ದಕ್ಷಿಣಾಯನ ಕೇವಲ ಕಾದಂಬರಿಯಲ್ಲ, ಅದೊಂದು ಈಸೀಜಿ ಟೆಸ್ಟ್


"ಇಲ್ಲಿನ ಪಾತ್ರಗಳೆಲ್ಲ ಗುಂಡಗಿವೆ. ಯಾವ ಪಾತ್ರವೂ ತನ್ನನ್ನು ತಾನು ಸಮರ್ಥಿಸಿಕೊಂಡು ಬೆಳೆಯುತ್ತಾ ಹೋಗುವುದಿಲ್ಲ. ಬದಲಿಗೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವುದರ ಮೂಲಕ ಪ್ರಾಮಾಣಿಕವಾಗಿ ತನಗೆ ತಾನು ಸ್ಪಷ್ಟಗೊಳ್ಳಬೇಕು, ಅದೇ ಮುಖ್ಯ ಎಂಬಂತೆ ವರ್ತಿಸುತ್ತವೆ," ಎನ್ನುತ್ತಾರೆ ನರೇಂದ್ರ ಪೈ. ಅವರು ಜೋಗಿಯವರ ʻದಕ್ಷಿಣಾಯನʼ ಕೃತಿ ಕುರಿತು ಬರೆದ ಅನಿಸಿಕೆ.

ಅತ್ಯಂತ ಸಮಕಾಲೀನ ವಸ್ತುವೊಂದನ್ನು ಎತ್ತಿಕೊಂಡು ಅದರ ಎಲ್ಲ ಆಯಾಮಗಳನ್ನು ಸ್ಪಷ್ಟವಾದ ದೃಷ್ಟಿಯಿಂದ ಕಾಣುವುದು ಒಬ್ಬ ಸೃಜನಶೀಲ ಲೇಖಕ ಎದುರಿಸಬಹುದಾದ ಬಹು ದೊಡ್ಡ ಸವಾಲು. ನೇರ ಮೂಗಿನ ಪಕ್ಕ ಏನನ್ನಾದರೂ ಹಿಡಿದರೆ ಅದನ್ನು ಸ್ಪಷ್ಟವಾಗಿ ಕಾಣುವುದು ಕಷ್ಟ. ಯಾವುದಕ್ಕೂ ಸ್ವಲ್ಪ ‘ಅಂತರ’ ಬೇಕು. ಅದು ಕೆಲವೊಮ್ಮೆ ಕಾಲದ್ದು, ಕೆಲವೊಮ್ಮೆ ದೂರದ್ದು. ಕೆಲವೊಮ್ಮೆ ಎರಡೂ. ಹಾಗಾಗಿ ಹೆಚ್ಚಿನ ಲೇಖಕರು ನಲವತ್ತು ಐವತ್ತು ವರ್ಷಗಳ ಹಿಂದಿನ ವಸ್ತುವನ್ನೇ ಎತ್ತಿಕೊಂಡು ಬರೆಯುತ್ತಿರುತ್ತಾರೆ. ಇಲ್ಲಿ ಜೋಗಿಯವರು ನಿನ್ನೆ ಮೊನ್ನೆ ನಡೆದಿದ್ದನ್ನು ಇಟ್ಟುಕೊಂಡು ಬರೆಯುತ್ತಿದ್ದಾರೆ ಎನ್ನುವುದೇ ಒಂದು ವಿಶೇಷ. ಆದರೆ ಕಾದಂಬರಿ ಮುಖ್ಯ ಎನಿಸುವುದು ಈ ಕಾರಣಕ್ಕಾಗಿ ಅಲ್ಲ.

ಇಲ್ಲಿನ ಪಾತ್ರಗಳೆಲ್ಲ ಗುಂಡಗಿವೆ. ಯಾವ ಪಾತ್ರವೂ ತನ್ನನ್ನು ತಾನು ಸಮರ್ಥಿಸಿಕೊಂಡು ಬೆಳೆಯುತ್ತಾ ಹೋಗುವುದಿಲ್ಲ. ಬದಲಿಗೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವುದರ ಮೂಲಕ ಪ್ರಾಮಾಣಿಕವಾಗಿ ತನಗೆ ತಾನು ಸ್ಪಷ್ಟಗೊಳ್ಳಬೇಕು, ಅದೇ ಮುಖ್ಯ ಎಂಬಂತೆ ವರ್ತಿಸುತ್ತವೆ. ಹೆಚ್ಚಿನೆಲ್ಲಾ ಪಾತ್ರಗಳು ತನ್ನನ್ನು ತಾನು ಪ್ರಶ್ನಿಸಿಕೊಳ್ಳಲು ಎದುರಿನ ಪಾತ್ರಗಳನ್ನು ಅಥವಾ ಎದುರಾಗುವ ಸನ್ನಿವೇಶಗಳನ್ನು ಬಳಸಿಕೊಳ್ಳುತ್ತವೆ ಎನ್ನುವುದು ನಿಜ. ಅದು ಎದುರು ಬದುರು ಮುಖಾಮುಖಿಯಾಗುವುದರಿಂದ ಘಟಿಸುತ್ತದೋ ಅಥವಾ ಒಂದು ಪಾತ್ರ ಇನ್ನೊಂದರ ಬಗ್ಗೆ ತನ್ನಷ್ಟಕ್ಕೆ ತಾನು ಅಂದುಕೊಂಡಿದ್ದರ ಮೂಲಕ ನಡೆಯುತ್ತದೋ ಎನ್ನುವುದು ಬೇರೆ ವಿಚಾರ. ಆದರೆ ಯಾವುದೇ ಪಾತ್ರವೂ ಪ್ರತಿದ್ವಂದ್ವಿಯಾದ ಇನ್ನೊಂದಕ್ಕೆ ಘರ್ಷಿಸದೇ, ತನ್ನನ್ನು ತಾನು ನಿರೂಪಿಸಿಕೊಳ್ಳದೇ ಬಚಾವಾಗುವುದಿಲ್ಲ. ಕೆಲವೇ ಕೆಲವು ಪಾತ್ರಗಳು ತನ್ನನ್ನು ತಾನು ಪ್ರಶ್ನಿಸಿಕೊಳ್ಳಲು ಕಿಟಕಿಯ ಬದಲು ಕನ್ನಡಿಯನ್ನು ಆಶ್ರಯಿಸುತ್ತವೆ. ಹಾಗಾಗಿ ಪ್ರತಿ ಪಾತ್ರವೂ ಉಜ್ಜಿಕೊಂಡು ಉಜ್ಜಿಕೊಂಡು ದುಂಡಗಾಗುತ್ತವೆ, ಘನಗೊಳ್ಳುತ್ತವೆ. ಹಾಗಾಗಿ ಅವುಗಳನ್ನು ನಿಮ್ಮ ಮನದ ಯಾವುದೇ ಪಾತ್ರೆಯೊಳಗೆ ಹಾಕುವುದು ಅಸಾಧ್ಯ. ಈ ತಂತ್ರದ ಬಹುಮುಖ್ಯ ಲಾಭವೇನೆಂದರೆ, ಇದು ಓದುಗನಿಗೂ ತನ್ನನ್ನು ತಾನು ಹಾಗೆ ಉಜ್ಜಿಕೊಳ್ಳುವ, ಘರ್ಷಿಸಿಕೊಂಡು ತನ್ನ ಸತ್ವವೇನೆಂದು ಪರೀಕ್ಷಿಸಿಕೊಳ್ಳುವ ಆಹ್ವಾನ ನೀಡುತ್ತ ಸಾಗುವುದು. ಜೋಗಿಯವರ ಕಾದಂಬರಿಗಳ ಒಟ್ಟಾರೆ ಸಂದರ್ಭದಲ್ಲೂ ಅವರು ಇಲ್ಲಿ ಈ ವಿಚಾರದಲ್ಲಿ ಸಾಧಿಸಿರುವ ನೈಪುಣ್ಯ ಗಮನಾರ್ಹವಾಗಿದೆ. ಆದರೆ ಇದು ಒಬ್ಬ ಕಾದಂಬರಿಕಾರನಲ್ಲಿ ಕನಿಷ್ಠ ಇರಬೇಕಾದ ಒಂದು ಅತ್ಯಗತ್ಯವಾದ ಗುಣವೇ ಹೊರತು, ಅದು ಇವತ್ತು ಕಾದಂಬರಿಕಾರರಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿಲ್ಲ ಎಂಬ ಕಾರಣಕ್ಕೇ ಜೋಗಿಯವರ ಕಾದಂಬರಿ ವಿಶೇಷ ಎನ್ನುವುದು ಸರಿಯಲ್ಲ. ಹಾಗಾಗಿ, ಈ ಕಾದಂಬರಿ ಮುಖ್ಯ ಎನಿಸುವುದು ಈ ಕಾರಣಕ್ಕಾಗಿಯೂ ಅಲ್ಲ.

ಕಾದಂಬರಿಯ ಒಂದು ವಸ್ತುಲೋಕ, ಪಾತ್ರ ಪ್ರಪಂಚ, ಬದುಕಿನ ಚಿತ್ರ ಮತ್ತು ಪರಿಸರ ಎನ್ನುವುದಿದೆಯಲ್ಲ, ನಮಗದು ತೀರ ಆಪ್ತವಾದರೆ ಅದೇ ಲೋಕದಲ್ಲಿ ಬದುಕು ಎಷ್ಟು ಚಂದ ಎಂದೆಲ್ಲ ಮನಸ್ಸು ಕನಸು ಕಾಣತೊಡಗುತ್ತದೆ. ಯಾವುದಾದರೂ ಪಾತ್ರ ತೀರ ಇಷ್ಟವಾದರೆ ಅದರೊಂದಿಗೇ ಸ್ವಲ್ಪ ಕಾಲ ಮನಸ್ಸು ಒಡನಾಡತೊಡಗುತ್ತದೆ. ಅಲ್ಲಿನ ಬದುಕಿನ ಶೈಲಿ ಆಪ್ತವಾದರೆ, ನಾವೂ ಯಾಕೆ ಹಾಗೆ ಬದುಕಲು ಆಗುತ್ತಿಲ್ಲ ಎಂದು ಮನಸ್ಸು ಪ್ರಶ್ನಿಸತೊಡಗುತ್ತದೆ. ಆ ಊರು, ಆ ಪರಿಸರ ಹಿಡಿಸಿದರೆ ಅಲ್ಲಿಗೊಮ್ಮೆ ಹೋಗಲು ಹಾತೊರೆಯುತ್ತೇವೆ. ಆದರೆ ಅವೆಲ್ಲವೂ ನಮ್ಮ ವೈಯಕ್ತಿಕ ಬದುಕಿನ ಯಾವುದೋ ಒಂದು ಎಳೆಯನ್ನು ಮೀಟಿ ಬಿಟ್ಟರೆ, ನಮ್ಮನ್ನು ಕಾಡುವ ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಗಬಹುದೇ ಎಂದು ಮನಸ್ಸು ತಹತಹಿಸತೊಡಗುತ್ತದೆ.

ಕಾಡಿನಲ್ಲಿ, ಆಯಕಟ್ಟಿನ ಸ್ಥಳದಲ್ಲಿ ಹಸಿದ ಹುಲಿಯೆದುರು ಸಿಕ್ಕಿ ಹಾಕಿಕೊಂಡಂತಿದೆ ಇಲ್ಲಿ ಪರಿಸ್ಥಿತಿ. ಗಟ್ಟಿಯಾಗಿ ಉಸಿರಾಡದ, ಅಲುಗಾಡದ ಹಾಗಿರಬೇಕು. ಹಾಗಿದ್ದೂ ನಮಗೊಂದು ಆಸೆ ಉಳಿದಿರುತ್ತದೆ. ಪುಣ್ಯಕೋಟಿಯ ಹಾಡು ಕೇಳುತ್ತ ಬೆಳೆದಿದ್ದರಿಂದ ಅದು ಬಂತೆ, ಗೊತ್ತಿಲ್ಲ. ಹುಲಿ ಸುಮ್ಮನೇ ಹೊರಟು ಹೋಗಬಹುದು ಎಂಬ ಆಸೆ ಅದು. ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಎಲ್ಲೋ ಅದರ ಅಂತಃಕರಣವೂ ನಮ್ಮದರ ಲಯದಲ್ಲಿ ಮಿಡಿದರೆ, ಅದು ಏನೂ ಮಾಡದೆ ಹೊರಟು ಹೋಗಲೂ ಬಹುದು ಎಂಬ ಆಸೆ. ಆದರೆ ಯಾವುದೇ ಕ್ಷಣದಲ್ಲಿ ಅದು ಎಗರಿ ಕತ್ತು ಕಚ್ಚಿ ರಕ್ತ ಹೀರಿ ಬಿಡಬಹುದೆಂಬುದು ವಾಸ್ತವಕ್ಕೆ ಹೆಚ್ಚು ಹತ್ತಿರವಾದ ಸಾಧ್ಯತೆ.

ಅದೆಲ್ಲ ಹೋಗಲಿ, ನಿಜಕ್ಕೂ ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ಕಾಣುವುದು ಸಾಧ್ಯವೆ? ಹುಲಿಯ ಕಣ್ಣಲ್ಲಿ ಏನಿರುತ್ತದೆ. ಹಸಿವು, ಕ್ರೌರ್ಯ ಬಿಟ್ಟರೆ ಇನ್ನೇನಿರಲು ಸಾಧ್ಯ, ಅಲ್ಲವೆ? ನಾವು, ಮನುಷ್ಯರು, ಮನಸ್ಸು, ಆತ್ಮ, ಹೃದಯವಂತಿಕೆ, ಅನುಕಂಪ, ಸಹಾನುಭೂತಿ, ಜೀವಕಾರುಣ್ಯ ಎಂಬೆಲ್ಲ ಶಬ್ದಗಳನ್ನು ಸೃಷ್ಟಿಸಿದವರು, ಕಣ್ಣಲ್ಲಿ ಕಣ್ಣಿಟ್ಟು ಕಾಣುವಾಗ ಅದನ್ನು ಎದುರಿನ ಜೀವಕ್ಕೆ ಹರಿಸಬಲ್ಲೆವು ಎಂದು ಕೊಂಡಿರುತ್ತೇವೆ. ನಿಜಕ್ಕೂ ಸಾಧ್ಯವೆ? ಬೊಚ್ಚು ಬಾಯಿಯ ಹಣ್ಣುಹಣ್ಣು ಮುದುಕ, ಅರೆನಗ್ನ, ಬಡಪಾಯಿ ಗಾಂಧಿಯನ್ನು ಗುಂಡಿಟ್ಟು ಕೊಲ್ಲುವ ಮುನ್ನ ಅವರಿಗೆ ನಮಸ್ಕರಿಸಿಯೇ ಮುಂದುವರಿದ ಹಂತಕನಲ್ಲಿ ಅದಿರಲಿಲ್ಲವೆ? ಹುಟ್ಟಾ ಮೃಗದಲ್ಲಿ ಅದನ್ನು ನಿರೀಕ್ಷಿಸುವ ಮನುಷ್ಯ ತನ್ನೊಳಗಿನ ಮೃಗವನ್ನು ಮತ್ತೆ ಮತ್ತೆ ವಾಂತಿ ಮಾಡಿಕೊಳ್ಳುತ್ತಲೇ ಇರುವುದಿಲ್ಲವೆ? ಕೊನೆಯ ಬಾರಿ ನೀವು ನಿಮ್ಮ ಅಸಹಾಯಕ ಸಹವರ್ತಿಯ ಮೇಲೆ ಕೈಯೆತ್ತಿ ಎಷ್ಟು ಕಾಲವಾಯಿತು? ಬೇವಾರ್ಸಿ ಮುಂಡೆ ಎಂದು ಕೈಹಿಡಿದ ಹೆಂಡತಿಯನ್ನು ಕರೆಯುವುದು ಕೂಡ ಹಲ್ಲೆಯೇ, ಕ್ರೌರ್ಯವೇ. ಬಹುಶಃ ಒಂದೇಟು ಹೊಡೆದಿದ್ದಕ್ಕಿಂತ ಹೆಚ್ಚಿನ ಕ್ರೌರ್ಯ.

ನಮ್ಮ ಕನ್ನಡಿ ನಿಜವಾಗಿ ನಮ್ಮೆದುರು ಬಂದು ಹಲ್ಲು ಕಿರಿಯುವುದು ಆಗಲೇ. ದೈನಂದಿನ ಕ್ಷುಲ್ಲಕ ಕ್ಷಣದಲ್ಲಿ ವಿಜೃಂಭಿಸಿ ಮೆರೆಯುವ ನಮ್ಮ ಕ್ರೌರ್ಯ, ಕ್ರೋಧಗಳಿಗೆ ನಮ್ಮ ಅಗಾಧ ಓದು, ಜ್ಞಾನ, ಅರಿವು, ಯೋಗ, ಧ್ಯಾನ, ಸತ್-ಚಿತ್-ಆನಂದ ಯಾವುದೂ ಲೆಕ್ಕಕ್ಕಿಲ್ಲ! ಮೃಗ ಕೂಡ ಮೆರೆಯಬಹುದಾದ ಜೀವಕಾರುಣ್ಯ ಮನುಷ್ಯನಲ್ಲಿ ಮರೆಯಾಗುತ್ತಿದೆ ಎನ್ನುವುದೇ ನಿಜ.

ದಕ್ಷಿಣಕನ್ನಡದ್ದು ಒಂದು ವಿಲಕ್ಷಣ ಸ್ಥಿತಿ. ನಮಗೆ ಈ ಸ್ಥಿತಿಯಿಲ್ಲದ ಕಡೆಯ ಜನ ಹೇಗೆ ನಮ್ಮನ್ನು ಕಾಣುತ್ತಾರೆ ಎನ್ನುವುದು ಗೊತ್ತಿದೆ. ಇಲ್ಲಿಯ ಪ್ರತಿರೋಧ, ಜಾಗೃತಿಗಳೆಲ್ಲ ಕಾಣುತ್ತಿವೆ. ಹೊರಗಿನ ಮಂದಿ ಹೇಗೆ ಜನಾಭಿಪ್ರಾಯ ರೂಢಿಸಲು ಹೆಣಗುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತಿದೆ. ಎಲ್ಲ ಕಡೆಯ ಸೋಲು ಮತ್ತು ಗೆಲುವುಗಳು ಅರ್ಥವಾಗುತ್ತಿವೆ. ಆದರೆ ದೂರದ ಒಂದು ಸ್ಪಷ್ಟ ನೋಟ, ತೀರ ಸನಿಹದ ಸ್ವಲ್ಪ ಅಸ್ಪಷ್ಟ ನೋಟಗಳ ನಡುವೆ ನಮ್ಮ ಕಣ್ಣಿಗೆ ಕಾಣದೇ ಉಳಿದ ಕೆಲವು ಸಂಗತಿಗಳು ಸಹ ಇವೆ. ಕಾಣಲು ನಾವು ಸೋತ ಘಳಿಗೆಗಳಿವೆ, ಇಲ್ಲಿನ ಮಂದಿ ಕಾಣಲಾರದೇ ಹೋದದ್ದೂ ಇದೆ. ಆ ದೃಷ್ಟಿಯನ್ನು ಯಾರಾದರೂ ಕೊಡಲು ಸಾಧ್ಯವಿದೆಯೆ? ಮನೆಯೊಳಗೆ ಒಬ್ಬರಿಗೆ ಮಾನಸಿಕ ಸಮಸ್ಯೆಯಿದೆ ಎಂದ ಮಾತ್ರಕ್ಕೆ ನಾನದನ್ನು ಕಸದಂತೆ ಹೊರಗೆ ಎಸೆದು ಬಿಡಲು ಸಾಧ್ಯವೆ? ಸದಾ ಕಾಲ ಅಪಾರ ಸಹನೆಯಿಂದ ಸುಮ್ಮನಿರಲು ಸಾಧ್ಯವೆ? ಮನೆ ಎಂದ ಮೇಲೆ ನಾಲ್ಕು ಮಂದಿ ಇರುತ್ತಾರೆ, ಎಲ್ಲರಲ್ಲೂ ಎಲ್ಲ ಕಾಲದಲ್ಲೂ ಅಂಥ ಸಹನೆಯನ್ನು ನಿರೀಕ್ಷಿಸಲು ಸಾಧ್ಯವೆ? ಮದ್ದು ಮಾಡಿ ಎನ್ನುತ್ತೀರಲ್ಲ, ಅದೆಲ್ಲ ಅಷ್ಟು ಸರಳವೆ?

ಮೃತ್ಯುಪ್ರಜ್ಞೆ ಎನ್ನುವುದು ನಮ್ಮಲ್ಲಿ ಜಾಗೃತಗೊಳಿಸುವ ಪ್ರಶ್ನೆಗಳು ನಿಜಕ್ಕೂ ಭಯಂಕರವಾಗಿರುತ್ತವೆ. ಅದಕ್ಕೆ ನಮ್ಮ ಅಸ್ತಿತ್ವವನ್ನೇ ಅಲುಗಾಡಿಸಬಲ್ಲಂಥವರ ಒಂದು ಸಾವು ಮಾತ್ರ ಕಾರಣವಾಗಬಲ್ಲುದು. ಅದೂ ಕೂಡ ಆತ್ಮಹತ್ಯೆಯಾಗಿದ್ದರೆ ಇನ್ನೂ ಭಯಂಕರವಾಗಿರುತ್ತದೆ. ಇಲ್ಲಿ ಪ್ರಸಾದ್ ಹೊಸಬೆಟ್ಟು ಎಂಬ ಪಾತ್ರ, ಪತ್ರಕರ್ತೆ ಪಾಂಚಾಲಿಯ ತಮ್ಮ ಆತ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದು ಅಪ್ಪ ಅಮ್ಮಂದಿರಾದ ರಾಘಣ್ಣ, ಸರೋಜಿನಿಯರೂ ಸೇರಿದ ಈ ಕುಟುಂಬದ ಮುಂದಿನ ದಿನಚರಿಯನ್ನು ನಿರ್ಧರಿಸುತ್ತದೆ. ಎಂಥ ಪಲ್ಲಟವಿದು ನೋಡಿ. ಹಿಂದಿನ ದಿನದ ತನಕ ಬೆಳಗಾಗುವ, ಎಚ್ಚರಗೊಳ್ಳುವ, ಟಿಫನ್ ಮಾಡುವ, ಮನೆಯಿಂದ ಹೊರಡುವ ವ್ಯಾಕರಣವೇ ಬೇರೆಯಿರುತ್ತದೆ. ಸಾವಿನ ನಂತರದ ಪ್ರತಿದಿನವೂ ಮತ್ತೆಂದೂ, ಯಾವುದೂ ಆ ಹಿಂದಿನ ಕ್ರಮದಲ್ಲಿರುವುದೇ ಇಲ್ಲ. ಇದ್ದರೂ ಅದು ಹಿಂದಿನಂತಿರುವುದೇ ಇಲ್ಲ. ಹಾಗೆಯೇ ಆ ಮನೆಯಲ್ಲಿ ಬದುಕುವ ಪ್ರತಿಯೊಬ್ಬರ ಮನಸ್ಸಿನ ವ್ಯಾಕರಣವೂ. ಪ್ರತಿಯೊಬ್ಬರ ಬದುಕಿನ ಅರ್ಥವೂ. ಪ್ರತಿಯೊಬ್ಬರ ಗತಕಾಲದ ಬದುಕಿನ ವ್ಯಾಖ್ಯಾನವೂ.

ಇದನ್ನು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲಿ ನಾವು ಚೈತನ್ಯನನ್ನು, ಕಲ್ಮಾಡಿಯನ್ನು, ಪಡುಕೋಣೆಯನ್ನು ಕಾಣುತ್ತೇವಲ್ಲ, ನಮ್ಮ ಆ ಕಾಣುವ ದೃಷ್ಟಿ ಕೂಡ ಆ ಸಾವಿನ ನಂತರ ಬೇರೆಯೇ ಆಯಿತಲ್ಲ! ಎಲ್ಲಿಯ ತನಕ ನಮಗೆ ಕುಲಕರ್ಣಿಯ ಮಕ್ಕಳ ವಿದ್ಯಾಭ್ಯಾಸ, ಅವನ ಮನೆಯ ಸಮಸ್ಯೆಗಳೆಲ್ಲ ಗೊತ್ತಿರಲಿಲ್ಲವೋ ಅಲ್ಲಿಯ ತನಕ ನಮಗೆ ಅವನನ್ನು ತೂಗಿ ನೋಡಿ ತೀರ್ಮಾನಕ್ಕೆ ಬರುವುದು ಎಷ್ಟೊಂದು ಸುಲಭವಾಗಿರುತ್ತದೆ. ಆಮೇಲೆ ಇದ್ದಕ್ಕಿದ್ದಂತೆ ಏನಾಗಿಬಿಟ್ಟಿತು ನೋಡಿ! ಹೀಗೆ ಇಲ್ಲಿ ಪ್ರತಿ ಪಾತ್ರವನ್ನೂ ನಾವಿಲ್ಲಿ ಅನುಮಾನಿಸುತ್ತ, ಪ್ರಮಾಣಿಸುತ್ತ, ನಂಬುತ್ತ, ನಂಬಿ ಮೋಸ ಹೋಗುತ್ತ ಸಾಗುತ್ತೇವೆ. ಹಾಗಾಗಿ ಇಲ್ಲಿ ಬೆಳಕು ಯಾವುದು, ಬೆಂಕಿ ಯಾವುದು ಎಂದು ಅರ್ಥವಾಗುವ ಮೊದಲೇ ಸುಟ್ಟು ಬೂದಿಯಾಗಿರುತ್ತೇವೆ ಅಥವಾ ಬೆಳಕನ್ನೇ ಉಫ್ ಎಂದು ಆರಿಸಿಬಿಟ್ಟಿರುತ್ತೇವೆ!

ಸರೋಜಿನಿ ಹೇಳುತ್ತಾಳೆ:

`ನಿಮ್ಮಪ್ಪನಿಗೆ ಮಾತಾಡೋದಕ್ಕೆ ಬರೋದಿಲ್ಲ ಅಂದುಕೊಂಡಿದ್ದೆ. ಒಂದು ಸಲ ಅವರ ತಾಳಮದ್ದಲೆ ಚಿತ್ರಾಪುರ ದೇವಸ್ಥಾನದಲ್ಲೇ ಇತ್ತು. ನಾನೂ ಹೋಗಿದ್ದೆ. ಅದೊಂದು ತಾಳಮದ್ದಲೆ ನಾನು ಕೇಳಿರೋದು. ಅದರಲ್ಲಿ ನಿಮ್ಮಪ್ಪ ಭೀಮನ ಪಾತ್ರ ಮಾಡ್ತಿದ್ರು. ಕೀಚಕವಧೆ ಪ್ರಸಂಗ. ಕೀಚಕನಿಂದ ನನ್ನನ್ನು ಕಾಪಾಡು ಅಂತ ಹೇಳೋದಕ್ಕೆ ಬ್ರೌಪದಿ ರಾತ್ರೋರಾತ್ರಿ ಭೀಮನನ್ನು ಹುಡುಕಿಕೊಂಡು ಬರ್ತಾಳೆ. ಆಗ ಭೀಮ ಅವಳಿಗೆ ಸಮಾಧಾನ ಹೇಳ್ತಾನೆ. ನಿಮ್ಮಪ್ಪ ದ್ರೌಪದಿಗೆ ಮುಕ್ಕಾಲು ಗಂಟೆ ಸಾಂತ್ವನ ಹೇಳಿದರು. ಅವಳ ಹತ್ತಿರ ಪ್ರೀತಿಯ ಮಾತಾಡಿದ್ರು. ಅವಳನ್ನು ಓಲೈಸಿದ್ರು. ಆವತ್ತು ಎಷ್ಟು ಚೆನ್ನಾಗಿ ಮಾತಾಡಿದ್ರು ಅಂದರೆ ನನಗೆ ಮಾತೇ ಹೊರಡಲಿಲ್ಲ. ಅವತ್ತು ಮನೆಗೆ ಬಂದವಳಿಗೆ ನಿದ್ದೆಯೇ ಬರಲಿಲ್ಲ. ಅವನ್ಯಾರೋ ಅರವತ್ತು ದಾಟಿದ ಗಂಡಸು, ಪಂಚೆ ಉಟ್ಟುಕೊಂಡು, ಶಲ್ಯ ಹಾಕಿಕೊಂಡು ಕೂತಿದ್ದ. ಅವನೊಳಗೆ ದ್ರೌಪದೀನ ಕಲ್ಪಿಸಿಕೊಂಡು ಎಷ್ಟು ಅಕ್ಕರೆಯಿಂದ ಮಾತಾಡಿದ್ರು. ಎಷ್ಟು ಪ್ರೀತಿಯಿಂದ ಮಾತಾಡಿಸಿದ್ರು. ಆವತ್ತು ಮನೆಗೆ ಬಂದಾಗ ಅವರು ಭೀಮ ನಾನು ದ್ರೌಪದಿ ಅನ್ನಿಸಿ, ನಾನು ಮಾತಾಡಿಸಿದೆ. ನೀವು ನನ್ನ ಭೀಮ ಅಂತ ಹೇಳಿದೆ. ಗಂಟಲು ನೋವು, ಕಷಾಯ ಮಾಡಿಕೊಡು ಅಂದ್ರು. ನೀವು ಎಷ್ಟು ಚೆಂದ ಮಾತಾಡ್ತೀರಲ್ಲ ಅಂತ ಹೊಗಳಿದೆ. ಒಳಗೆ ಸೆಕೆ ಅಂತ ಎದ್ದು ಹೋಗಿ ಹೊರಗೆ ಮಲಗಿದರು. ಅವರು ಭೀಮನನ್ನು ಅಲ್ಲಿಯೇ ಬಿಟ್ಟು ಬಂದಿದ್ದರು'.

ನಾವೂ ನೀವೂ ಮನೆ ಮಂದಿಯೊಂದಿಗೆ ಸಾಮಾನ್ಯವಾಗಿ ಮತ್ತು ಪದೇ ಪದೇ ಅಡುವ ಮಾತುಗಳೇನಿರುತ್ತವೆ? ಕಾಫಿ ಕೊಡು, ಬಟ್ಟೆ ವಾಶ್ ಮಾಡಿದ್ಯಾ, ತಿಂಡಿ ಏನು ಮಾಡಿದ್ದೀ, ಬಟನ್ ಹೋಗಿದೆ ಅಂದಿದ್ದೆನಲ್ಲ, ಹೊಲಿದ್ಯಾ ಎನ್ನುವಂತವೇ ಅಲ್ಲವೆ? ಆದರೆ ಅದಕ್ಕೊಂದು ಶ್ರುತಿ ಇದೆಯಲ್ಲವೆ, ಅದನ್ನು ಕೇಳಿಸಿಕೊಂಡಿಲ್ಲವೆ ನೀವು? ಯಾರೋ ಅರವತ್ತು ದಾಟಿದ, ಪಂಚೆ ಉಟ್ಟುಕೊಂಡು ಶಲ್ಯ ಹಾಕಿಕೊಂಡು ಕೂತ ಗಂಡಸಿನಲ್ಲಿ ದ್ರೌಪದಿಯನ್ನು ಕಲ್ಪಿಸಿಕೊಂಡು ಮಾತನಾಡಬೇಕಾದರೆ ನಮ್ಮ ನಮ್ಮ ಮನೆಯೊಳಗಿನ ಮನದೊಳಗಿನ ದ್ರೌಪದಿಯ ಅಂತರಾತ್ಮವನ್ನು ಅರಿತಲ್ಲದೆ ಸಾಧ್ಯವೆ ಸರೋಜ?

ಕೇಳುವುದಿಲ್ಲ ರಾಘಣ್ಣ. ಅವಳಿಗೆ ಅರ್ಥವಾಗಿದ್ದು ಅಷ್ಟು, ಅಷ್ಟೇ ಸಾಕೆನಿಸಿದರೆ ಸಾಕು ಬಿಡು ಎಂದು ಸುಮ್ಮನಿದ್ದು ಬಿಡುತ್ತಾರೆ. ನಮಗೆಲ್ಲ ಸೃಜನಶೀಲವಾಗಿ ಒಂದು, ವೃತ್ತಿಪರವಾಗಿ ಒಂದು, ಮನೆಯೊಳಗಿನ ಸದಸ್ಯನಾಗಿ ಒಂದು ವ್ಯಕ್ತಿತ್ವ ಇರುವುದಿಲ್ಲ; ಇರುವುದೆಲ್ಲಾ ಒಂದೇ ವ್ಯಕ್ತಿತ್ವ. ಅದರದ್ದು ಇದಕ್ಕೆ ಇದರದ್ದು ಅದಕ್ಕೆ ಹರಿಯುತ್ತಲೇ ಇರುತ್ತದೆ. ಭೀಮನನ್ನು ಬೇಕೆಂದರೂ ಬಿಟ್ಟು ಬರಲು ಸಾಧ್ಯವಿಲ್ಲ ರಾಘಣ್ಣನಿಗೆ. ಅದು ಕಾಣಲಿಲ್ಲವೇ ಸರೋಜಿನಿಗೆ?

ಇದು ನಮ್ಮ ನಿಮ್ಮ ಮನೆಯ ಹೆಪ್ಪುಗಟ್ಟಿದ ಮೌನದಲ್ಲಿ, ಯಾವುದೋ ಕತ್ತಲೆಯ ಮೂಲೆ ಹಿಡಿದು ಕುಳಿತು ಬಿಡುತ್ತದೆ. ಯಾವುದೋ ಸಾವಿನ ನೋವಿನ ನೆನಪಿರುತ್ತದೆ ಅದರ ಬೆನ್ನ ತುಂಬ, ಅಂಟು ಸವರಿದಂತೆ. ಅದು ಅಲ್ಲಿಂದ ಏಳುವುದಿಲ್ಲ.

ಕಾದಂಬರಿಯ ಅಂತಃಸ್ಸತ್ವವೇ ಇದು ಅನಿಸಿಬಿಟ್ಟಿತು ನನಗೆ. ಬೀದಿಯಲ್ಲಿ ಮಚ್ಚು ಹಿಡಿದು ಅಟ್ಟಿಸಿಕೊಂಡು ಬರುವ ಒಬ್ಬ ಪುಂಡನಿಗೂ, ಹಸಿವಿನಿಂದಲೂ ಭಯದಿಂದಲೂ ಅಪಾಯಕಾರಿಯಾದ ಮನುಷ್ಯ ಮೃಗವನ್ನು ಕಚ್ಚಿ ಕೊಲ್ಲಲು ಎಗರಿ ಬರುತ್ತಿರುವ ಹುಲಿಗೂ ಮನೆಯಿದೆ. ಅವನಿಗೆ ಮನೆಯಲ್ಲೊಬ್ಬ ವಯಸ್ಸಾದ ತಾಯಿಯಿದ್ದಾಳೆ. ನನ್ನ ತಮ್ಮ ಎಂದು ಅಕ್ಕರೆಯಿಂದ, ಅಭಿಮಾನದಿಂದ ಕಾಯುವ ಅಕ್ಕನೋ, ತಂಗಿಯೋ ಇದ್ದಾಳೆ. ಹುಲಿ ವಾಪಾಸಾಗುವುದನ್ನು ಕಾಯುತ್ತಿರುವ ಮರಿಗಳಿವೆ. ಅಂತಃಕರಣ ಎಲ್ಲೆಲ್ಲೂ ಇದೆ, ಇದ್ದೇ ಇದೆ. ಹೊರಗೆ ನಮ್ಮದೇ ಸಾವು ನಮ್ಮನ್ನು ಅಂಗಳದಲ್ಲೇ ತಣ್ಣಗೆ ದರ್ಭೆಯ ಮೇಲೆ ಮಲಗಿಸಿ ಬಿಡಲು ಕಾಯುತ್ತಿದೆ. ನಡುವೆ ಮೃಗದ ತಾಂಡವ ನೃತ್ಯ.

ಮುಳ್ಳಿನ ಹಾಸಿಗೆಯ ಮೇಲೆ ಮಲಗಿ, ನಾನು ತಿಳಿದೋ ತಿಳಿಯದೆಯೋ ಯಾರೆಲ್ಲರ ಸಾವಿಗೆ ಪ್ರತ್ಯಕ್ಷ, ಪರೋಕ್ಷ ಕಾರಣ ಎಂದು ಮನಸ್ಸು ನೆನೆನೆನೆದು ಹಂಬಲಿಸಿ ನಿಡುಸುಯ್ಯುತ್ತಿರುವಾಗಲೂ ಆತ್ಮ ಉತ್ತರಾಯಣಕ್ಕೆ ಕಾಯುತ್ತಿರುತ್ತದೆ. ಬರುವುದೇ ಪುಣ್ಯಕಾಲ, ತೆರೆಯುವುದೇ ಸ್ವರ್ಗದ ಬಾಗಿಲು?

MORE FEATURES

ಪುಟ ತೆರೆದರೆ ಚೆಂದ ಚೆಂದದ ರೇಖಾಚಿತ್ರಗಳ ಅನಾವರಣ

29-12-2025 ಬೆಂಗಳೂರು

"ಲೇಖಕಿಯವರಿಗೆ ಅವರ ಮಗಳು ಕಾಳನನ್ನು ಗಂಟು ಹಾಕಿ ಗಂಡನ ಮನೆಗೆ ಹೋದಾಗ ಕಾಳನ ಬೆಪ್ಪುತನಗಳಿಂದ ತಲೆಚಿಟ್ಟು ಹಿಡಿದ ಲೇ...

ಈ ದೇಶದ ಮೂರನೆಯ ಒಂದು ಭಾಗ ಮಿಡಲ್ ಕ್ಲಾಸ್

29-12-2025 ಬೆಂಗಳೂರು

"ಎಲ್ಲರಿಗೂ ಅರ್ಥವಾಗುವ ಹಾಗೆ ಅಥವಾ ಮನೆ ಮಂದಿಯಲ್ಲೊಬ್ಬರಂತೆ ಸರಳ ಪದಗಳನ್ನೇ ಆರಿಸಿಕೊಂಡು ವಿವರಿಸಿ ಹೇಳುತ್ತಾರೆ. ...

ಬಾ ಕುವೆಂಪು ದರ್ಶನಕೆ; 210 ಪುಟಗಳ ಕೆನ್ವಾಸಿನಲ್ಲಿ ಕುವೆಂಪು ಕಾವ್ಯ ದರ್ಶನ

29-12-2025 ಬೆಂಗಳೂರು

ನರಹಳ್ಳಿಯವರು ಕುವೆಂಪು ಕಾವ್ಯದ ಭಾಗಗಳಿಗೆ ಕೊಡುವ ಶೀರ್ಷಿಕೆಗಳು  ಅರ್ಥಪೂರ್ಣ ಧ್ವನಿ ಪ್ರಚುರ ಆಗಿವೆ. ಇವು ಕುವೆಂಪ...