ಕಲಾವಿದ ಕನಸನ್ನು ಬೆನ್ನೆತ್ತಿದರೆ ಶ್ರೇಷ್ಠ ಕಲಾವಿದನಾಗಬಹುದು : ಡಾ. ರಾಜಪ್ಪ ದಳವಾಯಿ

Date: 01-12-2025

Location: ಕಲಬುರಗಿ


ಕಲಬುರಗಿ: ಅಪಾರ ಗುರು ಪರಂಪರೆ ಹೊಂದಿರುವ ದೇಶ ನಮ್ಮದು. ಕಲಾಲೋಕದಲ್ಲಿ ಯಶಸ್ವಿ ಸಾಧನೆಗೆ ಜ್ಞಾನ ಗಳಿಕೆ, ಸ್ವತಂತ್ರ ಚಿಂತನೆ ಮತ್ತು ಸೃಜನಶೀಲ ಮನಸ್ಸು ಮುಖ್ಯವಾಗುತ್ತವೆ. ಗುರುವಿನ ಮಾರ್ಗದರ್ಶನದ ಜೊತೆಗೆ ಕನಸನ್ನು ಬೆನ್ನೆತ್ತಿ ಮುಂದೆ ಸಾಗಿದರೆ ಅತ್ಯುತ್ತಮ ಕಲಾವಿದನಾಗಿ ಬೆಳೆಯಬಹುದು ಎಂದು ಹಿರಿಯ ಸಾಹಿತಿ ಹಾಗೂ ರಂಗಕರ್ಮಿ ಡಾ. ರಾಜಪ್ಪ ದಳವಾಯಿ ಹೇಳಿದರು.

ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗಾಯಣದಲ್ಲಿ ಆಯೋಜಿಸಿದ 12ನೇ ಅಖಿಲ ಭಾರತ ವಾರ್ಷಿಕ ಕಲಾ ಪ್ರದರ್ಶನ-2025 ಉದ್ಘಾಟನೆ ಮತ್ತು ಚಿತ್ರ-ಶಿಲ್ಪಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಹಾಗೂ ಮಾರಾಟ, ದೃಶ್ಯ ಬೆಳಕು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕಲಬುರಗಿ ನೆಲೆ, ಭಾಷೆ, ಸಾಹಿತ್ಯ ಮತ್ತು ಕಲೆ ಶ್ರೇಷ್ಠತೆಯಿಂದ ಕೂಡಿದೆ. ಸೂಪಿ ಸಂತರು, ಶರಣರು, ದಾಸರು ಈ ನೆಲದ ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ವಿಭಿನ್ನ ಸಂಸ್ಕೃತಿ, ಕಲೆ, ಸಾಹಿತ್ಯ, ಶಿಲ್ಪಕಲೆ, ಚಿತ್ರಕಲೆ, ಬಿತ್ತಿಚಿತ್ರಗಳ ಕ್ಷೇತ್ರದಲ್ಲಿ ಈ ಭಾಗದ ಕಲಾವಿದರು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂದು ಪ್ರದರ್ಶನಗೊಂಡಿರುವ ಚಿತ್ರಗಳು ಅಮೂಲ್ಯ ಕಲಾಕೃತಿಗಳಾಗಿವೆ. ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ಸಿಗಲಿದೆ ಎಂದರು. ಇದೇ ಭಾಗದ ಶಂಕರರಾವ್ ಆಳಂದಕರ್, ಡಾ. ಎಸ್. ಎಂ. ಪಂಡಿತ್, ಶಾಂತಲಿಂಗಪ್ಪ ಪಾಟೀಲ್, ಧನಂಜಯ ಶಿಲ್ಪಿ ಮುಂತಾದವರು ದೃಶ್ಯಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿ. ಟಿ. ಕಾಂಬಳೆ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಕಲಾ ಜಗತ್ತಿಗೆ ಕಲ್ಯಾಣ ಕರ್ನಾಟಕ ಬಾಗದ ಅನೇಕ ಕಲಾ ಸಂಘಟನೆಗಳ ಕೊಡುಗೆ ಅಪಾರವಿದೆ. ಕರ್ನಾಟಕದ ಕಲಾವಿದರ ಜೊತೆಗೆ ಪಶ್ಚಿಮ ಬಂಗಾಳ, ಲಕ್ನೋ, ಹೈದ್ರಾಬಾದ, ಮಹರಾಷ್ಟç ರಾಜ್ಯಗಳ ಕಲಾವಿದರನ್ನು ಆಹ್ವಾನಿಸಿ ಪ್ರದರ್ಶನ ಆಯೋಜಿಸಿರುವ ದೃಶ್ಯಬೆಳಕು ಸಂಸ್ಥೆ ಕೆಲಸ ಸಾರ್ಥಕವಾಗಿದೆ.

ಕಲಾಕ್ಷೇತ್ರ ಮತ್ತು ಕಲಾವಿದರನ್ನು ಜನರ ಮುಂದೆ ತರುವ ದೃಶ್ಯಬೆಳಕು ಸಂಸ್ಥೆ ಕೆಲಸಕ್ಕೆ ಸಮಾಜದ ಬೆಂಬಲ ಮತ್ತು ಪ್ರೋತ್ಸಾಹ ಸಿಗಬೇಕು ಎಂದರು.

ದೃಶ್ಯ ಬೆಳಕು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೇಷ್ಠ ಹಾಗೂ ಹಿರಿಯ ಚಿತ್ರ ಕಲಾವಿದ ವಿ.ಬಿ. ಬಿರಾದಾರ ದೃಶ್ಯಬೆಳಕು ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ದೃಶ್ಯ ಮತ್ತು ಬಣ್ಣಗಳು ಸದಾ ಸ್ಪೂರ್ತಿ ನೀಡುತ್ತವೆ. ಚಿತ್ರಕಲೆಗಳಲ್ಲಿನ ಸೌಂದರ್ಯ ನೋಡುಗರ ಗಮನಸೆಳೆಯುತ್ತವೆ. ಆದ್ದರಿಂದ ಕಲಾವಿದರು ತಪಸ್ಸಿನಂತೆ ಕೆಲಸ ಮಾಡಬೇಕು. ಕಲಾವಿದರಿಗೆ ಪ್ರಶಸ್ತಿ ದೊರೆತಿರುವುದು ಮತ್ತಷ್ಟು ಸಾಧನೆಗೆ ಪ್ರೇರಣೆ ಸಿಕ್ಕಂತಾಗುತ್ತದೆ ಎಂದರು.

ಹಿರಿಯ ಕಲಾವಿದ ಬಸವರಾಜ ಉಪ್ಪಿನ ಅದ್ಯಕ್ಷತೆ ವಹಿಸಿ ಮಾತನಾಡಿದರು. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಡಾ. ಪರಶುರಾಮ ಪಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸತತ ೧೨ ವರ್ಷಗಳಿಂದ ದೃಶ್ಯಬೆಳಕು ಸಂಸ್ಥೆ ಮೂಲಕ ಹಲವು ಪ್ರಶಸ್ತಿಗಳನ್ನು ಕಲಾವಿದರಿಗೆ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಪ್ರತಿ ವರ್ಷ ವಿಭಿನ್ನ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯುವ ಕಲಾವಿದರಿಗೆ ಸಾಹಿತ್ಯದ ಜೊತೆಗೆ ವಿಚಾರ ಸಂಕಿರಣ, ಚಿತ್ರ ಶಿಬಿರ, ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಕಾರ್ಯಗಾರ ಮತ್ತು ಪೋಟೋಗ್ರಫಿ ತರಬೇತಿಗಳನ್ನು ನಡೆಸಲಾಗುತ್ತಿದೆ. ೧೨ನೇ ಅಖಿಲ ಬಾರತ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಒಟ್ಟು ಹತ್ತು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.

ಈ ಸಾಲಿನ 12ನೆಯ ಅಖಿಲ್ ಭಾರತ ವಾರ್ಷಿಕ ‘ದೃಶ್ಯಬೆಳಕು’ ಪ್ರಶಸ್ತಿಯನ್ನು ಬಿಪುಲ್ ರಾಯ್ (ಪಶ್ಚಿಮ ಬಂಗಾಳ), ಮೇಘಾ ಆರ್. (ಕಲಬುರಗಿ), ಪ್ರೇಮಕುಮಾರ ಕೆ. (ದಾವಣಗೆರೆ), ಅಜಂ ಕೊಡದೂರ (ಕಲಬುರಗಿ), ಜಾಹ್ನವಿ ಉಪಧ್ಯಾಯ ಕೆ. (ಉಡುಪಿ), ಪ್ರಶಾಂತಕುಮಾರ (ಯಾದಗಿರಿ) ಇವರಿಗೆ ನೀಡಲಾಯಿತು. ವಿವಿಧ ಸ್ಮಾರಕ ಪ್ರಶಸ್ತಿಗಳನ್ನು ಅಕ್ಷಯ ಭಟ್ (ಬೆಂಗಳೂರು), ರಿಯಾಜ್ ಅಹ್ಮದ್ (ಬಾಗಲಕೋಟೆ), ಸೌಂದರ್ಯ ಲಕ್ಷö್ಮಣ ಬನಸೊಡೆ (ಬೆಳಗಾವಿ) ಮತ್ತು ಪವನ್ ಎಂ. ನಾಯಕ್ (ಧಾರವಾಡ) ಇವರಿಗೆ ನೀಡಲಾಯಿತು

ಕಾರ್ಯಕ್ರಮದ ನಂತರ ದೃಶ್ಯಬೆಳಕು ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ವಿ.ಬಿ ಬಿರಾದಾರ ಇವರಿಂದ ಭಾವಚಿತ್ರ ಪ್ರಾತ್ಯಕ್ಷಿಕೆ ನಡೆಯಿತು. ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಮತ್ತು ಸಂಗಡಿಗರು ವಚನ ಗಾಯನ ಮತ್ತು ರಂಗಗೀತೆಗಳನ್ನು ಪ್ರಸ್ತುತಿ ಪಡಿಸಿದರು. ಡಾ. ಸಂತೋಷ್ ಕಂಬಾರ ಪ್ರಶಸ್ತಿ ಪುರಷ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಡಾ. ಎ. ಎಸ್. ಪಾಟೀಲ್, ನಾರಾಯಣ ಬೋಸಾವಳೆ, ಶರಣು ಪಟ್ಟಣಶೆಟ್ಟಿ, ಎಲ್. ಎನ್. ಮನೋಕರ, ಬಾಬುರಾವ್ ಹೆಚ್. ಅಂಬಾರಾಯ ಚಿನ್ನಮಳ್ಳಿ, ಪ್ರೊ. ಕೆ. ಲಿಂಗಪ್ಪ, ರಂಗಕರ್ಮಿ ಶಂಕ್ರಯ್ಯ ಆರ್. ಘಂಟಿ, ಡಾ. ಕೆ.ಎಂ. ಕುಮಾರಸ್ವಾಮಿ, ಡಾ. ಮಲ್ಲಕಾರ್ಜುನ ಬಾಗೋಡಿ, ಗಿರೀಶ್ ಕುಲಕರ್ಣಿ, ಶಾಂತಲಾ ನಿಷ್ಠಿ, ಚಿತ್ರಲೇಖಾ ಪಾಟೀಲ್, ಸುರೇಖಾ ಪವಾರ್, ಸೂರ್ಯಕಾಂತ ನಂದೂರ ಇನ್ನು ಮುಂತಾದವರಿದ್ದರು.

 

 

 

 

 

 

 

 

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...