ಹೆಣ್ಣು ಮಕ್ಕಳ ಬದುಕಿನ ಚಿತ್ರಣ ’ಗೌರಿಯರು’ ಕೃತಿ: ರಾಜೇಂದ್ರ ಚೆನ್ನಿ

Date: 19-09-2021

Location: ಬೆಂಗಳೂರು


ಹೆಣ್ಣು ಮಕ್ಕಳು ತಮ್ಮೊಳಗಿನ ಮೌನವನ್ನು ಮುರಿದು ಸಮಾಜದ ಮುಂದೆ ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳುವ ಕಾದಂಬರಿ ಅಮರೇಶ ನುಗಡೋಣಿಯವರ ’ಗೌರಿಯರು’. ಹೆಣ್ಣು ಮಕ್ಕಳ ಸಮಸ್ಯೆಯನ್ನು ಲೈಂಗಿಕ ಸಂಬಂಧಗಳನ್ನು ಇಲ್ಲಿ ಲೇಖಕರು ಪ್ರಧಾನವಾಗಿಟ್ಟುಕೊಂಡು ಜಾತಿ ಕೇಂದ್ರಿತ ವ್ಯವಸ್ಥೆಯ ಕುರಿತು ಕಾದಂಬರಿಯಲ್ಲಿ ಮಾತನಾಡಿದ್ದಾರೆ ಎಂದು ಸಂಸ್ಕೃತಿ ಚಿಂತಕ ರಾಜೇಂದ್ರ ಚೆನ್ನಿಯವರು ಹೇಳಿದರು.

ಶಿವಮೊಗ್ಗದ ಹೊಂಗಿರಣ ಪ್ರಕಾಶನ ಸಂಸ್ಥೆ ಆರ್.ಟಿ.ಓ ಕಚೇರಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿಹೆಜ್ಜೆ ರಂಗಪಯಣ ಕಾರ್ಯಕ್ರಮ-9 ಅಂಗವಾಗಿ ಆಯೋಜಿಸಲಾಗಿದ್ದ ಅಮರೇಶ ನುಗಡೋಣಿ ಅವರ ’ಗೌರಿಯರು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗೌರಿಯರು ಕಾದಂಬರಿಯ ಕಥಾನಕವು ತಮ್ಮ ಸ್ವಂತ ನಿರ್ಧಾರದ ಮೇಲೆ ನಡೆಯುವ ಮೂವರು ಹೆಣ್ಣುಮಕ್ಕಳ ಬದುಕಿನ ಚಿತ್ರಣವನ್ನು ಒಳಗೊಂಡಿದೆ. ಹೆಣ್ಣು ತನ್ನಲ್ಲಿರುವ ಮೌನವನ್ನು ಮುರಿದು ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುವ ರೀತಿ, ಸಮಾಜ ಬದಲಾಗದೆ ಹೋದರೂ, ನಮ್ಮ ಪ್ರಜ್ಞೆ ಹಾಗೂ ನಮ್ಮೊಳಗೆ ಬದಲಾವಣೆಯಾದ ರೀತಿಯ ತುಣುಕುಗಳು ಇಲ್ಲಿವೆ. ಜಾತಿ ಕೇಂದ್ರಿತ ವ್ಯವಸ್ಥೆ ಯ ಬಗ್ಗೆ ಅದರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನಮಾಡಿ, ಲೈಂಗಿಕ ಸಂಬಂಧ ಗಳ ಕುರಿತು ಪ್ರಧಾನವಾಗಿ ಗುರುತಿಸಿದ್ದಾರೆ. ಹಾಗೆಯೇ ಅಂದಿನ ನಿಜಾಮ್ ಕರ್ನಾಟಕದ ಹಾಗೂ ಕಲ್ಯಾಣ ಕರ್ನಾಟಕದ ವಾಸ್ತವಿಕತೆಯ ಅಂಶಗಳನ್ನು ಕಟ್ಟಿಕೊಡುವ ಅಮರೇಶ ನುಗಡೋಣಿಯವರು ಬಡತನ, ಜಮೀನ್ದಾರಿ ವ್ಯವಸ್ಥೆ ಹೆಚ್ಚಾಗಿ ಇದ್ದಂತಹ ಹೈದರಬಾದ್ ಕರ್ನಾಟಕದ ಸಮಗ್ರ ಚರಿತ್ರೆಯನ್ನುಇಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಕಾದಂಬರಿಯ ಕುರಿತು ಮೇಟಿ ಮಲ್ಲಿಕಾರ್ಜುನ ಅವರು ಮಾತನಾಡಿ, ಕನ್ನಡದ ಕಥೆಗಳಲ್ಲಿ ಜಾತಿ, ಧರ್ಮ, ಲೈಂಗಿಕತೆ ಈ ಮೂರು ಮುಖ್ಯವಾಗಿ ಚಿತ್ರಿಸಿಕೊಂಡು ಬಂದಿವೆ. ಪಂಪನಿಂದ ಇಂದಿನವರೆಗೂ ಇದೇ ರೀತಿಯ ಕತೆಗಳನ್ನು ನೋಡಬಹುದು. ಮಾಸ್ತಿ, ಕುವೆಂಪು, ಲಂಕೇಶ್, ಅನಂತಮೂರ್ತಿ, ಸದಾಶಿವ,ಯಶವಂತ ಚಿತ್ತಾಲ,ದೇವನೂರು ಮಹಾದೇವ ಅವರ ಕಥೆಗಳ ಮೂಲಕ ದೊರೆಯುವ ಅನುಭವ ಏಕತ್ವವಾಗಿ ಇವರ ಕಥೆಗಳಲ್ಲೂ ಸಿಗುತ್ತದೆ. ಗೌರಿಯರು ಕಾದಂಬರಿಯು ಕಥಾ ಜಗತ್ತಿನ ಒಳಿತು ಕೆಡುಕೆರಡರನ್ನೂ ಚಿತ್ರಿಸುತ್ತವೆ. ಜಾಗತೀಕರಣದ ಪ್ರಭಾವ ಅದರ ಪರಿಣಾಮ ಸಾಮಾನ್ಯ ಜನರ ಬದುಕಿನೊಳಗಡೆ ಪ್ರವೇಶಿಸಿದ ಬಗೆಯು ಈ ಕೃತಿಯಲ್ಲಿ ಬೆಳಕು ಚೆಲ್ಲುತ್ತಿದೆ. ಇವರ ಕತೆಗಳೇ ಕಾದಂಬರಿಗಳಾಗುವ ಪರಿ ಇಲ್ಲಿ ಭಿನ್ನವಾಗಿದೆ ಎಂದರು.

ಅಲ್ಲದೆ ಕಥಾನಕವನ್ನು ಮೂರು ಹೆಣ್ಣುಮಕ್ಕಳನ್ನ ಕೇಂದ್ರ ವಾಗಿಟ್ಟುಕೊಂಡು ಬರೆದಿದ್ದು, ಗೌರಿಯರು ಕಾದಂಬರಿಯ ಶೀರ್ಷಿಕೆಯು ಒಂದು ರೂಪಕಾತ್ಮಕವಾದುದು.ಇದು ಒಂದು ವಿಶಿಷ್ಠವಾದ ಬದುಕನ್ನು ರೂಪಿಸಿಕೊಳ್ಳುವ ಹೊಣೆಯನ್ನು ಹೊತ್ತುಕೊಂಡು ಅದರಂತೆ ಬದುಕನ್ನು ರೂಪಿಸಿಕೊಳ್ಳುವತ್ತ ಮುಖಮಾಡಿದೆ ಎಂದರ. ಈ ಕಾದಂಬರಿಯ ಕೇಂದ್ರ ಪಾತ್ರಗಳಾದ ಶಿವಲೀಲಾ,ಅಕ್ಕಮ್ಮ,ಶ್ರೀದೇವಿಯರ ಸ್ವಭಾವಗಳು ಹಾಗೂ ತಮ್ಮ ಜೀವನ ಸಂದರ್ಭದಲ್ಲಿ ತಮಗೆ ಎದುರಾದ ಸಮಸ್ಯೆಗಳನ್ನು ತಾವು ಹೇಗೆ ಎದುರಿಸುತ್ತಾರೆ ಮತ್ತು ನಿಭಾಯಿಸುತ್ತಾರೆ, ಅವರು ತೆಗೆದುಕೊಳ್ಳುವ ನಿಲುವುಗಳೇನು? ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳುವ ಒತ್ತಾಯ ಹೆಣ್ಣಿನ ಮೇಲೆ ಇದೆ ಎಂಬುದು ನಿಜಕ್ಕೂ ಅಮರೇಶ ನುಗಡೋಣಿಯವರ ಕಥಾನಕ ಶೈಲಿಯನ್ನು ಮೆಚ್ಚಿಸುತ್ತದೆ ಎಂದು ಹೇಳಿದರು.

ಚಂದ್ರೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು.ವೇದಿಕೆಯಲ್ಲಿ ಅಮರೇಶ ನುಗಡೋಣಿ, ಪಲ್ಲವ ವೆಂಕಟೇಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 

MORE NEWS

ದಲಿತರು ಮತ್ತು ಸ್ತ್ರೀಯರ ಕಣ್ಣಲ್ಲಿ ದೇವರಾದ ಬಸವಣ್ಣ

10-05-2024 ಬೆಂಗಳೂರು

'ಭಾರತೀಯ ಧರ್ಮಗಳಲ್ಲಿ ಬಸವಧರ್ಮ ತುಂಬ ವಿಶಿಷ್ಟ, ವೈಚಾರಿಕ ಮತ್ತು ವೈಜ್ಞಾನಿಕವಾಗಿದೆ. ಕನ್ನಡ ಸಾಹಿತ್ಯದ ಬೇರೆ ಬೇರೆ...

ನಾಲ್ಕು ಕವನ ಸಂಕಲನಗಳಿಗೆ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’

10-05-2024 ಬೆಂಗಳೂರು

ಬೆಳಗಾವಿ: ಜಿಲ್ಲೆಯ ಸವದತ್ತಿ ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ 2 ನೇ ವರ್ಷದ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್...

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024ರ’ ವೆಬ್ ಸೈಟ್ ಅನಾವರಣ

09-05-2024 ಬೆಂಗಳೂರು

ಬೆಂಗಳೂರು: ದಕ್ಷಿಣ ಭಾರತದ ಸಾಹಿತ್ಯ ಲೋಕದ ಮಟ್ಟಿಗೆ ಬಹುದೊಡ್ಡ ಸಾಹಿತ್ಯೋತ್ಸವವನ್ನು ‘ಬುಕ್ ಬ್ರಹ್ಮ’ ಆಯೋ...