ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...

Date: 29-10-2022

Location: ಬೆಂಗಳೂರು


ಚಾರಣ ಹೋದಾಗ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಿ ಒಳ್ಳೆಯ ನೆನಪುಗಳನ್ನು ಸೆರೆಹಿಡಿಯಿರಿ ಆದರೆ ನಿಸರ್ಗದ ಸಹಜ ಸೌಂದರ್ಯಕ್ಕೆ ಧಕ್ಕೆ ತರುವ ಯಾವ ಕೆಲಸವನ್ನು ಮಾಡಬೇಡಿ. ಅನವಶ್ಯಕ ಮೋಜು ಮಸ್ತಿ, ಅಪಾಯಕಾರಿ ಸೆಲ್ಫಿಗಳು, ಹುಚ್ಚು ಸಾಹಸಗಳಿಗೆ ಜೀವಬಲಿಯಾಗಿರುವ ಅನೇಕ ನಿದರ್ಶನಗಳುಂಟು ಎನ್ನುತ್ತಾರೆ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ‘ಚಾರಣಪ್ರಿಯ ಮಿಥುನ್’ ಅವರ ಚಾರಣದ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಚಾರಣ ಅಥವಾ ಟ್ರೆಕ್ಕಿಂಗ್ ಹೋಗಬೇಕು ದಟ್ಟಡವಿಯಲಿ ಮೈಮರೆಯಬೇಕು ಎನ್ನುವುದು ಬಹಳಷ್ಟು ಜನರ ಆಸೆ. ಆಸೆಯಿದ್ದರೆ ಸಾಲದು ಆಸ್ಥೆಯಿರಬೇಕು. ಹಸಿರು ಮೈದುಂಬಿದ ಮಳೆ, ಮಂಜು, ಬೆಟ್ಟ ಗುಡ್ಡ, ತೊರೆ ಜಲಪಾತಗಳ ಝುಳುಝುಳು ನಾದ, ಹಕ್ಕಿಗಳ ಕಲರವ ಆಸ್ವಾದಿಸುವ ಆಸಕ್ತಿಯಿರಬೇಕು. ಏನೂ ತೊಂದರೆ ಮಾಡದೇ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು.

ಹಾಗೇನೆ ಇಲ್ಲಿ ಕೆಲವೊಂದು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೋಗುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಮತ್ತು ಮ್ಯಾಪ್ ಸಹಾಯ ಬೇಕು. ಮಾರ್ಗಮಧ್ಯದಲ್ಲಿ ತಿನ್ನಲು ಸ್ವಲ್ಪ ಹಣ್ಣು, ಲಘು ಆಹಾರ, ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗ್ಲುಕೋಸ್, ಸ್ಥಳಕ್ಕೆ ವಾತಾವರಣಕ್ಕೆ ತಕ್ಕಂತ ಬಟ್ಟೆ, ಉಳಿಯಲು ಟೆಂಟ್ ವ್ಯವಸ್ಥೆ ಮಾಡಿಕೊಳ್ಳಬೇಕು. ಹೊಸಬರಾದರೆ ಕಷ್ಟವೆನಿಸುವ ಸ್ಥಳಗಳಿಗೆ ಹೋಗಬೇಕಾದರೆ ಮಾರ್ಗದರ್ಶಕರರೊಂದಿಗೆ ಹೋದರೆ ಉತ್ತಮ. ಅವರಿಗೆ ಚಾರಣದ ಬಹುತೇಕ ಮಾಹಿತಿ ಮತ್ತು ಉತ್ತಮ ಅನುಭವವಿರುತ್ತದೆ. ಸಂಭವನೀಯ ಅಪಾಯಗಳಿಲ್ಲದೆ ಸದಭಿರುಚಿಯ ವಿಚಾರಗಳೊಂದಿಗೆ ಚಾರಣದ ಒಳ್ಳೆಯ ಅನುಭೂತಿಯನ್ನು ಮಾಡಿಸುತ್ತಾರೆ. ಅಂತಹ ಒಂದು ತಂಡವಾದ 'ಅಲೆಮಾರಿ ಅಡ್ವೆಂಚರ್ಸ್'ನ ಮಿಥುನ್ ಅವರ ಜೀವನದ ಚಾರಣ ಅವರ ಮಾತುಗಳಲ್ಲಿ ನಿಮ್ಮ ಓದಿನ ಚಾರಣಕ್ಕೆ.

ನನ್ನ ತಂದೆ ಪ್ರಕಾಶ್ ಕುಮಾರ್ ತಾಯಿ ಉಷಾ. ನಾನು ಎಂಟನೇ ತರಗತಿಯವರೆಗೆ ಓದಿದ್ದೇನೆ. ನನಗೆ ಓದುವ ಹಂಬಲ ಇದ್ದರೂ ಓದುವುದು ಕಷ್ಟಸಾಧ್ಯವಾಗಿತ್ತು. ನಾನು ಮೂರನೇ ತರಗತಿ ಓದುವಾಗಲೇ ನಮ್ಮ ತಾಯಿ ತೀರಿ ಹೋದರು. ನಮ್ಮ ತಂದೆ ರೈಲ್ವೆ ಇಲಾಖೆಯಲ್ಲಿ ಇದ್ದುದರಿಂದ ಕೆಲಸದ ಮೇಲೆ ಅಲ್ಲಿ ಇಲ್ಲಿ ಹೋಗುತ್ತಿದ್ದರು. ನಮ್ಮನ್ನು ಒಬ್ಬೊಬ್ಬರನ್ನು ಒಂದೊಂದು ಕಡೆ ಬಿಟ್ಟು ಬೆಳೆಸಿದರು. ನಾನು ಏಳನೇ ತರಗತಿಗೆ ಬಂದಾಗ ನನ್ನನ್ನು ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ಎಂಬಲ್ಲಿ ಹಾಸ್ಟೆಲ್ಲಿಗೆ ಸೇರಿಸಿದರು. ಅದು ನನಗೆ ಹೊಸದು, ಅಲ್ಲಿನ ವಾತಾವರಣ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ಹಾಗಾಗಿ ಅಲ್ಲಿಂದ ಓಡಿಬರಲು ಎರಡು ಬಾರಿ ಪ್ರಯತ್ನಿಸಿದರೂ ಸಿಕ್ಕಿಬಿದ್ದೆ. ಆ ಹಾಸ್ಟೆಲ್ಲಿನಲ್ಲಿ ವಿದ್ಯಾರ್ಥಿಗಳಿಗೆ ಒಂದು ರೀತಿಯ ಕೊಟ್ರೆ ಕಟಿಂಗ್ ಅಂತ ಮಾಡಿಸಿರುತ್ತಾರೆ. ಅಕ್ಕಪಕ್ಕದ ಸುತ್ತ ಮುತ್ತಲಿನ ಯಾರೇ ಆ ಕಟಿಂಗ್ ನೋಡಿದರೂ ಅವರಿಗೆ ಹಾಸ್ಟೆಲ್ ಹುಡುಗ ಅಂತ ಸುಲಭವಾಗಿ ಗೊತ್ತಾಗುತ್ತಿತ್ತು. ನಮ್ಮನ್ನು ಹಿಡಿದುಕೊಂಡು ಬಂದು ಮತ್ತೆ ಹಾಸ್ಟೆಲ್ಲಿಗೆ ಬಿಡುತ್ತಿದ್ದರು. ಒಂದಿನ ಬೆಳಗ್ಗೆ 11 ರ ಸುಮಾರಿಗೆ ಮೊದಲಸಲ ಹಾಸ್ಟೆಲ್ ಬಿಟ್ಟು 15 ಕಿ. ಮೀ. ನಡೆದು ಹೋಗಿದ್ದೆ. ಆಗ ಊರಿನವರ ಕೈಗೆ ಸಿಕ್ಕಿಬಿದ್ದೆ. ಹಗಲು ಹೊತ್ತಿನಲ್ಲಿ ಹೋದದ್ದಕ್ಕೆ ಹೀಗಾಗಿದೆ ರಾತ್ರಿ ಹೋದರೆ ಹೇಗೆ ಎಂದು ಯೋಚಿಸಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಕಾಡಿನೊಳಗಿಂದ ಬೆಟ್ಟದ ಮೇಲೆ ಬೆಟ್ಟ ಹತ್ತಿ ಹೊರಟೆ. ಒಟ್ಟಾರೆ ನಾನು ಇಲ್ಲಿಂದ ತಪ್ಪಿಸಿಕೊಂಡರೆ ಸಾಕಷ್ಟೆ ಎನ್ನುವುದು ನನ್ನ ತಲೆಯಲ್ಲಿ ಇದ್ದದ್ದು. ರಾತ್ರಿಯೆಲ್ಲಾ ಸುಸ್ತಾಗಿ ಮುಂಜಾನೆ 4, 5 ಗಂಟೆ ಸುಮಾರಿಗೆ ಒಂದುಕಡೆ ಕುಳಿತುಕೊಂಡು ಬಿಟ್ಟೆ. ಹಕ್ಕಿ - ಪಕ್ಷಿಗಳ ಚಿಲಿಪಿಲಿ ಬೆಳಗಾದದ್ದನ್ನು ಎಚ್ಚರಿಸಿತು. ಮತ್ತೆ ಎದ್ದು ನಡೆಯಲು ಪ್ರಾರಂಭಿಸಿದೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ರಾಂಪುರ ಎಂಬ ಊರು ಬಂತು. ಅಲ್ಲಿಂದ ಬೆಂಗಳೂರಿಗೆ ಬಂದು ರೈಲ್ವೆ ಸ್ಟೇಷನ್ನಿನಿಂದ ಬಾಂಬೆಗೆ ಹೊರಟೆ. ಮುಂಬೈನಲ್ಲಿ ಹೊಟ್ಟೆ ಹಸಿವು ಒಂದು ಕಡೆ, ಭಾಷೆ ಬರದಿದ್ದುದು ಮತ್ತೊಂದು ಕಡೆ. ಆಗ ಯಾರೋ ಒಬ್ಬ ವ್ಯಕ್ತಿ ನನಗೆ ಹಸಿವಾಗುತ್ತಿರುವುದನ್ನು ಗಮನಿಸಿ ಊಟ ಮಾಡ್ತಿಯಾ ಅಂತ ಕೇಳಿ ಊಟ ಕೊಡಿಸಿ, ಅಲ್ಲೇ ಹೋಟೆಲ್ಲೊಂದರಲ್ಲಿ ಕೆಲಸಕ್ಕೆ ಸೇರಿಸಿದರು. ಆಮೇಲೆ ಗೊತ್ತಾದದ್ದು ಅಲ್ಲಿ ಹುಡುಗರನ್ನು ಕೆಲಸಕ್ಕೆ ಸೇರಿಸಿದರೆ ಕಮಿಷನ್ ಹಣ ಇದೆ ಎಂದು. ಅಲ್ಲಿ ಒಂದು ವಾರ ಕೆಲಸ ಮಾಡಿದೆ. ನಂತರ ನಮ್ಮ ಚಿಕ್ಕಪ್ಪನ ನಂಬರಿಗೆ ಕಾಲ್ ಮಾಡಿ ನಡೆದ ವಿಚಾರವನ್ನೆಲ್ಲ ತಿಳಿಸಿ ಬೆಂಗಳೂರಿಗೆ ಬಂದುಬಿಟ್ಟೆ.

ನಾನು ಚಿಕ್ಕವನಾಗಿದ್ದಾಗಿನಿಂದ ನನ್ನನ್ನು ಯಾರಾದರೂ ಬೈದರೆ, ಹೊಡೆದರೆ ಯಾವುದಾದರೂ ಬೆಟ್ಟಕ್ಕೆ ಹೋಗಿಬಿಡುತ್ತಿದ್ದೆ. ಅಲ್ಲಿನ ಪಕ್ಷಿಗಳ ಕಲರವ, ವಾತಾವರಣ ನನ್ನನ್ನು ಹಗುರವಾಗಿಸುತ್ತಿದ್ದವು. ನನ್ನ ಎಲ್ಲ ನೋವನ್ನು ಅಲ್ಲಿ ಮರೆಯುತ್ತಿದ್ದೆ. ಅರಣ್ಯದಲ್ಲಿರುವ ಪ್ರಶಾಂತತೆ, ನೀರಿನ ತೊರೆಗಳು ನನಗೆ ಬಹಳ ಖುಷಿ ಕೊಡುತ್ತಿತ್ತು. ಆದ್ದರಿಂದ ನನ್ನ ಜೊತೆಗೆ ಯಾರಾದರೂ ಸ್ನೇಹಿತರು ಬಂದರೆ ಅವರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಚಿತ್ರದುರ್ಗ, ಚೆನ್ನಾರಾಯನದುರ್ಗ, ಶಿವಪುರ ಬೆಟ್ಟ, ಹುಲಿಕಲ್ಲು ಬೆಟ್ಟ, ಕುಮಾರ ಪರ್ವತ ಇತ್ಯಾದಿಯೆಡೆಯಲ್ಲ ಹೋಗಲು ಪ್ರಾರಂಭಿಸಿದೆವು. 2014-2015 ರಲ್ಲಿ ಫೇಸ್ಬುಕ್ನಲ್ಲಿ ಬೆಟ್ಟಕ್ಕೆ ಚಾರಣ ಹೋಗುವ ಪೋಸ್ಟ್ ನೋಡಿದೆ. ಅವರಿಗೂ ನನ್ನಂತಯೇ ಬೆಟ್ಟ ಹತ್ತುವ ಅಭ್ಯಾಸವಿತ್ತು. ನನಗೆ ಗೊತ್ತಿರುವ ಬೆಟ್ಟಗಳ ಮಾಹಿತಿಯನ್ನು ಅವರ ಜೊತೆಗೆ ಹಂಚಿಕೊಂಡೆ. ಅವರು ಅವರಿಗೆ ಗೊತ್ತಿರುವ ಬೆಟ್ಟಗಳ ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಂಡರು. ಹಾಗೆಯೇ ಒಂದೊಂದೇ ಚಾರಣಗಳು ಶುರುವಾದವು. ಈಗ ತುಂಬ ಕಾಡುಗಳನ್ನು ಸುತ್ತಾಡಿದ್ದೇನೆ. ಆಗೆಲ್ಲ ನಾನು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದೆ. ಅವರ ಪುಸ್ತಕದಲ್ಲಿದ್ದ 'ಅಲೆಮಾರಿ ಅಡ್ವೆಂಚರ್ಸ್' ಎಂಬ ಪದವನ್ನು ಆರಿಸಿಕೊಂಡು 2017ರಲ್ಲಿ ಲೋಗೋ ರೆಡಿ ಮಾಡಿ ಈ ಹೆಸರಿನಡಿ ಮೊದಲ ಬಾರಿಗೆ ಕೊಟ್ಟಿಗೆಹಾರದ ಹತ್ತಿರ ಇರುವ ಚೆನ್ನರಾಯನದುರ್ಗದ ಕಡೆ ಹೋಗಲು ಪೋಸ್ಟರೊಂದನ್ನು ಹಾಕಿ ಚಾರಣವನ್ನು ಪ್ರಾರಂಭಿಸಿದೆ.

ಪೋರ್ಟೇಟ್ ಚಿತ್ರಗಳು, ಪ್ರಕೃತಿ ಚಿತ್ರಗಳು, ವಾಟರ್ ಕಲರ್ ಇಂತಹ ನನ್ನ ಹವ್ಯಾಸಗಳು ಕೋವಿಡ್ ಸಮಯದಲ್ಲಿ ತುತ್ತಿನ ಚೀಲಕ್ಕೆ ಆಸರೆಯಾದವು. ನಾನು ಕ್ಯಾಮೆರಾ ವೈರ್ ಮ್ಯಾನ್, ಲ್ಯಾಬ್ವರ್ಕ್, ಫೋಟೋಗ್ರಾಫರ್, ಓಲಾ ಕ್ಯಾಬ್ ಡ್ರೈವರ್, ಚಾರಣ , ಡಿಟಿಪಿ ವರ್ಕನ್ನು ಕಲಿತುಕೊಂಡು ಸ್ವಂತವಾಗಿ ಚಾರಣ ಆರಂಭಿಸಿದೆ. ಟ್ರೆಕ್ಕಿಂಗ್ ಆರಂಭಿಸಿದ ಮೊದಲು ನನ್ನನ್ನು ಗೇಲಿ ಮಾಡುತ್ತಿದ್ದರು. ಈಗ ನನ್ನನ್ನು ಅನ್ನುಸರಿಸುತ್ತಿದ್ದಾರೆ. ಜಾಗವೇ ಗೊತ್ತಿಲ್ಲದ ಜಾಗವನ್ನು ಹುಡುಕಿ ಮೊದಲು ಅಲ್ಲಿನ ವಯಸ್ಸಾದ ಅಜ್ಜ, ಅಜ್ಜಿ ಸ್ಥಳೀಯರನ್ನು ಮಾತಿಗೆಳೆದಾಗ ಆ ಜಾಗದ ವೈಶಿಷ್ಟ್ಯ, ವಿಶೇಷತೆ, ತೊಂದರೆ, ಅಪಾಯಗಳನ್ನು ಮುಂಚಿತವಾಗಿ ತಿಳಿಸುತ್ತಿದ್ದರು. ಚಾರಣದ ಸಮಯದಲ್ಲಿ ಇದು ನಮಗೆ ತುಂಬಾ ಸಹಾಯವಾಗುತ್ತದೆ. ಇಲ್ಲಿಯವರೆಗೆ ಸುಮಾರು ಎಂಟನೂರು ಚಾರಣಗಳಿಗೆ ಹೋಗಿ ಬಂದಿದ್ದೇವೆ. ರಾಣಿಪುರಂ, ದೂದ್ ಸಾಗರ್, ಕೊಡಚಾದ್ರಿ, ಶಿರಸಿ, ಕುದುರೆಮುಖ, ಜಾಗವಾರ ಸೇರಿದಂತೆ ಸುಮಾರು ಕಡೆಯಲ್ಲಿ ಹೋಗಿ ಬಂದಿದ್ದೇವೆ. ಆರು ವರ್ಷದಿಂದ ಎಪ್ಪತ್ತೈದು ವರ್ಷದವರೆಗೂ ಎಲ್ಲರೂ ಬರುತ್ತಾರೆ. ನಾನು ಒಂದು ಚಾರಣ ಮಾಡಬೇಕಂದ್ರೆ ಹದಿನೈದು ದಿನ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಲು ಪ್ರಾರಂಭಿಸುತ್ತೇನೆ. ಕೆಲವೊಂದು ಟ್ರೆಂಕ್ಕಿಂಗ್ ಗಳಲ್ಲಿ ಕಾಡಿನೊಳಗೆ ತಿನ್ನಲು ಏನೂ ಸಿಗುವುದಿಲ್ಲ. ಬೆಂಗಳೂರಿನಿಂದ ಏನು ತೆಗೆದುಕೊಂಡು ಹೋಗಿರುತ್ತೇವೋ ಅಷ್ಟರಲ್ಲೇ ಅಡುಗೆ ಮಾಡಿ ಮುಗಿಸಬೇಕು. ಜೊತೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಚಾಕು, ಹೊಗೆ ಬರುವ ಪಟಾಕಿಗಳನ್ನು ನಮಗೇನಾದರೂ ಕಾಡಿನ ಮಧ್ಯೆ ತೊಂದರೆಯಾದರೆ ಬೇರೆ ಯಾರಾದರೂ ಸಹಾಯ ಮಾಡಲು ಬರಲಿ ಎಂಬ ಸೂಚನೆ ಕೊಡುವ ಸಲುವಾಗಿ ಉಪಯೋಗಿಸುತ್ತೇವೆ. ಇಪ್ಪತ್ತು ಜನರಿಗೆ ಮೂರು ಜನರು ಗೈಡ್ ಇರುತ್ತಾರೆ. ಗೈಡ್ ಕಡೆ ವಿಶಲ್ ಇರುತ್ತೆ. ಯಾವುದಾದರು ಪ್ರಾಣಿ ಎದುರಾದರೆ ವಿಶಲ್ ಊದುತ್ತೇವೆ. ಮಳೆ ಬರುವ ಸಾಧ್ಯತೆಗಳಿದ್ದರೆ ಗೈಡ್ ಗೆ ತುಂಬ ಕೆಲಸ. ಒಂದು ಕಡೆ ಟೆಂಟ್ ಹಾಕಬೇಕು. ಒಂದು ಕಡೆ ಅಡುಗೆ ಮಾಡಬೇಕು. ಆಗ ಪ್ರಾಣಿಗಳು ಅವುಗಳ ಪಾಡಿಗೆ ಅದು ಹೋಗಿ ಬಿಡುತ್ತವೆ. ವಿಶೇಷ ಸೂಚನೆಯಾಗಿ ಚಾರಣ ಪ್ರಿಯರು ಏನಾದರೂ, ಚಾಕಲೇಟ್, ಬಿಸ್ಕತ್ ಏನೇ ತಂದಿದ್ದರೂ ಅದರ ಫೋಟೋ ತೆಗೆದುಕೊಂಡು ಇಟ್ಟಿರುತ್ತೇವೆ. ಆ ಕವರುಗಳನ್ನು ಎಲ್ಲಿಯೂ ಕಾಡಿನ ಮಧ್ಯೆ ಬಿಸಾಡುವಂತಿಲ್ಲ. ಒಂದು ವೇಳೆ ಬಿಸಾಡಿದರೆ ದಂಡ ಹಾಕುತ್ತೇವೆ. ನಮಗೆ ನಮ್ಮ ಸಹ ಚಾರಣಿಗರ ಬಗ್ಗೆ, ನಮ್ಮ ಬಗ್ಗೆ, ಪರಿಸರದ ಬಗೆಗಿನ ಕಾಳಜಿಯೂ ನಮ್ಮ ಮುಖ್ಯ ವಿಚಾರವಾಗಿದೆ.

ನನ್ನದು ಸೋಮವಾರದಿಂದ ಶುಕ್ರವಾರದವರೆಗೂ ಚಾರಣ. ಶನಿವಾರ, ಭಾನುವಾರ ಬಂದರೆ ಓಲಾ ಕ್ಯಾಬ್ ಓಡಿಸುವುದು, ಫೋಟೋ ಎಡಿಟಿಂಗ್ ಮಾಡೋದು, ಚಿತ್ರ ಬಿಡಿಸುವುದು. ಈ ಹವ್ಯಾಸಗಳು ಕೋವಿಡ್ ನ ಕಾಲದಲ್ಲಿ ನನಗೆ ಅನ್ನ ಬಡಿಸಿವೆ. ಟ್ರೆಂಕ್ಕಿಂಗ್ ಮಾಡಿ ಬಂದ ಹಣದಲ್ಲಿ ವರ್ಷಕ್ಕೊಮ್ಮೆ 35% ಹಣದಿಂದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕ ಕೊಡುತ್ತೇವೆ. ಜೊತೆಗೆ ಬುದ್ದಿಮಾಂದ್ಯ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಕೊಡಿಸುತ್ತೇವೆ. ಇದು ನಮಗೆ ಸಾಕಷ್ಟು ಖುಷಿ ತಂದುಕೊಟ್ಟಿರುವ ವಿಚಾರ. ನಾನಂತೂ ಓದಿಲ್ಲ. ಓದುವ ಮಕ್ಕಳಿಗಾದರೂ ಸಹಾಯ ಮಾಡೋಣ ಎನ್ನುವ ಇಚ್ಛೆಯಿಂದ ಇದನ್ನು ಮಾಡುತ್ತಿದ್ದೇವೆ. ಅರಣ್ಯ ಇಲಾಖೆಯ ಪ್ರಕಾರ ನಮ್ಮ ಕರ್ನಾಟಕದಲ್ಲಿ 1998 ಜಲಪಾತಗಳು ಇವೆಯಂತೆ. ಅದರಲ್ಲಿ ಎಷ್ಟು ಸಾಧ್ಯವೋ ಅಷ್ಟು ನಾನು ನೋಡಬೇಕು. ನಮ್ಮ ಚಾರಣ ಪ್ರಿಯರಿಗೂ ತೋರಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಜಾಗಗಳನ್ನು ಬೆಳಕಿಗೆ ತರಬೇಕು ಎನ್ನುವುದು ನನ್ನ ಮಹದಾಶಯ' ಎನ್ನುತ್ತಾರೆ ಮಿಥುನ್.

ಚಾರಣ ಹೋದಾಗ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಿ ಒಳ್ಳೆಯ ನೆನಪುಗಳನ್ನು ಸೆರೆಹಿಡಿಯಿರಿ ಆದರೆ ನಿಸರ್ಗದ ಸಹಜ ಸೌಂದರ್ಯಕ್ಕೆ ಧಕ್ಕೆ ತರುವ ಯಾವ ಕೆಲಸವನ್ನು ಮಾಡಬೇಡಿ. ಅನವಶ್ಯಕ ಮೋಜು ಮಸ್ತಿ, ಅಪಾಯಕಾರಿ ಸೆಲ್ಫಿಗಳು, ಹುಚ್ಚು ಸಾಹಸಗಳಿಗೆ ಜೀವಬಲಿಯಾಗಿರುವ ಅನೇಕ ನಿದರ್ಶನಗಳುಂಟು. ಕಾಡುಗಳಲ್ಲಿ ಜೋರಾಗಿ ಕೂಗಾಡುವುದು, ಮೊಬೈಲ್ ಗಳಲ್ಲಿ ಸ್ಪೀಕರ್ ಗಳಲ್ಲಿ ಜೋರು ಶಬ್ದ ಮಾಡುವುದು ಮಾಡಬೇಡಿ. ಇದರಿಂದ ಕಾಡಿನ ಕ್ರೂರ ಪ್ರಾಣಿಗಳು ನಿಮ್ಮೆಡೆಗೆ ಬರಬಹುದಾದ ಸಾಧ್ಯತೆಯಿರುತ್ತದೆ. ನೀವು ತೆಗೆದುಕೊಂಡು ಹೋದ ಊಟದ ಪ್ಲಾಸ್ಟಿಕ್ ತಟ್ಟೆಗಳು, ನೀರಿನ ಪ್ಲಾಸ್ಟಿಕ್ ಬಾಟಲ್ ಗಳು, ಪ್ರಕೃತಿ ಸೊಬಗನ್ನು ಹಾಳು ಮಾಡುವ ಇನ್ನಿತರ ಯಾವ ವಸ್ತುಗಳನ್ನು ಬಳಸಬೇಡಿ ಬಳಸಿದರೂ ಕಾಡಿನಲ್ಲಿ ಎಲ್ಲೆಂದರಲ್ಲಿ ಬಿಸಾಕಬೇಡಿ. ಕೋಟಿ ಕೊಟ್ಟರೂ ಸಿಗದ ಖುಷಿ, ವೈವಿಧ್ಯಮಯ ಉಪಯುಕ್ತ ಸಂಪತ್ತು ನಾಶವಾಗಲು ಕಾರಣವಾಗುತ್ತವೆ.

- ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...