ಪಿ. ಚಂದ್ರಿಕಾ ಅವರ “ಮೋದಾಳಿ”

Date: 06-12-2021

Location: ಬೆಂಗಳೂರು


ವಡ್ಡಾರಾಧನೆಯ ಉಪಕತೆ ಇಲ್ಲಿ ಚಂದ್ರಿಕಾ ಅವರಿಗೆ ಪ್ರೇರಣೆಯಾಗಿದೆಯೇ ಹೊರತು ಅದೇ ನಾಟಕಗದ ಕಥಾವಸ್ತುವಾಗಿಲ್ಲ. ಹೆಣ್ಣಿನ ನಿತ್ಯ ನಿರಂತರ ಶೋಷಣೆ, ಅವಮಾನ, ಹಿಂಸೆಗಳ ನಡುವೆಯೇ ಮೋದಾಳಿ ಎದ್ದುನಿಲ್ಲುವ, ಹೋರಾಡುವ ಹೊಸ ಜಗತ್ತೊಂದು ಈ ನಾಟಕದಲ್ಲಿ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ಪಿ.ಚಂದ್ರಿಕಾ ಅವರ “ಮೋದಾಳಿ” ಕುರಿತು ವಿಶ್ಲೇಷಿಸಿದ್ದಾರೆ.

ಅನೇಕ ಮಹಿಳಾ ನಾಟಕಕಾರರು ರಾಮಾಯಣ-ಮಹಾಭಾರತದ ಕಥಾನಕಗಳನ್ನು ಆರಿಸಿಕೊಂಡು ನಾಟಕ ಬರೆದರೆ, ಪಿ. ಚಂದ್ರಿಕಾ ಅವರು “ವಡ್ಡಾರಾಧನೆಯ” ಉಪಕತೆಯ ಪ್ರಸಂಗವನ್ನಿಟ್ಟು ಕೊಂಡು ಈ ನಾಟಕ ರಚಿಸಿದ್ದಾರೆ. ಅವರ “ಮೋದಾಳಿ” ಹೆಸರಿನ ಈ ನಾಟಕ 2019ರಲ್ಲಿ ಬೆಂಗಳೂರಿನ ಅಭಿನವ ಪ್ರಕಾಶನದಿಂದ ಪ್ರಕಟವಾಗಿದೆ. 10.04.2017ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ರಂಗಬೆಳಕು’ ತಂಡದಿಂದ ಈ ನಾಟಕ ಪ್ರಯೋಗಗೊಂಡಿದೆ. ಅಂದಿನ ತಿರುಮಲಾಂಬಾ ಅವರಿಂದ ಇಂದಿನ ಪಿ. ಚಂದ್ರಿಕಾ ಅವರ ವರೆಗೆ ಇರುವ ಮಹಿಳಾ ನಾಟಕ ಪರಂಪರೆಯಲ್ಲಿ ಪಿ. ಚಂದ್ರಿಕಾ ಅವರು ಮಹತ್ವದ ನಾಟಕಕಾರ್ತಿಯಾಗಿ ಬೆಳೆದು ನಿಂತಿದ್ದಾರೆ. ತಿರುಮಲಾಂಬಾ ಸಾಂಪ್ರದಾಯಿಕ ನಾಟಕಕಾರ್ತಿಯಾಗಿ ಕಂಡರೆ, ಪಿ. ಚಂದ್ರಿಕಾ ಪ್ರಗತಿಪರ ಚಿಂತಕಿಯಾಗಿ ಸ್ತ್ರೀ ಸಾಧ್ಯತೆಗಳನ್ನು ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೆ ಕವಯತ್ರಿಯಾಗಿ ಗುರುತಿಸಿ ಕೊಂಡಿರುವ ಚಂದ್ರಿಕಾ ಅವರು ಈ ನಾಟಕದಲ್ಲಿ ಕಾವ್ಯದ ಗೊಂಚಲನ್ನೇ ಕಟ್ಟಿ ಬಿಟ್ಟಿದ್ದಾರೆ.

ಈ ನಾಟಕಕ್ಕೆ ಜಿ. ರಾಜಶೇಖರ ಅವರು ಮೌಲಿಕ ಮುನ್ನುಡಿಯನ್ನು ಬರೆದಿದ್ದಾರೆ. ವೈದೇಹಿಯವರು ಬೆನ್ನುಡಿ ಬರೆದಿದ್ದಾರೆ. ಶಿವಕೋಟ್ಯಾಚಾರ್ಯರ “ವಡ್ಡಾರಾಧನೆ” 19 ಕತೆಗಳ ಕಥಾಗುಚ್ಛವಾಗಿದೆ. ಇದೊಂದು ಸಾಹಿತ್ಯದ ಕೃತಿಯಾಗಿರುವಂತೆ ಜೈನ ಸಾಧಕರ ಆರಾಧನೆಯ ಗ್ರಂಥವೂ ಆಗಿದೆ. ಕನ್ನಡದ ಪ್ರಥಮ ಗದ್ಯಕೃತಿಯೂ ಆಗಿದೆ. ಈ ಕೃತಿಯಲ್ಲಿ ಬರುವ “ಸುಕುಮಾರ ಸ್ವಾಮಿಯ ಕತೆಯ” ಉಪಕತೆಯ ಪ್ರಸಂಗದಲ್ಲಿ ಬರುವ ಮೋದಾಳಿಯನ್ನು ಕೇಂದ್ರವಾಗಿರಿಸಿಕೊಂಡು ಈ ನಾಟಕ ರಚಿಸಲಾಗಿದೆ. ಈ ಉಪಕತೆಯನ್ನು ಯಥಾವತ್ತಾಗಿ ತೆಗೆದುಕೊಳ್ಳದೆ, ವರ್ತಮಾನಕ್ಕೆ ತಕ್ಕಂತೆ ಕತೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡ ಚಂದ್ರಿಕಾ ಅವರು ಹಿಂದಿನ ಕಥೆಯನ್ನು ಇಂದಿನದನ್ನಾಗಿ ಮಾಡಿದ್ದಾರೆ. ಗಿರೀಶ ಕಾರ್ನಾಡರು ಪುರಾಣವನ್ನು ಮುರಿದುಕಟ್ಟಿದಂತೆ, ಚಂದ್ರಿಕಾ ಅವರು ಅಂದಿನ ಮೋದಾಳಿಯನ್ನು ಇಂದಿನ ಕಾಲದಲ್ಲಿ ಚಿತ್ರಿಸಿದ್ದಾರೆ, ಹೀಗಾಗಿ ನಾಟಕ ಕುತೂಹಲ ಹುಟ್ಟಿಸುತ್ತದೆ.

ಮೂಲ ಉಪಕಥೆಯಲ್ಲಿ ಶ್ವೇತಪುರ ಪಟ್ಟಣದ ವ್ಯಾಪಾರಿಯಾಗಿದ್ದ ಮತ್ಸ್ಯ ಮತ್ತು ಜೈಸೆ ದಂಪತಿಗೆ ನಂದ ಮತ್ತು ಬೋಧ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ಅದೇ ಪಟ್ಟಣದಲ್ಲಿ ಸೂರದತ್ತು-ವಸುದತ್ತೆ ಎಂಬ ವರ್ತಕ ದಂಪತಿಗೆ ಮೋದಾಳಿಯೆಂಬ ಮಗಳಿರುತ್ತಾಳೆ. ಈ ಮೋದಾಳಿಯನ್ನು ನಂದನಿಗೆ ಕೊಟ್ಟು ಮದುವೆ ಮಾಡಬೇಕೆಂದು ಹಿರಿಯರು ನಿರ್ಧರಿಸಿರುತ್ತಾರೆ. ಆದರೆ ವ್ಯಾಪಾರಕ್ಕೆಂದು ಹೋದ ನಂದ ಹನ್ನೆರಡು ವರ್ಷಗಳಾದರೂ ಬಾರದೇ ಹೋದಾಗ, ಅವನ ವಿಚಾರದಂತೆ ಬೋಧನಿಗೆ ಕೊಟ್ಟು ಮದುವೆ ಮಾಡಬೇಕೆಂದು ವಿವಾಹವನ್ನು ನಿಶ್ಚಯಿಸುತ್ತಾರೆ. ಈ ವಿವಾಹದ ಸಿದ್ಧತೆ ನಡೆಯುತ್ತಿದ್ದಾಗಲೇ ನಂದನು ಪಟ್ಟಣಕ್ಕೆ ವಾಪಸ್ಸಾಗುತ್ತಾನೆ. ಈಗ ಅಣ್ಣ ಬಂದಿದ್ದರಿಂದ ಅವನೇ ಮೋದಾಳಿಯನ್ನು ಮುದುವೆಯಾಗಲೆಂದು ಬೋಧ ಹೇಳುತ್ತಾನೆ. ಈ ಅಣ್ಣ-ತಮ್ಮರ ಕಿತ್ತಾಟದಲ್ಲಿ ಮೋದಾಳಿ ಅವಿವಾಹಿತೆಯಾಗಿಯೇ ಉಳಿಯುತ್ತಾಳೆ. ಅದೇ ಪಟ್ಟಣದಲ್ಲಿರುವ ನಾಗಸೂರ ನೆಂಬ ವರ್ತಕ ಮಧ್ಯವಯಸ್ಸಿನವ, ಎಂಟು ಪತ್ನಿಯರನ್ನು ಹೊಂದಿದವ. ಇಂತಹ ನಾಗಸೂರನಿಗೆ ಮೋದಾಳಿ ಮೋಹಗೊಳ್ಳುತ್ತಾಳೆ. ಮೋದಾಳಿ-ನಾಗಸೂರರ ಅಕ್ರಮ ಸಂಬಂಧ ಒಂದು ದಿನ ಬಯಲಾಗುತ್ತದೆ. ಈ ಅಕ್ರಮ ಸಂಬಂಧ ಗೊತ್ತಾಗಿ ರಾಜಭಟರು ಈ ಜೋಡಿಯನ್ನು ಬಂಧಿಸುತ್ತಾರೆ. ಮೋದಾಳಿ ಮತ್ತು ನಾಗಸೂರ ಇಬ್ಬರೂ ಬೆಂಕಿಯಲ್ಲಿ ಕಾದ ಕಬ್ಬಿಣದ ಪ್ರತಿಮೆಗಳನ್ನು ಅಪ್ಪಿಕೊಂಡು ಸಾಯಬೇಕೆಂದು ರಾಜಾಜ್ಞೆಯಾಗುತ್ತದೆ. ಇದು ವಡ್ಡಾರಾಧನೆಯಲ್ಲಿ ಬರುವ ಉಪಕಥೆಯಾಗಿದೆ. ಆದರೆ ಮೋದಾಳಿ ನಾಟಕದಲ್ಲಿ ಚಂದ್ರಿಕಾ ಅವರು ಹೊಸ ತಿರುವು ಕೊಟ್ಟಿದ್ದಾರೆ. ನಾಗಸೂರ ಒಬ್ಬ ಕಾಮುಕ ಅವನು ಮೋದಾಳಿಯನ್ನು ನಿಜವಾಗಿ ಪ್ರೀತಿಸುತ್ತಿರಲಿಲ್ಲ. ಅವಳೇ ಮೋಹಗೊಂಡು ಬಂದಾಗ ಅವಳನ್ನು ಅನುಭವಿಸುತ್ತಾನೆ. ಅಕ್ರಮ ಸಂಬಂಧ ಇದೆಂದು ರಾಜಾಜ್ಞೆಯಾದಾಗ ಆತ ತನ್ನ ಚಾಲಾಕಿತನದಿಂದ, ತಪ್ಪಿಸಿಕೊಳ್ಳುತ್ತಾನೆ. ಮೋದಾಳಿಯ ಮೇಲಿನ ಮೋಹ ತೀರಿದ ಮೇಲೆ ಅವಳನ್ನು ಚಂಪಕಾನಗರಕ್ಕೆ ಕರೆದುಹೋಗಿ ಮೊದಲೇ ಯೋಜನೆ ಮಾಡಿದಂತೆ ಅವಳನ್ನು ಅನೈತಿಕ ಸಂಬಂಧದ ಹೆಸರಿನಲ್ಲಿ ಸೆರೆಹಿಡಿಯುವಂತೆ ಮಾಡಿ ತಾನು ಪಾರಾಗುತ್ತಾನೆ.

ವಡ್ಡಾರಾಧನೆಯ ಉಪಕತೆ ಇಲ್ಲಿ ಚಂದ್ರಿಕಾ ಅವರಿಗೆ ಪ್ರೇರಣೆಯಾಗಿದೆಯೇ ಹೊರತು ಅದೇ ನಾಟಕಗದ ಕಥಾವಸ್ತುವಾಗಿಲ್ಲ. ಹೆಣ್ಣಿನ ನಿತ್ಯ ನಿರಂತರ ಶೋಷಣೆ, ಅವಮಾನ, ಹಿಂಸೆಗಳ ನಡುವೆಯೇ ಮೋದಾಳಿ ಎದ್ದುನಿಲ್ಲುವ, ಹೋರಾಡುವ ಹೊಸ ಜಗತ್ತೊಂದು ಈ ನಾಟಕದಲ್ಲಿ ಸೃಷ್ಟಿಯಾಗುತ್ತದೆ. ಈ ನಾಟಕದುದ್ದಕ್ಕೂ ಮೇಳ ಬರುತ್ತದೆ. ಮೇಳದವರು ಮತ್ತು ನಿಹಾರಿಕಾ ಎಂಬ ನಾಟಕದ ನಿರ್ದೇಶಕಿ ಆಧುನಿಕ ಕಾಲದವರು. ಸೂರ್ಯಮಿತ್ರ ಚಂದ್ರಮತಿ ಸುನಂದ, ಭಟ್ಟರು, ಸೇವಕಿಯರು ಇವರೆಲ್ಲ ರಾಜಪರಿವಾರದವರು. ಮೋದಾಳಿ, ನಂದ, ದತ್ತ, ನಾಗಶೂರ, ಮುದಕಿ, ಕುರುಡಿ ಇವರೆಲ್ಲ ಕಥಾನಕದ ಮೂಲ ಪಾತ್ರಗಳಾಗಿದ್ದಾರೆ. ಮೇಳ-1, ಮೇಳ-2 ಎಂದು ಕರೆಯುವದರ ಬದಲು ಮೇಳದವನು, ಮೇಳದವಳು ಎಂದು ಕರೆಯಬೇಕಾಗಿತ್ತು. ಮೇಳ-1, ಮೇಳ-2 ಇವರೆಲ್ಲಾ ಮಹಿಳೆಯರೇ ಆಗಿದ್ದಾರೆ. ಮೇಳ ಒಂದೇ ಇರುವುದರಿಂದ ಅರ್ಥಸ್ಪಷ್ಟತೆಗಾಗಿ ಮೇಳದವಳು-1, ಮೇಳದವಳು-2 ಎಂದು ಆ ಪಾತ್ರಗಳ ಹೆಸರಿಡಬೇಕಾಗಿತ್ತು. ದೃಶ್ಯಗಳು ತುಂಬ ಚಿಕ್ಕವುಗಳಾಗಿ ರುವುದರಿಂದ ಪ್ರಾರಂಭವಾಗುತ್ತಿದ್ದಂತೆ ಮುಗಿದು ಹೋಗುತ್ತವೆ. ಹೀಗಾಗಿ ದೃಶ್ಯಗಳು ಬೆಳೆದು ನಿಲ್ಲುವುದಿಲ್ಲ. ಇಂತಹ ಕೆಲವು ತಾಂತ್ರಿಕ ಮಿತಿಗಳನ್ನು ಬಿಟ್ಟರೆ ನಾಟಕದ ರಚನೆ ಅದ್ಭುತವಾಗಿದೆ.

ಇಲ್ಲಿಯ ಕಥಾನಕದಲ್ಲಿ ಮೋದಾಳಿ ದೃಶ್ಯದಿಂದ ದೃಶ್ಯಕ್ಕೆ ಬೆಳೆಯುತ್ತ ಹೋಗುತ್ತಾಳೆ. ಜೈಲಿನಿಂದ-ಬಯಲಿಗೆ, ಸಂಪ್ರದಾಯದಿಂದ ಸುಧಾರಣೆಯ ಕಡೆಗೆ, ರಾಜಸತ್ತೆಯಿಂದ-ಪ್ರಜಾಸತ್ತೆಯ ಕಡೆಗೆ ನಾಟಕ ಬೆಳೆದು ನಿಲ್ಲುತ್ತದೆ. ಮೊದಲನೇ ದೃಶ್ಯವು ನಿಹಾರಿಕಾ ಮತ್ತು ಮೇಳದವರಿಂದ ಪ್ರಾರಂಭವಾಗುತ್ತದೆ. ಇಲ್ಲಿ ಮೋದಾಳಿ ಜೀವಂತಪಾತ್ರವಾಗಿ ಕಾಣಿಸಿಕೊಳ್ಳುತ್ತಾಳೆ. ಎರಡನೇ ದೃಶ್ಯದಲ್ಲಿ ರಾಣಿ ಚಂದ್ರಮತಿ, ಜೈಲಿನಲ್ಲಿದ್ದ ಮೋದಾಳಿಯನ್ನು ಬೇಟಿಯಾಗಿ ಬುದ್ಧಿ ಹೇಳುತ್ತಾಳೆ. ಮೂರನೇ ದೃಶ್ಯದಲ್ಲಿ ರಾಜನಾದ ಸೂರ್ಯಮಿತ್ರ ಮತ್ತು ರಾಣಿ ಚಂದ್ರಮತಿಯರ ಸನ್ನಿವೇಶವಿದೆ. ಮತ್ತೆ ನಾಲ್ಕನೇ ದೃಶ್ಯದಲ್ಲಿ ಸೂರ್ಯಮಿತ್ರ-ಚಂದ್ರಮತಿಯರ ಸಂಭಾಷಣೆಗಳು ಮುಂದುವರಿಯುತ್ತವೆ. ಮೂರನೇ ದೃಶ್ಯ ಮತ್ತು ನಾಲ್ಕನೇ ದೃಶ್ಯದಲ್ಲಿ ಇದೇ ರಾಜ-ರಾಣಿಯರೇ ಕಾಣಿಸಿಕೊಳ್ಳುತ್ತಾರೆ. ಮೂರು ಮತ್ತು ನಾಲ್ಕನೇ ದೃಶ್ಯಗಳ ನಡುವೆ ಬೇರೆ ಪಾತ್ರಗಳ ದೃಶ್ಯಬರಬೇಕಾಗಿತ್ತು. ಮೂರನೇ ದೃಶ್ಯದಲ್ಲಿದ್ದವರೇ ನಾಲ್ಕನೇ ದೃಶ್ಯದಲ್ಲಿ ಕಾಣಿಸಿಕೊಂಡಾಗ, ವೇಷ ಭೂಷಣಗಳು ರಂಗಪರಿಕರಗಳು ಬೇರೆಯಾಗಿರುತ್ತವೆ. ಇವುಗಳನ್ನು ಬದಲಿಸಿಕೊಳ್ಳಲು ಪಾತ್ರಧಾರಿಗಳಿಗೆ ಸಮಯ ಬೇಕಾಗುತ್ತದೆ. ಹೀಗಾಗಿ ದೃಶ್ಯಬದಲಾದ ಕೂಡಲೇ ಮತ್ತೆ ಅದೇ ದೃಶ್ಯದಲ್ಲಿ ಅದೇ ಪಾತ್ರಗಳು ಕಾಣಿಸಿಕೊಳ್ಳುವುದು ರಂಗಪರಿಕರಗಳನ್ನು ಬದಲಿಸುವವರಿಗೆ ತೊಂದರೆಯಾಗುತ್ತದೆ. ಒಂದು ಕತೆಯನ್ನು ಹೇಳುತ್ತ ಹೋಗುವುದು ಬೇರೆ, ಅದನ್ನು ರಂಗದ ಮೇಲೆ ತರುವುದು ಬೇರೆ. ಈ ಕಾರಣಕ್ಕಾಗಿಯೇ ನಾಟಕಕಾರರಿಗೆ ರಂಗಭೂಮಿಯ ಚಳುವಳಿಕೆ ಇರಬೇಕಾಗುತ್ತದೆ. ಇದು ಚಂದ್ರಿಕಾ ಅವರ ಮೊದಲ ನಾಟಕವಾಗಿರುವುದರಿಂದ ಅಲ್ಲಲ್ಲಿ ಇಂತಹ ದೋಷಗಳು ಕಾಣಿಸಿಕೊಂಡಿವೆ. ಆದದ್ದೆ ಅವರು ನಾಟಕವನ್ನು ಬೆಳೆಸಿ ನಿಲ್ಲುವ ರೀತಿ ಕುತೂಹಲಕಾರಿಯಾಗಿದೆ. ಮುದುಕಿ-ಕುರುಡಿಯರ ಸಂಭಾಷಣೆಗಳು ಪರಿಣಾಮಕಾರಿಯಾಗಿವೆ. 16-ದೃಶ್ಯಗಳಲ್ಲಿ ಹರಡಿಕೊಂಡ ಈ ನಾಟಕ ಹೆಣ್ಣಿನ ನೋವು-ಸಂಖಟಗಳ ಸಶಕ್ತ ಅಭಿವ್ಯಕ್ತಿಯಾಗಿದೆ.

ಈ ನಾಟಕದ ಮಹಿಳಾ ಪಾತ್ರಗಳಲ್ಲಿ ಸ್ತ್ರೀ ಸಾಧ್ಯತೆಗಳು ಕಾಣಿಸಿಕೊಂಡಿವೆ. ಇದು ಈ ನಾಟಕದ ಮಹತ್ವದ ಬದಲಾವಣೆಯಾಗಿದೆ. ಮೇಳದ ಮಹಿಳೆಯರಿಂದ ಹಿಡಿದು ಮೋದಾಳಿಯವರೆಗೆ, ಸೇವಕಿಯರಿಂದ ಹಿಡಿದು ಚಂದ್ರಮತಿಯ ವರೆಗೆ ಇಲ್ಲಿಯ ಎಲ್ಲ ಮಹಿಳಾ ಪಾತ್ರಗಳು ಹೆಣ್ಣಿನ ಸಂಕಟದ ಪ್ರತಿಮೆಗಳಂತಿವೆ. ನದಿಯೆಂಬುದು ಇಲ್ಲಿ ಮೋದಾಳಿಯರ ಮೂಲಕ ಬಿಚ್ಚಿಕೊಳ್ಳುವ ಮೋದಾಳಿಯ ಕತೆಯು, ಪುರಾಣ-ಭೂತ-ವರ್ತಮಾನಗಳೆಂಬ ಭೇದವನ್ನು ಅಳಿಸಿಹಾಕಿ ಇಂದಿನ ಸಂದರ್ಭಕ್ಕೂ ಪ್ರಸ್ತುತವೆನಿಸುತ್ತದೆ. ಹೆಣ್ಣಿನ ನೋವು-ಸಂಕಟಗಳು ಪ್ರಭುತ್ವ ಮತ್ತು ವ್ಯವಸ್ಥೆಯನ್ನು ಪ್ರತಿಭಟಿಸುತ್ತಲೇ ಸಾಮಾಜಿಕ ನ್ಯಾಯಕ್ಕಾಗಿ ಹಾತೊರೆಯುತ್ತವೆ.

ಈ ನಾಟಕದಲ್ಲಿ ಫ್ಲ್ಯಾಷ್‍ಬ್ಯಾಕ್ ತಂತ್ರದ ಮೂಲಕ ಕೆಲವು ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಜೈನಧರ್ಮೀಯರು ಸಹನೆ-ಶಾಂತಿ-ಅಂಹಿಸೆಯ ಮೌಲ್ಯಗಳನ್ನು ಆಚರಿಸುತ್ತಿರುತ್ತಾರೆ. ಆದರೆ ಇಲ್ಲಿ ಅರಸ ಸೂರ್ಯಮಿತ್ರನು ಜೈನನಾಗಿದ್ದರೂ ಅಧಿಕಾರದ ಮತ್ತ ನಿಂದಿರುತ್ತಾನೆ. ಅಹಿಂಸಾ ತತ್ವಪಾಲಿಸಬೇಕಾದ ಈ ಅರಸನೇ ರಾಣಿಯಾಗಿರುವ ಚಂದ್ರಮತಿ ಮತ್ತು ಮೋದಾಳಿ ಇಬ್ಬರಿಗೂ ಕಾದ ಕಬ್ಬಿಣದ ಪ್ರತಿಮೆಗಳನ್ನು ಅಪ್ಪಿ ಕೊಂಡು ಸುಟ್ಟು ಸಾಯಬೇಕೆಂದು ಆಜ್ಞೆ ಹೊರಡಿಸುತ್ತಾನೆ. ಮೋದಾಳಿಯನ್ನು ಬಿಟ್ಟು ಬಿಡಲು ಚಂದ್ರಮತಿ ದೈನ್ಯವಾಗಿ ಕೇಳಿಕೊಂಡರೂ ಅರಸ ಕೇಳುವುದಿಲ್ಲ. ಹೆಂಡತಿಯೂ ಆಗಿರುವ ಚಂದ್ರಮತಿ ರಾಣಿ ಗರ್ಭಿಣಿ ಯಾಗಿರುತ್ತಾಳೆ. ಅಂತವಳಿಗೆ ಸಾವಿನ ಶಿಕ್ಷೆ ಕೊಡುವ ಅರಸ ಕಟುಕನಂತೆ ಕಾಣುತ್ತಾನೆ.

“ನಿನ್ನ ಗರ್ಭದಲ್ಲಿ ನಮ್ಮ ಪುತ್ರ ಇಲ್ಲದಿದ್ದರೆ ಇಲ್ಲ. ನಾವೀಗ ಸಂಬಂಧದ ಹಂಗಿಗೆ ಬೀಳಲಾರೆವು. ಇದು ಸತ್ವಪರೀಕ್ಷೆಯ ಕಾಲ. ಈಗ ನಮ್ಮ ರಾಜತ್ವವನ್ನು ನಿರೂಪಿಸಿಕೊಳ್ಳಲೇಬೇಕು. ನಾಳೆ ಬೆಳಗಿನ ಜಾವಕ್ಕೆ ಕೆಂಪಗೆ ಕಾದ ಎರಡು ಕಬ್ಬಿಣದ ಪ್ರತಿಮೆಗಳು ನಿಮಗಾಗಿ ಸಿದ್ಧವಾಗಿರುತ್ತವೆ.” (ಪುಟ:78) ಎನ್ನುವ ಅರಸನು ಕರುಣೆಯಿಲ್ಲದಂತೆ ನಡೆದು ಕೊಳ್ಳುತ್ತಾನೆ.

ಹೀಗೆ ಅರಸ ಸೂರ್ಯಮಿತ್ರ ಮತ್ತು ಕಾಮುಕ ನಾಗಶೂರ, ಭಟ್ಟರು ಈ ಎಲ್ಲ ಪುರುಷ ಪಾತ್ರಗಳು ಖಳನಾಯಕರಂತೆ ಕಾಣಿಸುತ್ತಾರೆ. ಮೋದಾಳಿಯನ್ನು ಮದುವೆಯಾಗಬೇಕಾಗಿದ್ದ ನಂದ, ಬೋಧರಂತಹ ಪುರುಷ ಪಾರ್ಥಗಳೂ. ಅಸಹಾಯಕ ಸ್ಥಿತಿಯಲ್ಲಿ ಪರಿತಪಿಸುತ್ತವೆ. ಹೀಗಾಗಿ ಇಲ್ಲಿ ಬರುವ ಬಹುತೇಕ ಪುರುಷ ಪಾತ್ರಗಳು ಮೋದಾಳಿಯ ಸಂಕಟಗಳಿಗೆ, ಕಾರಣವಾದರೆ, ಮೋದಾಳಿಯನ್ನು ರಕ್ಷಿಸಲು ಹೋದ ರಾಣಿ ಚಂದ್ರಮತಿ ರಾಜಾಜ್ಞೆಯಿಂದ ಕಾದ ಕಬ್ಬಿಣದ ಪ್ರತಿಮೆಯನ್ನಪ್ಪಿಕೊಂಡು ಕರಕಲಾಗಿ ಸುಟ್ಟು ಹೋಗುತ್ತಾಳೆ. ಮೋದಾಳಿಯ ಈ ಅರಸನ ಶಿಕ್ಷೆಯಿಂದ ಪಾರಾಗಿ ಹೋಗುತ್ತಾಳೆ. ಏನೂ ತಪ್ಪು ಮಾಡದ ರಾಣಿ ಚಂದ್ರಮತಿ ಜೀವಂತ ದಹನವಾಗುತ್ತಾಳೆ. ಹೀಗೆ ನಾಟಕದ ಪ್ರಾರಂಭದಿಂದ ಕೊನೆಯವರೆಗೆ ಇಲ್ಲಿ ಬಂದಿರುವ ಹೆಣ್ಣು ಪಾತ್ರಗಳು ಸಂಕಟಗಳನ್ನು ಅನುಭವಿಸುತ್ತಲೇ ಹೋಗುತ್ತವೆ. ಮೇಳದ ಮಹಿಳೆಯರೂ ಕೂಡ ತಮ್ಮ ನೋವುಗಳನ್ನು ತೋಡಿಕೊಳ್ಳುತ್ತಾರೆ.

ಮುದುಕಿ ಮತ್ತು ಕುರುಡಿ ಮಾತ್ರ ಮೋದಾಳಿಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಮೇಳ-2ರ ಹೆಂಗಸು ಮತ್ತು ಮೇಳ-2ರ ಹೆಂಗಸು ಮಾತಾಡುವ ಮಾತುಗಳಲ್ಲಿ ನೋವಿನ ಕತೆಗಳಿವೆ. ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಮೇಳ-2ರ ಹೆಂಗಸು ಹೇಗೆ ತಾನು ಒಬ್ಬ ಪುರುಷನನ್ನು ಪ್ರೀತಿಸಿ ಮೋಸ ಹೋದೆನೆಂಬ ತನ್ನ ಕತೆಯನ್ನು ಹೇಳುತ್ತಾ ಹೋಗುತ್ತಾಳೆ. ಕೊನೆಗೆ ಅವನು, ಅವಳನ್ನು ಬಸಿರು ಮಾಡಿ ಬಿಟ್ಟು ಹೋದಾಗ ಆಕೆ ಪರಿತಪಿಸುತ್ತಾಳೆ. ತನ್ನ ಸಂಕಟವನ್ನು ಮೇಳದ ಹೆಂಗಸರಲ್ಲಿ ಹೇಳಿಕೊಳ್ಳುತ್ತಾಳೆ. ತಮ್ಮ ಮೂರ್ಖ ತನವೇ ತಮ್ಮನ್ನು ಬಲಿತೆಗೆದುಕೊಳ್ಳುತ್ತದೆಂಬ ನಿರ್ಧಾರಕ್ಕೆ ಅವರು ಬರುತ್ತಾರೆ. ಹೀಗೆ ಇಲ್ಲಿ ಬರುವ ಮಹಿಳಾ ಪತ್ರಗಳಲ್ಲಿ ಒಂದಿಲ್ಲ ಒಂದು ರೀತಿಯ ಸಂಕಟದ ಕಥಾನಕಗಳಿವೆ.

ಪ್ರೀತಿಯ ಹೆಸರಿನಲ್ಲಿ ಮೋದಾಳಿಗೆ ಮೋಸಮಾಡಿದ ನಾಗಶೂರ ಕುಹಕನಂತೆ ಕಾಣಿಸುತ್ತಾನೆ. ಇವನ ಪ್ರೀತಿಯ ಮೇಲೆ ನಂಬುಗೆ ಇಟ್ಟ ಬಂದ ಹೆಣ್ಣನ್ನು ನಾಗಸೂರ ಹೇಗೆ ಶೋಷಣೆ ಮಾಡುತ್ತಾನೆಂಬುದನ್ನು ಈ ನಾಟಕದಲ್ಲಿ ಪರಿಣಾಮಕಾರಿಯಾಗಿ ವಿವರಿಸಲಾಗಿದೆ. ಅವಳನ್ನು ಅನುಭವಿಸಿದ ನಾಗಶೂರ ಮೋದಾಳಿಯನ್ನು ಚಂಪಕಾನಗರಕ್ಕೆ ಕರೆದುಕೊಂಡು ಹೋಗಿ, ಮೊದಲೇ ಪ್ಲ್ಯಾನ್‍ಮಾಡಿ ಅವಳನ್ನು ಅನೈತಿಕ ಸಂಬಂಧದ ಹೆಸರಿನಲ್ಲಿ ಸೆರೆಸಿಕ್ಕಿಸುತ್ತಾನೆ. ಗಂಡರಾಗುವ ಇಬ್ಬರು ಸೋದರರನ್ನು ಬಿಟ್ಟು ಬಂದ ಮೋದಾಳಿಗೆ, ಅವಳ ಗಾಢವಾದ ಪ್ರೀತಿಗೆ ದ್ರೋಹದ ಬಗೆದ ನಾಗಶೂರ, ಅವಳನ್ನು ಒಂದು ಭೋಗದವಸ್ತುವನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ. “ನಾನುಕಂಡ ಉಳಿದ ಹೆಣ್ಣುಗಳಿಗಿಂತ ಅವಳೇನೂ ಬೇರೆ ಅನ್ನಿಸಲಿಲ್ಲ, ಅಲ್ಲಿಂದ ಅವಳೊಂದಿಗಿನ ಸಂಬಂಧ ರಸಹೀನವಾಗುತ್ತಾ ಹೋಯಿತು. ನಮ್ಮ ಸಂಬಂಧ ಜೀವಂತವಾಗಿದೆ ಎನ್ನುವ ಭ್ರಮೆ ಹುಟ್ಟಿಸಿದ್ದೆ” (ಪುಟ:-61) ಎಂದು ದತ್ತನೆದುರಿಗೆ ನಾಗಶೂರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಇಂತಹ ಪುರುಷರಿರುವ ವರೆಗೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇರುತ್ತದೆಂಬುದನ್ನು ನಾಟಕ ಪರಿಣಾಮಕಾರಿಯಾಗಿ ಹೇಳುತ್ತದೆ.

ಈ ನಾಟಕದುದ್ದಕ್ಕೂ ಮೋದಾಳಿ ಮತ್ತು ಚಂದ್ರಮತಿಯ ಸಂಭಾಷಣೆಗಳು ಪ್ರಧಾನವಾಗಿವೆ. ಅವು ಕೇವಲ ಸಂಭಾಷಣೆಗಳಾಗಿರದೆ ನೋವಿನ ಹೂಕುಂಡಲುಗಳಾಗಿವೆ. ಹೊರಗೆ ಕಾವ್ಯದ ಅನನ್ಯತೆ ಕಾಣಿಸಿದರೂ ಒಳಗಡೆ ಬೆಂಕಿಯ ಜ್ವಾಲೆಗಳಿವೆ, ಸಂಕಟದ ಸಿಡಿಮದ್ದುಗಳಿವೆ. ಲೇಖಕಿ ಚಂದ್ರಿಕಾ ಕವಿಯಾಗಿರುವುದರಿಂದ ಇಂತಹ ಸಂಭಾಷಣೆಗಳನ್ನು ರಚಿಸಲು ಸಾಧ್ಯವೇ ಹೊರತು, ಬೇರೆಯವರಿಂದ ಸಾಧ್ಯವಿಲ್ಲವೆನ್ನುವಷ್ಟರ ಮಟ್ಟಿಗೆ ಇಲ್ಲಿ ನಾಟಕಕಾರ್ತಿ ಗಮನಸೆಳೆಯುತ್ತಾರೆ. ಮೋದಾಳಿ ಈ ನಾಟಕದ ಪ್ರಮುಖ ಪಾತ್ರವಾಗಿದೆ. ಅವಳ ಕೆಲವು ಸಂಭಾಷಣೆಗಳನ್ನಿಲ್ಲಿ ಗಮನಿಸಬಹುದಾಗಿದೆ.

ನಂಗೆ ಈ ಬೆಳದಿಂಗಳು ಉರಿಯೋ ಸೂರ್ಯಹಾಗಿದೆ. (ಪು-29)
ಕನ್ಯೆಯಾಗಿದ್ದ ನಾನು ಹೆಣ್ಣಾಗುವ ತವಕದಲ್ಲಿದ್ದೆ. ನನ್ನ ಮೈಯ ಕಣ ಕಣದಲ್ಲೂ ಬಯಕೆಗಳು ಕೆನೆಗಟ್ಟಿ ತೇಲುತ್ತಿದ್ದವು. (ಪು-52)
ಅಧಿಕಾರಕ್ಕೆ ಹೆಣ್ಣಿನ ನೋವು ಯಾವತ್ತಾದರೂ ಅರ್ಥವಾಗಿದ್ದು ಈ ಚರಿತ್ರೆನಲ್ಲಿದ್ಯಾ? (ಪು-66)
ಗಂಡಿಗೆ ತನ್ನ ಮೂಗಿನ ನೇರಕ್ಕೆ ಎಲ್ಲಾ ಇದ್ರೆ ಅಪ್ಪ, ಅಣ್ಣ, ತಮ್ಮ, ಗಂಡ ಅನ್ನೋ ಎಲ್ಲಾ ಸಂಬಂಧಗಳನ್ನು ನೆನಪಿಟ್ಟುಕೊಳ್ಳುತ್ತಾನೆ. (ಪು-29)
ನೋಡ್ತಾ ಇದ್ದಹಾಗೆ ಅದೊಂದು ಸುಂದರ ಕೊಳವಾಯಿತು. ಅದರ ತುಂಬಾ ಕೆಂಪು ಕಮಲಗಳರಳಿ... ದುಂಬಿಗಳ ಹಿಂಡಿನ ಝೇಂಕಾರದಲ್ಲಿ ಜಗತ್ತು ತುಂಬಿಹೋಯ್ತು. (ಪು-79) ಮೋದಾಳಿ ಈ ಸಂಭಾಷಣೆಗಳನ್ನು ನೋಡಿದಾಗ ಇದೊಂದು ಕಾವ್ಯಗುಚ್ಛವೆನಿಸುತ್ತದೆ. ಕೇವಲ ಕಾವ್ಯ ಗುಚ್ಛವಾಗಿರದೆ ಹೆಣ್ಣೀನ ನೋವು-ಸಂಖಟಗಳನ್ನು ಸುಂದರವಾಗಿ ಬಿಡಿಸಿಟ್ಟ ಚಿತ್ತಾರದಂತಿದೆ. ಚಂಧ್ರಮತಿ ರಾಣಿಯಾದರೂ ಅವಳೊಂದು ಹೆಣ್ಣೂ, ಹೀಗಾಗಿ ಅವಳಿಗೆ ಅಧಿಕಾರಕ್ಕಿಂತ ಮುಖ್ಯವಾಗಿ ಕಾಣಿಸುತ್ತದೆ. ಈ ಕಾರಣದಿಂದಲೇ ಅವಳ ಸಂಭಾಷಣೆಗಳು ಮೆಚ್ಚುಗೆಯಾಗುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದಾಗಿದೆ.

ನಮ್ಮಂಥಾ ಹೆಣ್ಣುಮಕ್ಕಳಿಂದ ಸಾಮ್ರಾಜ್ಯಗೆಲ್ಲಲು ಸಾಧ್ಯವಾಗದೇ ಹೋಗಬಹುದು. ಆದರೆ ಜೀವ ಉಳಿಯಬಹುದು ಅಲ್ಲವೇ ಮಹಾರಾಜಾ? (ಪು-35)
ನಾವು ಹಾಗಲ್ಲ, ಗೆದ್ದದ್ದನ್ನು ಎದೆಯಲ್ಲಿ ಕಾಪಿಟ್ಟುಕೊಂಡು ಬೆಳಕಾಗಿಸುತ್ತೇವೆ. (ಪು-76)
ಕತ್ತಿಗೆ ಅಂಟಿದ ರಕ್ತದವಾಸನೆ ಎಷ್ಟು ನದಿಗಳ ನೀರಿಂದ ತೊಳೆದರೂ ಹೋಗಲಾರದು ಅಂತಾರೆ. (ಪು-76)
ನಿಮ್ಮ ದೃಷ್ಟಿಯಲ್ಲಿ ನನಗೂ ಈ ಮೋದಾಳಿಗೂ ಏನು ವ್ಯತ್ಯಾಸವಿದೆ ಹೇಳಿ? ನಾವಿಬ್ಬರೂ ಬರೀ ದೇಹಗಳೇ (ಪು-77)
ಇಂತಹ ಕೆಲವು ಸಂಭಾಷಣೆಗಳು ಚಂದ್ರಮತಿಯ ಉದಾರ ವ್ಯಕ್ತಿತ್ವವನ್ನು ಕಟ್ಟಿಕೊಡಲು ಸಹಾಯಕವಾಗಿದೆ. ಒಬ್ಬ ರಾಣಿಯಾಗಿದ್ದುಕೊಂಡು ಅವಳ ಭೋಗಜೀವನದಲ್ಲಿ ಮುಳುಗಿ ಹೋಗಬಹುದಾಗಿತ್ತು. ಆದರೆ ಚಂದ್ರಮತಿ ಮೋದಾಳಿಯಂತಹ ಅಸಹಾಯಕ ಹೆಣ್ಣುಗಳಿಗಾಗಿ ಮಿಡಿಯುತ್ತಾಳೆ. ಕೊನೆಗೆ ಅದಕ್ಕಾಗಿ ತನ್ನ ಪ್ರಾಣವನ್ನೇ ಕೊಡುತ್ತಾಳೆ.

ಮುದುಕಿ ಮತ್ತು ಕುರುಡಿ ಇವರೂ ಕೂಡ ಇ ಅನ್ಯಾಯದ ವಿರುದ್ಧ ದನಿಯೆತ್ತುತ್ತಾರೆ. ಜೈನಧರ್ಮ ದಲ್ಲಿರುವುದೇನು, ಈ ಅರಸ ಸೂರ್ಯಮಿತ್ರ ಮಾಡುವುದೇನು? ಎಂದು ಕೇಳುವ ಅವರ ಪ್ರಶ್ನೆಗಳು ವಸ್ತುನಿಷ್ಠವಾಗಿವೆ. ಪ್ರಜೆಗಳನ್ನು ರಕ್ಷಿಸಬೇಕಾದಂತಹ ರಾಜರು ಹೀಗೆ ಮಾಡಬಹುದೆ? ಎಂಬುದು ಕುರುಡಿಯ ಪ್ರಶ್ನೆ ಯಾಗಿದೆ.

ಕುರುಡಿ-ಅಬ್ಬೇ! ರಾಜ ಸೂರ್ಯಮಿತ್ರರು, ಜೈನಧರ್ಮ ಸೂರ್ಯರಲ್ಲವೇ? ಗಿಡದಿಂದ ಹಣ್ಣನ್ನೂ ಕೊಯ್ಯಬಾರದು ಎನ್ನುವ ಜೈನಧರ್ಮದಲ್ಲಿರುವ ಅವರು ಮೋದಾಳಿ ಅಕ್ಕನ ತಲೆಯನ್ನು ಹೇಗೆ ಕತ್ತರಿಸುತ್ತಾರೆ? (ಪು-74) ಮುದುಕಿ-ಅಯ್ಯೋ ಮಗಳೇ, ನಿನಗೆ ಹೇಗೆ ಹೇಳಲಿ. ಎಲ್ಲ ಧರ್ಮಪಾಲನೆ ನಮ್ಮಂಥ ಸಾಮಾನ್ಯ ಜನರಿಗೆ, ರಾಜರಿಗಲ್ಲ. ಯಾಕೆಂದರೆ ಅವರು ಪ್ರತ್ಯಕ್ಷ ಜೈನರಲ್ಲವೆ? ಅವರು ನಡೆದದ್ದೇ ಧರ್ಮ (ಪು-74)

ಈ ಎರಡು ಸಂಭಾಷಣೆಗಳು ಸಾಮಾನ್ಯ ಪ್ರಜೆಗಳ ಒಳಗುದಿಯ ನುಡಿಗಳಾಗಿವೆ. ರಾಜರು ತಪ್ಪು ಮಾಡಿದಾಗಲೆಲ್ಲ ಅದನ್ನು ಪ್ರಶ್ನಿಸುವ ಶಕ್ತಿ ಸಾಮಾನ್ಯರಿಗಿದೆಯೆಂಬುದನ್ನು ಹೇಳುತ್ತ ಈ ನಾಟಕ ಸಾಮಾನ್ಯ ಮನುಷ್ಯರಿಗೆ ಪ್ರಾಮುಖ್ಯತೆ ನೀಡಿದೆ. ನಾಗಸೂರ ಈ ನಾಟಕದ ಖಳನಾಯಕ. ಆದರೆ ಅವನು ರಸಿಕ. ಹೆಣ್ಣಿನ ಸೌಂದರ್ಯವನ್ನು ಅವನು ವರ್ಣೀಸುವ ರೀತಿ ಕುತೂಹಲಕಾರಿಯಾಗಿದೆ. ಹಲವಾರು ಹೆಣ್ಣುಗಳೊಂದಿಗೆ ಭೋಗಜೀವನ ನಡೆಸಿದ ಅವನಿಗೆ, ಹೆಣ್ಣೆಂದರೆ ಕೇವಲ ಭೋಗದವಸ್ತುವಾಗಿ ಮಾತ್ರ ಕಂಡಿದೆ. ಅವಳ ದೇಹದೊಳಗಿನ ಪ್ರೀತಿ-ಅಂಥಃಕರಣ ಅವನಿಗೆ ಕಾಣಿಸುವುದೇ ಇಲ್ಲ. ಅವನ ಕೆಲವು ಸಂಭಾಷಣೆಗಳನ್ನಿಲ್ಲಿಗಮನಿಸಬಹುದಾಗಿದೆ.

ಅವಳು ಚಂದ್ರಮಂಚದ ಮೇಳಾಡುವ ಅರಗಿಣಿ. ಅದೆಂಥಾ ಚೆಲುವು. ಬಟ್ಟಲ ಕಣ್ಣುಗಳು, ಕಳೆಯೇರೋ ಮಾದಕವಾದ ಆ ತುಟಿಗಳು, ತೊನೆದಾಡುವ ಮೈಮಾಟ... ಪದೇ ಪದೇ ನನ್ನ ಕಾಡೋಕ್ ಶುರುಮಾಡ್ತು. ಎಷ್ಟು ಹೂಗಳಿವೆಯೊ ಅವೆಲ್ಲದರ ಪರಿಮಳ ಒಂದ್ ಗೂಡಿ ಅವಳಾಗಿದ್ದಲೋ ಎನ್ನುವ ಹಾಗೆ ನನ್ನನ್ನು ಸೆಳೆಯತೊಡಗಿದಳೂ. (ಪು-50) ನನ್ನ ಕಣ್ಣುಗಳೇ ಹೇಳುತ್ವೆ, ನೀನು ಪಕ್ಕಾ ಚಂದ್ರನಚೂರು ಅಂತ. (ಪು-54) ನೂರು ಚೈತ್ರಗಳ ತಂಪು ನಿನ್ನ ಕಣ್ಣುಗಳಲ್ಲಿದೆ. ನೂರು ಬೆಳದಿಂಗಳ ಪ್ರಸನ್ನತೆ ನಿನ್ನ ನೋಟಕ್ಕಿದೆ. ಈ ಜಗತ್ತನ್ನೇ ಮರ್ತು, ನಿನ್ನ ಹೀಗೇ ನೋಡುತ್ತಾ ನಿಂತುಬಿಡಬೇಕು ಅನ್ನಿಸ್ತಾ ಇದೆ. (ಪು-55) ಅವಳನ್ನು ಹೊಂದುವ ವರೆಗೂ ಅವಳಷ್ಟೇ ಕಾಣುತ್ತಿದ್ದಳು. (ಪು-61) ಕಾಣದ ಜಗತ್ತು ಕೈಗೆಸಿಕ್ಕನಂತರ ಕಾಣುವ ಹಂಬಲವನ್ನೇ ಕಳಕೊಂಡೆ. (ಪು-61)

ಹೀಗೆ ಈ ಸಂಭಾಷಣೆಗಳಲ್ಲಿ ಅವನಿಗೆ ಮೋದಾಳಿಯ ದೇಹದ ಸೌಂದರ್ಯ ಮಾತ್ರ ಕಾಣಿಸುತ್ತದೆ. ಅವಳೊಳಗಿರುವ ಅನಂತ ಪ್ರೀತಿ ಅವನಿಗೆ ಕಾಣಿಸುವುದೇ ಇಲ್ಲ. ಅವನಲ್ಲಿ ಮೋಹಗೊಂಡು ಎಲ್ಲವನ್ನೂ ತೊರೆದು ಬಂದ ಮೋದಾಳಿ ಕೊನೆಯವರೆಗೂ ನೋವು-ಸಂಕಟಗಳನ್ನೇ ಪಡುತ್ತಾಳೆ. ಇವಳ ಸಹಾಯಕ್ಕೆನಿಂತ ರಾಣಿ, ರಾಜಾಜ್ಞೆಯಿಂದ ಸುಟ್ಟುಕಲಾಗುತ್ತಾಳೆ. ಹೆಣ್ಣಾದವಳು ರಾಣಿಯಾಗಿರಲಿ, ಸಾಮಾನ್ಯ ಮಹಿಳೆಯಾಗಿರಲಿ ಇವರಿಗೆ ಶೋಷಣೆತಪ್ಪಿದ್ದಲ್ಲವೆಂಬುದನ್ನು ಈ ನಾಟಕ ಬಿಂಬಿಸುತ್ತದೆ. ವಿವಿಧ ಹೆಣ್ಣುಗಳ ನೋವಿನ ಸಂಗಮ ಇಲ್ಲಿದೆ.

ಇದು ಚಂದ್ರಿಕಾ ಅವರ ಮೊದಲ ನಾಟಕವಾದರೂ, ಅನುಭವಿನಾಟಕಕಾರರು ರಚಿಸಿರಬಹುದಾದ ನಾಟಕದಂತಿದೆ. ಅನೇಕ ರಂಗ ಸಾಧ್ಯತೆಗಳನ್ನು ಅವರು ತಿಳಿದುಕೊಂಡಿದ್ದಾರೆ. ಆದರೆ ನಾಟಕ ಹೆಣ್ಣುಗಳ ನೋವಿನ ಸರಪಣಿಯಲ್ಲಿಯೇ ತನ್ನನ್ನು ಕಟ್ಟಿಕೊಂಡು ಬಿಟ್ಟಿದೆ. ನಾಟಕ ಒಂದು ಮನರಂಜನೆಯ ಮಾಧ್ಯಮ. ಅಲ್ಲಿ ವಿವಿಧ ರಸಗಳ ಅಭಿವ್ಯಕ್ತಿ ಮುಖ್ಯವಾಗುತ್ತದೆ. ಹಾಸ್ಯದ ಪ್ರಸಂಗಗಳು, ಮನರಂಜನೆಯ ಸನ್ನಿವೇಶಗಳು ಇಲ್ಲಿ ಕಾಣಿಸುವುದಿಲ್ಲ. ಮುಂದಿನ ನಾಟಕಗಳ ರಚನೆಯಲ್ಲಿ ಇಂತಹ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಏನೇ ಆದರೂ ಚಂದ್ರಿಕಾ ಅವರು ಯಶಸ್ವಿ ನಾಟಕಗಳನ್ನು ರಚಿಸಿದ್ದಾರೆ. ಅವರಿಂದ ಇನ್ನೂ ಉತ್ತಮ ನಾಟಕಗಳು ಬರಲೆಂದು ಆಶಿಸುತ್ತೇನೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...