ಮಧುರಗಣಪರು ಕಾಸರಗೋಡಿನ ಕವಿ ಪರಂಪರೆಗೆ ಹೆಮ್ಮೆಯ ಕೊಡುಗೆ : ಪಿ.ಎನ್.ಮೂಡಿತ್ತಾಯ


''ಮಧುರಕಾನನ ಗಣಪತಿ ಭಟ್ಟರು, ಮಧುರಗಣಪ ಎಂಬ ಅಂಕಿತದಲ್ಲಿ ಬರೆದಿರುವ ಮುಕ್ತಕಗಳು ಕಾಲದ ಅಗತ್ಯವಲ್ಲದೆ ಬೇರಲ್ಲ, ಇವುಗಳನ್ನು ನೀವು ಸೂಕ್ಷ್ಮವಾಗಿ ಗ್ರಹಿಸಿದರೆ ಗೊತ್ತಾಗುತ್ತದೆ-ಯಾರನ್ನಾದರೂ ಗೇಲಿ ಮಾಡುವುದು, ಮಾತಾಡಿ ಅವಹೇಳನ ಮಾಡುವುದು'', ಎನ್ನುತ್ತಾರೆ ಉಪನ್ಯಾಸಕ ಪಿ.ಎನ್.ಮೂಡಿತ್ತಾಯ. ಅವರು ಲೇಖಕ ಮಧುರಕಾನನ ಗಣಪತಿ ಭಟ್ಟ ಅವರ 'ಮಧುರ ಗಣಪನ ಮುಕ್ತಕಗಳು' ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಮುಕ್ತಕಗಳು ಗೊತ್ತಲ್ಲ. ನಾಲ್ಕು ಸಾಲುಗಳ ಈ ವಿಶಿಷ್ಟ ಕಾವ್ಯ ಪ್ರಕಾರಕ್ಕೆ ಮಹತ್ವದ ಕೊಡುಗೆ ಕೊಟ್ಟವರು ಡಿವಿಜಿ ಭಗವದ್ಗೀತೆಯನ್ನು ಜೀವನಧರ್ಮವಾಗಿಸಿಕೊಂಡ - ದ್ರಷ್ಟಾರ. ಇದೇ ಪ್ರಕಾರದಲ್ಲಿ ಅವರ ಪ್ರಭಾವದಿಂದ ತಪ್ಪಿಸಿಕೊಂಡು ರಚನೆ ಅಷ್ಟು ಸುಲಭವಲ್ಲ. ಮಧುರಕಾನನರು ಇದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ.

ಗೇಲಿಯನ್ನು ಮಾಡದಿರು ರೂಪ ವಿಕೃತಿಯದಿರಲು
ಹಾಲಿನಂದದಿ ಮನವು ಶುದ್ಧವಿರಬಹುದು
ತೇಲು ಮಾತಲ್ಲವರ ನಿಂದನೆಯು ಹಾನಿಕರ
ಬಾಲಗೋಪನು ಮುನವ ಮಧುರ ಗಣಪ

ಮಿತಿಯಿರಿಸಿ ಗಣಿಸದಿರು ತೂಗಿ ಪರರನ್ನಳೆದು
ಅತಿ ಘನರೆಯಿರಬಹುದು ಮೀರಿ ನಿನ್ನಳವ
ಮತಿಗೆ ಸಿಗದೆತ್ತರವು ಕಂಗಳಿಗಗೋಚರವು
ಹಿತವಲ್ಲವವಗಣನೆ ಮಧುರ ಗಣಪ

ಗಮನವಿಟ್ಟು ನೋಡಿದರೆ ಇಂತಹ ಮಾತು ಕಾಲದ ಅಗತ್ಯ ಎನಿಸುತ್ತದೆ. ಪ್ರಪಂಚಕ್ಕೆ ಮೊದಲ ಅದ್ಭುತ ಕೊಡುಗೆಯಾದ ವೇದ, ಪುರಾಣ, ಉಪನಿಷತ್ತು, ಭಗವದ್ಗೀತೆಗಳು ಹೇಳದೇ ಬಿಟ್ಟದ್ದೇನಿದೆ ಎಂದು ಯಾರಾದರೂ ಪ್ರಶ್ನಿಸಿದ್ದರೆ ನಂತರದ ಕವಿಗಳು ಯಾಕೆ ಬರೆಯಬೇಕಿತ್ತು ಎಂದೂ ಚಿಂತಿಸಬೇಡವೆ? ಅದಕ್ಕೆ, ಮಹಾತ್ಮರೂ ಅವತಾರಪುರುಷರೂ ಇಲ್ಲದಿರುವಾಗ ಬೆಳಕನ್ನು ಹಂಚುವ ಕೆಲಸವನ್ನು ಕವಿಗಳು ಕೈಗೊಳ್ಳುತ್ತಾರೆ ಎಂಬ ಮಾತು ಪ್ರಚಲಿತದಲ್ಲಿರುವುದು.

ಹೀಗೆ ಮಧುರಕಾನನ ಗಣಪತಿ ಭಟ್ಟರು ಮಧುರಗಣಪ ಎಂಬ ಅಂಕಿತದಲ್ಲಿ ಬರೆದಿರುವ ಮೇಲಿನೆರಡು ಮುಕ್ತಕಗಳು ಕಾಲದ ಅಗತ್ಯವಲ್ಲದೆ ಬೇರಲ್ಲ, ಇವುಗಳನ್ನು ನೀವು ಸೂಕ್ಷ್ಮವಾಗಿ ಗ್ರಹಿಸಿದರೆ ಗೊತ್ತಾಗುತ್ತದೆ-ಯಾರನ್ನಾದರೂ ಗೇಲಿ ಮಾಡುವುದು, ಮಾತಾಡಿ ಅವಹೇಳನ ಮಾಡುವುದು. ಸಾಮರ್ಥ್ಯವನ್ನು ತೂಗಿ ನೋಡಿಬಿಟ್ಟಿದ್ದೇನೆಂದು ಸಮರ್ಥಿಸಿಕೊಳ್ಳುವುದು ತುಂಬ ಅಪಾಯಕಾರಿ ಮಾತ್ರವಲ್ಲ, ಅದು ಮೂರ್ಖತನ ಕೂಡ, ಸಣ್ಣ ಮಾತುಗಳಲ್ಲಿ ದೊಡ್ಡ ಅರ್ಥ ಹುದುಗಿರುವ ಗಾದೆಗಳು, ಸೂಕ್ತಿ, ಹೇಳಿಕೆ, ಅಮೃತವಚನ, ಉದ್ದೃತ ಮುಂತಾಗಿ ಅನೇಕ ವಾಕ್ಯಾರ್ಥಗಳಿವೆ.

ಹನಿಗವನಗಳೂ ಇದೇ ಕೆಲಸ ಮಾಡುತ್ತವೆ. ಹೆಚ್ಚಾಗಿ ಭಾವಗೀತೆಗಳ ಕೊನೆಯ ಸಾಲೂ ಅಳಿಯದ ರಸಘಟ್ಟಿಗಳಾಗಿ ಇರುವುದರಿಂದ ಓದಿನ ತಲ್ಲೀನತೆಯನ್ನೂ ಹೆಚ್ಚಿಸುತ್ತವೆ. ಸ್ಮರಣೆಗೂ ಸರಕಾಗುತ್ತವೆ. ಇವನ್ನೆಲ್ಲ ನಾವು ಓದಿಸವಿದವರೇ ಹೌದು. ಆದರೆ ಇಂತಹ ಮುಕ್ತಕಗಳ ರಚನೆ ಅಷ್ಟು ಸುಲಭವಲ್ಲ.

ಸಮಾಜ- ಸಂಸ್ಕೃತಿ-ಕಲೆ- ಧರ್ಮ-ಮುಂತಾಗಿ ನೂರಾರು ವಿಷಯಗಳು ಅನಾವರಣಗೊಳ್ಳುತ್ತವೆ. ಪ್ರತಿಯೊಂದು ಚೌಪದಿಯೂ ಆಯಾ ಭಾವ ಗರಿಷ್ಟ ವಿಚಾರಗಳನ್ನು ಹೊರಹೊಮ್ಮಿಸುವಂತೆ ಕವಿ ಮಧುರಕಾನನ ರಚನೆ ಇದೆ. ಉಪದೇಶ, ಸಲಹೆ, ಅನುಭವ ಕಥನವೇ ಮುಂತಾಗಿ ವಿಭಿನ್ನ ನೋಟಗಳನ್ನು ಹೊಂದಿದ್ದು ಅರ್ಥ ಪೂರ್ಣ ಘಟಕವಾಗಿ ಸಂಕಲನದ ಮುಕ್ತಕಗಳು ಆಕರ್ಷಿಸುತ್ತವೆ. ದೇವರು, ಮನುಷ್ಯ, ಪ್ರಕೃತಿ, ಪ್ರಾಣಿಪಕ್ಷಿ ಮನಸ್ಸಿಗೆ ದಾಟುವಂತೆ, ದಾಟಿದ್ದು ನಾಟುವಂತೆ ಬರೆಯುವ ಕಲೆ ಇವರಿಗೆ ಸಿದ್ಧಿಸಿದೆ. “ಜಗವ ತೋರಿಸಿ ನಡೆಸಿದ ಮಾತೆ ಮಗುವಿನ ಮುಖದಲ್ಲಿ ನಗುವನ್ನು ಇರಿಸುವ ದೃಶ್ಯ, ತಾಯಿ, ಪತ್ನಿ ಮತ್ತು ಮಗಳು ಸರಣಿಯಲ್ಲಿರುವ ಸ್ತ್ರೀತ್ವದ ನೋಟ, ತುಳಿದರೆ ಕವಲೊಡೆಯುವ ಬಾಳೆಯಂಥ ಛಲ, ದುಡಿಯುವ ವ್ಯಕ್ತಿಗೆ ಬೇರೆ ವ್ಯಾಯಾಮದ ಅಗತ್ಯ ಇಲ್ಲವೆಂಬ ಸ್ವಾಸ್ಥ್ಯದ ಮಾತು, ನಿಜವನ್ನು ಮುಚ್ಚಿಟ್ಟರೆ ಮನಸ್ಸಿಗೆ ಭಾರ, ಸತ್ಕರ್ಮ ಮಾಡಿದ್ದರೆ ಹೊಗಳಿಕೆಯ ಅಗತ್ಯ ಇಲ್ಲದಿರುವುದು. ಪಾಯಸದ ಪಾತ್ರೆಯಲ್ಲಿರುವ ಸೌಟಿಗೆ ರುಚಿಯ ಅನುಭವ ತಟ್ಟದಿರುವುದೇ ಮುಂತಾದ ಪ್ರಸ್ತಾಪಗಳ ಹಿಂದಿನ ಮಾರ್ಮಿಕ ನೋಟಗಳು ಬೆಲೆಬಾಳುತ್ತವೆ.

ಅತಿಯಾಗಿ ಬಾಗುವ ಮರ ಕುಸಿದು ಬೀಳುವಂತೆ ಮನುಷ್ಯನೂ ಮಿತಿಮೀರಿ ತ ನಡೆದರೆ ತೊಂದರೆಗೀಡಾಗುತ್ತಾನೆ ಎಂಬುದರ ಸಂದೇಶವನ್ನು ಗಮನಿಸುವಾಗ ಪಾಶ್ಚಾತ್ಯ ಗಂಭೀರ ನಾಟಕಗಳ ನಾಯಕರಿಗೆ ಬಂದೊದಗುವ ದುರಂತಗಳ ನೆನಪಾಗಬೇಕು. ಅದಕ್ಕೆಲ್ಲ ಕಾರಣ ಗುಣಾಧಿಕ್ಯವೇ ಹೊರತು ದುರ್ಗುಣವಲ್ಲ. ಮುಕ್ತಕಕ್ಕೆ ದ್ವಿತೀಯಾಕ್ಷರ ಪ್ರಾಸ ಮತ್ತಿತರ ನಿಯಮಗಳಿವೆ. ಈ ಕೃತಿಕರ್ತ ಅದರ ಕುರಿತೇ ಒಂದೆರಡು ಮುಕ್ತಕಗಳನ್ನ ಕೊಡುತ್ತಾನೆ.

ಮುಕ್ತ ಸ್ವಾತಂತ್ರ್ಯವೆನಲದಕೊಂದು ನೀತಿಯಿರೆ
ಯುಕ್ತ ಹಂಚಿಕೆಯು ಕೊಡುಗೆಗಳಲ್ಲಿ ಸೂಕ್ತ
ತಕ್ಕ ಪದ ಬಳಕೆಯುಂ ಛಂದ ಕಾವ್ಯಂಗಳಿಗೆ
ಮುಕ್ತಕದಲಿರೆ ಪಠ್ಯ ಮಧುರ ಗಣಪ

ಇಂತಹ ಸಂಕೀರ್ಣ ರಚನೆಗಳನ್ನು ಓದುವವರಿಗೂ ಆಳವಾಗಿ ಚಿಂತಿಸುವ ಶಕ್ತಿ ಇರಬೇಕು. ಇಲ್ಲವಾದರೆ ಓದಿನಿಂದ ಅದೂ ದಕ್ಕುತ್ತದೆ. ಸಾಹಿತ್ಯ ರಚನೆಯ ಉದ್ದೇಶ ಇದುವೇ. ಅದು ಅಂತರಂಗಕ್ಕೆ ತಟ್ಟಬೇಕು. ಅದಕ್ಕೆ ಆರಾಮದ ಓದು ಸಹಕಾರಿ. ದುರಭ್ಯಾಸ, ದುಶ್ಚಟ, ದುರ್ಗುಣಗಳು ನಮ್ಮನ್ನಾಳುತ್ತವೆ. ಕ್ರಿಯೆಗಳ ಹಿಂದೆ ಇರುವ ಇಂತಹ ಪ್ರೇರಣೆಗಳನ್ನು ದಮನಿಸಿ ತಿದ್ದಿಕೊಳ್ಳುವುದು ಹೇಗೆ? ಸಾಹಿತಿ ಪತ್ನಿಸುವುದಿಲ್ಲ. ಉಪದೇಶವನ್ನೂ ಕೊಡುವುದಿಲ್ಲ ಬದಲಾಗಿ ಚಿಂತಿಸುವಂತೆ ಮಾಡುತ್ತಾನೆ ಅಷ್ಟೆ.

ಮಧುರಗಣಪ ಕಾಸರಗೋಡಿನ ಕವಿ ಪರಂಪರೆಗೆ ಹೆಮ್ಮೆಯ ಕೊಡುಗೆ, ಬದುಕಿನ ಅರಸಿ ಈ ನೆಲದಿಂದ ದೂರ ಇದ್ದರೂ ಈ ಮೂಲದವರೆ, ಕವನ ಸಂಕಲನಗಳನ್ನೂ ಕೊಟ್ಟು ಸಾಹಿತ್ಯಾಸಕ್ತರನ್ನು ಒಗ್ಗೂಡಿಸುತ್ತ ಬಂದಿರುವ ಶ್ರೀಯುತರು ನೆಲದಾಳದ జಲ ಸಂಶೋಧಿಸಿ ಜಲಮರುಪೂರಣ ಸಲಹೆಗಾರರಾಗಿಯೂ ಪ್ರವೀಣರು.

ಕವಿಕರ್ಮವೆನ್ನುವುದು ಪೂರ್ಣ ತನ್ಮಯತೆಯಲ್ಲಿ ಸಿದ್ಧಿಸುವ ಕಾಯಕ. ಅದು ಸ್ವಸ್ಥ ಪರಿಸರದ ಪ್ರಕ್ರಿಯೆ. ಮನದ ಕೊಳೆ ತೊಳೆಯಬಲ್ಲ ಇಂತಹ ಕೃಷಿ ಅದೇ ತಲ್ಲೀನತೆಯಿಂದ ಮೌನವಾಗಿ ಓದಿಸಿ ಸಹೃದಯರನ್ನು ತಟ್ಟಲೆಂದು ಆಶಿಸೋಣ.

- ಪಿ.ಎನ್.ಮೂಡಿತ್ತಾಯ

 

MORE FEATURES

ಪುಟ ತೆರೆದರೆ ಚೆಂದ ಚೆಂದದ ರೇಖಾಚಿತ್ರಗಳ ಅನಾವರಣ

29-12-2025 ಬೆಂಗಳೂರು

"ಲೇಖಕಿಯವರಿಗೆ ಅವರ ಮಗಳು ಕಾಳನನ್ನು ಗಂಟು ಹಾಕಿ ಗಂಡನ ಮನೆಗೆ ಹೋದಾಗ ಕಾಳನ ಬೆಪ್ಪುತನಗಳಿಂದ ತಲೆಚಿಟ್ಟು ಹಿಡಿದ ಲೇ...

ಈ ದೇಶದ ಮೂರನೆಯ ಒಂದು ಭಾಗ ಮಿಡಲ್ ಕ್ಲಾಸ್

29-12-2025 ಬೆಂಗಳೂರು

"ಎಲ್ಲರಿಗೂ ಅರ್ಥವಾಗುವ ಹಾಗೆ ಅಥವಾ ಮನೆ ಮಂದಿಯಲ್ಲೊಬ್ಬರಂತೆ ಸರಳ ಪದಗಳನ್ನೇ ಆರಿಸಿಕೊಂಡು ವಿವರಿಸಿ ಹೇಳುತ್ತಾರೆ. ...

ಬಾ ಕುವೆಂಪು ದರ್ಶನಕೆ; 210 ಪುಟಗಳ ಕೆನ್ವಾಸಿನಲ್ಲಿ ಕುವೆಂಪು ಕಾವ್ಯ ದರ್ಶನ

29-12-2025 ಬೆಂಗಳೂರು

ನರಹಳ್ಳಿಯವರು ಕುವೆಂಪು ಕಾವ್ಯದ ಭಾಗಗಳಿಗೆ ಕೊಡುವ ಶೀರ್ಷಿಕೆಗಳು  ಅರ್ಥಪೂರ್ಣ ಧ್ವನಿ ಪ್ರಚುರ ಆಗಿವೆ. ಇವು ಕುವೆಂಪ...