ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

Date: 06-10-2020

Location: ಬೆಂಗಳೂರು


ಮೋ.ಕ. ಗಾಂಧಿ ಅಥವಾ ಮಹಾತ್ಮ ಗಾಂಧಿ ಅವರ ಬರವಣಿಗೆ ಹಾಗೂ ವಿಚಾರಗಳಿಗೆ ಕನ್ನಡದ ಮನಸ್ಸುಗಳು ಮುಖಾಮುಖಿಯಾಗಿ, ಅನುವಾದಿಸುತ್ತ ಬಂದಿವೆ. ಗಾಂಧಿಯನ್ನು ಮುಖಾಮುಖಿಯನ್ನು ಅವಲೋಕನ ಮಾಡಿರುವ ವಿಮರ್ಶಕಿ ಆರ್.ತಾರಿಣಿ ಶುಭದಾಯಿನಿ ಅವರು ಗಾಂಧಿ ವಿಚಾರಗಳ ಕನ್ನಡೀಕರಣಗೊಳ್ಳುತ್ತ ಬಂದಿರುವ ಪ್ರಕ್ರಿಯೆಯನ್ನು ವಿವರಿಸಿದ್ದಾರೆ.

ಗಾಂಧಿ ಮತ್ತು ಅನುವಾದ

ರಾಜಕಾರಣದ ನಡುವೆ ಗಾಂಧೀಜಿಯವರು ಬರೆಯುವ ಕ್ರಿಯಾಶೀಲತೆಯನ್ನು ಕಾಪಿಟ್ಟುಕೊಂಡಿದ್ದರು ಎನ್ನುವುದಕ್ಕೆ ಅವರ ಬರಹಗಳು ಸಾಕ್ಷಿಯಾಗಿವೆ. ಅವರ ಆತ್ಮಕತೆ, ಹಿಂದ್ ಸ್ವರಾಜ್, ದಕ್ಷಿಣ ಆಫ್ರಿಕಾದ ಸತ್ಯಾಗ್ರಹ ಕುರಿತ ಬರವಣಿಗೆಗಳು ಇಂದಿಗೂ ಸಮಕಾಲೀನವಾಗಿ ಚರ್ಚೆಯಲ್ಲಿರುವ ಕೃತಿಗಳಾಗಿ ಚಾಲನೆಯಲ್ಲಿವೆ. ಗಾಂಧೀಜಿ ಈ ಕೃತಿಗಳನ್ನು ಬರೆಯುವುದಕ್ಕೂ ಮುನ್ನ ಸಾಕಷ್ಟು ಓದನ್ನು ಮಾಡಿದ್ದರು. ಭಾರತೀಯ ಮತ್ತು ಯುರೋಪಿನ ಅನೇಕ ಚಿಂತನೆಗಳನ್ನೂ ಚಿಂತಕರನ್ನೂ ಅನುಸಂಧಾನ ಮಾಡಿದ್ದರು. ಅದರ ಪರಿಣಾಮವಾಗಿಯೇ ತಾವು ಅನೇಕ ತತ್ವಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು ಎನ್ನುವುದನ್ನು ಅವರು ಮುಚ್ಚುಮರೆಯಿಲ್ಲದೆ ಹೇಳಿದ್ದಾರೆ. ರಸ್ಕಿನ್ನನ ‘ಅನ್ ಟು ದಿಸ್ ಲಾಸ್ಟ್’, ಟಾಲ್‍ಸ್ಟಾಯ್ ಅವರ ‘ದ ಕಿಂಗ್‍ಡಮ್ ಆಫ್ ಗಾಡ್ ಈಸ್ ವಿದಿನ್ ಯೂ’, ಥೊರೊ ಅವರ ‘ಆನ್ ಸಿವಿಲ್ ಡಿಸ್‍ಒಬಿಡಿಯನ್ಸ್’ ಕೃತಿಗಳನ್ನು ಗಾಂಧೀಜಿಯವರು ತಮ್ಮ ಬದುಕಿನ ನಿರ್ಣಾಯಕ ಕೃತಿಗಳನ್ನಾಗಿಸಿಕೊಂಡಿದ್ದಾರೆ. ಇವನ್ನು ತಮ್ಮ ಭಾಷೆಗೆ ತರ್ಜುಮೆ ಮಾಡಬೇಕೆಂದೆನಿಸಿದಾಗ ಈ ಕೃತಿಗಳಲ್ಲಿನ ಕೆಲವು ಭಾಗಗಳನ್ನು ಅನುವಾದ ಮಾಡಿದ್ದಾರೆ; ಅವನ್ನು ತಮ್ಮ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ಮಾಡಿದ್ದಾರೆ. ಇದು ಗಾಂಧಿಯವರಿಗೆ ಇದ್ದ ಪ್ರಾಥಮಿಕ ಭಾಷಾಂತರದ ನಂಟು ಎನ್ನಬಹುದು.

ಗಾಂಧೀಜಿ ತಮ್ಮನ್ನು ತಾವು ವೃತ್ತಿಪರ ಬರಹಗಾರರೆಂದು ಭಾವಿಸದಿದ್ದರೂ ಅವರು ಬರವಣಿಗೆಯನ್ನು ಇಷ್ಟಪಟ್ಟು ಮಾಡುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ‘ಇಂಡಿಯನ್ ಒಪಿನಿಯನ್’ ಪತ್ರಿಕೆಗೆ ಬರೆಯುತ್ತಿದ್ದರು. ಆ ಹವ್ಯಾಸವು ಭಾರತಕ್ಕೆ ಮರಳಿದ ನಂತರವೂ ಮುಂದುವರೆದು ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪತ್ರಿಕಾ ಬರವಣಿಗೆಗಳನ್ನು ಮಾಡಿದರು. ಗಾಂಧಿ ಹರಿಜನ್, ಯಂಗ್ ಇಂಡಿಯಾ(ಇಂಗ್ಲಿಷ್), ನವಜೀವನ (ಗುಜರಾತಿ) ಎಂಬ ಮಾಸಪತ್ರಿಕೆಯೂ ಸೇರಿದಂತೆ ಹಲವಾರು ಪತ್ರಿಕೆಗಳಿಗೆ ಬರೆಯುತ್ತಿದ್ದರು. ಹಿಂದ್ ಸ್ವರಾಜ್ ಕೃತಿಯನ್ನು ತಾವೇ ಭಾಷಾಂತರ ಮಾಡಿದ್ದರು. ಇದರಿಂದ ಅವರು ಒಬ್ಬ ಬಹುಭಾಷಿಕರಾಗಿದ್ದರು; ಆ ಕಾರಣದಿಂದಲೇ ಒಬ್ಬ ಉತ್ತಮ ಅನುವಾದಕರೂ ಆಗಿದ್ದರು ಎಂದು ಊಹಿಸಬಹುದು.

ಗಾಂಧೀಜಿ ಸ್ವತಃ ಅನುವಾದಕರಾಗಿದ್ದರು. ಅವರು ತಮ್ಮ ಈ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ ನೋಡಿದ್ದರೊ ಎಂತೊ ಆದರೆ ಅವರ ರಾಜಕೀಯ ಜೀವನದಲ್ಲಿ ಭಾಷಾಂತರವೆನ್ನುವುದು ಒಂದು ಪ್ರಮುಖ ಪಾತ್ರವನ್ನು ವಹಿಸಿತ್ತು. ಗಾಂಧೀಜಿಗೆ ಭಾಷಾಂತರವೆನ್ನುವುದು ಸಂವಹನದ ಸಾಧನವಾಗಿತ್ತು; ಸೈದ್ಧಾಂತಿಕ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಅನಿವಾರ್ಯ ಮಾಧ್ಯಮವಾಗಿತ್ತು. ಗಾಂಧೀಜಿಯವರ ಹೋರಾಟ ಜೀವನ ಆರಂಭಕ್ಕೂ ಮುನ್ನ ಅವರು ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಂಡರು. ಅವರ ಜೀವನದಲ್ಲಿ ಪ್ರಭಾವ ಬೀರಿದ ಕೃತಿಗಳನ್ನು ಗಾಂಧೀಜಿಯವರು ಉಲ್ಲೇಖಿಸಿದ್ದಾರೆ. ಅವರು ಪಾರಾಯಣ ಮಾಡುತ್ತಿದ್ದ ಭಗವದ್ಗೀತೆ, ರಾಮಾಯಣ ಮತ್ತು ಅನೇಕ ಪುರಾಣಗಳು ಸಂಸ್ಕøತ ಮತ್ತು ಗುಜರಾತಿ ಭಾಷೆಗಳಿಂದ ಅವರನ್ನು ಮುಟ್ಟಿದವು.

ಗಾಂಧೀಜಿಯವರು ಇಂಗ್ಲೆಂಡಿನಲ್ಲಿದ್ದಾಗ ಔಪಚಾರಿಕ ಶಿಕ್ಷಣದ ಜೊತೆ ಅನೇಕ ಚಿಂತಕರ/ಸಾಧಕರ ಸಂಪರ್ಕವನ್ನು ಹೊಂದಿದ್ದರು. ಫೇಬಿಯನ್ ಸಮಾಜವಾದಿಗಳು, ಥಿಯೊಸೊಫಿಸ್ಟರು, ಅಧ್ಯಾತ್ಮವಾದಿಗಳು ಆಧುನಿಕತೆಯ ಜಿಜ್ಞಾಸೆಯನ್ನು ಮಾಡುತ್ತಾ ಅದಕ್ಕೆ ಪರ್ಯಾಯ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದವರು. ಇಂತವರ ಪ್ರಭಾವ ವಿಕ್ಟೋರಿಯನ್ ಸಮಾಜದ ಮೇಲೆ ದಟ್ಟವಾಗಿತ್ತು. ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿದ್ದ ಗಾಂಧಿ ಈ ಚಿಂತನೆಗಳ ಸಂಪರ್ಕಕ್ಕೆ ಬಂದಿದ್ದರು.

ಗಾಂಧೀಜಿಯವರಿಗಿದ್ದ ಯಹೂದಿ ಗೆಳೆಯರ ಪ್ರಭಾವದಿಂದ ಯುರೋಪಿಯನ್ ಟ್ರಾನ್ಸ್‍ನ್‍ಡೆಂಟಲಿಸಂ ತತ್ವಗಳನ್ನು ಇಂಗ್ಲಿಷ್ ಅನುವಾದಗಳಲ್ಲಿ ಓದುತ್ತಿದ್ದರು. ಈ ಪರಿಣಾಮದಿಂದಲೋ ಅವರ ಗಮನಕ್ಕೆ ಹೆನ್ರಿ ಡೇವಿಡ್ ಥೋರೊನ ಆಶ್ರಮ ತತ್ವ, ಕರ ನಿರಾಕರಣೆ ಧೋರಣೆ ಮುಂತಾದವು ಬಂದವು. ಅವುಗಳನ್ನು ಅವರು ಮುಂದೆ ತಮ್ಮ ರಾಜಕೀಯ ಜೀವನದಲ್ಲಿ ಪ್ರಯೋಗ ಮಾಡಿದರು. ಕುತೂಹಲಕಾರಿಯಾದ ಸಂಗತಿ ಎಂದರೆ ಅನೇಕ ಭಾರತೀಯ ತತ್ವ ಚಿಂತನೆಗಳ ಗ್ರಂಥಗಳನ್ನು ಗಾಂಧಿ ಇಂಗ್ಲೆಂಡಿನಲ್ಲಿದ್ದಾಗ ಇಂಗ್ಲಿಷ್ ಅನುವಾದಗಳಲ್ಲಿ ಓದಿದ್ದರು. ಇವುಗಳಲ್ಲಿ ಪ್ರಮುಖವಾದವು ಬುದ್ಧನ ಕುರಿತು ಮ್ಯಾಥ್ಯೂ ಆರ್ನಾಲ್ಡ್ ಬರೆದಿದ್ದ ‘ಲೈಟ್ ಆಫ್ ಏಷ್ಯಾ’, ಎಡ್ವಿನ್ ಆರ್ನಾಲ್ಡ್ ಭಾಷಾಂತರಿಸಿದ ಭಗವದ್ಗೀತೆಯ ಅನುವಾದ, ‘’ದ ಸಾಂಗ್ ಸೆಲೆಸ್ಟಿಯಲ್” ಮುಂತಾದವು. ಓರಿಯೆಂಟಲ್ ವಿದ್ವಾಂಸರು ಅನುವಾದಿಸಿದ್ದ ಅನೇಕ ಗ್ರಂಥಗಳು ಯುರೋಪಿನಲ್ಲಿ ಲಭ್ಯವಿದ್ದವು. ಇವುಗಳಲ್ಲಿ ಅನೇಕ ಪುಸ್ತಕಗಳನ್ನು ಕೂಡ ಗಾಂಧೀ ಓದಿಕೊಂಡಿದ್ದರು. ಅದರ ಪರಿಣಾಮವಾಗಿ ಅವರಿಗೆ ಭಾರತವೆನ್ನುವುದನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿಶಾಲಾರ್ಥದಲ್ಲಿ ಕಲ್ಪಿಸಿಕೊಳ್ಳಬಹುದೆಂಬ ವಿಶ್ಚಾಸ ಹುಟ್ಟಿತು.

ವಾಸ್ತವವಾಗಿ ಗಾಂಧೀಜಿಯವರು ತಮ್ಮ ತತ್ವಚಿಂತನೆಗಳಿಗೆ ಮೇಲ್ಕಾಣಿಸಿದ ಹಲವಾರು ಕೃತಿಗಳು ಕಾರಣವೆಂದು ಅವನ್ನು ಉಲ್ಲೇಖಿಸಿ ಅವನ್ನು ಅನುವಾದ ಮಾಡಿದರೂ ಅದು ಭಾಷಾಂತರದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಹೇಳುವುದಾದರೆ ಅರ್ಥವ್ಯತ್ಯಯದ ರೂಪ ಎನ್ನಬಹುದು. ಭಾಷಾಂತರಗಳು ಮೂಲ ಭಾಷೆ ಹಾಗು ಪರಿಕಲ್ಪನೆಗಳನ್ನು ಅನುವಾದದ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕ ಮಿಸ್ ರೀಡಿಂಗ್ ಮಾಡಿಕೊಳ್ಳುವ ಒಳತಿರುವುಗಳನ್ನು ಹೊಂದಿರುತ್ತವೆ. ಆ ಹಿನ್ನೆಲೆಯಲ್ಲಿ ಹೇಳುವುದಾದರೆ ವಿಕ್ಟೋರಿಯನ್ ಕಾಲದ ಪೊಲಿಟಿಕಲ್ ಬರವಣಿಗೆಗಳಲ್ಲಿ ಒಂದಾದ ‘ಅನ್ ಟು ದಿಸ್ ಲಾಸ್ಟ್’ ಕೃತಿಯು ಗಾಂಧೀಜಿಯರಿಗೆ ಸಮಾಜವಾದದ ದರ್ಶನವನ್ನೇ ಮಾಡಿಸಿತು. ಹಾಗಾಗಿ ಅವರು ಮುಂದೆ ತಮ್ಮ ಸೇವೆಗಳನ್ನು ಅರ್ಥೈಸುವಾಗ ಸರ್ವೋದಯದ ಕಲ್ಪನೆ ಮೂಡುವುದು ಸಮಾನವಾಗಿ ಕಾಯಕ ಮಾಡುವುದರಿಂದ ಮತ್ತು ಪ್ರತಿಯೊಂದು ಕಾಯಕವನ್ನೂ ಗೌರವಿಸುವುದರಿಂದ ಎನ್ನುವುದನ್ನು ಸಾಮಾಜಿಕ ತತ್ವದ ಕಕ್ಷೆಯಾಚೆಗೆ ವಿಸ್ತರಿಸಿ ಅದಕ್ಕೊಂದು ಅನುಭಾವಿಕ ನೆಲೆಯನ್ನು ಒದಗಿಸಿದರು. ಹಾಗೆಯೇ ಗಾಂಧೀಜಿ ಬಳಸಿದ ‘ಅಹಿಂಸೆ’ ಮತ್ತು ‘ಸತ್ಯಾಗ್ರಹ’ ಎನ್ನುವ ಪರಿಭಾಷೆಗಳು ಗಾಂಧೀ ಪರಿಕಲ್ಪನೆಗಳಾಗಿ ಪ್ರಚುರಗೊಂಡವು. ಭಾಷಾಂತರದ ಹಿನ್ನೆಲೆಯಲ್ಲಿ ನೋಡಿದರೆ ಈ ಪದಗಳು ಕಸಿಗೊಂಡಿರುವುದು ಒಂದು ಅರ್ಥಾಂತರದ ಪ್ರಕ್ರಿಯೆಯಲ್ಲಿಯೇ ಎನ್ನಬಹುದು. ಆದರೆ ಇವು ಗಾಂಧೀ ಚಿಂತನೆಗಳಲ್ಲಿ ಪಡೆದುಕೊಂಡ ಸ್ಥಾನ ಹಾಗು ಆನಂತರದಲ್ಲಿ ಬಳಕೆಗೊಂಡ ರೀತಿಗಳು ಅಭೂತಪೂರ್ವವಾದ ಪರಿಣಾಮಗಳನ್ನು ತೋರಿಸಿಕೊಟ್ಟವು ಎನ್ನುವುದನ್ನು ಒಪ್ಪಬೇಕು. ವಾಸ್ತವವಾಗಿ ಈ ಲೇಖನದ ಉದ್ದೇಶ ಭಾಷಾಂತರದ ಜಿಜ್ಞಾಸೆಯಲ್ಲ; ಗಾಂಧೀ ಬರವಣಿಗೆಗಳಲ್ಲಿ ಭಾಷಾಂತರದ ಪಾತ್ರವನ್ನು ಕಂಡುಕೊಳ್ಳುವಿಕೆಯನ್ನು ಗಮನಿಸುವುದಕ್ಕಾಗಿ ಮಾತ್ರ ಈ ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕಾಯಿತು.

ಬಹುಭಾಷಿಕರಾಗಿದ್ದ ಗಾಂಧೀಜಿ

ಗಾಂಧೀಜಿ ಸ್ವತಃ ದ್ವಿಭಾಷೆಯಲ್ಲಿ ಬರೆಯುತ್ತಿದ್ದವರು. ತಮ್ಮ ಯೌವನದ ದಿನಗಳಲ್ಲಿಯೇ ಅವರು ಇಂಗ್ಲೆಂಡಿಗೆ ತೆರಳಬೇಕಾದುದರಿಂದ ಅಲ್ಲಿ ಅವರು ಇಂಗ್ಲಿಷನ್ನು ಕಲಿಯಲೇ ಬೇಕಾಗಿದ್ದುದು ಅನಿವಾರ್ಯವಾಗಿತ್ತು. ಆದರೆ ಸಂಸ್ಕೃತಿಯ ದೃಷ್ಟಿಯಿಂದ ಗುಜರಾತೀ ಸಂಸ್ಕೃತಿ (ಅದನ್ನು ಕೊಂಚ ವಿಸ್ತರಿಸಿ ಹೇಳಬಹುದಾದರೆ ಭಾರತೀಯ ಹಿಂದೂ ಸಂಸ್ಕೃತಿಯ ದೃಷ್ಟಿಯಿಂದ) ವಾಹಕವೆನಿಸಿದ ತಮ್ಮ ಭಾಷೆಯನ್ನು ಉಪಯೋಗಿಸುವುದು ಸಹ ಅನಿವಾರ್ಯವೇ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಬದುಕುವ ಸಂದರ್ಭದಲ್ಲಿ ತಮ್ಮೊಂದಿಗಿದ್ದ ತಮಿಳು ಮತ್ತು ಗುಜರಾತಿ ಜನರನ್ನು ಸಂಘಟಿಸುವ ಮೂಲಕ ತಮ್ಮ ಹೋರಾಟಗಳನ್ನು ರೂಪಿಸಬೇಕಾಗಿತ್ತು. ಅಲ್ಲದೆ ಅಲ್ಲಿನ ಅನೇಕ ಭಾರತೀಯ ಸಮುದಾಯಗಳು ವಿಭಿನ್ನವಾದ ಭಾಷಿಕ ಸಮುದಾಯಗಳಾಗಿದ್ದರಿಂದ ಅವರನ್ನು ಒಂದುಗೂಡಿಸುವ ಸಂದರ್ಭದಲ್ಲಿ ಅವರಿಗೆ ಒಂದು ಭಾಷೆ ಬೇಕಿತ್ತು. ಜೊತೆಗೆ ಅವರುಗಳ ಭಾಷೆಗಳಿಗೂ ಅವಕಾಶ ಕೊಡುವುದು ಅವಶ್ಯ ಎಂದು ಗಾಂಧಿ ಭಾವಿಸಿದ್ದರು. ತಾವು ಕೆಲವು ಭಾರತೀಯ ಭಾಷೆಗಳನ್ನು ಕಲಿಯುವ ಪ್ರಯತ್ನವನ್ನೂ ಅವರು ಆ ಸಮಯದಲ್ಲಿ ಮಾಡಿದ್ದರೆಂಬುದನ್ನಿಲ್ಲಿ ನೆನಪು ಮಾಡಿಕೊಳ್ಳಬಹುದು.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಜನಾಂಗೀಯ ಭೇದ ಮತ್ತು ಸಾಮ್ರಾಜ್ಯಶಾಹಿ ಧೋರಣೆಗಳು ಅಲ್ಲಿ ನೆಲೆಸಿದ್ದ ಭಾರತೀಯರನ್ನೂ ಸುಟ್ಟಿದ್ದವಾದ್ದರಿಂದ ಅವರು ಸಂಘಟಿತರಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿತ್ತು. ಇದಕ್ಕಾಗಿ ಅಲ್ಲಿನ ಡಯಾಸ್ಪೊರಿಕ್ ಸಮುದಾಯಗಳು ಸೂಕ್ತ ನಾಯಕತ್ವಕ್ಕಾಗಿ ಹುಡುಕಾಡುತ್ತಿದ್ದ ಸಂದರ್ಭದಲ್ಲಿಯೇ ಗಾಂಧಿಯವರ ಆಗಮನವಾದದ್ದು. ಗಾಂಧಿಯವರಿಗೆ ಜನಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ ಅವರನ್ನು ಒಂದುಗೂಡಿಸುವುದಕ್ಕೆ ಸ್ವಲ್ಪಮಟ್ಟಿನ ಭಾಷಾಂತರ ಬೇಕು ಎನ್ನುವುದು ಗಾಂಧೀಜಿಯವರಿಗೆ ಅರಿವಾಯಿತು. ಅಲ್ಲದೆ ಅವರೊಬ್ಬ ನ್ಯಾಯವಾದಿಯೂ ಆಗಿದ್ದರಿಂದ ಜನರ ಭಾಷೆಯನ್ನು ಕೇಳಿ, ತರ್ಜುಮೆ ಮಾಡಿ ಮೊಕದ್ದಮೆಗಳನ್ನು ನಡೆಸಬೇಕಾಗಿತ್ತು. ಮುಂದೆ ನಡೆಯಲಿದ್ದ ಭಾರತೀಯ ರಾಷ್ಟ್ರೀಯತೆಯನ್ನು ನಿರೀಕ್ಷಿಸಿದವರಂತೆ ಮಿನಿ ಭಾರತದಂತೆ ಇದ್ದ ಅನೇಕ ಭಾಷಿಕ ಹಾಗು ಸಾಂಸ್ಕೃತಿಕ ಸಮುದಾಯಗಳನ್ನು ಅವರು ತಲುಪಬೇಕೆನ್ನುವ ಅವಶ್ಯಕತೆಯನ್ನು ಕಂಡುಕೊಂಡಿದ್ದರು. ಅದಕ್ಕಾಗಿ ಮೊದಲ ಪ್ರಯತ್ನಗಳಲ್ಲಿ ದ್ವೈಭಾಷಿಕ ಸಂವಹನಕ್ಕೆ ತೊಡಗಿದರು.

ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿರುವಾಗ ತರುತ್ತಿದ್ದ ‘ಇಂಡಿಯನ್ ಒಪಿನಿಯನ್’ ಪತ್ರಿಕೆಯಲ್ಲಿ ಅನುವಾದಿತ ಲೇಖನಗಳನ್ನು ಪ್ರಕಟಿಸುತ್ತಿದ್ದರು ಅಥವಾ ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳೆರಡರಲ್ಲಿಯೂ ಲೇಖನಗಳನ್ನು ಬರೆಯಿಸುತ್ತಿದ್ದರು; ಸ್ವತಃ ತಾವೂ ಎರಡು ಭಾಷೆಗಳಲ್ಲಿ ಬರೆಯುತ್ತಿದ್ದರು. ‘ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಂ ರೂಲ್’ ಎನ್ನುವ ಈ ಪುಸ್ತಕವು ಮೊದಲು ಗುಜರಾತಿಯಲ್ಲಿ ಬರೆಯಲ್ಪಟ್ಟಿದ್ದು ಆನಂತರ ಗಾಂಧೀಜಿಯವರೇ ಇಂಗ್ಲಿಷಿಗೆ ಅದನ್ನು ಅನುವಾದಿಸಿದ್ದರು. ಗಾಂಧೀಜಿಯವರು ಸ್ವದೇಶಕ್ಕೆ ಮರಳಿದ ನಂತರವೂ ಅವರ ಬರವಣಿಗೆ ಹೀಗೆ ದ್ವೈಭಾಷಿಕ ಬರವಣಿಗೆ ಅಥವಾ ಭಾಷಾಂತರದಲ್ಲಿ ಪ್ರಕಟಗೊಂಡಿವೆ. ಅವರ ಅನುಯಾಯಿಗಳು ಗುಜರಾತಿಯಲ್ಲಿದ್ದ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಿದೆ ಹಾಗು ಆ ಕೃತಿಗಳು ಪುನಾ ಬೇರೆ ಬೇರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಕೆಲವು ಗಾಂಧೀ ಭಕ್ತರು ಗುಜರಾತಿ ಭಾಷೆಯನ್ನು ಸ್ವಯಂ ಕಲಿತು ಗಾಂಧೀ ಕೃತಿಗಳನ್ನೂ ಅವರ ತತ್ವಸಿದ್ಧಾಂತಗಳಿಗೆ ಸಂಬಂಧಿಸಿದ ಕೃತಿಗಳನ್ನೂ ತಂತಮ್ಮ ಭಾಷೆಗಳಿಗೆ ಭಾಷಾಂತರ ಮಾಡಿರುವ ಉದಾಹರಣೆಗಳೂ ಇವೆ.

ಭಾಷಾಂತರಗಳ ಮೂಲಕ ಭಾರತೀಯತೆಯನ್ನು ಕಲ್ಪಿಸಿಕೊಳ್ಳುವುದಕ್ಕೆ ಗಾಂಧೀಜಿಯವರಿಗೆ ಸಾಧ್ಯವಾಗಿದ್ದು ಅವರು ದಕ್ಷಿಣ ಆಫ್ರಿಕಾದಲ್ಲಿ ಹೊರತರುತ್ತಿದ್ದ ‘ಇಂಡಿಯನ್ ಒಪಿನಿಯನ್’ ಪತ್ರಿಕೆಯಿಂದ. ಆ ಪತ್ರಿಕೆಯಲ್ಲಿ ಅನೇಕ ಭಾಷೆಗಳು, ಸಂಸ್ಕೃತಿಗಳು ಮತ್ತು ಪ್ರಾದೇಶಿಕ ನುಡಿಗಳ ಸೊಬಗುಗಳೆಲ್ಲ ಒಂದು ಹಲವುತನದ ಭಾರತೀಯತೆಯನ್ನು ರೂಪುಗೊಳಿಸುತ್ತಿದ್ದವು ಎಂದು ಗಾಂಧೀ ವಿದ್ವಾಂಸರು ಗುರುತಿಸಿರುವುದನ್ನು ಗಮನಿಸಬಹುದು. ನಂದಿನಿ ಭಟ್ಟಾಚಾರ್ಯ ಅವರು ಬರೆಯುವಂತೆ, “ಗಾಂಧೀಜಿಯವರು ಭಾಷಾಂತರದ ಮೂಲಕ ತಮ್ಮದೇ ಆದ ರೀತಿಯಲ್ಲಿ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ನಡುವೆ ಒಂದು ಸೇತುವೆಯನ್ನು ಕಟ್ಟ ಬಯಸಿದ್ದರು. ಅದು ತಮ್ಮ ಕಲ್ಪಿತ ಭಾರತ ಮತ್ತು ಜಗತ್ತಿನ ನಡುವೆ ಏರ್ಪಡಬಹುದಾದ ಒಂದು ಸೇತುವೆಯ ಸಾಧನದಂತೆಯೇ ಇತ್ತು”(ಪು.179, ಗಾಂಧಿಯನ್ ಟ್ರಾನ್ಸ್‍ಲೇಷನ್/ಟ್ರಾನ್ಸ್‍ಲೇಟಿಂಗ್ ಗಾಂಧಿ).\

ಗಾಂಧೀ ಅನುವಾದಗಳು

ಗಾಂಧೀಜಿಯವರ ಸಾಹಿತ್ಯ/ವಿಚಾರಗಳು ಅನುವಾದಗಳ ಮೂಲಕವೇ ಜನರನ್ನು ತಲುಪಿವೆ. ಆದುದರಿಂದ ಗಾಂಧೀ ಸಾಹಿತ್ಯದ ಆಳದಲ್ಲಿ ಭಾಷಾಂತರದ ಕ್ರಿಯಾಶೀಲ ಪಾತ್ರವಿದೆ ಎನ್ನಬಹುದು.

ಭಾಷಾಂತರ ಮಾಡುವ ಉತ್ಸಾಹಿಗಳಿಗೆ ಗಾಂಧೀ ಸಾಹಿತ್ಯವು ವಿಫುಲವಾಗಿ ದೊರೆಯುತ್ತದೆ. ಇವುಗಳಲ್ಲಿ ಪ್ರಮುಖವಾಗಿ ವರ್ಗೀಕರಿಸಬಹುದಾದ ಧಾರೆಗಳೆಂದರೆ ಸ್ವತಃ ಗಾಂಧೀಜಿಯವರು ಬರೆದ ಬರಹಗಳ ಧಾರೆ, ಗಾಂಧೀಜಿಯವರ ಬಗೆಗೆ, ಅವರ ವಿಚಾರಗಳ ಬಗೆಗೆ ಅವರ ಸಹವರ್ತಿಗಳು, ಅನುಯಾಯಿಗಳು ಪ್ರಿಯಶಿಷ್ಯರುಗಳು ಬರೆದ ಬರಹಗಳ ಧಾರೆ ಹಾಗೂ ಗಾಂಧೀಜಿಯವರನ್ನು ಸ್ಫೂರ್ತಿಯಾಗಿಸಿಕೊಂಡು ಬರೆದ ಸಾಹಿತ್ಯಧಾರೆ. ಇವುಗಳ ಜೊತೆಗೆ ಗಾಂಧೀಜಿಯವರು ತಮ್ಮ ವಿಶ್ವಾಸಿಕರಾದ ಶಿಷ್ಯರಿಗೆ ಹೇಳಿ ಬರೆಯಿಸಿದ ಕೆಲವು ಬರಹಗಳು, ಗಾಂಧೀಜಿಯವರು ಮಾಡಿದ ಭಾಷಣಗಳ ಬರಹ ರೂಪ ಈ ಸಣ್ಣ ಸಣ್ಣ ಧಾರೆಗಳೂ ಸೇರಿಕೊಳ್ಳುತ್ತವೆ. ಇವುಗಳನ್ನು ಒಂದೊಂದಾಗಿ ನೋಡಬಹುದು.

ಗಾಂಧೀಜಿಯವರು ಬರೆದ ಬರಹಗಳಲ್ಲಿ ಅವರ ಆತ್ಮಕತೆ (ಸತ್ಯಶೋಧನೆ ಅಥವಾ ನನ್ನ ಆತ್ಮಕಥೆ ಎಂಬ ಹೆಸರಿನಲ್ಲಿ ಪ್ರಚುರಗೊಂಡಿರುವ ಪುಸ್ತಕ), ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಂರೂಲ್, ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ, ನನ್ನ ಕನಸಿನ ಭಾರತ, ಯಂಗ್ ಇಂಡಿಯಾ, ಇಂಡಿಯನ್ ಒಪಿನಿಯನ್ ಮುಂತಾದ ಪತ್ರಿಕೆಗಳಲ್ಲಿ ಬರೆದ ಪತ್ರಿಕಾ ಬರವಣಿಗೆಗಳು, ರಾಜಕೀಯ ಮುಖಂಡರು, ಕಾರ್ಯಕರ್ತರು, ಆತ್ಮೀಯರಿಗೆ ಸಾಂದರ್ಭಿಕವಾಗಿ ಬರೆದ ಪತ್ರಗಳು ಇವೇ ಪ್ರಧಾನವಾದವು. ಅಸ್ಪೃಶ್ಯತೆ, ಅಹಿಂಸೆ, ಆರೋಗ್ಯ, ಆಹಾರ, ಇಸ್ಲಾಂ, ಉಪವಾಸ, ನೀತಿ, ದೇವರು, ಸ್ತ್ರೀಯರು, ರಾಷ್ಟ್ರಭಾಷೆ, ಸ್ವದೇಶೀ, ಸರ್ವೋದಯ, ಸತ್ಯಾಗ್ರಹ, ಜನನ ನಿಯಂತ್ರಣ, ಜಲಿಯನ್ ವಾಲಾಭಾಗ್, ಖಿಲಾಫತ್ ಚಳವಳಿ ಮುಂತಾದ ಹತ್ತು ಹಲವು ವಿಷಯಗಳ ಬಗೆಗೆ ಗಾಂಧೀಜಿ ಅನೇಕ ಪತ್ರಿಕೆಗಳಲ್ಲಿ, ಪುಸ್ತಿಕೆಗಳಲ್ಲಿ ಬರವಣಿಗೆಯನ್ನು ಮಾಡಿದ್ದಾರೆ. ಇವುಗಳ ಅನುವಾದಗಳು ಬಹುತೇಕ ಭಾರತೀಯ ಭಾಷೆಗಳಲ್ಲಿ ಆಗಿವೆ. ಗಾಂಧೀಜಿಯವರು ತಮ್ಮ ತತ್ವವನ್ನು ಆಧ್ಯಾತ್ಮಿಕವಾಗಿ ರೂಪಿಸಿಕೊಳ್ಳುತ್ತಿದ್ದರಿಂದ ಅವರ ರಾಜಕೀಯ ಬರವಣಿಗೆಗಳು ಅಗತ್ಯವಾಗಿ ಆಧ್ಯಾತ್ಮಿಕ ಶಿಸ್ತಿನ ನಿಯಮಗಳನ್ನು ರಾಜಕೀಯ ನೀತಿಗಳಿಗೆ ಹೊಂದಾಣಿಕೆ ಮಾಡುತ್ತವೆ. ಇದರಿಂದ ಗಾಂಧೀ ಸಾಹಿತ್ಯದಲ್ಲಿ ಈ ಬಗೆಯ ಬರವಣಿಗೆಯ ಪ್ರಮಾಣವೂ ದೊಡ್ಡದಿದೆ. ಅವರು ತಾವು ಕಂಡುಕೊಳ್ಳುತ್ತಿದ್ದ ದರ್ಶನವನ್ನು ಅನುಷ್ಠಾನಕ್ಕೆ ತಂದು ತದನಂತರ ಆ ತತ್ವವನ್ನು ತಮ್ಮ ಅನುಯಾಯಿಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅವು ಇನ್ನಷ್ಟು ವಿಸ್ತೃತಗೊಂಡು ದೇಶವಾಸಿಗಳನ್ನೂ ತಲುಪುತ್ತಿದ್ದವು. ‘ನೀತಿತತ್ವ’, ‘ಮಂಗಲ ಪ್ರಭಾತ’, ‘ಬ್ರಹ್ಮಚರ್ಯೆಯೊ ಕಾಮಸಾಧನೆಯೊ ಅಥವಾ ಇಂದ್ರಿಯ ನಿಗ್ರಹ’ ಇಂತಹ ಕೆಲವು ಪುಸ್ತಕಗಳು ಗಾಂಧಿಯವರ ರಾಜಕೀಯ ಬರವಣಿಗೆಗಳಿಗೆ ಸರಿಸಮಾನವಾಗಿ ನಿಲ್ಲುವಂತವು. ಇನ್ನು ಸಾಮಾಜಿಕ ಸ್ವಾಸ್ಥ್ಯದ ಬಗೆಗೆ ಸಾಕಷ್ಟು ಜಾಗೃತರಾಗಿದ್ದ ಗಾಂಧಿ ಆರೋಗ್ಯ ಚಿಂತಕರೂ ಆಗಿದ್ದರು. ಆರೋಗ್ಯ ಎನ್ನುವುದು ಪರಿಸರ, ನೈರ್ಮಲ್ಯದಿಂದ ಹಿಡಿದು ದೇಹಾರೋಗ್ಯಗಳ ಬಗೆಗೂ ಅವರು ಸಾಕಷ್ಟು ತಿಳಿದುಕೊಂಡಿದ್ದರು. ಪುನಾ ಇಲ್ಲಿಯೂ ಗಾಂಧೀಜಿಯವರದು ಅನುಷ್ಠಾನ ತತ್ವವೇ. ಆರೋಗ್ಯಕ್ಕೆ ಸೂಕ್ತ ಎನ್ನಿಸುವುದು ನೀತಿ ನಿಯಮಗಳ ದೃಷ್ಟಿಯಿಂದಲೂ ಹೊಂದಾಣಿಕೆಯಾಗಬೇಕಾದುದು ಗಾಂಧೀಜಿಯವರಿಗೆ ಅಗತ್ಯವಾಗಿತ್ತು. ಆದಕಾರಣ ಉಪವಾಸ, ಸಸ್ಯಾಹಾರ, ದೈಹಿಕ ಸ್ವಾಸ್ಥ್ಯಗಳ ಪ್ರಯೋಗಗಳನ್ನು ಅವರು ಮತ್ತೆ ಮತ್ತೆ ತಮ್ಮ ರಾಜಕೀಯ ನಿಲುವುಗಳ ಜೊತೆ ಬೆಸೆಯುತ್ತಿದ್ದರು; ಮತ್ತು ತಮ್ಮ ಅನುಭವಗಳನ್ನು ಸಾರ್ವಜನಿಕವಾಗಿ ಜನತೆಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಈ ಬಗೆಯ ಬರವಣಿಗೆಗಳೂ ಸಹ ಗಾಂಧೀ ಸಾಹಿತ್ಯದ ಭಾಗವಾಗಿವೆ. ‘ಆರೋಗ್ಯ ಮಾರ್ಗದರ್ಶಿನಿ’ಯಂತಹ ಪುಸ್ತಕಗಳು ಇದಕ್ಕೆ ಉತ್ತಮ ಉದಾಹರಣೆ. ಗಾಂಧೀ ಸಾಹಿತ್ಯದಲ್ಲಿ ಆತ್ಮಕತೆ, ರಾಜಕೀಯ ಬರವಣಿಗೆ, ಸಾಮಾಜಿಕ ಸ್ವಾಸ್ಥ್ಯದ ಬರವಣಿಗೆ, ನೀತಿ ಸಾಹಿತ್ಯ ಇವು ಪ್ರಮುಖವಾದವು. ಗಾಂಧೀಜಿಯವರ ತಾತ್ವಿಕ ಚಿಂತನೆಗಳನ್ನು ಒಳಗೊಂಡ ‘ಹಿಂದ್ ಸ್ವರಾಜ್’ ಮತ್ತು ಜಾನ್ ರಸ್ಕಿನ್ ಅವರ ‘ಅನ್ ಟು ದಿಸ್ ಲಾಸ್ಟ್’ ಕೃತಿಯ ಸಂಗ್ರಹರೂಪವಾದ ‘ಸರ್ವೋದಯ’ ಇಡೀ ಗಾಂಧೀತತ್ವದ ಸಾರವನ್ನೇ ಒಳಗೊಂಡಂತಹ ಪುಸ್ತಕಗಳು (ಈ ಎರಡನ್ನೂ ಒಂದಿಲ್ಲೊಂದು ರೀತಿ ಅನುವಾದಗಳೇ ಎನ್ನುವುದು ವಿಶೇಷ). ಗಾಂಧಿಯವರ ಆತ್ಮಕತೆ ಮತ್ತು ಹಿಂದ್ ಸ್ವರಾಜ್ ಪುಸ್ತಕಗಳಿಗೆ ಇಂದಿಗೂ ಬೇಡಿಕೆಯಿದ್ದು ಪುನಾ ಪುನಾ ಓದಿಸಿಕೊಳ್ಳುವ ಪುಸ್ತಕಗಳಾಗಿ ಅವು ನಿಲ್ಲುತ್ತವೆ. ಆದುದರಿಂದ ಅವು ಭಾರತೀಯ ಭಾಷೆಗಳಲ್ಲಿ ಭಾಷಾಂತರ ಪಠ್ಯಗಳಾಗಿ ಚಾಲನೆಯಲ್ಲಿವೆ.

ಗಾಂಧಿಯವರ ಬಗೆಗೆ ಬಂದ ಸಾಹಿತ್ಯದಲ್ಲಿ ಭಾರತೀಯ ಭಾಷೆಗಳಲ್ಲಿ ಬರೆದ ಬರವಣಿಗೆಗಳು ಸ್ವದೇಶಿಯರು ಗ್ರಹಿಸಿದ ಗಾಂಧಿಯ ವ್ಯಕ್ತಿತ್ವ ಮತ್ತು ಚಿಂತನೆಗಳಾದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳುತ್ತಿದ್ದ ಕಾಲದಲ್ಲಿ ಭಾರತಕ್ಕೆ ಬಂದು ಗಾಂಧೀಜಿಯವರ ವ್ಯಕ್ತಿತ್ವಕ್ಕೆ ವಸಾಹತುಶಾಹಿ ವಿರುದ್ಧದ ಅವರ ಸರಳ ಸನ್ನೆಗೋಲುಗಳ ಹೋರಾಟಕ್ಕೆ ವಿಸ್ಮಯಗೊಂಡು ಅವರ ಆಶ್ರಮದಲ್ಲಿ ನೆಲೆಸಿ ಅಥವಾ ಅವರನ್ನು ಆಗಿಂದಾಗ್ಗೆ ಭೇಟಿ ಮಾಡಿ ಅವರ ಬಗೆಗೆ ಜೀವನ ಚರಿತ್ರೆ, ವಿಚಾರಧಾರೆಯ ಮಂಥನಗಳ ಬಗೆಗೆ ಬರೆದ ಪಾಶ್ಚಾತ್ಯರ ಬರವಣಿಗೆಗಳು ವಿಫುಲವಾಗಿವೆ. ಗಾಂಧೀ ಸಾಹಿತ್ಯವನ್ನು ಮತ್ತು ಅವರ ಭಾಷಣ/ಮಾತುಕತೆಗಳನ್ನು ದೇಶವಾಸಿಗಳಿಗೆ ನಿರೂಪಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಗಾಂಧೀವಾದಿಗಳಲ್ಲಿ ಕಿಶೋರ್ ಮಶರೂವಾಲಾ, ತೆಂಡುಲ್ಕರ್, ಪ್ಯಾರೇಲಾಲ್, ಮಹದೇವ ದೇಸಾಯಿ, ಜಮನಾಲಾಲಜಿ ಮುಂತಾದವರು. ಗಾಂಧೀಜಿಯವರ ಜೀವನ-ಚಿಂತನ-ಅನುಭವಗಳನ್ನು ಹತ್ತಿರದಿಂದ ಕಂಡು, ಆ ಅನುಭವಗಳನ್ನು ಬರಹ ರೂಪಕ್ಕೆ ತಂದ ಯುರೋಪಿಯನ್ನರಲ್ಲಿ ಲೂಯಿ ಫಿಶರ್, ಮಿಲ್ಲಿ ಗ್ರಹಾಂ ಪೊಲಾಕ್ ಮುಂತಾದವರಿದ್ದಾರೆ. ಇವರ ಕೃತಿಗಳು ಮೂಲದಲ್ಲಿ ಗುಜರಾತಿ, ಹಿಂದಿ, ಇಂಗ್ಲಿಷ್ ರೂಪಗಳಲ್ಲಿವೆ. ಅವುಗಳನ್ನು ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಭಾಷಾಂತರ ಮಾಡಿಕೊಳ್ಳಲಾಗಿದೆ. ಇದರಿಂದ ಗಾಂಧೀ ಸಾಹಿತ್ಯವೆನ್ನುವುದು ಒಂದು ಚಪ್ಪರದಡಿ ಓದಲು ದೇಶೀಯ ಓದುಗರಿಗೆ ಸಾಧ್ಯವಾಗಿದೆ. ತೆಂಡುಲ್ಕರ್ ಅವರು ಎಂಟು ಸಂಪುಟಗಳಲ್ಲಿ ರಚಿಸಿರುವ ‘ಮಹಾತ್ಮಾ: ಲೈಫ್ ಆಫ್ ಮೋಹನದಾಸ್ ಕರಮಚಂದ ಗಾಂಧಿ’ ಎನ್ನುವ ಜೀವನ ಚರಿತ್ರೆ; ಪ್ಯಾರೇಲಾಲ್ ರಚಿಸಿರುವ ಮಹಾತ್ಮಾ ಗಾಂಧಿಯವರ ಬಗೆಗಿನ ಹಲವು ಸಂಪುಟಗಳ ಜೀವನ ಚರಿತ್ರೆಯನ್ನು ಲೂಯಿ ಫಿಶರ್ ಅವರ ‘ದ ಲೈಫ್ ಆಫ್ ಮಹಾತ್ಮಾಗಾಂಧಿ’ (1951) ಜೊತೆಯಲ್ಲಿಟ್ಟು ನೋಡಬಹುದಾದ ಅವಕಾಶವನ್ನು ಅನುವಾದಗಳು ಕಲ್ಪಿಸಿದ್ದು ವಿಶೇಷ. …

ಇನ್ನು ಗಾಂಧೀ ಪ್ರಭಾವದಲ್ಲಿ ಹುಟ್ಟಿದ ಸಾಹಿತ್ಯವು ಅಗಾಧವಾಗಿದ್ದು ಅದಕ್ಕೆ ವಿಸ್ತಾರವಾದ ಅಧ್ಯಯನವು ಬೇಕಾಗುತ್ತದೆ. ಗಾಂಧೀ ಜೊತೆ ಇದ್ದು ಅದರಿಂದ ಪ್ರಭಾವಿತರಾಗಿ ಬರೆದ ಮುಲ್ಕರಾಜ್ ಆನಂದ್ ತರದವರಿಂದ ಹಿಡಿದು ಗಾಂಧೀಜಿಯವರ ವ್ಯಕ್ತಿತ್ವ ಭಾರತೀಯ ಮಾದರೀ ವ್ಯಕ್ತಿತ್ವವಾಗಿ ಅವರನ್ನು ರಾಮಾಯಣದ ರಾಮಸೀತೆಯರಂತೆ ಪ್ರತಿ ಹಳ್ಳಿ, ಮೂಲೆ ಮುಡುಕುಗಳಲ್ಲಿಯೂ ಗ್ರಹಿಸಿ ಅವರ ತತ್ವಾದರ್ಶಗಳನ್ನು ರೂಪಕಾತ್ಮಕವಾಗಿ, ಪಾತ್ರವಾಗಿ ಕೆತ್ತಿದ ಸಾಕಷ್ಟು ಬರವಣಿಗೆಗಳು ಗಾಂಧೀ ಇದ್ದಾಗಲೂ ಸತ್ತಾಗಲೂ ವಿಫುಲವಾಗಿ ಬಂದವು. ಆರ್.ಕೆ.ನಾರಾಯಣ್, ರಾಜಾರಾವ್, ಆನಂದ್ ಮುಂತಾದವರು ಭಾರತೀಯ ಇಂಗ್ಲಿಷಿನಲ್ಲಿ ಗಾಂಧಿಯನ್ನು ಪಾತ್ರವನ್ನಾಗಿ/ಆದರ್ಶವಾಗಿ ಕಾಣಿಸಿದವರಲ್ಲಿ ಅಗ್ರಗಣ್ಯರು. ಅದರಂತೆಯೇ ಕನ್ನಡದ ಮಟ್ಟಿಗೆ ಹೇಳುವುದಾದರೆ ಕನ್ನಡ ಸಾಹಿತ್ಯದ ಸಂವೇದನೆಯಲ್ಲಿ ಅಧಿಕ ಪಾಲು ಪಡೆದ ಗಾಂಧಿ ಒಂದು ಪಾತ್ರವಾಗಿ, ರೂಪಕವಾಗಿ, ತತ್ವವಾಗಿ ಕನ್ನಡದಲ್ಲಿ ಬಂದಿದ್ದು ಅದನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವ ಅವಕಾಶವಿದೆ. ಪ್ರಸ್ತುತ ಈ ಲೇಖನವು ಕೇಂದ್ರೀಕರಿಸುವುದು ಗಾಂಧೀಜಿಯವರ ಬರವಣಿಗೆಗಳ ಭಾಷಾಂತರಗಳು ಹಾಗು ಅವುಗಳ ಹಿಂದಿನ ಆಶಯಗಳು ಮತ್ತು ಉದ್ದೇಶಗಳನ್ನಾದ್ದರಿಂದ ಗಾಂಧೀ ಸಂವೇದನೆಯ ಪ್ರಭಾವ/ಪರಿಣಾಮಗಳನ್ನುಳ್ಳ ಸಾಹಿತ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುವುದಿಲ್ಲ.

ಕನ್ನಡದಲ್ಲಿ ಗಾಂಧಿ ಸಾಹಿತ್ಯದ ಅನುವಾದದ ಹಿಂದಿನ ಆಶಯ

1893ರಿಂದ 1914 ರವರೆಗೆ ಗಾಂಧಿ ತಮ್ಮದೇ ಆದ ವಿಶಿಷ್ಟವಾದ ರಾಜಕೀಯ-ಸಾಮಾಜಿಕ-ಧಾರ್ಮಿಕ ವಿಚಾರಧಾರೆಗಳನ್ನು ಬೆಳೆಸಿದರು. ಅದನ್ನೇ ಗಾಂಧೀ ತಾತ್ವಿಕತೆಯೆಂದು ಕರೆಯಲಾಗುತ್ತದೆ. ವಾಸ್ತವವಾಗಿ ಗಾಂಧೀ ಸಾಹಿತ್ಯವು ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಪುಷ್ಟಿಗೊಂಡು ಉಜ್ಚಲವಾದುದು. ರಾಷ್ಟ್ರೀಯತೆಯ ಏರುಗಾಲದಲ್ಲಿ ಗಾಂಧಿ ಎಂಬ ಮಹಾತ್ಮ ಹುಟ್ಟುಹಾಕಿದ ಸರಳ ತತ್ವಗಳು ವಸಾಹತುಶಾಹಿಯನ್ನೇ ಅಲ್ಲಾಡಿಸಿ ಪರ್ಯಾಯ ರಾಜಕಾರಣದ ಸೂಚನೆಗಳನ್ನು ನೀಡಿದವು. ಗಾಂಧೀಜಿಯವರದು ಒಂದು ವಾಸ್ತವಿಕ ಆದರ್ಶವಾದ. ಐಡಿಯಾಲಾಜಿಯನ್ನು ಗಾಂಧಿ ಅವರು ಸ್ವತಃ ತಾವೇ ಆಚರಿಸಿ ಅನುಷ್ಠಾನಕ್ಕೆ ತರುತ್ತಿದ್ದುದರಿಂದ ಜೀವಂತ ಚಾಲನ ಶಕ್ತಿ ಅದಕ್ಕಿತ್ತು. ಗಾಂಧೀಜಿಯವರ ಈ ವಿಶಿಷ್ಟ ಪ್ರಯೋಗ ಒಂದು ಯುಗಧರ್ಮವನ್ನೇ ಸೃಷ್ಟಿಸಿತು. ಇದಕ್ಕೆ ದೇಶವಾಸಿಗಳ ಸ್ಪಂದನವೂ ಅಷ್ಟೇ ಉತ್ಸಾಹದಲ್ಲಿ ದೊರೆಯಿತು. ರಾಷ್ಟ್ರನಿರ್ಮಾಣದ ಕನಸಿನಲ್ಲಿ ಮಿಂದೇಳುತ್ತಿದ್ದ ತಲೆಮಾರು ಗಾಂಧೀಸಾಹಿತ್ಯವನ್ನು ತಂತಮ್ಮ ಭಾಷೆಗಳಲ್ಲಿ ಅನುವಾದಗಳ ಬರಮಾಡಿಕೊಳ್ಳುವ ಮೂಲಕ ಗಾಂಧಿತತ್ವವನ್ನು ಅನುಸರಿಸಲಾರಂಭಿಸಿದರು.

ಭಾರತೀಯ ಅಸ್ಮಿತೆ ಎನ್ನುವುದನ್ನು ಕಂಡುಕೊಳ್ಳಲು ಆರಂಭಿಸಿದ್ದು ಭಾರತೀಯ ಭಾಷೆಗಳೊಳಗೆ ಭಾಷಾಂತರಗಳು ನಡೆಯತೊಡಗಿದಾಗ. ಗಾಂಧಿಯುಗದಿಂದ ಆರಂಭವಾದ(ಅಂದರೆ, ಇಪ್ಪತ್ತನೇ ಶತಮಾನದ ಆರಂಭದ ದಶಕಗಳು) ಭಾಷಾಂತರಗಳು ಭಾರತವನ್ನು ಒಂದು ನೇಷನ್ ಸ್ಟೇಟ್ ಆಗಿ ಕಲ್ಪಿಸಿಕೊಳ್ಳತೊಡಗಿದವು. ಈ ರಾಜಕೀಯ ಅಸ್ಮಿತೆಯು ಸಾಂಸ್ಕೃತಿಕ ಅಸ್ಮಿತೆಯನ್ನೂ ಒಳಗೊಂಡು ಮುಂದುವರೆದಿತ್ತು. ಆದುದರಿಂದ ದೇಶ ಎನ್ನುವುದು ಒಂದು ಎನ್ನುವ ಕಲ್ಪನೆಯೊಂದಿಗೆ ದೇಶದ ಐಕ್ಯತೆಯನ್ನು ಸಾಧಿಸುವ ಗುರಿ ಹೊತ್ತ ಭಾಷಾಂತರಗಳು ಭಾರತೀಯ ಭಾಷೆಗಳಲ್ಲಿ ಪಡಿಮೂಡತೊಡಗಿದವು. ಭಾರತೀಯ ಮನಸ್ಸುಗಳು ಸೇರಿಕೊಂಡಿದ್ದು ಗಾಂಧಿ ಎಂಬ ಮಹಾಕಥನದ ಅಡಿಯಲ್ಲಿ. ಇದನ್ನು ಭಾರತೀಯ ಭಾಷೆಗಳಲ್ಲಿ ವ್ಯಕ್ತವಾಗಿಸುವುದನ್ನು ಭಾಷಾಂತರಗಳು ಸಾಧಿಸಿದವು. ಇದೇ ಅವಧಿಯಲ್ಲಿ ಭಾರತೀಯ ಭಾಷೆಗಳೊಳಗೆ ನಡೆದ ಭಾಷಾಂತರಗಳು ಉಜ್ವಲವಾದ ರಾಷ್ಟ್ರೀಯತೆಯ ಸತ್ವವನ್ನು ಹಂಚಿದವು. ರಾಷ್ಟ್ರೀಯತೆಯ ಸಂಕಥನದಲ್ಲಿ ಭಾರತೀಯ ಭಾಷೆಗಳೊಳಗೆ ನಡೆದ ಭಾಷಾಂತರಗಳು ಅಭೇದವಾಗಿ ಸೇರಿಕೊಳ್ಳುತ್ತವೆ. ಭಾರತೀಯ ವಿದ್ಯಾವಂತ ವರ್ಗವು ಈ ಕಲ್ಪಿತ ದೇಶವನ್ನು ಐಕ್ಯಮತದಿಂದ ಮುನ್ನಡೆಸಲು ಸಹಾಯಕವಾಯಿತು. ಬಹುಭಾಷಿಕವಾದ ಭಾರತವು ಭಾಷಾಂತರಗಳಿಂದ ತನ್ನದೇ ಆದ ಅಸ್ಮಿತೆಯನ್ನು ಪಡೆಯಲು ಯತ್ನಿಸಿತು. ಭಾರತೀಯತೆ ಎನ್ನುವುದನ್ನು ಭಾರತೀಯರು ಹುಡುಕಿಕೊಳ್ಳುವ ವೇಳೆಯಲ್ಲಿ ಬಂದ ಭಾಷಾಂತರಗಳು ಐಕ್ಯತಾ ಭಾವವನ್ನು ಮೂಡಿಸುವುದಕ್ಕೆ ನೆರವಾದವು.

ಗಾಂಧಿಯುಗದಲ್ಲಿ ಮೊದಲ ಭಾಷಾಂತರಗಳ ಬಗ್ಗೆ ಇದ್ದ ಪರಕೀಯ ಭಾವನೆ ಹೋಗಿ ಹೊಸ ಜ್ಞಾನಾರ್ಜನೆಯ ಬೆಳಕಿಂಡಿಗಳಂತೆ ಅವುಗಳನ್ನು ಭಾರತೀಯ ಮನಸ್ಸು ಸ್ವೀಕರಿಸಲಾರಂಭಿಸಿತ್ತು. ಗದ್ಯ ಮತ್ತು ಪದ್ಯಗಳ ಭಾಷಾಂತರಗಳು ವಿದ್ಯಾವಂತ ವರ್ಗದ ಹೆಮ್ಮೆಯ ಕುರುಹುಗಳಾಗಿದ್ದ ಕಾರಣ ಅವುಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಸಹಜವಾಗಿತ್ತು. ಭಾರತೀಯ ಮನಸ್ಸುಗಳನ್ನು ಸೇರಿಸುವ ಒಂದು ಲಿಂಕ್ ಭಾಷೆಯಾಗಿ ಇಂಗ್ಲಿಷ್ ಬಳಕೆಯಾಗತೊಡಗಿದಂತೆ, ಇಂಗ್ಲಿಷಿನಿಂದ ಬರುವ ಸಾಹಿತ್ಯಗಳ ಬದಲಾಗಿ ಭಾರತದಲ್ಲಿ ರಾಜಕೀಯ ಭಾಷೆಯಾಗಿ ಬೆಳೆಯುತ್ತಿದ್ದ ಭಾರತೀಯ ಇಂಗ್ಲಿಷ್‍ನಲ್ಲಿ ರಚನೆಯಾಗುತ್ತಿದ್ದ ಸಾಹಿತ್ಯದಿಂದ ದೇಶಿ ಭಾಷೆಗಳಿಗೆ ಭಾಷಾಂತರಗಳು ಆರಂಭವಾದವು. ಗಾಂಧಿ, ನೆಹರೂ ಮುಂತಾದವರ ಸಾಹಿತ್ಯಕ್ಕೆ ಈ ಹಂತದಲ್ಲಿ ಬೇಡಿಕೆ ಬಂದಿತು. ಈ ಅವಧಿಯಲ್ಲಿ ಗಾಂಧಿಯವರ ‘ನನ್ನ ಆತ್ಮಕಥೆ’ ಬಹುತೇಕ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡ ಕೃತಿ. ಆನಂತರ ಗಾಂಧಿಯವರ ಶಿಷ್ಯರು, ಆಶ್ರಮವಾಸಿಗಳಾದ ಮಹಾದೇವ ದೇಸಾಯಿ ಅವರ ಗಾಂಧಿ ಕೃತಿಗಳು ಕನ್ನಡವೂ ಸೇರಿದಂತೆ ಬಂದವು. ಗಾಂಧಿ ಕುಟೀರದಲ್ಲಿ ಕೆಲ ಕಾಲ ಇದ್ದು ಬಂದ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಗಾಂಧಿ ಸಾಹಿತ್ಯಾನುವಾದವನ್ನು ಕನ್ನಡಕ್ಕೆ ಕೊಟ್ಟರು. ಅಂದರೆ 1930ರ ನಂತರ ಬಂದ ಭಾಷಾಂತರ ಸಾಹಿತ್ಯವು ರಾಜಕೀಯ ಪ್ರಧಾನವಾಗಿರುವುದನ್ನು ಗಮನಿಸಬಹುದು. ಈ ಹಂತದಲ್ಲಿ ಅಖಿಲ ಭಾರತೀಯ ರಾಜಕೀಯವು ಒಂದು ಸ್ವರೂಪವನ್ನು ಪಡೆದುಕೊಂಡಿದ್ದ ಕಾರಣ ಅದನ್ನು ಮುನ್ನಡೆಸುವಂತಹ ಬರಹಗಳ ಭಾಷಾಂತರಗಳು ದೇಶೀಯ ಭಾಷೆಗಳಲ್ಲಿಯೂ ಹೆಚ್ಚಾಗಿ ಪ್ರಚಲಿತಕ್ಕೆ ಬಂದವು. ಒಬ್ಬ ಭಾರತೀಯ ಇನ್ನೊಬ್ಬ ಭಾರತೀಯನಿಗೆ ಸಂವಹಿಸಬೇಕಾದ ಅಗತ್ಯವನ್ನು ಈ ಭಾರತೀಯ ಇಂಗ್ಲಿಷ್ ಬರವಣಿಗೆಗಳ ಭಾಷಾಂತರಗಳು ನಿರೂಪಿಸಿದವು.

ಕನ್ನಡದ ಮಟ್ಟಿಗೆ ಗಾಂಧೀತತ್ವ ಪ್ರಭಾವವು ಸಾಕಷ್ಟು ಪ್ರಮಾಣದಲ್ಲಿಯೇ ಇತ್ತು. ಕನ್ನಡದಲ್ಲಿ ಗಾಂಧೀ ಸಾಹಿತ್ಯ ಎನ್ನುವುದು ಇಪ್ಪತ್ತನೆಯ ಶತಮಾನವನ್ನು ಆವರಿಸಿಕೊಂಡ ಗಾಂಧಿಯವರ ಪ್ರಭಾವ, ಪ್ರೇರಣೆಗಳಿಂದ ಹುಟ್ಟಿತು. ಹೀಗೆ ಗಾಂಧಿವಾದ ಕನ್ನಡದಲ್ಲಿ ಬೆಳೆದುದಕೆ ಭಾಷಾಂತರಗಳ ಪಾತ್ರ ಮಹತ್ವದ್ದಾಗಿತ್ತು. ಭಾಷಾಂತರಗಳು ಕನ್ನಡದಲ್ಲಿ ಗಾಂಧಿ ವಿಚಾರಧಾರೆಯನ್ನು ಹುಟ್ಟುಹಾಕಿದವು ಮತ್ತು ಗಾಂಧಿಯವರ ನೇರ ಮುಖವಾಣಿಯಾಗಿ ಕೆಲಸ ಮಾಡಿದವು.

ಕನ್ನಡದ ಗಾಂಧೀ ಅನುವಾದಗಳು ವಿಶ್ಲೇಷಣೆಯ ದಾರಿಗಿಂತಲೂ ಗಾಂಧೀಜಿಯವರ ವ್ಯಕ್ತಿತ್ವ ಹಾಗು ವಿಚಾರಗಳನ್ನು ಕನ್ನಡದಲ್ಲಿ ಪ್ರಚಾರ ಮಾಡುವುದರ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸುವುದು ಹಾಗು ವಿಶಾಲಾರ್ಥದಲ್ಲಿ ಭಾರತವೆಂಬ ರಾಷ್ಟ್ರವನ್ನು ಕಟ್ಟುವುದಕ್ಕೆ ಕಟ್ಟಾಳುಗಳಾಗುವುದು ಎಂಬ ದೀಕ್ಷಾಪಥವನ್ನು ಅನುಸರಿಸಿ ಸಾಗಿದ್ದವು. ರಾಷ್ಟ್ರ ಮತ್ತು ನಾಡುನುಡಿಗಳ ಕುರಿತಾಗಿ ರಾಜಕಾರಣದ ಗ್ರಹಿಕೆ ಬದಲಾಗಿದ್ದು ಈ ಅನುವಾದಗಳ ದೆಸೆಯಿಂದಲೇ. ಆಧ್ಯಾತ್ಮಿಕ ಸಾಧನೆಗಳತ್ತ ಗಮನ ಹರಿಸಿದ್ದು; ನೈತಿಕತೆಯ ವ್ಯಾಖ್ಯಾನ ಮಾಡಿಕೊಂಡಿದ್ದು, ಸ್ವಯಂ ಮೌಲ್ಯಮಾಪನ ಮಾಡಿಕೊಂಡಿದ್ದು; ತಮ್ಮನ್ನು ತಾವು ರಾಷ್ಟ್ರೀಯ ಚಳವಳಿಗೆ ಅಪ್ರಾಪ್ರಿಯೇಟ್ ಮಾಡಿಕೊಂಡಿದ್ದು ಇನ್ನಿತರ ಲಾಭಗಳು ಎನ್ನಬಹುದು. ಗಾಂಧೀಯುಗದಲ್ಲಿ ಪ್ರಚಲಿತವಾಗಿದ್ದ ಹಿಂದುತ್ವದ ಆಯಾಮಗಳು ಸ್ಪಷ್ಟವಾಗಿ ಎರಡು ಧಾರೆಗಳಾಗಿ ಕಾಣತೊಡಗಿದ್ದವು. ಉಗ್ರ ಹಿಂದುತ್ವದ ಬ್ರಾಹ್ಮಣಶಾಹಿ ಚಹರೆಯ ಹಿಂದುತ್ವ ಒಂದು ಕಡೆ ಬೆಳೆಯುತ್ತಿದ್ದರೆ ಇನ್ನೊಂದೆಡೆ ಗಾಂಧೀಜಿಯವರ ‘ನಾನೇಕೆ ಹಿಂದೂ?’ ಎನ್ನುವ ಪರಿಷ್ಕೃತ ಹಿಂದುತ್ವದ ಸಾತ್ವಿಕ, ಒಳಗೊಳ್ಳುವ ಮಾದರಿ ಇತ್ತು. ಇವು ದೇಶೀಯ ನೆಲೆಗಳಲ್ಲಿ ಅನುವಾದಗಳ ಮೂಲಕವೇ ಬಂದು ಜನಜೀವನದಲ್ಲಿ ಹೊಕ್ಕವು. ಕನ್ನಡದ ಮಟ್ಟಿಗೆ ಗಾಂಧಿ ಸಾಹಿತ್ಯವು ಭಾಷಾಂತರಗಳ ಮೂಲಕ ಕನ್ನಡವನ್ನು ಪ್ರವೇಶಿಸತೊಡಗಿದಾಗ ಹಿಂದುತ್ವದ ವಿಶಾಲ ತಾತ್ವಿಕ ನೆಲೆಗಟ್ಟು ರಚನೆಯಾಗತೊಡಗಿತು. ಮೊದಲ ಹಂತದ ಭಾಷಾಂತರಗಳಲ್ಲಿ ಕಾಣುವ ಹಿಂದುತ್ವದ ಆವೇಶವು ಇಲ್ಲಿ ಹಿನ್ನೆಲೆಗೆ ಸರಿದಂತೆ ತೋರುತ್ತದೆ. ಆಧ್ಯಾತ್ಮಿಕವಾಗಿ ಭಾರತೀಯತೆಯನ್ನು ಕಟ್ಟಿಕೊಳ್ಳಬಯಸಿದ್ದ ಗಾಂಧಿಯವರ ಭಗವದ್ಗೀತೆಯ ಓದು ಹಾಗು ಆತ್ಮೋನ್ನತಿಯ ಕುರಿತ ಚಿಂತನೆಗಳು ಗಾಂಧೀ ಅನುವಾದಗಳ ಮೂಲಕ ಬಂದವು. ಇದರಿಂದ ಆಚರಣಾತ್ಮಕ ಹಿಂದೂ ಕರ್ಮಠತನವು ಹಿನ್ನೆಲೆಗೆ ಸರಿದು ಸಾಮಾಜಿಕವಾದ ನ್ಯಾಯದ ಹಿನ್ನೆಲೆಯಲ್ಲಿ ಎಲ್ಲರ ಹಿತವನ್ನು ಬಯಸುವ ಉಪನಿಷತ್ತಿನ ಆಶಯಗಳು(ಸಹನಾಭವತು, ಸಹನೌಭುನಕ್ತು) ಅಲ್ಲಿ ಸ್ಥಾನ ಪಡೆದವು.

ಗಾಂಧೀ ಅನುವಾದಗಳು ಕನ್ನಡದಲ್ಲಿ ನೈತಿಕ ಪ್ರಜ್ಞೆಯನ್ನು ಉದ್ದೀಪಿಸಿದವು. ಗಾಂಧೀಜಿಯವರು ಬದುಕಿದ್ದ ಕಾಲದಲ್ಲಿ ಬಂದ ಕೆಲವು ಅನುವಾದಗಳಲ್ಲಿ ನೈತಿಕತೆಯನ್ನು ರೂಪಿಸುವ ಹೊಣೆಗಾರಿಕೆಯ ದನಿ ಇರುವುದನ್ನು ಗುರುತಿಸಬಹುದು. ಉದಾಹರಣೆಗೆ ಗಾಂಧೀಜಿಯವರ ಅನುಯಾಯಿಯಾಗಿದ್ದ ಕಿಶೋರಲಾಲ್ ಮಶರುವಾಲಾ ಅವರ ‘ಗಾಂಧೀ ವಿಚಾರ ದೋಹನ’ ಕೃತಿಯಲ್ಲಿ ಚರ್ಚಿತವಾಗಿರುವ ವಿಷಯಗಳೆಂದರೆ ಧರ್ಮ, ಧರ್ಮಮಾರ್ಗಗಳು, ಸಮಾಜ, ಸತ್ಯಾಗ್ರಹ, ಸ್ವರಾಜ್ಯ, ವಾಣಿಜ್ಯ, ಉದ್ಯೋಗ, ಗೋಪಾಲನೆ, ಖಾದಿ, ಶಿಕ್ಷಣ, ಸಂಸ್ಥೆಗಳು ಮುಂತಾದವು. ಈ ಕೃತಿಯನ್ನು ಸ್ವತಃ ಮಹಾತ್ಮಾಗಾಂಧಿಯವರೇ ಒಪ್ಪಿ ಅನುಮತಿ ನೀಡಿದ ಮೇಲೆ ಪ್ರಕಟ ಮಾಡಲಾಯಿತೆಂದು ಲೇಖಕರು ಹೇಳಿಕೊಂಡಿದ್ದಾರೆ. ಇವು ಪರೋಕ್ಷವಾಗಿ ವ್ಯಷ್ಠಿ ಮತ್ತು ಸಮಷ್ಠಿಯ ನೈತಿಕ ಮೌಲ್ಯಗಳ ವಿವೇಚನೆ. ‘ಬ್ರಹ್ಮಚರ್ಯೆಯೊ ಕಾಮಸಾಧನೆಯೊ’ ಎಂಬ ಪುಸ್ತಕವು ಕನ್ನಡದಲ್ಲಿ ಮಹತ್ವದ್ದು ಎಂಬ ನೆಲೆಯಲ್ಲಿ ಸ್ವೀಕೃತವಾಗಿದೆ ಎನ್ನುವುದನ್ನು ಗಮನಿಸಬೇಕು. ಈ ಪುಸ್ತಕ ಬರುವುದಕ್ಕೆ ಪ್ರೇರಣೆಯೆಂದರೆ ಆಗ ಪತ್ರಿಕೆಗಳಲ್ಲಿ ಬರುತ್ತಿದ್ದ ಸಂತಾನ ನಿಯಂತ್ರಣ ಪಿಲ್ಸ್‌ಗಳ ಲೇಖನಗಳನ್ನು ಗಾಂಧೀಜಿಯವರ ಮಿತ್ರರನೇಕರು ಅವರಿಗೆ ಕಳುಹಿಸುತ್ತಿದ್ದರಂತೆ. ಅದರ ಬಗೆಗೆ ತಾವು ತಮ್ಮ ಆಲೋಚನೆಗಳನ್ನು ಹೇಳಬೇಕೆಂಬ ನಿಟ್ಟಿನಲ್ಲಿ ಗಾಂಧೀಜಿಯವರು ಬರೆದಿದ್ದಾರೆ. ಗಾಂಧೀ ತತ್ವ ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ ಸೇವೆಯಲ್ಲಿ ತೊಡಗಿಕೊಂಡವರು ಹೇಗೆ ಕಾಮನಿಗ್ರಹ ಮಾಡಿಕೊಳ್ಳಬೇಕು, ತಮ್ಮ ಆತ್ಮ ಸಮರ್ಪಣೆಯನ್ನು ಸಮಾಜೋದ್ಧಾರಕ್ಕೆ ಬಳಸಬೇಕು ಎನ್ನುವ ವಿವೇಚನೆಯನ್ನು ಮಾಡಲಾಗಿದೆ. ಆದರೆ ಕನ್ನಡದ ಸಂದರ್ಭದಲ್ಲಿ ಗಾಂಧೀಜಿಯವರನ್ನು ಒಬ್ಬ ಸಂತನ ಹಾಗೆಯೇ ಸ್ವೀಕರಿಸುವ ಧೋರಣೆ ಇರುವುದರಿಂದ ಅವರು ಹೇಳುವ ಈ ಎಲ್ಲ ಮಾತುಗಳೂ ಒಬ್ಬ ಋಷಿ ಬೋಧಿಸುವ ನೈತಿಕ ಪಾಠಗಳಂತೆಯೇ ಭಾವಿಸಿ ಸ್ವೀಕರಿಸಲಾಗಿದೆ. ಈ ಅನುವಾದದ ಹಿಂದೆ ಇರುವ ಪವಿತ್ರ ಭಾವನೆಯು ಭಾಷಾಂತರಕಾರರ ಮುನ್ನಿನ ಮಾತುಗಳಲ್ಲಿ “ನಮ್ಮ ಸಮಾಜದ ಪ್ರಕೃತ ಹೀನದೆಸೆಗೆ, ಪ್ರಾಚೀನಾಚಾರ್ಯರ ಧರ್ಮಸೂತ್ರಗಳನ್ನು ನಾವು ಪೂಜಿಸುತ್ತ ಆಚರಣೆಯಲ್ಲಿ ಮಾತ್ರ ಪಶ್ವಾಚರಣೆಯನ್ನು ಮಾಡುತ್ತಿರುವುದೇ ಕಾರಣವಾಗಿದೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.. ..ಕನ್ನಡಿಗರಿಗೆ ಈ ಗ್ರಂಥಾವಲೋಕನದಿಂದ ಲಾಭವಾಗಿ, ಸಮಾಜೋನ್ನತಿಗೆ ಸಹಾಯವಾಗುವುದಾದರೆ ನನ್ನ ಶ್ರಮ ಸಾರ್ಥಕ”(ಭಾರದ್ವಾಜ, ಅನುವಾದಕರ ಮಾತಿನಲ್ಲಿ).

ಗಾಂಧೀಯುಗದಲ್ಲಿ ನೀತಿಯ ವ್ಯಾಖ್ಯಾನ ಇನ್ನಷ್ಟು ರಾಜಕೀಯ ವ್ಯಾಪ್ತಿಯನ್ನು ಪಡೆಯಿತು. ಪ್ರತಿಯೊಬ್ಬ ವ್ಯಕ್ತಿಯೂ ನೈತಿಕ ಬೆಳವಣಿಗೆ ಮತ್ತು ಸುಧಾರಣೆಗೆ ಅರ್ಹನಾಗಿರುತ್ತಾನೆಂಬ ನಂಬಿಕೆ ಗಾಂಧಿಯವರದಾಗಿತ್ತು. ಮಹಾತ್ಮಾ ಗಾಂಧಿಯವರ ‘ಮಂಗಲ ಪ್ರಭಾತ’(1934) ಎನ್ನುವ ಪುಸ್ತಕವನ್ನು ಕನ್ನಡಕ್ಕೆ ತಂದವರು ರಾಮಚಂದ್ರ ವೆಂಕಟೇಶ ವಡವಿಯವರು. ಇದರ ಮೂಲ ಮಹಾತ್ಮಾಗಾಂಧಿ ಗುಜರಾತಿ ಭಾಷೆಯಲ್ಲಿ ಬೆಳಗಿನ ಹೊತ್ತು ಆಶ್ರಮವಾಸಿಗಳಿಗೆ ನೀಡಿದ ಪ್ರವಚನ. ಇದರಲ್ಲಿ ಮಹಾತ್ಮಾ ಅವರು ಪ್ರತಿಪಾದಿಸುವ ಸತ್ಯ, ಅಹಿಂಸೆ, ಆಸ್ತೇಯ, ಕಾಯಕ, ನಮ್ರತೆ, ವ್ರತದ ಅವಶ್ಯಕತೆ ಮುಂತಾದವುಗಳನ್ನು ಪರಿಪಾಲಿಸುವುದು ಹೇಗೆ ಎನ್ನುವ ಚಿಂತನೆಗಳನ್ನು ಹೇಳಲಾಗಿದೆ. ಗಾಂಧೀಜಿಯವರ ಸಿದ್ಧಾಂತಗಳು ಪ್ರಚಲಿತವಾಗುತ್ತಿದ್ದ ಸಮಯದಲ್ಲಿಯೇ ಈ ಭಾಷಾಂತರಗಳು ಬಂದಿರುವುದು ಗಮನಾರ್ಹವಾಗಿದೆ. ‘ಬ್ರಹ್ಮಚರ್ಯೆಯೊ ಕಾಮಸಾಧನೆಯೊ’(1930) ಎನ್ನುವ ಮಹಾತ್ಮಾಗಾಂಧಿಯವರ ಗ್ರಂಥದ ಅನುವಾದವನ್ನು ದ.ಕೃ.ಭಾರದ್ವಾಜ ಅವರು ಕನ್ನಡಕ್ಕೆ ತಂದಿದ್ದಾರೆ. ಇದರಲ್ಲಿ ಗಾಂಧೀಜಿಯವರು ತಾವು ನಂಬಿದ ಶೀಲ ಮತ್ತು ಆಧ್ಯಾತ್ಮಿಕ ಸಾಧನೆಯ ಸಂಬಂಧವನ್ನು ಮದುವೆಯ ಹಾಗು ಗಂಡು ಹೆಣ್ಣಿನ ಸಂಬಂಧದ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ‘ನೀತಿಯ ದಿವಾಳಿ’ ಎನ್ನುವ ಮೊದಲ ಅಧ್ಯಾಯದಲ್ಲಿ ಗಾಂಧೀಜಿ ತಾವು contraceptive pills ವಿರುದ್ಧ ಇರುವುದಾಗಿ ಹೇಳಿದ್ದಾರೆ. ಅದಕ್ಕಾಗಿ ತಾವು ಸಾಕಷ್ಟು ವಿರೋಧವನ್ನು ಕಟ್ಟಿಕೊಳ್ಳ ಬೇಕಾಯಿತೆನ್ನುವುದನ್ನು ಸಹ ಹೇಳಿದ್ದಾರೆ. ಹೀಗೆ ಹಲವಾರು ಆಧ್ಯಾತ್ಮಿಕ ಶಿಸ್ತು ಎನ್ನಿಸಬಹುದಾದ ಅಂಶಗಳನ್ನು ಗಾಂಧೀಜಿ ರಾಜಕೀಯ ಜೀವನಕ್ಕೂ ಅನ್ವಯಿಸಿ ವಿಶ್ಲೇಷಿಸಿದ್ದಾರೆ.

ಒಟ್ಟಾರೆ, ರಾಷ್ಟ್ರೀಯತೆಯಲ್ಲಿ ರೂಪುಗೊಳ್ಳುತ್ತಿದ್ದ ನೈತಿಕತೆಯ ರೂಪುರೇಶೆಗಳು ಭಾಷಾಂತರಗಳಲ್ಲಿ ಮೂಡಲಾರಂಭಿಸಿದ್ದವು. ಗಾಂಧೀಜಿಯವರ ಕೃತಿಗಳ ಭಾಷಾಂತರಗಳು ಎತ್ತಿದ ನೈತಿಕತೆಯು ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯತೆಯನ್ನು ತಾತ್ವಿಕಗೊಳಿಸಿತು. ಹೊಸ ವಿನ್ಯಾಸದಲ್ಲಿ ಮೂಡುತ್ತಿದ್ದ ಪಿತೃಪ್ರಧಾನತೆ, ಪಾಶ್ಚಾತ್ಯ ಶಿಕ್ಷಣ ಪಡೆದುಕೊಂಡು ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊಸ ವಿದ್ಯಾವಂತ ವರ್ಗಗಳ ಆಶೋತ್ತರಗಳು ಮೊದಲ ಹಂತದ ಭಾಷಾಂತರಗಳಲ್ಲಿ ಜಾಗ ಪಡೆದವು ಮತ್ತು ತಮ್ಮದೇ ಆದ ನೈತಿಕತೆಯನ್ನು ಕಂಡುಕೊಳ್ಳುವಲ್ಲಿ ಕ್ರಿಯಾಶೀಲವಾಗಿದ್ದವು. ಇಪ್ಪತ್ತನೇ ಶತಮಾನದ ಹೊತ್ತಿಗೆ ಗಾಂಧಿ ರೂಪಿಸಿಕೊಳ್ಳುತ್ತಿದ್ದ ನೈತಿಕತೆಗೆ ಇಂಬು ನೀಡುವಂತೆ ಭಾಷಾಂತರಗಳು ಬಂದವು. ಈ ನೈತಿಕತೆಯು ಭಾರತೀಯವಾದ ಮಾದರಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿತ್ತು ಎನ್ನಬಹುದು.

ಕನ್ನಡದ ಅನುವಾದಕರು ಮತ್ತು ಕನ್ನಡಾನುವಾದಗಳು

ಗಾಂಧೀಯುಗ ಎನ್ನಿಸುವ 1928ರಿಂದ ಸ್ವಾತಂತ್ರ್ಯ ಬರುವವರೆಗು ಬಂದ ಗಾಂಧೀ ಸಾಹಿತ್ಯವು ಕನ್ನಡದಲ್ಲಿ ಭಾಷಾಂತರಗೊಳ್ಳುತ್ತಾ ಬಂದುದು ಗಾಂಧೀಪ್ರೇಮಿ ಕನ್ನಡಿಗರಿಂದ. ಗಾಂಧೀ ಪ್ರಭಾವ ಭಾರತೀಯರಲ್ಲೆಲ್ಲ ಹರಡುತ್ತಾ ಹೋದಂತೆ ಕನ್ನಡಿಗರೂ ಆ ಪ್ರಭಾವಕ್ಕೆ ಒಳಗಾದರು ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಗಾಂಧೀಜಿಯವರ ಬಗೆಗಿನ ಅತೀವವಾದ ಒಲವು, ಆರಾಧನೆಯ ಮನೋಭಾವಗಳು ಕನ್ನಡದ ಗಾಂಧೀವಾದಿಗಳನ್ನು ಆವರಿಸಿಕೊಂಡಿತ್ತು. ಒಂದರ್ಥದಲ್ಲಿ ಗಾಂಧೀಜಿಯವರ ನಿಷ್ಠಾವಂತ ಅನುಯಾಯಿಗಳ ಸಂಖ್ಯೆ ಹೆಚ್ಚಿತ್ತು. ಇದೇ ಪ್ರವೃತ್ತಿ ಭಾಷಾಂತರಗಳಲ್ಲಿಯೂ ಇಣುಕಿದ್ದರಿಂದ ಮಹಾತ್ಮಾಗಾಂಧಿಯವರ ತತ್ವಗಳನ್ನು ತುಂಬ ನಿಷ್ಠೆಯಿಂದ ಭಾವಿಸಿ ಭಾಷಾಂತರವನ್ನು ಮಾಡಿರುವುದು ಕಾಣುತ್ತದೆ. ಭಾಷಾಂತರಕಾರರು ಬಹುಪಾಲು ಅಕಾಡೆಮಿಕ್ ವಲಯದಿಂದ ದೂರವಿದ್ದು, ಕಾರ್ಯಕರ್ತರೂ ಸದ್ಭಾವವುಳ್ಳ ದೇಶಭಕ್ತರೂ ಆಗಿದ್ದರಿಂದ ಗಾಂಧೀ ‘ಮಹಾತ್ಮಾ’ ಆಗಿ, ಅವರ ಉಪದೇಶಗಳು ಗುರೂಪದೇಶಗಳಾಗಿ ಅವರಿಗೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಉದಾಹರಣೆಗೆ ಕಿಶೋರ್ ಲಾಲ್ ಮಶರುವಾಲಾ ಅವರ ‘ಗಾಂಧೀ ವಿಚಾರ ದೋಹನ’ ಕೃತಿಯನ್ನು ಕನ್ನಡಿಸಿದ ಗುರುನಾಥ ಜೋಶಿಯವರು ತಮ್ಮ ಅರಿಕೆಯಲ್ಲಿ ಬರೆಯುತ್ತಾರೆ; “ಮಹಾತ್ಮಾಗಾಂಧಿಯವರ ತಪ:ಪ್ರಭಾವದಿಂದ ಸನ್ 1932ರಲ್ಲಿ ಹಿಂದೂಸ್ತಾನದ ಸೆರೆಮನೆಗಳು ಸಾಧು-ಸತ್ಪುರುಷರ ಯೋಗಿ-ತ್ಯಾಗಿಗಳ ಶಾಂತಿ ನಿಕೇತನಗಳಾದವು” (ಜೋಶಿ, 1934). ಗಾಂಧೀಜಿಯವರ ‘ಮಂಗಲ ಪ್ರಭಾತ’ದ ಕನ್ನಡದ ಅನುವಾದಕ್ಕೆ ಬರೆದ ಮುನ್ನುಡಿಯಲ್ಲಿ ಗಂಗಾಧರ ಬಾಲಕೃಷ್ಣ ದೇಶಪಾಂಡೆಯವರು ಈ ಕೃತಿಯ ಭಾಷಾಂತರದ ಹಿಂದಿನ ಉದ್ದೇಶವನ್ನು ವಿವರಿಸುತ್ತಾ, ಮಹಾತ್ಮಾಗಾಂಧಿಯವರು ಈ ಪುಸ್ತಕವನ್ನು ಗುಜರಾತಿ ಭಾಷೆಯವರ ಸಲುವಾಗಿ ಮಾತ್ರವೇ ಬರೆಯಿಲಿಲ್ಲ. ಇಡೀ ದೇಶದ ತರುಣರು ತಾವು ಹೇಳುವ ವಿಚಾರಗಳ ಮನನ ಮತ್ತು ಅನುಕರಣಗಳನ್ನು ಮಾಡಬೇಕೆಂಬ ಅಪೇಕ್ಷೆಯಲ್ಲಿ ಬರೆದಿದ್ದಾರೆ. ಮುಖ್ಯವಾಗಿ ಕನ್ನಡದ ತರುಣರು ಈ ಪುಸ್ತಕವನ್ನು ತಮ್ಮ ಜೀವನ ಮಾರ್ಗದರ್ಶಕವನ್ನಾಗಿ ಮಾಡಿಕೊಂಡರೆ ಅವರ ಮುಖಾಂತರ ದೇಶದ ಕಲ್ಯಾಣವಾಗುವುದು ಎಂದು ಗಾಂಧಿಯವರ ಆದರ್ಶವನ್ನು ಎತ್ತಿಹಿಡಿದಿದ್ದಾರೆ (ಮಂಗಲ ಪ್ರಭಾತ, ಮುನ್ನುಡಿ). ಗಾಂಧೀಜಿಯವರ ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’ ಕೃತಿಯನ್ನು ಅನುವಾದ ಮಾಡಿದ ಸಂತೇಬೆನ್ನೂರು ಕೃಷ್ಣಮೂರ್ತಿರಾವ್ ಅವರು ತಮ್ಮ ಭಾಷಾಂತರದ ಉದ್ದೇಶವನ್ನು ವಿವರಿಸುತ್ತಾ, “ಮಹಾತ್ಮಾಜಿಯವರ ಈ ಘನ ಉದ್ದೇಶ(ಸತ್ಯಾಗ್ರಹದ ಬಗೆಗಿನ ಜಿಜ್ಞಾಸೆ/ ಅದರ ಅನುಷ್ಠಾನಗಳು) ಕನ್ನಡಿಗರಲ್ಲೂ ಸಾರ್ಥಕವಾಗಲೆಂದು ಕನ್ನಡಿಗರಡಿಯಲ್ಲಿ ಈ ಗ್ರಂಥವನ್ನು ಅರ್ಪಿಸಿದ್ದೇನೆ” ಎಂದು ಹೇಳಿದ್ದಾರೆ. ಗಾಂಧೀಜಿಯವರ ‘ಸ್ತ್ರೀಯರ ಸಮಸ್ಯೆಗಳು’ ಕೃತಿಯನ್ನು ಹೊರತಂದ ಪ್ರಕಾಶಕರು, “ಬಾಳುವೆಯ ಬೆಳಕನ್ನೀಯುವ ಈ ಪ್ರಕಟಣೆಯ ಲಾಭವನ್ನು ಕಾಲೋಚಿತವಾಗಿ ಮಾಡಿಕೊಳ್ಳುವರೆಂದು ಕೋರಿದ್ದೇವೆ” ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲ ಅಭಿವ್ಯಕ್ತಿಗಳಲ್ಲಿ ವ್ಯಕ್ತವಾಗಿರುವ ಹಿಂದಿನ ಪವಿತ್ರ ಭಾವವನ್ನು ಗಮನಿಸಬಹುದು.

ಗಾಂಧೀಜಿ ಅವರ ಜೀವಿತಾವಧಿಯಲ್ಲಿ ಹಾಗು ಸ್ವಾತಂತ್ರ್ಯ ಬಂದ ಮೊದಲ ದಶಕಗಳಲ್ಲಿ ಗಾಂಧೀ ಸಾಹಿತ್ಯವನ್ನು ಭಾಷಾಂತರಿಸಿದವರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರು, ರಂ.ರಾ.ದಿವಾಕರ, ವಿ.ಎಸ್ ನಾರಾಯಣರಾವ್, ಸಂತೇಬೆನ್ನೂರು ಕೃಷ್ಣಮೂರ್ತಿರಾವ್, ನಾರಾಯಣಮೂರ್ತಿ, ಸಿದ್ಧವನಹಳ್ಳಿ ಕೃಷ್ಣಶರ್ಮ, .ಗೋವಿಂದರಾಯರು, .ಕೃ.ಭಾರದ್ವಾಜ, ಪ್ರಹ್ಲಾದ ನರೇಗಲ್ಲ, ಕೆ.ಎಸ್.ನರಸಿಂಹಸ್ವಾಮಿ, ವೆಂಕಟೇಶ ಮಳಿಯೆ, ಶಂಕರೇಗೌಡರು ಮುಂತಾದವರು ಅನುವಾದಗಳಲ್ಲಿ ತೊಡಗಿಕೊಂಡವರು. ಕುತೂಹಲಕಾರಿಯಾದ ಸಂಗತಿಯೆಂದರೆ ಈ ಭಾಷಾಂತರಕಾರರು ಉತ್ತರ ಕರ್ನಾಟಕ ಮತ್ತು ಬೆಂಗಳೂರು ಸೀಮೆಗಳಿಗೆ ಸಮನಾಗಿ ಸೇರಿದವರಾಗಿದ್ದಾರೆ. ಮುಖ್ಯವಾಗಿ ಗಾಂಧಿಯವರನ್ನು ಕುರಿತು ಆಸಕ್ತಿ ತಾಳಿದ್ದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೆಲವು ಭಾಗಗಳು-ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಶಿವಮೊಗ್ಗ ಕ್ವಚಿತ್ತಾಗಿ. ಇವೆಲ್ಲ ಚಳವಳಿಯ ಕಾಲದಲ್ಲಿ ಕ್ರಿಯಾಶೀಲರಾಗಿದ್ದ ಭಾಗಗಳೇ ಹೌದು.

ಅಪ್ಪಟ ಗಾಂಧೀವಾದಿಗಳಾಗಿ ಗಾಂಧೀಜಿಯವರ ಆತ್ಮಕತೆಯನ್ನು ಅನುವಾದಿಸಿದ ಗೊರೂರರು ಮತ್ತು ಗಾಂಧೀತತ್ವ ಸಾರವನ್ನು ಜನರಿಗೆ ತಲುಪಿಸಲು ಜೀವಿತಾವಧಿಯುದ್ದಕ್ಕೂ ಶ್ರಮಿಸಿದ ಸಿದ್ಧವನಹಳ್ಳಿ ಕೃಷ್ಣಶರ್ಮರದು ಕನ್ನಡದ ಮಟ್ಟಿಗೆ ದೊಡ್ಡ ಗಾಂಧೀವಾದಿ ಭಾಷಾಂತರಕಾರರಾಗಿ ನಿಲ್ಲುತ್ತಾರೆ. ಅದರಲ್ಲಿಯೂ ಗಾಂಧೀಜಿಯವರ ಆಶ್ರಮದಲ್ಲಿ ಅನೇಕ ವರ್ಷಗಳನ್ನು ಕಳೆದ ಕನ್ನಡಿಗ ಸಿದ್ಧವನಹಳ್ಳಿ ಕೃಷ್ಣಶರ್ಮರು ಗಾಂಧೀಜಿಯವರ ದಿನಚರಿಯನ್ನು ಕುರಿತು ಬರೆದ ‘ಪರ್ಣಕುಟಿ’ ಮತ್ತು ‘ವಾರ್ಧಾಯಾತ್ರೆ’ ಕೃತಿಗಳು ಗಾಂಧೀವಾದದ ಅತ್ಯುನ್ನತ ಸಾರಗ್ರಂಥಗಳು. ಇವರು ಅನುವಾದಿಸಿದ ‘ಸಂವಾದ ಮಾಲೆ’, ‘ಪ್ರಸಾರ ದೀಕ್ಷೆ’, ‘ಸಂಕ್ಷಿಪ್ತ ಆತ್ಮಕಥೆ’, ‘ಮಂಗಳ ಪ್ರಭಾತ’, ‘ರಾಜಕೀಯ ಪತ್ರಗಳು’, ‘ಗೀತಾಮಾತೆ’, ‘ಸಹಕಾರ’, ‘ಸರ್ವೋದಯ’ ಕೃತಿಗಳು ಗಮನಾರ್ಹ ಗಾಂಧೀಸಾಹಿತ್ಯ ಪಠ್ಯಗಳು. . ಈ ಹಂತದಲ್ಲಿನ ಭಾಷಾಂತರಗಳು ರಾಜಕೀಯವನ್ನೇ ಮುನ್ನೆಲೆಗೆ ತಂದವು. ಈ ಹೊತ್ತಿನಲ್ಲಿ ಪ್ರಚಲಿತವಾಗಿದ್ದುದು ಜೀವನ ಚರಿತ್ರೆಗಳು, ಆತ್ಮಚರಿತ್ರೆಗಳು, ಪ್ರಬಂಧಗಳು(ಮುಖ್ಯವಾಗಿ ರಾಜಕೀಯ ಲೇಖನಗಳು).

ಕನ್ನಡದಲ್ಲಿ ಗಾಂಧೀಜಿಯವರ ಆತ್ಮಕತೆ, ಹಿಂದ್ ಸ್ವರಾಜ್, ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ, ಭಗವದ್ಗೀತೆಯ ವಿಶ್ಲೇಷಣೆ (ಗೀತಾಮಾತೆ), ಸತ್ಯ-ಅಹಿಂಸೆ, ಧರ್ಮ-ನೀತಿ, ಜೀವನ ಶಿಕ್ಷಣ, ಅರ್ಥಶಾಸ್ತ್ರದ ಲೇಖನಗಳು, ಸತ್ಯಾಗ್ರಹ, ಸ್ತ್ರೀಯರು, ಪತ್ರಗಳು, ಧರ್ಮ, ನೀತಿ, ಗಾಂಧೀಜಿಯವರ ಸಮಕಾಲೀನರು, ರಾಜನೀತಿ ಹಾಗು ಸಮಾಜದ ಸ್ವಾಸ್ಥ್ಯ ಕುರಿತ ಲೇಖನಗಳು ಇತ್ಯಾದಿಗಳು ಬೇರೆ ಬೇರೆ ತಲೆಬರಹ ಹೊತ್ತು ಭಾಷಾಂತರಗೊಂಡಿವೆ. ಕನ್ನಡದಲ್ಲಿ ಗಾಂಧೀ ಅನುವಾದಗಳನ್ನು ಗಾಂಧೀಜಿಯವರು ಸ್ವತ: ಬರೆದ ಬರವಣಿಗೆಗಳ ಅನುವಾದ ಹಾಗು ಗಾಂಧೀಜಿಯವರ ಅನುಯಾಯಿಗಳೂ ಚಳವಳಿಗಾರರೂ ಬರೆದ ಗಾಂಧೀಜಿಯವರ ಬಗೆಗೆ ಹಾಗು ಅವರ ತತ್ವಚಿಂತನೆಗಳ ಬಗ್ಗೆ ಬರೆದ ಬರಹಗಳ ಅನುವಾದಗಳೆಂದು ವರ್ಗೀಕರಿಸಬಹುದು. )ಗಾಂಧಿ ಬರೆದ ಕೃತಿಗಳ ಅನುವಾದ- ಗಾಂಧೀಜಿಯವರ ಆತ್ಮಕತೆ-‘ಆನ್ ಅಟೊಬಯಾಗ್ರಫಿ ಆಫ್ ಮೈ ಎಕ್ಸ್‍ಪೆರಿಮೆಂಟ್ ವಿತ್ ಟ್ರೂತ್’ ಭಾರತದ ಬಹುತೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಕನ್ನಡದಲ್ಲಿ ಈ ಭಾಷಾಂತರವನ್ನು ಮಾಡಿದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್.ಅದು ‘ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿದೆ. ಇದನ್ನು ಅಹಮದಾಬಾದಿನ ಸಾಬರಮತಿ ಆಶ್ರಮದ ಟ್ರಸ್ಟ್ ಪ್ರಕಟಿಸಿದೆ. ಗೊರೂರರ ಭಾಷಾಂತರವು ಸರಳಗನ್ನಡದಲ್ಲಿದ್ದು ಗಾಂಧಿ ತಾತ್ವಿಕತೆಯನ್ನು ಅಚ್ಚಗನ್ನಡದಲ್ಲಿ ಅರ್ಥ ಮಾಡಿಸುವಂತದ್ದಾಗಿದೆ.

ಗೊರೂರರ ಭಾಷಾಂತರ ಬಿಟ್ಟರೆ ಗಾಂಧೀಜಿಯವರ ಆತ್ಮಕತೆಯು ಗಾಂಧೀ ತತ್ವ/ಸಾಹಿತ್ಯ ಪ್ರಸರಣಾ ಗುಂಪುಗಳು ಮಾಡಿದ ಭಾಷಾಂತರಗಳು ಹೆಚ್ಚು ಅಧಿಕೃತವೆನಿಸುತ್ತವೆ. ಅಂದರೆ ಗಾಂಧೀ ತತ್ವ ಮತ್ತು ಸಾಹಿತ್ಯ ಒಂದು ಮಟ್ಟಿಗೆ ಸಾಂಸ್ಥಿಕ ರೂಪ ಪಡೆದುಕೊಂಡಿರುವ ಸೂಚನೆಗಳಿವೆ. ಇಲ್ಲಿ ಭಾಷಾಂತರವನ್ನು ವೈಯಕ್ತಿಕ ಆಸಕ್ತಿಯ ಮೇರೆಗೆ ಮಾಡದೆ ಸಂಸ್ಥೆಯ ಸೈದ್ಧಾಂತಿಕ ನಿಲುವುಗಳಿಗೆ ಪೂರಕವಾಗಿ ಮಾಡುವುದು ಕಾಣುತ್ತದೆ. ಇಲ್ಲಿ ಭಾಷಾಂತರಕಾರರು ತಮಗರಿವಿಲ್ಲದೆ ‘ಪಾರ್ಟಿನೋಸ್ಟ್’ ಮಾದರಿಯ ಬರವಣಿಗೆಗಳಿಗೆ ತೆರೆದುಕೊಂಡಂತಿದೆ. ಗಾಂಧೀಜಿಯವರ ಆತ್ಮಕಥನವು ಗಾಂಧೀವಾದಿಗಳ ಆಸಕ್ತಿಯಿಂದ ‘ಗಾಂಧೀಜಿಯವರ ಆತ್ಮಕಥೆ ಅಥವಾ ಸತ್ಯಶೋಧನೆ’ ಎಂಬ ಹೆಸರಿನಲ್ಲಿ ಕ್ರಮವಾಗಿ 1928, 1930, 1931ನೇ ಇಸವಿಗಳಲ್ಲಿ ಮುದ್ರಣಗೊಂಡಿದೆ. ಇವುಗಳನ್ನು ಕರ್ಣಾಟಕ ಸಾಹಿತ್ಯ ಪ್ರಕಟಣಾಲಯ ಮತ್ತು ವಿಶ್ವಪ್ರಕಟಣಾಲಯಗಳು ಪ್ರಕಟಿಸಿವೆ. ವಿಶೇಷವೆಂದರೆ ಈ ಪುಸ್ತಕದ ಭಾಷಾಂತರಕಾರರು ತಮ್ಮ ಹೆಸರುಗಳನ್ನು ನಮೂದಿಸಿಲ್ಲ; ಬದಲಾಗಿ ‘ಕನ್ನಡಿಗರಿಬ್ಬರು’ ಎಂಬ ಹೆಸರುಗಳನ್ನು ಮಾತ್ರವೇ ಬರೆದುಕೊಂಡಿದ್ದಾರೆ. ಪುಸ್ತಕಗಳ ಒಳಭಾಗದ ವಿವರಗಳಲ್ಲಿಯೂ ಇವರಿಬ್ಬರ ಹೆಸರುಗಳಿಲ್ಲ. ಗಾಂಧೀ ತತ್ವವನ್ನು ಮನಸ್ಫೂರ್ವಕ ಅನುಸರಿಸುತ್ತಿದ್ದ ಕೆಲ ಕನ್ನಡಿಗ ಗಾಂಧೀ ಅನುಯಾಯಿಗಳು ಗಾಂಧೀಜಿಯವರ ತತ್ವ ಸಿದ್ಧಾಂತಗಳಿಗನುಗುಣವಾಗಿಯೇ ತಮ್ಮನ್ನು ತಾವು ಸಾರ್ವಜನಿಕ ಜೀವನದ ಹೇಗೆ ಕೀರ್ತಿಗೆ ಹೊರತಾಗಿ ಕೆಲಸ ಮಾಡಬೇಕೆನ್ನುವುದಕ್ಕೆ ಉದಾಹರಣೆಯಾಗಿ ಹೀಗೆ ಮಾಡಿರಬಹುದು. ಕನ್ನಡದ ಮಟ್ಟಿಗೆ ಇದೊಂದು ಆದರ್ಶದ ಮಾದರಿ.

ಮಹಾತ್ಮಾಗಾಂಧಿ ಅವರ ತಾತ್ವಿಕತೆಯ ಪ್ರಯೋಗಗಳಲ್ಲಿ ಬ್ರಹ್ಮಚರ್ಯವನ್ನು ಆಚರಿಸುವುದು ಯಾಕೆ ಮತ್ತು ಹೇಗೆ ಎಂಬ ವಿಷಯವು ಬಹುಚರ್ಚಿತವಾದುದು. ಈ ಬಗ್ಗೆ ಮೂವತ್ತರ ದಶಕದಲ್ಲಿ ಗಾಂಧಿ ಬರೆದ ‘ಸೆಲ್ಫ್ ರಿಸ್ಟ್ರೆಯೆಂಟ್ ವರ್ಸಸ್ ಸೆಲ್ಫ್ ಇಂಡಲ್ಜೆನ್ಸ್’ ಎಂಬ ಪುಸ್ತಕವನ್ನು ಕನ್ನಡಕ್ಕೆ ‘ಬ್ರಹ್ಮಚರ್ಯೆಯೊ ಕಾಮಸಾಧನೆಯೊ(ಅಥವಾ ಇಂದ್ರಿಯ ನಿಗ್ರಹ)’(1928) ಭಾಷಾಂತರಿಸಲಾಗಿದೆ. ಇದನ್ನು ಭಾಷಾಂತರಿಸಿದವರು ದ.ಕೃ.ಭಾರದ್ವಾಜ ಅವರು.

ಮಹಾತ್ಮಾಗಾಂಧಿಯವರು ಯರವಾಡ ಜೈಲಿನಲ್ಲಿದ್ದಾಗ ಬೆಳಗಿನ ಪ್ರಾರ್ಥನೆಯಾದ ನಂತರ ಒಂದೊಂದು ಪ್ರವಚನವನ್ನು ಬರೆದು ಕಳಿಸುವ ಸಂಕಲ್ಪ ಮಾಡಿದ್ದರಂತೆ. ಅದನ್ನು ಬಾಲಕೃಷ್ಣ ಕಾಲೇಲಕರ ಅವರು ಸಂಪಾದನೆ ಮಾಡಿ ಪ್ರಕಟಿಸಿದಾರೆ. ಇದನ್ನು ಕನ್ನಡದಲ್ಲಿ ‘ಮಹಾತ್ಮಾಗಾಂಧಿಯವರ ಮಂಗಲ ಪ್ರಭಾತ’(1934) ಎಂದು ಶ್ರೀ ರಾಮಚಂದ್ರ ವಡವಿಯವರು ಭಾಷಾಂತರಿಸಿದ್ದಾರೆ. ಈ ಪುಸ್ತಕದಲ್ಲಿ ಸತ್ಯ, ಅಹಿಂಸೆ, ಬ್ರಹ್ಮಚರ್ಯೆ, ಆಸ್ತೇಯ, ಸ್ವದೇಶ, ಕಾಯಕ, ಸರ್ವಧರ್ಮ, ನಮ್ರತೆ ಮುಂತಾದ ವಿಷಯಗಳ ಬಗ್ಗೆ ಗಾಂಧೀಜಿಯವರು ಬರೆದ ಪ್ರವಚನ ಮಾಲೆಯಿದೆ.

ಗಾಂಧೀಜಿಯವರು ಅವರು ತಾವು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ಮಾಡಿದ ಸತ್ಯಾಗ್ರಹದ ಅನುಭವಗಳನ್ನು ಬರೆದಿದ್ದರು. ಅದನ್ನು ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’-ಭಾಗ-(1941) ಎಂದು ಸಂತೇಬೆನ್ನೂರು ಕೃಷ್ಣಮೂರ್ತಿರಾವ್ ಅವರು ಕನ್ನಡಿಸಿದ್ದಾರೆ.

ಮೋ..ಗಾಂಧಿಯವರು ತಮ್ಮ ಚಳವಳಿ, ಸೈದ್ಧಾಂತಿಕ ಹೋರಾಟಗಳಲ್ಲಿ ಭಾಗಿಯಾದವರನ್ನು ಕುರಿತು ಕಿರು ಟಿಪ್ಪಣಿಗಳನ್ನು ಬರೆದಿದ್ದಾರೆ. ಮಗನ್‍ಲಾಲ್ ಗಾಂಧಿ, ವಿನೋಬಾ ಭಾವೆ, ಕಿಶೋರಿಲಾಲ, ಹಕೀಂ ಸಾಹೆಬ, ಅಜಮಲಖಾನ್, ಬಂಗಾಲ ಸಿಂಹ, ಜಮನಾಲಾಲ್ ಬಜಾಜ್, ಹನುಮಂತರಾವು, ಸುಶೀಲ ರುದ್ರ, ಪ್ರಫುಲ್ಲಚಂದ್ರ ರಾಯ್, ಆಚಾರ್ಯ ಆನಂದ ಶಂಕರ ಧ್ರುವ, ರಾಯಚಂದ ಭಾಯಿ, ಬಾಲಗಂಗಾಧರ ತಿಲಕರು, ಗೋಖಲೆ, ಮೆಹತಾ ಮುಂತಾದವರನ್ನು ಕುರಿತು ಟಿಪ್ಪಣಿಗಳು ಇಲ್ಲಿವೆ. ಇದು ‘ನನ್ನ ಜೊತೆಗಾರರು’(1943) ಎಂಬ ಹೆಸರಿನಲ್ಲಿ ಈ ಪುಸ್ತಕವನ್ನು ಕನ್ನಡಿಸಿದವರು ಸಿದ್ಧವನಹಳ್ಳಿ ಕೃಷ್ಣಶರ್ಮರು. ಗಾಂಧೀಸಾಹಿತ್ಯವು ಕನ್ನಡದಲ್ಲಿ ಒಂದು ರಾಜಕೀಯ ನಿರೂಪಣೆಯನ್ನು ಪಡೆದುಕೊಳ್ಳುವ ಹಂತದಲ್ಲಿ ಈ ಕೃತಿ ಬಂದಿದೆ.

ಮಹಾತ್ಮಾ ಗಾಂಧೀಜಿಯವರ ಇನ್ನೊಂದು ಮಹತ್ವದ ಪುಸ್ತಕ ಕನ್ನಡಾನುವಾದದಲ್ಲಿ ಬಂದಿದ್ದು ಅದು ಬಾಪು ಅವರ ಮೊದಲ ಹಂತದ ಜೀವನದ ಅನುಭವ ಕಥನಗಳನ್ನು ಒಳಗೊಂಡಿದೆ. ‘ಮೈ ಅರ್ಲಿ ಲೈಫ್’ ಎಂಬ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಬಂದ ಪುಸ್ತಕವನ್ನು ಸಂಗ್ರಹಿಸಿ ಸಂಪಾದನೆ ಮಾಡಿದವರು ಗಾಂಧೀಜಿಯವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಮಹಾದೇವ ದೇಸಾಯಿಯವರು. ಇದನ್ನು ಕನ್ನಡಕ್ಕೆ ‘ನನ್ನ ಆರಂಭ ಜೀವನ’(1944) ಎಂದು ತಂದವರು ಮ.ಗೋವಿಂದರಾಯರು. ಅಪ್ಪಟ ಕನ್ನಡದಲ್ಲಿ ಗಾಂಧೀಜಿಯವರ ಅನುಭವ ಕಥನವನ್ನು ಭಾಷಾಂತರಿಸಿದೆ. ಅವರ ಬಾಲ್ಯದ ಅನುಭವಗಳನ್ನು ‘ಚಿಕ್ಕಂದು’, ಸಾಲೆಯಲ್ಲಿ, ಮದುವೆ, ಪಾಪ ನಿವೇದನೆ ಮುಂತಾಗಿ ಆಪ್ತವೆನಿಸುವಂತೆ ಭಾಷಾಂತರಿಸಿರುವುದು ಗಮನಾರ್ಹ. ಈ ಭಾಷಾಂತರ ಪುಸ್ತಕದ ಹಿಂಬದಿಯಲ್ಲಿ ಕಠಿಣವೆನಿಸುವ ಶಬ್ದಾರ್ಥಗಳನ್ನು ಕೊಟ್ಟಿದೆ. ಇದು ಗಾಂಧೀಸಾಹಿತ್ಯಕ್ಕೆ ಪ್ರವೇಶ ಪಡೆಯುವವರಿಗೆ ನೆರವಾಗುವಂತಹ ಕೆಲಸ.

ಗಾಂಧೀಜಿ ಸ್ತ್ರೀಯರ ಸಮಸ್ಯೆಗಳನ್ನು ಕುರಿತು ಬರೆದ ಬರಹಗಳು ಒಟ್ಟುಗೂಡಿ ‘ಟು ದ ವಿಮೆನ್’(1941) ಎಂಬ ಪುಸ್ತಕ ರೂಪದಲ್ಲಿ ಬಂದಿತು. ಅದರೊಳಗೆ ಇರುವ ಎಪ್ಪತ್ತೈದು ಬರಹಗಳಲ್ಲಿ ಇಪ್ಪತ್ತೈದು ಬರಹಗಳನ್ನು ಆಯ್ದು ‘ಸ್ತ್ರೀಯರ ಸಮಸ್ಯೆಗಳು’ ಎಂಬ ಹೆಸರಿನಲ್ಲಿ ಭಾಷಾಂತರಿಸಲಾಗಿದೆ. ಈ ಲೇಖನಗಳನ್ನು ಕನ್ನಡಿಸಿದವರು ಪ್ರಹ್ಲಾದ ನರೇಗಲ್ಲು ಹಾಗು ವೆಂಕಟೇಶ ಮಳಿಯೆ ಅವರುಗಳು. ಇದರಲ್ಲಿ ಹಿಂದೂ ಸ್ತ್ರೀಯರ ನಡತೆ ಹೇಗಿರಬೇಕು? ಎನ್ನುವುದನ್ನು ವಿವರಿಸಲಾಗಿದೆ. ಆದರ್ಶಸತಿ, ಸ್ತ್ರೀಯರೂ ಆಭರಣಗಳೂ, ಅವರ ತ್ಯಾಗ ಇತ್ಯಾದಿಗಳನ್ನು ವಿವರಿಸಿದೆ. ಹೊಸದಾಗಿ ಆವಿರ್ಭವಿಸುತ್ತಿದ್ದ ರಾಷ್ಟ್ರೀಯತೆಯು ಹೊಸ ಸ್ತ್ರೀಯನ್ನು ಹೇಗೆ ನೋಡಲು ಬಯಸುತ್ತಿತ್ತು ಎನ್ನುವುದನ್ನು ಗಾಂಧಿಯವರ ಬರಹಗಳು ತೋರುತ್ತವೆ.

ಕನ್ನಡದಲ್ಲಿ ಗಾಂಧೀಜಿಯವರ ಬಗ್ಗೆ ಬರೆದ ಬರವಣಿಗೆಗಳು ವಿಫುಲವಾಗಿವೆ. ಅವುಗಳಲ್ಲಿ ಕೆಲವು ಗಮನಾರ್ಹ ಕೃತಿಗಳನ್ನು ಗಮನಿಸುವುದಾದರೆ, ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರ ಸಹವರ್ತಿಗಳಾಗಿದ್ದ ಪೊಲಾಕ್ ಅವರ ಮಡದಿ ಮಿಲ್ಲೀ ಗ್ರಹಾಂ ಪೊಲಾಕ್ ಅವರು ಬರೆದ ‘ಗಾಂಧಿ, ದ ಮ್ಯಾನ್’ ಕೃತಿಯನ್ನು ಕನ್ನಡದಲ್ಲಿ ‘ಗಾಂಧೀಜಿ (ಒಂದು ಅಂತರಂಗ ಪರಿಚಯ)’ ಎಂದು ತ.ರಾ. ಸುಬ್ಬರಾಯರು ಭಾಷಾಂತರಿಸಿದ್ದಾರೆ. ಇದರಲ್ಲಿ ಮಿಲ್ಲಿಯವರು ಗಾಂಧಿಯವರು ಹೇಗೆ ಮಾನವತೆಯ ಮೂರ್ತಿಯಾಗಿ ಬೆಳೆದರು ಎನ್ನುವುದನ್ನು ತಮ್ಮ ಅನುಭವ ಕಥನದಲ್ಲಿ ಬಣ್ಣಿಸಿದ್ದಾರೆ.

ಕಿಶೋರ್ ಮಶರುವಾಲಾ ಅವರು ಗಾಂಧೀಜಿಯವರ ಅನುಯಾಯಿಗಳಾಗಿದ್ದವರು. ಕಿಶೋರ್‍ಲಾಲ್ ಮಶರುವಾಲಾ ಅವರು ಗುಜರಾತಿಯಲ್ಲಿ ಬರೆದ ಪುಸ್ತಕವನ್ನು ‘ಗಾಂಧೀ ವಿಚಾರ ದೋಹನ’(1934) ಎಂದು ಗುರುನಾಥ ಜೋಶಿಯವರು ಭಾಷಾಂತರ ಮಾಡಿದ್ದಾರೆ. ಈ ಕೃತಿ ಜನಪ್ರಿಯವಾಗಿ ನಾಲ್ಕು ಮುದ್ರಣಗಳನ್ನು ಕಂಡಿದೆ. ಪ್ರಕಾಶಕರು ಈ ಪುಸ್ತಕವನ್ನು ಸಮರ್ಥನೆ ಮಾಡಿಕೊಂಡಿರುವುದು ಹೀಗೆ: “ಗಾಂಧೀಜಿಯವರ ವಿಚಾರ ಸ್ವರೂಪದ ತಿರುಳನ್ನು ಒತ್ತಟ್ಟಿಗೆ ನೋಡಬೇಕೆಂದರೆ ಇದರ ಹೊರ್ತು ಇನ್ನೊಂದು ಪುಸ್ತಕವಿಲ್ಲ. ಇಂಥ ಪುಸ್ತಕವು ಈ ಹೊತ್ತು ಕನ್ನಡ ರೂಪವನ್ನು ತಾಳುತ್ತಲಿರುವುದು ಕನ್ನಡಿಗರ ಸುದೈವವೇ ಎಂದು ಹೇಳಬಹುದು. ಈ ಹೊತ್ತು ಗಾಂಧೀಜಿಯವರು ಕೇವಲ ಹಿಂದೂಸ್ತಾನದವರಲ್ಲ-ಅವರು ಜಗದ್ವ್ಯಕ್ತಿಗಳು-ಅವರ ತತ್ವ, ವಿಚಾರ, ಜೀವನ, ಆಚಾರ ಇವುಗಳ ಅಭ್ಯಾಸವು ಈಗ ಪ್ರತಿ ದೇಶದಲ್ಲೂ ಆಸ್ಥೆಯಿಂದ ಆಗುತ್ತಿರುವುದು. ಅಂಥ ಸಮಯದಲ್ಲಿ ಕೇವಲ ಕನ್ನಡವನ್ನೇ ಬಲ್ಲವರಿಗೆ ಈ ಪುಸ್ತಕವು ಅಮೌಲಿಕವಾದ ಸೊತ್ತು ಸಿಕ್ಕಂತೆಯೆ ಸರಿ!”(ಗಾಂಧೀವಿಚಾರ ದೋಹನದ ಅರಿಕೆಯಲ್ಲಿ). ಈ ಕೃತಿಯನ್ನು ಅನುವಾದ ಮಾಡಿದ ಗುರುನಾಥ ಜೋಶಿಯವರು ಗುಜರಾತಿಯನ್ನು ಕಲಿತು ಅದರಿಂದ ನೇರವಾಗಿ ಕನ್ನಡಕ್ಕೆ ತಂದಿದ್ದಾಗಿ ಹೇಳಿಕೊಂಡಿದ್ದಾರೆ. ಹೀಗೆ ಗುಜರಾತಿಯನ್ನು ಗಾಂಧಿಯವರ ಸಲುವಾಗಿ ಕಲಿಯುವುದು ಸಹ ಒಂದು ಹೆಮ್ಮೆಯ ಸಂಗತಿಯಾಗಿತ್ತು.

ಕಿಶೋರ್ ಮಶರೂವಾಲಾ ಅವರ ಇನ್ನೊಂದು ಪುಸ್ತಕ ಕನ್ನಡದಲ್ಲಿ ‘ವ್ಯಾವಹಾರಿಕ ಅಹಿಂಸೆ’(1941)ರಲ್ಲಿ ಕನ್ನಡಕ್ಕೆ ಬಂದಿದೆ. ಇದನ್ನು ಭಾಷಾಂತರಿಸಿದವರು ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು. ಇದರಲ್ಲಿ ಕುತೂಹಲಕಾರಿಯಾದ ಅಂಶ ಎಂದರೆ ಅಹಿಂಸೆಯೆಂಬ ಪರಿಭಾಷೆಯನ್ನು ಗಾಂಧೀಜಿ ರೂಪಿಸಿಕೊಂಡಂತೆಯೇ ಕನ್ನಡದಲ್ಲಿ ಅದರ ಆಶಯವನ್ನು ನೀಡುವುದು ಹೇಗೆ ಎನ್ನುವ ಸಣ್ಣ ಸೂಚನೆಯೊಂದಿಗೆ ಭಾಷಾಂತರ ಮಾಡಲಾಗಿದೆ. ‘ಇಲ್ಲಿ Violence and Non-Violence ಎಂಬ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ‘ಅಹಿಂಸೆ’, ‘ಅವಿಹಿಂಸೆ’ ಎಂಬ ಪದಗಳನ್ನು ಉಪಯೋಗಿಸಲಾಗಿದೆ’ ಎಂಬ ಸೂಚನೆಯನ್ನು ಅನುವಾದಕರು ನೀಡಿದ್ದಾರೆ.

ಲೂಯಿ ಫಿಶರ್ ಅವರು ಬರೆದ ಮಹಾತ್ಮಾಗಾಂಧಿಯವರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಎಚ್.ವಿ ಸಾವಿತ್ರಮ್ಮ ಅವರು ‘ಮಹಾತ್ಮಾಗಾಂಧಿ ಅವರ ಜೀವನ ಚರಿತೆ’ ಎಂದು ಭಾಷಾಂತರಿಸಿದ್ದಾರೆ. ಶಂಕರೇಗೌಡರು ಪ್ಯಾರೇಲಾಲರ ‘ಮಹಾತ್ಮಾ ಗಾಂಧಿ ಅಂತಿಮ ಹಂತ’ ಕೃತಿಯನ್ನು ಅನುವಾದ ಮಾಡಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿ ಅವರು ಇಂಗ್ಲಿಷಿನಲ್ಲಿ ಆರ್.ಕೆ.ಪ್ರಭು ಅವರು ಗಾಂಧೀಜಿಯವರ ಕೃತಿಗಳಿಂದ ಆಯ್ದ ಕೆಲವು ವಿಚಾರ ಹಾಗು ಉಲ್ಲೇಖಗಳನ್ನು ಆರಿಸಿ 366 ದಿನಕ್ಕೆ ಮೋಹನ ಮಾಲಾ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದನ್ನು ನರಸಿಂಹಸ್ವಾಮಿಯವರು ಕನ್ನಡದಲ್ಲಿ ‘ಮೋಹನ ಮಾಲೆ’(1960) ಎಂದೂ ಇದೇ ಪ್ರಭು ಅವರು ಗಾಂಧೀಜಿಯವರ ಲೇಖನ/ಭಾಷಣಗಳಿಂದ ಆಯ್ದ ಉದ್ಧೃತ ಭಾಗಗಳನ್ನು ಸಂಕಲಿಸಿ ‘ಇಂಡಿಯ ಆಫ್ ಮೈ ಡ್ರೀಮ್ಸ್’ ಎಂಬ ಕೃತಿಯ ಅನುವಾದವನ್ನು ‘ನನ್ನ ಕನಸಿನ ಭಾರತ’(1961) ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

ಕನ್ನಡದಲ್ಲಿ ಬಂದ ಗಾಂಧಿ ಅನುವಾದಗಳ ಸರಣಿ ಮುಂದುವರೆಯುತ್ತಾ ಬಂದಿದೆ. ಈ ಲೇಖನದ ವ್ಯಾಪ್ತಿಯಲ್ಲಿ ಗಾಂಧೀಜಿಯವರ ಕಾಲದಲ್ಲಿ ಹಾಗು ಸ್ವಾತಂತ್ರ್ಯ ಬಂದ ದಶಕದಲ್ಲಿ ಬಂದಂತಹ ಭಾಷಾಂತರಗಳನ್ನು ಒಂದು ಚೌಕಟ್ಟಿನಲ್ಲಿ ಚರ್ಚಿಸಿದೆ. ಕನ್ನಡದಲ್ಲಿ ಗಾಂಧೀ ಸಾಹಿತ್ಯವು ಗದ್ಯ ಬರವಣಿಗೆಯ ಹೊಸ ಪ್ರಕಾರಗಳನ್ನು ಪರಿಚಯಿಸಿಕೊಟ್ಟಿತು. ರಾಜಕೀಯ ಬರವಣಿಗೆಯ ಬನಿಯನ್ನು ಭಾಷೆಗೆ ಪರಿಚಯಿಸಿತು. ಕುತೂಹಲಕಾರಿಯಾದ ಅಂಶವೇನೆಂದರೆ ಗಾಂಧೀಸಾಹಿತ್ಯವನ್ನು ಉತ್ಸಾಹದಿಂದ ಭಾಷಾಂತರಕ್ಕೆ ಎತ್ತಿಕೊಂಡವರು ಅಕಾಡೆಮಿಕ್ ಆಸಕ್ತಿಯುಳ್ಳ ಬರಹಗಾರರಲ್ಲ; ಅವರೆಲ್ಲ ಅಪ್ಪಟ ಗಾಂಧೀವಾದಿಗಳಾಗಿದ್ದು ದೇಶವಾಸಿಗಳ ಕುಶಲವನ್ನು ಬಯಸುವ ಸಜ್ಜನ ದೇಶಭಕ್ತ ಪರಂಪರೆಗೆ ಸೇರಿದವರಾಗಿದ್ದರು. ರಾಮಚಂದ್ರ ವಡವಿ, ಗುರುನಾಥ ಜೋಶಿ, ಗೋವಿಂದರಾಯರು ಮುಂತಾದವರು ಗಾಂಧೀವಾದವನ್ನು ಎದೆಗೆ ತೆಗೆದುಕೊಂಡು ಭಾಷಾಂತರವನ್ನು ಮಾಡಿದವರು. ಸಿದ್ಧವನಹಳ್ಳಿಯವರಂತಹ ಕೆಲವರು ಗಾಂಧೀವಾದದ ಕ್ರಿಯಾವಾದಿಗಳಾಗಿ ಸಂಘಟನೆ, ಸಮಾಜೋದ್ಧಾರಗಳಲ್ಲಿ ತೊಡಗಿಕೊಂಡಂತವರು. ಇನ್ನೂ ಕೆಲವರು ಆದರ್ಶ ರಾಜಕಾರಣಿಗಳು ಹಾಗು ಸಾಮಾಜಿಕರು. ಇವರ ಉದ್ದೇಶಗಳು ಗಾಂಧಿಯನ್ನು ಕನ್ನಡ ನಾಡಿನ ಜನಕ್ಕೆ ಪರಿಚಯಿಸುವ ಮೂಲಕ ಮಹತ್ತಿನೊಡನೆ ಸೇರಿಸುವ ಆಶಯ ಇದ್ದಂತವು. ಆದರೆ ಕ್ರಮೇಣ ಗಾಂಧೀವಾದ ಅಕಾಡೆಮಿಕ್ ವಲಯಗಳಲ್ಲಿ ಹೆಚ್ಚು ಪರಿವರ್ತಿತವಾಗುತ್ತಿದ್ದು ಅಕಾಡೆಮಿಕ್ ಆಸಕ್ತಿಯಿಂದ ಗಾಂಧೀ ಅನುವಾದಗಳು, ವಿಶ್ಲೇಷಣೆಗಳ ಬರವಣಿಗೆಗಳು ಭಾಷಾಂತರಗೊಳ್ಳುತ್ತಿವೆ. ಆಧುನಿಕತೆಯ ಹೊಸ ಹೊರಳುಗಳನ್ನು ಎದುರಿಸಲು ಗಾಂಧಿ ಚಿಂತಿಸಿದ್ದನ್ನು ವಿಶ್ಲೇಷಿಸಿದ ಹೊಸ ತಲೆಮಾರುಗಳ ಬರವಣಿಗೆಗಳಿಗೆ ಮಹತ್ವ ಸಿಗುತ್ತಲಿದೆ. ಈ ಬಗೆಯ ಭಾಷಾಂತರಗಳನ್ನು ಹೊಸ ಚೌಕಟ್ಟಿನಿಂದಲೇ ನೋಡಬೇಕು.

ಆಕರಗಳು

ಕನ್ನಡಿಗರಿಬ್ಬರು(ಅನು)(1928) ಗಾಂಧೀಜಿಯವರ ಆತ್ಮಕಥೆ ಅಥವಾ ಸತ್ಯಶೋಧನೆ ಭಾಗ-1, ಬೆಂಗಳೂರು: ವಿಶ್ವ ಕರ್ನಾಟಕ ಪುಸ್ತಕ ಪ್ರಕಟಣಾಲಯ

ಕನ್ನಡಿಗರಿಬ್ಬರು(ಅನು)(1928) ಗಾಂಧೀಜಿಯವರ ಆತ್ಮಕಥೆ ಅಥವಾ ಸತ್ಯಶೋಧನೆ ಭಾಗ-2, ಬೆಂಗಳೂರು: ವಿಶ್ವ ಕರ್ನಾಟಕ ಪುಸ್ತಕ ಪ್ರಕಟಣಾಲಯ

ಕನ್ನಡಿಗರಿಬ್ಬರು(ಅನು)(1930) ಗಾಂಧೀಜಿಯವರ ಆತ್ಮಕಥೆ ಅಥವಾ ಸತ್ಯಶೋಧನೆ ಭಾಗ-4, ಬೆÉಂಗಳೂರು: ವಿಶ್ವ ಕರ್ನಾಟಕ ಪುಸ್ತಕ ಪ್ರಕಟಣಾಲಯ

ಕನ್ನಡಿಗರಿಬ್ಬರು(ಅನು)(1931) ಗಾಂಧೀಜಿಯವರ ಆತ್ಮಕಥೆ ಅಥವಾ ಸತ್ಯಶೋಧನೆ ಭಾಗ-5, ಬೆಂಗಳೂರು: ವಿಶ್ವ ಕರ್ನಾಟಕ ಪುಸ್ತಕ ಪ್ರಕಟಣಾಲಯ

ಕೃಷ್ಣಮೂರ್ತಿರಾವ್, ಎಸ್.ವಿ(ಅನು)(1941) ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ-1, ಶಿವಮೊಗ್ಗ: ಕಾರ್ಯಾಲಯ

ಗುರುನಾಥ ಜೋಶಿ(ಅನು)(1936) ಗಾಂಧೀವಿಚಾರ ದೋಹನ, ಹುಬ್ಬಳ್ಳಿ: ಕರ್ನಾಟಕ ಶಿಕ್ಷಣ ಸಮಿತಿ

ಗೊರೂರು ರಾಮಸ್ವಾಮಿ ಅಯ್ಯಂಗಾರ್(?) ‘ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’, ಅಹಮದಾಬಾದ್: ನವಜೀವನ ಟ್ರಸ್ಟ್

ಗೋವಿಂದರಾಯ(ಅನು) (1944) ನಮ್ಮ ಆರಂಭ ಜೀವನ, ಹುಬ್ಬಳ್ಳಿ: ಅವಧೂತ

ಪ್ರಲ್ಹಾದ ನರೇಗಲ್ಲು ಮತ್ತು ವೆಂಕಟೇಶ ವಡವಿ (?) ಸ್ತ್ರೀಯರ ಸಮಸ್ಯೆಗಳು. ಹುಬ್ಬಳ್ಳಿ: ಸಾಹಿತ್ಯ ಭಂಡಾರ

ಭಾರದ್ವಾಜ, .ಕೃ.(1928) ಬ್ರಹ್ಮಚರ್ಯಯೊ ಕಾಮ ಸಾಧನೆಯೊ, ಬೆಂಗಳೂರು ಸಿಟಿ, ಟಾಗೋರ್ ಕಂಪನಿ

ಮಿಲ್ಲಿ ಗ್ರಹಾಂ ಪೋಲಕ್(?) ಗಾಂಧೀಜಿ(ಒಂದು ಅಂತರಂಗ ಪರಿಚಯ). ಬೆಂಗಳೂರು: ಗಾಂಧೀ ಸಾಹಿತ್ಯ ಭಂಡಾರ

ರಾಮಚಂದ್ರನ್, ಸಿ.ಎನ್(ಸಂ)(2009) ಕೆ.ಎಸ್.ನರಸಿಂಹಸ್ವಾಮಿ ಸಮಗ್ರ ವಾಘ್ಮಯ. ಸಂಪುಟ ನಾಲ್ಕು: ಅನುವಾದ ಸಾಹಿತ್ಯ-1. ಬೆಂಗಳೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ

ರಾಮಚಂದ್ರ ವೆಂಕಟೇಶ ವಡವಿ(ಅನು)(1942) ಮಹಾತ್ಮಾಗಾಂಧಿಯವರ ಮಂಗಳ ಪ್ರಭಾತ, ಹುಬ್ಬಳ್ಳಿ: ಕರ್ನಾಟಕ ಶಿಕ್ಷಣ ಸಮಿತಿ. ಎರಡನೇ ಮುದ್ರಣ

ಸಾವಿತ್ರಮ್ಮ, ಎಚ್.ವಿ.(2009) ಮಹಾತ್ಮಾ ಗಾಂಧಿ ಅವರ ಜೀವನ ಚರಿತೆ, ಮೈಸೂರು: ಕಾವ್ಯಾಲಯ, ಹೊಸ ಮುದ್ರಣ

ಸಿದ್ಧವನಹಳ್ಳಿ ಕೃಷ್ಣಶರ್ಮ(1943) ನನ್ನ ಜೊತೆಗಾರರು. ?

ಸಿದ್ಧವನಹಳ್ಳಿ ಕೃಷ್ಣಶರ್ಮ(1941) ವ್ಯಾವಹಾರಿಕ ಅಹಿಂಸೆ. ಮೈಸೂರು: ಗ್ರಾಮಸೇವಾ ನಿಲಯ

ಈ ಅಂಕಣದ ಹಿಂದಿನ ಬರೆಹ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...