ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!


"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲಿ ಆಯ್ದುಕೊಂಡ ವಿಚಾರಗಳು ಮಸುಕಾಗುವುದೇ ಹೆಚ್ಚು," ಎನ್ನುತ್ತಾರೆ ಡಾ.ಎಚ್.ಎಸ್. ಸತ್ಯನಾರಾಯಣ. ಅವರು ತಮ್ಮ ‘ಮರ ಬರೆದ ರಂಗೋಲಿ’ ಹಾಯ್ಕುಗಳಿಗೆ ಬರೆದ ಲೇಖಕರ ಮಾತು ಇಲ್ಲಿದೆ.

ಎಡ ಬಲವಲ್ಲದ
ವ್ಯಕ್ತಮಧ್ಯವು
ನನ್ನ ಕವಿತೆ
ಪಂಥಗಳ ಹಂಗಿಲ್ಲದ
ಮುಕ್ತ ಛಂದ
ನನ್ನ ಕವಿತೆ

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ! ಯಾವ ಔಷಧದಿಂದಲೂ ಈ ರೋಗವನ್ನು ವಾಸಿ ಮಾಡಲಾಗದು. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಜಾಡ್ಯವಿದ್ದರೂ ಇರಬಹುದು. ಒಟ್ಟಿನಲ್ಲಿ ಕವಿತೆ ರಚನೆಯ ಚಟದಿಂದ ಬಿಡಿಸಿಕೊಳ್ಳಲಾಗದು. ಇದರ ಪರಿಣಾಮದಿಂದ ಈ ನನ್ನ ಹಾಯ್ಕುಗಳ ಸಂಕಲನವನ್ನು ಓದುಗರು ಸಹಿಸಿಕೊಳ್ಳ ಬೇಕಾಗಿದೆ. ಹಾಯ್ಕುಗಳನ್ನು ಬರೆಯಲು ಒಳಗಿನ ಒತ್ತಾಸೆಗಿಂತ ಹೊರಗಿನ ಪ್ರಭಾವವೇ ಹೆಚ್ಚು. ಮುನ್ನುಡಿ ಬರೆಯಲು, ಪುಸ್ತಕಗಳ ಬಿಡುಗಡೆಯಲ್ಲಿ ಮಾತಾಡಲು ಗೆಳೆಯರು ತಮ್ಮ ಹಾಯ್ಕುಗಳ ಸಂಕಲನಗಳನ್ನು ಕೊಟ್ಟು ಓದಿಸಿದ್ದು, ಹಾಯ್ಕುಗಳ ಬಗ್ಗೆ ಬರೆದದ್ದು ಮುಂತಾದವುಗಳು ಮನಸ್ಸನ್ನು ಈ ಕೆಲಸಕ್ಕೆ ಪ್ರೇರೇಪಿಸಿದೆ ಅನ್ನಿಸುತ್ತದೆ. ಒಟ್ಟಿನಲ್ಲಿ ಒಂದಾದ ಮೇಲೊಂದರಂತೆ ಬರೆಯುತ್ತಾ ಹೋದೆ. ಅದೀಗ ನಿಮ್ಮ ಮುಂದಿದೆ. ನಾನು ಕವಿ ಎನಿಸಿ ಕೊಳ್ಳಬೇಕೆಂಬ ಬಯಕೆಯನ್ನು ಹತ್ತಿಕ್ಕುವಲ್ಲಿ ವಿಫಲನಾದೆ. ನಿರಂತರವಾಗಿ ಕವಿತೆಯನ್ನು ಓದಿ ಆಸ್ವಾದಿಸುವ ನನಗೆ ಈ ರಚನೆಗಳ ಗುಣಮಟ್ಟದ ಅರಿವಿರುವುದರಿಂದ ಒಂದು ಬಗೆಯ ಹಿಂಜರಿಕೆ ಕಾಡುತ್ತಿದೆ. ಗೀಚಿದವರನ್ನೆಲ್ಲ ಕವಿಯೆಂದು ಮನ್ನಿಸುವ ಉದಾರತೆಯಿರುವ ಕನ್ನಡದ ಓದುಗರಲ್ಲಿ ತೀರ ಸಾಮಾನ್ಯರೆನಿಸಿರುವ ಹತ್ತು ಜನರಲ್ಲಿ ನಾನೂ ಒಬ್ಬನೆಂದು ಒಪ್ಪಿಕೊಂಡಾರೆಂಬ ಆಸೆಯಿದೆ.

ಜಪಾನಿ ಹಾಯ್ಕುಗಳೆಂಬ ಕಾವ್ಯ ಪ್ರಕಾರ ಭಾರತೀಯ ಭಾಷೆಗಳಲ್ಲಿ ಕಾಣಿಸಿಕೊಂಡು ಒಂದು ಶತಮಾನವೇ ಕಳೆದಿದೆ. ಕವಿ ಗುರು ರಬೀಂದ್ರನಾಥ ಟಾಗೋರರಿಂದ ಇವು ಭಾರತಕ್ಕೆ ಕಾಲಿಟ್ಟವು. ಎ.ಕೆ. ರಾಮಾನುಜನ್ ಮುಂತಾದವರು ತಮ್ಮ ಕಾವ್ಯ ರಚನೆಗಳಲ್ಲಿ ಹಾಯ್ಕು ಪ್ರಯೋಗಕ್ಕೂ ಸ್ಥಾನ ಕಲ್ಪಿಸಿದರಾದರೂ ಅಸಂಗತ ನಾಟಕಗಳಿಗೆ ಹೆಸರಾದ ಚಂದ್ರಕಾಂತ ಕುಸನೂರರು ಬರೆದ ಹೈಕುಗಳೇ ಅಧಿಕೃತವಾಗಿ ಕನ್ನಡದಲ್ಲಿ ಈ ಪ್ರಕಾರದ ಉದ್ಘಾಟನೆಗೆ ಮುನ್ನುಡಿ ಬರೆದವು. ಹಿರಿಯಕವಿ ಎಚ್‌. ಎಸ್. ಶಿವಪ್ರಕಾಶರು ಪ್ರತ್ಯೇಕವಾದ ಹೈಕುಗಳ ಸಂಕಲನ ತರದಿದ್ದರೂ ತಮ್ಮ ಕವಿತಾ ಸಂಕಲನದ ಮಧ್ಯೆ ಮಧ್ಯೆ ಅವರು ಕಾಣಿಸಿರುವ ಹೈಯ್ಕುಗಳು ಸ್ವತಂತ್ರವಾಗಿಯೂ ಸೊಗಸಾಗಿಯೂ ಇವೆ. ಈಗ ಹೈಕುಗಳನ್ನು ತುಂಬ ಚೆನ್ನಾಗಿ ಬರೆಯುವ ಅನೇಕ ಕವಿಗಳಿರುವುದನ್ನು ನಾನು ಬಲ್ಲೆ. ವೃಥಾ ಹೆಸರುಗಳ ಪಟ್ಟಿಯಾದೀತೆಂದು ಅವರನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಆದರೆ ಇವರೆಲ್ಲರ ಪ್ರಯತ್ನದಿಂದಾಗಿ ಹಾಯ್ಕು ಎಂಬ ಹೆಸರಿನ ಚರ್ಚೆ, ಅದರ ಅಕ್ಷರಗಳ ಚರ್ಚೆ, ಪಾದಗಳ ಚರ್ಚೆ ತಕ್ಕಮಟ್ಟಿಗೆ ಸಾಧ್ಯವಾಗಿದೆಯೆಂಬುದು ನಿಜ. ಹದಿನೇಳು ಅಕ್ಷರಗಳ ಈ ಕವಿತೆಗೆ ಪಾದಗಳನ್ನು ನಿಗದಿ ಇದರ ರಾಚನಿಕ ಸ್ವರೂಪದ ಖಚಿತತೆಯು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ ಅಕ್ಷರಗಳ ಲೆಕ್ಕಾಚಾರದಲ್ಲಿ ಆಯ್ದುಕೊಂಡ ವಿಚಾರಗಳು ಮಸುಕಾಗುವುದೇ ಹೆಚ್ಚು. ಸಾಂದ್ರತೆ ಹಾಯ್ಕುಗಳು ಬಯಸುವ ಮುಖ್ಯವಾದ ಗುಣ. ಅಲ್ಲದೆ, ಹದಿನೇಳು ಅಕ್ಷರಗಳನ್ನು ಐದು, ಏಳು, ಐದು ಅಕ್ಷರಗಳ ಮೂರು ಸಾಲನ್ನಾಗಿಸುವ ಕ್ರಮವೊಂದು ಈಗಾಗಲೇ ರೂಢಿಯಾಗಿದೆ. ಇದರ ಚೌಕಟ್ಟಿಗೆ ಗಮನ ಕೊಡದ ನಾನು ಮನಸ್ಸಿಗೆ ತೋಚಿದಂತೆ ಬರೆಯುವ ಮೂಲಕ ರೂಢಿಗತ ಕ್ರಮವನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಅಭಿವ್ಯಕ್ತಿಯ ಭಾಷೆಗೆ ಸರಿಕಂಡಂತೆ ನಿರ್ವಹಿಸುವ ಉದ್ದೇಶವಷ್ಟೇ ಮುಖ್ಯವೆನಿಸಿತು. ಹೀಗೆ ಮಾಡುವಾಗ ಕೆಲವೊಮ್ಮೆ ಸ್ಟೇಟೆಂಟ್ ರೂಪ ಪಡೆದಿರುವುದು, ಎಲ್ಲೆಲ್ಲೋ ಓದಿದ ಯಾರದೋ ಮಾತುಗಳೆಲ್ಲ ಇಣುಕಿರುವುದು ಅನುಭವಕ್ಕೆ ಬಂದಿದೆ. ಒಳ್ಳೆಯ ಮಾತುಗಳು ಯಾವ ಯಾವುದೋ ರೂಪದಲ್ಲಿ ಚಾಲ್ತಿಯಲ್ಲಿರಬೇಕು ಮತ್ತು ಕವಿ ಅದಕ್ಕೊಂದು ವಾಹಕ ಮಾತ್ರ. ಇವಿಷ್ಟು ಮಾತುಗಳೊಂದಿಗೆ ನನ್ನ ಈ ಕೆಲವು ಅಮಾಯಕ ರಚನೆಗಳನ್ನು ನಿಮ್ಮೆದುರಿಗಿಡುತ್ತಿರುವೆ, ಉದಾರ ಮನದಿಂದ ಒಪ್ಪಿಸಿಕೊಳ್ಳಿ.

- ಡಾ.ಎಚ್.ಎಸ್. ಸತ್ಯನಾರಾಯಣ

MORE FEATURES

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...