ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 


"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕಥೆ ಕಾದಂಬರಿಗಳನ್ನು ಲೇಖನಗಳನ್ನು ಓದಿದ್ದೆನಾದರೂ ನನಗೆ ಬಹಳ ಮನ ಕಲಕಿದ, ಯೋಚನೆಗೆ ಹಚ್ಚಿದ ಪುಸ್ತಕವೆಂದರೆ ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿ ತಂದ "ಹಿಮಾಲಯನ್ ಬ್ಲಂಡರ್" ಎನ್ನುತ್ತಾರೆ ಚೇತನ ಭಾರ್ಗವ. ಅವರು ರವಿ ಬೆಳಗೆರೆ ಅವರ ಅನುವಾದಿತ ಕೃತಿ ಹಿಮಾಲಯನ್ ಬ್ಲಂಡರ್ಕುರಿತು ಬರೆದ ಅನಿಸಿಕೆ.

ಮೂಲತಃ ಇದನ್ನು ದೇಶ ಕಂಡ ಅಪ್ರತಿಮ ಯೋಧರಾದ ಬ್ರಿಗೇಡಿಯರ್ ದಳವಿ ಅವರು ರಚಿಸಿದ್ದು. 1962ರ ಅಕ್ಟೋಬರ್ ನಲ್ಲಿ ಭಾರತ ಚೀನಾ ನಡುವಿನ ಯುದ್ಧದಲ್ಲಿ ಅರುಣಾಚಲದ ತುತ್ತ ತುದಿಯ ರಣಾಂಗಣದಲ್ಲಿ ಅಸಲಿಗೆ ಏನಾಯಿತು, ಯುದ್ಧದ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು. ಸ್ವತಂತ್ರ ಭಾರತದ ಪ್ರಶ್ನಾತೀತ ನಾಯಕರಾದ ನೆಹರೂ ರವರ ವಿದೇಶಾಂಗ ನೀತಿಯ ವೈಫಲ್ಯ ಎಲ್ಲಾಯಿತು, ಇದರ ಪರಿಣಾಮ ಮಿಲಿಟರಿ ಮೇಲೆ ಹೇಗಾಯಿತು, ಸೈನ್ಯದ ಆವತ್ತಿನ ಸ್ಥಿತಿಗತಿಗಳು ಭಾರತದ ಜನರ ಮನೋಸ್ಥಿತಿ ಹೀಗೆ ಹತ್ತು ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕನ್ನಡಿ ಹಿಮಾಲಯನ್ ಬ್ಲಂಡರ್.

ಅಸಲಿಗೆ ಆ ಯುದ್ಧ ಭಾರತದ ಅಸ್ಮಿತೆಗೆ ಬಲವಾದ ಹೊಡೆತ, ಚೀನೀ ಕಮ್ಯುನಿಸ್ಟ್ ವಿಸ್ತರಣಾವಾದದ ಅರಿವಿದ್ದೂ ನಮ್ಮ ಪೇಲವ ವಿದೇಶಾಂಗ ನೀತಿ ಚೀನಿಯರನ್ನು ಅರುಣಾಚಲದ ಅಂಚಿಗೆ ಬೃಹತ್ ಸೈನ್ಯದೊಂದಿಗೆ ಬೀಡು ಬಿಡುವಂತೆ ಮಾಡುತ್ತದೆ. ಅಂತ ಚೀನಿಯವರ ವಿರುದ್ಧ ಒಂದು ಬ್ರಿಗೇಡ್ ನೇತೃತ್ವ ವಹಿಸಿ ನಾಮ್ಕಾಚು ಕೊಳ್ಳದಲ್ಲಿ ಕೊನೆಯವರೆಗೂ ಹೋರಾಡಿ ಚೀನಿಯರ ಸೆರೆಸಿಕ್ಕಿ ಅವಮಾನ ಹಿಂಸೆ ನುಂಗಿ ಕೊನೆಗೆ ಬಿಡುಗಡೆ ಗೊಂಡು, ತನಗೆ ನೋವಿದ್ದರೂ ತನ್ನ ಅನುಭವಗಳು ಸೈನ್ಯಕ್ಕೆ ನೆರವಾಗಲಿ ಎಂದು ಅಸಲಿ ಯುದ್ಧದ ಇತಿಹಾಸ ಘಟನೆ ಹಾಗೂ ಅದರ ವರದಿ ಕೊಡುವ ಪುಸ್ತಕವೇ ಹಿಮಾಲಯನ್ ಬ್ಲಂಡರ್. ಆದರೆ ನೆಹರೂ ಸರಕಾರ ತನ್ನ ತಪ್ಪನ್ನ ಮುಚ್ಚಿಕೊಳ್ಳಲು ಈ ಪುಸ್ತಕವನ್ನೇ ಬ್ಯಾನ್ ಮಾಡಿತು. ತೀರಾ ಇತ್ತೀಚಿನವರೆಗೂ ಇದರ ಬಗ್ಗೆ ಜನತೆಗೆ ಅರಿವಿರಲಿಲ್ಲ.

ರವಿ ಬೆಳಗೆರೆಯವರ ಹೆಗ್ಗಳಿಕೆ ಈ ಪುಸ್ತಕದ ಹಿಂದೆ ಬಿದ್ದು ಅದನ್ನು ಹೇಗೋ ಸಂಪಾದಿಸಿ ಕನ್ನಡಕ್ಕೆ ತಂದದ್ದು. ಈ ಅಮೂಲ್ಯ ರತ್ನದಿಂದಲೇ ಭಾರತೀಯ ಸೈನಿಕರ ವೀರಗಾಥೆ ತೆರೆದುಕೊಂಡಿದ್ದು. ಕೈಯಲ್ಲಿ ಬಂದೂಕು ಇಲ್ಲದೆ ಮದ್ದುಗುಂಡುಗಳಿಲ್ಲದೆ ಬೆಚ್ಚನೆ ಬಟ್ಟೆ ಇಲ್ಲದೆ ಕಡೆ ಪಕ್ಷ ತಿನ್ನಲು ಊಟವೂ ಇಲ್ಲದೆ ಹಿಮದ ಕಿರಣಗಳಿಂದ ಕುರುಡಾಗಿ ಚೀನೀ ಸೈನಿಕರ ಕೈಗೆ ಸಿಕ್ಕು ಸತ್ತ ಭಾರತೀಯರ ಯೋಧರ ಕಥನ ಕಂಬನಿ ತರಿಸುತ್ತದೆ. ನೆಹರೂ ಸರಕಾರ ಮಾಡಿದ ಅನಾಚಾರ ಸೈನಿಕರ ಆಹುತಿ ಯುದ್ಧದ ಸೋಲು ಆಕ್ರೋಶ ತರಿಸುತ್ತದೆ. ಪರಿಣಾಮ ಟಿಬೆಟ್ ನ ಗಡಿಯಿಂದ ಅಸ್ಸಾಮದ ಬಯಲುಗಳ ತನಕ ಭಾರತ ಮೇಲೆ ಚೀನೀ ಸೈನಿಕರು ಆಕ್ರಮಣ ಮಾಡಿ ಬಿಡುತ್ತಾರೆ. ಕೊನೆಗೆ ಅಮೇರಿಕಾ ಗದರಿದಾಗ ವಾಪಾಸ್ಸಾಗಿ ಯುದ್ಧ ಸಂಧಾನ ನಡೆಯುತ್ತದೆ. ಸೋತ ಭಾರತದ ಮೇಲೆ ಕಳಂಕದ ಮಚ್ಚೆ ಶಾಶ್ವತವಾಗಿ ಮೂಡುತ್ತದೆ .

ಕನ್ನಡ ಅನುವಾದದಲ್ಲಿ ರವಿ ಬೆಳಗೆರೆಯವರ ದೈತ್ಯ ಬರಹದ ತಾಕತ್ತು ಕಾಣಬಹುದು. ಅನುವಾದವೇ ಆದರೂ ಅವರ ಶೈಲಿ ಓದುಗರನ್ನು ತಟ್ಟುತ್ತದೆ ಮನವನ್ನು ಕಲಕಿ ಕಣ್ಣೇರು ಹರಿಸುತ್ತದೆ. ಅದಕ್ಕಿಂತಲೂ ಮಿಗಿಲಾಗಿ ದಳವಿಯವರ ಸತ್ಯಸಂಧತೆ ನೈಜ ಘಟನಾವಳಿಗನ್ನು ಸಾಕ್ಷಿ ಪ್ರಜ್ಞೆಯಲ್ಲಿ ವಿವರಿಸುವ ರೀತಿ, ಸೈನ್ಯದ ಶಿಸ್ತು, ಪರಾಕ್ರಮ, ಸೈನ್ಯಕ್ಕಾದ ರಾಜಕೀಯ ಅಪಚಾರಗಳು ಹೀಗೆ ಭಾರತದ ಸೈನಿಕನ ಹಂತ ಹಂತದಲ್ಲೂ ನಮ್ಮ ಮುಂದಿಡುವ ಕೃತಿಯಾಗಿ ದಳವಿಯವರು ಪೂಜ್ಯರಾಗುತ್ತಾರೆ. ಯುದ್ಧೇತಿಹಾಸ ಸಾಹಿತ್ಯದ ಶೈಲಿಯ ಲೆಕ್ಕಾಚಾರಗಳನ್ನು ಮೀರಿದುದಾಗಿರುತ್ತದೆ. ಅದರ ಸತ್ಯದ ಆವರಣ ಹಿರಿದಾಗಿರುತ್ತದೆ. ಅದರಂತೆ ಬೇರೆಲ್ಲ ಕೃತಿಗಳಿಗಿಂತ ವಿಭಿನ್ನ ತೂಕವಾಗಿ ಶ್ರೇಷ್ಠವಾಗಿ ನಿಲ್ಲುತ್ತದೆ.

ಹಿಮಾಲಯ ತೂಕವಾದ ತಪ್ಪುಗಳು (ಬ್ಲಂಡರ್ ) ಇನ್ನೆಂದೂ ನಡೆಯದಿರಲಿ. ಜೈ ಜವಾನ್ ಎಂಬ ಧ್ಯೇಯ ವಾಕ್ಯ ನಮ್ಮ ಉಸಿರಾಗಿರಲಿ.

- ಚೇತನ ಭಾರ್ಗವ

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...