ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ


'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಮನಸ್ಸಿಗೆ ಜಾಗೃತಿಯ ಸಂದೇಶ ಮುಟ್ಟಿಸುವುದು ಅಗತ್ಯವಿದೆ. ಅಂತಹ ಉತ್ತಮ ಕೆಲಸ ಈ ಕೃತಿಯಿಂದಾಗಿದೆ' ಎನ್ನುತ್ತಾರೆ ಪತ್ರಕರ್ತ ಕುಮಾರ ಸುಬ್ರಹ್ಮಣ್ಯ ಎಸ್. ಅವರು ಗಿರಿಮನೆ ಶ್ಯಾಮರಾವ್ ಅವರ ದುಷ್ಕೃತ್ಯ ಕಾದಂಬರಿಗೆ ಬರೆದ ವಿಮರ್ಶೆ ಇಲ್ಲಿದೆ.

ಕೈಯ ಬೆರಳುಗಳೇ ಸಮನಾಗಿರುವುದಿಲ್ಲ ಇನ್ನು ಸಮಾಜದಲ್ಲಿರುವ ಜನರ ಚಿಂತನೆಗಳು ಒಂದೇ ರೀತಿಯಾಗಿರಲು ಹೇಗೆ ಸಾಧ್ಯ ಅಲ್ಲವೇ. ಒಂದು ಘಟನೆಯನ್ನ ನೂರು ಜನ ನೂರು ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಅದಕ್ಕೆ ಕಾರಣ ಅವರ ಅನುಭವ, ಜ್ಞಾನ, ಅವರು ಬೆಳೆದುಬಂದ ಪರಿಸರ. ಕೃತ್ಯ ನಡೆಸಿದವರ ಸುತ್ತಲಿನ ಪರಿಸರ ಮತ್ತು ಕೌಟುಂಬಿಕ ಹಿನ್ನೆಲೆಯನ್ನಾಧರಿಸಿ ಗಿರಿಮನೆ ಶ್ಯಾಮರಾವ್‌ 'ದುಷ್ಕೃತ್ಯ' ಎಂಬ ಮನೋ ವೈಜ್ಞಾನಿಕ ಕಾದಂಬರಿ ಬರೆದಿದ್ದಾರೆ.

ಮನೋ ವೈಜ್ಞಾನಿಕ ವಿಭಾಗದಲ್ಲಿ ಇವರು ಬರೆಯುತ್ತಿರುವ ಮೂರನೇ ಕಾದಂಬರಿ ಇದು. ಇದಕ್ಕೂ ಮೊದಲು ಇವರ ಅನಾಥ ಹಕ್ಕಿಯ ಕೂಗು ಕಾದಂಬರಿ ಓದಿದ್ದೆ, ದುಷ್ಕೃತ್ಯದ ನಡುವೆ ತಲ್ಲಣ ಎಂಬ ಕಾದಂಬರಿ ಬರೆದಿದ್ದಾರೆ. ಅದನ್ನು ಓದಲಾಗಿಲ್ಲ. ಆದರೆ ಈ ಸರಣಿಗೆ ಅವರು ಆಯ್ಕೆ ಮಾಡಿಕೊಳ್ಳುವ ವಿಚಾರ ಪ್ರಸ್ತುತಕ್ಕೆ ಸೂಚ್ಯವಾಗಿರುತ್ತದೆ. ಇದು ಓದಿನ ಮುಂದುವರಿಕೆಗೆ ಹಾಗೇ ಹೊಸ ಓದುಗರನ್ನು ಸೃಷ್ಟಿಸಲು ಕಾರಣ ಆಗಬಹುದು ಎಂಬುದು ನನ್ನ ಭಾವ.

ಈ ಮನೋ ವೈಜ್ಞಾನಿಕ ಸರಣಿಯ ಕಾದಂಬರಿಗಳು ಟೀನೇಜ್‌ ಯುವಕ-ಯುವತಿಯರು ಓದ ಬೇಕು. ಆಗ ಸಾಮಾಜಿಕ ತಲ್ಲಣಗಳ ಬಗ್ಗೆ ಮತ್ತು ಸುತ್ತ ಮುತ್ತ ನಡೆಯುತ್ತಿರುವ ಘಟನೆಯ ಬಗ್ಗೆ ಸಿಗುವ ಒಳ ಹೊಳಹುಗಳು ನಮ್ಮನ್ನು ಗಟ್ಟಿಗೊಳಿಸುತ್ತದೆ. 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳಿಗೆ ಇಂತಹ ಪುಸ್ತಕ ಓದಲು ಕೊಡುವುದರಿಂದ ಸೂಕ್ತ ಎನ್ನುವುದು ನನ್ನ ಭಾವ. ಆ ವಯಸ್ಸಿನ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುವಾಗ ಯಾವುದು ಸರಿ ತಪ್ಪು ಎಂಬುದು ತಿಳಿಯುತ್ತದೆ. ಜೊತೆಯಲ್ಲಿ ಶ್ಯಾಮರಾವ್‌ ಅವರ ಸರಳ ಭಾಷೆ ಅವರನ್ನು ಸುಲಭವಾಗಿ ಓದಿಸುತ್ತದೆ. ಓದಿಸುವ ಕಾರಣ ಮುಂದೆ ಓದುವ ಹವ್ಯಾಸವೂ ಬೆಳೆಯುತ್ತದೆ. ಸಮಾಜದಲ್ಲಿ ನಡೆಯುವ ಕೃತ್ಯಗಳ ಬಗ್ಗೆ ಅರಿವು, ಅದಕ್ಕೆ ಸಿಗುವ ಶಿಕ್ಷೆಯ ಬಗ್ಗೆಯೂ ಅಭಿಪ್ರಾಯ ಬೆಳೆಸಿಕೊಳ್ಳಲು ಕಾರಣವಾಗುತ್ತದೆ.

ಇನ್ನು ದುಷ್ಕೃತ್ಯ ಕಾದಂಬರಿಯ ಬಗ್ಗೆ ಬರುವುದಾದರೆ, ಅಮ್ಮ, ಅಕ್ಕ, ತಂಗಿ ಈ ಮೂವರೇ ಇದ್ದ ಪುಟ್ಟ ಬಡ ಕುಟುಂಬಕ್ಕೆ ಬಂದೊದಗುವ ಸಂಕಷ್ಟದ ಸುತ್ತ ಕಥೆ ಸಾಗಿದೆ. ಅಕ್ಕನ ಅತ್ಯಾಚಾರ, ಕೊಲೆಯಿಂದಾಗಿ ತಂಗಿ ಹೇಗೆ ಗಟ್ಟಿಯಾಗುತ್ತಾಳೆ ಎಂಬುದನ್ನು ನಿರೂಪಿಸಿದ್ದಾರೆ. ಅಕ್ಕನ ಸೆರಗಿನ ಕೂಸಾಗಿದ್ದ ತಂಗಿ ಕುಟುಂಬದ ಮೇಲಾದ ಸಾಮಾಜಿಕ ಆಘಾತವನ್ನು ಎದುರಿಸಿದ ಪರಿ ಇಲ್ಲಿದೆ. ಪೆಟ್ಟು ಬಿದ್ದಷ್ಟು ಮನಸ್ಸು ಘನವಾಗುತ್ತಾ ಹೋಗುತ್ತದೆ. ಪೆಟ್ಟುಗಳನ್ನು ಎದುರಿಸುವ ಮಾರ್ಗವನ್ನು ಕಂಡುಕೊಳ್ಳುತ್ತದೆ. ಅದನ್ನೇ ನಾವು ಇಲ್ಲಿ ಕಾಣಬಹುದಾಗಿದೆ.

ಪೊಲೀಸರು ಜನ ಸ್ನೇಹಿ ಆಗಿರುವುದಿಲ್ಲ ಎಂಬ ಮಾತಿದೆ. ಆದರೆ ಅವರಿಗೂ ಒಂದು ಮನಸ್ಸಿರುತ್ತದೆ. ಅದರಲ್ಲಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಇರುತ್ತದೆ. ಆದರೆ ಅವರನ್ನು ಕಾನೂನು - ಕಟ್ಟಳೆಗಳೇ ಕಟ್ಟಿ ಹಾಕಿರುತ್ತದೆ ಎಂಬ ವಿಚಾರವನ್ನು ಸೂಕ್ತವಾಗಿ ಮಂಡಿಸಿದ್ದಾರೆ. ಮಾನವೀಯ ಮೌಲ್ಯಗಳಿರುವ ಪೊಲೀಸರು ತಂಗಿಯ ಸಹಾಯಕ್ಕೆ ನಿಲ್ಲುವ ರೀತಿ ಅವಳಿಗೆ ಘಟನೆಯ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುತ್ತದೆ.

ಸಮಾಜದಲ್ಲಿ ತಪ್ಪುಗಳ ವಿರುದ್ಧ ದನಿ ಎತ್ತಲು ಕಾನೂನು ಬಲ್ಲವರ ಅಥವಾ ಕಾನೂನಿನ ಅಡಿಯಲ್ಲಿರುವವರ ನೈತಿಕ ಬೆಂಬಲವಾದರೂ ಬೇಕು. ಅದು ಸಿಕ್ಕಲ್ಲಿ ಸಾಮಾಜಿಕ ಸಮಸ್ಯೆಯ ಬಗ್ಗೆ ದನಿ ಆಗಬಹುದು ಮತ್ತು ಸ್ವಂತಕ್ಕೆ ಆದ ಅನ್ಯಾಯದ ವಿರುದ್ಧವೂ ಟೊಂಕ ಕಟ್ಟಿ ನಿಲ್ಲಬಹುದು. ಏಕಾಂಗಿಯಾಗಿ ಹೋರಾಡುವುದು ಈಗಿನ ಕಾಲದಲ್ಲಿ ಕಷ್ಟ. ಏಕೆಂದರೆ, ಕೃತ್ಯದ ಹಿಂದೆ ಅದರ ಲಾಭವನ್ನು ಕಾಣುವವರು ಇದಕ್ಕೆ ತಕ್ಕ ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಹೀಗಾಗಿ ಕಾನೂನು ಬಲ್ಲವನಿಗೆ ಹೋರಾಡುವ ಬಲವಿರುತ್ತದೆ ಎಂದು ಹೇಳಬಹುದು.

ಒಂದು ಕಾಲದಲ್ಲಿ ರೌಡಿಸಂ, ದುಷ್ಕೃತ್ಯಗಳಲ್ಲಿ ಭಾಗಿ ಆದವರೇ ಚುನಾವಣೆಯಲ್ಲಿ ನಿಂತು ಗೆಲ್ಲುತ್ತಿದ್ದಾರೆ. ಹೀಗಾಗಿ ಅವರು ಸಮಾಜದಲ್ಲಿ ಪುಡಿರೌಡಿಗಳನ್ನು ಸಾಕುತ್ತಾರೆ. ಅದು ಅವರ ಬೆಂಬಲಕ್ಕೆ, ಎದುರಾಳಿಯನ್ನು ಹೆದರಿಸಲು ಅಲ್ಲದೇ ನಾನಾ ಕಾರಣಗಳಿಗೆ. ಆದರೆ ಈ ಪುಡಿ ರೌಡಿಗಳು ರಾಜಕಾರಣಿಗಳ ಪೋಷಣೆ ಇದೆ ಎಂಬ ಕಾರಣಕ್ಕೆ ದುಷ್ಕೃತ್ಯಗಳನ್ನು ಮಾಡುತ್ತಾರೆ. ಅಲ್ಲದೇ ಇವರ ಎಲ್ಲಾ ಅಪರಾಧ ಕೃತ್ಯಕ್ಕೆ ರಾಜಕೀಯದ ಬೆಂಬಲ ಇರುವುದು ಅವರಿಗೆ ಇನ್ನಷ್ಟೂ ಧೈರ್ಯ ಕೊಡುತ್ತದೆ. ತಪ್ಪು ಮಾಡಿ ಜೈಲಿಗೆ ಹೋದರೂ ಪ್ರಕರಣವನ್ನು ರಾಜಕೀಯ ಬಲದಿಂದ ಮುಚ್ಚಿಹಾಕಿ ಹೊರಬರುತ್ತಾರೆ. ಶಿಕ್ಷೆ ಅನುಭವಿಸದ ಕಾರಣ ರೌಡಿಗಳಿಗೆ ಅಪರಾಧ ಮಾಡುತ್ತಿದ್ದೇವೆ ಎಂಬುದೇ ಅರಿವಿಗೆ ಬರಲ್ಲ.

ಪ್ರಕರಣಗಳು ನಡೆದು ಅದು ಮರೆತು ಹೋಗುವ ಸಮಯಕ್ಕೆ ಬರುವ ಶಿಕ್ಷೆಯ ತೀರ್ಪು ಯಾರಿಗೂ ನಾಟುತ್ತಿಲ್ಲ. ಅಪರಾಧ ಸಾಕ್ಷ್ಯಾಧಾರಗಳಿಂದ ಸ್ಪಷ್ಟವಾದಾಗ ಅವುಗಳಿಗೆ ಕೂಡಲೇ ಶಿಕ್ಷೆ ಪ್ರಕಟಿಸುವುದು ಉತ್ತಮ. ಆಗ ಸಾಮಾಜಿಕವಾಗಿ ತಪ್ಪಿನ ಪರಿಣಾಮದ ಅರಿವು ಮೂಡುತ್ತದೆ. ತಡವಾಗಿ ಬರುವ ಶಿಕ್ಷೆ ಸಮಾಜಕ್ಕೆ ಪಠ್ಯವಾಗುದಿಲ್ಲ. ಕೇವಲ ಬಂಧಿಖಾನೆಗಳಲ್ಲಿ ಆರೋಪಿಗಳು ವರ್ಷಗಟ್ಟಲೇ ಸುಖವಾಗಿ ಕಾರ್ಯವಿಲ್ಲದೇ ಕೂಳು ತಿಂದು ಬದುಕುತ್ತಾರೆ. ಈ ಎಲ್ಲಾ ವಿಚಾರಗಳನ್ನು ಸೂಕ್ತವಾಗಿ ಮಂಡಿಸಿದ್ದಾರೆ.

ಪದ ಮತ್ತು ವಾಖ್ಯ ರಚನೆ ಮತ್ತ ಮತ್ತೆ ಸಿಗುವುದು ಓದಿನ ಸ್ವಾರಸ್ಯವನ್ನು ತಗ್ಗಿಸುತ್ತದೆ. ಇದು ಪುಟ ಸಂಖ್ಯೆಯ ಹೆಚ್ಚುವಿಕೆಗೂ ಕಾರಣವಾಗಿದೆ. ಕೆಲ ವಿಚಾರಗಳ ಆಳವಾದ ವಿವರಣೆ ಈಗಿನ ಓದಿಗೆ ಬೇಕಿಲ್ಲ ಎನಿಸುತ್ತದೆ. ವಿವರಗಳನ್ನು ಹೇಳುವಾಗ ಅಲ್ಲೇ ಸುತ್ತಿದಂತಾಗುತ್ತದೆ. ಇದು ಕಾದಂಬರಿಯ ಲೋಪ ಎಂದು ಹೇಳುತ್ತಿಲ್ಲ. ಆದರೆ ಓದುವಾಗ ಅಗತ್ಯ ಇರಲಿಲ್ಲ ಅಂತನಿಸುತ್ತದೆ.

ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಮನಸ್ಸಿಗೆ ಜಾಗೃತಿಯ ಸಂದೇಶ ಮುಟ್ಟಿಸುವುದು ಅಗತ್ಯವಿದೆ. ಅಂತಹ ಉತ್ತಮ ಕೆಲಸ ಈ ಕೃತಿಯಿಂದಾಗಿದೆ. ಮಲೆನಾಡಿನ ರೋಚಕ ಕಥನ ಸರಣಿಯ ರೀತಿಯಲ್ಲೇ ಇದು ಸಾಗಲಿ, ಯುವ ಓದುಗರನ್ನು ಕನ್ನಡಕ್ಕೆ ಸಳೆಯಲಿ ಎಂಬುದೇ ಕೊನೆಯ ಸಾಕಾರ ಭಾವ.

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...