ದ್ಯಾವಾ-ಪೃಥವಿ: ಸಂಕೀರ್ಣತೆಯ ಉಪಾಸನೆ


'ನಾನೊಬ್ಬ ಸಂಕೀರ್ಣತೆಯ ಉಪಾಸಕ ಎನ್ನುವುದರ ಮೂಲಕ ಗೋಕಾಕರು ನವೋದಯದ ಸರಳತೆಯನ್ನು ಒಡೆಯುತ್ತಾರೆ. ಕಟ್ಟದಿರು ಶರಧಿಗೆ ಶಟ್ಪದಿಯ ದೀಕ್ಷೆಯನು ಎನ್ನುವುದರ ಮೂಲಕ ಮುಕ್ತಛಂದಕ್ಕೆ ತೆರೆದುಕೊಳ್ಳುತ್ತಾರೆ. ನವ್ಯತೆಯನ್ನು ನೆಲದ ಕಟ್ಟಿಗೆ ಒಗ್ಗಿಸಿ ಅನಾಥ ಪ್ರಜ್ಜೆಗೆ ಪಕ್ಕಾಗದೆ ತಮ್ಮತನವನ್ನು ಮೆರೆಯುತ್ತಾರೆ' ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ವಿ.ಕೃ. ಗೋಕಾಕರ ಕನ್ನಡ ಕಾವ್ಯದ ಮುಖ್ಯ ಕಲ್ಪನೆಯಾದ ದ್ಯಾವಾ ಪೃಥವೀಯನ್ನು ಇಟ್ಟುಕೊಂಡು ಗೋಕಾಕರ ಕಾವ್ಯವನ್ನು ಪ್ರವೇಶಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಿದ್ದಾರೆ.

ಗೋಕಾಕರು ನವೋದಯದ ಹಾಗೂ ನವ್ಯದ ಹೊಸ ಪರಿವರ್ತನೆಯನ್ನೂ ಒಡಲಲ್ಲಿ ಇರಿಸಿಕೊಂಡ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರೋತ್ತರ ಕಾಲದ ಎಲ್ಲ ಆದರ್ಶಗಳನ್ನೂ ಮೈಗೂಡಿಸಿಕೊಂಡ ಕವಿಯಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಕಾವ್ಯದ ಮುಖ್ಯ ಕಲ್ಪನೆಯಾದ ದ್ಯಾವಾ ಪೃಥವಿಯನ್ನು ಇಟ್ಟುಕೊಂಡು ಅವರ ಕಾವ್ಯವನ್ನು ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ದ್ಯಾವಾ ಪೃಥವಿ ಸಂಕಲನದ ಕವಿತೆಯು ಆರಂಭವಾಗುವುದೇ ಮೋಡಗಳ ವರ್ಣನೆಯಿಂದ ವಿಮಾನದಲ್ಲಿ ಕುಳಿತ ಹೊಸ ಅನುಭವದ ಬೆರಗಲ್ಲಿ. ವಿಮಾನದಿಂದ ಹೊರಗೆ ನೋಡುವಾಗ ಅವರ ಕಣ್ಣಿಗೆ ಬೀಳುವುದು ಮೋಡಗಳು. ಗುಂಪಾಗಿ ಒಂಟಿಯಾಗಿ ಹೀಗೆ ಚದುರಿದ ಹಾಗೇ ಕಾಣುವ ಮೋಡಗಳು. ಮೋಡದಿಂದಲೇ ಮೇಘದೂತದ ಕಲ್ಪನೆ ಗರಿಗೆದರಿದ ಹಾಗೇ ಇಲ್ಲೂ ಪರಂಪರೆಯ ಇನ್ನೊಂದು ನೆಲೆಗೆ ಇದನ್ನ ಒಯ್ದು ಮೋಡಗಳ ಮೂಲಕವೇ ನೀರದ ಮತ್ತು ನಾರದರಿಬ್ಬರೂ ಸಂಚರಿಸುವುದನ್ನು ಹೇಳುತ್ತಾರೆ. ಇಲ್ಲಿ ಭೂಮಿ ವಾಸ್ತವ ಆಕಾಶ ಕಾಲ್ಪನಿಕೆ. ದ್ಯಾವಾ ದಿವದ ಕಲ್ಪನೆಯಾದರೆ ಭೂಮಿ ಎನ್ನುವುದು ಋತದ ಪರಿಭ್ರಮಣ. ಋತವೆಂದರೆ ಕಾಲ ಮತ್ತು ಸತ್ಯ. ಎರಡೂ ಪರಿಭ್ರಮಣಕ್ಕೆ ಒಳಗಾಗುತ್ತಲೆ ನಿಕಷಕ್ಕೆ ಪಕ್ಕಾಗುತ್ತಿರುತ್ತದೆ. ಇಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸಬೇಕು ಜ್ಞಾನ ವಿಜ್ಞಾನಗಳನ್ನೂ ಮೀರಿದ್ದು ಪ್ರಕೃತಿ, ಅದನ್ನು ನೋಡುತ್ತಲೇ ಮನುಷ್ಯ ತನ್ನ ಕಲ್ಪನೆಯನ್ನು ಗರಿಗೆದರಿಸಿಕೊಂಡು ಅವಿಷ್ಕಾರಕ್ಕೆ ಇಳಿದಿದ್ದು. ಹೀಗಾಗಿ ಯಾವುದೇ ಜ್ಞಾನ ವಿಜ್ಞಾನಗಳಾಗಲೀ ಪ್ರಕೃತಿಯಿಂದಲೇ ಹುಟ್ಟಿದ್ದಾಗಿರುತ್ತದೆ. ಮನುಷ್ಯ ವಿಜ್ಞಾನವನ್ನು ಬಿಟ್ಟೂ ಇರಲಾರ ಹಾಗೇ ಪ್ರಕೃತಿಯನ್ನೂ ಕೂಡಾ. ಇವೆರಡರ ಸಮನ್ವಯತೆ ಇಲ್ಲದೆ ಬದುಕು ಪೂರ್ಣವಾಗುವುದಿಲ್ಲವೆಂದು ಗೋಕಾಕರು ಬಲವಾಗಿ ನಂಬುತ್ತಾರೆ. ಅವರ ನಂಬುಗೆ ಅವರ ಸಾಹಿತ್ಯವನ್ನು ರೂಪಿಸಿರುವುದು ಮಾತ್ರವೇ ಅಲ್ಲದೇ ಇದೇ ಅವರ ಕಾವ್ಯದ ಮುಖ್ಯ ತಾತ್ವಿಕತೆಯೂ ಆಗಿದೆ. ನಂಬುವ ದೈವ ನೋಡುವ ಪ್ರಕೃತಿ ಹಾಗೂ ಬುದ್ಧಿಯಿಂದ ಹುಟ್ಟುವ ವಿಜ್ಞಾನ ಹಾಗೂ ಮಾನವನ ಒಳಗಿನ ಸೃಜನಶೀಲತೆಯ ಆತ್ಯಂತಿಕ ಸ್ವರೂಪವಾದ ಕಲೆ ನಾಲ್ಕೂ ಮುಖ್ಯವಾದವು. ಇವು ಬೇರೆ ಬೇರೆ ರೀತಿಯಲ್ಲಿ ವಿನ್ಯಾಸವಾಗುತ್ತಾ ಹೋಗುತ್ತದೆ. ಕಲೆಯ ಬಗ್ಗೆ ನನಗೆ ಅಚ್ಚರಿಯಾಗುವುದೆಂದರೆ ಇದು ಬಯಲಲ್ಲಿ ಕಟ್ಟಡ ಕಟ್ಟುವ ಕೆಲಸ. ಬಯಲಲ್ಲಿ ಕಟ್ಟಡ ಕಟ್ಟಬಹುದೇ ವಿನಃ ಬಯಲಿಗೇ ಕಟ್ಟಡ ಕಟ್ಟಲಾಗುವುದಿಲ್ಲವಲ್ಲ. ಉಳಿದ ಬಯಲು ನಮ್ಮನ್ನು ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ ಕಟ್ಟಡ ತನ್ನ ಕರ್ಷಣೆಯನ್ನು ಕಳಕೊಳ್ಳುತ್ತಾ ಬಯಲಿನ ಕಡೆಗೆ ವಾಲಿಬಿಡುತ್ತದೆ. ಗೋಕಾಕರಲ್ಲಿಯೂ ಈ ಪ್ರಕ್ರಿಯೆ ಢಾಳಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದಲೇ ಅವರಿಗೆ ವಿಮಾನದಲ್ಲಿ ಕುಳಿತಾಗಲೂ ಆಕಾಶ ಮತ್ತು ನೆಲ ಎರಡೂ ಸೆಳೆತದ ಸಂಗತಿಗಳಾಗುತ್ತವೆ.

ಭೂ ವ್ಯೋಮಗಳ ಸಮನ್ವಯತೆಯನ್ನು ನೀರದ ಮತ್ತು ಇಳಾಗೀತ ಎನ್ನುವ ಎರಡು ಭಾಗಗಳಲ್ಲಿ ವಿವರಿಸಲು ಯತ್ನಿಸುತ್ತಾರೆ. ನೀರದದಲ್ಲಿ ಭೂಮಿಯಲ್ಲಿ ನಿಂತು ಆಕಾಶದ ಕಡೆಗೆ ನೋಡಿದಾಗಿನ ರಮ್ಯ ನೋಟವನ್ನು ಹೇಳಿದರೆ ಇಳಾಗೀತದಲ್ಲಿ ಅವರು ಭೂಮಿಯಲ್ಲಿ ನಿಂತು ಆಕಾಶದ ಕಡೆಗೆ ನೋಡಿದ ನೋಟವಿದೆ. ಆಕಾಶದಲ್ಲಿದ್ದಾಗ ನೆಲೆದೆಡೆಗಿನ ತುಡಿತ, ನೆಲದಲ್ಲಿದ್ದಾಗ ಆಕಾಶದ ಕಡೆಗಿನ ಸೆಳೆತ ಎರಡನ್ನೂ ಹಿಡಿದಿಡುತ್ತಾರೆ. ಇಷ್ಟಾಗಿಯೂ ನೆಲವೆ ನಮ್ಮೆಲ್ಲರ ಕರ್ಮ ಕೇಂದ್ರ. ಹೀಗಾಗಿ ಎರಡರ ಸಂಲಗ್ನವೇ ಜೀವನ ಎನ್ನುವ ಭಾಷ್ಯವೊಂದಕ್ಕೆ ಕನ್ನಡವನ್ನು ಮುಖಾಮುಖಿಯಾಗಿಸುತ್ತಾರೆ. ಸಮುದ್ರ ಗೀತದಲ್ಲೂ ನೆಲದೆಡೆಗಿನ ತುಡಿತ ಮತ್ತು ಆಕಾಶದ ಸೆಳೆತ ಇದ್ದೇ ಇದೆ. ನೆಲವೂ ಜಲವನ್ನು ಬಿಟ್ಟಿಲ್ಲ. ಆದರೆ ಗೋಕಾಕರಿಗೆ ಜಲ ಪ್ರವಾಸದ ಜಗತ್ತೇ ಹೊರತು ನಿವಾಸದ ಜಗತ್ತಲ್ಲ.

ಜಗತ್ತೆಲ್ಲವನ್ನೂ ಸುತ್ತಿ ಬಂದರೂ ಗೋಕಾಕರಿಗೆ ನೆಲವೆಂದರೆ ಭಾರತವೇ. ಭಾರತವೆಂದರೆ ಬರಿಯ ನೆಲ ಮಾತ್ರವಲ್ಲ ಬದುಕಿನ ಕ್ರಮ. ಶ್ರದ್ಧೆಯ ಕೇಂದ್ರ, ಉಸಿರಿನ ತಿದಿ. ಹೀಗಾಗೇ ಸಮುದ್ರ ಗೀತಗಳಲ್ಲಿ ಒಂದು ಕಡೆಗೆ ಪಾಶ್ಚಾತ್ಯ ನೆಲವನ್ನು `ಇಂದ್ರನ ರಾಜ್ಯವಲ್ಲವಿದು ಇಂದ್ರಿಯಗಳ ರಾಜ್ಯ’ ಎಂದು ಇಂಗ್ಲೆಡಿನ ಸಾಮಾಜಿಕ ಜೀವನದ ಒಂದಶವನ್ನು ಕುರಿತು ಬರೆಯುತ್ತಾರೆ. ಅಲ್ಲಿ ಕಂಡಿದ್ದರಲ್ಲಿ ಇಲ್ಲಿಯದನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. `ಮಾರ್ಸೆಯಲ್ಲಿನ ನಾತರ್‌ದಾಮ್’ ಎನ್ನುವ ಪದ್ಯದಲ್ಲಿ ಸೌಂದರ್ಯವನ್ನು ಬಣ್ಣಿಸುತ್ತಾ ಇಂಥಾದ್ದೇ ಸೌಂದರ್ಯ ಮೈಸೂರಿನಲ್ಲಿ ಇದೆ ಎನ್ನುತ್ತಾರೆ. ಪರಕೀಯ ಸೌಂದರ್ಯವನ್ನು ಬಣ್ಣಿಸುವಾಗಲೂ ಅವರೊಳಗೆ ಚುಟುಕು ಮುಳ್ಳಾಡಿದಂತೆ ಒಂದು ಅಸಹನೆ ಇದ್ದೇ ಇದೆ. ಅದನ್ನೇ ‘ಪರತಂತ್ರ ಭಾರತೀಯನ ಗಂಟಲಿಗೆ ಗಾಳವಿದೆಲ್ಲ ಸಿರಿ’ ಎನ್ನುತ್ತಾರೆ. ಇನ್ನೊಂದು ಪದ್ಯದಲ್ಲಿ `ನೀನು ಸುಂದರಳಹುದು ಆದರೆ ನಿನ್ನ ಸೌಂದರ್ಯವ ಗಮನಿಸಲಾರೆ ಕ್ಷಮಿಸೆನ್ನ ಆಂಗ್ಲದೇವಿ’ ಎಂದು ಬ್ರಿಟೀಷರಿಂದ ಭಾರತೀಯರಿಗಾದ ಶೋಷಣೆಯ ನೆನಪಿಂದ ಆ ಸೌಂದರ್ಯವನ್ನು ತಿರಸ್ಕರಿಸುತ್ತಾರೆ. ಈ ಮೂಲಕ ತಾನು ಹುಟ್ಟಿ ಬೆಳೆದ ತನ್ನೊಳಗೆ ನೆಲೆಯಾದ ನೆಲಕ್ಕೆ ಬಹುದೊಡ್ಡ ಗೌರವವನ್ನು ಸಲ್ಲಿಸುತ್ತಾರೆ. ತನ್ನ ಆತುಗಳಿಗೆ ಮಾನ್ಯತೆ ಕೊಟ್ಟ ಸ್ವಾತಂತ್ರ್ಯದ ಬಲಿದಾನವನ್ನು ಸ್ಮರಿಸುತ್ತಾರೆ.

ಇತಿಹಾಸವೆನ್ನುವುದು ಕಳೆದುಹೋದದ್ದಲ್ಲ, ಆಗಿಹೋಗಿದ್ದುದರ ಪರಿಣಾಮ ಎನ್ನುವುದನ್ನು ಅವರು ಮರೆಯುವುದಿಲ್ಲ. ಭಾರತದಂತಹ ಆಧ್ಯಾತ್ಮಿಕ ಜಗತ್ತಿನಲ್ಲಿ ಸಂಬಂಧಗಳೂ ಕೂಡಾ ಪರಮಾರ್ಥವೇ. ಕಾರ್ಯಕಾರಣ ಬಂಧಗಳಲ್ಲಿ ಬೆಳೆಯುವಂಥದ್ದೇ. ಆಕಸ್ಮಿಕವಂತೂ ಅಲ್ಲವೇ ಅಲ್ಲ. ಇದರ ಸೌಂದರ್ಯದ ಎದುರು ಬೇರೆ ಯಾತರದು ಸೌಂದರ್ಯ? ಎನ್ನುವ ಪ್ರಶ್ನೆಯನ್ನು ಕೇಳುವುದರ ಮೂಲಕ ಭಾರತದ ಹೆಮ್ಮೆಯನ್ನು ಅರಳಿಸುತ್ತಾರೆ.

ಈ ಮನಃಸ್ಥಿತಿಯ ಕಾರಣಕ್ಕೆ ಗೋಕಾಕರಿಗೆ ಆಧುನಿಕತೆಯ ಜೊತೆ ಜೊತೆಗೆ ಸಾಂಪ್ರದಾಯಿಕತೆಯ ಬಗ್ಗೆ ಅವರಿಗೆ ತಿರಸ್ಕಾರವಿಲ್ಲ. ಸಾರಾಸಗಟಾದ ನಿರಾಕರಣೆ ಇಲ್ಲ

ಗೆಳೆತನದ ರತಿಯಲ್ಲಿ ಚ್ಯುತವಿಲ್ಲ
ತಾತ್ವಿಕವಾಗಿ ವ್ಯವಹಾರದಲಿ ಕಂಡದೇನು?

ಎಂದು ರಾಮು ಎಂಬ ಕಾಲೇಜ್ ಮೇಟ್ ಎನ್ನುವ ಪದ್ಯದಲ್ಲಿ ಅರ್ವಾಚೀನರಾದ ತಾವೂ ಸನಾತನಿಯಾದ ರಾಮುವೂ ಒಟ್ಟಿಗೆ ಬದುಕಬಹುದಾದ ಸ್ಥಿತಿಯನ್ನು ಹೇಳುತ್ತಾರೆ. ಹಾರದೆ ಬೇರೆ ಗತಿ ಏನಿದೆ ಎನ್ನುವುದು ಅವನ ನಿಲುವಾಗಿಯೂ ಕಾಣುತ್ತದೆ. ಸಂಪ್ರದಾಯ ಎನ್ನುವುದು ಗೆಳೆಯನ ಹಾಗೆ ಆಪ್ತ, ಆಧುನಿಕತೆ ಬುದ್ದಿಯ ಹಾಗೆ ತೀಕ್ಷ್ಣ. ಎರಡೂ ಒಟ್ಟಿಗೆ ಇರಲಾರದು ಯಾಕೆಂದರೆ ಪರಸ್ಪದ ವಿರುದ್ಧ ಧೃವಗಳು. ಆದರೆ ಅವೆರಡನ್ನೂ ಬೆಸೆಯದೆ ಜೀವನ ಇಲ್ಲ. ಮನೆಯಲ್ಲೆಲ್ಲಾ ಚಪ್ಪಲಿಯೊಂದಿಗೆ ಓಡಾಡುವನಾವು ದೇವರ ಕೋಣೆಗೆ ಮಾಅತ್ರ ಬರಿಗಾಲಲ್ಲಿ ಹೋಗುತ್ತೇವಲ್ಲ ಹಾಗೆ. ಸಮುದ್ರ ಗೀತೆಗೆ ಇವೆಲ್ಲವೂ ಪಕ್ಕವಾದ್ಯವಾಗುತ್ತಾ ಹೋಗುತ್ತವೆ.

ಸಮುದ್ರ ಗೀತಗಳು ಮೂರು ತೀರದವು. ಎರಡು ತೀರದಲ್ಲಿನ ದೇಶಗಳ ಮೌಲ್ಯಗಳ ತುಲನೆಯದವಾದರೆ ಇನ್ನೊಂದು ತೀರ ಸ್ವಗೆ ಸಂಬಂಧಿಸಿದ್ದು. ಆದ್ದರಿಂದಲೇ ಇಂದ್ರಿಯಗಳ ಆಧಿಕ್ಯದ ಊರಲ್ಲೇ ನಿಂತು, ಇಂದ್ರ ಲೋಕದ ಪ್ರಜೆಯಾಗುವ ಆಭೀಪ್ಸೆಯನ್ನು ವ್ಯಕ್ತ ಪಡಿಸುತ್ತಾರೆ. ದೈವದ ಒಳನಡೆಯಲ್ಲಿ ಅಪಾರವಾದ ಶ್ರದ್ಧೆಯನ್ನಿರಿಸಿದ ಅವರ ಸಾಹಿತ್ಯದಲ್ಲೂ ಅಂಥದ್ದೇ ಜಗತ್ತನ್ನು ಸೃಜಿಸುತ್ತಾರೆ. ಅವರ ಎಲ್ಲ ಕಾವ್ಯಗಳಲ್ಲೂ ಒಂದು ಸ್ಥಿತಿಯನ್ನು ಕಾಣುತ್ತೇವೆ. ಭೌತಿಕತೆಯಲ್ಲಿ ಪಾರಲೌಕಿಕತೆಗೆ ಎಂಥಾ ಸ್ಥಾನವಿದೆಯೋ ಪಾರಲೌಕಿಕತೆಗೂ ಭೌತಿಕತೆಗೆ ಅಂಥಾದ್ದೆ ಸ್ಥಾನವಿದೆ. ನಮ್ಮ ಪರಂಪರೆಯಲ್ಲಿ ಎರಡಕ್ಕೂ ಸಮಾನ ಸ್ಥಾನ ಇರುವುದನ್ನು ದೇಗುಲಗಳ ಮಿಥುನ ಶಿಲ್ಪವೂ ಹೇಳುತ್ತದೆ. ಅವು ಸೃಷ್ಠಿಯ ಆದಿಯ ಸಂಕೇತ ಶಕ್ತಿಗಳಾಗಿ ಗೋಚರಿಸುತ್ತವೆ. ಅವನನ್ನು ನೋಡಲು ಹೋಗುವಾಗ ಇದೇನಿದು ಎಂದು ಮೂಗು ಮುರಿಯುವಂತೆಯೇ ಇಲ್ಲ ಇದೂ ಕೂಡಾ ಅವನ ಸೃಷ್ಟಿಯ ಭಾಗವೇ. ಆದರೆಅವನನ್ನು ನೋಡಲು ಕಾಮಾದಿಗಳನ್ನು ಹೊರಗಿಟ್ಟು ಆ ಕ್ಷಣದ ದಿವ್ಯತ್ವಕ್ಕೆ ಕಣ್ಣನ್ನು ತೆರೆದುಕೋ ಎನ್ನುವ ಸಂದೇಶವದು. ಹಾಗಾಗಿ ಎಲ್ಲದರ ನಡುವಣ ಆಧ್ಯಾತ್ಮಿಕ ದಾಹವೇ ಮುಖ್ಯವಾಗುವಂತೆ ಇದು ಭಾರತ ಸಿಂಧು ರಶ್ಮಿಯಲ್ಲೂ ಕಾಣಿಸಿಕೊಳ್ಳುತ್ತದೆ. ವಿಶ್ವ ಮೈತ್ರಿಯ ಬ್ರಹ್ಮ ಚೈತನ್ಯ ಮಾನವೀಯ ನೆಲೆಯಲ್ಲಿ ನಿಲ್ಲುವ ಬಹುದೊಡ್ಡ ಆಶಯ ಇಲ್ಲಿ ಕಾಣುತ್ತದೆ. ಚರಿತ್ರೆ ಎನ್ನುವುದು ಮಾನವ ವಿಕಾಸದ ಚರಿತ್ರೆಯೇ ಹೊರತು, ಮಾಹಿತಿಯ ಚರಿತ್ರೆ ಖಂಡಿತಾ ಅಲ್ಲ. ನೆಲದ ಮಿತಿಯನ್ನು ಮೀರಿ ಆಕಾಶದ ಅಳತೆಯ ಮುಟ್ಟಲಾಗದ ನಡುವಣ ಸ್ಥಿತಿಯಲ್ಲಿ ನಿಲ್ಲುವ ಮನುಷ್ಯನ ವಿಕಾಸದ ಕಥನ ಇದಾಗಿದೆ. ಆದ್ದರಿಂದ ಮನುಷ್ಯರದ್ದು ವಿಶ್ವಾಮಿತ್ರ ಪ್ರಜ್ಞೆ, ಒಟ್ಟಾರೆಯಾಗಿ ನೆಲಮುಗಿಲಿನ ಕಡೆಗೆಅವನಿಗಿರುವ ವಿಚಿತ್ರ ಆಕರ್ಷಣೆಯ ಮನುಷ್ಯನ ಪ್ರಜ್ಞೆಯ ಸ್ಥಿತಿಯನ್ನು ಇಲ್ಲಿ ಚಿಂತನೆಗೆ ಹಚ್ಚುತ್ತಾರೆ.

ನಾನೊಬ್ಬ ಸಂಕೀರ್ಣತೆಯ ಉಪಾಸಕ ಎನ್ನುವುದರ ಮೂಲಕ ಗೋಕಾಕರು ನವೋದಯದ ಸರಳತೆಯನ್ನು ಒಡೆಯುತ್ತಾರೆ. ಕಟ್ಟದಿರು ಶರಧಿಗೆ ಶಟ್ಪದಿಯ ದೀಕ್ಷೆಯನು ಎನ್ನುವುದರ ಮೂಲಕ ಮುಕ್ತಛಂದಕ್ಕೆ ತೆರೆದುಕೊಳ್ಳುತ್ತಾರೆ. ನವ್ಯತೆಯನ್ನು ನೆಲದ ಕಟ್ಟಿಗೆ ಒಗ್ಗಿಸಿ ಅನಾಥ ಪ್ರಜ್ಜೆಗೆ ಪಕ್ಕಾಗದೆ ತಮ್ಮತನವನ್ನು ಮೆರೆಯುತ್ತಾರೆ.

ಮರ್ತ್ಯದಲ್ಲಿ ನಿಂತು ಗೆಲ್ಲು
ಮರ್ತ್ಯವೇ ಒರೆಗಲ್ಲು

ನೆಲವೇ ಆಧಾರಾ ನೆಲವೇ ಆ-ಧಾರಾ

ಇಲ್ಲಿ ನಿಂತೇ ಅಲ್ಲಿ ಗೆಲ್ಲುವ ಸೂತ್ರವನ್ನು ಹೆಣೆಯಬೇಕು. ಎಲ್ಲಕ್ಕೂ ಮೂಲ ನೆಲ. ಆದರೆ ಇಲ್ಲಿಯ ಭೂಮಿ ಭಾರಿ ಹೊಟ್ಟೆ ಚರಂಡಿಗಾರು ಕುಕ್ಕಿದರಯ್ಯ ಎನ್ನುವ ಅಡಿಗರ ಕಾವ್ಯದ ಭೀಭತ್ಸದ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಆದರೆ ನವ್ಯದ ಹರಿಕಾರ ಎನ್ನುವುದಕ್ಕೆ ಮುಂದಿನ ಇವರ ಕಾವ್ಯಗಳಲ್ಲಿ ಸಿಗುವ ಆಧಾರಗಳಲ್ಲಿ ಗವಿ ಮತ್ತು ಬೇಟೆ ಅತ್ಯಂತ ಮುಖ್ಯವಾದವು. ದ್ಯಾವ ಪೃಥವಿ ಸಂಕಲನದ ಅನೇಕ ಮುಂದುವರೆದ ಭಾಗಗಳಾಗಿಯೂ ಕಾಣುತ್ತದೆ. ಆದರೆ ಇಲ್ಲಿ ಪ್ರಕೃತಿ ಆರಾಧನೆಯ ಜೊತೆ ಜೊತೆಗೆ ಹೊಸಕಾಲದ ತಲ್ಲಾಣಗಳಿಗೂ ನೆಲೆಯನ್ನು ಕಲ್ಪಿಸಿಬಿಡುತ್ತಾರೆ

ಗವಿ ನವ್ಯ ಪ್ರತಿಮೆಯನ್ನು ಸೂಚಿಸುತ್ತದೆ. ಹೊರಗಿನ ಗವಿಯಂತೆ ನಿಗೂಢತೆಯೊಂದು ನನ್ನ ಒಳಗೂ ಇದೀನ್ನುತ್ತಾ ಸಂಕೀರ್ಣವಾದಾಭಿವ್ಯಕ್ತಿಗೆ ನಾಂದಿಯನ್ನು ಹಾಡುತ್ತಾರೆ. ಸಹಜವಾಗೇ ಒಳದನಿಯನ್ನು ಬಿಚ್ಚಿಡುವ ಹೊರ ಮೈಯ್ಯ ವಿವರ ಕವಿ ಭಾವಕ್ಕೆ ಕಾಂತಿಯನ್ನು ನೀಡುತ್ತದೆ. ಒಳಗಣ್ಣಿನ ಕತ್ತಲೆಯು ಹೊರ ಜಗತ್ತಿನ ಜೊತೆ ಸೇರಿ ಬೆಳಕಿನ ಹುಡುಕಾಟಕ್ಕೆ ಇಳಿಯುತ್ತದೆ. ಹೊರಗಿನ ಬೆಳಕಿನಲ್ಲಿ ಕಾಣದ್ದು ಒಳ ಜಗತ್ತಿನ ಕತ್ತಲೆಯಲ್ಲಿ ಕಾಣುತ್ತದೆ. ಅದಕ್ಕೆ ಒಳಕ್ಕಿಳಿಯಬೇಕು. ನಿಗೂಢವಾದದ್ದ ಶೋಧದ ಮೂಲಕ ಹೊಸ ಅರ್ಥಗಳು ಹೊಳೆಯಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.

ಗೋಕಾಕರದ್ದು ಪೂರ್ಣ ದೃಷ್ಟಿ ಆದಕಾರಣಕ್ಕೆ ಒಂದು ಸಂಗತಿಯ ಎರಡು ಮುಖಗಳನ್ನು ಅನಾವರಣಗೊಳಿಸುತ್ತಾರೆ. ಯಾವುದೇ ಸಂಗತಿಯೂ ವೈರುಧ್ಯಗಳಿಂದಲೇ ಕೂಡಿರುತ್ತದೆ. ಜೀವನವೂ ಹೀಗೆ. ಒಂದು ಒಬ್ಬರಿಗೆ ಒಳ್ಳೆಯದಾದರೆ, ಅದೇ ಇನ್ನೊಬ್ಬರಿಗೆ ಕೆಡುಕಾಗಿರುತ್ತದೆ. ಒಂದು ಮೃಗ ಇನ್ನೊಂದು ಮೃಗವನ್ನು ಕೊಲ್ಲದೆ ಹೊಟ್ಟೆ ಹೊರೆಯಲಾರದು. ಹಾಗಾದರೆ ಅದು ಆಗುವುದು ತಪ್ಪಾ ಎಂದರೆ ಅಲ್ಲ ಅದೇ ಈ ಜಗತ್ತಿನ ಸೌಂದರ್ಯ. ಧ್ಯಾನ ಮಾಡಲಿಕ್ಕೆ ಕೃಷ್ಣಾಜಿನ ಬೇಕಾದರೆ ಕೃಷ್ಣ ಮೃಗದ ಸಾವಾಗಲೇಬೇಕು ಎನ್ನುವುದು ಮಾತ್ರ ತಪ್ಪು. ಹೀಗೆ ಎಲ್ಲ ಸಂಗತಿಗಳಲ್ಲೂ ಇರುವ ವೈರುಧ್ಯಗಳು ಅದರಲ್ಲೇ ಬದುಕು ಸಾಗಬೇಕಿರುವ ಅನಿವಾರ್ಯತೆ, ಬೇಟೆ ಎನ್ನುವುದು ಅರಣ್ಯ ನ್ಯಾಯ. ನೆಲಮುಗಿಲಿನ ಮಧ್ಯೆ ನಡೆಯುವ ಹೊಟ್ಟೆ ಹೊರೆಯುವ ಆಟ ಆದರೆ ನಾಗರೀಕತೆಯಲ್ಲಿ ಮನುಷ್ಯನ ಬುದ್ಧಿಯ ಮೇಲಾಟವಾಗಿ ಪರಿವರ್ತನೆಯಾಗುವುದು ಮಾತ್ರ ವಿಶಾದ. ಬಡವನ ಹೆಗಲ ಮೇಲೆ ನಡೆಯಲಾರದವನೊಬ್ಬನ ಭಾರ ಹೊತ್ತೇ ಇರುತ್ತಾನೆ. ಅವನ ಜವಾಬ್ದಾರಿಗಳು ಆ ರೂಪದಲ್ಲಿ ಬಂದು ಕೂತಿದೆ. ಈ ಬದುಕು ಇಂಥಾ ಅಸಮತೆಗಳನ್ನು ಅನ್ಯಾಯಗಳನ್ನು ಮೆಟ್ಟಿ ಅಸಮವಾಗದ ಹಾಗೆ ನೋಡಿಕೋ ಈ ಎಲ್ಲದರ ನಡುವೆಯೇ ಬದುಕು ಅರಳುತ್ತದೆ ಎನ್ನುತ್ತಾರೆ ಗೋಕಾಕರು. ಅವರಿಗೆ ಒಬ್ಬ ವ್ಯಕ್ತಿಯ ಬಾಳನ್ನು ಬಾಳುವವರು ಬರೀ ಆ ವ್ಯಕ್ತಿ ಮಾತ್ರವಲ್ಲ ದೈವವೂ ಅದನ್ನು ಬಾಳಿಸುತ್ತದೆ ಎನ್ನುವ ನಂಬಿಕೆ ಅವರದ್ದು. ಅಡಿಗರ ಹೆಳವನ ಹೆಗಲ ಮೇಲೆ ಕುರುಡಕುಳಿತಿದ್ದಾನೆ ಎನ್ನುವ ನಮ್ಮ ಸ್ಥಿತಿಯಾತ್ಯುತ್ತಮ ರೂಪಕಕ್ಕೆ ವಿನಾಯಕರ ಹಸಿವಿಂದ ಕಂಗಾಲದವ ಬಡವ ಹೆಜ್ಜೆಯನ್ನೇ ಇಡಲು ನಿತ್ರಣನಾದವನ ಹೆಗಲಿನಲಿ ನಡೆದಾಡಲಾಗದೇ ಇರುವ ಜವಾಬ್ದಾರಿ ಮೂಟೆಯಂತೆ ಕೂತಿರುವ ಚಿತ್ರ ಪ್ರೇರಣೆ ಆಗಿರುವುದನ್ನು ಗಮನಿಸಬಹುದು.

ಆಕಾಶದಲ್ಲಿ ಪಯಣಿಸುವಾಗ ಮಾನವನೇ ಇಲ್ಲದ ಪ್ರಶಾಂತ ಧ್ಯಾನಸ್ಥ ಭೂಮಿ ಅವರ ಕಣ್ಣಿಗೆ ಬೀಳುತ್ತದೆ. ಅವರು ಅದನ್ನು ಮಾನವ ಹುಟ್ಟಿನ ಮೊದಲಿನ ಭೂಮಿಯಾಗಿ ನೋಡುತ್ತಾರೆ. ಇಂಥಾ ಭೂಮಿಗೆ ಮನುಷ್ಯನ ಆಗಮನವಾದ ನಂತರ ರಕ್ತ ಸಿಕ್ತ ಚರಿತ್ರೆಯ ಪುಟವೊಂದು ತೆರೆಯಿತು ಎನ್ನುತ್ತಾರೆ. ಹೀಗೆ ಹುಟ್ಟಿದ ಮನುಷ್ಯ ಭೂಮಿಯ ಮೇಲೆ ಆಚಾರ - ಅನಾಚಾರಗಳನ್ನು ಮಾಡುತ್ತಲೇ ಬಂದ. ಈಗ ಯಂತ್ರ ನಾಗರೀಕತೆಯೂ ಅದರಲ್ಲಿ ಒಂದು ಎನ್ನುತ್ತಾರೆ. ಅದರ ಅತಿಯ ಬಗ್ಗೆಯೂ ಅವರಿಗೆ ಬೇಸರವಿದೆ.

ಪೆಟ್ರೋಲಿನದೇ ಪ್ರಸಾದ ತೀರ್ಥ
ಕಲ್ಲಿದ್ದಲಿ ಲೋಭಾನ

ಮಿಂಚಿನ ಪಂಚಾರತಿ : ಅಣುವಾಯುಧ!
ಗ್ರಾಮಾಫೋನಿನ ಗಾನ (ಜೀವಂತಿಕೆ ಇಲ್ಲದ ಸ್ಥಿತಿ)
ವೈಜ್ಜಾನಿಕ ಸೂತ್ರಗಳೇ ಮಂತ್ರ
ವ್ಯಾಪಕವಿದು ತಂತ್ರ
ಇಂದಿನ ಕಲಿಯುಗಕೆ ಈ ಕಲಿಯೇ (ಕಲಿಕೆಯೂ ಆಗುವುದು) ಗುರುವು
ಶುದ್ಧ ತಿರುವು ಮುರುವು! (ಶುದ್ಧತೆಯೂ ತಿರುವು ಮುರುವು)

ಇದು ವ್ಯಂಗ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ವ್ಯಂಗ್ಯವು ನಮ್ಮ ಒಳಗನ್ನು ಅಲ್ಲಾಡಿಸುವ ವ್ಯಂಗ್ಯವಲ್ಲ. ಬದಲಾವಣೆಯ ವೇಗಕ್ಕೆ ಸಹಜವಾಗೇ ಹುಟ್ಟಿಕೊಳ್ಳುವ ಕೃತಕತೆಯ ಬಗ್ಗೆ ಅವರು ನೋವಲ್ಲಿ ಮಾತಾಡುತ್ತಾರೆ. ಸಮಕಾಲೀನವಾದ ಸಂಗತಿಗಳ ಜೊತೆ ನಡೆಸಿದ ಮಾತಾಗಿ ಇದು ಕಾಣುತ್ತದೆ. ಮಾನವ ಹುಟ್ಟಿನಂದಿನಿಂದ ಈ ಭೂಮಿಗೆ ಕೆಡುಕು ಮಾತ್ರ ಆಗಿಲ್ಲ ಮಂಗಳವೂ ಆಗಿದೆ. ಅವತಾರೀ ವ್ಯಕ್ತಿಗಳ ಹುಟ್ಟು ಒಂದು ಭವ್ಯ ಹಾಗೂ ಮನನೀಯವಾದ ಚರಿತ್ರೆಯನ್ನು ನಿರ್ಮಿಸಿದೆ. ಅಂಥಾ ಚರಿತ್ರೆಯ ಒಂದು ಭಾಗವಾಗಿ ನಾವೆಲ್ಲಾ ಇದ್ದೇವೆ ಎನ್ನುವುದು ಅವರ ನಿಶ್ಚಿತವಾದ ನಿಲುವು. ಹಾಗಾಗೇ ಅವರ ಕವಿತೆಗಳಲ್ಲಿ ಮತ್ತು ಮಹಾಕಾವ್ಯದಲ್ಲಿ ಕೂಡಾ ಎರಡು ಸಂಗತಿಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಒಂದು ನಚಿಕೇತ ಪ್ರಜ್ಜೆ ನಚಿಕೇತ ತನ್ನ ತಂದೆಯನ್ನೇ ಪ್ರಶ್ನಿಸಿದ ಹಾಗೇ ಪ್ರಶ್ನಿಸುವುದರ ಮೂಲಕ ಇನ್ನೊಂದು ಮಹತ್ತರ ಉತ್ತರದ ಕಡೆಗೆ ಹೋಗುತ್ತಾನೆ. ಹುಟ್ಟು ಸಾವಿನ ಗುಟ್ಟಿನ್ನು ಒಡೆಯಲು ನೋಡುತ್ತಾನೆ. ಸಾವಿನ ನಂತರದ ಜಗತ್ತಿಗೆ ಲಗ್ಗೆ ಇಡುತ್ತಾನೆ. ಇಲ್ಲಿಯೂ ಭೂಮಿ ಆಕಾಶದ ಬಹುದೊಡ್ಡ ಸಂಗತಿಗಳು ಎದ್ದು ನಿಲ್ಲುತ್ತವೆ. ತಂದೆ ಎಂದರೆ ಪರಂಪರೆ. ಪ್ರಶ್ನಿಸುವ ನಚಿಕೇತ ಪೊಳ್ಳುತನಗಳನ್ನು ಪಕ್ಕಕ್ಕಿಡುವ ಉರಿವ ವಾಸ್ತವ. ಗೋಕಾಕರು ವ್ಯವಸ್ಥೆಯ ಒಳಗೆ ನಿಂತೇ ಪ್ರಶ್ನಿಸುತ್ತಾ ಹೋಗುತ್ತಾರೆ. ಹೀಗೆ ಪ್ರಶ್ನಿಸುವುದರ ಮೂಲಕ ಅವರು ಇನ್ನೊಂದು ಜಗತ್ತನ್ನು ಇಲ್ಲಿ ಸೃಷ್ಠಿ ಮಾಡುತ್ತಾರೆ. ಶುದ್ಧ ಮಾನವೀಯ ಅಂತಃಕರಣದ ಸಂಭವನೀಯ ಜಗತ್ತು ಅದು. ಅದೇ ವಿಶ್ವಾಮಿತ್ರ ಪ್ರಜ್ಜೆ. ಇದು ಒಟ್ಟಾರೆಯಾಗಿ ಸಾಧಿತವಾಗಿರುವುದು ಭಾರತ ಸಿಂಧು ರಶ್ಮಿಯಲ್ಲಿ.

ಸಮುದ್ರ ಗೀತದಲ್ಲಿನ ಒಂದು ಪದ್ಯದಲ್ಲಿ ಅವರು ಮಿಂಚಿನ ಬಗ್ಗೆ ಮಾತಾಡುತ್ತಾರೆ. ಮಿಂಚು ಹುಟ್ಟುವುದು ಭೂಮಿಯಿಂದಲೇ, ಅದು ಮರಳುವುದೂ ಭೂಮಿಗೇ. ಆಕಾಶ ಮಿಂಚಿದಷ್ಟೂ ಭೂಮಿ ಫಲವತ್ತಾಗುತ್ತದೆ. ಅವರ ದ್ಯಾವಾ ಪೃಥವಿಕ ಕಲ್ಪನೆ ಮಿಂಚಿನ ಸಂಲಗ್ನದಲ್ಲೇ ಇದೆ. ಮಿಂಚಿನ ಪರಿಣಾಮ ಇರುವುದು ಭೂಮಿಯಲ್ಲೇ. ಇದನ್ನೇ ವಿಶ್ವಾಮಿತ್ರ ಪ್ರಜ್ಜೆ ಎನ್ನಬಹುದು ಎಂದುಕೊಳ್ಳುತ್ತೇನೆ. ಇದು ಅವರ ಲೋಕದರ್ಶನವೂ ಹೌದು. ಇದು ಅವರ ಕಾವ್ಯಮೀಮಾಂಸೆ ಕೂಡಾ ಹೌದು. ಹೀಗಾಗೇ ಪಾಶ್ಚಾತ್ಯ ಸಂಗತಿಗಳನ್ನು ತನ್ನ ಕಾವ್ಯಲೋಕಕ್ಕೆ ತೆಗೆದುಕೊಂಡೂ ಅದನ್ನ ಅರಗಿಸಿಕೊಳ್ಳುವ ಮತ್ತು ಇಲ್ಲಿನ ಆವರಣಕ್ಕೆ ಹೊಂದಿಸುವ ಪ್ರಯತ್ನದಲ್ಲಿ ತೊಡಗಿಕೊಳ್ಳುತ್ತಾರೆ ಇದು ಕಾವ್ಯ ಜಂಗಮಕ್ಕೆ ಧಾತುವಾಗುತ್ತದೆ. ನಮಗೆ ಅನ್ಯರಾಗದ ಕವಿಯಾಗಿ ಗೋಕಾಕರು ಕಾಣುತ್ತಾರೆ.

ಆ ಕಾರಣಕ್ಕೆ ಊರ್ಧ್ವತೆ –ಧಾರಣ –ಅವತರಣದ ಕಲ್ಪನೆಯ ಮೂಲಕ ಜೀವನ ಸೂತ್ರವೊಂದನ್ನು ‘ಕೊಡದಲಿ ತುಂಬಿದ ತತ್ವವೇನು?’ ಎಂದು ಪ್ರಶ್ನಿಸುತ್ತಲೆ ರೂಪಿಸಿಕೊಳ್ಳುತ್ತಾರೆ. ಕೊಡ ಎಂದ ತಕ್ಷಣ ನಮಗೆ ನೆನಪಾಗುವ ಶಿಶುನಾಳ ಶರೀಫನನ್ನು ಒಳಗೊಂಡ ಹಾಗೇ ಪಂಚಭೂತಗಳ ಕಲ್ಪನೆಮೂಡುತ್ತದೆ. ಕುಂಬಾರನ ಈ ಕೊಡದಲ್ಲಿ ಹೇಗೆ ಆಕಾಶ, ಭೂಮಿ, ಆಪ್ ತೇಜಸ್ಸು ಮತ್ತು ವಾಯು ತುಂಬುತ್ತದೆ ಮತ್ತು ಯಾವುದನ್ನು ಯಾವುದು ಬೆಂಬಲಿಸುತ್ತದೆ ಎನ್ನುವುದನ್ನು ಭೂಮ್ಯಾಕಾಶದ ಕಲ್ಪನೆಯ ಮೂಲ ಬಿಂಬವಾಗಿ ಗುರುತಿಸುವ ಪ್ರಯತ್ನಕ್ಕೆ ತೊಡಗುತ್ತಾರೆ.

ರಸನೆಯ ಧಾತುಗಳನ್ನ ಒಳಗೊಂಡ ದೇಹ ಬಿಡುಗಡೆಯಾಗಬೇಕಿರುವುದು ಕೆಡಕಿನಿಂದ. ಕೆಡಕಿನಿಂದ ಬಿಡುಗಡೆ ಎಂದರೆ ಅದು ಅವತರಣ ಎನ್ನುವುದನ್ನು ಗಾಢವಾಗಿ ನಂಬುವ ಗೋಕಾಕರು

ಎಲ್ಲ ಬೇಕು ಬಣ್ಣ ಬೇಕು ಕಣ್ಣದೊಂದೆ ಸಾಲದು
ಬರಿಗಣ್ಣಾಗಿರುವ ಪ್ರಾಣ ಕೃತಿಯನೆಂದು ಬಲ್ಲದು?

ಎನ್ನುತ್ತಾ ಶೂನ್ಯವು ಎಲ್ಲವನ್ನೂ ತುಂಬಿಕೊಂಡು ಪೂರ್ಣವಾಗುವ ಪರಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಹೀಗೆ ಪ್ರಕೃತಿ ಮತ್ತು ಪರದ ಚಿಂತನೆಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಇಡುತ್ತಾ ಹೋಗುತ್ತಾರೆ.

ಮನುಷ್ಯನೆ ಹೀಗೆ ಅಮೃತತ್ವಕ್ಕೆ ಕಾಯುವುದು ಅವನ ಜೀವಿತದ ಪರಮ ಗುರಿ. ಆದರೆ ವಿಚಿತ್ರ ಎಂದರೆ ಸ್ವಯಂಕೃತಾಪರಾಧವಾಗಿ ನರಕವನ್ನು ತಾನೇ ಸೃಷ್ಟಿ ಮಾಡಿಕೊಳ್ಳುತ್ತಾನೆ. ಅದರಲ್ಲೇ ಆನಂದವನ್ನು ಕಾಣುತ್ತಾನೆ. ಅದು ವಿಷವೆನ್ನುವುದನ್ನೂ ಮರೆತು ಅಲ್ಲೇ ವಿರಮಿಸುತ್ತಾನೆ. ಒಂದು ದಿನ ಅವನಿಗೆ ಸತ್ಯದ ದರ್ಶನವಾಗುತ್ತದೆ ಮತ್ತೆ ಅಮ್ರುತತ್ವದ ಹುಡುಕಾಟಕ್ಕೆ ಇಳಿಯುತ್ತಾನೆ. ಅದಕ್ಕಾಗಿ ಕಾಯುತ್ತಾನೆ. ಅವನಿಗೆ ಮತ್ತೆ ಆಅಮೃತವ್ತ ಸಿಗುತ್ತದೋ ಇಲ್ಲವೋ ಎನ್ನುವ ಸಂಶಯವೂ ಆವರಿಸುತ್ತದೆ. ಅಮೃತತ್ವಕ್ಕೆ ಭೂಮಿಯೂ ಕಾಯುವ ಹಾಗೆ ನಾವೂ ಕಾಯಲೇಬೇಕು ಇದು ಮನುಷ್ಯನ ಜೀವಿತದದೊಡ್ಡ ಅಗ್ನಿಪರೀಕ್ಷೆ ಗೆಲುವಿನ ಹಂಬಲ, ನಿರೀಕ್ಷೆಗಳಷ್ಟೇ ಮನುಷ್ಯನಿಗೆ ಸಾಧ್ಯವಾಗುವುದು. ಜಗತ್ತಿನ ಎಲ್ಲವೂ ಅಚ್ಚರಿಯೇ. ಭೂಮಿಯ ಮೇಲಿನ ಸಣ್ಣ ಜೀವವೊಂದನ್ನೂ ಬಿಡದೆ ನಿಷ್ಠೆಯಿಂದ ಆಗುಮಾಡುವ ಸಂಗತಿಗಳಿಗೆ ಪ್ರಕೃತಿ ಸಾಕ್ಷೀಭೂತ. ಕಲ್ಲಿನಿಂದ ವಜ್ರವಾಗುವ ವಿಸ್ಮಯಕಾರಿ ಬದಲಾವಣೆಗೆ ಪಕ್ಕಾಗುವ ಭೂಮಿ ಸದಾ ಚಲನಶೀಲ. ಹಾಗೆ ಹುಟ್ಟಿದ ಕಲ್ಲೊಂದರ ಕಥೆಯನ್ನು ಕವನವಾಗಿಸುವ ವಿನಾಯಕರಲ್ಲಿ ವಿಜ್ಞಾನದ ಬುದ್ಧಿಗೆ ನಿಲುಕುವ ಸಂಗತಿಗಳನ್ನು ಅಮೂರ್ತವಾದ ಭಾವಕೋಶದ ಜೊತೆ ನಂಟಿಸುತ್ತಾರೆ. ಭೂಗರ್ಭದ ಶಾಸ್ತ್ರದ ಅವರ ಜ್ಞಾನ ಕಾವ್ಯದ ಮಜಲಾಗಿ ಹೊರಳುತ್ತದೆ. ಬಹುಶಿಸ್ತುಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬಲ್ಲ ಗೋಕಾಕರ ಪ್ರಜ್ಞೆ ಇಲ್ಲಿ ಪ್ರಕಟವಾಗಿದೆ.ಈ ಮಜಲಿನಲ್ಲಿ ಅನೇಕ ಪದ್ಯಗಳು ಹುಟ್ಟಿವೆ ಅವುಗಳಲ್ಲಿ ಇದು ಒಂದು.

ಒಂದು ಕಲ್ಲು ಹುಟ್ಟಿತೆಲ್ಲಿಂದ? ಅದಕ್ಕೆ ಭೂಗರ್ಭಶಾಸ್ತ್ರಜ್ಞನದೊಂದು ವ್ಯಾಖ್ಯಾನ ಇದ್ದೇ ಇದೆ. ಆದರೆ ಹೀಗೇ ಯಾಕಾಯಿತೆನ್ನುವುದಕ್ಕೆ ಅವನಲ್ಲಿ ಉತ್ತರವಿಲ್ಲ. ನಿರ್ಧರಿಸುವ ಶಕ್ತಿ ಚೈತನ್ಯರೂಪಿಯಾದ ಪ್ರಕೃತಿಗೇ ಇರುವುದು. ಅದು ಕಲ್ಲನ್ನೂ ನವೆಯಬಲ್ಲದು ಮರವನ್ನೂ ಕಲ್ಲಾಗಿಸಬಲ್ಲದು. ಭೂ ಮೇಲಿನ ಸೃಷ್ಟಿ ಭೂಗರ್ಭದಲ್ಲೊಂದು ಸೃಷ್ಟಿ. ಪೂರ್ಣತ್ವ ಪಡೆವ ಭೂಮಿಯ ಕೊಳೆತದ್ದರ ಮೇಲೆ ಮತ್ತೆ ಮೊಳಕೆ ಮೂಡುತ್ತದೆ. ಹೊಸ ಹುಟ್ಟಿನ ವ್ಯಾಖ್ಯಾನಕ್ಕೆ ಶಿಲಾವೃಕ್ಷ ಕವಿತೆ ಸಾಕ್ಷಿಯಾಗುತ್ತದೆ.

ನೆಲ-ಮುಗಿಲುಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾದರೂ ಮೊದಲು ಯಾವುದನ್ನು ಕಲಿಯಬೇಕು ಎನ್ನುವ ಜಿಜ್ಞಾಸೆಗೆ ಉತ್ತರವನ್ನು ಹುಡುಕಿಕೊಳ್ಳುತ್ತಾರೆ. ಭೂ ಮೇಲಿನ ಜೀವನದ ಪರಿಪೂರ್ಣತೆಯ ಪರವಾಗಿ ಮುಗಿಲನ್ನು ಕಲಿಯುವ ಅನಿವಾರ್ಯತೆ ಇದ್ದೇ ಇದೆ ಎನ್ನುವ ಗಾಢವಾದ ತಾತ್ವಿಕತೆಯನ್ನು ಅವರ ಬಹುತೇಕ ಕವಿತೆಗಳು ಪ್ರತಿಪಾದಿಸುತ್ತವೆ.

ಕನ್ನಡ ಸಾಹಿತ್ಯದಲ್ಲಿ ದ್ಯಾವಾ ಪೃಥವಿಯ ಕಲ್ಪನೆ ಪ್ರಬಲವಾಗಿ ಬೇಂದ್ರೆಯವರಲ್ಲಿ ಕಾಣುತ್ತದೆ. ಧಾರವಾಡದ ಅಟ್ಟದ ಮೇಲಿನ ಕಾವ್ಯ ಚರ್ಚೆಗಳು ವಿನಾಯಕರ ಕಾವ್ಯ ಚಿಂತನೆಯನ್ನು ಮತ್ತಷ್ಟು ಪೃಥಕ್ಕರಿಸಿದ್ದು ಸತ್ಯ. ಬೇಂದ್ರೆಯವರ ನರ ನಾರಿ ಕಲ್ಪನೆಯ ಜೊತೆ ಬೆರೆತ ದ್ಯಾವಾ ಪೃಥವಿ ವಿನಾಯಕರಲ್ಲಿ ಭೂಮಿ ಆಕಾಶ, ಭಾರತ ಪೌರಾತ್ಯ, ಸನಾತನ ಆಧುನಿಕತೆ, ಸಮಕಾಲೀನ ವಿದ್ಯಮಾನಗಳು ಹೀಗೆ ಹಂತ ಹಂತಗಳಲ್ಲಿ ಬೆಳೆಯುತ್ತದೆ. ಇದೇ ಮುಂದೆ ಅಡಿಗರ ಭೂಮಿಗೀತಕ್ಕೂ, ಕೆ ಎಸ್‌ನ ಅವರ ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ, ಕುಂಕುಮ ಭೂಮಿಗೂ, ಲಂಕೇಶರ ಅವ್ವ ಪದ್ಯಕ್ಕೂ ಕಾರಣ ಆಯಿತೇ? ಇನ್ನೊಂದೇ ಮಗ್ಗಲಿನ ಚರ್ಚೆ. ಇದು ಒಂದು ಪರಂಪರೆ. ವಿನಾಯಕರಲ್ಲಿ ದ್ಯಾವಾ ಪೃಥವಿ ಕಲ್ಪನಾಲೋಕದ ಬೌದ್ದಿಕ ನಡೆಯಾಗಿ ಕಾಣಿಸಿಕೊಂಡಿದೆ, ಗೋಕಾಕರ ಕಾವ್ಯದ ಶ್ರೇಷ್ಠತೆಯ ಪ್ರಶ್ನೆಯನ್ನು ನಾನು ಇಡಲು ಹೋಗುವುದೇ ಇಲ್ಲ. ಅವರ ಕಾವ್ಯ ಕನ್ನಡ ಮನಸ್ಸುಗಳು ಬಹುಕಾಲ ನೆನೆಯಬಲ್ಲ ಮಾತುಗಳಾಗಿ ಉಳಿದು ಬಂದಿರುವುದನ್ನು ಮಾತ್ರ ನೆನೆಯುತ್ತೇನೆ.

(ಪ್ರಕಟಿತ ಲೇಖನ)

MORE FEATURES

ಈ ಪುಸ್ತಕದಲ್ಲಿ ಹತ್ತು ನಿಷ್ಠಾವಂತ ಸಾರ್ವಜನಿಕ ಅಧಿಕಾರಿಗಳ ಸೂಕ್ಷ್ಮ ಪರಿಚಯವಿದೆ

13-05-2024 ಬೆಂಗಳೂರು

'ಸಾರ್ವಜನಿಕ ಆಡಳಿತಗಾರರ ಜೀವನ ಮತ್ತು ಸಾಧನೆಗಳ ಬಗ್ಗೆ ಕನ್ನಡದಲ್ಲಿ ಪ್ರಕಟವಾಗಿರುವ ಕೃತಿಗಳು ಅತ್ಯಲ್ಪ ಕೊರತೆಯನ್ನು...

ಎಲ್ಲವನ್ನೂ ಉಡಿಯಲ್ಲಿ ತುಂಬಿಕೊಂಡು ಹರಿಯುತ್ತಿರುವ ಜಯಂತರ ಅಂತರಗಂಗೆ ಕಲರವ

12-05-2024 ಬೆಂಗಳೂರು

'ಜಯಂತ್ ಕಾಯ್ಕಿಣಿಯವರ ಶೈಲಿಯ ಸ್ವಾದವಿರುವುದೇ ಅವರು ಕಟ್ಟಿ ಕೊಡುವ ಚಿತ್ರಣಗಳ ಸೂಕ್ಷ್ಮವಾದ  ವರ್ಣನೆ ಮತ್ತು ಅ...

‘ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ’

12-05-2024 ಬೆಂಗಳೂರು

ಜಾಗತಿಕ ಸಂಸ್ಕೃತಿಗೆ ಘನತೆಯನ್ನು ತಂದು ಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮಹಾಪುರುಷರು; ಮತ್ತ...