'ಚೋಮನ ದುಡಿ'.... ನನ್ನ ಗ್ರಹಿಕೆಗೆ ದಕ್ಕಿದ್ದಿಷ್ಟು; ಶ್ರೀಧರ ಪತ್ತಾರ


"ದಿನವೂ ಬದುಕಿನ ಕತ್ತಲಲಿ ಮುಳಿಗೇಳುವ ಚೋಮನಿಗೆ ರಾತ್ರಿ ಕತ್ತಲಲ್ಲೇ ಬದುಕು ಸಾಗಿಸುವುದು ವಿಶೇಷವಾಗೇನೂ ಕಾಣಿಸುವುದಿಲ್ಲ. ಬುಡ್ಡಿದೀಪದ ಬೆಳಕಿಗೂ ಅಭಾವವವಿರುವ ಅವನ ಮುರುಕಲು ಗುಡಿಸಲು ಅವನ ಬದುಕಿನ ಅಂಧಕಾರದ ಕತೆ ಹೇಳುತ್ತದೆ," ಎನ್ನುತ್ತಾರೆ ಶ್ರೀಧರ ಪತ್ತಾರ. ಅವರು ಶಿವರಾಮ ಕಾರಂತ‘ಚೋಮನ ದುಡಿ’ ಕೃತಿ ಕುರಿತು ಬರೆದ ವಿಮರ್ಶೆ.

ಡಾ. ಶಿವರಾಮ ಕಾರಂತರ 'ಚೋಮನ ದುಡಿ' ಕಾದಂಬರಿಯಲ್ಲಿ ಬರುವ ಚೋಮ ಕೆಳಜಾತಿಯವನಾಗಿ ಬಡತನವನ್ನು ಹಾಸಿ ಹೊದ್ದವನು. ತನ್ನೈದು ಮಕ್ಕಳನ್ನು ಕಟ್ಟಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದವನಿಗೆ ಒಪ್ಪತ್ತಿನ ಗಂಜಿಗೂ ತತ್ವಾರ. ಇಂತಹದರಲ್ಲಿ ಬರುವ ಅಷ್ಟಿಷ್ಟು ಗೆಯ್ಮೆಯ ದುಡ್ಡು ತನ್ನ ಹೆಂಡದಾಸೆಗೆ ಖರ್ಚಾಗುವುದು ಅವನಲ್ಲೇನು ವ್ಯತ್ಯಾಸ ಮೂಡಿಸುವುದಿಲ್ಲ. ಆತ ಕುಡಿತವೇ ತನ್ನ ಅಸ್ತಿತ್ವದ ಸಂಕೇತವೆಂಬಂತೆ ಭಾವಿಸಿರುತ್ತಾನೆ. ಹೆಂಡವೇ ತನ್ನ ಮನೋದೈಹಿಕ ಆಯಾಸವನ್ನು ಕಳೆಯುವ ಪರಿಹಾರ ಮಾರ್ಗವೆಂದು ಭಾವಿಸಿಕೊಂಡಿರುತ್ತಾನೆ.

ದಿನವೂ ಬದುಕಿನ ಕತ್ತಲಲಿ ಮುಳಿಗೇಳುವ ಚೋಮನಿಗೆ ರಾತ್ರಿ ಕತ್ತಲಲ್ಲೇ ಬದುಕು ಸಾಗಿಸುವುದು ವಿಶೇಷವಾಗೇನೂ ಕಾಣಿಸುವುದಿಲ್ಲ. ಬುಡ್ಡಿದೀಪದ ಬೆಳಕಿಗೂ ಅಭಾವವವಿರುವ ಅವನ ಮುರುಕಲು ಗುಡಿಸಲು ಅವನ ಬದುಕಿನ ಅಂಧಕಾರದ ಕತೆ ಹೇಳುತ್ತದೆ. ಇದರ ಮಧ್ಯೆ ಅವನ ಅಂತರಾಳದ ನೋವನ್ನು, ಆಕ್ರೋಶವನ್ನು ಹೊರಹಾಕುವ ಬಲುದೊಡ್ಡ ಮಾಧ್ಯಮವಾಗಿ ಕಂಡಿದ್ದು ಅವನ 'ದುಡಿ'. ಅವನದೊಂದು ಹೆಬ್ಬಯಕೆ ತಾನೂ ಬೇಸಾಯಗಾರನಾಗಬೇಕೆಂಬುದು. ಆದರೆ ಅದು ಗಗನ ಕುಸುಮವೆಂಬುದನ್ನು ನಂಬದ ಚೋಮ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ತುಂಡು ಭೂಮಿ ಪಡೆಯಲು ಅವನು ತನ್ನ ಧಣಿಗೆ ದುಂಬಾಲು ಬಿದ್ದುದು ಅವನ ವ್ಯರ್ಥ ಪ್ರಯತ್ನವಾಗುತ್ತದೆ.

ಚೋಮನ ಧಣಿ ಸಂಕಪಯ್ಯ ಸ್ವಭಾವತಃ ಒಳ್ಳೆಯವನಾದರೂ ಭೂಮಿ ಕೊಡುವ ವಿಚಾರದಲ್ಲಿ ಮಾತ್ರ ಜಾಣ ನಡೆ ಪ್ರದರ್ಶಿಸುತ್ತಾನೆ. ತನ್ನ ನಿರಾಕರಣೆಗೆ ತಾಯಿಯ ಕಾರಣ ನೀಡುತ್ತಾನೆ. ಅವನ ತಾಯಿಯೋ ಮೊದಲೇ ಜಾತಿಭೂತವಂಟಿಸಿಕೊಂಡವಳು. ಚೋಮನಿಗೇನಾದರೂ ಭೂಮಿ ಕೊಟ್ಟು, ಆತನನ್ನು ಬೇಸಾಯಗಾರನಾಗಿಸಿದರೆ ಅದು ಜಾತಿಗೇಡು, ಲೋಕರೂಢಿಗೆ ಕಳಂಕವೆಂದು ಭಾವಿಸುತ್ತಾಳೆ. ಕಡೆವರೆಗೂ ಚೋಮನಿಗೆ ಭೂಮಿ ದಕ್ಕದಂತೆ ನೋಡಿಕೊಳ್ಳುತ್ತಾಳೆ. ಬದುಕಿನ ಕೊನೆವರೆಗೂ ಚೋಮನ ಈ ಪ್ರಯತ್ನ ಮಾತ್ರ ನಿಲ್ಲುವುದಿಲ್ಲ.

ಈ ಮಧ್ಯೆ ಶೇರೆಕಾರ ಮನ್ವೇಲ ಕಳಸದ ಸಮೀಪದ ಕಾಫಿತೋಟದ ತನ್ನ ಧಣಿಯನ ಬಳಿ ಚೋಮ ಮಾಡಿದ ಸಾಲವನ್ನು ಒಂದೆಕ್ಕೆರಡಾಗಿ ಸೇರಿಸಿ ಹೇಳಿ. ಚೋಮನನ್ನು ಪೀಡಿಸಿ ಅವನ ಎರಡು ಗಂಡುಮಕ್ಕಳನ್ನು ತನ್ನೊಡನೆ ಎಳೆದುಕೊಂಡು ಹೋಗುತ್ತಾನೆ. ಅಲ್ಲಿ ಏನೇನೋ ಬೆಳವಣಿಗೆಗಳಾಗಿ ಚೋಮನ ಎರಡನೆಯ‌ ಮಗ ಗುರವ ತನ್ನ ಪಕ್ಕದ ಒಕ್ಕಲು ಕ್ರಿಶ್ಚಿಯನ್ನರ ಹುಡುಗಿ ಮಾರಿ (ಮೇರಿ)ಯ ಮೋಹಕ್ಕೆ ಬಿದ್ದು ಅವಳೊಡನೆ ಓಡಿಹೋಗುತ್ತಾನೆ. ಇದರಲ್ಲಿ ಅವನದು ಜಾತಿಮೀರುವ ಮಹತ್ವಾಕಾಂಕ್ಷೆಯಾಗಲಿ, ದೊಡ್ಡ ಆದರ್ಶವೇನೂ ಇರಲಿಲ್ಲ. ಕೇವಲ ತನ್ನ ಮನೋಭಿಲಾಷೆಯಂತೆ ಪಲಾಯನಗೈಯ್ಯುತ್ತಾನೆ. ದಲಿತನಾದವನು ಕ್ರಿಶ್ಚಿಯನ್ನನಾಗಿ ಬದಲಾಗುತ್ತಾನೆ. ಈ ನಡೆಯೇ ಅವನನ್ನು ಬೇಸಾಯಗಾರನಾಗಿಸುತ್ತದೆ. ತನ್ನ ಜಾತಿಗೆ ದಕ್ಕದ ಬೇಸಾಯಗಾರಿಕೆ ಅವನಿಗೆ ಈ ಹೊಸಜಾತಿಯಿಂದ ಒಲಿಯುತ್ತದೆ. ಇದು ಕೊನೆಕೊನೆಗೆ ಚೋಮನಿಗೆ ಸಂತೋಷ ನೀಡುವ ವಿಷಯವೆನಿಸುತ್ತದೆ. ತನ್ನನ್ನು ತೀರುಗಿಯೂ ನೋಡದ, ತನ್ನಿಂದ ಅಗಲಿದ ಮಗನನ್ನು ನೋಡಲು ಹೋಗುವಂತೆ ಚೋಮನನ್ನು ಪ್ರೇರೇಪಿಸುತ್ತದೆ.

ತೋಟದಿಂದ ಒಬ್ಬನೇ ಮರಳಿದ ಚೋಮನ ಹಿರಿಮಗ ಚನಿಯ ಸಾಯುವಾಗಿನ ಚಿತ್ರಣ ಮಾತ್ರ ಕರುಳು ಹಿಂಡುವಂತದ್ದು. ಮಾರಿಯೊಂದಿಗೆ ಓಡಿಹೋದ ಗುರುವನನ್ನು ತರೆತರುತ್ತೇನೆಂದು ಪಕ್ಕದೂರಿಗೆ ತೆರಳಿದ ತಂದೆ. ಕಾಯಿಲೆಯಿಂದ ಹಾಸಿಗೆಯಲ್ಲಿ ಒದ್ದಾಡುತ್ತ ಬಿದ್ದ ಅಣ್ಣ, ಈ ಪರಿಸ್ಥಿತಿಯಲ್ಲಿ ಬೆಳ್ಳಿ ಅಕ್ಷರಶಃ ನಲುಗಿಹೋಗುತ್ತಾಳೆ. ಅವಳು ಕಾಯಿಲೆ ವಾಸಿ ಮಾಡಲು ಕಂಡುಕೊಂಡ ಮಾರ್ಗ ಮಾತ್ರ ತೀರ ನಿರರ್ಥಕವಾದದ್ದು. ಮದ್ದು, ಮಾಟ, ಮಂತ್ರ, ದೈವ, ಎನ್ನುತ್ತಾ ಸರಿಯಾದ ಔಷದೋಪಚಾರ ಮಾಡಲಾಗದೇ ಒದ್ದಾಡುತ್ತಾಳೆ. ಹಾಳು ಮೂಢನಂಬಿಕೆ ಅವರನ್ನು ದಾರಿ ತಪ್ಪಿಸುತ್ತದೆ. ಕಾಯಿಲೆ ಉಲ್ಬಣಗೊಂಡು ಎರಡ್ಮೂರು ದಿನಗಳ ನಂತರ ಚನಿಯನ ಸಾವಾಗುತ್ತದೆ. ಬೆಳ್ಳಿ ಜಗವರಿಯದ ಮುಗ್ಧೆ. ಅವಳಿಗೆ ಅಣ್ಣನ ಸಾವಿಂದ ಮುಗಿಲು ಹರಿದು ಮೈಮೇಲೆ ಬಿದ್ದಹಾಗಾಗುತ್ತದೆ. ಊರಿಂದ ಬಂದ ಚೋಮ ಬಿಕ್ಕಿ ಬಿಕ್ಕಿ ಅಳುತ್ತಾನೆ. ಅವನ ನೋವಿನ ಸರಮಾಲೆ ಮತ್ತಷ್ಟು ಉದ್ದವಾಗುತ್ತದೆ.

ಒಂದಿನ ಹುಣ್ಣಿಮೆಯ‌ ರಾತ್ರಿ ಚೋಮ ಬೆಳ್ಳಿಯನ್ನು ಹೊರಕರೆದು ನೋಡಲ್ಲಿ ಬಡವರ ದೀವಿಗೆ ಎಂದು ಚಂದ್ರನನ್ನು ತೋರಿಸುತ್ತಾನೆ. ಇದು ಆತನ ಅಂಧಕಾರದ ಬದುಕಿನಿಂದ ಪಾರಾಗಿ ಬೆಳಕರಸುವ ಹಂಬಲ. ಬೆಳಕು ಕಾಣಲು ಹೊಸ ಭರವಸೆಗಳನ್ನು ಎದುರು ನೋಡುವ ಅದಮ್ಯ ತುಡಿತವದು. ಆದರೆ ವಾಸ್ತವದಲ್ಲಿ ಹಾಗಾಗದಿರುವುದು ಅವನನ್ನು ಇನ್ನಷ್ಟು ಭ್ರಮನಿರಸನಕ್ಕೊಳಪಡಿಸುತ್ತದೆ. ತನ್ನಿಬ್ಬರು ಮಕ್ಕಳು ನೀಲ, ಕಾಳ ರನ್ನು ಹೊರಕರೆದು ದುಡಿ ಬಾರಿಸುತ್ತ ತನ್ನ ತಾಳಕ್ಕೆ ತಕ್ಕಂತೆ ಅವರಿಬ್ಬರನ್ನು ಕುಣಿಯುವಂತೆ ಹೇಳುತ್ತಾನೆ. ಇದು ಅವನ ಶೃತಿ ತಪ್ಪಿದ ಹಾಡಿಗೆ ಮತ್ತೇ ಶೃತಿ ಸೇರಿಸುವ ಪ್ರಯತ್ನವೆಂದೆನಿಸುತ್ತದೆ. ಆದರೆ ಅವನಿಬ್ಬರು ಮಕ್ಕಳು ಹೆಜ್ಜೆ ತಪ್ಪುತ್ತಾರೆ. ಆಗ ಅವನ ಕೋಪ ಕೆರಳುತ್ತದೆ. ಕೋಪ ಅವನನ್ನು ಹುಚ್ಚು ಹುಚ್ಚಾಗಿ ಆಡುವಂತೆ ಮಾಡುತ್ತದೆ.

ಕಾಫಿತೋಟದ ಧಣಿಯ ಸಾಲ ತೀರಿಸಲು ಬೇರೆ ಆಯ್ಕೆಗಳಿಲ್ಲದೆ ಬೆಳ್ಳಿ ತನ್ನ ತಮ್ಮನನ್ನು ಬೆನ್ನಿಗೆ ಹಾಕಿಕೊಂಡು ಮನ್ವೇಲನ ಸಂಗಡ ತೆರಳುತ್ತಾಳೆ. ತನ್ನ ಎತ್ತುಗಳನ್ನು ಮಾರುವುದಕ್ಕಿಂತ ಬೆಳ್ಳಿ ದುಡಿಯಲು ತೆರಳಿದುದು ಚೋಮನಿಗೆ ಆ ಕ್ಷಣಕ್ಕೆ ಸರಿಯೆನಿಸುತ್ತದೆ. ಹೆಣ್ಣು ಮಗಳನ್ನು ಒಬ್ಬಂಟಿಯಾಗಿ ಹಾಗೆ ತೋಟಕ್ಕೆ ಕಳಿಸುವುದು ಆತನ ಅಸಹಾಯಕತೆಯ ಪರಮಾವಧಿಯಾಗುತ್ತದೆ. ಆದರೆ ಎದೆಗುಂದದ ಬೆಳ್ಳಿ ತಂದೆ ಮಾಡಿದ ಸಾಲ ತೀರಿಸುವುದೇ ತನ್ನ ಮಹತ್ತರ ಕೆಲಸವೆಂದುಕೊಳ್ಳುತ್ತಾಳೆ. ಕುಟುಂಬವನ್ನು ಪೊರೆಯಲು ಅವಳು ಮಾಡಿದ ಪ್ರಯತ್ನ ಒಂದು ಸಾಹಸದಂತೆ ಕಾಣಿಸುತ್ತದೆ.‌ ಅದಕ್ಕಾಗಿ ಅವಳು ಮನ್ವೆಲನಿಗೆ ಸೆರಗು ಹಾಸಿದರೂ ಅದು ಅನೈತಿಕವೇನಲ್ಲ. ಎಲ್ಲ ತಾಪತ್ರಯಗಳ‌ ಮಧ್ಯೆಯೂ, ನಲಗುವವಳಿಗೆ ಅವಳಿಗೆ ತಪ್ಪೆನಿಸುವುದಿಲ್ಲ. ಇನ್ನೊಂದು ಆಯಾಮದಲ್ಲಿ ಅದು ಅವಳ ಸಹಜ ದೇಹ ವಾಂಛೆಯ ಅಭಿವ್ಯಕ್ತಿ ಯಷ್ಟೇ. ಲೋಕದ ರೂಢಿಯಲ್ಲಿ ಮಾತ್ರ ಅವಳು ಕಳಂಕಿತೆ. ಆದರೆ ಅಲ್ಲಿ ಅಸಹಜವಾದದ್ದೇನೂ ಕಾಣಿಸುವುದಿಲ್ಲ. ಆದರೆ ಸಮಯ ಸಾಧಕತನದ ಮನ್ವೆಲನ ವರ್ತನೆ ಮಾತ್ರ ಅನೈತಿಕದ್ದು.

ವರುಷದ ನಂತರ ಬೆಳ್ಳಿ ತನ್ನೂರಿಗೆ ಬಂದಾದ ಕೆಲ ದಿನಗಳಲ್ಲೇ ಅವಳ‌ ತಮ್ಮ ನೀಲನ ಸಾವಾಗುತ್ತದೆ. ಅವನು ಹೊಳೆಯಲ್ಲಿ ಮುಳುಗುವಾಗ ಅಲ್ಲೇ ಹತ್ತಿರದಲ್ಲಿದ್ದ ಬ್ರಾಹ್ಮಣ ಯುವಕ ಕಾಪಾಡಲು ಮುಂದಡಿ ಇಟ್ಟವವನನ್ನು ಜಾತಿ ಅಡ್ಡಗಾಲು ಹಾಕುತ್ತದೆ. ನೀಲ ಮುಳುಗುವುದನ್ನು ಎಲ್ಲರೂ ಸುಮ್ಮನೇ ನಿಂತು ನೋಡುತ್ತಾರೆ. ಚೋಮನಿಗೆ ತನ್ನ ಜಾತಿಯ ಮೇಲೆ ತೀರ ಆಕ್ರೋಷ ಬರುತ್ತದೆ. ತನ್ನ ಜಾತಿಯ ಕಾರಣದಿಂದಲೇ ತನ್ನ ಮಗ ಸತ್ತದ್ದೆಂದು ಎದೆಎದೆ ಹೊಡೆದುಕೊಂಡು ಅಳುತ್ತಾನೆ. ತನ್ನ ಜಾತಿಯ ಬಗ್ಗೆ ಜಿಗುಪ್ಸೆ ತಾಳುತ್ತಾನೆ. ಈ ಸನ್ನಿವೇಷ ತೀರ ಹೃದಯವಿದ್ರಾವಕ.

ಕಡೆಗೆ ಚೋಮ ಮನ್ವೆಲನೊಂದಿಗಿನ ತನ್ನ ಮಗಳ ಪ್ರಣಯ ಕಂಡು ಕೆಂಡವಾಗುತ್ತಾನೆ. ಇದು ಅವಳ ತಪ್ಪಲ್ಲ. ಅವಳದು ಬಯಕೆಯ ವಯ್ಸಸ್ಸು. ತಾನು ಅವಳನ್ನು ಸಕಾಲಕ್ಕೆ ಮದುವೆ ಮಾಡಲಿಲ್ಲ ವೆಂಬುದೊಂದು ಕೊರಗು ಅವಳ ಮೇಲೆ ಕನಿಕರ ಬರುವಂತೆ ಮಾಡುತ್ತದೆ. ಕೊನೆಗೆ ಚೋಮನ ಆಸೆ ಆಸೆಯಾಗಿಯೇ ಉಳಿಯುತ್ತದೆ. ಧಣಿಯ ಹೊಲ ಉತ್ತು ಬಂದು, ತನ್ನೆರಡು ದನಗಳನ್ನು ಕಾಡಿಗೆ ಅಟ್ಟಿಬಂದು ಎಲ್ಲದರಿಂದ ಮುಕ್ತನಾದೆನೆಂದು ನಿಟ್ಟುಸಿರು ಬಿಡುತ್ತಾನೆ. ಕಡೆಗೆ ಅತೃಪ್ತಿ ಅವನ ಚಿತ್ತವಿಕಲಗೊಳಿಸುತ್ತದೆ. ತನ್ನ ನೋವನ್ನು, ತನ್ನೆದೆಯ ದನಿಯನ್ನು ಹೊರಹಾಕುವ ಅಸ್ತ್ರ ವೆಂದುಕೊಂಡ 'ದುಡಿ'ಯನ್ನು ಬಾರಿಸುತ್ತ ಭಾವಾವೇಷಕ್ಕೊಳಗಾಗುತ್ತಾನೆ. ಹಾರಾಡಿ ಕೂಗಾಡಿ ದುಡಿ ಬಾರಿಸುತ್ತಲೇ ಪ್ರಾಣತ್ಯಾಗ ಮಾಡುತ್ತಾನೆ. ಅವನು ಬೇಸಾಯಗಾರನಾಬೇಕೆಂಬ ಬಯಕೆ ಅವನೊಂದಿಗೆ ಐಕ್ಯವಾಗುತ್ತದೆ. ದುಡಿಯ ಸದ್ದು ಮಾತ್ರ ಒಂದು ಕ್ಷಣ ನಿತಾಂತವಾಗಿ ಮಾರ್ದನಿಸಿ ತನ್ನ ಸೊಲ್ಲಡಗಿಸಿಕೊಳ್ಳುತ್ತದೆ. 'ದುಡಿ'ಯೊಂದಿಗೆ ಮಿಳಿತಗೊಂಡ ಚೋಮನ ಅಂತರಾಳದ ಸದ್ದು ಕಡೆಗೂ ಯಾರ ಒಳಗಿವಿಗೂ ತಾಕದಿರುವುದು ಮಾತ್ರ ದುರಂತವೇ ಸರಿ.

ಶಿವರಾಮ ಕಾರಂತರ ಈ ಕೃತಿ ಓದುಗರಿಗೆ ತೀರ ಕಾಡುವ ಮತ್ತು ವಿಚಾರಕ್ಕೆಡೆ ಮಾಡಿಕೊಡುವಂತಹದ್ದು. ಎಲ್ಲರೂ ಓದಲೇಬೇಕಾದ ಅದ್ವಿತೀಯ ಕೃತಿ.

- ಶ್ರೀಧರ ಪತ್ತಾರ

MORE FEATURES

'ಕೊಡಗಿನ ಲಿಂಗರಾಜ' ಕೊಡಗಿನ ಚರಿತ್ರೆಯ ಕೆಲವು ಪುಟಗಳನ್ನು ತೆರೆದಿರಿಸುತ್ತದೆ

19-05-2024 ಬೆಂಗಳೂರು

‘ಕಥಾ ವಿನ್ಯಾಸವನ್ನು ಹೇಳುವುದಾದರೆ ಶಿಶಿಲರು ಮೊದಲ ಅಧ್ಯಾಯದಲ್ಲಿ ಭೂಮಿಕೆಯನ್ನು ಸೃಷ್ಟಿ ಮಾಡಿದ್ದಾರೆ’ ಎನ...

ವಿಮರ್ಶೆ ಎಂದರೆ ಪುಸ್ತಕದ ಆಳವಾದ ಓದು

18-05-2024 ಬೆಂಗಳೂರು

‘ವಿಮರ್ಶಾ ಬರಹಗಳ ಮುಖ್ಯ ಉದ್ದೇಶ ಓದುಗರ ಪುಸ್ತಕ ಓದಿನ ತಿಳಿವಳಿಕೆಗೆ ರಹದಾರಿ ಮಾಡಿಕೊಡುವುದಾಗಿದೆ’ ಎನ್ನು...

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...