಂದೆ ದೇಶ ಎದುರಿಸಿದ ಕರೋನಾ ಸಮಯದಲ್ಲಿ ನಡೆದ ಹೃದಯವಿದ್ರಾವಕ ಘಟನೆಗಳಿಂದ ನೊಂದ ಮನಗಳಿಗೆ ನೀಡಿದ ಭರವಸೆಯ ಕವಿತೆ. ಅದೇ ರೀತಿ ರಾಷ್ಟ್ರದ ನಾಯಕರಾದ ಅಂಬೇಡ್ಕರ್, ನೆಹರೂ ಹಾಗೂ ಸಮಾಜ ಸುಧಾರಕಿ ವಚನ ಕಾರ್ತಿ ಅಕ್ಕಮಹಾದೇವಿಯವರ ಕುರಿತು ತಮ್ಮ ಅರಿವಿನ ಲಹರಿಯನ್ನು ಕವನಿಸಿದ್ದಾರೆ.

ಒಟ್ಟಿನಲ್ಲಿ ಕವಯಿತ್ರಿ ಶಬ್ರಿನಾರವರ ಮೊದಲ ಕವನ ಸಂಕಲನವು ಒಂದೊಂದು ವಿಶೇಷತೆಯನ್ನು ಅರುಹುವ ಕವನಗಳ ಗುಚ್ಚವಾಗಿದೆ. ವಿಶೇಷವೆಂದರೆ ಕನ್ನಡ ಸಾಹಿತ್ಯದ ಛಂದಸ್ಸಿನ ಪ್ರಕಾರ ಷಟ್ಪದಿಯಲ್ಲಿ ಕವಿತೆಗಳು ಘಮ ಘಮಿಸಿರುವುದು ಕನ್ನಡದ ಉಳಿವಿಗೆ ಮಿಡಿದ ಮನವಾಗಿದೆ. ಕೆಲವು ಕವಿತೆಗಳು ಪ್ರತಿಮೆಗಳ ಗೂಡಾದರೆ ಕೆಲವು ಆದರ್ಶಗಳ ಹಾಡಾಗಿದೆ. ಹಾಗೆಯೇ ಬರಹವು ಓದುಗನ ಎದೆಯಾಳಕ್ಕೆ ಇಳಿಯುವ ಸರಳತೆಯ ಸುಂದರವಾಗಿದೆ. ಅಲ್ಲಲ್ಲಿ ಸುಂದರ ರಾಗ ಮೇಳೈಸಿದೆ. ಬಂಡಾಯದ ಸಣ್ಣ ಲಕ್ಷಣವಿರುವ ತಮ್ಮ ಕವಿತೆಗಳಲ್ಲಿ ಕಷ್ಟವಾದ ಲಯವನ್ನು ತರುವ ಇಷ್ಟವನ್ನು ಕವಯತ್ರಿಯ ಗಮನಕ್ಕೆ ತರುವ ಸಹೃದಯತೆಯ ಸ್ನೇಹದ ಜವಾಬ್ದಾರಿಯನ್ನು ತಿಳಿಸುತ್ತಾ ಮತ್ತೆ ಮತ್ತೆ ತಮ್ಮ ಲೇಖನಿಯಿಂದ ಇಂತಹ ಸಮಾಜವನ್ನು ಪ್ರಶ್ನಿಸುವ, ನೈಜತೆಯನ್ನು ದೃಷ್ಟಿಗೋಚರಗೊಳಿಸುವ ಇನ್ನಷ್ಟು ಅತ್ಯುತ್ತಮ ಕವನ ಸಂಕಲನಗಳು ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲೆಂದು ಹೃನ್ಮನದಿ ಆಶಿಸುವೆ.

- ಭವಾನಿ ಪ್ರಭು, ಹುಬ್ಬಳ್ಳಿ

MORE FEATURES

ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವವರಿಗೆ ಈ ಕೃತಿ ಸ್ಫೂರ್ತಿದಾಯಕ

16-06-2024 ಬೆಂಗಳೂರು

"ಸೂರಿ ಮಾಣಿ ಇದು ನಿವೃತ್ತ ಶಿಕ್ಷಕರು ಹಾಗೂ ಪ್ರಸ್ತುತ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರ...

ವಾರದ ಲೇಖಕ ವಿಶೇಷದಲ್ಲಿ ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ

16-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಾಹಿತಿ ...

ಓದು ನನ್ನನ್ನು ಮತ್ತಷ್ಟು ಮಾನವೀಯಗೊಳಿಸಿದೆ: ಶ್ರುತಿ ಬಿ.ಆರ್

16-06-2024 ಬೆಂಗಳೂರು

'ಕನ್ನಡ ಸಾಹಿತ್ಯ ಪರಂಪರೆ ತುಂಬಾ ಶ್ರೀಮಂತವಾದದ್ದು. ಎಷ್ಟೊಂದು ಓದಲು ಬಾಕಿ ಇದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳ...