ಈ ದೇಶದ ಮೂರನೆಯ ಒಂದು ಭಾಗ ಮಿಡಲ್ ಕ್ಲಾಸ್


"ಎಲ್ಲರಿಗೂ ಅರ್ಥವಾಗುವ ಹಾಗೆ ಅಥವಾ ಮನೆ ಮಂದಿಯಲ್ಲೊಬ್ಬರಂತೆ ಸರಳ ಪದಗಳನ್ನೇ ಆರಿಸಿಕೊಂಡು ವಿವರಿಸಿ ಹೇಳುತ್ತಾರೆ. ತಲೆಭಾರವಾಗದ ಹಾಗೆ ಹಣಕಾಸಿನಂತಹ ಕಬ್ಬಿಣದ ಕಡಲೆ ಕಾಯಿಯನ್ನೂ ನಮ್ಮ ಮನಸಿಗೆ ದಾಟಿಸುತ್ತಾರೆ," ಎನ್ನುತ್ತಾರೆ ಜಿ.ಎನ್.‌ ಮೋಹನ್.‌ ಅವರು ಶರತ್‌ ಎಂ.ಎಸ್‌ ಅವರ ʻಮಿಡಲ್‌ ಕ್ಲಾಸ್‌ To ರಿಚ್‌ʼ ಕೃತಿಗೆ ಬರೆದ ಪ್ರಕಾಶಕರ ಮಾತು.

ಶರತ್ ಎಂ ಎಸ್ ಅವರ 'ಮನಿ ಸೀಕ್ರೆಟ್ಸ್ ಹಾಗೂ ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್', 'ದುಡ್ಡು ಬಿತ್ತಿ ದುಡ್ಡು ಬೆಳೆಯಿರಿ' ಪುಸ್ತಕಗಳಿಗೆ ರಾಜ್ಯದ ಎಲ್ಲೆಡೆಯಿಂದ ಇನ್ನಿಲ್ಲದಷ್ಟು ಬೇಡಿಕೆ ಬರುತ್ತಿದ್ದಾಗ ನನಗೆ ವಿಸ್ಮಯವಾಗುತ್ತಿತ್ತು. ಬರೀ ನಗರಗಳು ಮಾತ್ರವಲ್ಲದೆ ದೂರದ ಹಳ್ಳಿಗಳಿಂದ, ಬರೀ ಗಂಡಸರಲ್ಲದೆ ಹೆಣ್ಣು ಮಕ್ಕಳಿಂದಲೂ ಈ ಪುಸ್ತಕಕ್ಕೆ ಬೇಡಿಕೆ ಬರುತ್ತಿದ್ದಾಗ ನಾನು ಅಂದುಕೊಂಡದ್ದು ದಿಢೀರ್ ಆಗಿ ದುಡ್ಡು ಮಾಡಲು ಎಷ್ಟು ಆಸೆಯಿದೆಯಪ್ಪ ಎಲ್ಲರಲ್ಲಿ! ಅಂತ.

ನಮ್ಮ ಮನರಂಜನಾ ಮಾಧ್ಯಮಗಳಲ್ಲಿ ಕ್ಲಿಕ್ ಆಗುವುದು ಕ್ರೈಂ, ಕ್ರಿಕೆಟ್ ಹಾಗೂ ಸಿನೆಮಾ ಎಂಬ ಮೂರು 'C' ಗಳು. ಪುಸ್ತಕ ಲೋಕದಲ್ಲಿ ಅವಕ್ಕೆ ಕವಡೆ ಕಿಮ್ಮತ್ತಿಲ್ಲ. ಒಂದಿಷ್ಟು ಸದ್ದು ಮಾಡುತ್ತವೆ ಅಷ್ಟೇ, ಆದರೆ ಪುಸ್ತಕ ಮಾರಾಟಕ್ಕೆ ಇರುವ ಶಾರ್ಟ್‌ಕಟ್‌ ಹಣಕಾಸಿನ ಕುರಿತ ಪುಸ್ತಕಗಳು. ಹಾಗಾಗಿಯೇ ನೀವು ಯಾವುದಾದರೂ ಪುಸ್ತಕದ ಅಂಗಡಿಗೆ ಹೋದರೆ ಅಲ್ಲಿ ಸಾಲು ಸಾಲು ಹಣಕಾಸಿನ ಬಗೆಗಿನ ಕೃತಿಗಳು ಹರಡಿಕೊಂಡಿರುತ್ತವೆ. ಅಮೆಜಾನ್ ಅಥವಾ ಪ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾದ ಟಾಪ್ ಪುಸ್ತಕಗಳ ಪಟ್ಟಿ ನೋಡಿದರೆ ಅಲ್ಲಿಯೂ ಮೇಲುಗೈ ಸಾಧಿಸುವುದು ಇವೇ ಕೃತಿಗಳು.

ಯಾಕೆ ಹೀಗೆ? ಎಂದು ಯೋಚಿಸುತ್ತಿದೆ. ಆಗಲೇ ಶರತ್ ಎಂ ಎಸ್ ಅವರ ಈ 'ಮಿಡಲ್ ಕ್ಲಾಸ್ ಟು ರಿಚ್' ನನ್ನ ಕೈಗೆ ಸಿಕ್ಕಿದ್ದು. ಶರತ್ ಹೇಳುತ್ತಾರೆ ಈ ದೇಶದ ಮೂರನೆಯ ಒಂದು ಭಾಗ ಮಿಡಲ್ ಕ್ಲಾಸ್ ಅಂತ. ಮೇಲಿನ ಹಂತಕ್ಕೆ ಚಲಿಸಬೇಕು ಎನ್ನುವ ಮಿಡಲ್ ಕ್ಲಾಸ್‌ನ ಬತ್ತದ ಆಸೆ. ಅವರಿಗೆ ಇರುವ ಒಂದಿಷ್ಟು ಕೊಳ್ಳುವ ಸಾಮರ್ಥ್ಯವೇ ಹಣಕಾಸಿನ ಕುರಿತ ಪುಸ್ತಕಗಳಿಗೆ ಬೇಡಿಕೆ ಸದಾ ಇರುವಂತೆ ಮಾಡಿವೆ.

ಶರತ್ ಯಾಕೆ ನನಗೆ ಇಷ ಅಥವಾ ಯಾಕೆ ನನ್ನ ಆದ್ಯತೆ ಎಂದರೆ ಹಣ ಮಾಡಲು ಆಸೆ ಇರುವ ಮಿಡಲ್ ಕ್ಲಾಸ್‌ನ್ನು ಬಂಡವಾಳ ಮಾಡಿಕೊಂಡು ಹಣ ಮಾಡಿಕೊಳ್ಳಲು ಹೊರಡುವ ಆಸೆಬುರುಕುತನ ಇವರಲ್ಲಿಲ್ಲ. ಕನ್ನಡದಲ್ಲಿ ಹಣಕಾಸಿನ ಬಗ್ಗೆ ಬರೆಯುತ್ತಿರುವವರ ಪೈಕಿ ಹಾಗೆ ಒಂದಿಷ್ಟು ನೀತಿವಂತರು ಇದ್ದಾರೆ. ಇದರ ಜೊತೆಗೆ ಶರತ್ ಅವರ ಹೆಚ್ಚುಗಾರಿಕೆ ಅವರ ಸಂವಹನ ಶೈಲಿ.

ಎಲ್ಲರಿಗೂ ಅರ್ಥವಾಗುವ ಹಾಗೆ ಅಥವಾ ಮನೆ ಮಂದಿಯಲ್ಲೊಬ್ಬರಂತೆ ಸರಳ ಪದಗಳನ್ನೇ ಆರಿಸಿಕೊಂಡು ವಿವರಿಸಿ ಹೇಳುತ್ತಾರೆ. ತಲೆಭಾರವಾಗದ ಹಾಗೆ ಹಣಕಾಸಿನಂತಹ ಕಬ್ಬಿಣದ ಕಡಲೆ ಕಾಯಿಯನ್ನೂ ನಮ್ಮ ಮನಸಿಗೆ ದಾಟಿಸುತ್ತಾರೆ.

ಈ ಹಿಂದೆ ಅವರು ಹಣಕಾಸಿನ ಬಗ್ಗೆ, ಹೂಡಿಕೆ ಬಗ್ಗೆ ಬರೆದಾಗ ನನಗೂ ಅನಿಸಿತ್ತು ನಮ್ಮ ಬಗ್ಗೆ ಬರೆಯುವುದು ಯಾವಾಗ ಅಂತ. ಮಧ್ಯಮ ವರ್ಗಕ್ಕೆ ಹಣಕಾಸಿನೆ ಅನಕ್ಷರತೆ ಇದೆ ಎನ್ನುವುದನ್ನು ಅವರು ಮೊದಲ ಪುಸ್ತಕದಿಂದಲೇ ಒತ್ತಿ ಹೇಳಿದ್ದಾರೆ. ಮಧ್ಯಮ ವರ್ಗ ತನ್ನ 'ಚಿನ್ನ ಚಿನ್ನ ಆಸೆ'ಗಳನ್ನು ಈಡೇರಿಸಿಕೊಳ್ಳಲು ಹತ್ತುವ ಏಣಿ ಅಲುಗಾಡಿ ಅವರ ಮೈ ಮೂಳೆಯನ್ನೇ ಮುರಿಯುತ್ತದೆ. ಒಂದು ಕಾರು, ಒಂದು ಮನೆ, ಒಮ್ಮೆಯಾದರೂ ಸೂಟು ಬೂಟು, ಮಕ್ಕಳ ಸೂಪರ್ ಮದುವೆ ಇಷ್ಟು ಕನಸುಗಳೇ ಸಾಕು ಅವರನ್ನು ಜೀವಮಾನವಿಡೀ ನರಳುವಂತೆ ಮಾಡಲು. ಆದರೆ ಈ ಎಲ್ಲ ಕನಸುಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಕೈಗೆಟುಕಿಸಿಕೊಳ್ಳಲು ಸಾಧ್ಯ ಇಲ್ಲವೇ? ಎನ್ನುವ ಪ್ರಶ್ನೆಗೆ ಉತ್ತರ ಶರತ್ ಅವರ ಈ ಪುಸ್ತಕ.

ಸಾಲ ಮಾಡಿ ತುಪ್ಪ ತಿನ್ನುವ ಕಾಲ ಇದು. ಜಾಗತೀಕರಣದ ಬಿರುಗಾಳಿ ಬೀಸಿದ ನಂತರ ಎಲ್ಲರಿಗೂ ಸಾಲ ಮಾಡಿ ತುಪ್ಪ ತಿನ್ನುವ ಆಸೆ ಬಲವಾಗಿಯೇ ಇದೆ. ಅಂತಹ ಸಮಯದಲ್ಲಿ ಶರತ್ ಬರೆದ ಈ ಪುಸ್ತಕ ನಮಗೆ ಕಿವಿಮಾತು ಹೇಳುತ್ತಲೇ ಸುಲಭವಾಗಿ ಸಮಸ್ಯೆಗಳ ಶರಧಿಯನ್ನು ದಾಟುವಂತೆ ಮಾಡುತ್ತದೆ.

ಶರತ್‌ಗೆ ಇದು ಮೂರನೆಯ ಪುಸ್ತಕ. ನನಗೂ ಇವರ ಬಗ್ಗೆ ಇದು ಮೂರನೆಯ ಬರಹ. ಶರತ್ ಹಣಕ್ಕೆ ಮಾತ್ರ ಅಲ್ಲ ವಿಶ್ವಾಸಕ್ಕೂ ಬೆಲೆ ಕೊಡುವವರು ಎನ್ನುವುದರ ಸೂಚನೆ ಇದು.

 

MORE FEATURES

ಪುಟ ತೆರೆದರೆ ಚೆಂದ ಚೆಂದದ ರೇಖಾಚಿತ್ರಗಳ ಅನಾವರಣ

29-12-2025 ಬೆಂಗಳೂರು

"ಲೇಖಕಿಯವರಿಗೆ ಅವರ ಮಗಳು ಕಾಳನನ್ನು ಗಂಟು ಹಾಕಿ ಗಂಡನ ಮನೆಗೆ ಹೋದಾಗ ಕಾಳನ ಬೆಪ್ಪುತನಗಳಿಂದ ತಲೆಚಿಟ್ಟು ಹಿಡಿದ ಲೇ...

ಬಾ ಕುವೆಂಪು ದರ್ಶನಕೆ; 210 ಪುಟಗಳ ಕೆನ್ವಾಸಿನಲ್ಲಿ ಕುವೆಂಪು ಕಾವ್ಯ ದರ್ಶನ

29-12-2025 ಬೆಂಗಳೂರು

ನರಹಳ್ಳಿಯವರು ಕುವೆಂಪು ಕಾವ್ಯದ ಭಾಗಗಳಿಗೆ ಕೊಡುವ ಶೀರ್ಷಿಕೆಗಳು  ಅರ್ಥಪೂರ್ಣ ಧ್ವನಿ ಪ್ರಚುರ ಆಗಿವೆ. ಇವು ಕುವೆಂಪ...

ದಕ್ಷಿಣಾಯನ ಕೇವಲ ಕಾದಂಬರಿಯಲ್ಲ, ಅದೊಂದು ಈಸೀಜಿ ಟೆಸ್ಟ್

28-12-2025 ಬೆಂಗಳೂರು

"ಇಲ್ಲಿನ ಪಾತ್ರಗಳೆಲ್ಲ ಗುಂಡಗಿವೆ. ಯಾವ ಪಾತ್ರವೂ ತನ್ನನ್ನು ತಾನು ಸಮರ್ಥಿಸಿಕೊಂಡು ಬೆಳೆಯುತ್ತಾ ಹೋಗುವುದಿಲ್ಲ. ಬ...