ಎರಡು ತಲೆಮಾರುಗಳ ನಡುವಿನ ದುರಂತ ಕೊಂಡಿಗಳನ್ನು ಬೆಸೆಯುವ ಕೃತಿ `ಚಂದಿರ ಬೇಕೆಂದವನು’: ವೀಣಾ ಹೆಗಡೆ


“ಎರಡು ತಲೆಮಾರುಗಳ ನಡುವಿನ ದುರಂತ ಕೊಂಡಿಗಳನ್ನು ಬೆಸೆಯುವ ಕೃತಿಯಿದು. ತಂದೆಯು ಪ್ರಸಿದ್ದ ವೈದ್ಯನಾಗಿದ್ದರೂ, ತಾಯಿಯು ಕೆಲವು ಕಠಿಣ ನಿರ್ಧಾರಗಳಿಂದ ಆತನ ಪರಿಚಯವೇ ಇಲ್ಲದಂತೆ ಮಗಳು ಮಿಮಿ ಬೇರ್ಡ್ ಬೆಳೆಯುತ್ತಾಳೆ. ಮನೋರೋಗಿಯಾಗಿದ್ದ ಅಪ್ಪನ ದುರಂತ ಜೀವನವು ಆಕೆಯೆದುರು ತೆರೆದುಕೊಳ್ಳುತ್ತದೆ. ಅವನ ಬವಣೆಗಳ ವಿವರಗಳು ಅನಾವರಣಗೊಳ್ಳುತ್ತಾ ಸಾಗುವ ವಸ್ತುವನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ ಎನ್ನುತ್ತಾರೆ ವಿಮರ್ಶಕಿ ವೀಣಾ ಹೆಗಡೆ. ಅವರು ಲೇಖಕಿ ಪ್ರಜ್ಞಾ ಶಾಸ್ತ್ರಿ ಅವರ ಚಂದಿರ ಬೇಕೆಂದವನು ಪುಸ್ತಕದ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಪುಸ್ತಕ: ಚಂದಿರ ಬೇಕೆಂದವನು
ಮೂಲ ಲೇಖಕರು: ಮಿಮಿ ಬೇರ್ಡ್
ಕನ್ನಡಕ್ಕೆ: ಪ್ರಜ್ಞಾ ಶಾಸ್ತ್ರಿ
ಬೆಲೆ: 180
ಪುಟಗಳು:268
ಪ್ರಕಾಶನ: ಛಂದ ಪುಸ್ತಕ

ಅಪ್ಪನ ಜೀವನದ ಕಥೆಯನ್ನು ಬರೆದ ಮಗಳ ಕಥೆ. ಒಂದರ್ಥದಲ್ಲಿ ವ್ಯಥೆಯೂ. ಚರ್ಮರೋಗ ತಜ್ಞ ವೈದ್ಯರಾದ ಡಾ.ಪೆರಿ ಬೇರ್ಡ್ ರ ಮಗಳು ಮಿಮಿಬೇರ್ಡ್ ಬಿಚ್ಚಿಟ್ಟ ಕಥನವೀ ಪುಸ್ತಕ. ತಮ್ಮ ತಂದೆಯೊಡನಾಡಿದ್ದು ಆರೇ ವರ್ಷಗಳು.ಮಿಮಿ ಅವರಿಗೆ ಆರು ವರ್ಷವಾದಾಗ ತಂದೆ ಅವರ ಕುಟುಂಬದಿಂದ ದೂರವಾದರು. ಹಾಗೆ ದೂರವಾಗುವ ಅಗತ್ಯ ಅವರಿಗೇನಿತ್ತು? ಅಷ್ಟು ಚೆನ್ನಾಗಿರುವ ಹೆಂಡತಿ, ಮುದ್ದು ಮಕ್ಕಳನ್ನು ಯಾಕೆ ಬಿಟ್ಟು ಹೋದರು ತಂದೆ? ಅಂತಹ ಸಂದರ್ಭವೇನಿತ್ತು? ಎಂದು ಮಿಮಿ ತಿಳಿಯುವ ವೇಳೆಗೆ ಅವರು(ಮಿಮಿ) ಐವತ್ತಾರರ ಹರೆಯದಲ್ಲಿದ್ದರು. ತಂದೆಯ ಬಗೆಗಿನ ಮಾತುಕಥೆಗೆ ಆಸ್ಪದವನ್ನೇ ಕೊಡದ ತಾಯಿ.ಮಗಳಿಗೂ ತಂದೆಯ ಬಗ್ಗೆ ತಿಳಿದುಕೊಳ್ಳುವ ಹಂಬಲವನ್ನು ಕಸಿಯಿತು. ಉನ್ಮಾದ ಗ್ರಸ್ತ ಖಿನ್ನತೆಯಿಂದಾಗಿ ಜೀವನವಿಡೀ ಬಳಲಿದ, ಎಲ್ಲ ಸುಖ ಕಳೆದುಕೊಂಡ ತಜ್ಞ ವೈದ್ಯರೊಬ್ಬರ ಕಥೆಯಿದು. ಅಂತಹ ಮಾನಸಿಕ ವೈಪರೀತ್ಯದಿಂದ ಬಳಲುತ್ತಿರುವಾಗಲೇ ಬರೆದ ಅನುಭವಗಳನ್ನು ಓದಿದಾಗಲೇ ಮಿಮಿ ಅವರಿಗೆ ಅಪ್ಪನೆಂಬ ಒಗಟನ್ನು ಬಿಡಿಸಲು ಸಾಧ್ಯವಾದದ್ದು.

ಅಂದಿನ ದಿನಗಳಲ್ಲಿ(1940-70) ಮಾನಸಿಕ ರೋಗಿಗಳಿಗೆ ನೀಡುತ್ತಿದ್ದ ಹಿಂಸಾತ್ಮಕ ಚಿಕಿತ್ಸೆಗಳು, ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ ,ವೈದ್ಯಕೀಯ ಸಿಬ್ಬಂದಿ ತೋರುವ ತಾತ್ಸಾರ ಹೀಗೆ ಎಲ್ಲ ವಿವರಗಳನ್ನೊಳಗೊಂಡ, ಪೆರಿ ಅವರ ಕೈ ಬರಹದಲ್ಲಿರುವ ವಿವರಗಳು ದೊರೆತಾಗ ಮಿಮಿಗಾಗುವ ಅನುಭವ, ದುಃಖ ವರ್ಣಿಸಲು ಸಾಧ್ಯವಿಲ್ಲ.ಓದುಗರಿಗೇ ಕಣ್ಣು ಮಂಜಾಗುವಾಗ ಅವರಿಗೆ ಯಾವ ಪರಿ ನೋವಾಗಿರಬೇಡ? ಓದುತ್ತ, ಓದುತ್ತ ನಾವೇ ಮಿಮಿಯಾಗಿಬಿಡುವಂತಾಗುತ್ತದೆ. ಆ ಮಾನಸಿಕ ಸ್ಥಿತಿಯಲ್ಲೂ, ಕ್ರೂರ ಚಿಕಿತ್ಸೆಯ ಮಧ್ಯದಲ್ಲೂ, ತಿರಸ್ಕಾರ ಗಳ ನಡುವೆಯೂ ಡಾ.ಪೆರಿ ತನಗುಂಟಾದ ಮಾನಸಿಕ ರೋಗಕ್ಕೆ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ತೊಡಗಿದ್ದರು ಮತ್ತು ಅದರಲ್ಲಿ ಸಾಫಲ್ಯ ಗಳಿಸುವ ಹಂತಕ್ಕೆ ಬಂದಿದ್ದರು ಎನ್ನುವುದು ಬೆರಗೆನಿಸುತ್ತದೆ.

ಬಹುಶಃ ಸ್ವತಃ ವೈದ್ಯರಾದುದರಿಂದ ಅಂಥ ಮಾನಸಿಕ ವೈಕಲ್ಯವನ್ನು ಮೆಟ್ಟಿ ದೃಢಮನದಿಂದ ಕೆಲಸ ಮಾಡುವುದು ಸಾಧ್ಯವಾಗಿರಬಹುದು. ಅಷ್ಟು ಪ್ರತಿಭಾವಂತ ತಂದೆಯನ್ನು ಹೊಂದಿದ್ದರೂ, ಅವರೊಡನಾಡದ, ವಾತ್ಸಲ್ಯವನ್ನನುಭವಿಸದ ದುರದೃಷ್ಟ ಪುತ್ರಿಯಾಗಿ ಕಾಣುತ್ತಾರೆ ಮಿಮಿ. ಈ ಪುಸ್ತಕವನ್ನು ಬೇಗ ಬೇಗನೆ ಓದಲಾಗದು. ಅಷ್ಟು ಸ್ಪಂದಿಸುತ್ತವೆ ವಿವರಗಳು.ಓದಿದ ನಂತರ ಬಹಳ ಕಾಲ ಕಾಡುತ್ತದೆ. ಮನವೆಲ್ಲ ಭಾರವಾಗುತ್ತದೆ. ಅನುವಾದ ಸೊಗಸಾಗಿದೆ. ಓದಿನ ಸುಖಕ್ಕೆ ಎಲ್ಲೂ ಅಡ್ಡಿಯುಂಟಾಗುವುದಿಲ್ಲ. ಓದಿದ ನಂತರ ಇನ್ನೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳಲು ಕೆಲಕಾಲ ಬೇಕು. ಎರಡು ತಲೆಮಾರುಗಳ ನಡುವಿನ ದುರಂತ ಕೊಂಡಿಗಳನ್ನು ಬೆಸೆಯುವ ಕೃತಿಯಿದು. ತಂದೆಯು ಪ್ರಸಿದ್ದ ವೈದ್ಯನಾಗಿದ್ದರೂ, ತಾಯಿಉ ಕೆಲವು ಕಠಿಣ ನಿರ್ಧಾರಗಳಿಂದ ಆತನ ಪರಿಚಯವೇ ಇಲ್ಲದಂತೆ ಮಗಳು ಮಿಮಿ ಬೇರ್ಡ್ ಬೆಳೆಯುತ್ತಾಳೆ. ಮನೋರೋಗಿಯಾಗಿದ್ದ ಅಪ್ಪನ ದುರಂತ ಜೀವನವು ಆಕೆಯೆದುರು ತೆರೆದುಕೊಳ್ಳುತ್ತದೆ. ಅವನ ಬವಣೆಗಳ ವಿವರಗಳು ಅನಾವರಣಗೊಳ್ಳುತ್ತಾ ಸಾಗುವ ವಸ್ತುವನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.

- ವೀಣಾ ಹೆಗಡೆ
MORE FEATURES

ಅನುಭವವೆನ್ನುವ ಆಸ್ವಾದವನ್ನು ಮೀರಿಸುವ ಅನುಭೂತಿ ‘ಅಪ್ಪ ಕಾಣೆಯಾಗಿದ್ದಾನೆ’ : ದಯಾ ಗಂಗನಘಟ್ಟ

03-02-2023 ಬೆಂಗಳೂರು

''ಬಿಳೀ ಸುಣ್ಣದ ಗೋಡೆಯ ಮೇಲೆ ಬಿಸಿಲು ಕೋಲೊಂದು ನೆರಳನ್ನು ಚಿತ್ತಾರವಾಗಿ ಹರಡುವಂತೆ ಬೇಲೂರು ರಘುನಂದನ್ ರವರ ಕಥ...

ನಿರಂತರ ‘ನೃತ್ಯ ಸಂಭ್ರಮ’

03-02-2023 ಬೆಂಗಳೂರು

''ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರ ದಾಸರು ಸಂಗೀತ ಕಲಿಕೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಿ...

ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುವ ಕಲೆ ‘ಕಥಾಗತ’ : ಸದ್ಯೋಜಾತ ಭಟ್ಟ

03-02-2023 ಬೆಂಗಳೂರು

''ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಆಕಾಲಕ್ಕೆ ಕೊಂಡೊಯ್ಯುವ ಕಲೆ ನವೀನ್ ಅವರು ಸಿದ್ಧಿಸಿಕೊಂಡ...