ʻಲೇಖಕರು, ಸಾಹಿತಿಗಳುʼ ಆ ಶಬ್ದಗಳೇ ಬಹಳ ವಿಚಿತ್ರ: ಜಯಂತ ಕಾಯ್ಕಿಣಿ

Date: 26-10-2025

Location: ಬೆಂಗಳೂರು


ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಜಯಂತ ಕಾಯ್ಕಿಣಿ ಅವರ 'ಅಂಕದ ಪರದೆ', 'ಸೇವಂತಿ ಪ್ರಸಂಗ', ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಭಟ್ಟಿ ವಿಕ್ರಮಾದಿತ್ಯನ ಕಥೆಗಳು', ಸುಮಂಗಲಾ ಅವರ 'ಎನ್ನಾತ್ಮ ಕಂಪವಿದು' (ಕಾದಂಬರಿ), ರಶ್ಮಿ ಎಸ್ ಅವರ 'ಊರೆಂಬೋ ಊರಲಿ' ಕೃತಿಗಳ ಲೋಕಾರ್ಪಣಾ ಸಮಾರಂಭವು ಅ. 26ರಂದು ನಗರದ ಸುಚಿತ್ರಾ ಫಿಲ್ಮ್‌ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನ ಲೋಕಾರ್ಪಣೆಗೊಳಿಸಿ ಮಾತನಾಡಿದ ರಂಗಭೂಮಿ ಕಲಾವಿದೆ, ನಿರ್ದೇಶಕಿ ಎನ್. ಮಂಗಳಾ ಅವರು, "ಪಾತ್ರಕ್ಕೆ ಯಾವುದೇ ರೀತಿಯ ಅಡೆತಡೆಗಳಿಲ್ಲ. ಕಲಾವಿದನಾದವ ಎಲ್ಲದಕ್ಕೂ ತಯಾರಿರಬೇಕು. ಆತ ಎಲ್ಲಾ ಪಾತ್ರಗಳಿಗೂ ಸಿದ್ಧನಿರಬೇಕು. ಕಾರಣ ಕೆಲವೊಂದು ಸಮಯದಲ್ಲಿ ಯಾರು ಯಾವ ಪಾತ್ರವನ್ನು ನಿರ್ವಹಿಸುವ ಸಂದರ್ಭ ಒದಗುತ್ತದೋ ಹೇಳಲಾಗುವುದಿಲ್ಲ. ಇವತ್ತಿನ ದಿನದ ಈ ಕಾರ್ಯಕ್ರಮವೂ ಕೂಡ ನನ್ನ ಪಾಲಿಗೆ ಸದ್ದಿಲ್ಲದ ಬದ್ದಂತಹ ಸಂದರ್ಭ," ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪತ್ರಕರ್ತೆ, ಲೇಖಕಿ ಸಂಧ್ಯಾರಾಣಿ ಮಾತನಾಡಿ, "ನಮ್ಮ ಬಾಲ್ಯದ ಅವಿಭಾಜ್ಯ ಅಂಗಗಳೇ ಕಥೆಗಳಾಗಿದ್ದು, ಅವುಗಳಲ್ಲಿ ಚಂದಮಾಮ ಕಥೆಗಳು ಪ್ರಮುಖ. ಪರಸ್ಪರ ಸಂವಾದವನ್ನು ಮಾಡಲು ಕಲಿಸುತ್ತಿದ್ದಂತಹ ಕಥೆಗಳು ಕೂಡ ಹೌದು. ಬಹುಷ್ಯ ಇವತ್ತಿನ ಮಕ್ಕಳು ನಾವು ಅಂದು ಪಡೆದಂತಹ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಸಕ್ತ ಕಾಲಘಟ್ಟದಲ್ಲಿ ನಾವೆಲ್ಲ ಕಥೆಗಳನ್ನು ಮಕ್ಕಳಿಗೆ ಹೇಳಲು ಅಜ್ಜ ಅಜ್ಜಿ ಇಲ್ಲ ಎನ್ನುವ ವಿಚಾರವನ್ನು ಮುಂದಿಡುತ್ತೇವೆ. ಆದರೆ ಇದೆಲ್ಲವನ್ನ ಮೀರಿ ಮಕ್ಕಳಿಗೆ ಕಥಾ ಸಾಹಿತ್ಯದ ಕಡೆಗೆ ಒಲವು ಬರುವ ಹಾಗೆ ನಾವು ನೋಡಿಕೊಳ್ಳಬೇಕಾಗಿದೆ," ಎಂದರು.

"ಮಕ್ಕಳಿಗೆ ಭಾಷೆಗಳ ಜೊತೆಗೆ ಸಂಪರ್ಕವನ್ನು ಇರುವ ಹಾಗೆ ನೋಡಿಕೊಳ್ಳುವ ಕೃತಿ ಸು. ರುದ್ರಮೂರ್ತಿ ಅವರ ʻಭಟ್ಟಿ ವಿಕ್ರಮಾದಿತ್ಯನ ಕಥೆಗಳುʼ. ವಿಶೇಷವಾಗಿ ಕಥೆಯ ಪ್ರಾರಂಭ ಹಾಗೂ ಕಥೆಯ ಅಂತ್ಯವು ಮಕ್ಕಳ ಕಥಾ ಪ್ರಪಂಚಕ್ಕೆ ಮಾತ್ರವಲ್ಲದೇ ನಮ್ಮಂತಹ ಓದುಗರ ಕಥಾ ಲೋಕವನ್ನು ಕೂಡ ಅಚ್ಚರಿಗೆ ತಳುಕುತ್ತದೆ. ಸುಮಂಗಲಾ ಅವರ 'ಎನ್ನಾತ್ಮ ಕಂಪವಿದು' ಕಾದಂಬರಿ ಮೂರು ಪಾತ್ರಗಳ ಜೀವನದ ಏರು ತಗ್ಗು ಹಾಗೂ ಸ್ನೇಹದ ಆಳ ಅಗಲವನ್ನು ಕಟ್ಟಿಕೊಡುತ್ತದೆ. ರಶ್ಮಿ ಎಸ್ ಅವರ 'ಊರೆಂಬೋ ಊರಲಿ' ನಾಲ್ಕು ಊರುಗಳ ಪಯಣವಾಗಿದೆ. ಅವರ ಭಾಷೆಯ ಸೊಗಡೇ ಕೃತಿಯ ಶಸ್ತ್ರ. ಬಹು ಲೇಖಕರಿಗೆ ತಮ್ಮ ಊರು ಬರವಣಿಗೆಯ ಅವಿಭಾಜ್ಯ ಅಂಗವಾಗಿದೆ. ಅದರಲ್ಲಿ ರಶ್ಮಿ ಎಸ್‌ ಕೂಡ ಒಬ್ಬರು," ಎಂದು ತಮ್ಮ ಅಭಿಪ್ರಾಯವನ್ನ ತಿಳಿಸಿದರು.

ಸಾಹಿತಿ ಜಯಂತ ಕಾಯ್ಕಿಣಿ ಅವರು ತಮ್ಮ 'ಅಂಕದ ಪರದೆ', 'ಸೇವಂತಿ ಪ್ರಸಂಗ' ಕೃತಿ ಕುರಿತು ಮಾತನಾಡಿ, "ಲೇಖಕರು, ಸಾಹಿತಿಗಳು ಎಂದು ಹೇಳುವುದೇ ಬಹಳ ಕಷ್ಟ. ಏಕೆಂದರೆ ಅದರ ಅರ್ಥಗಳೆಲ್ಲವೂ ಬೇರೆ ಬೇರೆ ರೀತಿಯ ಸಂವೇದನೆಗೆ ಸಿಲುಕಿ ಬದಲಾಗಿದೆ. ಈ ಒಂದು ಹೊಸ ಕಾಲಘಟ್ಟದಲ್ಲಿ ಬರೀ ನಾವೆಲ್ಲ ಲೇಖಕರೆಂದು ಹೇಳಿದರೆ ಸಾಕಾಗುವುದಿಲ್ಲ. ಎಲ್ಲ ರೀತಿಯ ಸಂವೇದನಾಶೀಲ ವಿಚಾರಗಳನ್ನು ಇಂದು ಲೇಖಕನಾದವ ಒಳಗೊಳ್ಳಬೇಕು.

ರಂಗ ನಿರ್ದೇಶಕನೋರ್ವ ತನ್ನ ನಿರ್ದೇಶನದ ನಾಟಕವೊಂದರ ಕತೆಗೆ ಸಲುವಾಗಿ ವೃದ್ಧಾಶ್ರಮಕ್ಕೆ ಭೇಟಿ ನೀಡುವ ವೃತ್ತಾಂತವನ್ನು ನಾವಿಲ್ಲಿ ಕಾಣಬಹುದು. ಪೂರ್ಣವಾಗಿ ವೃದ್ಧಾಶ್ರಮದ ಕಥೆಯನ್ನೇ ʻಅಂಕದ ಪರದೆ' ಕೃತಿಯು ಒಳಗೊಂಡಿದೆ ಎಂದು ತಮ್ಮ ಕೃತಿಗಳ ಕುರಿತು ಮಾತನಾಡಿದರು.

ಕಾರ್ಯಕ್ರಮವನ್ನು ಆನ್‌ ಲೈನ್‌ ನಲ್ಲಿ ವೀಕ್ಷಿಸಲು ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿ

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...