ನರಹಳ್ಳಿಯವರು ಕುವೆಂಪು ಕಾವ್ಯದ ಭಾಗಗಳಿಗೆ ಕೊಡುವ ಶೀರ್ಷಿಕೆಗಳು ಅರ್ಥಪೂರ್ಣ ಧ್ವನಿ ಪ್ರಚುರ ಆಗಿವೆ. ಇವು ಕುವೆಂಪು ಕಾವ್ಯದ ಬೆಳವಣಿಗೆಯ ಮೈಲಿಗಲ್ಲುಗಳು ಕೂಡಾ ಹೌದು. ಕುವೆಂಪು ಆತ್ಮಕಥನ ' ನೆನಪಿನ ದೋಣಿಯಲ್ಲಿ' ಯಿಂದ ಹೆಕ್ಕಿ ತೆಗೆದ ಸಾಂದರ್ಭಿಕ ವಿವರಗಳು ಇಲ್ಲಿನ ಕಥನಗಳಿಗೆ ಶಕ್ತಿಯನ್ನು ತುಂಬಿವೆ. ಎನ್ನುತ್ತಾರೆ ಹಿರಿಯ ಸಂಶೋಧಕರು,ವಿಮರ್ಶಕ ಬಿ .ಎ.ವಿವೇಕ ರೈ. ಅವರು ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ 'ಬಾ ಕುವೆಂಪು ದರ್ಶನಕೆ' ಕೃತಿಯ ಕುರಿತು ಬರೆದ ಸಾಲುಗಳು;
ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಅನನ್ಯ ಸಾಹಿತ್ಯ ಸಂಸ್ಕೃತಿ ವಿಮರ್ಶಕರು. ಅಪಾರವಾದ ಓದು,ಸೂಕ್ಷ್ಮ ಒಳನೋಟ,ಸಾಂಸ್ಕೃತಿಕ ನಿಲುವು, ಸಮತೋಲನದ ಸ್ಪಷ್ಟವಾದ ನುಡಿಗಟ್ಟು : ಇವು ಅವರ ವಿಮರ್ಶೆಯ ಶಕ್ತಿ ಬಾಹುಗಳು.ಅವರು ಸಾಹಿತ್ಯ ಕೃತಿಗಳನ್ನು ವಿಮರ್ಶೆ ಮಾಡುವಾಗ ಪಠ್ಯವನ್ನು ಸೂಕ್ಷ್ಮವಾಗಿ ಭಾಷಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಿಂದ ಪರಿಶೀಲಿಸುತ್ತಾರೆ.ಅದು ನವೋದಯದ ವಿವರಣೆಯ ಮಾದರಿ,ನವ್ಯದ ಪಠ್ಯ ವಿಶ್ಲೇಷಣೆಯ ಮಾದರಿ,ಬಂಡಾಯದ ಸಾಮಾಜಿಕ ಸಾಮಾನ್ಯೀಕರಣದ ಮಾದರಿ : ಇವುಗಳಿಗಿಂತ ಭಿನ್ನವಾದುದು.ಅವರ ವಿಮರ್ಶೆಯ ಭಾಷೆಯಲ್ಲಿ ಕಾವ್ಯ ಮತ್ತು ಕಥನಗಳ ಶೈಲಿಯ ಸೊಗಸು ಇರುತ್ತದೆ.ಆದ್ದರಿಂದಲೇ ಅದು ಓದುಗರಿಗೆ ಭಾರ ಎನ್ನಿಸುವುದಿಲ್ಲ, ಹಗುರ ಎನ್ನಿಸುವುದೂ ಇಲ್ಲ.ಅನೇಕ ಜ್ಞಾನಕ್ಷೇತ್ರಗಳ ಬೆಳಕಿನ ಸ್ಪರ್ಶ ಅವರ ವಿಮರ್ಶೆಯ ಬರವಣಿಗೆಯಲ್ಲಿ ಇರುತ್ತದೆ. ಅವರ ಬರವಣಿಗೆ ಅದು ಸಾಹಿತ್ಯದ ಪರಿಧಿಯನ್ನು ದಾಟಿಕೊಂಡು ಬೇರೆ ಕಡೆ ಸ್ಥಾಪನೆ ಆಗುವುದಿಲ್ಲ.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ 'ಬಾ ಕುವೆಂಪು ದರ್ಶನಕೆ: ಕುವೆಂಪು ಸಮಸ್ತ ಸಾಹಿತ್ಯ ಶೋಧ (ಅಭಿನವ,ಬೆಂಗಳೂರು;2019) ಇದು ಕುವೆಂಪು ಸಮಗ್ರ ಸಾಹಿತ್ಯ ಅಧ್ಯಯನದ 670 ಪುಟಗಳ ಹರಹಿನ ಅಪೂರ್ವ ಗ್ರಂಥ.
ಮಹಾಕವಿ ಕುವೆಂಪು ಅವರ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಒಂದೇಕಡೆ ತಂದು, ಅವುಗಳ ರಚನೆಯ ಕಾಲಘಟ್ಟ, ಆ ಕಾಲದ ಸಾಮಾಜಿಕ ಪರಿಸರ, ಸಾಹಿತ್ಯಕ ಹಿನ್ನೆಲೆ- ಇವನ್ನು ಗಮನಿಸಿಕೊಂಡು ಮರುಓದಿನ ನೆಲೆಯಲ್ಲಿ ವಿವರಿಸಿದ, ಸೂಕ್ಷ್ಮ ಅವಲೋಕನದ ಮೂಲಕ ಅವುಗಳ 'ದರ್ಶನ' ವನ್ನು ಹೊಸತಾಗಿ ಕಾಣಿಸಿದ ನರಹಳ್ಳಿ ಅವರ ಅಧ್ಯಯನದ ಮಾದರಿ ಕನ್ನಡ ಸಾಂಸ್ಕೃತಿಕ ವಿಮರ್ಶೆಗೆ ಹೊಸ ಆಯಾಮವನ್ನು ತಂದುಕೊಟ್ಟಿದೆ.ಈ ಗ್ರಂಥವು ಕುವೆಂಪು ಸಾಹಿತ್ಯದ ಒಳನೋಟಗಳನ್ನು ಕೊಡುವುದರ ಜೊತೆಗೆಯೇ ಕುವೆಂಪು ಬದುಕಿನ ಮಜಲುಗಳನ್ನು, ಅವರ ವೈಚಾರಿಕತೆಯ ಬೆಳವಣಿಗೆಯನ್ನು, ಅವರ ಚಿಂತನೆಯ ವಿನ್ಯಾಸಗಳನ್ನು ದರ್ಶಿಸುತ್ತದೆ.
ನರಹಳ್ಳಿ ತಮ್ಮ ಅಧ್ಯಯನದ 'ಅನುಕ್ರಮ' ವನ್ನು ನಾಟಕ,ಕಾವ್ಯ, ಕಥನ ಮತ್ತು ದರ್ಶನ ಎಂಬ ನಾಲ್ಕು ನೆಲೆಗಳಲ್ಲಿ ಕೊಡುತ್ತಾರೆ. ಈ ಅನುಕ್ರಮದಲ್ಲಿ ಈ ಗ್ರಂಥದ ಸಂರಚನೆ ಸ್ಪಷ್ಟವಾಗುತ್ತದೆ.' ನಾಟಕ' ಭಾಗದ ಪ್ರವೇಶ, ಸಾಂಸ್ಕೃತಿಕ ಸವಾಲುಗಳು, ರಂಗಪ್ರವೇಶ ಎನ್ನುವ ಕಿರು ಅಧ್ಯಾಯಗಳಲ್ಲಿ ತಮ್ಮ ಅಧ್ಯಯನದ ವೈಧಾನಿಕ ಸ್ವರೂಪವನ್ನು ಅವರು ಪ್ರಕಟಿಸುತ್ತಾರೆ.ಕುವೆಂಪು ಅವರು ಕನ್ನಡದಲ್ಲಿ ಆರಂಭದಲ್ಲಿ ಬರೆದವು ' ಮೋಡಣ್ಣನ ತಮ್ಮ' , ಮತ್ತೆ' ನನ್ನ ಗೋಪಾಲ' ಎಂಬ ಮಕ್ಕಳ ನಾಟಕಗಳು ಎಂಬ ಪ್ರಸ್ತಾವ ಬಹಳ ಮಹತ್ವದ್ದು.ಆ ನಾಟಕಗಳ ಒಳಗಡೆಯೇ ಕಾವ್ಯದ ಸಾಲುಗಳು ಬರುತ್ತವೆ.ಪ್ರತೀ ನಾಟಕದ ವಿಮರ್ಶೆಯ ಕೊನೆಯಲ್ಲಿ ನರಹಳ್ಳಿ ಕೊಡುವ ಟಿಪ್ಪಣಿಗಳು ಸರಳವಾಗಿ ಗಮನ ಸೆಳೆಯುತ್ತವೆ. " ' ನನ್ನ ಗೋಪಾಲ ' - ಮಗನೂ ಹೌದು ,ದೈವವೂ ಹೌದು'.
'ಯಮನ ಸೋಲು- ವಾಲ್ಮೀಕಿಯ ಭಾಗ್ಯ' ,' ಸ್ಮಶಾನ ಕುರುಕ್ಷೇತ್ರಂ', ' ಜಲಗಾರ- ಶೂದ್ರ ತಪಸ್ವಿ- ಬೆರಳ್ ಗೆ ಕೊರಳ್ ' ,' ಮಹಾರಾತ್ರಿ- ಚಂದ್ರಹಾಸ- ಬಲಿದಾನ- ಕಾನೀನ ' ,' ಬಿರುಗಾಳಿ- ರಕ್ತಾಕ್ಷಿ': ಹೀಗೆ ಕಿರು ಅಧ್ಯಾಯಗಳಲ್ಲಿ ಕುವೆಂಪು ನಾಟಕಗಳನ್ನು ಅಧ್ಯಯನ ಮಾಡಲಾಗಿದೆ. ಈ ನಾಟಕಗಳ ವಿವೇಚನೆಗಳ ಕೊನೆಯಲ್ಲಿ ಹೊಸ ಹೊಳಹುಗಳನ್ನು ನರಹಳ್ಳಿ ಕೊಡುತ್ತಾರೆ.' ವಾಲ್ಮೀಕಿಯ ಭಾಗ್ಯ' ದಲ್ಲಿ ಲಕ್ಷ್ಮಣನ ಕರ್ತವ್ಯ ಮತ್ತು ಮಾನವೀಯತೆಗಳ ದ್ವಂದ್ವದ ಪ್ರಸ್ತಾವ ಮಾಡುತ್ತಾರೆ." ' ಸ್ಮಶಾನ ಕುರುಕ್ಷೇತ್ರಂ' ನಾಟಕದ ವಿಶಿಷ್ಟಾನುಭವ ನಮ್ಮ ಭವಿಷ್ಯವನ್ನು ಹಸನುಗೊಳಿಸಲು ಅಗತ್ಯ ಪರಿಕರಗಳನ್ನು ಒದಗಿಸುತ್ತದೆ" ಎನ್ನುತ್ತಾರೆ. ಗಾಂಧೀಜಿ, ಪರಮಹಂಸ, ವಿವೇಕಾನಂದ, ಕರ್ಮಸಿದ್ಧಾಂತ ,ಆಧುನಿಕ ಶಿಕ್ಷಣದ ಫಲಿತವಾಗಿ ಬದಲಾಗುತ್ತಿದ್ದ ಸಾಮಾಜಿಕ ಪರಿಸರ ,ಶೂದ್ರ ಚಳುವಳಿ- ಇವೆಲ್ಲವೂ ತರುಣ ಕುವೆಂಪು ವ್ಯಕ್ತಿತ್ವವನ್ನು ಏಕಕಾಲದಲ್ಲಿ ಪ್ರಭಾವಿಸಿದ ಸಂಗತಿಗಳು. ಈ ಎಲ್ಲದರ ದಟ್ಟ ಪರಿಣಾಮ- ' ಜಲಗಾರ' ನಾಟಕದಲ್ಲಿದೆ ಎನ್ನುವ ಅಭಿಪ್ರಾಯವನ್ನು ಕೊಡುತ್ತಾರೆ. ಹೆಚ್ಚು ಚರ್ಚೆಗೆ ಒಳಗಾದ ' ಶೂದ್ರ ತಪಸ್ವಿ' ಮತ್ತು' ಬೆರಳ್ಗೆ ಕೊರಳ್ ' ಗಳ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಲಾಗಿದೆ.ಏಕಲವ್ಯನ ಸುತ್ತ ಹೆಣೆದ ' ಬೆರಳ್ಗೆ ಕೊರಳ್' ಕನ್ನಡ ಸಾಹಿತ್ಯದಲ್ಲಿ ವರ್ಣಭೇದ ನೀತಿಯ ಚರ್ಚೆಯಲ್ಲಿ ನಿರಂತರ ಸ್ಥಾನವನ್ನು ಪಡೆದಿದೆ. ಇತರ ನಾಟಕಗಳಿಗಿಂತ ' ಬಿರುಗಾಳಿ' ' ರಕ್ತಾಕ್ಷಿ' ನಾಟಕಗಳ ಬಗ್ಗೆ ನಡೆದ ವಿಮರ್ಶಕರ ಚರ್ಚೆಗಳನ್ನು ನರಹಳ್ಳಿ ಕ್ರೋಢೀಕರಿಸಿ, ತಮ್ಮ ಒಳನೋಟಗಳನ್ನು ಕೊಡುತ್ತಾರೆ " ಸಂಸ್ಕೃತಿ ಸಂಘರ್ಷ - ಅವರ ಬಹುಪಾಲು ನಾಟಕಗಳಲ್ಲಿ ಕಂಡುಬರುವ ವೈಚಾರಿಕ ಆಕೃತಿ " ಎನ್ನುವ ಅಭಿಪ್ರಾಯ ಮುಖ್ಯವಾದದ್ದು.
ಕುವೆಂಪು ಮತ್ತು ಕಾವ್ಯ : ಎರಡೂ ಅವಿನಾಭಾವ ಸಂಬಂಧ ಉಳ್ಳವು. ಭಾವಗೀತೆ, ಕಥನಕಾವ್ಯ, ಮಹಾಕಾವ್ಯ - ಹೀಗೆ ಎಲ್ಲಾ ಪ್ರಕಾರಗಳಲ್ಲಿ ತಮ್ಮ ವಿಶಿಷ್ಟ ಗುರುತುಗಳನ್ನು ಮುದ್ರಿಸಿದ ಕುವೆಂಪು ಕಾವ್ಯದ ಬಗ್ಗೆ ಬರೆಯುವುದು ವಿಮರ್ಶಕರಿಗೆ ದೊಡ್ಡ ಸವಾಲು. ಬಾಲಸುಬ್ರಹ್ಮಣ್ಯ ಈ ಸವಾಲನ್ನು ಸ್ವೀಕರಿಸಿ 210 ಪುಟಗಳ ಕೆನ್ವಾಸಿನಲ್ಲಿ ಕುವೆಂಪು ಕಾವ್ಯ ದರ್ಶನವನ್ನು ವಿಶಿಷ್ಟವಾಗಿ ಮಾಡಿದ್ದಾರೆ.
ನರಹಳ್ಳಿಯವರು ಕುವೆಂಪು ಕಾವ್ಯದ ಭಾಗಗಳಿಗೆ ಕೊಡುವ ಶೀರ್ಷಿಕೆಗಳು ಅರ್ಥಪೂರ್ಣ ಧ್ವನಿ ಪ್ರಚುರ ಆಗಿವೆ. ಇವು ಕುವೆಂಪು ಕಾವ್ಯದ ಬೆಳವಣಿಗೆಯ ಮೈಲಿಗಲ್ಲುಗಳು ಕೂಡಾ ಹೌದು. ಕುವೆಂಪು ಆತ್ಮಕಥನ ' ನೆನಪಿನ ದೋಣಿಯಲ್ಲಿ' ಯಿಂದ ಹೆಕ್ಕಿ ತೆಗೆದ ಸಾಂದರ್ಭಿಕ ವಿವರಗಳು ಇಲ್ಲಿನ ಕಥನಗಳಿಗೆ ಶಕ್ತಿಯನ್ನು ತುಂಬಿವೆ: ' ನಾಂ ಸಾಹಿತ್ಯ ರಂಗದಲಿ ಏಕಾಂಗಿ',' ನಿನ್ನ ಪುಣ್ಯ ಸಂಗ ಲಭಿಸೆ ಧನ್ಯನಾದೆನು', ' ನಾಡಿನ ಜನರೊಲಿದಾಲಿಪುದು',' ವಿಪ್ಲವ ಮೂರ್ತಿಯ ಸಖನಾಗಿಹೈ','ಶ್ರೀ ಸಾಮಾನ್ಯವೆ ಭಗವನ್ ಮಾನ್ಯಂ',' ಸೃಷ್ಟಿ ಮುಖ ಪರಮಸುಖ',' ಪ್ರೇಮೋಪನಿಷತ್ತು','ಹೊಸ ಬಾಳಿನ ಗೀತೆ','ವಿಯದ್ವಿಲಾಸದ ಹಂಬಲ','ಬರಿ ಕಥೆಯಲ್ತು ; ಕಥೆ ತಾಂ ನಿಮಿತ್ತ ಮಾತ್ರಂ'.
ನರಹಳ್ಳಿ ಅವರು ಕುವೆಂಪು ಕಾವ್ಯ ಚರ್ಚೆಯನ್ನು ಮಿಶೆಲ್ ಫ್ಯೂಕೋನ 'ಸಾಂಸ್ಕೃತಿಕ ಅಧಿಕಾರ' ದ ಪರಿಕಲ್ಪನೆಯ ಚರ್ಚೆಯಿಂದ ಆರಂಭಿಸುತ್ತಾರೆ." ಕುವೆಂಪು ಸಾಹಿತ್ಯ ರಂಗವನ್ನು'ಏಕಾಂಗಿ' ಯಾಗಿ ಪ್ರವೇಶಿಸಿದರು.ಯಾವ ಆದರ್ಶ, ಮಾರ್ಗದರ್ಶನವಿಲ್ಲದೆ ತಮ್ಮ ಅಂತಃಶಕ್ತಿಯನ್ನೇ ನೆಮ್ಮಿ ಬರೆಯಲಾರಂಭಿಸಿದರು" ಎನ್ನುವ ಮಾತನ್ನು ಹೇಳುತ್ತಾರೆ.' ಕೊಳಲು ' ಸಂಕಲನದ ' ಗೊಲ್ಲನ ಬಿನ್ನಹ' ಕವನದ ಸಾಲುಗಳನ್ನು ಉಲ್ಲೇಖಿಸುತ್ತಾರೆ.ಕುವೆಂಪು ಮೊದಲ ಕವನಸಂಕಲನ' ಕೊಳಲು' ಬಗ್ಗೆ ವಿಸ್ತೃತವಾದ ಚರ್ಚೆ ಇದೆ.ವಸಾಹತುಶಾಹಿಗೆ ವಿರುದ್ಧದ ಧ್ವನಿ,ಬಹುಮುಖಿ ಸಂಸ್ಕೃತಿಯ ನಾಶದ ಆತಂಕ,ಶ್ರಮಸಂಸ್ಕೃತಿಯ ಪ್ರತೀಕವಾದ ರೈತನನ್ನು ಕಾವ್ಯದ ಪ್ರಧಾನ ಭೂಮಿಕೆಗೆ ತಂದದ್ದು ,ಉಪಭೋಗ ಸಂಸ್ಕೃತಿಯ ಬಗ್ಗೆ ಅಸಹನೆ,ಸ್ಪಷ್ಟವಾದ ಆತ್ಮಪ್ರತ್ಯಯ: ಇಂತಹ ಗುಣಗಳನ್ನು ಎತ್ತಿತೋರಿಸಲಾಗಿದೆ.
'ಪಾಂಚಜನ್ಯ' ಸಂಕಲನದ ಕವನಗಳ ವಿಮರ್ಶೆ ಯಲ್ಲಿ ನರಹಳ್ಳಿ ಅವರು ಕುವೆಂಪು ' ಸಾಮಾಜಿಕ ಪ್ರಜ್ಞೆ' ಯ ಸ್ವರೂಪವನ್ನು ಚರ್ಚಿಸುತ್ತಾರೆ.' ವಿಪ್ಲವಮೂರ್ತಿಯ ಸಖನಾಗಿಹನೈ , ಕವಿಗರಸುಗಿರಸುಗಳ ಋಣವಿಲ್ಲ! ಅವನಗ್ನಿಮುಖಿ ಪ್ರಳಯಸಖಿ!"" ನೂರು ದೇವರನೆಲ್ಲ ನೂಕಾಚೆ ದೂರ,ಭಾರತಾಂಬೆಯೆ ದೇವಿ ನಮಗಿಂದು ಬಾರ" " ಧನಿಕರ ಮನೆಗಳು ಒಂದೆಡೆ ನಿಂತಿವೆ, ಬಡವರ ಗುಡಿಸಲು ಒಂದೆಡೆ ನಿಂತಿವೆ " -ಇಂತಹ ಅನೇಕ ಕವನಗಳ ವಿವರವಾದ ವಿಶ್ಲೇಷಣೆಯ ಮೂಲಕ ನರಹಳ್ಳಿ ಯವರ ಈ ಹೇಳಿಕೆ ಮುಖ್ಯವಾದುದು:" ಕುವೆಂಪು ಕಾವ್ಯದಲ್ಲಿ ಹೋರಾಟ ಎರಡು ನೆಲೆಯಲ್ಲಿ ಕಾಣಿಸುತ್ತದೆ. ಒಂದು, ರಾಷ್ಟ್ರೀಯತೆ ಯ ಧಾರೆ, ಮತ್ತೊಂದು ಸಾಮಾಜಿಕ ಅಸಮಾನತೆಯ ವಿರುದ್ದದ ದನಿ."
'ಶ್ರೀ ಸಾಮಾನ್ಯ'ವೆ ಭಗವನ್ ಮಾನ್ಯಂ"ಎನ್ನುವ ಶೀರ್ಷಿಕೆಯ ವ್ಯಾಪ್ತಿಯಲ್ಲಿ ರೈತರ ಬದುಕಿನ ಬಗ್ಗೆ ಕುವೆಂಪು ಅವರ ಜೀವಪರ ದೃಷ್ಟಿಯ ವಿವೇಚನೆಯನ್ನು ಮಾಡಲಾಗಿದೆ.ಕುಳದ ಕಲಿಗೆ,ಗೊಬ್ಬರ, ರೈತನ ದೃಷ್ಟಿ, ನೆರೆ,ಮಂಜಣ್ಣ ಹೇಳಿದ ಸ್ಥಳಗತೆ,ಕರಿಸಿದ್ಧ,ಕಿಟ್ಟಯ್ಯ ಮುಂತಾದ ಕವನಗಳನ್ನು ಬಳಸಿಕೊಳ್ಳಲಾಗಿದೆ.' ನೇಗಿಲಯೋಗಿ' ಯನ್ನು ರೈತಬದುಕಿನ ' ಆಶಾಮೂರ್ತಿ' ಯಂತೆ ಕಾಣುವ ಕುವೆಂಪು ಸಮಾಜ ದರ್ಶನದ ವಿವೇಚನೆ ಈ ಅಧ್ಯಾಯದ ಮಹತ್ವದ ಅಂಶ.
'ಸೃಷ್ಟಿ ಮುಖ ಪರಮಸುಖ' ಕುವೆಂಪು ಅವರ ಪ್ರಕೃತಿ ಕವನಗಳ ಅಧ್ಯಯನ.ಅವರ ಜನಪ್ರಿಯ ಪ್ರಕೃತಿ ಕವನಗಳ ಸಾಲುಗಳು: " ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ; ಮಲೆಯ ನಾಡಿಗೆ ,ಮಳೆಯ ಬೀಡಿಗೆ ,ಸಿರಿಯ ಚೆಲುವಿನ ರೂಢಿಗೆ"
" ಆನಂದಮಯ ಈ ಜಗಹೃದಯ
ಏತಕೆ ಭಯ ? ಮಾಣೊ
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ"
"ದೇವರು ರುಜು ಮಾಡಿದನು
ರಸವಶವಾಗುತ ಕವಿ ಅದ ನೋಡಿದನು"
" ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸತಾನ ಸ್ನಾನದಲಿ"
ಇಂತಹ ಕುವೆಂಪು ಅವರ ಅನೇಕ ಪ್ರಕೃತಿ ಕವನಗಳನ್ನು ನರಹಳ್ಳಿ ವಿವರಿಸುತ್ತಾ ಅವುಗಳ ತಾತ್ವಿಕ ನೆಲೆಯನ್ನು ಶೋಧಿಸುತ್ತಾರೆ.
'ಪ್ರೇಮೋಪನಿಷತ್ತು' ಭಾಗದಲ್ಲಿ ಕುವೆಂಪು ಅವರ ಪ್ರೇಮಕವನಗಳ ವಿಶ್ಲೇಷಣೆ ಇದೆ.' ಹೊಸ ಬಾಳಿನ ಗೀತೆ' ಭಾಗದಲ್ಲಿ ಆಧುನಿಕ ಕಾಲದ ನಿರೀಕ್ಷೆಗಳು,ಪಲ್ಲಟಗಳು,ಆತಂಕಗಳು ಆಶಯಗಳು ಮುಂತಾದ ನೆಲೆಗಳಲ್ಲಿ ಕವನಗಳನ್ನು ಪರಿಭಾವಿಸಲಾಗಿದೆ.ಕುವೆಂಪು ಅವರ ವೈಚಾರಿಕ ಕವನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ:
" ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ
ಬಡತನವ ಬುಡಮುಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯಬನ್ನಿ"
"ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು
ಎಂಬ ನವಯುಗವಾಣಿ ಘೋಷಿಸಿದೆ ಕೇಳಿ"
ಪ್ರಭುತ್ವ ಮತ್ತು ಪುರೋಹಿತಶಾಹಿಯನ್ನು ಕುವೆಂಪು ಅವರು ಪ್ರತಿರೋಧಿಸಿದ ಕವನಗಳ ಚರ್ಚೆಯನ್ನು ಇಲ್ಲಿ ವಿವರವಾಗಿ ನಡೆಸಿದ್ದಾರೆ.
ಕನ್ನಡ ಭಾಷೆಯನ್ನು ಕುರಿತ ಕುವೆಂಪು ಅವರ ಅಭಿಮಾನ ಮತ್ತು ಸ್ಪಷ್ಟ ನಿಲುವು ಅನೇಕ ಕವಿತೆಗಳಲ್ಲಿ ಕಾಣಿಸಿಕೊಂಡಿದೆ.' ಬಾರಿಸು ಕನ್ನಡ ಡಿಂಡಿಮ' ದಂತಹ ಕವನಗಳು ಕನ್ನಡಿಗರ ಮನೆಮಾತಾಗಿ ಉಳಿದುದು ಅವುಗಳ ಗಟ್ಟಿ ನಿಲುವಿನಂದಾಗಿ.ಕುವೆಂಪು ಅವರ' ಜಯಹೇ ಕರ್ನಾಟಕ ಮಾತೆ' ಕವನದ ಆರಂಭದ ರೂಪ ಮತ್ತು ಬಳಿಕ ಕುವೆಂಪು ಪರಿಷ್ಕೃತ ರೂಪವನ್ನು ನರಹಳ್ಳಿ ಹೋಲಿಸಿ ಚರ್ಚಿಸುತ್ತಾರೆ. ಅದು ನಾಡಗೀತೆಯಾಗಿ ರೂಪುಗೊಂಡ ಪ್ರಕ್ರಿಯೆಯನ್ನು ವಿವರಿಸುತ್ತಾರೆ.
'ವಿಯದ್ವಿಲಾಸ ಹಂಬಲ' ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದ ಪೂರ್ವದ ರಚನೆ ' ಚಿತ್ರಾಂಗದಾ' ಖಂಡಕಾವ್ಯದ ವಿವರವಾದ ವಿಮರ್ಶೆ ಇದೆ.ವಸ್ತು, ಛಂದಸ್ಸು, ಮಹಾಕಾವ್ಯದ ಕಲ್ಪನೆಯ ಕುರಿತಾದ ಮುನ್ನೋಟದ ಪ್ರಸ್ತಾವನೆ ಇದೆ.ಇದರ ಮುಂದುವರಿಕೆಯೇ ಕುವೆಂಪು ಮಹಾಕಾವ್ಯ' ಶ್ರೀ ರಾಮಾಯಣ ದರ್ಶನಂ'.ಇದರ ವಿದ್ವತ್ ಅವಲೋಕನವನ್ನು ನರಹಳ್ಳಿ ಯವರು' ಬರಿ ಕಥೆಯಲ್ತು ; ಕಥೆ ತಾಂ ನಿಮಿತ್ತ ಮಾತ್ರಂ' ಎನ್ನುವ ಶೀರ್ಷಿಕೆಯ ವ್ಯಾಪ್ತಿಯಲ್ಲಿ ಮಾಡುತ್ತಾರೆ. ಇಡೀ ಮಹಾಕಾವ್ಯವನ್ನು ವಿಭಿನ್ನ ಕತೆಗಳ ಸರಣಿಯ ರೂಪದಲ್ಲಿ ಕಾಣುತ್ತಾರೆ. " ರಾಮನ ಕತೆಯನ್ನು ಕತೆಯ ಚೌಕಟ್ಟಿನಲ್ಲಿ ಉಳಿಸಿಕೊಂಡು ಕುವೆಂಪು ಆ ಮೂಲಕ ಮಂಥರೆಯ ಕತೆಯನ್ನು ,ಊರ್ಮಿಳೆಯ ಕತೆಯನ್ನು, ವಾಲಿಯ ಕತೆಯನ್ನು, ಅನಲೆಯ ಕತೆಯನ್ನು, ಮಾರೀಚನ ಕತೆಯನ್ನು, ರಾವಣನ ಕತೆಯನ್ನು- ಹೀಗೆ ಅನೇಕ' ಕತೆ' ಗಳನ್ನು ಹೇಳುತ್ತಾರೆ. " ಈ ಬಹುಮುಖೀ ಕಥನದ ಸ್ವರೂಪವೇ ರಾಮಾಯಣ ದರ್ಶನದ ವೈಶಿಷ್ಟ್ಯ " ಎನ್ನುವ ನರಹಳ್ಳಿ ಹೇಳಿಕೆ ಮಹತ್ವದ್ದು.
'ಕಥನ' ಭಾಗವು ಕುವೆಂಪು ಅವರ ಮಕ್ಕಳ ಕತೆಗಳು, ಮಲೆನಾಡಿನ ಚಿತ್ರಗಳು, ಸಣ್ಣ ಕತೆಗಳು ಇವುಗಳ ಅಧ್ಯಯನದ ಹಿನ್ನೆಲೆಯಲ್ಲಿ ಅವರ ಮಹಾಕಾದಂಬರಿಗಳಾದ ' ಕಾನೂರು ಹೆಗ್ಗಡಿತಿ' ಮತ್ತು' ಮಲೆಗಳಲ್ಲಿ ಮದುಮಗಳು' ಕೃತಿಗಳನ್ನು ಮರುಮೌಲ್ಯಮಾಪನಕ್ಕೆ ಒಳಗುಮಾಡುವ ಉದ್ದೇಶವನ್ನು ಹೊಂದಿದೆ.ಆದ್ದರಿಂದ ಇಲ್ಲಿ ಈ ಎಲ್ಲ ಕಥನಪ್ರಕಾರಗಳ ರಚನೆಗಳ ಕಾಲ,ಸ್ಥಳ ಮತ್ತು ಪರಿಸರಗಳ ಸಂಬಂಧವನ್ನು ಚರ್ಚಿಸಲಾಗಿದೆ. ವಸಾಹತುಶಾಹಿ ಸಂದರ್ಭದಲ್ಲಿ ಕುವೆಂಪು ಅವರ ಪ್ರತಿಕ್ರಿಯೆಯ ಮಾದರಿಗಳನ್ನು ಪರಿಶೀಲಿಸಲಾಗಿದೆ.' ಕಥನ' ಎಂಬ ಪರಿಕಲ್ಪನೆಯನ್ನು ಮರು ನಿರ್ವಚನ ಮಾಡಲಾಗಿದೆ. ಹೆಜೆಮನಿಯ ನೆಲೆಗಳನ್ನು ಶೋಧಿಸಲಾಗಿದೆ.ಕಥನವೊಂದನ್ನು ಕಟ್ಟುವುದರ ಹಿಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಗಮನಿಸಲಾಗಿದೆ.ನರಹಳ್ಳಿ ಅವರು ಕುವೆಂಪು ಕಥನವನ್ನು ಅರ್ಥೈಸುವ ಬಗೆ ಹೊಸತಾದುದು.ಕುವೆಂಪು ಅವರ ಎಲ್ಲಾ ಕತೆಗಳ ಸಮಗ್ರ ವಿಮರ್ಶೆ ಈ ಗ್ರಂಥದ ಹೆಗ್ಗಳಿಕೆ.
ಬಹು ಚರ್ಚಿತವಾದ ಕುವೆಂಪು ಅವರ ಎರಡು ಕಾದಂಬರಿಗಳು- ' ಕಾನೂರು ಹೆಗ್ಗಡಿತಿ' ' ಮಲೆಗಳಲ್ಲಿ ಮದುಮಗಳು' ಕಾದಂಬರಿಗಳ ಬಗ್ಗೆ ಈವರೆಗೆ ನಡೆದಿರುವ ಮುಖ್ಯ ಚರ್ಚೆಗಳನ್ನು ಗಮನಿಸಿಕೊಂಡು ೧೦೪ ಪುಟಗಳ ವಿಶಾಲ ಹರಹಿನಲ್ಲಿ ವಿಮರ್ಶೆ ಮಾಡಲಾಗಿದೆ.ಬ್ರಾಹ್ಮಣ- ಶೂದ್ರ ,ಶೂದ್ರ-ಹಿಂದುಳಿದ- ದಲಿತ,ಗಂಡು - ಹೆಣ್ಣು- ಇಂತಹ ಸಂಬಂಧಗಳ ಪಾತ್ರಗಳ ಕ್ರಿಯೆ ಮತ್ತು ಭಾಷೆಯನ್ನು ಕುರಿತು ಅವಲೋಕನವಿದೆ.ಕ್ರೈಸ್ತ ಧರ್ಮಕ್ಕೆ ಮತಾಂತರದ ಸನ್ನಿವೇಶದ ವಿವರಣೆ ಇದೆ.ವಸಾಹತುಶಾಹಿ ಪ್ರಭಾವದ ಸೂಕ್ಷ್ಮ ಪದರಗಳ ಅನಾವರಣವಿದೆ.ಎರಡೂ ಕಾದಂಬರಿಗಳ ಕೆಲವು ಅಲಕ್ಷಿತ ಸನ್ನಿವೇಶಗಳನ್ನು ಮರುಓದಿಗೆ ಬಳಸಲಾಗಿದೆ.ಈಗಾಗಲೇ ಚರ್ಚಿತವಾದ ಪಾತ್ರಗಳನ್ನು ಕುರಿತು ಹೊಸಮಾತುಗಳನ್ನು ಹೇಳಲಾಗಿದೆ.
ಈ ಕೃತಿಯ ಕೊನೆಯ ಭಾಗ ' ದರ್ಶನ'.ಅದರ ವ್ಯಾಪ್ತಿಯಲ್ಲಿ ' ನಿರಂಕುಶಮತಿ',' ಭೂಮಿಯಲಿ ಬೇರೂರಿ ಬಾನೆಡೆಗೆ ತಲೆಯೆತ್ತಿ',' ಸಾಂಸ್ಕೃತಿಕ ಕರ್ನಾಟಕ',' ನಿನ್ನೊಳಗಿಹ ಕಲೆಗೆ ಶಕ್ತಿಯಿದೆ', 'ನಾಲ್ಪೇ ಸುಖಮಸ್ತಿ',' ಕಾವ್ಯಸೃಷ್ಟಿಯ ನಿಗೂಢತೆ' ಮತ್ತು' ದರ್ಶನ ಮೀಮಾಂಸೆ' ಎಂಬ ಅಧ್ಯಾಯಗಳಿವೆ.ಕುವೆಂಪು ಅವರ ಸಾಹಿತ್ಯದಲ್ಲಿ ' ದರ್ಶನ' ಎನ್ನುವ ಪರಿಕಲ್ಪನೆಗೆ ವಿಶಾಲವಾದ ಅರ್ಥಪರಂಪರೆ ಇದೆ.ವೈಚಾರಿಕತೆ, ವೈಜ್ಞಾನಿಕತೆ,ಅಧ್ಯಾತ್ಮ- ಇವು ಎಲ್ಲವೂ' ದರ್ಶನ' ದ ವ್ಯಾಪ್ತಿಯಲ್ಲಿ ಬರುತ್ತವೆ.' ಅವರಲ್ಲಿ ಆತ್ಮಶ್ರೀ ಮತ್ತು ವಿಚಾರ ಕ್ರಾಂತಿ ಜೊತೆಜೊತೆಯಾಗಿ ಸಾಗುತ್ತವೆ.ಅವರ ' ವಿಚಾರಕ್ರಾಂತಿಗೆ ಆಹ್ವಾನ' ದಿಂದ ತೊಡಗಿ ' ಭವ್ಯತೆ ಮತ್ತು ಭೂಮಾನುಭೂತಿ' ವರೆಗೆ,ಶಿಕ್ಷಣ ಮಾಧ್ಯಮದಿಂದ ತೊಡಗಿ ಭಾಷಾ ನೀತಿಯ ವರೆಗೆ,ಕನ್ನಡ ಕವಿಗಳ ಕಾವ್ಯಗಳ ಅಧ್ಯಯನದಿಂದ ತೊಡಗಿ ಸಾಂಸ್ಕೃತಿಕ ಕರ್ನಾಟಕವನ್ನು ಕಟ್ಟುವ ವರೆಗೆ ಕುವೆಂಪು ಚಿಂತನೆಗಳು ಅವರ ವಿಮರ್ಶಾ ಕೃತಿಗಳು, ವೈಚಾರಿಕ ಬರಹಗಳು, ದರ್ಶನ ಮೀಮಾಂಸೆಯ ಲೇಖನಗಳು- ಇವುಗಳಲ್ಲಿ ಹಂಚಿಹೋಗಿವೆ.ನರಹಳ್ಳಿಯವರು ಇವನ್ನೆಲ್ಲ ಜೋಡಿಸುತ್ತಾ ಸಾವಯವ ಸಮಗ್ರೀಕರಣ ಶಿಲ್ಪದ ಮಾದರಿಯಲ್ಲಿ ' ಕುವೆಂಪು ದರ್ಶನ ' ವನ್ನು ಈ ಗ್ರಂಥದ ಕೊನೆಯಲ್ಲಿ ತರುವ ಮೂಲಕ ತಮ್ಮ ಗ್ರಂಥದ ಇಡೀ ಸಂರಚನೆಗೆ ಮುಕ್ತ ಮುಕ್ತಾಯವನ್ನು ಕೊಟ್ಟಿದ್ದಾರೆ.
"ಲೇಖಕಿಯವರಿಗೆ ಅವರ ಮಗಳು ಕಾಳನನ್ನು ಗಂಟು ಹಾಕಿ ಗಂಡನ ಮನೆಗೆ ಹೋದಾಗ ಕಾಳನ ಬೆಪ್ಪುತನಗಳಿಂದ ತಲೆಚಿಟ್ಟು ಹಿಡಿದ ಲೇ...
"ಎಲ್ಲರಿಗೂ ಅರ್ಥವಾಗುವ ಹಾಗೆ ಅಥವಾ ಮನೆ ಮಂದಿಯಲ್ಲೊಬ್ಬರಂತೆ ಸರಳ ಪದಗಳನ್ನೇ ಆರಿಸಿಕೊಂಡು ವಿವರಿಸಿ ಹೇಳುತ್ತಾರೆ. ...
"ಇಲ್ಲಿನ ಪಾತ್ರಗಳೆಲ್ಲ ಗುಂಡಗಿವೆ. ಯಾವ ಪಾತ್ರವೂ ತನ್ನನ್ನು ತಾನು ಸಮರ್ಥಿಸಿಕೊಂಡು ಬೆಳೆಯುತ್ತಾ ಹೋಗುವುದಿಲ್ಲ. ಬ...
©2025 Book Brahma Private Limited.