ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

Date: 04-09-2022

Location: ಬೆಂಗಳೂರು


ಇವರ ಮನೆ ಒಂದು ಪುಣ್ಯಕ್ಷೇತ್ರದಂತಿದೆ. ಇವರ ಮನಸ್ಸು ಅತ್ಯಂತ ಪುನೀತವಾಗಿದೆ. ಮಣ್ಣಿನ ಆಕೃತಿಗಳ ಮೂಲಕ ವರ್ಷಪೂರ್ತಿ ಸಾಕಷ್ಟು ಹಣ ಗಳಿಸುವ ಅವಕಾಶಗಳಿದ್ದರೂ ಅದ್ಯಾವುದನ್ನು ಬಯಸದೆ, ತಮ್ಮ ಕಲೆಯ ಮೂಲಕವೇ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಕಲಾವಿದ ಮಂಜುನಾಥ್ ಮಲ್ಲಯ್ಯ ಹಿರೇಮಠ ಅವರ ಬಗ್ಗೆ ಬರೆದಿದ್ದಾರೆ.

ಮಣ್ಣಿಗೆ ಜೀವ ತುಂಬುವ ಕೆಲಸವೆಂದರೆ ಅದು ಬರೀ ಕಲೆಯಲ್ಲ, ಅದೊಂದು ದಿವ್ಯ ಧ್ಯಾನ. ‌ಮಣ್ಣಿನೊಂದಿಗಿನ ಈ ಬಂಧುತ್ವ ಎಲ್ಲರಿಗೂ ಸಿಗುವುದಿಲ್ಲ. ಮಣ್ಣಿಗೆ ಇವರು ಜೀವ ತುಂಬಿದ್ದಾರೆ ಮಣ್ಣು ಇವರಿಗೆ ಜೀವ ತುಂಬಿದೆ. ಕೆಲವು ಅದೃಷ್ಟವಂತರಿಗೆ ಮಾತ್ರವೇ ಅಂತಹ ಕಲೆ ಸಿದ್ಧಿಸುವುದು. ಅಂತಹ ವಿಶೇಷ ವ್ಯಕ್ತಿಯ ಜೀವನಪಯಣವನ್ನು ಇಂದಿನ ನಿಮ್ಮ ಓದಿಗೆ ತಂದಿದ್ದೇವೆ. ಇವರದು ಮೂಲತಃ ಕಲಾ ಕುಟುಂಬವಲ್ಲ. ಬೇರೆಯವರು ಮಾಡುವ ಮೂರ್ತಿಗಳನ್ನು ನೋಡಿ ನೋಡಿಯೇ ಇವರು ಕಲಿತಿರುವುದು ಏಕಲವ್ಯನಂತೆ. ಪರಿಸರ ಸ್ನೇಹಿ ಕಲಾವಿದರಾದ ಇವರ ಹೆಸರು ಮಂಜುನಾಥ್ ಮಲ್ಲಯ್ಯ ಹಿರೇಮಠ್. ಇವರು ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದವರು. ಸದ್ಯ ಧಾರವಾಡದಲ್ಲಿ ಗೋವಾ ರಸ್ತೆಯ ಕೆಲಗೇರಿ ಹತ್ತಿರದ ಗಾಯತ್ರಿಪುರಂನಲ್ಲಿ ವಾಸಿಸುತ್ತಿರುವ ಬಹುಮುಖ ಕಲಾವಿದರು. ಇಲ್ಲಿಯವರೆಗಿನ ಮಂಜುನಾಥ ಹಿರೇಮಠರ ಪಯಣ ಅವರ ಮಾತಿನಲ್ಲಿ.

*
'ನಾನು ಮಣ್ಣಿಗೆ ಅಂಟಿಕೊಂಡು ಮೂವತ್ತು ವರ್ಷಗಳೇ ಕಳೆದುಹೋದವು. ಮಣ್ಣನ್ನು ನಂಬಿ ಕೆಟ್ಟವರಿಲ್ಲ. ನಾನು ಸುಮಾರು ಐದು ವರ್ಷದ ಹುಡುಗನಾಗಿದ್ದಾಗ ನಮ್ಮ ಮನೆಯ ಪಕ್ಕದಲ್ಲಿ ಗಡಿಗೆ ಮಾಡುವ ಕುಂಬಾರರಿದ್ದರು. ನಾನು ಗೆಳೆಯರ ಜೊತೆಗೆ ಹೆಚ್ಚು ಆಡುವುದಕ್ಕಿಂತ ಹೆಚ್ಚಾಗಿ ಕುಂಬಾರರ ಮನೆಗೆ ಹೋಗುತ್ತಿದ್ದೆ. ಅವರು ಮಡಿಕೆ ಮಾಡೋದನ್ನೆಲ್ಲ ನೋಡ್ತಾ ನಿಲ್ಲುತ್ತಿದ್ದೆ. ಒಂದು ದಿನ ಅಲ್ಲಿಂದ ಮಣ್ಣು ತಂದು ನಾನೊಂದು ಗಣಪತಿಯನ್ನು ಮಾಡಿ ಪೂಜೆ ಮಾಡಿದ್ದೆ. ನಂತರ ಮನೆಯವರೆಲ್ಲರೂ ಆ ಗಣಪತಿಗೆ ಪೂಜೆ ಮಾಡಲು ಪ್ರಾರಂಭ ಮಾಡಿದರು. ಅಲ್ಲಿಯವರೆಗೆ ನಮ್ಮ ಮನೆಯಲ್ಲಿ ಗಣಪತಿ ಕೂರಿಸುವ ಅಭ್ಯಾಸವಿರಲಿಲ್ಲ. ಅಲ್ಲಿಂದ ಗಣಪತಿಯೊಟ್ಟಿಗಿನ ನನ್ನ ಬಾಂಧವ್ಯ ಬೆಳೆಯುತ್ತಾ ಸಾಗಿತು. ಗಣಪತಿ ಹಬ್ಬ ಮುಗಿದ ನಂತರ ಪಿ. ಓ. ಪಿ ಗಣಪತಿಯನ್ನು ಕೆರೆಯೊಳಗೆ ಹಾಕುತ್ತಿದ್ದರು. ಅವೆಲ್ಲ ಆರು ತಿಂಗಳು ಕಳೆದ ನಂತರವೂ, ಬೇಸಿಗೆಯಲ್ಲಿ ಕೆರೆ ನೀರು ಬತ್ತಿದಾಗ ಕೈ ಮುರಿದು, ಕಾಲು ಮುರಿದು, ಸೊಂಡಿಲು ಮುರಿದ ಸ್ಥಿತಿಯಲ್ಲಿ ಅನಾಥರಂತೆ ಕಾಣಿಸುತ್ತಿದ್ದವು. ನೀರಿನಲ್ಲಿ ಕರಗಿರುತ್ತಿರಲಿಲ್ಲ. ಇದರಿಂದ ನನಗೆ ತುಂಬ ನೋವೆನಿಸಿತು. ಮೂರ್ತಿ ವಿಸರ್ಜನೆಯಾದ ಮೇಲೆ ಕರಗಬೇಕು. ನಾವು ಹೋಗಿ ಮಣ್ಣು ತಂದಿರುತ್ತೇವಲ್ಲ, ನಾವು ಮತ್ತೆ ಹಾಗೆ ಅದನ್ನು ಪ್ರಕೃತಿಗೆ ಸೇರಿಸಬೇಕು. ಅದನ್ನು ಕೆಡಿಸುವ ಹಕ್ಕು ನಮಗಿಲ್ಲ. ಪಿ.ಓ.ಪಿ. ಮೂರ್ತಿಗಳಿಗಾದ ಈ ಅಪಚಾರ ನೋಡಿದ ನನಗೆ ದೇವರುಗಳಿಗೆ ಹೀಗೆ ಅಪಮಾನ ಮಾಡುವ ಬದಲು ಮಣ್ಣಿನಿಂದ ಏನಾದರೂ ಮಾಡಿ ದೇವರ ಸೇವೆ ಸಮಾಜ ಸೇವೆ ಮಾಡೋಣ ಎನ್ನುವ ಯೋಚನೆಯಿಂದ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣಪನನ್ನು ಮಾಡಲು ಪ್ರಾರಂಭಮಾಡಿದೆ.
ಇದಕ್ಕಾಗಿ ನಾನು ಎಲ್ಲಿಯೂ ತರಬೇತಿಯನ್ನು ತೆಗೆದುಕೊಂಡಿಲ್ಲ. ಬೇರೆಯವರು ಮಾಡುವ ಮೂರ್ತಿ ಆಕೃತಿಗಳನ್ನು ನೋಡಿ ಕಲಿತದ್ದು. ನಂತರ ಫೋಟೋ ನೋಡಿಕೊಂಡು ಮೂರ್ತಿ ಮಾಡಲು ಪ್ರಯತ್ನಿಸಿದೆ. ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಎಲ್ಲರೂ ಒಪ್ಪಿಕೊಳ್ಳಲು ಪ್ರಾರಂಭಿಸಿದ ಮೇಲೆ, ಈಗ ಸುಮಾರು ಹದಿನೈದು ವರ್ಷಗಳಿಂದ ಪರಿಸರ ಸ್ನೇಹಿ ಬಣ್ಣಗಳನ್ನು ಬಳಕೆ ಮಾಡಿಕೊಂಡು ಗಣಪತಿಯನ್ನು ಮಾಡುತ್ತಿದ್ದೇನೆ. ಗಣಪತಿಯನ್ನು ಮಾಡುವುದರ ಜೊತೆ ಜೊತೆಗೆ ಮರಳಿನಲ್ಲಿ ಆಕೃತಿ, ಚಿತ್ರಗಳನ್ನು ಮಾಡುವುದರ ಮೂಲಕ, ಕ್ಲೇ ಆರ್ಟ್ ಮೂಲಕ ಸಾಮಾಜಿಕ ಕಳಕಳಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ನನ್ನ ಸ್ನೇಹಿತರ ಬಳಗ ತುಂಬ ಬೆಂಬಲವಾಗಿ ನಿಂತಿದ್ದಾರೆ. ಕಾರ್ಪೋರೇಶನ್ ಬೊರ್ಡುಗಳಲ್ಲಿ ಮತ್ತು ರಸ್ತೆಯ ಸೂಚನಾ ಫಲಕಗಳಲ್ಲಿ ಹೆಸರು ತಪ್ಪಾಗಿದ್ದರೆ ಅದನ್ನು ಸ್ವಂತ ಖರ್ಚಿನಿಂದ ಸರಿಪಡಿಸುತ್ತೇವೆ. ಸ್ವಚ್ಛತಾ ಕಾರ್ಯಕ್ರಮದಂತಹ ಹಲವಾರು ಕಾರ್ಯಕ್ರಮ, ಕಾರ್ಯಾಗಾರಗಳನ್ನು ಉಚಿತವಾಗಿ ಏರ್ಪಡಿಸುತ್ತೇವೆ.

'ಮೂವತ್ತು ವರ್ಷಗಳಲ್ಲಿ ಸುಮಾರು 2500 ದೊಡ್ಡ ಗಣಪತಿ 25000ಕ್ಕೂ ಹೆಚ್ಚು ಚಿಕ್ಕ ಗಣಪತಿಗಳನ್ನು ಮಾಡಿದ್ದೇವೆ. ಇದಕ್ಕೆ ನನ್ನ ಹೆಂಡತಿ ನಿರ್ಮಲ ಮಕ್ಕಳು ವಿನಾಯಕ ಕಾಂತೇಶ ಮತ್ತು ಕುಟುಂಬದವರ ಎಲ್ಲರ ಸಹಕಾರ ಸಹಾಯ ಜೊತೆಗಿದೆ. ಮೊದಲು ಮಣ್ಣನ್ನು ತರುತ್ತೇವೆ. ಅದರಲ್ಲಿನ ಹರಳು, ಕಸ ಎಲ್ಲವನ್ನು ತೆಗೆದು ಸ್ವಚ್ಛ ಮಾಡಿ ಮೂರು ದಿನ ಮಣ್ಣನ್ನು ನೆನೆಹಾಕಿ ಹದಕ್ಕೆ ಬರುವವರೆಗೂ ತುಳಿದು ನಂತರ ಹಂತ ಹಂತವಾಗಿ ಮಣ್ಣಿಗೆ ಹತ್ತಿ, ನಾರು ಸೇರಿಸಿ ಮೂರ್ತಿಯ ಎತ್ತರ ಅಗಲ ಎಲ್ಲವನ್ನು ಅಳತೆ ತೆಗೆದುಕೊಂಡು ಕೆಲಸ ಶುರು ಮಾಡುತ್ತೇವೆ. ಇದು ಹೆಚ್ಚು ಶ್ರಮ ಬೇಡುತ್ತದೆ. ಮನೆಯಲ್ಲಿ ನಾವೆಲ್ಲರೂ ತೊಡಗಿಕೊಂಡಿರುವುದರಿಂದ ಪ್ರತಿದಿನ ಎಂಟು ಗಂಟೆ ಕೆಲಸ ಮಾಡುತ್ತೇವೆ. ಗಣೇಶನ ಹಬ್ಬ ಹತ್ತಿರ ಬಂದಂತೆಲ್ಲ ಪ್ರತಿದಿನ ಸುಮಾರು ಹದಿನೈದು ತಾಸು ಕೆಲಸ ಮಾಡಬೇಕಾಗುತ್ತದೆ. ಮೂರ್ತಿ ತಯಾರಾದ ಮೇಲೆ ಅಷ್ಟಗಂಧ, ಅರಿಶಿನಪುಡಿ, ವಿಭೂತಿಪುಡಿ, ಕೆಮ್ಮಣ್ಣು ಸೇರಿದಂತೆ ನೀರಿನಲ್ಲಿ ಕರಗುವ ನೈಸರ್ಗಿಕ ಬಣ್ಣ ಬಳಸಿ ಗಣಪತಿಯನ್ನು ಚೆಂದ ಗಾಣಿಸುತ್ತೇವೆ. ನಮ್ಮಲ್ಲಿ ಗಣಪತಿಯನ್ನು ತೆಗೆದುಕೊಂಡು ಹೋಗುವ ಬಹುತೇಕರು ಮನೆಯಲ್ಲೇ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣಪತಿಯನ್ನು ನೀರಿನಲ್ಲಿ ಮುಳುಗಿಸಿದಾಗ ಬಣ್ಣ ಮೇಲೆ ತೇಲುತ್ತದೆ. ಮಣ್ಣು ಕೆಳಗೆ ಉಳಿಯುತ್ತದೆ. ಬಣ್ಣದ ಪದರವನ್ನು ತೆಗೆದು ಕಸದಬುಟ್ಟಿಗೆ ಹಾಕಿ, ಮಣ್ಣನ್ನು ಗಿಡಕ್ಕೆ ಹಾಕಬಹುದು. ಬೇರೆಯವರು ಮಾಡುವ ಗಣಪತಿಗಿಂತಲೂ ನಾವು ಮಾಡುವ ಗಣಪತಿ ನಾಲ್ಕು ಪಟ್ಟು ತೂಕ ಕಡಿಮೆಯಿರುತ್ತದೆ. ಮಕ್ಕಳು ಕೂಡ ನನ್ನೊಟ್ಟಿಗೆ ಕೈ ಜೋಡಿಸುತ್ತಿದ್ದಾರೆ. ಅವರು ಆಡುವ ವಯಸ್ಸಿನಿಂದ ಹಿಡಿದದ್ದೇ ಬಣ್ಣವನ್ನು. ಆಟದ ಸಾಮಾನು ಕೊಡಿಸಿದ್ರೆ ಆಡುತ್ತಿರಲಿಲ್ಲ. ಮಣ್ಣಿನೊಟ್ಟಿಗೆ ಆಡ್ತಾ ಬೆಳೆದರು. ಮಕ್ಕಳು ಶಾಲೆಯಲ್ಲಿ ದೊಡ್ಡವರಾದ ಮೇಲೆ ಏನಾಗುತ್ತೀರಾ ಅಂದರೆ ಎಲ್ಲರೂ ಡಾಕ್ಟರ್, ಇಂಜಿನಿಯರ್ ಅಂದ್ರೆ ನನ್ನ ಮಕ್ಕಳು ಅಪ್ಪಾಜಿಯ ಹಾಗೆ ಕಲಾವಿದ ಆಗುತ್ತೇನೆ ಅಂದಿದ್ದರು.'

'ಈ ಕೆಲಸ ಮಾಡಲು ಯಾವುದೋ ಜನ್ಮದ ಪುಣ್ಯವಿರಬೇಕು ಎನಿಸುತ್ತದೆ. ಸಾಸಿವೆಕಾಳು ಗಣಪತಿ, ವೃಕ್ಷ ಗಣಪತಿ, ಇಡಗುಂಜಿ ಗಣಪತಿ, ಇತ್ಯಾದಿ ಪರಿಸರ ರಕ್ಷಣೆಯ ಸಂದೇಶವನ್ನು ಸಾರುವಂತ ಆಲೋಚನೆ ಇಟ್ಟುಕೊಂಡು ಗಣಪತಿಗಳನ್ನು ಮಾಡುತ್ತೇವೆ. ಕಡಿಮೆ ತೂಕದಲ್ಲಿ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ಮಣ್ಣಿನಿಂದಲೂ ಅಷ್ಟೇ ಚಂದದ ಎಫೆಕ್ಟ್ ಕೊಡಬಹುದು ಎನ್ನುವುದನ್ನು ತೋರಿಸಿದಾಗಿನಿಂದಲೇ ಜನರು ನಮ್ಮನ್ನು ಒಪ್ಪಿಕೊಂಡಿದ್ದು. ಒಮ್ಮೆ ಎಂಟು ಅಡಿಯ ಸಾರ್ವಜನಿಕ ಗಣಪತಿಯನ್ನು ಅರ್ಧ ಟ್ಯಾಂಕ್ ನೀರಿನೊಳಗೆ ಕೇವಲ ಇಪ್ಪತ್ತು ನಿಮಿಷದಲ್ಲಿ ಕರಗಿಸಿದ್ದೆವು. ಇಲ್ಲಿಯವರೆಗೆ 10 mm ನಿಂದ ಹಿಡಿದು 8 ಅಡಿಯ ಗಣಪತಿಯನ್ನು ಮಾಡಿದ್ದೇನೆ. ಹುಬ್ಬಳ್ಳಿ, ಧಾರವಾಡ, ಆಂಧ್ರ, ಅನಂತಪುರ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದವರು ಬಂದು ಗಣಪತಿಯನ್ನು ತೆಗೆದುಕೊಂಡು ಮುಂದಿನ ವರ್ಷಕ್ಕೂ ಈಗಲೇ ಬುಕ್ ಮಾಡಿ ಹೋಗುತ್ತಾರೆ. ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳು ಕೂಡ ಸಹಾಯ ಮಾಡಿವೆ. ಅನುಪಯುಕ್ತ ವಸ್ತುಗಳಿಂದ ಸಾಕಷ್ಟು ಕೆಲಸಗಳನ್ನು ಮಾಡುತ್ತೇವೆ. ಪ್ರತಿವರ್ಷ ಬೇಸಿಗೆ ಶಿಬಿರದಲ್ಲಿ 80-90 ಮಕ್ಕಳು ಪಾಲ್ಗೊಳ್ಳುತ್ತಾರೆ.'

ಇದರ ಜೊತೆಗೆ ಪೇಂಟಿಂಗ್ ಮಾಡುವುದು, ಮರಳು ಕಲೆ, ಥರ್ಮಾಕೋಲ್ ವರ್ಕ್, ರಂಗೋಲಿಯಲ್ಲಿ ಭಾವಚಿತ್ರ ಸಿದ್ದಗಂಗಾದ ಡಾ. ಶಿವಕುಮಾರ ಸ್ವಾಮೀಜಿ, ಪೇಜಾವರದ ವಿಶ್ವೇಶ್ವರ ತೀರ್ಥ ಶ್ರೀಗಳ ಭಾವಚಿತ್ರವನ್ನು ಮಾಡಿದ್ದೇನೆ. ಎರಡು ತಿಂಗಳ ಹಿಂದೆ ನನಗೆ ಸಣ್ಣದಾಗಿ ಹೃದಯಾಘಾತವಾಯಿತು. ಡಾಕ್ಟರ್ ಆರು ತಿಂಗಳು ರೆಸ್ಟ್ ಮಾಡಲು ಹೇಳಿದರು. ನನ್ನಿಂದ ಎರಡು ದಿನ ಕೂಡ ಗಣಪತಿಯನ್ನು ಬಿಟ್ಟಿರಲು ಸಾಧ್ಯವಾಗಲಿಲ್ಲ. ಹಾಸಿಗೆ ಬಿಟ್ಟು ಗಣಪತಿ ಮುಂದೆ ಬಂದು ಕುಳಿತಾಗ ಸಮಾಧಾನ ಎನ್ನಿಸುತ್ತಿತ್ತು' ಎನ್ನುವಲ್ಲಿ ಕಲೆಗೆ ಅವರ ಅರ್ಪಣೆ ಅದರೆಡೆಗಿರುವ ಅಪಾರ ಪ್ರೀತಿ ತಿಳಿಯುತ್ತದೆ.

ನಿಜಕ್ಕೂ ಇವರ ಮಣ್ಣಮೂರುತಿಗಳಲ್ಲಿನ ಜೀವಂತಿಕೆ ಬೆರಗುಗೊಳಿಸುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ನಾವು ವೇಸ್ಟ್ ಎಂದು ಬಿಸಾಡಿದ ವಸ್ತುಗಳನ್ನು ಬೆಸ್ಟ್ ಎನ್ನುವಂತಹ ಆಕೃತಿ, ಚಿತ್ರಗಳನ್ನಾಗಿ ಪರಿವರ್ತಿಸುತ್ತಾರೆ. ಇವರ ಮನೆ ಒಂದು ಪುಣ್ಯಕ್ಷೇತ್ರದಂತಿದೆ. ಇವರ ಮನಸ್ಸು ಅತ್ಯಂತ ಪುನೀತವಾಗಿದೆ. ಮಣ್ಣಿನ ಆಕೃತಿಗಳ ಮೂಲಕ ವರ್ಷಪೂರ್ತಿ ಸಾಕಷ್ಟು ಹಣ ಗಳಿಸುವ ಅವಕಾಶಗಳಿದ್ದರೂ ಅದ್ಯಾವುದನ್ನು ಬಯಸದೆ ಎಷ್ಟು ಬೇಕೋ ಅಷ್ಟು ಮಾತ್ರ ದುಡಿಮೆ ಮಾಡಿ ಉಳಿದ ಸಮಯದಲ್ಲಿ ತಮ್ಮ ಕಲೆಯ ಮೂಲಕವೇ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥರು. ಇವರದೇ ಹಾದಿಯಲ್ಲಿ ಇವರ ಮಕ್ಕಳು ನಡೆಯುತ್ತಿದ್ದಾರೆ. ಪರಿಸರವನ್ನು ಪ್ರೀತಿಸುತ್ತ ಸಾಧ್ಯವಾದಷ್ಟು ಇದರಲ್ಲೇ ಏನಾದರೂ ಸಾಧನೆ ಮಾಡಬೇಕು ಎಂಬುದು ಇವರ ಮಕ್ಕಳಾದ ವಿನಾಯಕ ಮತ್ತು ಕಾಂತೇಶ್ ಇಬ್ಬರ ಕನಸು. ಅಪ್ಪನಂತೆ ಕಲಾವಿದರಾಗುವ ಇವರ ಕನಸು ಬೇಗ ನನಸಾಗಲಿ.

ನಾವೆಲ್ಲರೂ ಮಣ್ಣಿನ ಗಣಪತಿಗಳನ್ನೇ ಆರಾಧಿಸೋಣ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದನ್ನು ಹಾಳುಮಾಡದೆ ಸ್ವಚ್ಛವಾಗಿಟ್ಟುಕೊಂಡು ಅದರೊಟ್ಟಿಗೆ ನಾವು ಸ್ವಸ್ಥವಾಗಿ ಜೀವಿಸೋಣ.

-ಜ್ಯೋತಿ. ಎಸ್, ಬೆಂಗಳೂರು

 

 

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...