ಗಂಭೀರವಾದ ಸಾಹಿತ್ಯ ವಿಮರ್ಶೆಗಳ ಸ್ಥಾನಮಾನ ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದೆ; ಬಸವರಾಜ ಕಲ್ಗುಡಿ

Date: 05-05-2024

Location: ಬೆಂಗಳೂರು


ಬೆಂಗಳೂರು: ಅಂಕಿತ ಪುಸ್ತಕದ ವತಿಯಿಂದ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನದ ನೆನಪುಗಳು, ಉದಯಕುಮಾರ ಹಬ್ಬು ಅವರ ಕಾದಂಬರಿ ‘ಚಂದ್ರಗುಪ್ತ ಮೌರ್ಯ’, ವೈ.ಜಿ. ಮುರಳೀಧರನ್ ಅವರ ‘ವಿಕ್ಟರ್ ಫ್ರಾಂಕಲ್’ ಕಥನ, ಮಹಾಬಲ ಸೀತಾಳಭಾವಿ ಅನುವಾದಿಸಿರುವ ಕಾಳಿದಾಸ ಮಹಾಕವಿಯ ‘ಮೇಘದೂತ’ ಕೃತಿಗಳ ಲೋಕಾರ್ಪಣೆ ಸಮಾರಂಭವು 2024 ಮೇ 5 ಭಾನುವಾರದಂದು ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಜಾವಾಣಿ ದಿನಪತ್ರಿಕೆಯ ನಿರ್ದೇಶಕ ಶಾಂತಕುಮಾರ್‌, "ಕಾಳಿದಾಸನ ಮೇಘದೂತ ಮಹಾಕಾವ್ಯ ಯಾರಿಗೆ ತಾನೇ ಗೊತ್ತಿಲ್ಲ. ಈ ಅಖಂಡ ಮಹಾಕಾವ್ಯವೂ ಕನ್ನಡಿಗರಿಗೆ ಹೊಸತ್ತೇನಲ್ಲ. ಬೇಂದ್ರೆ, ಕುವೆಂಪು ಅವರಿಂದ ಹಿಡಿದು ಎಲ್ಲರನ್ನೂ ಕಾಡಿದ ಈ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅದ್ಭುತ ಕೊಡುಗೆಯಾಗಿದೆ," ಎಂದರು.

ವೈ.ಜಿ. ಮುರಳೀಧರನ್ ಅವರ ‘ವಿಕ್ಟರ್ ಫ್ರಾಂಕಲ್’ ಕಥನ ಕುರಿತು ಮಾತನಾಡಿ, ವಿಕ್ಟರ್ ಫ್ರಾಂಕಲ್ ನ ಯುದ್ಧದ ಕಥನ, ಕುಟುಂಬದ ವಿಚಾರಗಳನ್ನು ಹಾಗೂ ಅವರು ಅನುಭವಿಸಿದ ಯಾತನೆಯನ್ನು ಇಲ್ಲಿ ತಿಳಿಸಲಾಗಿದೆ. ಬೆಂಕಿಯ ಕುಲುಮೆಯಲ್ಲಿ ಹಾದು ಬಂದ ವಿಕ್ಟರ್ ಫ್ರಾಂಕಲ್ ಬದುಕು ಬಂಗಾರದ ಕುಲುಮೆಯಾಗಿ ಪರಿವರ್ತನೆಗೊಳಿಸುವ ಆತನ ಚಾಣಾಕ್ಷತನವನ್ನು ಇಲ್ಲಿ ನೋಡಬಹುದು. ಕನ್ನಡಕ್ಕೆ ಈ ಕೃತಿಯ ಅಗತ್ಯತೆ ಬಹಳಷ್ಟಿದೆ," ಎಂದು ತಿಳಿಸಿದರು.

ಉದಯಕುಮಾರ ಹಬ್ಬು ಅವರ ಕಾದಂಬರಿ ‘ಚಂದ್ರಗುಪ್ತ ಮೌರ್ಯ’ ಕೃತಿ ಕುರಿತು ಮಾತನಾಡಿ, ಚಂದ್ರಗುಪ್ತನ ಕುರಿತು ಬೇರೆ ಕೃತಿಗಳಲ್ಲಿ ಸಿಗದಂತಹ ಅದೆಷ್ಟೋ ವಿಚಾರಗಳು ಈ ಕೃತಿಯಲ್ಲಿ ಕಾಣಸಿಗುತ್ತದೆ. ಚಾರಿತ್ರಿಕ ಅಂಶಗಳನ್ನು ಇಟ್ಟುಕೊಂಡು ಅದರ ಆದಾರದ ಮೇಲೆ ರಚಿಸಿದ ಕಾದಂಬರಿ ಇದಾಗಿದ್ದು, ಗಮನ ಸೆಳೆಯುತ್ತದೆ," ಎಂದರು.

ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನದ ನೆನಪುಗಳು ಕುರಿತು ಮಾತನಾಡಿ, ಪದ್ಮರಾಜ ಅವರ ನೆನಪುಗಳು ಎಷ್ಟು ಸಮೃದ್ಧವಾಗಿದೆ ಎಂದು ಈ ಕೃತಿಯನ್ನು ಓದಿದರೆ ನಿಮಗೆ ಅರಿವಿಗೆ ಬರುತ್ತದೆ. ಈ ಅನುಭವ ಕಥನದಲ್ಲಿ ಪ್ರಜಾವಾಣಿಯನ್ನು ಅವರು ಗ್ರಹಿಸುತ್ತಾ, ಬೆಳೆದು ಬಂದ ಬಗ್ಗೆಯೂ ಚಿತ್ರಿಸಿದ್ದಾರೆ. ಒಟ್ಟಾರೆಯಾಗಿ ಅವರು ವೃತ್ತಿಯಲ್ಲಿನ್ನು ಕಲಿಯುತ್ತಾ, ಜತೆಗಿದ್ದವರನ್ನೂ ಬೆಳೆಸುತ್ತಾ, ಏರುತ್ತಾ ಬಂದಿರುವುದನ್ನು ನೀವು ಕಾಲಾನುಕ್ರಮದಲ್ಲಿ ನೋಡಬಹುದು" ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಲೇಖಕ ಬಸವರಾಜ ಕಲ್ಗುಡಿ ಮಾತನಾಡಿ, "ಕನ್ನಡದಲ್ಲಿ ಸಣ್ಣ ನಿಯತಕಾಲಿಕೆಗಳು ಸಾಕಷ್ಟು ರೀತಿಯ ಮತ್ತು ಗಂಭೀರವಾದ ವಿಮರ್ಶೆಗಳನ್ನು ಪ್ರಕಟಿಸಿದೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ಅವೆಲ್ಲವೂ ಕೂಡ ಈಗ ಮಾಯವಾಗಿವೆ. ವಿಶ್ವವಿದ್ಯಾಲಯದ ಅಕಾಡೆಮಿಕ್ ವಾತಾವರಣ ಈಗ ಶೂನ್ಯ ಸಂಪಾದನೆಯಾಗಿದೆ. ಇಂತಹ ಸಂದರ್ಭದಲ್ಲಿ ಗಂಭೀರವಾದ ವಿಮರ್ಶೆಗೆ ಸ್ಥಾನ ಎಲ್ಲಿದೆ ಎಂಬ ಪ್ರಶ್ನೆಗೆ ನನ್ನಂತಹವನನ್ನು ಮತ್ತು ಹಂಪನಾ ಅವರಂತವರನ್ನು ಕಾಡುತ್ತದೆ. ಈ ಬಗ್ಗೆ ನಾವೆಲ್ಲರೂ ಕೂಡ ಯೋಚನೆ ಮಾಡಬೇಕಾದ ಅವಶ್ಯಕತೆಯಿದೆ. ಏಕೆಂದರೆ ಇದು ಕೇವಲ ಸಾಹಿತ್ಯ ಸಂಶೋಧನೆಯ ಗಂಭೀರತೆಯ ಪ್ರಶ್ನೆ ಮಾತ್ರ ಅಲ್ಲ. ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದೆ," ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಸಿದ್ಧ ಲೇಖಕ ಜಗದೀಶ ಶರ್ಮಾ ಸಂಪ ಮಾತನಾಡಿ, "ಕಾಳಿದಾಸ ಮಹಾಕವಿಯ ‘ಮೇಘದೂತ’ ಹಾಗೂ ‘ಚಂದ್ರಗುಪ್ತ ಮೌರ್ಯ’ ಕೃತಿಯಲ್ಲಿ ಹಲವು ಭಿನ್ನತೆ, ಹಲವು ಸಾಮ್ಯಗಳನ್ನು ಗಮನಿಸಿದೆ. ಒಂದು ಪದ್ಯಕಾವ್ಯ ಇನ್ನೊಂದು ಪ್ರಾಚೀನ ಗದ್ಯಕಾವ್ಯದ ಇವತ್ತಿನ ಆವೃತ್ತಿಯ ಕಾದಂಬರಿಯ ಎಂದು ಭಾವಿಸುವುದಾದರೆ ಅದು ಪದ್ಯಕಾವ್ಯವೇ. ಈ ಎರಡೂ ಕೂಡ ಇತಿಹಾಸ ಕಾಲಘಟ್ಟದ್ದೆ. ಚರಿತ್ರೆಯ ಕಾಲಘಟ್ಟದ ಎರಡು ಕೃತಿಗಳು. ಈ ಕೃತಿಗಳನ್ನು ಗಮನಿಸಿದಾಗ ಸಾವಿರ ವರ್ಷದ ವ್ಯಕ್ತಿ ಹಾಗೂ ಎರಡು ಸಾವಿರದ ವರ್ಷದ ಇಂದಿನ ವ್ಯಕ್ತಿಯೊಬ್ಬ ಏನು ಯೋಚಿಸುತ್ತಿದ್ದ. ನಾವು ಇಂದು ಏನು ಯೋಚಿಸುತ್ತಿದ್ದೇವೆ ಅನ್ನುವುದನ್ನು ಇಟ್ಟುಕೊಂಡು ನೋಡಿದಾಗ ಎರಡು ಕೃತಿಗಳು ಕೂಡ ಬಹಳ ಮಹತ್ವದಾಗಿದೆ," ಎಂದು ತಿಳಿಯುತ್ತದೆ ಎಂದರು.

ವೇದಿಕೆಯಲ್ಲಿ ಕೃತಿಯ ಲೇಖಕರುಗಳಾದ ಪದ್ಮರಾಜ ದಂಡಾವತಿ, ಉದಯಕುಮಾರ ಹಬ್ಬು, ವೈ. ಜಿ. ಮುರಳೀಧರನ್‌, ಮಹಾಬಲ ಸೀತಾಳಭಾವಿ ಸೇರಿದಂತೆ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವು ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಗಳಲ್ಲಿ ನೇರ ಪ್ರಸಾರವಾಯಿತು.

 

 

 

 

MORE NEWS

ಬರವಣಿಗೆಗೆ ಅನುಭವ ಎಷ್ಟು ಮುಖ್ಯವೋ ಅಧ್ಯಯನವೂ ಅಷ್ಟೇ ಮುಖ್ಯ: ಬರಗೂರು ರಾಮಚಂದ್ರಪ್ಪ

18-05-2024 ಬೆಂಗಳೂರು

ಬೆಂಗಳೂರು: ಇಲ್ಲಿ ಬಿಡುಗಡೆಗೊಂಡ ಮೂರು ಪುಸ್ತಕಗಳು ವಿಭಿನ್ನ ವಿಚಾರಗಳನ್ನು ಒಳಗೊಂಡಿದ್ದರೂ, ಅವೆಲ್ಲವೂ ಸಾಮಾಜಿಕ ಕಾಳಜಿಯ...

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿನಿಧಿ ರಾಜ್ಯ ಪ್ರಶಸ್ತಿಗಳಿಗೆ ಆಹ್ವಾನ 

18-05-2024 ಬೆಂಗಳೂರು

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿ...

ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ; ಎಚ್.ಎಲ್. ಪುಷ್ಟ

17-05-2024 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಡಾ. ಅನುಪಮಾ ನಿರಂಜನ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ...