ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ


‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ ವಿಷಯ ಗಾಂಭೀರ್ಯ, ಕಾವ್ಯ ಕೌಶಲ್ಯವೂ 'ಮಹಾಭಾರತ'ವನ್ನು ಉಚ್ಚಸ್ಥಾನದಲ್ಲಿ ನಿಲ್ಲಿಸುತ್ತದೆ’ ಎನ್ನುತ್ತಾರೆ ಕಂನಾಡಿಗಾ ನಾರಾಯಣ. ಅವರು ‘ದ್ವಾಪರ’ ಕಾದಂಬರಿ ಕುರಿತು ಬರೆದ ಮಾತು ನಿಮ್ಮ ಓದಿಗೆ.

ಯುಗಾಂತರಗೊಳ್ಳುವ ಮುನ್ನ..
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ ।
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ॥

(ನಮಿಸಿ ನಾರಾಯಣನ ನರನ ವ್ಯಾಸ ವಾಗ್ಲೆವಿಯರ ಬಳಿಕ ಪೇಳ್ವುದು ಜಯವ ಪುರುಷೋತ್ತಮನ ಕನ್ನಡೀಕರಣ : ಕೃಷ್ಣಶಾಸ್ತ್ರೀ) ಎಂಬ ಮಂಗಳ ಶ್ಲೋಕದಿಂದ ಆರಂಭವಾಗುವ 'ಮಹಾಭಾರತ' ಅತ್ಯಂತ ಸಂಕೀರ್ಣವಾದ ಪುರಾಣೇತಿಹಾಸ ಎಂಬುದು ಎಲ್ಲರಿಗೂ ಗೊತ್ತಿರುವಂಥದೇ. ರಾಮಾಯಣ ಪುರಾಣವೆಂತಲೂ, ಮಹಾಭಾರತ ಇತಿಹಾಸ ವೆಂತಲೂ ಈಗಾಗಲೇ ಪ್ರಸಿದ್ಧವಾಗಿವೆ. ರಾಮಾಯಣ ಒಂದೇ ಹಾದಿಯಲ್ಲಿ ಸಾಗುವ ನದಿಯಂಥ ಕಾವ್ಯವಾದರೆ, ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ.

ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ ವಿಷಯ ಗಾಂಭೀರ್ಯ, ಕಾವ್ಯ ಕೌಶಲ್ಯವೂ 'ಮಹಾಭಾರತ'ವನ್ನು ಉಚ್ಚಸ್ಥಾನದಲ್ಲಿ ನಿಲ್ಲಿಸುತ್ತದೆ. ಇಷ್ಟು ವಿಸ್ತಾರವಾದ, ಇಷ್ಟೊಂದು ವಿಷಯ ವೈವಿಧ್ಯತೆಯನ್ನು ಹೊಂದಿರುವ ಇದನ್ನು ಒಬ್ಬ ವ್ಯಕ್ತಿಯೇ ಬರೆದರೆ ಅಥವಾ ಕಾಲಾನುಕ್ರಮೇಣ ಪರಂಪರೆಯುದ್ದಕ್ಕೂ ಬರೆಯಲ್ಪಟ್ಟಿತೇ ಎಂಬ ಸಂದೇಹ ಬಹಳ ಮುಖ್ಯವಾಗಿ ಕಾಡಲಾರಂಭಿಸುತ್ತದೆ. ಒಬ್ಬನೇ ಕವಿ ಬರೆದಿದ್ದರೆ ಸಾಧ್ಯವಾಗದಂತಹ ಓಘ ಎಂಬುದೂ ಮೇಲುನೋಟಕ್ಕೇ ಕಂಡುಬರುತ್ತದೆ. ಇದು ಕೇವಲ ಗ್ರಂಥಸ್ಥವಾದದ್ದಲ್ಲವೆಂದೂ, ನೂರಾರು ಸಾವಿರಾರು ಜನ ಪ್ರವಚನಕಾರರ ನಿರಂತರ ಆಲೋಚನೆಯಿಂದ ರೂಪುಗೊಂಡದ್ದೆಂದು ಈಗಾಗಲೇ ತರ್ಕಿಸ ಲಾಗಿದೆ. ಉತ್ತರದ ಮತ್ತು ದಕ್ಷಿಣದ ವಿವಿಧ ಪಠ್ಯಗಳು, ಅವುಗಳಲ್ಲೇ ಅಕಾಡೆವಿ ನೂರಾರು ಶಾಖೆಗಳು, ಮತ್ತೆ ಉಪಶಾಖೆಗಳು; ಅಲ್ಲದೆ ಹಲವು ಪಾಠಗಳಲ್ಲಿನ ಭಿನ್ನತೆ, ಒಳವಿರೋಧಗಳು ಢಾಳಾಗಿ ಕಣ್ಣಿಗೆ ರಾಚುತ್ತವೆ.

'ಮೂಲತಃ ಮೀನು ಹಿಡಿಯುವ ಬೆಸ್ತರವಳಾದ, ತತ್ಪರಿಣಾಮವಾಗಿ ಮೀನಿನ ಪರಿಮಳವೇ ಮೈವೆತ್ತಂಥ ಮತ್ತ್ವಗಂಧಿಯಾದ ಸತ್ಯವತಿಯಲ್ಲಿ ಪರಾಶರ ಮುನಿಗಳ ಸಂಯೋಗದಿಂದ ಜನಿಸಿದ ವ್ಯಾಸರಿಂದ ಮೂಲ ಮಹಾಭಾರತ ರಚಿತವಾಯಿತು ಎಂಬುದು ಜನಜನಿತ. ವ್ಯಾಸರು ಮಹಾಭಾರತ ಘಟನೆಗಳ ಸಮಕಾಲೀನರು ಮಾತ್ರವಲ್ಲದೇ ಬಹು ಪಾಲು ಕಥಾವ್ಯಕ್ತಿಗಳ ನೇರ ಪರಿಚಯಸ್ಥರೂ ಆಗಿದ್ದರು. (ವ್ಯಾಸ ಎಂಬ ವ್ಯಕ್ತಿ ಇರಲೇ ಇಲ್ಲ; ಮಹಾಭಾರತವನ್ನು ಆತ ಬರೆಯಲೇ ಇಲ್ಲ ಎಂಬ ಒಂದು ವಾದವೂ ಇದೆ.) ವಾಸ್ತವವಾಗಿ 'ವ್ಯಾಸ' ಎಂಬುದರ ಅರ್ಥವೇ ವ್ಯವಸ್ಥಿತ ಗೊಳಿಸಿದವನು, ನಿರ್ದಿಷ್ಟ ವ್ಯವಸ್ಥೆಯಲ್ಲಿ ಪೋಣಿಸಿದವನು ಎಂದಾಗುತ್ತದೆ. ಮಹಾಭಾರತದ ಕಥೆಯ ಪ್ರಕಾರ ವ್ಯಾಸನ ನಿಜವಾದ ಹೆಸರು 'ಕೃಷ್ಣ ದೈಪಾಯನ' (ದ್ವೀಪದಲ್ಲಿ ಹುಟ್ಟಿದ ಕಪ್ಪುಬಣ್ಣದವನು) ಎಂಬುದು.

ಮಹಾಭಾರತದ ಆಂತರಿಕ ಆಧಾರಗಳಿಂದ ಮೂರು ಭಿನ್ನ ಪಾತಳಿಗಳಿರುವುದನ್ನು ಗುರುತಿಸಬಹುದು. ಧರ್ಮಕ್ಕೇ ಜಯವಾಗುತ್ತದೆಂಬ ತಾತ್ವಿಕ ಪ್ರತಿಪಾದನೆಯ 8800 ಶ್ಲೋಕಗಳ 'ಜಯ'ವನ್ನು ವ್ಯಾಸರು ತಮ್ಮ ಪುತ್ರನಾದ ಶುಕನಿಗೂ, ಶಿಷ್ಯರಾದ ಜೈಮಿನಿ ಹಾಗೂ ವೈಶಂಪಾಯನನಿಗೂ ಕಲಿಸಿದರು. ಜೈಮಿನಿಯ ಭಾರತದ ಒಂದು ಪಠ್ಯ ಮಾತ್ರ ಲಭ್ಯವಾಗಿದ್ದರೆ, ವೈಶಂಪಾಯನನ ಭಾರತವು ಅನೇಕ ವಿಸ್ತ್ರತಗಳನ್ನೂ, ಅನೇಕ ಪ್ರಕ್ಷಿಪ್ತಗಳನ್ನೂ ಒಳಗೊಂಡು ಮುಂದುವರೆಯುತ್ತ ಹೋಯಿತು. ಆರಂಭದಲ್ಲಿ ಇದು ಕ್ಷತ್ರಿಯರಿಗೆ ಕ್ಷತ್ರಿಯೇತರರಲ್ಲಿ ಜನಿಸಿದ ಸೂತರು ರಾಜರ ಆಸ್ಥಾನದಲ್ಲಿ ಹಾಡುತ್ತಿದ್ದ ಹಾಡುಗಬ್ಬವಾಗಿತ್ತು. ಎರಡನೇ ಸ್ತರದ ಕ್ಷತ್ರಿಯರಾಗಿದ್ದ ಸೂತರು ರಾಜರಿಗೆ ಸಲಹೆ ನೀಡುವವರಾಗಿಯೋ, ಗೆಳೆಯರಾಗಿಯೋ, ಸಾರಥಿಗಳಾಗಿಯೋ, ಆಸ್ಥಾನಕವಿ ಗಳಾಗಿಯೋ ಒಟ್ಟಿನಲ್ಲಿ ರಾಜವಂಶಕ್ಕೆ ಹತ್ತಿರದವರಾಗಿದ್ದರು. ಸಾಮಾನ್ಯವಾಗಿ ಪೌರಾಣಿಕ ಕಥೆಗಳು, ರಾಜರುಗಳ ಕಥೆಗಳು, ನೀತಿಕಥೆಗಳನ್ನೆಲ್ಲ ಸಾರವತ್ತಾಗಿ ಹೇಳುತ್ತಿದ್ದವರು ಸೂತರೇ ಆಗಿರುತ್ತಿದ್ದರು.

ಹಸ್ತಿನಾಪುರದ ರಾಜ ಜನಮೇಜಯ, ಮಹಾಭಾರತ ಯುದ್ಧದಲ್ಲಿ ಅಳಿದುಳಿದ ಪಾಂಡವರ ಏಕೈಕ ಕುಡಿ ಉತ್ತರೆ-ಅಭಿಮನ್ಯುವಿನ ಮಗ ಪರೀಕ್ಷಿತನ ಪುತ್ರ, ತನ್ನ ತಂದೆ ಪರೀಕ್ಷಿತನನ್ನು ನಾಗನೊಬ್ಬ ಕೊಂದುದಕ್ಕೆ ಪ್ರತೀಕಾರವಾಗಿ ಯಜ್ಞವೊಂದನ್ನು ಏರ್ಪಡಿಸಿ ಅದರಲ್ಲಿ ಸಮಸ್ತ ನಾಗವಂಶದವರನ್ನೆಲ್ಲ ಆಹುತಿಯಾಗಿ ಅರ್ಪಿಸುತ್ತಾನೆ. ಪ್ರಾಯಶಃ ಖಾಂಡವವನ ದಹನದ ಸಂದರ್ಭದಲ್ಲಿ ಅರ್ಜುನನು ನಾಗವಂಶವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವಲ್ಲಿ ವಿಫಲನಾಗಿ, ಅಳಿದುಳಿದಿರಬಹುದಾದ ನಾಗವಂಶಸ್ಥರು ಸೇರು ತೀರಿಸಿಕೊಳ್ಳಲು ಪಾಂಡವರ ವಂಶಜನಾದ ಪರೀಕ್ಷಿತನನ್ನು ಕೊಂದುಹಾಕಿರಬೇಕು. ಮಹರ್ಷಿ ವ್ಯಾಸರು ಜನಮೇಜಯನು ಯಜ್ಞ ನಡೆಸುವಲ್ಲಿಗೆ ಆಗಮಿಸಿ ಪ್ರತೀಕಾರದ ದುಷ್ಕೃತ್ಯವನ್ನು ನಿಲ್ಲಿಸುವಂತೆ ಮನವೊಲಿಸುತ್ತುದೆ ನಡೆಸುವಲ್ಲಿಗೆ ಆಗಮಿಪು ಯಾಕೆ ಶಿಷ್ಯನಾದ ವೈಶಂಪಾಯನನಿಗೆ ಈ ಕೆಲಸವನ್ನು ವಹಿಸುತ್ತಾರೆ. ಹೀಗಾಗಿ ವೈಶಂಪಾಯನು ಜನಮೇಜಯನಿಗೆ ಸರ್ಪಯಾಗ ಪರಿಸಮಾಪ್ತಿ ಸಮಯದಲ್ಲಿ 24000 ಶ್ಲೋಕಗಳ ಭರತ ವಂಶೀಯರ ಕಥೆಯಾದ 'ಭಾರತ'ವನ್ನು ಪ್ರಸ್ತುತಪಡಿಸುತ್ತಾನೆ.

ಸುಮಾರು ಕ್ರಿ. ಪೂ. 400 ರಿಂದ ಕ್ರಿ. ಶ. 400ರ ಮಧ್ಯಭಾಗದಲ್ಲಿ ಹರಿವಂಶಕಾರರಿಂದ ಅನೇಕ ಬಾರಿ ತಿದ್ದಿ, ತೀಡಿ: ನೀತಿಕಥೆ, ಉಪಕಥೆ, ಕೃಷ್ಣನ ಪವಾಡದ ಕಥೆಗಳನ್ನೆಲ್ಲ ಸೇರಿಸಲ್ಪಟ್ಟು ಅದರ ಗಾತ್ರ ಈಗಿನ 107390 ಶ್ಲೋಕಗಳ ರೂಪ ತಲುಪಿ 'ಮಹಾಭಾರತ'ವಾಯಿತು. ಕುರುವಂಶದಂಥ ಪ್ರಖ್ಯಾತ ಸಾಮ್ರಾಜ್ಯವೊಂದು ಅಂತ್ಯಗೊಂಡ ಕಥೆಯು ಹಾಡುಗಬ್ಬವಾಗಿ ಆರಂಭವಾಗಿ, ನಂತರ ಪಾಂಡವರು ರಾಜ್ಯಭಾರ ಮಾಡಲಾರಂಭಿಸಿದ ಮೇಲೆ ಅವರನ್ನು ಓಲೈಸುವ ವಿಜಯದ ಕಥೆಗಳಾಗಿ ಮಾರ್ಪಟ್ಟಿವೆ ಎಂದು ಡಿ. ಡಿ. ಕೋಸಾಂಬಿಯವರು ಅಭಿಪ್ರಾಯಪಟ್ಟರೆ: ಒಂದು ಕಾಲಘಟ್ಟದಲ್ಲಿ ಸೂತರ ಸ್ವಾಮ್ಯದಲ್ಲಿದ್ದ ಸಾಹಿತ್ಯವು ಭೈಗುವಂಶದ ಬ್ರಾಹ್ಮಣರ ವಶಕ್ಕೆ ಬಂದದ್ದೆಂದು, ಹಾಡುಗಬ್ಬವಾಗಿದ್ದ 'ಜಯ'ವನ್ನು 'ಮಹಾಭಾರತ'ವನ್ನಾಗಿ ಮಾಡಿದವರು ಭೈಗುವಂಶದ ಬ್ರಾಹ್ಮಣರು ಎಂಬ ತೀರ್ಮಾನಕ್ಕೆ ವಿ. ಎಸ್. ಸುಕ್ತಂಕರ್ ಅವರು ಬರುತ್ತಾರೆ. 'ಭಾರತ' ಹಾಡುಗಬ್ಬವು ಅದರ ಬೆಳವಣಿಗೆಯ ಒಂದು ಬಿಕ್ಕಟ್ಟಿನ ಹಂತದಲ್ಲಿ ಭೈಗುಬ್ರಾಹ್ಮಣ ವಂಶಸ್ಥರ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಾಗ ಮೂಲಕಥೆಗೆ ಸಂಬಂಧವಿರದ ಅನೇಕ ಉಪಕಥೆಗಳನ್ನು ಅವಿನಾಭಾವವೆನ್ನುವಂತೆ ಅದರಲ್ಲಿ ಅಳವಡಿಸಿಕೊಂಡು ಪ್ರಚುರಪಡಿಸುತ್ತ ಬಂದರು. ಗೆದ್ದ ಪಾಂಡವರ ಪ್ರಶಂಸೆಗಾಗಿ ಹಾಗೂ ಸೋತ ಕೌರವರ ಅವಹೇಳನಕ್ಕಾಗಿ, ಕೇಳುಗರ ರಂಜನೆಯ ಜೊತೆಗೆ ಅವರ ಮನಸ್ಸನ್ನು ಇನ್ನೊಂದು ಮಗ್ಗುಲಿಗೆ ವಾಲಿಸುವ ಸಲುವಾಗಿ ಆನಂತರದ ಕಾಲದಲ್ಲಿ ಹೀಗೆ ಪ್ರಕ್ಷಿಪ್ತವಾಗಿರಬೇಕು. ಅಲ್ಲದೇ ಮಹಾಭಾರತದ ಮುಖ್ಯ ಭಾಗವಾದ ಭಗವದ್ಗೀತೆಯೂ ಸಹ, ಅದರ ಅಆಂತರಿಕ ಆಧಾರಗಳ ಮೇಲೆ, ಬೇರೆ ಬೇರೆ ಕಾಲದ ಮೂವರು ಬೇರೆ ಬೇರೆ ಲೇಖಕರಿಂದ ರಚನೆಯಾಗಿದೆ ಎಂಬ ನಿರ್ಧಾರಕ್ಕೆ ಸಂಸ್ಕೃತ ವಿದ್ವಾಂಸರಾದ ಜಿ. ಎಸ್. ಖೇರ ಅವರು ಬರುತ್ತಾರೆ.

ಪುರೋಹಿತ ವರ್ಗಕ್ಕೆ ಆರಂಭದ ಆರ್ಯ ಸಮಾಜದಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಇರಲಿಲ್ಲ. ಆ ಸಮಾಜದಲ್ಲಿ ಪ್ರಮುಖ ಸ್ಥಾನವಿದ್ದುದು ಕ್ಷತ್ರಿಯರಿಗೆ. ಆರ್ಯ ಸಮಾಜದೊಳಗೆ ಅನಾರ್ಯರು ಸೇರ್ಪಡೆಯಾದಂತೆಲ್ಲಾ ಎರಡು ಬಣಗಳಲ್ಲಿ ಸಂಘರ್ಷ ಆರಂಭವಾಯಿತು. ಪರಶುರಾಮನಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳಲ್ಲೆಲ್ಲ ಆ ಸಂಘರ್ಷದ ಧ್ವನಿ ಪ್ರತಿಬಿಂಬಿತವಾಗಿದೆ. ಅದಾಗಲೇ ಪ್ರಸಿದ್ಧವಾಗಿದ್ದಂತಹ ಭರತವಂಶ, ಕುರುವಂಶ ಮತ್ತು ಪುರುವಂಶದ ರಾಜವಂಶಗಳ ಮೇಲೆ ಪುರೋಹಿತರು ತಮ್ಮ ಹಿರಿಮೆಯನ್ನು ಸಾಧಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಆರ್ಯರೊಳಗೆ ಸೇರ್ಪಡೆಯಾದ ಅನಾರ್ಯರ ಮೇಲೆ ತಮ್ಮ ಪರಮಾಧಿಕಾರವನ್ನು ಸ್ಥಾಪಿಸಿಕೊಂಡರು. ಮಹಾಭಾರತದಲ್ಲಿ ಬರುವ ಮೂಲ ಸಂಪ್ರದಾಯಗಳು ಮತ್ತು ಆಚರಣೆಗಳೆಲ್ಲ ಕ್ಷತ್ರಿಯ ಮೂಲದವು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ತಮ್ಮ ಆಶ್ರಯದಾತರಾದ ಪಾಂಡವ, ಯಾದವ ಬುಡಕಟ್ಟುಗಳಿಗೆ ಸೇರಿದ ನವ ಆರ್ಯರ ಪರಮಾಧಿಕಾರವನ್ನು ಪ್ರಚಾರ ಮಾಡುವ ಉದ್ದೇಶದಿಂದ ಭೈಗುವಂಶದ ಪರಿಷ್ಕರಣಕಾರರು ಮಹಾಭಾರತದ ಮೂಲ ಪದ್ಧತಿಗಳನ್ನು ತಿರುಚಿ ವಿಕೃತಗೊಳಿಸಿದರು ಎಂದು ಪ್ರೊ|| ಬಿ. ವಿ. ವೀರಭದ್ರಪ್ಪನವರು ತಮ್ಮ ಅಸ್ತಿತ್ವವನ್ನು ಅಭಿಪ್ರಾಯಪಡುತ್ತಾರೆ.

ಪಾಂಡವರು ಕೌರವರನ್ನು ಗೆಲ್ಲಲು ಏನೆಲ್ಲ ಕುತಂತ್ರಗಳನ್ನು ಮಾಡಿದರೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಕುತಂತ್ರಗಳನ್ನು : ಉಳಿಸಿಕೊಳ್ಳಲು ಕೌರವರೂ ಮಾಡಿದ್ದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಆದರೆ 'ಜಯ'ದ ತೀರ್ಮಾನವಾದ ನಂತರ ಪಾಂಡವರ ಕುತಂತ್ರಗಳೆಲ್ಲ ಗೌಣವಾಗಿ, ಕೌರವರ ಕುತಂತ್ರಗಳಿಗೆ ಮತ್ತಷ್ಟು ಬಣ್ಣಕಟ್ಟಿ ಅವುಗಳ ಸ್ವರೂಪವನ್ನು ಎಲ್ಲೆಮೀರಿ ಉತ್ತೇಕ್ಷಿಸಲಾಗಿದೆ. ಅವುಗಳ ನಡುನಡುವೆ ಎಷ್ಟೋ ಉಪಾಖ್ಯಾನಗಳನ್ನು ಸೇರಿಸಿ ಕಲದೆರಕೆ ಮಾಡಲಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ ಈಗ ಅದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಪರಿಣಾಮಕಾರಿಯಾಗಿ ಸಮ್ಮಿಳಿತವಾಗಿಬಿಟ್ಟಿದೆ. ಮೂಲ ಗ್ರಂಥವು ಕೌರವರ ಪರವಾಗಿತ್ತೆಂಬುದಕ್ಕೆ ಪೂರಕವಾದ ಯಾವುದೇ ಆಂತರಿಕ ಗ್ರಂಥಸ್ಥ ಸಾಕ್ಷ್ಯಗಳಾಗಲೀ, ಬಾಹ್ಯ ಐತಿಹಾಸಿಕ ಸಾಕ್ಷ್ಯಗಳಾಗಲೀ ಲಭ್ಯವಿಲ್ಲ.

ಮಹಾಭಾರತವು ಕ್ರಮೇಣವಾಗಿ ವಿಕಾಸಗೊಳ್ಳುತ್ತ ಹೋದುದನ್ನು ಗಮನಿಸಿದರೆ, ಅದರ ರಚನೆಯ ನೂರಾರು ವರ್ಷಗಳವರೆಗೆ ಅದನ್ನು ವೇದದಂತೆ ಬಾಯಿಪಾಠ ಮಾಡಿ ಕಲಿಸುವ ಪ್ರವೃತ್ತಿ ಇದ್ದುದು ಸ್ಪಷ್ಟವಾಗುತ್ತದೆ. ವಾಚನ ಮಾಡುವ ಸಂದರ್ಭದಲ್ಲಿ ಅದಕ್ಕೆ ಇನ್ನಷ್ಟು ಮೆರುಗು ನೀಡುವ ಉಮೇದಿನಲ್ಲಿ ಮೂಲದಲ್ಲಿಲ್ಲದ ಅನೇಕ ವಿಸ್ಮತಿಗಳನ್ನು ಸೇರಿಸಿರಬಹುದು. ಹೀಗೆ ಶತಶತಮಾನಗಳ ಕಾಲ ಪುಷ್ಟಿಕರಣಗೊಳ್ಳುತ್ತ ಬಂದು ಕ್ರಮೇಣ ಲಿಖಿತ ರೂಪಕ್ಕಿಳಿದಿರಬೇಕು. ಪ್ರತಿ ಮಾಡುವ ಸಂದರ್ಭದಲ್ಲಿ ಕೂಡ ಮತ್ತೆ ಮತ್ತೆ ಪರಿಷ್ಕರಣ ಗೊಳ್ಳುತ್ತ ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಪಠ್ಯಗಳು ರೂಪಿತಗೊಂಡವು. ಕಾಲಕ್ರಮದಲ್ಲಿ ಅನೇಕ ವಿಷಯಗಳು, ಉಪಾಖ್ಯಾನಗಳು, ಉಪದೇಶಗಳು, ದೃಷ್ಟಾಂತ ಕಥೆಗಳು, ಮೋಕ್ಷ ಬೋಧಕ ಪ್ರಕರಣಗಳು ಸೇರಿಸಲ್ಪಟ್ಟವು. ನಳ-ದಮಯಂತಿ, ಸತ್ಯವಾನ್- ಸಾವಿತ್ರಿ, ಯಯಾತಿ, ಶಕುಂತಲೆ ಮೊದಲಾದ ಉಪಾಖ್ಯಾನಗಳು, ವಿದುರ ನೀತಿಯಂಥ ರಾಜಧರ್ಮ ಪ್ರಕರಣಗಳು ಹೀಗೆ ಸೇರಿದವೇ ಆಗಿರಬೇಕು. ಪ್ರಕ್ಷಿಪ್ತವಾಗಿರುವ ಬಹುಪಾಲು ಭಾಗಗಳಲ್ಲಿನ ರಸವಂತಿಕೆ, ಶೈಲಿ, ಪದಬಂಧಗಳಲ್ಲೆಲ್ಲಿಯೂ ಮೂಲಗ್ರಂಥಕ್ಕಿಂತ ಕಡಿಮೆಯಿಲ್ಲವೆಂಬುದನ್ನು ಗಮನಿಸಿದರೆ, ರಚಿಸಿದವರು ಅತ್ಯಂತ ಪ್ರತಿಭಾಶಾಲಿಗಳೇ ಆಗಿದ್ದರೆಂಬುದು ಅರಿವಿಗೆ ಬರುತ್ತದೆ. ಎಲ್ಲವನ್ನೂ ಒಂದು ಕಡೆ ಅಡಕಗೊಳಿಸಿ ಅದನ್ನು ಒಂದು ವಿಶ್ವಕೋಶವನ್ನಾಗಿಸುವ ಪ್ರಯತ್ನ ನೋಡಿದರೆ ಎಲ್ಲ ಕಾಲದಲ್ಲೂ ಅದರ ಜನಪ್ರಿಯತೆ ಉಳಿದುಕೊಂಡೇ ಬಂದಿರುವುದು ಎದ್ದು ಕಾಣುತ್ತದೆ.

-ಕಂನಾಡಿಗಾ ನಾರಾಯಣ

MORE FEATURES

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...