ಕಾಲಾಂತರದಲ್ಲಿ ಸಿದ್ಧಲಿಂಗಯ್ಯ


ಸಿದ್ಧಲಿಂಗಯ್ಯನವರು ನನ್ನಿಷ್ಟದ ಕವಿ. ವಾರಕ್ಕೊಂದು ಸಲ ಅವರ ಪದ್ಯಗಳನ್ನು ಓದುವ ನನಗೆ, ಅವರ ರಾಜಕೀಯ ಜೀವನದ ಬಗ್ಗೆ ಯಾರೋ ಮಾತನಾಡುವಾಗ ಅವರು ಅನುಭವಿಸಿದ ನೋವುಗಳು ನೆನಪಾಗುತ್ತದೆ’ ಎನ್ನುತ್ತಾರೆ ಅವರ ವಿದ್ಯಾರ್ಥಿಯೂ ಆದ ಕವಿ, ಲೇಖಕ ಹುಲಿಕುಂಟೆ ಮೂರ್ತಿ. ಸಿದ್ಧಲಿಂಗಯ್ಯ ಅವರ ಕಾವ್ಯದ ಶಕ್ತಿ ಮತ್ತು ಒಡನಾಟದ ನೆನಪುಗಳನ್ನುಅವರು ಹಂಚಿಕೊಂಡಿದ್ದಾರೆ.

ನಾನು ಸಾಮಾಜಿಕ ವಾಸ್ತವಗಳನ್ನು ಅರಿಯಲು ಶುರು ಮಾಡಿದಾಗಿನಿಂದ ಕವಿ ಸಿದ್ಧಲಿಂಗಯ್ಯನವರ ಬಗೆಗಿನ ನನ್ನ ಗ್ರಹಿಕೆಯನ್ನು ಬಹಳಷ್ಟು ಸಲ ಬದಲಿಸಿಕೊಂಡಿದ್ದೇನೆ. ಅವರಿಗಾಗಿ ಗೆಳೆಯ ಗೆಳತಿಯರೊಂದಿಗೆ ಜಗಳ ಮಾಡಿಕೊಂಡಿದ್ದೇನೆ. ಅವರ ಪದ್ಯಗಳನ್ನು ದುರ್ಬಲತೆಯನ್ನು ಮೀರುವ ಮಾತ್ರೆಗಳ ಹಾಗೆ ಓದಿಕೊಂಡು ಗಟ್ಟಿಯಾಗಿದ್ದೇನೆ; ಹಗುರಾಗಿದ್ದೇನೆ. ಅವರೊಂದಿಗೆ ಹಲವಾರು ಕವಿಗೋಷ್ಟಿಗಳಲ್ಲಿ ಪದ್ಯ ಓದಿದ್ದೇನೆ. ಅವರೊಂದಿಗೆ ಟೀ ಕುಡಿಯುವ, ಊಟ ಮಾಡುವ ಸಂದರ್ಭಗಳಲ್ಲಿ ಹತ್ತಿರದ ಬಂಧು ಹಾಗೆ ಭಾವುಣಿಕೆಗೆ ಒಳಗಾಗಿದ್ದೇನೆ; ಅವರ ಜೋಕುಗಳಿಗೆ ಮನಸಾರೆ ನಕ್ಕಿದ್ದೇನೆ.

ಸುಮಾರು ಹದಿನೈದು ವರ್ಷಗಳ ಹಿಂದೆ ಬಹುಜನ ವಿದ್ಯಾರ್ಥಿ ಸಂಘ (ಆಗ ಅದರ ಹೆಸರು ಬಹುಜನ ಸ್ಟೂಡೆಂಟ್ ಫೆಡರೇಷನ್ ಆಗಿತ್ತು) ಶಿಬಿರವೊಂದಕ್ಕೆ ಹೋಗಿ ಬಂದಿದ್ದೆ. ಬಂದ ಎರಡು ಮೂರು ದಿನಗಳಲ್ಲಿ ಮಂಜುನಾಥ ಅದ್ದೆಯವರ ಊರಿನಲ್ಲಿ ಉಳಿಯಬೇಕಿದ್ದ ಕಾರಣಕ್ಕೆ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದೆ. ಕ್ಯಾಂಪಿನಲ್ಲಿ ಸಿದ್ಧಲಿಂಗಯ್ಯ ಅವರನ್ನು ‘ದಕಡಾಸಿ’ ಅಂತ ಗೇಲಿ ಮಾಡಿದ್ದನ್ನು ಅದ್ದೆಯವರಿಗೆ ಹೇಳಿ ಓ.ರಾಜಣ್ಣ ಸರ್ಯಾಗಿ ಚಚ್ಚಿದ್ರು ಅಂತ ಸಂಭ್ರಮಿಸಿದ್ದೆ. ಅದ್ದೆ ಕೋಪ ಮಾಡಿಕೊಂಡರು. ‘ಸಿದ್ಲಿಂಗಯ್ಯ ಅಂದ್ರೆ ಏನಂದ್ಕಂಡವ್ರೆ ಇವ್ರೆಲ್ಲಾ..? ಆ ಮನುಷ್ಯ ಹತ್ತು ವರ್ಷಗಳಲ್ಲಿ ಬದುಕಿದ್ದನ್ನು ಇವರೆಲ್ಲಾ ನೂರು ವರ್ಷ ಆದ್ರೂ ಬದುಕೋಕೆ ಆಗಲ್ಲ; ಕಡಿಮೆ ತ್ಯಾಗ ಮಾಡಿದಾರೆ ಅಂದ್ಕಂಡಿದ್ಯಾ ಮೂರ್ತಿ..?’ ಅಂದು ಎಪ್ಪತ್ತರ ದಶಕದ ಕತೆ ಹೇಳತೊಡಗಿದರು. ಊರು ತಲುಪುವಷ್ಟರಲ್ಲಿ ಸಿದ್ಧಲಿಂಗಯ್ಯನವರ ಮೂಲಕ ದಸಂಸ ಹೋರಾಟದ ಅನನ್ಯತೆ ಪರಿಚಯವಾಗಿತ್ತು.

ಡಿಗ್ರಿ ಕೊನೆಯ ವರ್ಷದಲ್ಲಿದ್ದಾಗ ಬೆಂಗಳೂರು ವಿವಿಯಲ್ಲಿ ನಡೆದ ಎನ್‍ಎಸ್‍ಎಸ್ ರಾಷ್ಟ್ರಮಟ್ಟದ ಶಿಬಿರಕ್ಕೆ ಹೋಗಲು ಮೇಷ್ಟ್ರು ಎಂಜಿಸಿ ಕೇಳಿದಾಗ ಪ್ರಿಪ್ರೆಟರಿ ಎಕ್ಸಾಂ ಇಂದ ತಪ್ಪಿಸಿಕೊಳ್ಳಲು ಒಳ್ಳೆಯ ಅವಕಾಶವೆಂದು ಒಪ್ಪಿ ಹೊರಟೆ. ಶಿಬಿರದ ಉದ್ಘಾಟನೆಗೆ ಬಂದ ಸಿದ್ಧಲಿಂಗಯ್ಯನವರು ಆ ದಿನ ಶಿಬಿರಾರ್ಥಿಗಳಿಗೆ ತಮ್ಮ ಕೈಯಾರೆ ಊಟ ಬಡಿಸಿದರು. ನನ್ನ ನಮಸ್ಕಾರ ಸ್ವೀಕರಿಸಿ ಒಂದು ಪೂರಿ ಜಾಸ್ತಿ ಹಾಕಿದ್ದರು. ಅವರಿಗೆ ನನ್ನನ್ನು ನೋಡಿ ಅವರ ಡಿಗ್ರಿ ದಿನಗಳು ನೆನಪಾಗಿರಬೇಕು. ನಾನೂ ಅವರ ಹಾಗೇ ಇದ್ದೆ. ಆ ನಂತರ ಡಿ.ಆರ್.ನಾಗರಾಜ್ ನೆನಪಿನ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರಕ್ಕೆ ಬಂದವರು ಮಂಜುನಾಥ ಅದ್ದೆಯವರು ನನ್ನನ್ನು ಪರಿಚಯಿಸಿದಾಗ ‘ಒಳ್ಳೇದು’ ಅಂದು ನಕ್ಕಿದ್ದರು.

ಡಿಗ್ರಿ ಮುಗಿಸಿ ಸಮಾಜಶಾಸ್ತ್ರ ಎಂ.ಎ ಓದಲು ಬೆಂಗಳೂರು ವಿವಿಗೆ ಅಪ್ಲಿಕೇಶನ್ ಹಾಕಿ ಸೀಟು ಸಿಗದೆ ದೇಶದ ತುಂಬಾ ಓಡಾಡಿದ ನಂತರ ಊರಲ್ಲಿರುವುದು ಕಷ್ವವಾಗಿ ಕೆಲಸ ಹುಡುಕುವ ಹಾಗೆಯೇ ಕನ್ನಡ ಎಂ.ಎ ಗೆ ಅರ್ಜಿ ಹಾಕಿದ್ದೆ. ಜ್ಞಾನಭಾರತಿಯಲ್ಲಿ ಎಂ.ಎ ಸೀಟು ಸಿಕ್ಕರೆ ಎರಡು ವರ್ಷ ಹಾಸ್ಟೆಲ್ ಸಿಕ್ಕಿ ಊಟಕ್ಕೆ ಉಳಿಯೋಕೆ ತೊಂದರೆ ಆಗಲ್ಲ ಅನ್ನೋದು ನನ್ನ ವಿದ್ಯಾಭ್ಯಾಸದ ಗುಟ್ಟಾಗಿತ್ತು. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಸಿದ್ಧಲಿಂಗಯ್ಯ ಅವರಿಗೆ ಒಂದು ಸೀಟು ಕೊಡಲು ಅದ್ದೆ ಸರ್ ಮತ್ತು ಜೇಪಿ ಸರ್ ಅವರಿಂದ ಹೇಳಿಸಿದ್ದೆ. ಆದರೆ, ಅವರು ಅಲ್ಲಿ ಅಸಹಾಯಕರಾಗಿದ್ದರು. ಸೀಟುಗಳೆಲ್ಲಾ ಮುಗಿದ ನಂತರವೂ ಅವರ ಛೇಂಬರ್ ಸುತ್ತಲೇ ಓಡಾಡುತ್ತಿದ್ದವನಿಗೆ ಎನ್‍ಎಸ್‍ಎಸ್ ಸೂಪರ್ ನ್ಯೂಮರಿ ಕೋಟಾದಲ್ಲಿ ಟ್ರೈ ಮಾಡಬಹುದು ಅಂದರು. ಒಂದೂವರೆ ತಿಂಗಳು ಕಾದ ಮೇಲೆ ಅಲ್ಲಿಯೂ ನನಗಿಂತ ಒಂದೇ ಒಂದು ಅಂಕ ಮುಂದೆ ಇರುವ ವಿದ್ಯಾರ್ಥಿಯೊಬ್ಬನಿಗೆ ಸೀಟು ಹೋಯಿತು. ಸಿದ್ಧಲಿಂಗಯ್ಯನವರಿಗೆ ಅದ್ದೆ ಸರ್ ಮಾತು ನೆನಪಾಗಿ ಪೆಚ್ಚುಮೋರೆ ಹಾಕಿದರು. ಕೆಲ ನಿಮಿಷಗಳಲ್ಲಿ ಅಡ್ಮಿಷನ್ ಫಾರ್ಮ್‍ಗೆ ಸೈನ್ ಹಾಕುವಾಗ ಆ ಹುಡುಗ ‘ಸಾರ್ ಬಿಎಡ್ ಗೆ ಅರ್ಜಿ ಹಾಕಿದೀನಿ; ಅಲ್ಲಿ ಸಿಕ್ಕರೆ ಮಾರ್ಕ್ಸ್ ಕಾರ್ಡ್ ವಾಪಸ್ ಕೊಡ್ತೀರಾ..’ ಅಂತ ಕೇಳಿದ್ದೇ ತಡ ಅವನ ಕೈಯಿಂದ ಅಡ್ಮಿಷನ್ ಫಾರ್ಮ್ ಪಟಕ್ ಅಂತ ಕಿತ್ತು ನನ್ನ ಕೈಗಿತ್ತು ನಕ್ಕರು.

ಟೈಮ್ ಟೇಬಲ್ಲಿನಲ್ಲಿ ಅವರ ಕ್ಲಾಸಿದ್ದರೂ ಅದನ್ನು ಕೀರಂ ಅವರೇ ಮಾಡುತ್ತಿದ್ದುದರಿಂದ ಕವಿಗಳ ಪಾಠ ಕೇಳುವ ಅದೃಷ್ಟ ಸಿಗಲಿಲ್ಲ; ಕಂಪ್ಯಾರಿಟೀವ್ ಸ್ಟಡೀಸ್ ನಲ್ಲಿ ನಾವು ಹದಿಮೂರು ಜನ ಮಾತ್ರ ಇದ್ದೆವು. ಯಾರೂ ಇಲ್ಲದಾಗ ‘ಸಾರ್ ನಿಮ್ಮ ಕ್ಲಾಸ್ ಇತ್ತು’ ಅಂತ ಚೇಂಬರ್ ಇಣುಕಿದರೆ ಒಳಗೆ ಕರೆದು ಇದ್ದ ಹದಿಮೂರು ಜನಕ್ಕೆ ಕಾಫಿ ತರಿಸಿ ಸಂಬಂಧವೇ ಇಲ್ಲದ ‘ಜನಪದ ಕ್ಷೇತ್ರಾಧ್ಯಯನ, ವ್ಯಾಸ ಭಾರತ ಪಠಣ’ ಕುರಿತು ಮಾತಾಡುತ್ತಿದ್ದರು. ಎರಡು ವರ್ಷಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಅವರ ಛೇಂಬರಿನಲ್ಲಿ ಕಾಫಿ ಕುಡಿಯುವ ಭಾಗ್ಯ ಸಿಕ್ಕಿತ್ತು. ದ್ವಿತೀಯ ಎಂ.ಎ ನಲ್ಲಿ ‘ಮಂಟೇಸ್ವಾಮಿ ಕಾವ್ಯದಲ್ಲಿ ಜಾತಿ’ ಕುರಿತ ಡೆಸರ್ಟೇಶನ್ ಮಾಡುವಾಗ ಅಟೆಂಡೆನ್ಸ್ ಪ್ರಕಾರ ನನಗೆ ಸಿದ್ಧಲಿಂಗಯ್ಯನವರೇ ಗೈಡ್ ಆಗಿದ್ದರು. ಒಂದು ದಿನವೂ ಅವರೊಂದಿಗೆ ಮಾತಾಡಲು ಸಮಯ ಸಿಗಲಿಲ್ಲ; ಬಂಜಗೆರೆ ಜಯಪ್ರಕಾಶ್ ಸರ್ ಮಾರ್ಗದರ್ಶನದಲ್ಲಿ ಅಧ್ಯಯನ ಮುಗಿಸಿ ಪ್ರಿಂಟ್ ಮಾಡಿಸಿದಾಗ ‘ನನಗೊಂದು ಪರ್ಸನಲ್ ಕಾಪಿ ತಂದ್ಕೊಡಿ’ ಅಂದಿದ್ದರು; ಕೊಟ್ಟಾಗ ಬೇಡವೆಂದರೂ ಇನ್ನೂರು ರೂ.ಗಳನ್ನು ಕೈಗೆ ತುರುಕಿದ್ದರು. ಇದನ್ನು ನೋಡಿ ಗೆಳೆಯ ಗೆಳತಿಯರು ಹೊಟ್ಟೆಕಿಚ್ಚು ಪಟ್ಟಿದ್ದರು.

ಇದೇ ವರ್ಷ ಇಂದ್ರಜಿತ್ ಲಂಕೇಶ್ ಪತ್ರಿಕೆಯಲ್ಲಿ ‘ವಿಕೃತ ಕಾಮಿ ಸಿದ್ಧಲಿಂಗಯ್ಯ’ ಅಂತ ಒಂದು ವರದಿ ಪ್ರಕಟವಾಯಿತು. ಪತ್ರಿಕೆಯ ವಿರುದ್ಧ ಹಾಸ್ಟೆಲ್ ಹುಡುಗರೆಲ್ಲಾ ಪ್ರತಿಭಟನೆ ಮಾಡಿದೆವು. ಸಿ.ಪ್ರಕಾಶ್ ಹೊರತರುತ್ತಿದ್ದ ‘ಲೀಡರ್’ ಅನ್ನುವ ಪತ್ರಿಕೆಯಲ್ಲಿ ನಾನು ‘ಯಾವುದು ವಿಕೃತಿ’ ಅನ್ನುವ ಟೈಟಲ್ಲಿನ ಲೇಖನವೊಂದನ್ನು ಬರೆದಿದ್ದೆ. ದೂರು ಕೊಟ್ಟವರು ಮತ್ತು ಸಿದ್ಧಲಿಂಗಯ್ಯನವರ ನಡುವಿನ ಸಂಬಂಧ, ಲಂಕೇಶ್ ಪತ್ರಿಕೆಯ ವರದಿಯ ಪೂರ್ವಾಗ್ರಹ, ದೂರಿನ ಸುಳ್ಳುಗಳನ್ನು ಕುರಿತು ವಿಸ್ತೃತವಾಗಿ ಬರೆದಿದ್ದನ್ನು ಸಿದ್ಧಲಿಂಗಯ್ಯನವರಿಗೆ ತೋರಿಸಿದ್ದೆ. ಅವರು ಖುಷಿಪಟ್ಟರೂ ಆ ಕಾರಣದಿಂದ ನನ್ನ ಇಂಟರ್ನಲ್ಸ್ ಕಡಿಮೆ ಬರುವುದನ್ನು ಅವರಿಂದ ತಪ್ಪಿಸಲಾಗಲಿಲ್ಲ.

ಇದಾದ ಮೇಲೆ ಅವರು ನನ್ನನ್ನು ನೆನಪಿಟ್ಟುಕೊಂಡರು. ಸಿಕ್ಕಾಗ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮನೆಗೆ, ಆಫೀಸಿಗೆ ಹೋದಾಗ ಟೀ ತರಿಸಿಕೊಡುತ್ತಿದ್ದರು. ರಾತ್ರಿ ಸಭೆಗಳಲ್ಲಿ ನನ್ನ ಕೈಯಲ್ಲಿ ಗ್ಲಾಸು ಇಲ್ಲದ್ದನ್ನು ಕಂಡು ‘ಪದ್ಯ ಹೇಗ್ ಬರೀತೀರಿ’ ಅಂತ ಕಿಚಾಯಿಸುತ್ತಿದ್ದರು. ಯಾರೋ ಅವರ ಬಗ್ಗೆ ಕೆಟ್ಟದಾಗಿ ಫೇಸ್‍ಬುಕ್ಕಿನಲ್ಲಿ ಬರೆದಾಗ ಅದೆಲ್ಲಾ ಅರ್ಥವಾಗದವರಂತೆ ಮುಗ್ಧವಾಗಿ ನಗುತ್ತಿದ್ದರು. ಕವಿಗೋಷ್ಟಿಗಳಲ್ಲಿ ಪ್ರಾರಂಭಕ್ಕೆ ಮೊದಲು ವೇದಿಕೆ ಹಿಂದಕ್ಕೆ ಹೋಗಿ ಹೊಟ್ಟೆಗೆ ಇನುಸುಲಿನ್ ಚುಚ್ಚಿಕೊಂಡು ಕರೆದು ತೋರಿಸುತ್ತಾ ತಮಾಷೆ ಮಾಡುತ್ತಿದ್ದರು. ಅವರು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳ ಲೆಕ್ಕ ಹೇಳುತ್ತಿದ್ದರು. ಅವರು ಹೋಗುವ ಮುಂಚೆ ಒಂದೂವರೆ ತಿಂಗಳ ಹಿಂದೆ ಎರಡು ಸಲ ಸಿಕ್ಕವರು ಚೆನ್ನೈಗೆ ಹೋಗಿ ಬಂದ್ಬುಡ್ತಿನಿ ಒಂದು ಆಪರೇಷನ್ ಇದೆ. ಆಮೇಲೆ ಆರಾಮು ಅಂದರು. ಆಸ್ಪತ್ರೆಯಲ್ಲಿ ಅವರ ಮೃತ ದೇಹ ಹಕ್ಕಿಯ ಹಾಗೆ ಕಂಡು ಅಳು ಒತ್ತರಿಸಿಕೊಂಡು ಬಂತು.

ಸಿದ್ಧಲಿಂಗಯ್ಯನವರು ನನ್ನಿಷ್ಟದ ಕವಿ. ವಾರಕ್ಕೊಂದು ಸಲ ಅವರ ಪದ್ಯಗಳನ್ನು ಓದುವ ನನಗೆ, ಅವರ ರಾಜಕೀಯ ಜೀವನದ ಬಗ್ಗೆ ಯಾರೋ ಮಾತನಾಡುವಾಗ ಅವರು ಅನುಭವಿಸಿದ ನೋವುಗಳು ನೆನಪಾಗುತ್ತದೆ. ಡಿಎಸ್‍ಎಸ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅದನ್ನು ಕಟ್ಟಿ ಬೆಳೆಸಿದವರು ಹಸಿದುಕೊಂಡು ಸಂಘಟನೆ ಕಟ್ಟಿದರು. ಒಂದು ಬನ್ ಸಿಕ್ಕರೆ ಇಬ್ಬರು ಹಂಚಿ ತಿನ್ನುತ್ತಿದ್ದರಂತೆ. ಅವರಿಗೆ ಕೈತುಂಬಾ ಸಂಬಳ ಬಂದು ಒಳ್ಳೆಯ ಊಟ ಮಾಡಬೇಕಾದ ಹೊತ್ತಿಗೆ ಖಾಯಲೆಗಳು ಮುತ್ತಿಕೊಂಡಿದ್ದವು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಒಂದು ಮನೆ, ಒಂದಿಷ್ಟು ಜಮೀನು.. ಅವರು ಸಂಪಾದಿಸಿದ್ದು. ಅದಕ್ಕಿಂತಲೂ ಹೆಚ್ಚೆಂದರೆ, ಇನ್ಯಾರೂ ಸಂಪಾದಿಸಲಾಗದ ಪ್ರತಿಭಟನಾತ್ಮಕ ಕಾವ್ಯದ ಮಾದರಿಯನ್ನು ಕನ್ನಡಕ್ಕೆ ಕೊಟ್ಟವರು ಸಿದ್ಧಲಿಂಗಯ್ಯ. ಅವರು ಸತ್ತಿದ್ದಾರೆ ಎಂದರೆ ಕನ್ನಡ ಕಾವ್ಯಕ್ಕೆ ಮಾಡಿದ ಅಪಮಾನ.

 

MORE FEATURES

ವೆಬ್‌ ಸಿರೀಸ್ ಕಥೆಯೊಂದನ್ನು ಕಾದಂಬರಿಯ ಮುಖಾಂತರ ನಿಮ್ಮ ಮುಂದಿಟ್ಟಿದ್ದೇನೆ: ಭಗೀರಥ

01-05-2024 ಬೆಂಗಳೂರು

‘ಕಲೆ ಎಂಬುದನ್ನು ವಿಸ್ತರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಅವಳಿ ಸಹೋದರರಾದ ಸಾಹಿತ್ಯ ಕ್ಷೇತ್ರ ಮತ್ತು ಸಿನಿಮಾ ಜ...

ಹೊಸ ತಲೆಮಾರಿಗಾಗಿ ‘ಅಮರ ಚಿಂತನೆ’ ಪುಸ್ತಕವನ್ನು ರೂಪಿಸಲಾಗಿದೆ

01-05-2024 ಬೆಂಗಳೂರು

'ಹೊಸ ತಲೆಮಾರಿನ ಯುವ ಮನಸುಗಳು ಹಾಗೂ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಪುಸ್ತಕವನ್ನು ರೂಪಿಸಲಾಗಿದೆ. ಇ...

ದೀರ್ಘವಾದ ಬರವಣಿಗೆಯೂ ಸರಾಗವಾಗಿ ಓದಿಸಿಕೊಳ್ಳುತ್ತದೆ: ಎಲ್.ಸಿ .ಸುಮಿತ್ರಾ

01-05-2024 ಬೆಂಗಳೂರು

ಇಪ್ಪತ್ತೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಲೇಖಕಿಯರ ಸಂಘದ ಒಂದು ದಿನದ ಸಾವಣ ದುರ್ಗ ಪ್ರವಾಸದಲ್ಲಿ ಮೊದಲು ಉಷಾ ಅವರನ್ನ...