ಕನ್ನಡದ ಮುನ್ನೋಟ ಎಂಬುದು ನುಡಿ ಬೆಳವಣಿಗೆಯನ್ನು ಕುರಿತ ಸಂಕಥನವಾಗಿದೆ


‘ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತುಪಡಿಸಿ ಚಿಂತಿಸಲು ಆಗುವುದಿಲ್ಲ’ ಎನ್ನುತ್ತಾರೆ ಮೇಟಿ ಮಲ್ಲಿಕಾರ್ಜುನ. ಅವರು ‘ನಾವು ನಮ್ಮ ನುಡಿ’ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

ನುಡಿ, ಶಿಕ್ಷಣ, ಸಮಾಜ, ಚಿಂತನೆ ಮತ್ತು ನುಡಿತತ್ವದ ವಿಭಿನ್ನ ಆಯಾಮಗಳನ್ನು ಕುರಿತು ಬರೆದ ಬರಹಗಳ ಸಂಗ್ರಹ ಈ ಹೊತ್ತಗೆ. ನುಡಿಯನ್ನು ನೆಲೆಯಾಗಿಸಿಕೊಂಡು ಯೋಚಿಸುವ ಬಗೆಗಳು ಮತ್ತು ನೋಟಕ್ರಮಗಳು ಇಲ್ಲಿ ಮೈದಾಳಿವೆ. ನಮ್ಮ ಸಮುದಾಯಗಳ ಬದುಕಿನ ಕ್ರಮಗಳನ್ನು ಅರಿಯುವಲ್ಲಿ ನುಡಿಯೊಂದು ಹೇಗೆ ನಮಗೆ ಒತ್ತಾಸೆಯಾಗುತ್ತದೆ ಮತ್ತು ಸಾಮಾಜಿಕ ಅಸ್ಮಿತೆಯನ್ನು ನಿರ್ವಹಿಸುವ ನಮ್ಮ ಸಾಂಸ್ಕೃತಿಕ ರಾಜಕಾರಣ ಎಂತಹದು ಎನ್ನುವುದನ್ನು ಮನಗಾಣಲು ಈ ಬರಹಗಳು ಪ್ರಯತ್ನಿಸುತ್ತವೆ. ಈ ಬರಹಗಳ ಮೂಲಕ ರೂಪುಗೊಂಡಿರುವ ನುಡಿ ತಾತ್ವಿಕತೆ ಕಳೆದ ಎರಡ್ಮೂರು ವರುಷಗಳ ಅವಧಿಯಲ್ಲಿ ಮೈದಾಳಿದೆ. ಹಲವು ಸನ್ನಿವೇಶ ಹಾಗೂ ವಿಭಿನ್ನ ತಾತ್ವಿಕ ಹಿನ್ನಲೆಗಳಲ್ಲಿ ಇಲ್ಲಿಯ ಬರಹಗಳನ್ನು ರೂಪಿಸಲಾಗಿದೆ. ಹಾಗಾಗಿ ಕೆಲವು ವೈರುಧ್ಯಗಳು ಮತ್ತು ವಿರೋಧಭಾಸಗಳು ಇಲ್ಲಿ ತಲೆಯೆತ್ತಿರಲು ಸಾಧ್ಯ. ಇದಕ್ಕೆ ಹೊರತಾಗಿಯೂ ಕನ್ನಡ ನುಡಿ ಮತ್ತು ಶಿಕ್ಷಣ ಕುರಿತ ಚಿಂತನೆಯೊಂದು ಈ ಸಂಗ್ರಹದಲ್ಲಿ ನೆಲೆಪಡೆದಿದೆ ಎಂಬುದು ನನ್ನ ಬಲವಾದ ನಂಬಿಕೆ. ಶಿಕ್ಷಣ ಹಾಗೂ ಭಾಷೆಯನ್ನು ವಿಶ್ಲೇಷಿಸುವ ವಿಧಾನಗಳನ್ನು ನಿಭಾಯಿಸಿದ ರೀತಿ ಮತ್ತು ಅವುಗಳ ಸ್ವರೂಪವನ್ನು ಅರಿಯುವ ಬಗೆಯೇ ಈ ಹೊತ್ತಗೆಯ ಗುರಿಯಾಗಿದೆ.

ಶಿಕ್ಷಣ ಮಾಧ್ಯಮ ಹಾಗೂ ಶಿಕ್ಷಣದಲ್ಲಿ ಇಂಗ್ಲಿಶು ನುಡಿ ಬಳಕೆಯ ಸುತ್ತುವರೆದ ನಮ್ಮ ಚರ್ಚೆಗಳನ್ನು, ಶೈಕ್ಷಣಿಕ ಆಶೋತ್ತರಗಳನ್ನು ಪೂರೈಸುವ ತಾತ್ವಿಕತೆಗೆ ಪೂರಕವಾಗಿ, ನಾವು ಭಾಷಿಕ ತಾತ್ವಿಕತೆಗಳನ್ನು ಹೇಗೆ ವಿವರಿಸಿಕೊಳ್ಳುತ್ತೇವೆ? ಈ ಭಾಷಿಕ ತಾತ್ವಿಕತೆಯ ಮೂಲಕ ನಮ್ಮ ದೈನಂದಿನ ಬದುಕಿಗೆ ಅವಶ್ಯವಾಗಿರುವ ಕೌಶಲಗಳನ್ನು ಹೇಗೆ ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸಲು ಸಾಧ್ಯ? ಕ್ರಿಟಿಕಲ್ ಥಿಂಕಿಂಗ್ ಎನ್ನುವ ಗ್ರಹಿಕೆಯ ವ್ಯಾಪ್ತಿಯನ್ನು ವಿದ್ಯಾರ್ಥಿಗಳಲ್ಲಿ ಅಡಕಗೊಳಿಸುವ ಭಾಷಿಕ ವಿನ್ಯಾಸಗಳು ಎಂತಹವು? ಜ್ಞಾನ ಮೀಮಾಂಸೆಗೂ ನುಡಿಗೂ ಇರುವ ಸಂಬಂಧ ಎಂತಹದು? ಯಾವುದೇ ಒಂದು ವಿಷಯ ಇಲ್ಲವೇ ಅಧ್ಯಯನಶಿಸ್ತಿನ ಎಪಿಸ್ಟಿಮಾಲಜಿಯನ್ನು ರೂಪಿಸುವುದು ಹೇಗೆ? ಭಾಷೆಗೂ ಎಪಿಸ್ಟಿಮಾಲಜಿಗೂ ಯಾವ ಬಗೆಯ ನಂಟಸ್ತಿಕೆ ಇರುತ್ತದೆ ಎನ್ನುವ ತಾತ್ವಿಕ ವಿನ್ಯಾಸಗಳನ್ನು ಅರಿಯುವುದಾದರೂ ಹೇಗೆ? ವಿಷಯ ಕಲಿಕೆ ಮತ್ತು ಸಾಂಸ್ಕೃತಿಕ ತಿಳಿವಿಗೆ ಸಂಬಂಧಿಸಿದ ಸಂಗತಿಗಳನ್ನು ಪ್ರಚುರಪಡಿಸುವಲ್ಲಿ ಭಾಷೆ ಹೇಗೆ ಒತ್ತಾಸೆಗೆ ಬರುತ್ತದೆ? ತಾಯ್ನುಡಿ ಕಲಿಕೆ ಮತ್ತು ಎರಡನೇ (ಇಂಗ್ಲಿಶು) ನುಡಿ ಕಲಿಕೆಗೆ ಸಂಬಂಧಿಸಿದ ಭಾಷಿಕ ಸಾಮಗ್ರಿಗಳ ಸ್ವರೂಪವೆಂತಹದು? ಇವೆರಡೂ ನುಡಿಗಳನ್ನು ಕಲಿಯುವ ಹಾಗೂ ಕಲಿಸುವ ಪ್ರಕ್ರಿಯೆಯಲ್ಲಿ ಸಾಮ್ಯತೆಗಳು ಮತ್ತು ವ್ಯತ್ಯಾಸಗಳನ್ನು ಅರಿಯುವುದಕ್ಕೆ, ಯಾವ ಬಗೆಯ ಮಾನದಂಡಗಳನ್ನು ರೂಪಿಸಲಾಗಿದೆ? ಒಟ್ಟಿನಲ್ಲಿ, ಪೆಡಾಗಜಿ, ಪಠ್ಯಕ್ರಮ, ಪಠ್ಯವಿಷಯ ಮೊದಲಾದ ಮೂಲಭೂತ ಶೈಕ್ಷಣಿಕ ವಿನ್ಯಾಸಗಳನ್ನು ನಾವು ಹೇಗೆ ವ್ಯಾಖ್ಯಾನಿಸಿಕೊಂಡಿದ್ದೇವೆ? ಈ ವಿನ್ಯಾಸಗಳು ಕೇವಲ ನುಡಿ ಕಲಿಕೆಗೆ ಮಾತ್ರ ಸಂಬಂಧಿಸಿದ ಸಂಗತಿಗಳಲ್ಲ ಬದಲಾಗಿ ಇತರೆ ಜ್ಞಾನಶಿಸ್ತುಗಳ ಕಲಿಕೆಯ ಸನ್ನಿವೇಶದಲ್ಲಿ ನುಡಿ ಪಾತ್ರ ಎಂತಹದು ಎನ್ನುವುದನ್ನೂ ಪರಿಗಣಿಸಬೇಕಿದೆ. ತಿಳಿವು ಎನ್ನುವುದಕ್ಕೂ ಮಾಹಿತಿಗೂ ನಡುವೆ ಯಾವುದೇ ವ್ಯತ್ಯಾಸಗಳನ್ನು ಗುರುತಿಸದೇ, ನುಡಿ ಕಲಿಕೆ, ಸಾಹಿತ್ಯ, ವಿಜ್ಞಾನ, ಗಣಿತ ಮತ್ತು ಸಾಮಾಜಿಕ ಶಾಸ್ತ್ರಗಳ ಕಲಿಕೆ ಯಥೇಚ್ಛವಾಗಿ ಮುಂದುವರೆಯುತ್ತದೆ. ಕಲಿಕೆ ಮತ್ತು ಬೋಧನೆಗಳ ಸನ್ನಿವೇಶದಲ್ಲಿ ತಾತ್ವಿಕತೆ, ಪರಿಕಲ್ಪನೆ ಹಾಗೂ ಸಾಮಾಗ್ರಿಗಳ ಬಗೆಗಿನ ಚರ್ಚೆಗಳನ್ನು ಬೆಳೆಸುವುದೆಂದರೆ, ಅದು ಶಿಕ್ಷಣಕ್ಕೆ ಹೊರತಾದ ನೆಲೆಗಯಾಗಿ ಪರಿಣಮಿಸುತ್ತದೆ ಅನ್ನುವ ಹುಸಿ ನಂಬಿಕೆಯನ್ನು ಪ್ರಶ್ನಿಸುವ ನಿಲುವುಗಳು ಇಲ್ಲಿ ಮೈದಾಳಿವೆ.

ಕನ್ನಡದ ಮುನ್ನೋಟ ಎಂಬುದು ನುಡಿ ಬೆಳವಣಿಗೆಯನ್ನು ಕುರಿತ ಸಂಕಥನವಾಗಿದೆ. ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತುಪಡಿಸಿ ಚಿಂತಿಸಲು ಆಗುವುದಿಲ್ಲ. ಅವುಗಳನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡಬೇಕಾಗುತ್ತದೆ. ಯಾವುದೇ ನುಡಿ ತನ್ನಷ್ಟಕ್ಕೆ ತಾನೇ ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ ಅನ್ನುವುದನ್ನು ಈ ಮಾತು ಸಾಬೀತುಪಡಿಸುತ್ತದೆ. ಅದಕ್ಕಾಗಿಯೇ ನುಡಿ ಬೆಳವಣಿಗೆಗೆ ಬೇಕಾದ ನೀತಿ ಹಾಗೂ ಕ್ರಿಯಾ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಇವುಗಳನ್ನು ಹೇಗೆ ರೂಪಿಸಬೇಕು, ಈ ಪ್ರಕ್ರಿಯೆಯಲ್ಲಿ ಯಾರೆಲ್ಲ ಪಾಲ್ಗೊಳ್ಳಬೇಕು ಹಾಗೂ ಯಾವೆಲ್ಲ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ತಾತ್ವಿಕ ವಿನ್ಯಾಸಗಳನ್ನು ಪರಿಗಣಿಸಬೇಕು ಎಂಬೆಲ್ಲ ಸಂಗತಿಗಳು ಇಲ್ಲಿ ಮಹತ್ವದ್ದಾಗಿರುತ್ತವೆ.

ನುಡಿ ನೀತಿಯೆಂಬುದು ಅಂತಿಮವಾಗಿ ಸರಕಾರವೊಂದು ಕೈಗೊಳ್ಳುವ ರಾಜಕೀಯ ತೀರ್ಮಾನವೇ ಆದರೂ, ಈ ಪ್ರಕ್ರಿಯೆಯಲ್ಲಿ ಶಾಸಕಾಂಗದ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿರುತ್ತದೆ. ಆದರೆ ಇಂತಹ ನಿಲುವುಗಳನ್ನು ಪ್ರಭುತ್ವವು ಕೈಗೊಳ್ಳುವ ಮೊದಲು, ಆ ಕುರಿತು ನುಡಿ ಸಂಶೋಧಕರು, ಶೈಕ್ಷಣಿಕ ವಿದ್ವಾಂಸರು, ಶೈಕ್ಷಣಿಕ ಮನೋವಿಜ್ಞಾನಿಗಳು ಹಾಗೂ ಸಾಮಾಜಿಕ ಅನುಭವವನ್ನು ಹೊಂದಿರುವ ನ್ಯಾಯವಾದಿ ಮತ್ತು ಹೋರಾಟಗಾರರ ಜೊತೆಗೂಡಿ ಸಮಾಲೋಚನೆ ನಡೆಸಬೇಕಾಗುತ್ತದೆ. ಇಂತಹ ಫಲಿತಗಳನ್ನು ನೆಲೆಯಾಗಿಸಿಕೊಂಡು ನುಡಿ ನೀತಿ ಮತ್ತು ಯೋಜನೆಗೆ ಸಂಬಂಧಿಸಿದ ಒಂದೊಂದು ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಇಂತಹ ತೀರ್ಮಾನಗಳನ್ನು ಮರುಪರಿಶೀಲಿಸುವ ಹೊಣೆಗಾರಿಕೆ ಸರಕಾರಕ್ಕೆ ಸೆರಿದ್ದರೂ, ಈ ಮೇಲೆ ಹೇಳಿದ ಪರಿಣಿತ ಸಮೂಹಗಳ ತಿಳಿವನ್ನೇ ಆಧರಿಸಿಕೊಂಡು ಇವು ಮೈದಾಳುತ್ತವೆ. ದಿಟ ಈ ತಿಳಿವು ತನ್ನಷ್ಟಕ್ಕೆ ತಾನು ನುಡಿ ಯೋಜನೆ ಇಲ್ಲವೇ ನೀತಿಯನ್ನು ರೂಪಿಸಲಕ್ಕೆ ಒತ್ತಾಸೆಯಾಗಲಾರದು. ಆದರೆ ಅಂತಹ ಯೋಜನೆಗಳು ಒಳಗೊಳ್ಳಬಹುದಾದ ಶೈಕ್ಷಣಿಕ ತತ್ವ ಹಾಗೂ ಸಾಮಾಜಿಕ ವಿವೇಕದ ನೆಲೆಗಳನ್ನು ಮನವರಿಕೆ ಮಾಡಿ ಕೊಡುವುದಷ್ಟೇ ಅಲ್ಲದೆ, ಅವುಗಳಿಗೆ ಬೇಕಾಗಿರುವ ತಾತ್ವಿಕ-ಶೈಕ್ಷಣಿಕ ತಳಹದಿಯನ್ನೂ ಈ ತಿಳಿವು ಒದಗಿಸಿಕೊಡುತ್ತದೆ ಎನ್ನುವ ತಾತ್ವಿಕ ನಂಬಿಕೆಯಿಂದ ಈ ಹೊತ್ತಗೆಯ ಬರಹಗಳನ್ನು ಮಂಡಿಸುತ್ತೇನೆ.

ಆತ್ಮೀಯ ಗೆಳೆಯರಾದ ಡಾ. ಬಿ.ಎಲ್. ರಾಜು ಅವರು ಈ ಹೊತ್ತಗೆಗೆ ಆಪ್ತವಾದ ಬೆನ್ನುಡಿಯನ್ನು ಬರೆದಿರುತ್ತಾರೆ. ಇವರು ಈ ವಿಶ್ವಾಸಕ್ಕೆ ನನ್ನ ನಲುಮೆಯ ನನ್ನಿ. ನನ್ನ ಶೈಕ್ಷಣಿಕ ಕೆಲಸಗಳಿಗೆ ಬೆನ್ನೆಲಬಾಗಿರುವ ಸಂಗಾತಿ ಡಾ. ಎ. ಮಣಿಮೇಖಲೈ ಹಾಗೂ ಮಗಳು ಮೇಟಿ ಕಾರುಣ್ಯ, ನನ್ನವ್ವ ಶ್ರಿಮತಿ ಪಾರ್ವತೆವ್ವ ಅಣ್ಣ ಶ್ರಿ ಚನ್ನಬಸಪ್ಪ ಮೇಟಿ, ನನ್ನ ಅಕ್ಕ-ತಂಗಿಯರು ಮತ್ತು ತಮ್ಮಂದಿರು ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಇವರೆಲ್ಲರೂ ನನ್ನ ಭಾವ ಮತ್ತು ಗ್ರಹಿಕೆಯ ಮೂಲ ಚೈತನ್ಯವಾಗಿದ್ದಾರೆ. ನಿರಂತರವಾಗಿ ನನಗೆ ಕಲಿಸುತ್ತಿರುವ ನನ್ನ ಎಲ್ಲ ವಿದ್ಯಾರ್ಥಿ ಬಳಗ, ನನ್ನ ಮೇಷ್ಟ್ರು ಹಾಗೂ ನನ್ನ ಈ ಎಲ್ಲ ಲೇಖನಗಳನ್ನು ಪ್ರಕಟಿಸಿದ ಈದಿನ ಡಾಟ್ ಕಾಮ್, ಸಮಾಜಮುಖಿ, ಸಂವಾದ, ಹೊಸತು, ಪ್ರಜಾವಾಣಿ, ಹೊಸ ಮನುಷ್ಯ, ಸಂಗಾತ, ಮೊದಲಾದ ಪತ್ರಿಕೆಗಳ ಸಂಪಾದಕರಿಗೂ ನನ್ನ ಒಲವಿನ ನನ್ನಿ.

ಅಹರ್ನಿಶಿ ಪ್ರಕಾಶನದಿಂದ ಈ ಹೊತ್ತಗೆಯನ್ನು ಪ್ರಕಟಿಸಲು ಒತ್ತಾಸೆಯಾಗಿರುವ ಅಕ್ಷತಾ ಕೆ ಅವರಿಗೆ, ಅಂದವಾಗಿ ಮುಖಪುಟವನ್ನು ವಿನ್ಯಾಸಗೊಳಿಸಿದ ಅಪಾರ ಅವರಿಗೆ ಹಾಗೂ ಒಳಪುಟ ವಿನ್ಯಾಸ ಮಾಡಿದ ಶರತ್ ಹೆಚ್ ಕೆ ಅವರಿಗೆ ನನ್ನ ಮನದಾಳದ ನನ್ನಿ.

-ಮೇಟಿ ಮಲ್ಲಿಕಾರ್ಜುನ

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...