ಹವ್ಯಕ ಸಮಾಜದ ಸಮಾಜೊ-ಸಾಂಸ್ಕೃತಿಕ ಪಠ್ಯವಾಗಿ ಮಹತ್ವ ಪಡೆದಿರುವ ಕೃತಿ 'ಬಯಲ ಬೆಟ್ಟ'


‘ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ಶ್ರದ್ಧೆ, ಪ್ರಾಮಾಣಿಕತೆ ಇವೆಲ್ಲವೂ ಬೇಕು’ ಎನ್ನುತ್ತಾರೆ ಉದಯಕುಮಾರ್ ಹಬ್ಬು. ಅವರು ನಾ. ಮೊಗಸಾಲೆಯವರ ‘ಬಯಲ ಬೆಟ್ಟ’ ಕೃತಿಯ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಮೊಗಸಾಲೆಯವರ ಶ್ರೇಷ್ಠ ನೂತನ ಕೃತಿ ಯಾವುದು‌ ಎಂದು ಕೇಳಿದರೆ ನಾನು ಅವರ ಈ "ಬಯಲ ಬೆಟ್ಟ" ಎನ್ನುತ್ತೇನೆ. ಇದು ಅವರ ಆತ್ಮಚರಿತ್ರೆ ಎಂದಷ್ಟೆ ಮಹತ್ವದ್ದಲ್ಲ, ಆದರೆ ಹವ್ಯಕ ಸಮಾಜದ ಸಮಾಜೊ-ಸಾಂಸ್ಕೃತಿಕ ಪಠ್ಯವಾಗಿ, 1950-1970-90ರ ಅವಿಭಜಿತ ದಕ್ಷಿಣ ಕನ್ನಡದ ಸಮಾಜೊ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪಠ್ಯವಾಗಿಯೂ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹವ್ಯಕರು ಸಾಮಾನ್ಯವಾಗಿ ಕೃಷಿ ಅದರಲ್ಲೂ ಅಡಿಕೆ‌ ಕೃಷಿಯನ್ನು ಅವಲಂಬಿಸಿ ಬದುಕುವವರು. ಮತ್ತು ಪ್ರಗತಿಶೀಲತೆ ಔದಾರ್ಯ ಮತ್ತು ಅತಿಥಿ ಸತ್ಕಾರ ಅವರ ರಕ್ತದಲ್ಲಿಯೆ ಹರಿದು ಬಂದ ಸಂಸ್ಕಾರಯುಕ್ತ ಸಮಾಜ. ತೀರಾ ಬಡತನ ಬಹುಶಃ ಹವ್ಯಕ ಕುಟುಂಬಗಳನ್ನು ಕಾಡಿದ್ದು ಕಡಿಮೆ. ಮೊಗಸಾಲೆ ಮನೆತನ ಒಂದೊಮ್ಮೆ ಶ್ರೀಮಂತ ಮನೆತನವೆ. ಮತ್ತೆ ಈ ಗ್ರಂಥವನ್ನು ಹೇಗೆ ಓದಬಹುದು ಎಂಬುದರ ಬಗ್ಗೆ ಮೊಗಸಾಲೆ ಅವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದು ಹೀಗೆ:

"ಇದನ್ನು ಆತ್ಮ ಚರಿತ್ರೆ ಎನ್ನದೆ ವೃತ್ತಾಂತ ಎಂಬ ಉಪಶೀರ್ಷಿಕೆ ಇದೆ. ನಾನು ಈ ಕೃತಿಯನ್ನು ಅತ್ಮಕಥೆಯೆಂದೇ ಬರೆಯಲು ಪ್ರಾರಂಭಿಸಿದೆ. ಆದರೆ ಬರೆಯುತ್ತ ಹೋದ ಹಾಗೆ ಈ ಕೃತಿ ಕಾದಂಬರಿಯ ಹಾಗೆಯೋ ಅಥವಾ ಕನ್ನಡದಲ್ಲಿ ಈತನಕ ಇಲ್ಲದ ಒಂದು ಹೊಸ ಸಾಹಿತ್ಯ ಪ್ರಕಾರವಾಗಿಯೋ ರೂಪ ಪಡೆಯುತ್ತಿದೆ ಅನಿಸತೊಡಗಿತು. ಹಾಗಾಗಿ ಇದಕ್ಕೆ ವೃತ್ತಾಂತ ಎಂದು‌ ಕರೆದೆ. ನೀವು ಇದನ್ನು ಆತ್ಮಕಥೆಯಾಗಿಯೂ ಓದಬಹುದು; ಕಾದಂಬರಿಯಾಗಿಯೂ ಅನುಭವಿಸಬಹುದು! ಅಥವಾ ವೃತ್ತಾಂತವಾಗಿ ಕೂಡ! ಆತ್ಮಕಥೆಯಲ್ಲಿ ಯಾರು ಅದನ್ನು ಬರೆಯುತ್ತಾನೋ ಅವನೇ ಮುಖ್ಯ.

ಆದರೆ ನನ್ನ ಜೀವನದಲ್ಲಿ ನಾನು ನನಗೆ ಮುಖ್ಯನಾದಷ್ಟೇ ಇನ್ನೊಬ್ಬರೂ ನನ್ನ‌ ಬದುಕಿಗೆ ಮುಖ್ಯರಾಗಿ ಬಂದಿದ್ದಾರೆ. ಅದು ನನ್ನ‌ ತಂದೆ-ತಾಯಿ ಇರಬಹುದು. ಕಲಿಸಿದ ಗುರುಗಳಾಗಿರಬಹುದು. ಕೈ ಹಿಡಿದ ಪತ್ನಿಯಾಗಿರಬಹುದು. ಅಥವಾ ಸ್ನೇಹಿತರೋ ಬಂಧು ವರ್ಗದವರೋ ಇಲ್ಲವೆ ನಾವು ಸಾಮಾನ್ಯನೆಂದುಕೊಂಡ ಒಬ್ಬ ಶ್ರೀ ಸಾಮಾನ್ಯನೂ ಕೂಡ! 'ನೀನಿಲ್ಲದೆ ನಾನಿಲ್ಲ" ಎಂಬುದನ್ನು ಒಪ್ಪಿಕೊಂಡ ಬದುಕು ನನ್ನದು. ಈ ಕಾರಣದಿಂದ ನನ್ನ ವೃತ್ತಾಂತದ ಜೊತೆಗೆ ಇಲ್ಲಿ ಅನೇಕರ ವೃತ್ತಾಂತಗಳೂ ಅನಾವರಣಗೊಳ್ಳುತ್ತವೆ. ಇನ್ನೊಬ್ಬರಿಂದ ನಾನು ಏನು ಪಡಕೊಂಡೆ, ನನ್ನೆದುರಿಗೇ ನಾನು‌ ಹೇಗೆ ಬದಲಾಗುತ್ತ ಹೋದೆ, ನನ್ನ ಕಣ್ಣ ಮುಂದಿನ ಲೋಕ ಹೇಗೆ ಬದಲಾಗುತ್ತ ಹೋಗುತ್ತಿದೆ ಎಂಬುದನ್ನೆಲ್ಲ ನಾನು ಮತ್ತೆ ಕುಳಿತು ನೋಡುವ ಅವಕಾಶವನ್ನು ಈ ಕೃತಿ ನನಗೆ ಕೊಟ್ಟಿದೆ‌"

ಇದು ಕೃತಿಕಾರ ತನ್ನ ಕೃತಿಯ ಕುರಿತಾಗಿ ಹೇಳುವ ಮಾತು; ಮೊಗಸಾಲೆ ಒಬ್ಬ ಕನಸುಗಾರ; ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ಶ್ರದ್ಧೆ, ಪ್ರಾಮಾಣಿಕತೆ ಇವೆಲ್ಲವೂ ಬೇಕು.‌ಈ ಎಲ್ಲ‌ ಸದ್ಗುಣಗಳೂ ಮೊಗಸಾಲೆಯವರಲ್ಲಿದೆ. ಮತ್ತು ಅದೃಷ್ಟ ಎಂಬುದೂ ಒಂದಿದೆ. ಅದು‌ ಶೇಕಡ ಒಂದರಷ್ಟು ಕೆಲಸ ಮಾಡೀತು.

ಮಗುವಿನ ಮುಗ್ಧತೆಯನ್ನು ಸ್ನಿಗ್ಧತೆಯನ್ನು ಮೊಗಸಾಲೆ ಇನ್ನೂ ಹೊಂದಿರುವುದರಿಂದ ಅವರ ಕನಸುಗಳು ಸಾಕ್ಷಾತ್ಕಾರ ಗೊಂಡಿವೆ. ಈ ಕೃತಿ 500 ಪುಟಗಳಿಗೂ ಮೀರಿದ ಬೃಹತ್ ಗ್ರಂಥ. ಇದನ್ನು ನಾಲ್ಕು ಅಧ್ಯಾಯಗಳಲ್ಲಿ ಬರೆದಿದ್ದಾರೆ.ಭಾಗ 1. ಹೊಳೆಯ ಮೇಲೆ, ಭಾಗ 2. ಹೊಲಕೆ ಹರಿದ ನಾಲೆ, ಭಾಗ 3.ಬಿತ್ತಿ ಬೆಳೆದ ಬೆಳೆ, ಭಾಗ 4. ಬೆಟ್ಟದ ತಪ್ಪಲಿನ ನೆರಳಲ್ಲಿ ನಿಂದು.

ಮೊದಲ ಭಾಗ ಅವರ ಬಾಲ್ಯದ ಬದಕಿಗೆ ಮೀಸಲಾಗಿದೆ. ಕೂಡುಮನೆ ಅಥವಾ ಅವಿಭಕ್ತ ಕುಟುಂಬ ಇದು ಹಿಂದಿನ ಹವ್ಯಕ ಸಮಾಜದ ಅದ್ಭುತ ಲಕ್ಷಣವಾಗಿದೆ. ಕೂಡುಮನೆಯಲ್ಲಿ ಬೆಳೆದ ಮಕ್ಕಳು ಸಂಕುಚಿತ ಮನೋಬಾವನೆಯವರಾಗಿರಲು ಸಾಧ್ಯವೇ ಇಲ್ಲ. ಅಂತಹ ಕೂಡುಮನೆಯ ಸಂಸ್ಕಾರ ಮೊಗಸಾಲೆಯವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಆಗ ಎಷ್ಟೋ ಹವ್ಯಕ ಕುಟುಂಬದವರಿಗೆ ಬಡತನ. ಮಕ್ಕಳನ್ನು ಶಾಲೆಗೆ ಸೇರಿಸಲು ಹಣದ ಕೊರತೆ. ಮತ್ತು ಆಗ ಶಾಲೆಗಳು ಮನೆಯಿಂದ ಮೂರು ನಾಲ್ಲು ಮೈಲು ದೂರ. ಮತ್ತು ಮಕ್ಕಳ ಊಟದ ಸಮಸ್ಯೆ. ಈ ಎಲ್ಲ ಅನಾನುಕೂಲಗಳ ನಡುವೆ ಹಿರಿಯರಿಗೆ ಮಕ್ಕಳನ್ನು ಆದಷ್ಟು ಕಲಿಸಬೇಕೆಂಬ ಹಂಬಲ. ಹೀಗೆ ಬಡತನದಲ್ಲಿ ಕಲಿತರೂ ನಾರಾಯಣ ಭಟ್ಟ ಕಲಿಯುವುದರಲ್ಲಿ ಚುರುಕು. ಅವರ ಅಧ್ಯಾಪಕರಾದ ಶಂಕರ್ ಭಟ್ಟರು ಮುಂತಾದವರ ಪ್ರೋತ್ಸಾಹದಿಂದ ಕವಿತಾ ರಚನೆ. ಮತ್ತು ಇವರ ಜೊತೆ ಕಲಿಯುತ್ತಿದ್ದ ಭಾಸ್ಕರ ಬೆಳ್ಚಡ ಕೂಡ ಲೇಖನ ಬರೆಯುತ್ತಿದ್ದ. ಈಗ ಭಾಸ್ಕರ ಬೆಳ್ಚಡ ಅಂಶುಮಾಲಿ ಎಂಬ ಕಾವ್ಯ ನಾಮದಲ್ಲಿ ಪ್ರಸಿದ್ಧರು.

ಕಲಿಯುವುದರಲ್ಲಿ ಚುರುಕಾದ ನಾರಾಯಣ ಎಸ್. ಎಸ್. ಎಲ್ .ಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗುತ್ತಾನೆ. ಮುಂದಿನ ಶಿಕ್ಷಣ ಅಯ್ಕೆ ತೊಡಕಾಗಿ ಆಯುರ್ವೇದವನ್ನು ಅನಿವಾರ್ಯವಾಗಿ ಆಸಕ್ತಿ ಇಲ್ಲದಿದ್ದರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಉಡುಪಿಯಲ್ಲಿರುವ ಆಯುರ್ವೇದ ಕಾಲೇಜಿಗೆ ಪ್ರವೇಶ ದೊರೆಯುತ್ತದೆ. ಆದರೆ ಫೀಸ್ ನೂರು ರೂಪಾಯಿ ಕಟ್ಟಲು ಮನೆಯವರಲ್ಲಿ ಒಂದು ಬಿಡಿ ಕಾಸೂ ಇಲ್ಲ. ಅವರ ಚಿಕ್ಕಪ್ಪ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಮೊಗಸಾಲೆ ಸ್ವತಃ ಸಂಬಂಧಿಕರ ಮನೆ ಮನೆಗೆ ಹಣದ ಸಹಾಯ ಯಾಚಿಸಲು ಹೋಗುತ್ತಾರೆ. ಅಲ್ಲಿ ಅವರ ಭಾವಂದಿರು, ಸೋದರ ಮಾವಂದಿರು ಸಹಾಯ ಮಾಡುತ್ತಾರೆ. ಆದರೆ ಶ್ರೀಮಂತ ಸಂಬಂಧಿಕರು ಯಾವ ಸಹಾಯವನ್ನು ಮಾಡದೆ ಮೊಗಸಾಲೆ ನಿರಾಶರಾಗುವುದಿಲ್ಲ.

ಮೊದಲ ಅಧ್ಯಾಯದಲ್ಲಿ ನಾರಾಯಣ ನಾಲ್ಕು-ಐದು ವರ್ಷದ ಬಾಲಕ. ಅಪ್ಪ ಏಕಾಏಕಿ ಮೃತಪಟ್ಟಾಗ ಆ ಸಾವಿನ ಬಗ್ಗೆ ಬಾಲಕ ನಾರಾಯಣನಿಗೆ ನಚಿಕೇತನ ಜಿಜ್ಞಾಸೆ. ಸಾವು ಎಂದರೇನು? ಅಪ್ಪನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿದ್ದು ಯಾಕೆ? ಅಪ್ಪ ಸತ್ತ ನಂತರ ನಾರಾಯಣನ ಚಿಕ್ಕಪ್ಪನೆ ಇಡಿ ಕುಟುಂಬದ ಹೊರೆ ಹೊರಬೇಕಾಗುತ್ತದೆ. ಈ ಚಿಕ್ಕಪ್ಪ ನಾರಾಯಣನಿಗೆ ಅಪಾರ ಪ್ರೀತಿಯನ್ನು ತೋರಿಸಿದವರು. ಬಹುಶಃ ಈ ಚಿಕ್ಕಪ್ಪ ಮೊಗಸಾಲೆ ಅವರ ಕೃತಿಗಳಲ್ಲಿ ಪಾತ್ರವಾಗಿ ಬಂದಿರಬಹುದು.

ಊಟಕ್ಕೆ ಮತ್ತು ವಸತಿಗೆ ಒಂದು ಬಿಡಿಕಾಸೂ ಇರಲಿಲ್ಲ. ಆಗ ಓರ್ವ ಪುಣ್ಯಾತ್ಮರು ಅವರನ್ನು ಉಡುಪಿ ಪೇಜಾವರ ಮಠದ ಆಶ್ರಯ ಸಿಗುವಂತೆ ಮಾಡುತ್ತಾರೆ. ನಂತರ ಮಠದಲ್ಲಿನ ವಿದ್ಯಾರ್ಥಿ ಜೀವನವನ್ನು ಅತ್ಯಂತ ಸ್ವಾರಸ್ಯವಾಗಿ ನಿರೂಪಿಸಿದ್ದಾರೆ .ಮಠದ ವಿದ್ಯಮಾನಗಳು, ಕೆಲವು ಸ್ವಾಮಿಜಿಗಳ ಭ್ರಷ್ಟತೆಯನ್ನು ಕೃತಿಕಾರ ಬಿಚ್ಚಿಟ್ಟಿದ್ದಾರೆ. ಮಠದ ಅನ್ನ ವಸತಿಗಾಗಿ ಆಶ್ರಯಿಸಿದ ವಿದ್ಯಾರ್ಥಿ ಜೀವನವು ಮೊಗಸಾಲೆಗೆ ಎಷ್ಟೊ ಸಾಹಿತಿಗಳನ್ನು, ವಿಶೇಷವಾಗಿ ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರನ್ನು ಪರಿಚಯಿಸಿತು. ಅಂದಿನ ಶಿರೂರು ಸ್ವಾಮೀಜಿಗೆ ಮೊಗಸಾಲೆ ಕವನಗಳನ್ನು ತೋರಿಸಿದಾಗ ಆ ಸ್ವಾಮಿಜಿ ಇನ್ನೂ ಪಳಗಬೇಕು. ಅಡಿಗರ ಕವಿತೆಗಳನ್ನು ಓದಿ ಎಂದರಂತೆ ನಂತರ ಈ ಸ್ವಾಮಿಜಿ ಸ್ವಾಮಿ ಹುದ್ದೆಯನ್ನು ತ್ಯಜಿಸಿ, ಸಂಸಾರಿಗಳಾಗಿ ಆರ್ಯ ಎಂಬ ಹೆಸರಿನಲ್ಲಿ ಬರೆದರು.

ಹೀಗೆ ಇವರ ಬಾಲ್ಯದ ಕಾಲದ ಇವರ ಕುಟುಂಬದ ಹಿರಿಯರ ಯಕ್ಷಗಾನ ಕಲೆಯ ಆಸಕ್ತಿ, ಹಲವರು ಪ್ರಖ್ಯಾತ ಕಲಾವಿದರಾಗಿಯೂ ಪ್ರಸಿದ್ಧರಾದವರು, ಮದುವೆಯಂತಹ ಸಮಾರಂಭದಲ್ಲಿ ಒಂದೆ ಇಸ್ಪೀಟೆಲೆಗಳ ಆಟ, ತಾಳಮದ್ದಳೆಯ ಕೂಟ. ಇಂಥವುಗಳನ್ನು ನೋಡಿಯೆ ನಾರಾಯಣ ಬೆಳೆದ. ಮತ್ತೆ ಪದವಿ ಮುಗಿಸಿದ ನಂತರ ಖಾಸಗಿ ಕ್ಲಿನಿಕ್ ಮಾಡಲು‌ ಪ್ರಯತ್ನ; ಹಣಕಾಸಿನ ಕೊರತೆಯಿಂದ ಅದಾಗಲಿಲ್ಲ. ಅದೃಷ್ಟವಶಾತ್ ಅವರಿಗೆ ಕಾಂತಾವರ ಎಂಬ ಕಾಂತಾರದಿಂದ ಸರಕಾರಿ ವೈದ್ಯಾಧಿಕಾರಿಯ ಹುದ್ದೆಗೆ ಸಂದರ್ಶನವಾಯ್ತು ಅದು ಬರಿ ಕಾಡು‌ ಹುಲಿ ಚಿರತೆಗಳ ಬೀಡು. ಇಂತವುಗಳನ್ನು ನಾರಾಯಣ ನೋಡಿ ಬೆಳೆದವನೆ ಮೊದಮೊದಲು ಮತ್ತೆ ಊರಿನವರೆ ಹೇಳಿದ್ದರು"ಇಲ್ಲಿ ನಿಮ್ಮ ಕುತ್ತಿಗೆಗೆ ಒಂದು ಕುಂಟೆ ಕಟ್ಟುವ" ಎಂದು ಹೇಳಿದರಂತೆ. ಅಂತೆಯೆ ಕಾಂತಾವರ ದ ಬಾಲೆ ಪ್ರೇಮಳ ಪ್ರೇಮಪಾಶದಲ್ಲಿ ಸಿಕ್ಕಿಬಿದ್ದರು. ಕಾಂತಾವರದಲ್ಲಿ ನಿಂತು ಹಲವಾರು ಕೃತಿಗಳನ್ನು ರಚಿಸಿದರು. ಅವರು ಬರೆದ್ದೆಲ್ಲ ಉತ್ತಮ ಕೃತಿಗಳೆಂದು ಹೆಸರು ಪಡೆದವು. ಇವರು ಕಾದಂಬರಿ‌ ರಚನೆಯಲ್ಲಿ ಅನುಸರಿಸಿದ್ದು ಕಾರಂತರನ್ನು. ನನ್ನದಲ್ಲದ್ದು ಕಾದಂಬರಿಯಲ್ಲಿ ಅವರು‌ ಎಸ್ ಎಲ್ ಭೈರಪ್ಪನವರ ಜಲಪಾತ ಮತ್ತು ಕಾರಂತರ ಅಳಿದ ಮೇಲೆ ಕಾದಂಬರಿಗಳ ತಂತ್ರವನ್ನು ಬಳಸಿದೆ ಎಂದು‌ ಹೇಳುತ್ತಾರೆ.

ಮತ್ತೆ ಮೊಗಸಾಲೆ ರೈತಸಂಘ, ಯುವಕ ಸಂಘ, ಕನ್ನಡ ಸಂಘ ಕಟ್ಟಿದ್ದು ಮುದ್ರಣ ಸ್ಮಾರಕ ಪ್ರಶಸ್ತಿ ಯನ್ನು ಸ್ಥಾಪಿಸಿದ್ದಿ, ಜಿನರಾಜ್ ಹೆಗಡೆಯವರ ಸ್ಮಾರಕ ಕನ್ನಡ ಭವನ ಕಟ್ಟಿಸಿದ್ದು ಈಗ ಒಂದು ಇತಿಹಾಸ. ಉದಯವಾಣಿಯಲ್ಲಿ ಇವರು ಪ್ರಕಟಿಸಿದ ಕವಿತೆ ಇವರ ಜೀವಕ್ಕೇ ಅಪಾಯವನ್ನುಂಟು ಮಾಡಿ, ರಥಬೀದಿಯಲ್ಲಿ ಹೆಂಗಸರು ಪೊರಕೆ ಹಿಡಿದು ಇವರನ್ನು ಸುತ್ತುವರೆದು ಪ್ರತಿಭಟಿಸಿದ್ದು. ಮಾರಣ್ಣ ಮಾಡ, ಡಾ ಬಲ್ಲಾಳ ಮುಂತಾದವರು ಇವರ ಬೆಂಬಲಕ್ಕೆ ಬಂದು ರಕ್ಷಿಸಿದ್ದುದರ ಸ್ವಾರಸ್ಯಕರ ಘಟನೆ ಇಲ್ಲಿ ಪ್ರಸ್ತಾಪಗೊಂಡಿವೆ. ಮತ್ತು ಮನುಷ್ಯ ನಿರ್ವಾತದಲ್ಲಿ ಏನನ್ನೂ ಸಾಧಿಸಲಾರ. ಅವನು ಏನನ್ನೂ ಸಾಧಿಸುವುದಿದ್ದರೂ ಸುತ್ತಲಿನ ಜನರ ಸಹಾಯ ಪಡದೆ ಮಾಡಬೇಕಾಗುತ್ತದೆ. ಆದರೆ ತನ್ನ ಕನಸುಗಳನ್ನು ಇತರರಿಗೆ ಮಾರಿ ಬೆಳೆ ತೆಗೆಯುವ ನಾಯಕತ್ವ ಮೊಗಸಾಲೆಯಲ್ಲಿ ಇರುವುದರಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ಕನ್ನಡ ಸಾಹಿತ್ಯದ ವಿವಿಧ ಚಳಿವಳಿಗಳಾದ ನವೋದಯ, ನವ್ಯ, ದಲಿತ, ಬಂಡಾಯ ಈ ಎಲ್ಲವುಗಳ ಸತ್ವ ಹೀರಿ ತಮ್ಮ ಕೃತಿಗಳಲ್ಲಿ ಅನನ್ಯತೆಯನ್ನು ಸಾಧಿಸಿದ್ದಾರೆ ಈ ತ್ರಿವಿಕ್ರಮ ಮನುಷ್ಯ ಸಂಬಂಧಗಳ ವಿಷಯದಲ್ಲಿ ಇವರು ತುಂಬ ಸೆನ್ಸಿಟಿವ್ ಚಿಕ್ಕಪ್ಪ ತರುಣ ಕಾಲದಲ್ಲಿ ಕೊಟ್ಟ ಸಾಂಡೋಜ್ ವಾಚನ್ನು ಇನ್ನೂ ಚಿಕ್ಕಪ್ಪನ ನೆನಪಿಗೆ ಇಟ್ಟುಕೊಂಡಿದ್ದಾರೆ. ಮಗ ಅಮೇರಿಕಾದಿಂದ ತಂದ ವಾಚ್ ಗಿಂತ ಚಿಕ್ಕಪ್ಪ ಕೊಟ್ಟ ವಾಚ್ ಇನ್ನೂ ಪ್ರೀತಿಯಿಂದ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಮತ್ತು ಕಾಂತಾವರದಲ್ಲಿ ತಮ್ಮ ಜ್ಯಾತ್ಯತೀತ ನಿಲುವನ್ನು ಪ್ರತಿಪಾದಿಸಿದ್ದಲ್ಲದೆ ತಮ್ಮ ಮನೆಯಲ್ಲಿ ಯಾವ ಜಾತಿಭೇದವಿಲ್ಲದೆ ಸಹಪಂಕ್ತಿ ಭೊಜನ ಮಾಡಿದ್ದಾರೆ. ಈ ನಿಲುವಿಗೆ ಶೂದ್ರ ಸಮುದಾಯದವರೆ ಹಿಂಜರಿಯುತ್ತಾರೆ. ಅವರೂ ಇದನ್ನು ಸ್ವೀಕರಿಸಬೇಕೆಂಬುದು ಮೊಗಸಾಲೆ ಅವರ ಮಾತು. ಕಾಂತಾವರ ದೇವಸ್ಥಾನದಲ್ಲಿ ವಿವಿಧ ಬ್ರಾಹ್ಮಣ ವರ್ಗದ ತಾರತಮ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅಡ್ಡಪಂಕ್ತಿ ಬ್ರಾಹ್ಮಣ ರಾದ ಸ್ಥಾನಿಕ, ದೇಶಸ್ಥರನ್ನು ಸಹಪಂಕ್ತಿಯವರನ್ನಾಗಿ ಮಾಡುವಲ್ಲಿ ಮೊಗಸಾಲೆಯವರ ಪ್ರಯತ್ನ ಯಶಸ್ವಿಯಾಗಿದೆ.

ಸಾಹಿತ್ಯ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ನನ್ನದಲ್ಲದ್ದು ಕಾದಂಬರಿಗೆ ರಾಜ್ಯಸಾಹಿತ್ಯ ಆಕಾಡೆಮಿ‌ ಪ್ರಶಸ್ತಿ ಬಂದಿದೆ. ಇವರು ಕಾರಂತರಂತೆ ಅ ನಾಸ್ತಿಕ ರು. ದೇವರೆಂಬುದು ಯಾಕೆ ಬೇಕು "ನಾನು ಜನಸಾಮಾನ್ಯರ ದೃಷ್ಟಿಯಲ್ಲಿ ವಿನಾಕಾರಣ ಅಪರಾಧಿಯಾಗಿ ನಿಂತೆ. ಆಗ ನನ್ನ ನೆರವಿಗೆ ಬಂದವರು‌‌ ದೇವರು!" ದೇವರಾಣೆಯಾಗಿ ಈ ಪತ್ರಿಕಾ ವರದಿಗೂ ನನಗೂ ಸಂಧವಿಲ್ಲ."ಎಂಬುದನ್ನು ಜನರು ನಂಬಿದರು.

ಕೃತಿಯ ಭರತ ವಾಕ್ಯ:" ಬದುಕು‌ ಎನ್ನುವುದು ಹೀಗೆ. ಅನೇಕ ಆಕಸ್ಮಿಕ ಗಳ, ಅಯ್ಕೆಗಳ, ಆಯ್ಕೆಗೆ ಅವಕಾಶವೇ ಇಲ್ಲದ ಒಂದು ಮನೋಧರ್ಮದ ನಿರಂತರತೆ‌ ಇದರ ಸಾಫಲ್ಯವು ಪ್ರಪಂಚದಲ್ಲಿರುವ ಸಕಲ ಚರಾಚರ ಪ್ರಪಂಚಕ್ಕೆ ಹೆಚ್ಚು ಋಣಿಯಾಗಿದೆ ಎಂದು ಕಲ್ಪಿಸಿಕೊಳ್ಳುವುದರಲ್ಲಿ ಇದೆ ಎಂಬುದನ್ನು ಬದುಕೇ ನನಗೆ ಕಲಿಸಿಕೊಟ್ಟಿದೆ. ಈ ಅರ್ಥದಲ್ಲಿ ನಾನು ಯಾರಿಂದಲೂ ಋಣಮುಕ್ತನಲ್ಲ, ಎಂಬ ಭಾವನೆಯು ನನ್ನನ್ನು ಸುಖದಲ್ಲಿರಿಸಿದಷ್ಟು ಇನ್ನಾವುದನ್ನೂ ಬದುಕು ನನಗೆ ಕೊಟ್ಟಿಲ್ಲ."

-ಉದಯ್ ಕುಮಾರ್ ಹಬ್ಬು

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...