ಈ ಕಾದಂಬರಿ ನನ್ನ ಶಾಲಾ ಅನುಭವಗಳ ಒಟ್ಟು ಮೊತ್ತ: ಮಧು ವೈ.ಎನ್


‘ಕಳೆದ ನಾಲೈದು ವರುಷಗಳಲ್ಲಿ ಆಗಾಗ್ಗೆ ಮೊಳಕೆಯೊಡೆದು ಅಲ್ಲಲ್ಲೆ ಮುದುಡಿಕೊಳ್ಳುತ್ತಿದ್ದ ಕತೆ ಈ ರೂಪ ತಾಳಿರುವುದು ನನಗೇ ಅಚ್ಚರಿ’ ಎನ್ನುತ್ತಾರೆ ಮಧು ವೈ ಎನ್. ಅವರು ‘ಕನಸೇ ಕಾಡು ಮಲ್ಲಿಗೆ’ ಕಾದಂಬರಿ ಕುರಿತು ಬರೆದ ಲೇಖಕರ ನುಡಿ ಬರಹ ನಿಮ್ಮ ಓದಿಗಾಗಿ.

ಈ ಕಾದಂಬರಿ ನನ್ನ ಶಾಲಾ ಅನುಭವಗಳ ಒಟ್ಟು ಮೊತ್ತ. ಎಷ್ಟು ಭಾಗ ನಿಜ ಎಷ್ಟು ಭಾಗ ಕಲ್ಪನೆ ಎಂದು ಹೇಳಲು ಬರಲ್ಲ. ಅನುಭವಕ್ಕೆ ಬರದ ಏನನ್ನೂ ಬರೆಯಲಾಗದು ಎಂಬುದೇ ಆದಲ್ಲಿ ಎಲ್ಲವೂ ನಿಜವೇ. ನೂರಾರು ನೈಜ ಮುಖಗಳು ಕೆಲವಾರು ಪಾತ್ರಗಳಾಗಿ ರೂಪಿತಗೊಂಡಿವೆ. ನೂರಾರು ಘಟನೆಗಳು ಹಿಡಿಯಾದ ಅಧ್ಯಾಯಗಳಾಗಿ ಮೂಡಿಬಂದಿವೆ. ಅನೇಕ ಕಡೆ ಆತ್ಮ ಉಳಿಸಿಕೊಂಡು ಆಕಾರ ಬದಲಿಸಿಕೊಂಡಿವೆ. ನನ್ನ ಶಾಲಾ ಸ್ನೇಹಿತರು ಓದಿದಾಗ ಪ್ರತಿ ಪುಟ ಕಣ್ಣ ಮುಂದೆ ಬರುವುದುಂಟು.

ಕಳೆದ ನಾಲೈದು ವರುಷಗಳಲ್ಲಿ ಆಗಾಗ್ಗೆ ಮೊಳಕೆಯೊಡೆದು ಅಲ್ಲಲ್ಲೆ ಮುದುಡಿಕೊಳ್ಳುತ್ತಿದ್ದ ಕತೆ ಈ ರೂಪ ತಾಳಿರುವುದು ನನಗೇ ಅಚ್ಚರಿ. ಹಿಂದೆ ಅನೇಕ ಸಲ ಗಂಭೀರ ಧಾಟಿಯಲ್ಲಿ, ಗೋಳಾಟದ ರೂಪದಲ್ಲಿ, ಹ್ಯಾರಿ ಪಾಟರಿನಂತೆ ಫ್ಯಾಂಟಸಿಯಾಗಿ- ಏನೇನೊ ಅವತಾರ ತಾಳಿ, ತೆವಳಿ, ಬವಳಿ ಮುಂದೋಗಲಾರದೆ ಸುಸ್ತು ಹೊಡೆದು ಇದೀಗ ಹಾಸ್ಯಮಯವಾಗಿ ಹೊರಬಂದಿದೆ. ಇದು ಹೀಗೆ ಲೀಲಾಜಾಲವಾಗಿ ಹರಿದಿರುವುದಕ್ಕೆ "ಕ್ಯಾಚರ್ ಇನ್ ದ ರೇ" ಬಗೆಯ ಕಾದಂಬರಿಗಳು, ಮುಗ್ಧತೆ ತುಂಬಿಕೊಂಡಿರುವುದಕ್ಕೆ ರಸ್ಕಿನ್ ಬಾಂಡ್‌ರಂತಹ ಲೇಖಕರ ಸಾಹಿತ್ಯದ ಕೊಡುಗೆಯಿದೆ. ಕ್ಲಾಸಿಕ್ ಲಿಟರೇಚರ್ ಪ್ರಪಂಚಕ್ಕೆ ಧನ್ಯವಾದಗಳು.

ಇದರ ಬರವಣಿಗೆ ಆರಂಭವಾಗುವ ಆರು ತಿಂಗಳ ಮುನ್ನ ಅಜಿಂ ಪ್ರೇಂಜಿ ಫೌಂಡೇಶನ್ ನಡೆಸಿಕೊಡುವ ಮಕ್ಕಳ ಸಾಹಿತ್ಯ ಕಾರ್ಯಗಾರದಲ್ಲಿ ಭಾಗಿಯಾಗಿದ್ದೆ. ಅಲ್ಲಿನ ಓದು, ಕಲಿಕೆ ಪ್ರೇರಣೆಯಿದ್ದಿರಬಹುದು. ಎದಿರಬಹುದು. ಅವರಿಗೆ ಧನ್ಯವಾದಗಳು. ಕಾದಂಬರಿ ಆರಂಭವಾಗಿದ್ದು ಫೇಸ್‌ಬುಕ್ಕಿನಲ್ಲಿ. ಮುಂದುವರೆದದ್ದು ಅಲ್ಲಿನ ಓದುಗರು ಹುರಿದುಂಬಿಸಿದ್ದರಿಂದ. ನನ್ನೆಲ್ಲ ಸೋಶಿಯಲ್ ಮಿಡಿಯಾ ಸ್ನೇಹಿತರಿಗೆ, ಓದುಗರಿಗೆ ವಂದನೆಗಳು.

ಅತ್ಯಂತ ಶ್ರದ್ಧೆಯಿಂದ ಕಾದಂಬರಿಯನ್ನು ಓದಿ ತಿದ್ದಲು ಸಹಾಯ ಮಾಡಿದ ಪ್ರಶಾಂತ ಸಾಗರ, ದಯಾ ಗಂಗನಘಟ್ಟ, ಶಾಂತಲ ಸತೀಶ್, ಪೂರ್ಣೇಶ್ ಮಥಾವರ, ವನಿತ ಕೃಷ್ಣಮೂರ್ತಿ ಇವರೆಲ್ಲರಿಗೆ ಧನ್ಯವಾದಗಳು. ಮುದ ನೀಡುವ ಚಿತ್ರ ಬಿಡಿಸಿಕೊಟ್ಟಿರುವ ಸ್ನೇಹಜಯಾ ಕಾರಂತ್ ಅವರಿಗೆ ವಂದನೆಗಳು.

ಪುಸ್ತಕ ಹೀಗೇ ಬರಬೇಕು ಎಂಬ ಆಸೆಯಿಂದ ಪ್ರಕಟಣೆಯನ್ನೂ ನಾನೇ ಮಾಡುವ ಎಂದು ಬಯಸಿ 'ನೆಲಮುಗಿಲು ಪ್ರಕಾಶನ' ಆರಂಭಿಸಿದ್ದು. ಈ ಪ್ರಯಾಣದಲ್ಲಿ ಶಿವಕುಮಾರ್ ಮಾವಲಿ, ಕುಂಟಾಡಿ ನಿತೇಶ್, ಚೈತ್ರ ಶಿವಯೋಗಿ ಮಠ ಮುಂತಾಗಿ ಅನೇಕರು ಸಲಹೆ ನೀಡಿದ್ದಾರೆ. ಎಲ್ಲರಿಗೂ ಋಣಿ. ಕಾದಂಬರಿಯ ಮೊದಲ ಓದುಗಳೂ, ಮೊದಲು ಮೆಚ್ಚಿದವಳೂ, ಈಗಲೇ ತನ್ನಿ ಎಂದು ಹಿಂದೆಬಿದ್ದು ಬರೆಸಿದವಳೂ ಆದ ಬಾಳಸಂಗಾತಿ ಅಪೂರ್ವಳಿಗೆ ಇನ್ನಿಲ್ಲದ ಥ್ಯಾಂಕ್ಸ್.

-ಮಧು ವೈ ಎನ್

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...