ಕನ್ನಡ ಕಾವ್ಯಲೋಕದ ಸರಣಿ ಸಂವಾದ ಕಾರ್ಯಕ್ರಮ ಕುರಿತ ಲೇಖನ

Date: 18-01-2024

Location: ಬೆಂಗಳೂರು


"ಶಿವಮೊಗ್ಗದ ಕ.ರಾ.ಮ.ದೌ.ವಿ.ಒಕ್ಕೂಟದ ವತಿಯಿಂದ ನಡೆದ ಕನ್ನಡ ಕಾವ್ಯಲೋಕದ ಸರಣಿ ಸಂವಾದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದ ಒಳನೋಟದ ಕುರಿತು ರೇಶ್ಮಾ ಗುಳೇದಗುಡ್ಡಾಕರ್ ಅವರು ಬರೆದಿರುವ ಲೇಖನವಿದು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ತತ್ವದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ."

ಬಸವಣ್ಣನವರ ಈ ವಚನ ಜ್ಞಾನ, ಸತ್ಯ ಮತ್ತು ಶರಣರ ಸಂಗದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಓದು, ಬರಹ, ಆರೋಗ್ಯಕರ ಚರ್ಚೆ, ಸಮಾನ ಮನಗಳ ಜೊತೆ ಸಂವಾದ ಎಲ್ಲವು ಒಂದು ಹೊಸ ಆಲೋಚನೆಗೆ ನಾಂದಿಯಾಗುತ್ತದೆ.

ಅಂತೆಯೇ ಜ. 15ನೇ ಸೋಮವಾರದಂದು, ಶಿವಮೊಗ್ಗ ಕ.ರಾ.ಮ.ದೌ.ವಿ.ಒಕ್ಕೂಟದ ವತಿಯಿಂದ ನಡೆದ ಕನ್ನಡ ಕಾವ್ಯಲೋಕದ ಸರಣಿ ಸಂವಾದ ಕಾರ್ಯಕ್ರಮವು, ಪಂಪ ಮತ್ತು ಆತನ ಜೀವನ ಹಾಗೂ ಆತನ ಬರಹದ ಬಗ್ಗೆ ಹೊಸ ಬೆಳಕನ್ನು ಚೆಲ್ಲಿತು.

ಈ ಬೆಳಕಿಗೆ ನಂದಾದೀಪವನ್ನು ಹೊತ್ತಿಸಿದವರು ಹಿರಿಯ ಕವಿ ಬರಹಗಾರ್ತಿ ಸ. ಉಷಾ ಮೇಡಂ ಹಾಗೂ ಮಂಜಪ್ಪ ಸರ್ ಅವರು.

ಕಾರ್ಯಕ್ರಮಕ್ಕೆ ಮೊದಲು ಪ್ರಾಸ್ತಾವಿಕ ಭಾಷಣವನ್ನು ಕೃತಿ ಪುರಪ್ಪೆಮನೆಯವರು ಮಾಡಿದರು. ಈ ಸರಣಿ ಯಾಕೆ ನಡೆಸಬೇಕು? ಇದರಿಂದಾಗುವ ಉಪಯೋಗ ಏನು? ಎಂಬ ಪ್ರಶ್ನೆಗೆ, ಒಟ್ಟು ಸೇರಿ ಪರಸ್ಪರವಾಗುವ, ಬೌದ್ಧಿಕವಾಗಿ ಬೆಳೆಯುವ ಅಗತ್ಯಗಳೂ ಸೇರಿದಂತೆ ಹಲವು ಅಂಶಗಳನ್ನು ಕೃತಿಯವರು ಪ್ರಾಸ್ತವಿಕ ಮಾತುಕತೆಯಲ್ಲಿ ವಿವರಿಸಿದ್ದರು.

ನಂತರ ಸ. ಉಷಾ ಮೇಡಂ ಅವರಿಂದ ಹಳೆಗನ್ನಡವು ಶರಾವತಿ ನದಿಯಂತೆ ಭೋರ್ಗರೆದು ನಿರ್ಗಳವಾಗಿ ಹರಿಯುತ್ತಾ ಪಂಪನನ್ನು ಎಳೆ ಎಳೆಯಾಗಿ ನಮ್ಮ ಮನಗಳಿಗೆ ಸೇರಿಸಿದರು.

ಪಂಪನ ಜೀವನ ವೃತ್ತಾಂತ ಮತ್ತು ಅವನ ಬರಹಗಳ ಮೇಲೆ ಅವು ಎಷ್ಟು ಪ್ರಭಾವಿತವಾಗಿದ್ದವು ಎಂಬ ಕುತೂಹಲಕಾರಿ ಅಂಶಗಳನ್ನು ಬಹಳಷ್ಟು ವಿವರವಾಗಿ ವಿವರಿಸಿದರು.

ಪಂಪನನ್ನು ಮೊದಲ ಬಾರಿಗೆ ಕನ್ನಡ ಲೋಕಕ್ಕೆ ಪರಿಚಯಿಸಿದವರು ಬಿ ಎಲ್ ರೈಸ್. ತನ್ನ ಬರಹಗಳಲ್ಲಿ ಕಾಣುವ ಅಪರೂಪದ ಪರಿಸರ ಪ್ರೀತಿ, ಮಹಾಬಳನಾಗಿ ಪುನರ್ಜನ್ಮ ವಾಗಿ ಮತ್ತೆ ಬರೆದ ಕಥನಗಳು ಇವೆಲ್ಲವೂ ಮತ್ತು ಪಂಪನಿಗೆ ಜೈನ ಧರ್ಮದದಿಂದ ಆದ ಕೆಲವು ಪ್ರಭಾವಗಳು, ಅವನ ಕಾವ್ಯಗಳಲ್ಲಿ ಹೇಗೆ ಬಿಂಬಿಂಬಿತವಾದವೆಂಬುದನ್ನು ವಿವರಿಸಿದರು. ನಿಸಾರ್ ಅಹಮದ್ ಅವರ "ಎಲ್ಲರೊಳಗಿದ್ದು ಎಲ್ಲರಂತಾಗದ" ಕವಿತೆಯ ಸಾರದಂತೆ ಪಂಪನು ಸಹ ಆ ಕಾಲದಲ್ಲಿಯೂ ಹಲವಾರು ಒತ್ತಡಗಳನ್ನು ಎದುರಿಸಿದ್ದಾನೆ, ಕವಿ ಯಾವಾಗಲೂ ಆ ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತಾನೆ. ಅದರಿಂದ ಆಚೆಗೆ ಅವನನ್ನು ವಿವರಿಸಲು ಅಸಾಧ್ಯ, ಆಗಿನ ಕಟ್ಟುಪಾಡುಗಳು ಆಗಿನ ಒತ್ತಡಗಳು ಪ್ರತಿಯೊಬ್ಬ ಕವಿಗೂ ಕಾಡುತ್ತಲೇ ಇರುತ್ತವೆ. ಅದನ್ನ ಮೀರುತ್ತಲೇ ಆತ ಕೆಲಸ ಮಾಡುತ್ತಾನೆ ಎಂದು ತಿಳಿಸಿದರು.

ಮತ್ತು ಜೈನ ಧರ್ಮದ ಪ್ರಭಾವದಿಂದ ಅವು ಜೈನ ಧರ್ಮದಲ್ಲಿ ಸರಸ್ವತಿ ಎಂದರೆ ಹೆಣ್ಣಲ್ಲ, ಮಾತೇ ಸರಸ್ವತಿ, ಮಾತು ಎಂಬುದು ಬಹು ಪ್ರಬಲವಾದ ಒಂದು ಶಕ್ತಿ ಎಂಬುದನ್ನು ಪಂಪನ ಕಾಲದಲ್ಲಿ ನಿಶ್ಚಿತವಾಗಿದೆ, ಈಗ ನಾವು ಅದನ್ನು ಗೊತ್ತಿದ್ದರೂ ಕಡೆಗಣಿಸಿ ಮಾತಿಂದಲೇ ಹಲವಾರು ರೀತಿಯ ಕೆಲಸಗಳನ್ನು ಸಾಮಾಜಿಕವಾಗಿ ವೈಯಕ್ತಿಕವಾಗಿ ಎದುರಾಳಿಯಾಗಿ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಸಿದರು. ಹಾಗೂ creative liberty ಪಂಪ ಹೇಗೆ ಬಳಸಿದ ಅದರಿಂದ ಓದುಗಳಲ್ಲಿ ಆಗುವ ಪರಿಣಾಮಗಳೇನು ಎಂಬುದನ್ನು ವಿವರಿಸಿದರು.

ಪಂಪ ಭೋಗವನ್ನು ಹೇಗೆ ಗೌರವಿಸಿದ, ನಂತರ ವಿರಕ್ತಿಯ ಕಡೆಗೆ ಹೋಗಬಹುದೆನ್ನುವುದನ್ನು ಹೇಳಿ, ಅವನ ಧನಾತ್ಮಕ creative liberty, ಪರಿಸರ ಹಾಗೂ ಭಾವನಾತ್ಮಕ ಬರಹಗಳು ಓದುಗರಲ್ಲಿ ಒಂದು ಹೊಸ ಸಂಚಲನವನ್ನು ಉಂಟು ಮಾಡುತ್ತದೆ ಎಂದು ತಿಳಿಸಿದರು.

ಮಂಜಪ್ಪ ಸರ್ ಅವರು ಮಾತನಾಡಿ, ಪಂಪನ ಜನ್ಮಸ್ಥಳ ಆಂಧ್ರಪ್ರದೇಶವಾದರೂ ಅವರ ಪೂರ್ವಜರ ಊರು ಈಗಿನ ಅಣ್ಣಿಗೇರಿ ಎಂದು ವಿವರಿಸುತ್ತಾ ಬೇಟೆಯನ್ನು ಎಲ್ಲರೂ ಕಷ್ಟಕರ ಎಂದು ತಿಳಿದರೆ ಪಂಪನ ಬರಹಗಳಲ್ಲಿ ಬೇಟೆ ಎಂಬುದು ವಿನೋದಗಳ ರಾಜ ಎಂದು ಬಣ್ಣಿಸಿದ್ದಾನೆ ಎಂದು ತಿಳಿಸಿದರು,

ಹಲವಾರು ವಿಚಾರಗಳು ಇಲ್ಲಿ ಚರ್ಚೆ ಯಾದವು. ಚರ್ಚೆಯಲ್ಲಿ ರಾಮ,ಸೀತೆ, ಅಕ್ಕಮಹಾದೇವಿ ಇವರ ಬಗ್ಗೆಯೂ ಸಹ ಯುವಜನರ ಆಲೋಚನೆಗಳಲ್ಲಿ ಬಂದವು. ಪಂಪನಿಂದ ಆರಂಭವಾದ ಚರ್ಚೆ ರಾಮಾಯಣ ಮಹಾಭಾರತ ಹಾಗೂ ವಾಸ್ತವತೆಯತ್ತವು ತಿರುಗಿ ಹೆಣ್ಣಿನ ಕಣ್ನೋಟದಲ್ಲಿ ಪಂಪನನ್ನು ವಿವರಿಸಬೇಕೆಂಬ ಸಬಿತ ಬನ್ನಾಡಿ ಅವರ ಅಭಿಪ್ರಾಯ ಇದ್ದರೂ ಹೆಣ್ಣಿನ ಕಣ್ಣೋಟವನ್ನು ಮೀರಿ ಪಂಪನ ಬರಹ ಮತ್ತು ಚರ್ಚೆಗಳು ಹರಿದಾಡಿದವು. ವಾಸ್ತವ ಯಾವಾಗಲೂ ಯಾರ ಪರವಾಗಿಯೂ ಇರುವುದಿಲ್ಲ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ನಮ್ಮ ನಮ್ಮ ಚರ್ಚೆಗಳು ನಮ್ಮ ನಮ್ಮ ಸಂವಾದಗಳು ನಡೆಯುತ್ತಿವೆ ಎಂಬುವಂತೆ ಸಂವಾದ ಮುಕ್ತಾಯವಾಯಿತು.

ಪಲಾವ್ ಮೊಸರನ್ನ, ಕಾಳಿನ ಸಲಾಡ್, ಎಲ್ಲವೂ ಚರ್ಚೆಯಿಂದಾದ ಹಸಿವನ್ನು ತಣಿಸಿದವು ಮುಂದಿನ ಚರ್ಚೆ ಆನ್ಲೈನ್ ನಲ್ಲಿ ಅಥವಾ ನೇರ ವಿಡಿಯೋ ಎಂಬುದು ಇನ್ನು ನಿರ್ಧಾರವಾಗಲಿಲ್ಲ. ಚರ್ಚೆ ಸಂವಾದ ನಿರಂತರವಾಗಿ ಸಾಗಿ ಮತ್ತೊಂದು ಹೊಸ ಮುನ್ನುಡಿಯನ್ನು ಬರೆಯಲಿ ಎನ್ನುತ್ತಾ ಲೇಖನವನ್ನು ಮುಗಿಸುವೆ.

- ರೇಶ್ಮಾ ಗುಳೇದಗುಡ್ಡಾಕರ್, ಶಿವಮೊಗ್ಗ

MORE NEWS

ಕನ್ನಡ ಸಾಹಿತ್ಯ ಅಕಾಡೆಮಿಯ 2023-24ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ

05-12-2025 ಬೆಂಗಳೂರು

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ʻಗೌರವ ಪ್ರಶಸ್ತಿ 2024', ʻಸಾಹ...

ಡಿಸೆಂಬರ್ 6ರಿಂದ ಬೆಂಗಳೂರು ಸಾಹಿತ್ಯ ಉತ್ಸವ

05-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...

ಸಾಹಿತ್ಯದಿಂದ ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನಿಕೆ ನಿರ್ವಚನ; ಭೀಮಾಶಂಕರ ಬಿರಾದಾರ

03-12-2025 ಬೆಂಗಳೂರು

ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...