ಹೊತ್ತು ಗೊತ್ತಾಗುವ ಮುನ್ನ ಕಳಚಿದ್ದ ಕೊಂಡಿಯ ನೆನಪಿಸಿದ ಕಥೆಗಳು


ಅಬ್ದುಲ್‌ ರಶೀದರ ಕಥೆಗಳಿಗೂ ಮತ್ತು ನಾನು ಅಂಟಿಕೊಳ್ಳದೇ ಬದುಕಿದ ಗೆಂಡೇಹಳ್ಳಿ ಬದುಕಿಗೂ ಬಹಳಷ್ಟು ಸಾಮ್ಯಗಳಿವೆ. ಪುಸ್ತಕವೇನೂ ಬ್ಯಾರಿ ಅಥವಾ ಮುಸ್ಲಿಂ ಜನಾಂಗದವರ ಸುತ್ತವೇ ಗಿರಕಿ ಹೊಡೆಯುವುದಿಲ್ಲ. ಹಾಗೇ ನನ್ನ ಗೆಂಡೇಹಳ್ಳಿ ಜೀವನ ಕೂಡ ಎನ್ನುತ್ತಾರೆ ಲೇಖಕ ಮಾಕೋನಹಳ್ಳಿ ವಿನಯ್‌ ಮಾಧವ್. ಅವರು ಅಬ್ದುಲ್ ರಶೀದ್ ಅವರ ‘ಹೊತ್ತು ಗೊತ್ತಿಲ್ಲದ ಕಥೆಗಳು’ ಕರಿತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ...

ಹುಟ್ಟುತ್ತಾ ಅಣ್ಣ, ತಮ್ಮಂದಿರು. ಬೆಳೆಯುತ್ತಾ ದಾಯಾದಿಗಳು ಎನ್ನುವ ಗಾದೆ ನೆನಪಿಗೆ ಬಂದಿದ್ದು ಅಬ್ದುಲ್‌ ರಶೀದ್‌ ಅವರ ʻಹೊತ್ತು ಗೊತ್ತಿಲ್ಲದ ಕಥೆಗಳುʼ ಪುಸ್ತಕ ಓದುವಾಗ. ಹೌದು, ಬೆಳೆಯುತ್ತಾ, ಹೊತ್ತು ಗೊತ್ತಾಗುವ ಮುನ್ನವೇ ಜೀವನದ ಒಂದು ಕೊಂಡಿ ಕಳಚಿ ಹೋದದ್ದು ನನ್ನ ಗಮನಕ್ಕೆ ಬಂದಿರಲೇ ಇಲ್ಲ.

ಆ ಕೊಂಡಿಯ ಇನ್ನೊಂದು ಕೊನೆಯಲ್ಲಿ, ಎಷ್ಟೋ ಬಾಪಾಗಳೂ, ಉಮ್ಮಾಗಳೂ, ಕಾಕಗಳೂ ಮತ್ತು ಬುರ್ಖಾದೊಳಗಿನ ಕಣ್ಣುಗಳೂ ಹಾದು ಹೋಗಿದ್ದವು. ಅವರೆಲ್ಲ ಏನಾದರು? ಎಲ್ಲಿ ಹೋದರು? ನನ್ನ ರೈಸ್‌ ಮಿಲ್‌ ಇರುವ ಗೆಂಡೇಹಳ್ಳಿಯಲ್ಲಂತೂ ಕಾಣುತ್ತಿಲ್ಲ. ಆ ನೆನಪುಗಳ ಪಳೆಯುಳಿಕೆಯಂತೆ ನಮ್ಮ ಮಿಲ್‌ ಮತ್ತು ತೋಟ ನೋಡಿಕೊಳ್ಳುವ ನವೀದ್‌ ಮತ್ತು ವಿಕಲಾಂಗನಾಗಿರುವ ಅಲೀಮ್‌ ಇದ್ದಾರೆ. ಮೂಡಿಗೆರೆಯಲ್ಲಿ ವಿಪರೀತವಾಗಿ ಕಾಣುತ್ತಾರೆ, ಆದರೆ ಯಾರದೂ ಪರಿಚಯವಿಲ್ಲ.

ನಾವು ಬೆಳೆದ ಪರಿಸರವೇ ಹಾಗಿತ್ತು. ರಜೆಗಾಗಿ ಗೆಂಡೇಹಳ್ಳಿಗೆ ಬಂದರೆ, ಸುತ್ತ ಮುತ್ತ ಇರುವ ಕುಟುಂಬಗಳಲ್ಲಿ ಹೆಚ್ಚಿನವರು ಮುಸ್ಲೀಮರು. ನನಗೆ ಗೊತ್ತಿರುವಂತೆ, ನಮ್ಮ ಕುಟುಂಬದವರು ರೈಸ್‌ ಮಿಲ್ಲನ್ನು ಮೂರು ತಲೆಮಾರಿನಿಂದ ನಡೆಸುತ್ತಿದ್ದರೆ, ಅದನ್ನು ನೋಡಿಕೊಳ್ಳುತ್ತಿರುವ ನವೀದ್‌, ಮಿಲ್ಲಿನ ಉಸ್ತುವಾರಿಯನ್ನು ವಹಿಸಿಕೊಂಡ ಅವನ ಕುಟುಂಬದ ನಾಲ್ಕನೇ ತಲೆಮಾರಿನವನು. ಆ ಕುಟುಂಬವನ್ನು ಬಿಟ್ಟರೂ, ನಮ್ಮ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ಲೋಲ, ಶೌಕತ್‌ ಮತ್ತು ಇನ್ನೂ ಅನೇಕ ಮಂದಿ ಮುಸ್ಲಿಮರೇ ಇದ್ದರು. ಅವರ ಕಟುಂಬದವರೆಲ್ಲ ನಮ್ಮ ಮನೆಯಲ್ಲಿ, ನಮ್ಮ ಕುಟುಂಬದ ಸದಸ್ಯರಂತೆ ಓಡಾಡುವುದು ದೈನಂದಿನ ಚಟುವಟಿಕೆಯಾಗಿತ್ತು.

ಬೆಳೆಯುತ್ತಾ, ಬಹಳಷ್ಟು ಬದಲಾವಣೆಗಳಾದವು. ನಾನು ಹಾಸ್ಟೆಲ್‌ಗಳಲ್ಲಿಯೇ ಹೆಚ್ಚಿನ ಸಮಯ ಇದ್ದು, ಕೆಲವು ಬಾರಿ ಮಾತ್ರ ರಜಾ ದಿನಗಳಲ್ಲಿ ಗೆಂಡೇಹಳ್ಳಿಗೆ ಬಂದು ಹೋಗುತ್ತಿದ್ದೆ ಹೊರತು, ಉಳಿಯುವುದು ಕಡಿಮೆಯಾಗತೊಡಗಿತು. ಕಾಲೇಜು ಬಿಟ್ಟು ಸ್ವಲ್ಪ ಕಾಲ ನಾನು ಗೆಂಡೆಹಳ್ಳಿಯಲ್ಲಿ ಇದ್ದೆ. ಅಷ್ಟರಲ್ಲಿ, ಗೆಂಡೇಹಳ್ಳಿಯ ಬಹಳಷ್ಟು ಮುಸ್ಲೀಮರು ಬೇರೆ ಕಡೆಗಳಿಗೆ ವಲಸೆ ಹೋಗಿದ್ದರು. ಆದರೆ, ದೀಪಾವಳಿಗೆ ಗದ್ದೆಯಿಂದ ʻಲಕ್ಕಿ ಸೊಪ್ಪುʼ ತರುವುದು, ಮಿಲ್ಲಿನಲ್ಲಿ ಗಣಪತಿ ಕೂರಿಸುವ ಕೆಲಸ ನವೀದ್‌ ಮತ್ತು ಇನ್ನೂ ಕೆಲವರು ಮಾಡುತ್ತಿದ್ದರೂ, ಮೊದಲಿನಷ್ಟು ಮುಸ್ಲಿಮ್‌ ಹುಡುಗರು ಬರುತ್ತಿಲ್ಲ ಎನ್ನುವು ವಿಷಯ ನನ್ನ ಗಮನಕ್ಕೆ ಬಂದಿತ್ತು. ಅದಕ್ಕೂ ಮತ್ತು ರಾಷ್ಟ್ರದಲ್ಲಿ ಬಿಜೆಪಿ ರಾಮಮಂದಿರ ವಿಷಯವನ್ನು ಎತ್ತಿಕೊಂಡಿದ್ದಕ್ಕೂ ಸಂಬಂಧವಿದೆಯೇ ಎನ್ನುವುದು ನನ್ನ ಅನುಮಾನವಾಗಿಯೇ ಉಳಿಯಿತು ಹೊರತು, ಯಾವುದೇ ಪುರಾವೆಗಲು ದೊರಕಲಿಲ್ಲ. ನಾನೂ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.

ಹಳ್ಳಿ ಸಹಜವಾದ ಪ್ರಕ್ರಿಯೆಯಂತೆ, ಊರಿನ ಎಲ್ಲಾ ಸಂಸಾರಗಳ ಕಥೆಗಳೂ ನನ್ನ ಕಿವಿಗೆ ಬೀಳುತ್ತಿದ್ದವು. ಈ ಸಣ್ಣ ಊರುಗಳ ಜಂಜಾಟದಲ್ಲಿ ಪೂರ್ತಿಯಾಗಿ ಸಿಕ್ಕಿ ಹಾಕಿಕೊಳ್ಳುವ ಮುನ್ನವೇ ನಾನು ಗೆಂಡೇಹಳ್ಳಿ ಬಿಟ್ಟು, ಶಿವಮೊಗ್ಗೆಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ದಾಟಿದ್ದೆ. ನನ್ನ ಜೀವನದಲ್ಲಿ ಕಳೆದು ಹೋದ ಮಲೆನಾಡು ಜೀವನದ ಒಂದಿಷ್ಟು ಕಥೆಗಳನ್ನು ಬರೆದು, ಅದನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನದಲ್ಲೇ ಈ ಪುಸ್ತಕ ನನ್ನ ಕೈಗೆ ಸಿಕ್ಕಿದ ಪುಸ್ತಕ – ಹೊತ್ತು ಗೊತ್ತಿಲ್ಲದ ಕಥೆಗಳು ಅದನ್ನು ಓದುತ್ತಾ ಹೋದಾಗಲೇ ತಲೆಗೆ ಹೊಳೆದದ್ದು -- ಗೆಂಡೇಹಳ್ಳಿಯ ಜೀವನದ ಬಗ್ಗೆ ಮಾತನಾಡಿದರೂ, ಅಲ್ಲಿನ ಸಂಬಂಧಗಳ ಕೊಂಡಿಗಳನ್ನು ಜೋಡಿಸುವ ಗೋಜಿಗೆ ಹೋಗಿರಲಿಲ್ಲ ಎಂದು.

ಆ ನೆನಪುಗಳನ್ನೆಲ್ಲ ಒಟ್ಟಿಗೆ ಸೇರಿಸಿದಾಗ, ಅದೂ ಒಂದು ಅದ್ಭುತ ಜೀವನವಾಗಿತ್ತು. ರೈಸ್‌ ಮಿಲ್‌ ಎನ್ನುವುದು ಶ್ರೀಮಂತಿಕೆಯ ಪ್ರತೀಕವಾಗಿದ್ದ ಕಾಲದಲ್ಲಿ, ನಮ್ಮ ಮನೆಯಲ್ಲಿ ಮಲಯಾಳಿಗಳ ಮತ್ತು ಸಾಬರ ದರ್ಬಾರ್‌ ಹೆಚ್ಚಾಗಿ ನಡೆಯುತ್ತಿತ್ತು ಎಂಬ ಸಂಬಂಧಿಕರ ಮಾತುಗಳು ಸತ್ಯಕ್ಕೆ ದೂರವಾದುದೇನಲ್ಲ. ಈಗ ನೆನಪಿಸಿಕೊಂಡರೆ, ಅದೊಂದು ಗತಕಾಲ ವೈಭವ ಎಂದು ಅನ್ನಿಸುತ್ತದೆ.

ಅಬ್ದುಲ್‌ ರಶೀದರ ಕಥೆಗಳಿಗೂ ಮತ್ತು ನಾನು ಅಂಟಿಕೊಳ್ಳದೇ ಬದುಕಿದ ಗೆಂಡೇಹಳ್ಳಿ ಬದುಕಿಗೂ ಬಹಳಷ್ಟು ಸಾಮ್ಯಗಳಿವೆ. ಪುಸ್ತಕವೇನೂ ಬ್ಯಾರಿ ಅಥವಾ ಮುಸ್ಲಿಂ ಜನಾಂಗದವರ ಸುತ್ತವೇ ಗಿರಕಿ ಹೊಡೆಯುವುದಿಲ್ಲ. ಹಾಗೇ ನನ್ನ ಗೆಂಡೇಹಳ್ಳಿ ಜೀವನ ಕೂಡ. ಈ ಪುಸ್ತಕ ಓದುವಾಗ, ಅನಾಥನಾಗಿ ನಮ್ಮ ಮನೆಗೆ ಬಂದು ಸೇರಿದ್ದ ಒಕ್ಕಣ್ಣ ರಮೇಶ, ದೋಬಿ ಮಣಿ ಕುಟುಂಬ, ಅಜ್ಜಿ ಸಾಯುವವರೆಗೆ ಮನೆಯಲ್ಲಿರುತ್ತಿದ್ದ ರುದ್ರಿ, ಅಂಗಡಿ ಅಪ್ಪಣ್ಣ ಶೆಟ್ರು, ಊರಿಗೇ ಸಾಲ ಕೊಡುತ್ತಿದ್ದ ಮಲ್ಲಕ್ಕ, ಮಂಜ, ಮೊಗಣ್ಣ ಮುಂತಾದವರೂ ಪಾತ್ರದಾರಿಗಳಾಗಿ ಬರುತ್ತಾರೆ. ಅತ್ತ ಪೇಟೆಯೂ ಅಲ್ಲದ, ಹಳ್ಳಿಯೂ ಅಲ್ಲದ ಅರೆ ಮಲೆನಾಡು ಊರಿನಲ್ಲಿ ಅಂಟಿಯೂಕೊಳ್ಳದ, ಬಿಟ್ಟೂ ಹೋಗದ ಕೊಂಡಿಯದು.

ರಶೀದರ ಕಥೆಗಳು ಹೆಚ್ಚಾಗಿ ಕೊಡಗು ಮತ್ತು ಬಂಟ್ವಾಳದ ಸುತ್ತ ಮುತ್ತ ಓಡಾಡಿವೆ ಎಂದು ಅನಿಸಿತು. ಮೊದಲ ಕಥೆ, ಅವರ ಆತ್ಮಕಥೆ ಎಂದೇ ಅನ್ನಿಸಿದರೂ, ಉಳಿದ ಕಥೆಗಳಲ್ಲಿ ಬರುವ ಪಾತ್ರಗಳು, ಮಲೆನಾಡಿನಲ್ಲಿ ಬೆಳೆದವರಿಗೆ ತಮ್ಮ ಸುತ್ತ ಮುತ್ತಲೇ ಓಡಾಡುತ್ತಿರುವ ಒಬ್ಬರಂತೆ ಅನ್ನಿಸುತ್ತದೆ. ಕಥೆ ಓದುವುದಕ್ಕಿಂತ, ಅದರಲ್ಲಿ ಬದುಕಿಂದಂತೆ ಅನ್ನಿಸುತ್ತದೆ. ಕೊಡಗಿನ ಪರಿಚಯವಿದ್ದವರಿಗೆ ಕೇಶವನ್ ನಾಯರ್‌ ಆಗಲೀ, ರುಕ್ಮಿಣಿ ರೈಟರ್‌ ಆಗಲಿ ಹೊರಗಿನವರು ಅಂತ ಅನ್ನಿಸೋದಿಲ್ಲ. ಮೂಸಾ ಮೊಯಿಲಿಯಾರರ ಮುದ್ದಿನ ಮಗಳಂತೂ, ಮಲೆನಾಡು ಮತ್ತು ಕರಾವಳಿಯಲ್ಲಿ ಹೊಸಕಿ ಹೋದ ಎಷ್ಟೋ ಕನಸುಗಳಲ್ಲಿ ಒಂದು ಎಂದೆನಿಸುತ್ತದೆ. ಎಷ್ಟೋ ನವಿರಾದ ಸಂಬಂಧಗಳು, ಯೌವ್ವನದ ಅಸ್ಪಷ್ಟ ಉಮೇದುಗಳು, ಆಡದೇ ಉಳಿದುಕೊಳ್ಳುವ ಮಾತುಗಳು, ಶಿಕಾರಿಗಳು… ಹೀಗೆ ಇಪ್ಪತ್ತಮೂರು ಕಥೆಗಳನ್ನು ಒಂದೊಂದೇ ಓದುತ್ತಾ ಹೋದಂತೆ, ನನ್ನ ಜೀವನದಲ್ಲಿ ಬಿಡಿಸಿಕೊಂಡಿದ್ದ ಎಷ್ಟೋ ಕೊಂಡಿಗಳು ಬಂದು ಸೇರಿಕೊಳ್ಳಲಾರಂಭಿಸಿದವು ಎಂದು ಅನಿಸಲಾರಂಭಿಸಿತು.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು, ನಮ್ಮ ಮನೆಯಲ್ಲೇ ಬೆಳೆದು, ತನ್ನ ತಂಗಿಗೆ ಮದುವೆ ಮಾಡುವ ಜವಾಬ್ದಾರಿ ಮುಗಿಸಿ, ತನ್ನ ಜೀವನ ನೋಡಿಕೊಂಡು ಕಣ್ಮರೆಯಾದ ಶೌಕತ್‌, ತನ್ನ ತಂಗಿ ಬೇರೆ ಹುಡುಗನ ಜೊತೆ ಓಡಿಹೋದಳೆಂದು ನೊಂದು, ಎಷ್ಟೇ ಸಮಾಧಾನ ಹೇಳಿದರೂ ಕೇಳದೆ ಊರು ಬಿಟ್ಟ ಅಶ್ರಫ್‌, ನಮ್ಮ ಮನೆಗೆ ಸಂಬಂಧ ಪಡದ ಎಷ್ಟೋ ಕುಟುಂಬಗಳು ಈ ಪುಸ್ತಕವನ್ನು ಓದುವಾಗ ಬಿಡಿಬಿಡಯಾಗಿ ನೆನಪಿಗೆ ಬಂದು, ಹೊತ್ತು, ಗೊತ್ತಿಲ್ಲದೆ ಕಾಡಲಾರಂಬಿಸಿದವು.

ಇದಕ್ಕೆಲ್ಲ ಕಾರಣರಾದ ಅಬ್ದುಲ್‌ ರಶೀದ್‌ ಅವರಿಗೆ ಥ್ಯಾಂಕ್ಸ್‌ ಹೇಳಬೇಕಷ್ಟೆ...

ಮಾಕೋನಹಳ್ಳಿ ವಿನಯ್ ಮಾಧವ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಅಬ್ದುಲ್ ರಶೀದ್ ಲೇಖಕ ಪರಿಚಯ ಇಲ್ಲಿದೆ...
ಹೊತ್ತು ಗೊತ್ತಿಲ್ಲದ ಕಥೆಗಳು ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

 

MORE FEATURES

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...