ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು


'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತದಲ್ಲಿ ಬರುವಂತೆ ಪರ್ವಗಳಾಗಿ ಕಾದಂಬರಿಯನ್ನು ವಿಂಗಡಿಸಿ ಇಟ್ಟಿದ್ದಾರೆ' ಎನ್ನುತ್ತಾರೆ ಪತ್ರಕರ್ತ ಕುಮಾರ್ ಸುಬ್ರಹ್ಮಣ್ಯ ಎಸ್. ಅವರು ಜೋಗಿ ಅವರ ಹಸ್ತಿನಾವತಿ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ. 

ಹಸ್ತಿನಾವತಿ ಹೆಸರು ಕೇಳಿದಾಕ್ಷಣ ನೆನಪಾಗುವುದು ಮಹಾಭಾರತ. ಪಾಂಡವರು ಮತ್ತು ಕೌರರವ ಕಥನ. ಈ ಕಥೆ ಸೋಲು-ಗೆಲುವು, ಸತ್ಯ- ಸುಳ್ಳು, ವಂಚನೆ, ಕಪಟ, ಲಂಪಟತನ ಹೀಗೇ ಎಲ್ಲವನ್ನೂ ಒಳಗೊಂಡಿದೆ. ಮಹಾಭಾರತದಲ್ಲಿ ಹೇಳದೇ ಉಳಿದಿರುವ ಕಥೆಯೇ ಇಲ್ಲ ಎಂಬ ಮಾತಿದೆ. ಅದು ಅಷ್ಟು ಬೃಹತ್ತದ್ದದ್ದು ಕೂಡಾ ಹೌದು. ಈ ಮಹಾಭಾರತದ ಪೀಠಿಕೆ ಏಕೆ ಎಂದರೆ ಜೋಗಿ ಅವರ ಹಸ್ತಿನಾವತಿ ಓದಿದಾಗ ಒಮ್ಮೆಗೆ ಅತ್ತ ಸೆಳೆಯುತ್ತದೆ. ಅದಕ್ಕೆ ಓದಿನ ಕಾಣ್ಕೆಗೂ ಮುನ್ನ ನೆನಪಿಸಿಕೊಳ್ಳೋಣ ಎಂದು.

ಮಹಾಭಾರತದಲ್ಲಿ ರಾಜಕೀಯ ತಂತ್ರಗಾರಿಯನ್ನು ಶಕುನಿ ಮಾಡುತ್ತಿದ್ದ. ಈಗಲೂ ಆ ರೀತಿಯ ಸೂತ್ರಗಳನ್ನು ಹೆಣೆಯಲು ಜನರನ್ನು ನೇಮಿಸಲಾಗುತ್ತದೆ. ಅವರ ಸಲಹೆ ಸೂಚನೆಗಳಂತೆ ರಾಜಕೀಯ ನಡೆಯುತ್ತದೆ. ಇದೇನು ಹೊಸ ವಿಷಯ ಅಲ್ಲ. ಆದರೆ ಆ ತಂತ್ರಗಾರಿಕೆ ಹೇಗಿರುತ್ತದೆ ಎಂಬುದರ ಸ್ವಲ್ಪ ಸುಳಿವು ಹಸ್ತಿನಾವತಿಯಲ್ಲಿದೆ. ಶೀರ್ಷಿಕೆಯ ಉಪನಾಮೆಯಲ್ಲಿ ಇದು ಭಾರತದ ಕಥೆ ಎಂದು ಬರೆಯಲಾಗಿದೆ. ಅದರಂತೆ ಪ್ರಸ್ತುತ ಚುನಾವಣಾ ರಾಜಕೀಯವನ್ನು ಹೆಣೆದಿದ್ದಾರೆ. 

ಪ್ರಸ್ತುತ ರಾಜಕೀಯ ಎಂದು ಹೇಳಲು ಕಾರಣ ಎನ್‌ಡಿಎ ಕೂಟದ ಪ್ರಧಾನಿಯ ಬಿಂಬದಂತೆ ಕೆಲ ಲಕ್ಷಣಗಳನ್ನು ಕಾದಂಬರಿಯಲ್ಲಿ ಬರುವ ಸಂಸ (ಸಂಜಯ್‌ ಸರ್ಕಾರ್‌) ಪಾರ್ತಕ್ಕೆ ಕೊಟ್ಟಿದ್ದಾರೆ. ಇವರ ಜೊತೆಯಲ್ಲಿ ಗೃಹ ಸಚಿವ ಮೋಟು ಬಾಯ್‌ ಪಾತ್ರ, ಹಾಗೇ ರಾಜಕೀಯ ಸಂಚು ಮಾಡಲು ನೇಮಿಸಿದವನ ಪಾತ್ರವೂ ಎದ್ದು ಕಾಣುತ್ತದೆ. 2014ರ ಚುನಾವಣೆಯ ಗೆಲುವಿನ ಹಿಂದೆ ಕರ್ನಾಟಕದ ವ್ಯಕ್ತಿಯೊಬ್ಬನ ರಾಕಜಕೀಯ ಚಾಣಕ್ಷ ನಡೆ ಇತ್ತು ಎಂಬ ಮಾತಿದೆ. ಈ ಮೂರು ಪಾತ್ರಗಳನ್ನು ಇಟ್ಟುಕೊಂಡು, ಮೂರನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ಎನ್‌ಡಿಎ ಅಭ್ಯರ್ಥಿಯನ್ನೇ ಗುರಿಯಾಗಿಸಿ ಅದೇ ರೀತಿ ಕಥೆ ಹೆಣೆದಿದ್ದಾರೆ. 

ಆರಂಭದಲ್ಲಿ ಇದೊಂದು ರಾಜಕೀಯ ತಂತ್ರಗಾರಿಕೆ ಮಾಡುವವನ ಕಥೆ ಎಂದೆನಿಸಿದರೆ, ನಂತರ ಅದು ಆಡಳಿತ ಮಾಡುವವನ್ನು ಕೇಂದ್ರೀಕರಿಸುತ್ತಾ ಸಾಗುತ್ತದೆ. ಓದುಗನಿಗೆ ಅಲ್ಲಲ್ಲಿ ದಿಕ್ಕು ತಪ್ಪಿಸುವ ರೀತಿಯಲ್ಲಿ ಕಥೆ ಭಾರತದ ನಾನಾ ಭಾಗಕ್ಕೆ ಪ್ರಯಾಣಿಸುತ್ತದೆ. ಸಹದೇವನ ಅಂಕಲ್‌ ವಯಸ್ಸಿನ ಲವ್‌ ಯುವ ಓದುಗಗನ್ನನು ನಾಚಿಸುತ್ತದೆ, ನಾಟುತ್ತದೆ. ಜೋಗಿ ಆ ಪ್ರೀತಿಯನ್ನು ಅನುಭವಿಸಿ ಬರೆದಂತಿದೆ. 

ಕೊನೆಯ ಎರಡು ಪರ್ವದಲ್ಲಿ ಕಾದಂಬರಿಯ ಹಳಿ ಬದಲಾಗುತ್ತದೆ. ಆರಂಭದಲ್ಲಿ ಹೋಗುತ್ತಿದ್ದ ಊರೇ ಬೇರೆ, ಇದೇ ಬೇರೆ ಎಂಬಂತೆ ಅನುಭವ. ಅದಕ್ಕೆ ಕಾರಣ ವ್ಯಾಸನ ಪಾತ್ರದ ಪರಿಚಯ. ಮಹಾಭಾರದಲ್ಲಿ ವ್ಯಾಸನೂ ಒಂದು ಪಾತ್ರವೇ ಆಗಿದ್ದರಿಂದ ಇಲ್ಲಿಯೂ ಅವನಿದ್ದಾನೆ. ವ್ಯಾಸ ಭಗವತಿಯ ಆರಾಧಕ ಮಾಯಾವಿ, ಅವನ ಮಾತು, ವಿಚಾರ ಒಂದಿಷ್ಟು ವಿಚಿತ್ರ. ಆದರೆ ಇಲ್ಲಿ ಜೋಗಿ ಬರವಣಿಗೆಯ ಬಗ್ಗೆ, ಅವರನ್ನು ಬರೆಹ ಹೇಗೆ ಬರೆಸಿಕೊಳ್ಳುತ್ತದೆ ಎಂಬುದನ್ನು ವ್ಯಾಸನಾಗಿ ಹೇಳಿದಂತಿದೆ. ಆದರೆ ಇದು ಕಾದಂಬರಿಯ ತಿರುವೂ ಹೌದು, ಗೊಂದಲವೂ ಹೌದು. 

ಇದಾದ ನಂತರ ಕೊನೆಯ ಎರಡು ಪರ್ವ ಸಿನಿಮಾ ಆದರೆ ಲ್ಯಾಗ್‌ ಎನ್ನಬಹುದೇನೋ, ಆದರೆ ಪುಸ್ತಕ ಆದ್ದರಿಂದ ಪುಟ ಹೆಚ್ಚಿಸಲು ಬರೆದಂತೆ ಅನಿಸುತ್ತದೆ. ಇಲ್ಲ ಅವರೇ ಕೊನೆ ಹೇಗೆ ಕೊಡುವುದು ಎಂಬ ಗೊಂದಲಕ್ಕೆ ಬಿದ್ದರೋ ಎನಿಸುತ್ತದೆ. ಕೈಮ್ಯಾಕ್ಸ್‌ ಆರಂಭದಲ್ಲಿ ಸಿಗುವ ಸ್ವಾರಸ್ವಕ್ಕೆ ಸಮನಾಗಿಲ್ಲ. ಹೀಗಾಗಿ ಅಷ್ಟು ಪುಟಗಳನ್ನು ಓದಿದ ಮೇಲೆ ಸಪ್ಪೆಯ ಭಾವ ಕಾಡುತ್ತದೆ. ದ್ವೇಷಕ್ಕೆ ಸಣ್ಣ ತಪ್ಪು ಕಲ್ಪನೆ ಕಾರಣ ಎಂಬುದು ಸರಿಯಾದ ತಾರ್ಕಿಕ ಅಂತ್ಯ ಎಂದೆನಿಸಲ್ಲ. 

ಆದರೆ ಇಡೀ ಕಾದಂಬರಿ ಓದಿದಾಗ ಮಹಾಭಾರತದ ಕಥನ ದ್ವಾಪರಯುಗಕ್ಕೆ ಮುಗಿದಿಲ್ಲ. ಮುಗಿದಿದ್ದರೂ ಅದು ಪಾಂಡವ - ಕೌರವ ಹೊಡೆದಾಟದ ವಿಚಾರದಲ್ಲಿ ಮಾತ್ರ. ಆದರೆ ಈಗಲೂ ಪ್ರತಿ ದಿನ ಒಂದೊಂದು ಕಡೆಯಲ್ಲಿ ಭಿನ್ನ- ವಿಭಿನ್ನ ಮಹಾಭಾರತ ನಡೆಯುತ್ತಲೇ ಇದೆ. ಇಂದುಗೂ ಶಕುನಿಗಳು ಸಂಚು ಹೂಡುತ್ತಲೇ ಇದ್ದಾರೆ. ಎಲ್ಲವೂ ಕಾಲ ಓಘದಲ್ಲಿ ಬದಲಾಗಿದೆ. ಅಷ್ಟೆ ಪಾತ್ರಗಳು ಸಂಭಾಷಣೆಗಳು ಕಾಲದ ಮಿತಿಯಲ್ಲಿ ವ್ಯತ್ಯಯ ಕಂಡಿದೆ. ನಾವೂ ಯಾವುದೋ ಮಹಾಭಾರತದ ಪಾರ್ತಧಾರಿಗಳೇ, ದ್ರೌಪದಿಯ ಸೀರೆ ಎಳೆದವರ ಕಡೆಯೋ... ಅಲ್ಲ ಪಣಕ್ಕೆ ಪತ್ನಿಯನ್ನೇ ಇಟ್ಟು ಸೋತು ಧರ್ಮಾ ಎಂದವನ ಕಡೆಯೋ ಗೊತ್ತಿಲ್ಲ. ನಾವೂ ಪಾರ್ತಧಾರಿಗಳೆ.     

400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತದಲ್ಲಿ ಬರುವಂತೆ ಪರ್ವಗಳಾಗಿ ಕಾದಂಬರಿಯನ್ನು ವಿಂಗಡಿಸಿ ಇಟ್ಟಿದ್ದಾರೆ. ಮುಖಪುಟ ವಿನ್ಯಾಸ ಮಾಡಿದ ಸುಧಾಕರ ದರ್ಭೆ ಅವರಿಗೆ ಮೆಚ್ಚುಗೆ ಸಲ್ಲಲೇ ಬೇಕು. ಏಕೆಂದರೆ ಕಥನವನ್ನು ಉತ್ತಮವಾಗಿ ಜೀರ್ಣಿಸಿ ರಚಿಸಿದ್ದಾರೆ. ಒಂದು ಒಳ್ಳೆಯ ಓದಾಗುವುದಂತೂ ಖಂಡಿತ. ಕೂತು ಪುಟತಿರುಗಿಸುವುದಕ್ಕೇನು ಅಡ್ಡಿ ಇಲ್ಲ.    

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...