ಗೋಕಾಕರು ನವೋದಯದ ಸಮಯದಲ್ಲಿಯೇ ತಮ್ಮ ಸಾಹಿತ್ಯದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು


"ನವೋದಯದ ಸಮಯದ ಸಾಹಿತಿಗಳಲ್ಲಿ ಕೆಲವರು ಅಧ್ಯಾತ್ಮದ ಸಾಧನೆಯ ದಾರಿಯನ್ನೂ ಬರವಣಿಗೆಯ ಜೊತೆಜೊತೆಗೆ ಮೈಗೂಡಿಸಿಕೊಂಡಿದ್ದರು. ಕುವೆಂಪು ಅವರೇ ಧ್ಯಾನದ ಒಂದಿಷ್ಟೆಲ್ಲ ಕಠಿಣದ ಸಮಯದ ಕಳೆದುದು ತಿಳಿಯುತ್ತದೆ, ರಾಮಕೃಷ್ಣರ, ವಿವೇಕಾನಂದರ ಪ್ರಭಾವ ಅವರ ಮೇಲೆ ದಟ್ಟವಾಗಿತ್ತು," ಎನ್ನುತ್ತಾರೆ ಆನಂದ ಪಾಟೀಲ. ಅವರು ಗೋಕಾಕ್ ಮತ್ತು ಅವರ ಆಧ್ಯಾತ್ಮಿಕ ಪ್ರಯೋಗಗಳ ಕುರಿತು ಬರೆದಿರುವ ಲೇಖನ ನಿಮ್ಮ ಓದಿಗಾಗಿ.

ಸಾಮಾನ್ಯವಾಗಿ ನವೋದಯದ ನಮ್ಮೆಲ್ಲ ಹಿರಿಯ ಸಾಹಿತಿಗಳು ಅಧ್ಯಾತ್ಮವನ್ನು ಒಂದು ಮೌಲ್ಯವಾಗಿ ಭಾವಿಸಿದವರು. ಅವರಿಗೆ ಆಂತರ್ಯದ ಉನ್ನತಿ ಬದುಕಿನ ಶ್ರೇಷ್ಠ ಉದ್ದೇಶವಾಗಿತ್ತು. ಸಾಮಾಜಿಕ ಸುಧಾರಣೆ, ಮಾನವೀಯತೆಯನ್ನು ಎಷ್ಟೇ ಮುನ್ನೆಲೆಯಲ್ಲಿಟ್ಟು ಕೊಂಡಿದ್ದರೂ ಅಧ್ಯಾತ್ಮಿಕತೆಯನ್ನು ಅವರು ಬಿಟ್ಟಿರಲಿಲ್ಲ. ಸಾಮಾಜಿಕ ಸ್ವಾಸ್ಥ್ಯದ ಬಗೆಗೆ ಪ್ರಖರವಾಗಿಯೇ ಮಾತನಾಡಿದ, ತಮ್ಮ ಕೃತಿಗಳಲ್ಲಿ ತೋರಿಸಿದ ಕುವೆಂಪು ಕೂಡ ಅಧ್ಯಾತ್ಮವನ್ನು ತಮ್ಮ ಎದೆಯೊಳಗೆ ಒಪ್ಪವಾಗಿ ಇಟ್ಟುಕೊಂಡವರೇ. ಬೇಂದ್ರೆಯವರು ಅಧ್ಯಾತ್ಮವನ್ನು ಬಿಟ್ಟಿರಲೇ ಇಲ್ಲ. ಡಿ ವಿ ಜಿ, ಪುತಿನ, ರಾಜರತ್ನಂ, ಮಧುರಚೆನ್ನ ಒಟ್ಟು ಆ ನವೋದಯ ಸಮಯದ ಎಲ್ಲರೂ ಅಧ್ಯಾತ್ಮವನ್ನ ಮನುಷ್ಯನ ಜೀವಿತದ ಅತ್ಯುನ್ನತ ಸಾಧನೆಯೆಂದೇ ಬಗೆದಿದ್ದರು.

ಗೋಕಾಕರು ನವೋದಯದ ಸಮಯದಲ್ಲಿಯೇ ತಮ್ಮ ಸಾಹಿತ್ಯದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅವರು ನವ್ಯದ ಹರಿಕಾರರು ಎಂದುಕೊಂಡರೂ ಅಡಿಗರಂತೆ ತೀರ ವಿಭಿನ್ನವಾದ ದಾರಿ ತುಳಿದವರಲ್ಲ, ನವೋದಯದ ಎಲ್ಲ ಮೌಲ್ಯಗಳನ್ನು ಗೌರವಿಸಿದವರು, ತಮ್ಮ ಸೃಜನಶೀಲತೆಯನ್ನು ಆ ದಿಸೆಯಲ್ಲಿಯೇ ಹುರಿಮಾಡಿಕೊಂಡವರು. ಧಾರವಾಡದ ಪರಿಸರದಲ್ಲಿದ್ದು ಬೇಂದ್ರೆಯವರ ಗೆಳೆಯರ ಗುಂಪಿನ ಒಡನಾಟದದಲ್ಲಿಯೇ ತಮ್ಮನ್ನ ಸಿದ್ಧಗೊಳಿಸಿಕೊಂಡವರು. ಹಾಗಾಗಿ ಅವರನ್ನು ಯಥೇಚ್ಛವಾಗಿ ನವೋದಯದ ವ್ಯಕ್ತಿತ್ವವುಳ್ಳವರೇ ಎನ್ನಬೇಕು, ಇಲ್ಲಾ ನವೋದಯದ ಅಂಚಿನವರು ಎಂದುಕೊಂಡರೂ ಆದೀತು.

ನವೋದಯದ ಸಮಯದ ಈ ಸಾಹಿತಿಗಳಲ್ಲಿ ಕೆಲವರು ಅಧ್ಯಾತ್ಮದ ಸಾಧನೆಯ ದಾರಿಯನ್ನೂ ಬರವಣಿಗೆಯ ಜೊತೆಜೊತೆಗೆ ಮೈಗೂಡಿಸಿಕೊಂಡಿದ್ದರು. ಕುವೆಂಪು ಅವರೇ ಧ್ಯಾನದ ಒಂದಿಷ್ಟೆಲ್ಲ ಕಠಿಣದ ಸಮಯದ ಕಳೆದುದು ತಿಳಿಯುತ್ತದೆ, ರಾಮಕೃಷ್ಣರ, ವಿವೇಕಾನಂದರ ಪ್ರಭಾವ ಅವರ ಮೇಲೆ ದಟ್ಟವಾಗಿತ್ತು. ಬೇಂದ್ರೆ ಅವರು ತಮ್ಮ ಮನೆಯ ಪರಿಸರ, ಉತ್ತರ ಕರ್ನಾಟಕದ ಪರಿಸರದ ಅಧ್ಯಾತ್ಮದ ಸಾರವನ್ನು ಅಧ್ಯಯನದ ಮೂಲಕ ದೊಡ್ಡದಾಗಿಯೇ ಮೈಗೂಡಿಸಿಕೊಂಡಿದ್ದವರು. ಉಪನಿಷತ್ತಿನ ಪರಂಪರೆಯ ಹಾಗೆ ವಚನಕಾರರು, ದಾಸರು, ತತ್ವಪದಕಾರರು ಎಲ್ಲರೂ ಪ್ರಭಾವ ಬೀರಿದ್ದರು ಅವರ ಮೇಲೆ. ಜಿಡ್ಡು ಕೃಷ್ಣಮೂರ್ತಿಯವರವರೆಗೂ ಈ ವಿಸ್ತಾರ. ಅರವಿಂದರ ಪ್ರಭಾವ ಮಾತ್ರ ಮುನ್ನೆಲೆಯಲ್ಲಿ ನಿಂತು ಅವರನ್ನು ನಡೆಸಿತು. ಅದೇ ಅವರ ಸಖ್ಯದಲ್ಲಿದ್ದ ಮಧುರಚೆನ್ನರು ಅಧ್ಯಾತ್ಮದ ಸಾಧನೆಯಲ್ಲಿಯೇ ಜೀವಿತದ ಬಹುಭಾಗವನ್ನು ಕಳೆದವರು.

ವಿನಾಯಕ ಕೃಷ್ಣ ಗೋಕಾಕರ ಅಧ್ಯಾತ್ಮಿಕ ನಿಲುವುಗಳನ್ನು ಅಭ್ಯಾಸದ ದೃಷ್ಟಿಯಿಂದ ಮೂರು ಬಗೆಯಲ್ಲಿ ವಿಂಗಡಿಸಿಕೊಳ್ಳಬಹುದು. ಬಾಲ್ಯದಲ್ಲಿ, ಸವಣೂರಿನ ತಮ್ಮ ಸುತ್ತಲಿನ ಪರಿಸರದಲ್ಲಿ ಅವರು ಸಹಜವಾಗಿಯೇ ಅನುಸರಿಸಿದುದು ಮೊದಲನೆಯದು, ಎರಡನೆಯದು ಅವರ ಕಾವ್ಯದ ಹಂಬಲವಾಗಿ ಆ ಮೂಲಕವಾಗಿಯೇ ತೋರಿಕೊಂಡ ಆಂತರ್ಯದ ಅಭಿಲಾಷೆ. ಮೂರನೆಯದು ವೈಯಕ್ತಿಕ ಆಚರಣೆಯ ಹೆಜ್ಜೆಗಳದು.

ಸವಣೂರಿನಲ್ಲಿ ಮನೆಯ ವಾತಾವರಣ, ಗ್ರಾಮದ ಸುತ್ತಲಿನ ಪರಿಸರ ಅವರನ್ನು ಸಹಜವಾಗಿಯೇ ಧಾರ್ಮಿಕ ಭಾವದವರನ್ನಾಗಿಸಿತ್ತು. ಅದು ಸಾಮಾನ್ಯವಾಗಿ ನಮ್ಮೆಲ್ಲರ ಬಾಲ್ಯದ ಹಾಗೆಯೇ ಅಂದರೂ ಆದೀತು, ಸವಣೂರಿನ ಸತ್ಯಬೋಧಮಠ, ಊರಿನ ದುರ್ಗಾದೇವಿಯ ಗುಡಿ, ಹಬ್ಬ ಹರಿದಿನಗಳು ಇವೆಲ್ಲ ಅವರನ್ನ ಕೈಮಾಡಿ ಕರೆದಿದ್ದವು. ಬೆಳಗಾವಿಯ ಕಡೆಯ ಸಂತರಾದ ಪಂತ ಮಹಾರಾಜ ಬಾಳೆಕುಂದ್ರಿ ಅವರ ಪ್ರಭಾವವೂ ಅವರ ಅಜ್ಜನ ಕಡೆಯಿಂದ ಆಗಿದ್ದುದಾಗಿಯೂ ತಿಳಿಯುತ್ತದೆ.

ಅವರು ಕಾಲೇಜು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದುದು, ಪುಣೆಗೆ ಹೋದುದು ನಡೆದಾಗ, ಮುಂದೆಲ್ಲ ಅವರ ಕಾವ್ಯ ಪ್ರಕ್ರಿಯೆಯ ಜೀವನ ದೊಡ್ಡದಾಗಿ ತರೆದುಕೊಂಡಂತೆ ಅರವಿಂದರ ವಿಚಾರಧಾರೆಯ ಪ್ರಭಾವ ವಿಶೇಷವಾಗಿಯೇ ಆಯಿತು. ಇದನ್ನೆಲ್ಲ ಅವರ ಕಾವ್ಯದ ಮೂಲಕವೇ ಅರಿತುಕೊಳ್ಳಬೇಕಾಗುತ್ತದೆ. ಅರವಿಂದರ ದರ್ಶನವನ್ನು ಒಂದೇ ಒಂದು ಸಲ (1950 ಎಪ್ರೀಲ್ 24) ಅವರು ಪಡೆದುದು. ಅರವಿಂದರನ್ನು ಅನುಸರಿಸಿಕೊಂಡು ಶ್ರೀಮಾತೆಯ ಪ್ರಭಾವವೂ ಎಲ್ಲರ ಮೇಲೆ ಆಗಿತ್ತು. ಅರವಿಂದರು ಗತಿಸಿದ ನಂತರ ಮಾತೆಯವರೇ ಎಲ್ಲರಿಗೂ ಸ್ಫೂರ್ತಿಯ ಚೇತನವಾಗಿದ್ದರು. ಗೋಕಾಕರ ಮೇಲೂ ಅವರ ಪ್ರಭಾವವಾದದ್ದಿದೆ. ಇದೊಂದು ಬಗೆಯ ಬದುಕಿನುದ್ದಕ್ಕೂ ಹಾಸಿಕೊಂಡ ಪಯಣವಾದರೆ, ತೀರ ವೈಯಕ್ತಿಕ ಬದುಕಿನಲ್ಲಿ ಅವರನ್ನು ಪ್ರಭಾವಗೊಳಿಸಿದ ಕೆಲವರಿದ್ದಾರೆ. ಬಿಯಾಸ್‌ದ ಸರದಾರ ಸವಾನ ಸಿಂಗರ ದರ್ಶನ ಕೂಡ ಅವರ ಮೇಲೆ ಒಳ್ಳೆಯ ಪ್ರಭಾವವನ್ನ ಬೀರಿದುದು ಕಾಣುತ್ತದೆ (ಬಾಳದೇಗುಲ ಸಂಕಲನ ಅವರಿಗೇ ಅರ್ಪಿತವಾಗಿದೆ ಅಂದಮೇಲೆ ಈ ಪ್ರಭಾವ ಎಂಥದು ಎನ್ನುವುದು ತಿಳಿಯುತ್ತದೆ). ಜೆ. ಕೃಷ್ಣಮೂರ್ತಿ ಅವರ ಪ್ರಭಾವವನ್ನೂ ಅವರು ಹೇಳಿಕೊಂಡಿದ್ದಾರೆ. ಪುಟಪರ್ತಿಯ ಸಾಯಿಬಾಬಾ ಅವರ ಪ್ರಭಾವ ಅವರ ಮೇಲೆ ಎದ್ದುಕಾಣುವ ಹಾಗೆ ಸಾಕಷ್ಟು ಆಯಿತು. ಮಾತ್ರವಲ್ಲ ಅಧ್ಯಾತ್ಮದ ಆಚರಣೆಯ ಗುರುವಾಗಿ ಅವರು ಸಾಯಿಬಾಬಾರನ್ನು ಆರಿಸಿಕೊಂಡರು ಎಂದು ಕಾಣುತ್ತದೆ. ಆ ಸಮಯದಲ್ಲಿ ನಾ. ಕಸ್ತೂರಿ ಮೊದಲಾದ ಹಲವರು ಸಾಯಿಬಾಬಾರ ಕಡೆಗೆ ವಾಲಿದ್ದುದು ಇತ್ತು. ಸಾಯಿಬಾಬಾರ ಕುರಿತು ಗುರುವೆಂದೇ ಸಂಬೋಧಿಸುತ್ತ ಅವರು ಕವಿತೆಗಳನ್ನು ರಚಿಸಿದ್ದಾರೆ. ‘ಬಾಳದೇಗುಲ’ದಲ್ಲಿ ‘ಮುಕ್ತ ಜೀವಿಗಳು’ ಎನ್ನುವ ರಚನೆಯಲ್ಲಿ ಪ್ರಾಚೀನ ಅರ್ವಾಚೀನ ಸಂತರನ್ನೆಲ್ಲ ಅವರು ಸ್ಮರಿಸಿರುವುದಿದೆ.

ಹೀಗೆ ವಿನಾಯಕ ಕೃಷ್ಣ ಗೋಕಾಕರ ಅಧ್ಯಾತ್ಮದ ಒಲವು, ಬದುಕಿನುದ್ದದ ಆಲಂಬನವನ್ನ ಗ್ರಹಿಸುವಾಗ ಹಲವೆಲ್ಲ ಮಗ್ಗಲುಗಳನ್ನು ನಾವು ಗುರುತಿಸಬಹುದು.

ಬಾಲ್ಯದಿಂದಲೇ ಅವರು ಒಂದಿಷ್ಟೆಲ್ಲ ವೈಚಾರಿಕವಾಗಿ ತೆರೆದುಕೊಂಡುದು ಕಾಣುತ್ತದೆ. ಅವರು ಮೇಲಿಂದ ಮೇಲೆ ಹೋಗುತ್ತಿದ್ದ ದುರ್ಗಾದೇವಿಯ ಗುಡಿಯಲ್ಲಿನ ಕಲ್ಲು, ಹೊರಗಿನ ಸಾಮಾನ್ಯದ ಕಲ್ಲು ಬೇರೆ ಹೇಗೆ ಎನ್ನುವ ಜಿಜ್ಞಾಸೆ ಅವರನ್ನು ಬಹುವಾಗಿ ಕಾಡಿತ್ತು ಆಗ. ಅವರು ತಮ್ಮೊಳಗೇ ದೇವಿಯನ್ನು ಒಂದು ಶಕ್ತಿಯ ರೂಪವಾಗಿ ಗ್ರಹಿಸಿದುದು, ಗುಡಿಯೊಳಗಿನ ಕಲ್ಲು ಅದನ್ನು ಮೂರ್ತೀಕರಿಸಿಕೊಂಡುದು ಎನ್ನುವ ಸಮಾಧಾನಕ್ಕೆ ಬಂದರು. ಅಂದರೆ ಅವರಲ್ಲಿ ದೈವೀಭಾವ ವೈಚಾರಿಕವಾಗಿ ಪುಟಿಗೊಂಡಿತೇ ವಿನಃ ಸಂಶಯವಾಗಿ ಕಾಡಲಿಲ್ಲ.

ಧಾರವಾಡಕ್ಕೆ ಬಂದು ಬೇಂದ್ರೆಯವರ ಗೆಳೆಯರ ಗುಂಪಿನ ಸಂಪರ್ಕದಲ್ಲಿ ಅವರು ಮತ್ತಷ್ಟು ಅಧ್ಯಾತ್ಮದ ಕಡೆಗೆ ವಾಲಿದರು. 1925ರಿಂದ 1937 (ಅವರು ಹೊರದೇಶಕ್ಕೆ ಅಧ್ಯಯನಕ್ಕಾಗಿ ಹೋದುದು)ರವರೆಗಿನ ಅವಧಿಯಲ್ಲಿ ಅರವಿಂದರು ವಿವೇಕಾನಂದ, ರಾಮತೀರ್ಥರು, ಟ್ಯಾಗೋರ್, ಖಲೀಲ್ ಗಿಬ್ರಾನ್ ಇವರೆಲ್ಲರ ಪ್ರಭಾವಗಳು ಓದಿನ ಮೂಲಕ, ಮಾತುಕತೆ, ಚರ್ಚೆಗಳ ಮೂಲಕ ಅವರ ಮೇಲೆ ಆದುದನ್ನು ಕಾಣಬಹುದು. ಅವರು ‘ಸಂಪೂರ್ಣವಾದ ಸಂಕೀರ್ಣತೆಯೇ ನನ್ನ ಪರಮ ಗಮ್ಯ’ಎಂದು ಹೇಳಿಕೊಂಡಿದ್ದಾರೆ. ಇದು ಅವರ ಕಾವ್ಯ ಜೀವನಕ್ಕೆ ಹೇಗೆ ಅನ್ವಯಿಸುವುದೋ, ಅವರ ವೈಯಕ್ತಿಕ ಅಧ್ಯಾತ್ಮದ ಪಯಣಕ್ಕೂ ಅನ್ವಯಿಸುವುದು.

ಸಾಮಾನ್ಯವಾಗಿ ಸಾಮಾಜಿಕವಾಗಿ ತೆರೆದುಕೊಳ್ಳುವುದು ಹಾಗೂ ಅಧ್ಯಾತ್ಮಿಕವಾಗಿ ಆಂತರ್ಯಕ್ಕಿಳಿಯುವುದು ಎರಡು ವಿಭಿನ್ನ ನೆಲೆಯವು ಎಂದು ಭಾವಿಸುವುದನ್ನು ಕಾಣುತ್ತೇವೆ. ಭೌತಿಕ ದೃಷ್ಟಿಕೋನವನ್ನೇ ಒಟ್ಟು ಸೃಷ್ಟಿಯ ಮೂಲದಲ್ಲಿ ನೋಡುವವರಿಗೆ ಇದು ಕಾಣಬಹುದು. ಆದರೆ ಆಂತರ್ಯದ ಸತ್ಯವನ್ನು ನೆಚ್ಚಿಕೊಂಡವರು ಈ ಹೊರಗನ್ನೂ ಒಳಗನ್ನೂ ಸಮನ್ವಯಿಸಿಕೊಂಡು ಹೋಗುವ ದಾರಿ ಕಂಡುಕೊಳ್ಳುತ್ತಾರೆ. ಕಾರ್ಲಮಾರ್ಕ್ಸ್ನಿಗೂ ಬಸವಣ್ಣನವರಿಗೂ ಇರುವ ದೊಡ್ಡ ಅಂತರವೇ ಇದು. ಗೋಕಾಕರು 1936-1940ರ ಅವಧಿಯಲ್ಲಿ ತಮ್ಮ ಕಾವ್ಯ ಪ್ರಕ್ರಿಯೆಯಲ್ಲಿ ಕ್ರಾಂತಿಯ ಕಾಲ ಎಂದು ಕರೆದುಕೊಂಡಿದ್ದಾರೆ. ಅಗ ಸಾಮಾಜಿಕ ಜೀವನ ಮೌಲ್ಯಗಳು ಅವರನ್ನು ಬಹುವಾಗಿ ಕಾಡಿದುದು ಕಾಣುತ್ತದೆ. ಇದನ್ನು ಅವರು ಬದುಕಿನ ತೃತೀಯ ಹಂತ ಎಂದೇ ಕರೆದುಕೊಂಡಿದ್ದಾರೆ. ನಾಲ್ಕು ವರ್ಷಗಳ ಈ ಅವಧಿಯಲ್ಲಿ ಅವರಮೇಲೆ ಮಾರ್ಕ್ಸ್ನ ಪ್ರಭಾವ ಸಾಕಷ್ಟಾದುದು ಇದೆ. ಆದರೆ ಅವರು ಮತ್ತೆ ಮತ್ತೆ ಪೂರ್ಣತ್ವದ ಕಡೆಗೆ ವಾಲುತ್ತಲೇ ಇದ್ದರು, ಅದು ಅವರೊಳಗಿನ ಯಾವತ್ತೂ ಬಚ್ಚಿಟ್ಟುಕೊಂಡ ತೀರದ ಅಭಿಲಾಷೆಯೇ. ಅರವಿಂದರ ‘ಲೈಫ್ ಡಿವೈನ್’ ಬರಹಗಳು, ಈ ಮೊದಲು ‘ಆರ್ಯಾ’ ಪತ್ರಿಕೆಯಲ್ಲಿ ಬರುತ್ತಿದ್ದಂಥವು ಇಡೀ ಪುಸ್ತಕವಾಗಿ ಬಂದವು. ಅವು ಅವರನ್ನು ಹೆಚ್ಚು ಹೆಚ್ಚು ಪೂರ್ಣ ದೃಷ್ಟಿಗೆ ಒಡ್ಡಿದವು. ವ್ಯಕ್ತಿ ವಿಕಾಸ ಹಾಗೂ ಸಮಷ್ಟಿ ಪ್ರಜ್ಞೆಗಳು ಒಂದೇ ದಿವ್ಯ ವ್ಯಕ್ತಿತ್ವದ ಅಂಶಗಳಾಗುವುದು ಅನಿವಾರ್ಯ ಎನ್ನುವುದು ಎಷ್ಟು ಸುಸಂಬದ್ದವಾದ ವಿಚಾರ ಎನ್ನುವುದು ಅವರಿಗೆ ಅರಿವಾಯಿತು. ಆ ಸಮಯದಲ್ಲಿ ಬಂದ ಅವರ ‘ಬಾಳ ದೇಗುಲ’ ಸಂಕಲನದಲ್ಲಿನ ಕವಿತೆಗಳು ಈ ಸಮತ್ವದ ದೃಷ್ಟಿಯನ್ನೇ ಹೊಂದಿ ರೂಪುಗೊಂಡವು. ‘ಕಲಾಕೃತಿಯು ಮಹೋನ್ನತವಾಗಬೇಕಾದರೆ ಕಲೋಪಾಸಕನ ಜೀವನದಲ್ಲಿಯೂ ಮಹೋನ್ನತಿಯು ಬೇಕು’ ಎನ್ನುವುದೇ ಅವರ ಒಟ್ಟಾರೆಯ ಒಪ್ಪಿತ ಗ್ರಹಿಕೆ. ಅವರ ‘ಸಾಹಿತ್ಯದಲ್ಲಿ ಪ್ರಗತಿ’ ಕೃತಿಯಲ್ಲಿ ‘ಹಳತು ಹೊಸತನ್ನೂ ಮೂಡಣ-ಪಡುವಣದ ದರ್ಶನಗಳನ್ನೂ ಬೆರೆಸಿ ಮಾತ್ರ ನವೀನ ಸಂಸ್ಕೃತಿಯೊಂದನ್ನು ನಾವು ಕಟ್ಟುವುದು ಸಾಧ್ಯವಿದೆ’ ಎನ್ನುವ ಮಾತಿದೆ. ಹಾಗಿದ್ದಾಗಲೂ, ಅವರು ಎಲ್ಲ ಬಗೆಯ ವೈಚಾರಿಕತೆಯನ್ನು ಸೂಕ್ಷö್ಮವಾಗಿ ನೋಡಲು ಬಯಸಿದಾಗಲೂ, ಸಾಮಜಿಕ ಚಿಂತನೆಯಲ್ಲಿ ಅನೇಕ ಹೊಸಗಾಲದ ವೈಚಾರಿಕತೆಯನ್ನು ಪಕ್ಕದಲ್ಲಿಟ್ಟುಕೊಂಡರೂ, ಭಾರತೀಯ ಅಧ್ಯಾತ್ಮದ ತುಡಿತ ಅವರಲ್ಲಿ ಸದಾ ಜೀವಂತವಾಗಿಯೇ ಉಳಿಯುತ್ತ ಬಂದುದನ್ನ ಹೇಳಬೇಕು. ಅದನ್ನುಳಿದು ಬದುಕಿನ, ಅದು ಸೃಜನಶೀಲತೆಯ ಅನಾವರಣವನ್ನು ಅವರು ಯಾವತ್ತೂ ಭಾವಿಸಿಕೊಳ್ಳಲಾರರು ಎಂದೇ ಹೇಳಬೇಕು.

‘ಏಳು ಕುದುರೆಗಳ ಸವಾರ’
‘ನನ್ನಿರವು ಬೇರೆ ದ್ವೀತೀಯ ಮಾರ್ಗವು ನನಗೆ,
ದಶದಿಶೆಯನಳೆಯ ಬಯಸುವೆನು ಭಾಸ್ಕರನಂತೆ,
ನಾದ-ಬಿಂದುಗಳ ಬಾಜಾರ ಹಿರಿ ಹಿಗ್ಗೆನಗೆ
ನೂರು ವರ್ಣವೈಖರಿ ಜ್ಯೋತಿಯಾಗಿ ಪಲ್ಲವಿಸುವ
ವೃಕ್ಷದೆದುರು ಕೈಜೋಡಿಸಿ ನಿಲುವೆ ಧ್ಯಾನಿಯಂತೆ’
ಎಂದು ಅವರು ಆಯ್ಕೆ ಮಾಡಿಕೊಂಡುದು ದ್ವಿತೀಯ ಮಾರ್ಗ, ಅಂದರೆ ಲೌಕಿಕದೊಳಗಿಂದ ಹಾಯುತ್ತಲೇ, ಅಧ್ಯಾತ್ಮವನ್ನು ಸಾಧಿಸಿಕೊಳ್ಳುವುದು. ಸನ್ಯಾಸಕ್ಕೆ ಚಾಚುವ ಕೇವಲ ಅಧ್ಯಾತ್ಮವಲ್ಲ. ಅರುಣ-ಸಾರಥಿಯ ಉದಾಹರಣೆ ಇಲ್ಲಿದೆ.

ಅರವಿಂದರು ಅಧ್ಯಾತ್ಮ ಜೀವಿ ಹೇಗೋ, ಸೃಜನಶೀಲ ಬರಹಗಾರರೂ ಹಾಗೇ, ಕಾವ್ಯವೂ ಅವರಲ್ಲಿ ಸಹಜವಾಗಿಯೇ ಹರಿಯುತ್ತಿತ್ತು. ಸಾವಿತ್ರಿಯಂಥ ಅಪರೂಪದ ಮಹಾಕಾವ್ಯವನ್ನು ಅವರು ಬರೆದುದು ಕೇವಲ ಸಾಹಿತಿಯಾಗಿ ಅಲ್ಲ. ಅದು ಅವರ ಅಧ್ಯಾತ್ಮಿಕ ಚಿಂತನೆಯ ಇನ್ನೊಂದು ಮುಖವೇ. ಗೊಕಾಕರು ತಮ್ಮ ಸೃಜನಶೀಲ ಬರವಣಿಗೆಯ ಮೂಲ ಶ್ರೋತವನ್ನು ಅರವಿಂದರ ಪ್ರಭಾವದಲ್ಲಿಯೇ ರೂಪಿಸಿಕೊಂಡರು.

ಅರವಿಂದರ ವಿಚಾರಧಾರೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡ ಅವರು ‘ಸತ್ಯ, ಸೌಂದರ್ಯ, ಆನಂದ, ಬಾಳ್ ಹಾಗೂ ಆತ್ಮ ಚೈತನ್ಯಗಳ ಪೂರ್ಣತಮ ಸಮನ್ವಯದಲ್ಲಿಯೇ ಕಲೆಯ ಪೂರ್ಣತೆಯಿದೆ’ ಎಂದು ನಿರ್ಧಾರಿತವಾಗಿ ಹೇಳಿಬಿಟ್ಟಿದ್ದಾರೆ. ಇದು ಅವರ ಒಟ್ಟು ಸೃಜನಶೀಲತೆಯ ಹಿಂದಿನ ಪೂರ್ಣ ದೃಷ್ಟಿ. ಇಲ್ಲಿ ಅಧ್ಯಾತ್ಮ ಅವಿನಾಭಾವವಾಗಿ ಹೊಂದಿಕೊಂಡುಬಿಟ್ಟಿದೆ. ನೀವು ಸಾಮಾಜಿಕವಾಗಿ ಎಷ್ಟೇ ಹೊರಮುಖವಾಗಿರಿ, ಆದರೆ ಆಂತರ್ಯದ ಸ್ಪಷ್ಟ ಅರಿವಿಲ್ಲದಿದ್ದರೆ ಪೂರ್ಣತ್ವವು ಸಮನಿಸಲಾರದು ಎನ್ನುವುದೇ ಈ ನಿಲುವು.

ಅವರ ‘ತ್ರಿಶಂಕುವಿನ ಪ್ರಜ್ಞಾ ಪ್ರಭಾತ’ ಎನ್ನುವ ದೀರ್ಘ ಕಾವ್ಯ ತ್ರಿಶಂಕು ಸ್ವರ್ಗಕ್ಕೆ ಹೋಗಬೇಕೆಂದು ಹೊರಟುವನು ಮಧ್ಯದಲ್ಲಿಯೇ ಸಿಲುಕುವುದು, (ಸ್ಮೃತಿ, ಬುದ್ಧಿ, ಕಲ್ಪನೆ) ಹೀಗೆ ಮೂರು ಹಂತಗಳನ್ನ ಕ್ರಮಿಸುತ್ತಾನೆ, ಕೊನೆಗೂ ಅವನು ಅರಿತುಕೊಂಡುದು ಆಂತರ್ಯದ ಅರಳುವಿಕೆಯೇ ಪೂರ್ಣತ್ವವನ್ನು ತಂದುಕೊಂಡುತ್ತದೆ, ಇದಾವುದೂ ಅಲ್ಲ ಎನ್ನುವ ನಿರ್ಧಾರವನ್ನು. ಅವರ ‘ಭಾರತ ಸೀಂಧು ರಷ್ಮಿ’ ಮಹಾಕಾವ್ಯದಲ್ಲಿಯೂ ಅವರು ವಿಭಿನ್ನ ಸಂಸ್ಕೃತಿಗಳ ಸಮ್ಮಿಲನ, ಸಹಬಾಳ್ವೆ ಇವುಗಳೇ ಬಹುಮುಖ್ಯದವುಗಳು, ಆರ್ಯ ದ್ರಾವಿಡ ಎನ್ನುವ ವಿಭಿನ್ನತೆಗಳು ನಮ್ಮಲ್ಲಿ ಕೂಡಿ ಒಂದಾಗಬೇಕು ಎಂದೇ ತೋರಿಸಿದರು.

intuition ಎನ್ನುವುದು ಒಟ್ಟು ಪ್ರಜ್ಞೆಯ ಅತ್ಯುನ್ನತ ಹಂತ. ಅಲ್ಲಿಂದ ಸ್ಫುರಣಗೊಳ್ಳುವುದು ‘ಅಂತಃಸ್ಪುರಣ’, ಅದು ಯಾವ ವ್ಯಕ್ತಿ-ವಸ್ತು-ಸನ್ನಿವೇಶವನ್ನಾಗಲಿ ಭೇದಿಸಿಕೊಂಡು ಬರಬಲ್ಲದು. ಹೀಗಾದಾಗಲೇ ಒಂದು ಸೃಜನಾತ್ಮಕ ಸೃಷ್ಟಿಗೆ ಪೂರ್ಣತ್ವ ಬರುತ್ತದೆ, ಇದು ಆಗಬೇಕು ಎಂದೇ ಅವರು ಭಾವಿಸಿಕೊಂಡಿದ್ದರು.

ಮರ್ತ್ಯ ಮನಸ್ಸು ಏನೇ ಭಾವಿಸಿಕೊಂಡರೂ ಅದು ಕಲುಷಿತವಾಗಿರುವ ಸಾಧ್ಯತೆ ಇದೆ. ಕೇವಲ ಬುದ್ಧಿಯನ್ನು ಈ ಬಗೆಯ ವೈಚಾರಿಕತೆ ಆಶ್ರಯಿಸುವುದಿಲ್ಲ. ‘ಸ್ವತಃ ಬುದ್ಧಿಯೇ ತನ್ನ ನಿರ್ಣಯಗಳಿಗಾಗಿ ಒಂದು ತರಹದ ಅಪ್ರಕಾಶಿತ ಸ್ತರದ ಮೇಲೆಯೇ ಅವಲಂಬಿಸಿರುತ್ತದೆ. ಅದರ ಸಹಾಯವಿಲ್ಲದೆ ಬುದ್ಧಿಯು ಅನೇಕ ಶಕ್ಯತೆಗಳೊಳಗಿಂದ ತನ್ನ ಆಯ್ಕೆಯನ್ನು ಮಾಡುವುದು ಸಾಧ್ಯವಿಲ್ಲ’ ಎಂದೇ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದು ನಮ್ಮೆಲ್ಲ ಅನುಭಾವಿಗಳು ಹೇಳುತ್ತಾ ಬಂದ ಮಾತೇ ಆಗಿದೆ. ‘ದೇವಲೀಲೆಯೊ ಕಾಣೆ, ರ‍್ಮಜಾಲವೊ ಕಾಣೆ, ಅದು ಬುದ್ಧಿಯಾಚೆಗಿನ ಮಾತು’ ಎಂದು ಮಧುರ ಚೆನ್ನರು ಹೇಳಿದುದಿದೆಯಲ್ಲ.

‘ಘನಮನ’ ಹಾಗೂ ಶ್ರೀಮನ’ ಎಂದು ಉಚ್ಚತಮವಾದ ಎರಡು ಹಂತಗಳನ್ನು ಅವರು ಹೇಳುತ್ತಾರೆ. ಘನಮನದಲ್ಲಿ ವಿಶ್ವಾತ್ಮಕವಾದ ಸಮಷ್ಟಿ ದೃಷ್ಟಿಕೋನ ಉಂಟಾಗಬಲ್ಲದು, ಅದು ಆರೋಗ್ಯಪುರ್ಣವಾದುದಾಗಿರುತ್ತದೆ. ಅದೇ ಶ್ರೀಮನ ಎನ್ನುವುದು ಸಂಪೂರ್ಣ ದೈವೀ ಸಂಗತಿಯೇ. ಬೇಂದ್ರೆಯವರು ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಕವಿತೆಯಲ್ಲಿ ಓಂಕಾರದ ನಾದಕಿಂತ ಕಿಂಚಿತ್ ಊನ ಎಂದಿರುವುದಿದೆ. ಅದು ಸಾಹಿತ್ಯಿಕ ಸೃಜನಾತ್ಮಕತೆ ಆತ್ಯಂತಿಕ ಸತ್ಯದ ಕೆಳಹಂತ ಎನ್ನುವುದನ್ನೇ ಹೇಳುತ್ತದೆ.

ಪ್ರಜ್ಞೆ ಹಾಗೂ ಮನಗಳ ಕುರಿತು ಮಾತನಡುತ್ತ ಗೋಕಾಕರು ಅಂತಃಪ್ರಜ್ಞೆ, ಚೈತನ್ಯ ಪ್ರಜ್ಞೆ, ಉಚ್ಚತಮ ಮನ, ಪ್ರಕಾಶಿತ ಪ್ರಜ್ಞೆ, ಅಂತಃಸ್ಪುರಣ, ಘನಮನಬುದ್ಧಿ, ಶ್ರೀಮನ ಹೀಗೆ ವಿಂಗಡಿಸಿ ನಿರೂಪಿಸುವುದು ಅರವಿಂದರ ನೆರಳಿನಲ್ಲಿಯೇ. ‘... ಎಲ್ಲ ಮಾದರಿಯ ಶೈಲಿಗಳಲ್ಲಿಯೂ ಪ್ರತಿಭಾವಂತನಿಗೆ ಕಾವ್ಯವನ್ನು ಬರೆಯುವುದು ಸಾಧ್ಯ. ಆದರೆ ಅಂತರ್ವಾಣಿ ಇತ್ತ ಶೈಲಿಯೇ ಹೆಚ್ಚು ಪ್ರಕಾಶಮಾನವಾದುದು, ಆಕರ್ಷಕವಾದುದು. ಸರ್ವಸಾಮಾನ್ಯ ವಿಚಾರಗಳನ್ನು ವಸ್ತುಗಳನ್ನು ಸಹ ಒಂದು ಆಳವಾದ ಕಾಣ್ಕೆಯ ಬೆಳಕಿನಲ್ಲಿ ಹಾಗೂ ಭಾವನೆಯ ಸಮಾಧಿಯಲ್ಲಿ ಅದು ತೋರಿಸಬಲ್ಲದು. ತನ್ನ ಉಚ್ಚತಮಗತಿಯಲ್ಲಿ ಸಾಮಾನ್ಯ ಬುದ್ಧಿಗೆ ಗ್ರಹಿಸಲು ಕಠಿಣವಾದ ವಿಚಾರಗಳನ್ನು ದರ್ಶನಗಳನ್ನೂ ಆ ಶೈಲಿ ತೋರಿಸಬಲ್ಲದು. ಎಲ್ಲ ಶ್ರೇಷ್ಠತಮ ಕವಿಗಳಲ್ಲಿ ಈ ಆಂತರಿಕ ಹಾಗೂ ಸ್ಫೂರ್ತಿದತ್ತ ಭಾಷೆಯ ಉಚ್ಚತಮ ಉತ್ಕಟತೆಯ ರಸನಿಮಿಷಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ.’ ಎಂದು ಈ ಬಗೆಯ ವಿಚಾರ ಸರಣಿಯನ್ನು ಅವರು ಸ್ಪಷ್ಟಗೊಳಿಸಿದ್ದಾರೆ ಮತ್ತೆ ಮತ್ತೆ. ‘ಆಳ ಹಾಗೂ ವಿಸ್ತಾರವಿದ್ದ ಉತ್ತಮ ತತ್ವಜ್ಞಾನಿಯಾಗದೆ ಯಾವನೂ ಮಹೋನ್ನತ ಕವಿಯಾಗಲಾರ’ ಎನ್ನುವ ಕೋಲ್‌ರಿಜ್‌ನ ಮಾತನ್ನು ಅವರು ಉದಾಹರಿಸಿರುವುದಿದೆ.

ಅರವಿಂದರ ದರ್ಶನವನ್ನು ಅವರು ಮೈಗೂಡಿಸಿಕೊಂಡಿದ್ದರೂ, ತಮ್ಮ ಹಾಗೂ ಅರವಿಂದರ ನಡುವಿನ ವಿಭಿನ್ನತೆಯನ್ನೂ ಹೇಳದೆ ಹೋಗುವುದಿಲ್ಲ. ‘... ಎಲ್ಲ ಕಲೋಪಾಸಕರೂ ಒಪ್ಪುವ ಸ್ಫೂರ್ತಿಯ ಅನುಭವವನ್ನು ಇಲ್ಲವೆ ಸ್ಫುರಣವನ್ನು ಮೌಲ್ಯವೆಂದು ತಿಳಿದಿದ್ದೇನೆ. ಆದರೆ ಶ್ರೀ ಅರವಿಂದರ ಕಾಣ್ಕೆ ಬಹಳ ವಿಸ್ತಾರವಾಗಿದೆ. ಅವರ ಅನುಭವ ಅದ್ವೈತ, ಕ್ರಿಸ್ತೀ ಧರ್ಮ, ಬೌದ್ಧ ಧರ್ಮಗಳಂತೆ ತನ್ನದೇ ಆದ ಒಂದು ತತ್ವಮಾಲೆಯನ್ನು ಹೆಣೆದುಕೊಂಡಿದೆ. ಇದು ಬಹಳ ಆಧುನಿಕವಾದುದು ಹಾಗೂ ಸಮನ್ವಯಪೂರ್ಣವೂ ಆಗಿದೆ. ಆದರೆ ಯಾವುದೇ ಒಂದು ತತ್ವದ ಬೆಳಕಿಂಡಿಯಿಂದ ಕಂಡ ಸೌಂದರ್ಯ ದರ್ಶನಗಳಲ್ಲಿ ಅದೂ ಒಂದಾಗುತ್ತದೆ. ಅರವಿಂದೇತರ ದರ್ಶನಪ್ರೇಮಿಗಳಿಗೆ ಅದು ಒಪ್ಪಿಗೆಯಾಗಲಿಕ್ಕಿಲ್ಲ. ಅಂತೆಯೇ ಕಲಾಸಿದ್ಧಾಂತವನ್ನು ರೂಪಿಸುವ ಪೂರ್ವದಲ್ಲಿ ಎರಡು ತತ್ವಗಳನ್ನು ನನಗಾಗಿ ಅಣಿಗೊಳಿಸಿಕೊಂಡಿದ್ದೇನೆ’ ಎನ್ನುತ್ತ ಅರವಿಂದರ ಹಾಗೆ ಸಮನ್ವಯ ಮಾರ್ಗವನ್ನು ತಾವು ತುಳಿದುದು, ಆದರೆ ಅರವಿಂದರ ತತ್ವದೃಷ್ಟಿಯಿಂದ ಈ ಸಮನ್ವಯ ದೃಷ್ಟಿಯನ್ನು ತಾನು ವಿಂಗಡಿಸಿಕೊಂಡಿದ್ದೇನೆ ಎನ್ನುತ್ತಾರೆ.

‘ಗೋಕಾಕರಿಂದ ವಿನಾಯಕರ ಸಂದರ್ಶನ’ ಎನ್ನುವ ಅವರದೇ ಒಂದು ಅಪರೂಪದ ಲೇಖನದಲ್ಲಿ ಗೋಕಾಕರೊಳಗಿನ ವಿನಾಯಕರ ಕುರಿತಾಗಿ ಹೇಳಿಕೊಳ್ಳುವ ಮಾತು ಗಮನಿಸಿ: ‘ವಿನಾಯಕರು ಕಾಲದ ಪರಿಮಿತಿಯನ್ನು ಮೀರಿ ನಿಂತಿದ್ದಾರೆ. ಸೂರ್ಯೋದಯದಂತೆ ಅವರ ಉದಯವಾಯಿತು. ನನ್ನ ದಿನರಾತ್ರಿಗಳು ಅವರವಲ್ಲ. ನನ್ನ ಮೂವತ್ತು ವರುಷ ಅವರಿಗೆ ಒಂದು ದಿನವಾದರೆ ಅನುಭವಪೂರ್ಣವಾದ ಒಂದು ದಿನ ಅವರಿಗೆ ಮೂವತ್ತು ವರುಷವಾಗಬಲ್ಲುದು. ಅವರ ಕಾಲದ ಮಾನದಂಡವೇ ಬೇರೆ. ಅನಂತತೆಯ ದೃಷ್ಟಿಯಿಂದ ಅವರು ಕಾಲವನ್ನು ಅಳೆಯುತ್ತಾರೆ. ಶಿಲಾಖಂಡವಾದ ನನ್ನಲ್ಲಿ ಒಡಮೂಡಿ ದಿನದಿನಕ್ಕು ತನ್ನನ್ನು ಕಂಡರಿಸಿಕೊಳ್ಳುತ್ತಿರುವ ಈ ವಿನಾಯಕ ಮೂರ್ತಿಯನ್ನು ನೋಡಿ ನನಗೇ ಕುತೂಹಲವಾಗುತ್ತದೆ. ನನ್ನಂತಹ ಎಷ್ಟು ದೇಹಗಳನ್ನು ಇವರು ತೊಡುವವರಿದ್ದಾರೊ ಕಾಣೆ. ಆದರೆ ಅವರ ಸನ್ನಿಧಿ ನನಗೆ ಪವಿತ್ರವಾಗಿದೆ.’ ಅವರ ಈ ಮಾತುಗಳಲ್ಲಿ ಸಂಪೂರ್ಣ ದೈವೀ ಸಂಗತಿಯೇ ಆವಿರ್ಭವಿಸಿದುದನ್ನು ಭಾವಿಸಿಕೊಂಡಂತಿದೆ. ಕಲೋಪಾಸನೆಯನ್ನು ಅವರು ಒಟ್ಟಾರೆಯ ಬದುಕಿನ ಉನ್ನತ ದೃಷ್ಟಿಕೋನದಲ್ಲಿ ಸಮನ್ವಯಿಸಿಕೊಂಡೇ ನೋಡಲು ಬಯಸಿರುವುದು ಕಾಣುತ್ತದೆ ಎನ್ನುವ ಮಾತನ್ನು ಮತ್ತೆ ಮತ್ತೆ ಹೇಳಬೇಕಾಗುತ್ತದೆ.

- ಆನಂದ ಪಾಟೀಲ

MORE FEATURES

‘ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ’

12-05-2024 ಬೆಂಗಳೂರು

ಜಾಗತಿಕ ಸಂಸ್ಕೃತಿಗೆ ಘನತೆಯನ್ನು ತಂದು ಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮಹಾಪುರುಷರು; ಮತ್ತ...

ಈ ಕೃತಿಯಲ್ಲಿ ಹಲವು ದೇಶಗಳ ಅತಿಸಣ್ಣ ಕತೆಗಳಿವೆ: ಎಸ್ ದಿವಾಕರ್

12-05-2024 ಬೆಂಗಳೂರು

‘ನಾನು ನನಗೆ ಇಷ್ಟವಾದ ಜಗತ್ತಿನ ಬೇರೆ ಬೇರೆ ದೇಶಗಳ ಅತಿಸಣ್ಣ ಕತೆಗಳನ್ನು ಸತತವಾಗಿ ಅನುವಾದಿಸುತ್ತಿರುವುದಕ್ಕೆ ಕಾ...

ವಾರದ ಲೇಖಕ ವಿಶೇಷದಲ್ಲಿ ಕವಿ, ಜನಪದ ಕಾವ್ಯ ಸಂಗ್ರಾಹಕ ಶಿವೇಶ್ವರ ದೊಡ್ಡಮನಿ 

12-05-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಜನಪದ ಕಾವ್ಯ ಸಂಗ್ರಾಹಕ, ಚಳುವಳಿಗಾರ ಶಿವೇಶ್ವರ ದೊಡ್ಡಮನಿ...