'ಲೈಫ್‌ನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ


'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ಸುಲಭವಾಗಿ ದಕ್ಕುವುದಿಲ್ಲ ಎನ್ನುತ್ತಾರೆ ಸಂತೋಷ್ ರಾವ್ ಪೆರ್ಮುಡ. ಅವರು 'ಲೈಫ್‌ನ ಸಕ್ಸೆಸ್ ಮಂತ್ರ' ಕೃತಿಗೆ ಬರೆದ ಲೇಖಕರ ಮಾತು ಇಲ್ಲಿದೆ.

ನಾವು ಮಂತ್ರಗಳ ಮೂಲಕ ದೇವರನ್ನು ಪೂಜಿಸುವುದರಿಂದ ಪೂಜೆಯ ಸಂಪೂರ್ಣ ಫಲವನ್ನು ಪಡೆಯಬಹುದು ಎನ್ನುವ ನಂಬಿಕೆಯಿದೆ. ಪೂಜೆ ಮಾಡುವಾಗ ಮಂತ್ರವನ್ನು ಪಠಣ ಮಾಡುವುದರಿಂದ ದೇವರು ಅತ್ಯಂತ ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಎನ್ನುವುದು ಧಾರ್ಮಿಕ ನಂಬಿಕೆ. ಸನಾತನ ಧರ್ಮದಲ್ಲಿ ಮಂತ್ರ ಪಠಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯು ನಿಯಮಿತವಾಗಿ ದೇವರ ಮಂತ್ರಗಳನ್ನು ಪಠಿಸುವುದರಿಂದ ಆತನು ಮಾತ್ರವಲ್ಲ, ಆತನ ಸುತ್ತಮುತ್ತಲಿನ ಪರಿಸರದಲ್ಲೂ ಧನಾತ್ಮಕ ಅಂಶವು ಆವರಿಸಿ ಕೊಳ್ಳುತ್ತದೆ. ಮಂತ್ರಗಳಿಗೆ ನಮ್ಮ ಪೂಜೆಯ ಪೂರ್ಣ ಫಲವನ್ನಷ್ಟೇ ಅಲ್ಲದೇ ನಮ್ಮೆಲ್ಲಾ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯೂ ಇದೆ. ಆಯಾ ಸಮಸ್ಯೆಗಳಿಗೆ ಅದರದ್ದೇ ಆದ ನಿವಾರಣಾ ಮಂತ್ರಗಳನ್ನು ಪಠಿಸುತ್ತಾರೆ. ಇಂತಹ ಮಂತ್ರಗಳನ್ನು ಪಠಿಸುವುದರಿಂದ ಒಳ್ಳೆಯ ಫಲ ದೊರೆಯುತ್ತದೆ.

ಅದೇ ರೀತಿ ನಮ್ಮ ಜೀವನದಲ್ಲಿ ನಾವು ಯಶಸ್ಸನ್ನು ಗಳಿಸಬೇಕೆಂದರೆ ಅದಕ್ಕೆ ವಿಭಿನ್ನ ಮಂತ್ರ ಪಠಿಸಬೇಕು. ನಮ್ಮ ಸೋಲಿಗೆ, ಬಡತನಕ್ಕೆ, ಅಪಯಶಸ್ಸಿಗೆ, ಜಂಜಾಟದ ಬದುಕಿಗೆ, ನೋವಿಗೆ ಮತ್ತು ದುಃಖಕ್ಕೆ ಯಾರು ಕಾರಣವೆಂದು ಒಮ್ಮೆ ಕೂಲಂಕುಶವಾಗಿ ಯೋಚನೆ ಮಾಡಿದರೆ ನಿಜಾಂಶ ತಿಳಿಯುತ್ತದೆ. ನಮ್ಮೆಲ್ಲ ಸೋಲು ಗೆಲುವುಗಳಿಗೆ ನೋವು ನಲಿವುಗಳಿಗೆ, ಏಳು ಬೀಳುಗಳಿಗೆ, ಕಷ್ಟ ನಷ್ಟಗಳಿಗೆ, ಉನ್ನತಿ ಅವನತಿಗಳಿಗೆಲ್ಲ ನಾವೇ ಕಾರಣರು. ನಮ್ಮ ಸೋಲು-ಗೆಲುವು. ಬಡತನ-ಸಿರಿತನಕ್ಕೆ ನಾವೇ ಜವಾಬ್ದಾರರಲ್ಲದೇ ಮತ್ಯಾರೂ ಜವಾಬ್ದಾರರು ಆಗಿರುವುದಿಲ್ಲ. ನಮ್ಮ ಜೀವನದಲ್ಲಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು. ಬೇಜವಾಬ್ದಾರಿಗಳು. ನಿರ್ಲಕ್ಷ್ಯಗಳು ನಮ್ಮನ್ನು ಸೋಲಿನ ಸುಳಿಯಲ್ಲಿ ಸಿಲುಕಿಸಿ ನಮ್ಮನ್ನು ಅಪಯಶಸ್ಸಿನ ಕೂಪಕ್ಕೆ ತಳ್ಳುತ್ತವೆ. ಆದ್ದರಿಂದ ನಮ್ಮ 'ಲೈಫ್‌ನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ ಎಂದು ಹೇಳಬಹುದು. ನಮ್ಮ ಬದುಕಿನ ಅತಿದೊಡ್ಡ ಸಕ್ಸಸ್ ಮಂತ್ರ ನಾವೇ ಆಗಿರುತ್ತೇವೆ. ನಾವು ತುಸು ಪ್ರಬುದ್ಧರಾಗಿ ಯೋಚನೆ ಮಾಡಿದರೆ ನಮ್ಮ ಭವಿಷ್ಯವು ಇನ್ನಷ್ಟು ಉಜ್ವಲ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಎಂದಿದ್ದರೆ ಎಲ್ಲರೂ ಬದುಕಿನಲ್ಲಿ ಸಕ್ಸೆಸ್ ಮಂತ್ರವನ್ನು ಅಳವಡಿಕೆ ಮಾಡಿಕೊಳ್ಳಬೇಕು.

'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ಸುಲಭವಾಗಿ ದಕ್ಕುವುದಿಲ್ಲ. ಅದಕ್ಕಾಗಿ ಕಠಿಣ ವೃತವನ್ನು ಮಾಡಬೇಕು, ಹಲವು ತ್ಯಾಗಗಳನ್ನು ಮಾಡಬೇಕು, ಕಣ್ಣೀರಿನಿಂದ ಕೂಡಿದ ಸನ್ನಿವೇಶಗಳನ್ನೂ ನಿರ್ಲಿಪ್ತತೆಯಿಂದ ಎದುರಿಸಬೇಕು, ಹಲವು ವಿಚಾರಗಳಲ್ಲಿ ನಮ್ಮ ವ್ಯಕ್ತಿತ್ವವನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು, ಹಲವು ವಿಚಾರಗಳನ್ನು ಬಿಟ್ಟುಬಿಡಬೇಕು, ಹಲವು ವಿಚಾರಗಳಲ್ಲಿ ರಾಜಿ ಆಗಬೇಕು. ಈ ಎಲ್ಲದರಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಶಿಲ್ಪದಂತೆ ಕೆತ್ತನೆಗೆ ಒಳಪಟ್ಟ ವ್ಯಕ್ತಿಗಳಷ್ಟೇ ಯಶಸ್ಸು ಎನ್ನುವ ಮಂತ್ರವನ್ನು ಪಠಿಸಬಹುದು. ಈ ಭೂಮಿಯಲ್ಲಿ ಹುಟ್ಟಿದ್ದೇನೆ, ಹೇಗೋ ಬದುಕಿದರಾಯ್ತು ಎಂದು ಬದುಕುವಾತ ಜೀವನದ ಸಾಗರವನ್ನೇ ದಾಟಲಾರ. ಆದ್ದರಿಂದ ಯಶಸ್ಸಿಗಾಗಿ ಹಲವು ಮಂತ್ರಗಳನ್ನು ಪ್ರತಿಕ್ಷಣವೂ ಪಠಿಸಬೇಕು ಮತ್ತು ಹಲವು ವಾಗ್ದಾನ ಮಾಡಕಾದ್ದು ಅತೀ ಮುಖ್ಯ.

ಪ್ರತಿದಿನ ಮುಂಜಾನೆ ನಾನು ಸೂರ್ಯೋದಯ ಆಗುವ ಮೊದಲು ಎದ್ದು ವ್ಯಾಯಾಮ, ಯೋಗ ಪ್ರಾಣಾಯಾಮ ಮಾಡುತ್ತೇನೆ. ಸದಾ ಫಿಟ್ ಆಂಡ್ ಆಕ್ಟಿವ್ ಆಗಿದ್ದು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠನಾಗಿ ಇರುತ್ತೇನೆ. ಕಾರ್ ರೇಸಲ್ಲಿ ಗೆಲ್ಲಬೇಕು ಎಂದರೆ ಗಾಡಿ ಚೆನ್ನಾಗಿರಬೇಕು. ಅದೇ ರೀತಿ ಜೀವನದಲ್ಲಿ ಗೆಲ್ಲಬೇಕು ಎಂದರೆ ಮೊದಲು ನನ್ನ ದೇಹವು ಚೆನ್ನಾಗಿರಬೇಕು. ನಾನು ನನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದೆ ಸಾಗುತ್ತೇನೆ. ಮೊದಲು ನನ್ನನ್ನು ನಾನು ಗೆಲ್ಲುತ್ತೇನೆ. ನನ್ನನ್ನು ನಾನು ಗೆದ್ದರೆ ಇಡೀ ಜಗತ್ತನ್ನೇ ಗೆದ್ದಂತೆ. ನಾನು ಅನಾವಶ್ಯಕವಾಗಿ ಬೇರೆಯವರ ಕುರಿತು ಮಾತಾಡುವುದು ಮತ್ತು ಚಿಂತಿಸುವುದನ್ನು ನಿಲ್ಲಿಸಿ ಈ ಕ್ಷಣದಿಂದಲೇ ನಾನು ಬೇರೆಯವರನ್ನು ನಿಂದಿಸುವುದನ್ನು, ತೆಗಳುವುದನ್ನು, ಕೆಟ್ಟದಾಗಿ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ. ಏಕೆಂದರೆ ನಾನು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದಷ್ಟು ನನ್ನ ಮಾನಸಿಕ ಶಾಂತಿ ಹದಗೆಡುತ್ತದೆ. ಇತರರು ನನ್ನ ಬಗ್ಗೆ ಏನು ಅಂದು ಕೊಳ್ಳುತ್ತಾರೆ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ರೀತಿ ನಾನು ಯಾರನ್ನೂ ನೋಯಿಸುವ ಕೆಲಸ ಮಾಡುವುದಿಲ್ಲ. ನಾನು ನಿಯತ್ತಾಗಿ ನನ್ನ ಕೆಲಸ ಮಾಡುತ್ತಾ ಜೀವನದಲ್ಲಿ ಮುಂದೆ ಬರುತ್ತೇನೆ. ನನಗೆ ಸಿಗುವ ಸಂಪೂರ್ಣ ಸಮಯವನ್ನು ನನ್ನ ಮತ್ತು ಕುಟುಂಬದ ಬೆಳವಣಿಗೆಗಾಗಿ ಬಳಸುತ್ತೇನೆ.

ನಾನು ಈಗಲೇ ನನ್ನ ಅಹಂನ್ನು ಬಿಡುತ್ತೇನೆ. ಇಲ್ಲವಾದರೆ ಜನರು ನನ್ನನ್ನು ಬಿಡುತ್ತಾರೆ. ಆದ್ದರಿಂದ ಅಂತಹ ಮೂರ್ಖ ಸಂದರ್ಭಗಳಿಗೆ ನಾನು ಅವಕಾಶವನ್ನು ಮಾಡಿಕೊಡುವುದಿಲ್ಲ. ಯಾರನ್ನೋ ಪ್ರೀತಿಸುವ ಮುನ್ನ, ನನ್ನ ನಾನು ಪ್ರೀತಿಸುವೆ. ನನ್ನ ಕೆಲಸವನ್ನು ಪ್ರೀತಿಸುವೆ. ನಾನು ನನ್ನಲ್ಲಿರುವ ಆಲಸ್ಯವನ್ನು ಸಾಯಿಸಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಕಂಫರ್ಟ್‌ ಝೋನ್ ನಿಂದ ಹೊರಬಂದು ಲೆಕ್ಕಾಚಾರದ ಗಂಡಾಂತರಗಳನ್ನು ತೆಗೆದುಕೊಂಡು ನನ್ನ ಗುರಿ ತಲುಪುವೆ. ನಾನು ನನ್ನ ಅಮೂಲ್ಯವಾದ ಸಮಯವನ್ನು ಗೌರವಿಸುತ್ತೇನೆ. ನಾನಿಂದು ಸಮಯವನ್ನು ಗೌರವಿಸಿದರೆ ಅದು ಮುಂದೆ ನನಗೆ ಗೌರವವನ್ನು ಕೊಡಿಸುತ್ತದೆ. ನಾನೆಂದೂ ಸಮಯವನ್ನು ಕೊಲ್ಲದೇ, ಸಿಕ್ಕ ಸಮಯವನ್ನು ಸಂಪೂರ್ಣ ಉಪಯೋಗ ಮಾಡಿ ಕೊಂಡು ನಾನು ಯಶಸ್ವಿ ವ್ಯಕ್ತಿಯಾಗಿ ಸಮಯವನ್ನು ದುಡ್ಡಿನಂತೆ ಮಿತವಾಗಿ ವ್ಯಯಿಸುತ್ತೇನೆ. ನನ್ನೆಲ್ಲ ಜವಾಬ್ದಾರಿಗಳನ್ನು ನಾನೇ ಖುದ್ದು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಕುಂಟು ನೆಪಗಳನ್ನು ಹೇಳಿ ಜವಾಬ್ದಾರಿಗಳಿಂದ ನುಣುಚಿ ಕೊಳ್ಳಲಾರೆ. ನನ್ನ ತಪ್ಪುಗಳಿಂದ ನಾನು ಕಲಿತು, ನೋವಿಲ್ಲೂ ನಗಲು ಪ್ರಯತ್ನಿಸುವೆ. ನನ್ನ ಸೋಲನ್ನು ಯಶಸ್ಸಾಗಿ ಬದಲಾಯಿಸಲು ಧೈರ್ಯದಿಂದ ಮುನ್ನುಗ್ಗಿ ನನ್ನ ಗುರಿ ತಲುಪುತ್ತೇನೆ.

ನನ್ನ ನೋವುಗಳನ್ನು ನಾನೇ ನುಂಗಿಕೊಂಡು ನಗುತ್ತೇನೆ. ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಮುಂದೆ ಸಾಗುತ್ತೇನೆ. ನನ್ನ ದುಃಖವನ್ನು ಬೇರೆಯವರಿಗೆ ಹೇಳಿ ಅವರ ನಗುವನ್ನು ಹಾಳುಗೆಡವುದಿಲ್ಲ. ನಗುವನ್ನು ಹಂಚಿದರೆ ನಗು ಹೆಚ್ಚುತ್ತದೆ, ಜ್ಞಾನ ಕೌಶಲವನ್ನು ಹಂಚಿದರೆ ವಿದ್ಯೆ ಹೆಚ್ಚುತ್ತದೆ. ಹಣವನ್ನು ಹಂಚಿದರೆ ಹಣ ಹೆಚ್ಚಾಗುತ್ತದೆ. ಅಂತೆಯೇ ನೋವನ್ನು ಹಂಚಿದರೆ ನಮ್ಮ ನೋವೂ ಹೆಚ್ಚಾಗುತ್ತದೆ. ಹಾಗಾಗಿ ನನ್ನ ನೋವು ನನ್ನಲ್ಲೇ ಇರಲಿ ಎಂದು ಮೌನವಾಗಿರುವೆ. ಬೇರೆಯವರ ಹಣ, ಆಸ್ತಿ, ಅಂತಸ್ತಿಗೆ ಆಸೆ ಪಡದೇ, ಪರಸ್ತ್ರೀಯರ ಬಗ್ಗೆ ಕೆಟ್ಟದಾಗಿ ಯೋಚಿಸುವುದಿಲ್ಲ. ಯಾರ ಮೇಲೂ ಅಸೂಯೆ ಪಡುವುದಿಲ್ಲ, ಏಕೆಂದರೆ ನನ್ನೊಳಗಿನ ಹೊಟ್ಟೆಕಿಚ್ಚು ನನ್ನನ್ನೇ ಸುಡುತ್ತದೆ. ನನಗೆ ಬೇಕಿರುವುದನ್ನು ನಾನೇ ಕಷ್ಟಪಟ್ಟು ದುಡಿದು ನಿಯತ್ತಾಗಿ ಪಡೆದುಕೊಳ್ಳುತ್ತೇನೆ. ಯಾರ ಬಳಿಯೂ ಕೈ ಚಾಚುವುದಿಲ್ಲ ಮತ್ತು ಯಾರಿಗೂ ಮೋಸ ಮಾಡುವುದಿಲ್ಲ. ನನ್ನ ದೇಹ ಮತ್ತು ಬುದ್ಧಿಯನ್ನು ಬಳಸಿ ಯಶಸ್ಸನ್ನು ಗಳಿಸುತ್ತೇನೆ.

ಶ್ರೀಮಂತಿಕೆ ಇದ್ದಾಗ ಆಡಂಬರದ ಬದುಕು ಬದುಕದೇ ಸರಳ ಜೀವನ ನಡೆಸುತ್ತೇನೆ. ಇತರರಿಗೆ ಬೇರೆಯವರ ಉದಾಹರಣೆ ನೀಡುವ ಬದಲು ನಾನೇ ಇತರರಿಗೆ ಜೀವಂತ ಉದಾಹರಣೆ ಆಗುತ್ತೇನೆ. ಹೆತ್ತ ತಾಯಿಗೆ ಮಾತೃಭೂಮಿಗೆ, ಜ್ಞಾನ ನೀಡಿದ ಗುರುಗಳಿಗೆ ಕೀರ್ತಿ ತಂದು, ನನಗಾಗಿ ತಮ್ಮ ಜೀವನದ ಖುಷಿಯನ್ನು ತ್ಯಾಗ ಮಾಡಿದ ಹೆತ್ತವರನ್ನು ಖುಷಿಯಾಗಿ ನೋಡಿಕೊಳ್ಳುತ್ತೇನೆ. ಹುಟ್ಟಿದ ಕಾರಣಕ್ಕೆ ಜೀವನದಲ್ಲಿ ಏನಾದರೂ ಸಾಧಿಸುವ ಸಲುವಾಗಿ ಬದುಕುತ್ತೇನೆ. ಈ ನನ್ನ ದೇಶವು ನನ್ನ ಅರ್ಹತೆಗಳೆಲ್ಲವನ್ನೂ ಮೀರಿ ನನಗೆ ಸರ್ವಸ್ವವನ್ನೂ ನೀಡಿದ್ದು, ಹಾಗಾಗಿ ನಾನು ನನ್ನ ದೇಶಕ್ಕೆ ಏನಾದರೂ ಮುಖ್ಯ ಕೊಡುಗೆ ನೀಡಿದ ನಂತರವೇ ಇಲ್ಲಿಂದ ನಿರ್ಗಮಿಸುವೆ. ಇಂತಹ ಯಶಸ್ಸಿನ ಮಂತ್ರಗಳನ್ನು ಪಠಿಸುವುದು ಮತ್ತು ಅದರಂತೆ ನಡೆದುಕೊಂಡರೆ ಯಶಸ್ಸು ನಮ್ಮ ಬೆನ್ನ ಹಿಂದೆ ಬಂದೇ ಬರುತ್ತದೆ.

ಬಾಲ್ಯ ಮತ್ತು ವಿದ್ಯಾಭ್ಯಾಸದ ಅವಧಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದ ನನಗೆ, ಜೀವನ ಎಂದರೆ ಏನು? ಮುಂದೆ ನನ್ನ ಭವಿಷ್ಯ ಹೇಗಿರಬೇಕು? ಯಾವ ಕ್ಷೇತ್ರದಲ್ಲಿ ಸಾಗಬೇಕು? ನನ್ನ ಬದುಕಿನ ಧೋರಣೆಗಳು ಯಾವ ರೀತಿ ಇರಬೇಕು? ಸಮಾಜದಲ್ಲಿ ನಾನೂ ಒಬ್ಬನಾಗಿ ಗುರುತಿಸಿಕೊಳ್ಳುವ ಬಗೆ ಹೇಗೆ? ಎಂತಹ ಕ್ಷೇತ್ರವನ್ನು ನಾನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲಗಳ ಗೂಡು ಮತ್ತು ನಿರಾಶೆಯ ಬುತ್ತಿ ನನ್ನ ಬದುಕಾಗಿತ್ತು. ಆದರೆ ಫೀನಿಕ್ಸ್‌ನಂತೆ ನನ್ನ ಬೆಳವಣಿಗೆ ಮತ್ತು ಜೀವನದ ಉತ್ಸರ್ಪಿಣಿ ಕಾಲ ಪ್ರಾರಂಭವಾದ್ದೇ ಅಚಾನಕ್ಕಾಗಿ ಧರ್ಮಸ್ಥಳದಂತಹ ಸಂಸ್ಥೆಯಲ್ಲಿ ನನ್ನ ವೃತ್ತಿ ಜೀವನ ಪ್ರಾರಂಭವಾದ ನಂತರವೇ ಎನ್ನಬಹುದು. ಇಲ್ಲಿನ ಸಮಯದ ಸದ್ಬಳಕೆ, ಕೆಲಸದಲ್ಲಿ ತೋರಬೇಕಾದ ಬದ್ಧತೆ, ಕಠಿಣ ಪರಿಶ್ರಮ, ನಿರಂತರತೆ, ಕಲಿಕಾ ಮನೋಭಾವ ಇವುಗಳ ಜೊತೆಯೇ ಸಾಗುತ್ತಿದ್ದ ವೃತ್ತಿಯಿಂದ ಇಂದು ವೃತ್ತಿಯಂತೆಯೇ ನಾನಾಗಲು ಸಾಧ್ಯವಾಯಿತು.

ಇಂದು ನಾನು ಏನು ಎನ್ನುವ ಸ್ಪಷ್ಟತೆ ಇದೆ, ನನ್ನ ಇತಿಮಿತಿಗಳ ಅರಿವು ನನಗಿದೆ, ನನ್ನ ಬದುಕಿನ ಧೋರಣೆಗಳು ಮತ್ತು ಘೋಷಣೆಗಳ ಬಗ್ಗೆ ಅಚಲವಾದ ನಿಲುವಿದೆ, ನನ್ನವರ ಬಗೆಗಿನ ಅದಮ್ಯ ಕಾಳಜಿಯ ಆಳದ ಅರಿವಿದೆ. ನಾನು ಸಾಗಬೇಕಾದ ದೂರದ ಬಗ್ಗೆ ನನಗೆ ಸ್ಪಷ್ಟತೆಯಿದೆ, ಎಲ್ಲಕ್ಕೂ ಮೀರಿ ನಾನಿಂದು ಅಭಿವೃದ್ಧಿಪರ ನಿಲುವು ಮತ್ತು ಧೋರಣೆ ಹಾಗೂ ವ್ಯಕ್ತಿ, ಆಸ್ತಿ ಅಂತಸ್ತು, ಹಣಕ್ಕಿಂತ ಮೌಲ್ಯಗಳೇ ಮೇಲು ಎನ್ನುವ ಸ್ಪಷ್ಟ ನಿರ್ಧಾರ ನನ್ನಲ್ಲಿದೆ. ಹೆಚ್ಚಾಗಿ ಈ ನನ್ನ ಬದುಕಿನ ಬಗೆಗೆ ಆತ್ಮತೃಪ್ತಿಯಿದೆ ಮತ್ತು ಹೆಮ್ಮೆಯಿದೆ. ಜೀವನದಲ್ಲಿ ಈ ಕ್ಷಣ ಸಾವೇ ಬಂದರೂ ಖುಷಿಯಿಂದ ಮತ್ತು ನೆಮ್ಮದಿಯಿಂದ ಅದನ್ನು ಒಪ್ಪಿಕೊಳ್ಳಬಲ್ಲೆ ಎನ್ನುವ ದೃಢವಾದ ವಿಶ್ವಾಸವಿದೆ. ಇವೆಲ್ಲವೂ ದೊರೆತದ್ದು ಅಥವಾ ಇಂತಹ ಬದಲಾವಣೆ ಆದದ್ದು ಅರೆಕ್ಷಣದಲ್ಲಿ ಅಥವಾ ಮಂತ್ರದಿಂದ ಖಂಡಿತಾ ಅಲ್ಲ. ಅದಕ್ಕಾಗಿ ನನ್ನ ರೂಪವನ್ನು ಪಡೆದುಕೊಂಡು ಇತರರಿಗೂ ಸದಾ ಬಳಕೆಗೆ ಸಿಗುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಅಂತಹ ಸಂದರ್ಭಗಳನ್ನೆಲ್ಲಾ ಪ್ರತಿದಿನ ನನ್ನ ಪರಿವರ್ತನಾ' ಪುಟದಲ್ಲಿ ಬರೆಯಲಾರಂಭಿಸಿದೆ. ಈ ಪುಟವು 440ನೇ ಸಂಚಿಕೆಗೂ ಮೀರಿ ಮುಂದೆ ಸಾಗಿದೆ. ಇದೆಲ್ಲವೂ ನನ್ನ ಹೆತ್ತವರು, ಗುರುವೃಂದ, ನನ್ನ ಮಾರ್ಗದರ್ಶಕ ಮೇಲಧಿಕಾರಿಗಳು, ಹಿತೈಶಿಗಳು, ಕುಟುಂಬಸ್ಥರು, ನನ್ನ ತರಬೇತಿ ಅಭ್ಯಥಿಗಳು ಮತ್ತು ಸಮಸ್ತ ಓದುಗರ ಆಶೀರ್ವಾದ. ಕೊರೋನಾ ಗೃಹಬಂಧದ ಸಂದರ್ಭದಲ್ಲಿ ನಾನು ಬರೆದಿದ್ದ ಸಾವಿರಾರು ಲೇಖನಗಳನ್ನು ವಿಷಯಾಧಾರಿತವಾಗಿ ವರ್ಗೀಕರಣ ಮಾಡುತ್ತಿದ್ದಾಗ ಪ್ರವಾಸಿ ತಾಣಗಳ ಪರಿಚಯ, ವಿನೂತನ ತಂತ್ರಜ್ಞಾನಗಳು, ತರಬೇತುದಾರರ ಮಾರ್ಗದರ್ಶಿ, ವ್ಯಕ್ತಿತ್ವ ವಿಕಸನ ಕಥೆಗಳು, ಔಷಧೀಯ ಉತ್ಪನ್ನಗಳು, ಸಾಧಕ ಮಹಿಳೆಯರು ಮತ್ತು ಪುರುಷರು ಮುಂತಾದ ಬರಹಗಳು ಸಿಕ್ಕವು. ಈ ಎಲ್ಲಾ ಪ್ರಕಾರಗಳ ನನ್ನ ಪುಸ್ತಕಗಳು ಅದಾಗಲೇ ವಿವಿಧ ಪ್ರಕಾಶನಗಳಲ್ಲಿ ಪ್ರಕಟಗೊಂಡಿದ್ದು, ಇದೀಗ ವ್ಯಕ್ತಿತ್ವ ವಿಕಸನ ಸಂಬಂಧಿತ ಸನ್ನಿವೇಶಗಳ ಗುಚ್ಛವಾಗಿ 'ಲೈಫ್‌ನ ಸಕ್ಸೆಸ್ ಮಂತ್ರ' ಎಂಬ ಪುಸ್ತಕವಾಗಿ ಮೂಡಿಬರುತ್ತಿದೆ. ಜೀವನ ಎನ್ನುವುದು ಅತ್ಯಂತ ಅಮೂಲ್ಯ, ಇಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಎಲ್ಲರೂ ಪರಿಪೂರ್ಣತೆ ಕಂಡು ಜೀವನದಲ್ಲಿ ಹೆಚ್ಚಿನ ಯಶಸ್ಸು ಗಳಿಸಲೆನ್ನುವುದೇ ಈ ಪುಸ್ತಕದ ಪ್ರಮುಖ ಉದ್ದೇಶ. 'ಲೈಫ್‌ನ ಸಕ್ಸೆಸ್ ಮಂತ್ರ' ಹೊತ್ತಿಗೆಯಲ್ಲಿ ಯಶಸ್ಸಿಗೆ ಅತ್ಯಗತ್ಯವಾಗಿ ಬೇಕಾಗುವ ಮೂಲ ಮಂತ್ರಗಳಾದ, ಯಶಸ್ಸು ಆಗದೇ ಇದ್ದಾಗ ಗುರಿಯನ್ನು ಬದಲಿಸುವ ಬದಲು ಯೋಜನೆಯನ್ನು ಬದಲಿಸಿಕೊಳ್ಳುವುದು, ಇತರರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡುವ ಬಗೆ, ಬೆಂಕಿಯ ಕಿಡಿಯನ್ನು ಹೊತ್ತಿಸುವಾಗ ಇರಬೇಕಾದ ವಿವೇಚನೆ, ಮನುಷ್ಯನ ಯಶಸ್ಸಿಗೆ ಪೂರಕ ಆಗಬಹುದಾದ ವಿಚಾರ ಗಳಾದ ಮಾತಿಗಿಂತ ಮೌನದ ಶ್ರೇಷ್ಠತೆ, ಅಂತಸ್ತಿಗಿಂತ ಇತರರಿಗೆ ಸಹಾಯ ಮಾಡುವ ಮನಸ್ಸು ಹೇಗಿರಬೇಕು, ಸರಳ ಜೀವನಕ್ಕಿರುವ ಮೌಲ್ಯ, ಗೆಲುವಿನ ವರೆಗೂ ತೋರಬೇಕಾದ ಕೆಚ್ಚು, ಶಾಶ್ವತ ಅಲ್ಲದ ಈ ಬದುಕು ಆದಷ್ಟು ಸರಳ ಮತ್ತು ಸವಿಯಾಗಿ ಇರಲಿ, ಯಶಸ್ವಿ ಬದುಕಿನ ಸೂತ್ರಗಳು, ನಾನೇ ಶ್ರೇಷ್ಠ ಎನ್ನುವ ಅಹಂಭಾವ ತೊರೆಯುವಿಕೆಯ ಮಹತ್ವ, ನಾಯಕತ್ವ ಹಕ್ಕು ಚಲಾವಣೆಗಿಂತ ತಂಡವನ್ನು ಮುನ್ನಡೆಸಿ ದುಡಿಯುವಿಕೆಯ ಮಹತ್ವ, ಅವಕಾಶವನ್ನು ನಿರ್ಮಿಸಿ ಕೊಳ್ಳುವ ವಿಧಾನ, ಸ್ವಯಂ ಸಾಮರ್ಥ್ಯ ಬಳಸಿ ಬೆಳೆಯುವ ರೀತಿ. ಕೋರೆ ಹಲ್ಲಿದ್ದಾಗ ಅಗೆಯಲು ಮಣ್ಣು ಇರುವುದಿಲ್ಲ, ಮಣ್ಣು ಇದ್ದಾಗ ಅಗೆಯಲು ಕೋರೆ ಹಲ್ಲು ಇರುವುದಿಲ್ಲ, ಆಸ್ತಿ, ಜೀವನವನ್ನು ರೂಪಿಸುವ ಶಿಲ್ಪಿಯೇ ಗುರುಗಳು. ವ್ಯಕ್ತಿಯ ತ್ತಿಯ ಮೂಲವೇ ಜ್ಞಾನ, ಆಲೋಚನೆ ಮತ್ತು ಪರಿಶ್ರಮ, ಗೆಲುವೆಂದರೆ ಅದು ಒಬ್ಬರ ಗೆಲುವಲ್ಲ, ತಂಡದ ಗೆಲುವು ಎಂದು ತಿಳಿದುಕೊಳ್ಳುವ ವಿಧಾನ, ಗುರಿಯು ಸ್ಪಷ್ಟವಾಗಿ ಇದ್ದಾಗ ಧೈರ್ಯದಿಂದ ಮುಂದೆ ಸಾಗುವ ಛಾತಿಯನ್ನು ತೋರುವ ಬಗೆಯ ಕುರಿತು ವಿವರಿಸುವ ಪ್ರಯತ್ನವನ್ನು ಮಾಡಿದ್ದೇನೆ.

ಅದೇ ರೀತಿ ಸಮಯ ಬದಲಾದಂತೆ ನಾವೂ ಬದಲಾಗುವ ಅವಶ್ಯಕತೆ, ಸರಿಯಾದ ಜೀವನಶೈಲಿಯೇ ವ್ಯಕ್ತಿಯ ಪಾಲಿಗೆ ಐಶ್ವರ್ಯ, ವ್ಯಕ್ತಿಯಲ್ಲಿ ಇರಬೇಕಾದ ನಾಗರೀಕ ಪ್ರಜ್ಞೆಯ ಮಹತ್ವ, ಕಾಲಚಕ್ರದೊಂದಿಗೆ ಜತೆಯಾಗಿ ಉರುಳಬೇಕು ಈ ಜೀವನ, ಭಯ ಎನ್ನುವ ಪದಕ್ಕೆ ಎದುರಾಗಿ ನಿಲ್ಲದಿದ್ದರೆ ಗೆಲುವು ಅಸಾಧ್ಯ. ಕೆಟ್ಟವರಿಂದ ದೂರ ಇರುವುದ ಔಚಿತ್ಯ, ಬದುಕಿನಲ್ಲಿ ವ್ಯಕ್ತಿಯ ಸಾಧನೆಗಳು ಶಾಶ್ವತವಾಗಿ ಉಳಿಯುವ ಬಗೆ, ವ್ಯಕ್ತಿಯೊಬ್ಬನ ವಿವಿಧ ರೀತಿಯ ನೋವುಗಳೇ ಸಾಧನೆಯ ಕೆಚ್ಚನ್ನು ಮೂಡಿಸುವುದರ ಹಿಂದಿನ ಮರ್ಮ, ಪ್ಲಾಸ್ಟಿಕ್ ಕೊಡಕ್ಕಿಂತ ತಾಮ್ರದ ಕೊಡ ಯಾಕೆ ಹೆಚ್ಚು ಶ್ರೇಷ್ಠ?, ಗೆಲುವಿನಲ್ಲಿ ಸತತ ಪ್ರಯತ್ನದ ಪಾಲು, ಇತರರನ್ನು ಕ್ಷಮಿಸುವ ವ್ಯಕ್ತಿತ್ವದ ಶ್ರೇಷ್ಠತೆ, ಯಾವುದೇ ಒಂದು ಕೆಲಸವನ್ನು ಮಾಡಿದ ಕೂಡಲೇ ಅದಕ್ಕೆ ಪ್ರತಿಫಲ ದೊರೆಯದು ಎನ್ನುವುದನ್ನು ಅರಿತು ಕೊಳ್ಳುವ ಮಹತ್ವ, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದರಿಂದ ಆಗುವ ಲಾಭಗಳು, ಸಮಯದ ಮಭಯವನ್ನು ಗೆದ್ದವನು ಬದುಕನ್ನೇ ಗೆದ್ದಂತೆ, ಸಿಗುವ ಸಣ್ಣ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಮುನ್ನಡೆದವನು ಜೀವನದಲ್ಲಿ ಗೆಲ್ಲುತ್ತಾನೆ, ನಾವು ಯಾವುದೇ ಕೆಲಸವನ್ನು ಮಾಡಲು ಪ್ರಯತ್ನಿಸಿದಾಗ ಧನಾತ್ಮಕ ಸಂಪರ್ಕ ಇದ್ದಲ್ಲಿ ಎಂತಹ ಅಸಾಧ್ಯವನ್ನೂ ಸಾಧಿಸ ಬಹುದು, ಬದುಕಿನಲ್ಲಿ ನಿಶ್ಚಲವಾಗಿ ಬಿದ್ದಿರುವ ಬದಲು ಜೀವಂತಿಕೆಯ ಲವಲವಿಕೆ ಇರಬೇಕು ಹಾಗೂ ಸದಾ ಇನ್ನೊಬ್ಬರನ್ನು ದೂಷಿಸುತ್ತಾ, ತೆಗಳುತ್ತಾ ಜನರು ಎಸೆಯುವ ಕಲ್ಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಸಂಗ್ರಹಿಸಿ ಅದರಿಂದಲೇ ಯಶಸ್ಸಿನ ಮಹಲನ್ನು ಕಟ್ಟಿ ಕೊಳ್ಳಬೇಕು, ದೇಹದ ಪ್ರಮುಖ ಅಂಗವಾದ ಎರಡು ಕೈಗಳೇ ಇಲ್ಲದಿದ್ದರೂ ವಿಶ್ವದ ಗಮನ ಸೆಳೆದ ಬಿಲ್ಲಾರ್ತಿ ಶೀತಲ್ ದೇವಿ, ವಾದಕ್ಕಿಂತ ಮೌನದ ಮೂಲಕ ಗೆಲ್ಲುವ ವಿಧಾನ ಎನ್ನುವ ವಿಚಾರಗಳನ್ನು ವಿಶದಪಡಿಸುವ ಪ್ರಯತ್ನವನ್ನು ಮಾಡಿದ್ದೇನೆ.

ಕಠಿಣ ಪರಿಶ್ರಮವೇ ಸಾಧಕನ ಸೊತ್ತು, ಯಾವುದೇ ಕೆಲಸಕ್ಕೆ ಕೈ ಹಾಕಿದಾಗ ಅದಕ್ಕೊಂದು ಅಂತಿಮ ದಿನಾಂಕದ ಗುರಿಯನ್ನು ಹಾಕಿಕೊಳ್ಳಬೇಕು, ಸದಾ ತೊಂದರೆ ಕೊಡುವವರ ಜೊತೆ ಗುದ್ದಾಡುತ್ತ ಸಮಯವನ್ನು ವ್ಯರ್ಥ ಮಾಡಿಕೊಳ್ಳ ಬಾರದು, ವೃತ್ತಿಯಲ್ಲಿ ನೆಲೆಯೂರುವಿಕೆ ಹಾಗೂ ಭವಿಷ್ಯವನ್ನು ಕಟ್ಟಿಕೊಳ್ಳುವ ವಿಧಾನ, ಉತ್ತಮ ಗೆಳೆಯರು ಒಂದು ಲೈಬ್ರರಿ ಇದ್ದಂತೆ, ಸಿಟ್ಟು ನಿಯಂತ್ರಣದಲ್ಲಿ ಇಲ್ಲವಾದಲ್ಲಿ ಆಗುವ ಅನಾಹುತಗಳು, ನನ್ನ ಮನೊದಳಗೆ ಇರುವ ಅಹಂಕಾರ ಹೊರಟು ಹೋದರೆ ನಾವು ಎಂತಹ ಉನ್ನತ ಸ್ಥಾನಕ್ಕಾದರೂ ಹೋಗಬಹುದು, ಸಮಯದ ಪರಿವೆಯೇ ಇಲ್ಲದೇ ಸಂಸ್ಥೆಗಾಗಿ ದುಡಿಮೆ ಮಾಡುವವನು ಮುಂದೊಂದು ದಿನ ಮಾಲೀಕನಾಗಿ ಬೆಳೆಯುತ್ತಾನೆ, ಬೇರೆಯವರನ್ನು ನೋಡುವಾಗ ಮತ್ತು ಗಮನಿಸುವಾಗ ನಮ್ಮ ಆಂತರ್ಯವು ಶುದ್ಧವಾಗಿ ಇರಬೇಕು, ಹತ್ವವನ್ನು ಅರಿಯುವ ವಿಧಾನ, ಯಾವುದೇ ವಿಚಾರಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡುವುದರಿಂದ ಆಗಬಹುದಾದ ಅನಾಹುತಗಳು, ಹೆಚ್ಚಿನದ್ದು ದೊರೆಯಬೇಕು ಎಂದರೆ ಮೊದಲು ನಾವು ಮೌಲ್ಯಯುತ ವ್ಯಕ್ತಿಗಳು ಆಗಬೇಕು, ತಪ್ಪು ಮಾಡಿ ತಕ್ಷಣ ಕ್ಷಮೆ ಕೇಳುವ ಮನಸ್ಸಿರಬೇಕು. ನಮ್ಮ ಯೋಚನೆಗಳು ಹೆಚ್ಚು ಸಕಾರಾತ್ಮಕ ಆಗಿದ್ದಾಗ ಸ್ವಸ್ಥ ಆರೋಗ್ಯ ನಮ್ಮದಾಗುತ್ತದೆ. ಸಣ್ಣ ಸಣ್ಣದಾದ ಯಶಸ್ಸುಗಳೇ ಮುಂದಿನ ಬೃಹತ್ ಯಶಸ್ಸಿಗೆ ಸೋಪಾನ, ಬದುಕಿನಲ್ಲಿ ಆಹಾರ ಮತ್ತು ಪಾನೀಯದ ಮಹತ್ವ, ಇನ್ನೊಬ್ಬರ ಯಶಸ್ಸನ್ನು ಕಂಡು ಅವರಿಗೆ ತೊಂದರೆ ಕೊಡಬಾರದೆನ್ನುವ ಹಲವು ಮಂತ್ರಗಳನ್ನು ಓದುಗರನ್ನು ಸುಲಭವಾಗಿ ತಲುಪುವಂತೆ ಮತ್ತು ಸುಲಲಿತವಾಗಿ ಅರ್ಥೈಸಿ ಕೊಳ್ಳುವಂತೆ ವಿವರಿಸುವ ಪ್ರಯತ್ನವನ್ನು ಮಾಡಿದ್ದು, ಅವುಗಳಲ್ಲಿ ನಾಲ್ಕನೆಯ ಹಂತದ ಒಂದಷ್ಟು ಲೇಖನಗಳ ಪೈಕಿ ಐವತ್ನಾಲ್ಕು ಲೇಖನಗಳು ಶ್ರೀ ನಾಗೇಶ್ ಡಿ.ಸಿ ಅವರ ಕದಂಬ ಪ್ರಕಾಶನ ಬೆಂಗಳೂರು ಇವರ ಮೂಲಕ 'ಲೈಫ್‌ನ ಸಕ್ಸಸ್ ಮಂತ್ರ' ಎಂಬ ಪುಸ್ತಕ ರೂಪವನ್ನು ಪಡೆಯುತ್ತಿದೆ. ಪ್ರಕಟಿಸುತ್ತಿರುವ ಅವರಿಗೆ ಅಭಿನಂದನೆಗಳು.

ಯಶಸ್ಸನ್ನು ಗಳಿಸಬೇಕೆಂಬ ಹಂಬಲ ಇದ್ದಲ್ಲಿ ಮೊದಲು ನಮ್ಮನ್ನು ನಾವು ಬದಲಾವಣೆಗೆ ಒಡ್ಡಿಕೊಳ್ಳಬೇಕು. ನಮ್ಮ ವ್ಯಕ್ತಿತ್ವದಲ್ಲೇ ಮೊದಲು ಕೃಷಿಯನ್ನು ಮಾಡಬೇಕು. ನಮ್ಮ ವ್ಯಕ್ತಿತ್ವವನ್ನೇ ಮೊದಲು ಇತರರಿಗೆ ಮಾದರಿ ವ್ಯಕ್ತಿತ್ವವನ್ನಾಗಿ ಮಾಡಿಕೊಳ್ಳಬೇಕು. ಇಂತಹ ವ್ಯಕ್ತಿತ್ವವನ್ನು ಹೊಂದಿದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಯಶಸ್ವಿ ವ್ಯಕ್ತಿಗಳು ಅವರ ಹುಟ್ಟಿನಿಂದಲೇ ಯಶಸ್ವಿ ವ್ಯಕ್ತಿಗಳಾಗಿ ಹುಟ್ಟಿಲ್ಲ, ಬದಲಿಗೆ ಅವರು ಬೆಳೆದ ಮತ್ತು ಸಾಗಿದ ರೀತಿಯಿಂದಾಗಿ ಅತ್ಯಂತ ಯಶಸ್ವಿ ವ್ಯಕ್ತಿಗಳಾಗಿ ಮೂಡಿಬಂದಿದ್ದಾರೆ. ಆದ್ದರಿಂದ ವ್ಯಕ್ತಿಯ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸಿಗೂ ಮೂಲ ಮಂತ್ರವೇ ನಮ್ಮ ಧನಾತ್ಮಕ ವ್ಯಕ್ತಿತ್ವ, ಆದ್ದರಿಂದ ಯಶಸ್ಸನ್ನು ಗಳಿಸುವುದು ಹೇಗೆಂದು ಈ ಪುಸ್ತಕದ ಮೂಲಕ ತಿಳಿಸಲು ಪ್ರಯತ್ನಿಸಿದ್ದೇನೆ. ನನ್ನ ಈ ಪ್ರಯತ್ನದಲ್ಲಿ ನಾನು ಖಂಡಿತ ಯಶಸ್ವಿಯಾಗುತ್ತೇನೆ, ಮತ್ತು ಈ ಪುಸ್ತಕದಲ್ಲಿ ವಿವರಿಸಿರುವ ಹಲವು ಸನ್ನಿವೇಶಗಳು ನಮ್ಮೆಲ್ಲರ ವ್ಯಕ್ತಿತ್ವದ ವಿಕಾಸಕ್ಕೆ ಖಂಡಿತ ದಾರಿ ದೀಪ ಆಗುತ್ತದೆ ಎಂದು ಭಾವಿಸುತ್ತಾ ಈ ಹೊತ್ತಿಗೆಯನ್ನು ಓದುಗರ ಮಡಿಲಿಗೆ ಅರ್ಪಿಸುತ್ತಿದ್ದೇನೆ. ಇಂತಿ ನಿಮ್ಮವ್ನೇ

-ಸಂತೋಷ್ ರಾವ್ ಪೆರ್ಮುಡ

MORE FEATURES

ಹರಿಹರನ ರಗಳೆಗಳು ಓದಿ ಆನಂದ ಪಡುವತ್ತ ತಮ್ಮದೇ ವೈಶಿಷ್ಟ್ಯ ಹೊಂದಿವೆ

21-05-2024 ಬೆಂಗಳೂರು

‘ತನ್ನ ಭಕ್ತಿ ಭಾವೋನ್ಮಾದದ ಜಲಪಾತಕ್ಕೆ ರೂಪ ಕೊಡಲು ಹರಿಹರ ಶಬ್ದಗಳ ಜಲಪಾತವನ್ನೇ ಧುಮ್ಮಿಕ್ಕಿಸುತ್ತಾನೆ’ ಎ...

'ನಂಕು'ವಿನ ಅಕ್ಷರ ಭಾವಕೆ 'ರಾಂಕೊ' ರೇಖಾ ಭಾವ

21-05-2024 ಬೆಂಗಳೂರು

'ಭಾವರೇಖೆಯಲ್ಲಿ ಪ್ರೀತಿ ಇದೆ. ಅವಳಿದ್ದಾಳೆ, ಅದೇ ಮುಂಗುಳಿನಲ್ಲಿ ಕಾಡಿದವಳು, ಸೂರ್ಯನಿಗಿಂತ ಪ್ರಕರವಾಗಿ ಕಂಡವಳು ಹೀ...

ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಬೇಕಾದ ಶಕ್ತಿ ತನುಮನಗಳಲ್ಲಿ ಪ್ರವಹಿಸುತ್ತದೆ

21-05-2024 ಬೆಂಗಳೂರು

‘ಮಕ್ಕಳಿಗೆ ಕುವೆಂಪು ಅವರನ್ನು ಪರಿಚಯಿಸುವಾಗ ಹೆಸರಿಗೂ ಮುನ್ನ 'ನಮ್ಮ' ಎಂದು ಗುರುತಿಸಿರುವುದರಲ್ಲಿಯೇ ಒ...