ಪಂಚಮಗಳ ನಡುವೆ- ಸತ್ಯಕಾಮ


'ತಂತ್ರಶಾಸ್ತ್ರ ಭಾರತ ಕೊಡಮಾಡಿದ ವಿಶಿಷ್ಟ ಶಾಸ್ತ್ರ.‌ ಈ ಶಾಸ್ತ್ರವನ್ನು ಸತ್ಯಕಾಮರು ವಿಜ್ಞಾನ ಎಂದು ಕರೆದಿದ್ದಾರೆ' ಎಂದು ತಿಳಿಸುತ್ತಾರೆ ಲೇಖಕ ಉದಯಕುಮಾರ ಹಬ್ಬು ಅವರು ಸತ್ಯಕಾಮಪಂಚಮಗಳ ನಡುವೆ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಸತ್ಯಕಾಮರು ನಮ್ಮ ದೂರದ ಬಂಧು ಎಂದು ನಾನು ಹೇಳಲಾರೆ. ಆದರೆ ಗಲಗಲಿಯ ಹಬ್ಬು ಬಾಂಧವರು ಅವರ ಜನ್ಮ ದಿನವನ್ನು ಕಲ್ಲಳ್ಳಿಯಲ್ಲಿ ಆಚರಿಸುತ್ತಾರೆ.‌ ವೀಣಾ ಬನ್ನಂಜೆ ನೇತೃತ್ವದಲ್ಲಿ.

ತಂತ್ರಶಾಸ್ತ್ರ ಭಾರತ ಕೊಡಮಾಡಿದ ವಿಶಿಷ್ಟ ಶಾಸ್ತ್ರ.‌ ಈ ಶಾಸ್ತ್ರವನ್ನು ಸತ್ಯಕಾಮರು ವಿಜ್ಞಾನ ಎಂದು ಕರೆದಿದ್ದಾರೆ. ಸತ್ಯಕಾಮರು ತಂತ್ರಜ್ಞಾನವನ್ನು ಗಳಿಸಲು ಸಾಹಸ ಮಾಡಿ ಉತ್ತರ ಭಾರತದಾದ್ಯಂತ ಅಲೆಮಾರಿಯ ಹಾಗೆ ತಿರುಗಾಡಿ, ಹಲವಾರು ಸಿದ್ಧರನ್ನು, ಸಾಧು ಸಂತರೊಡನೆ ಇದ್ದು, ತಂತ್ರಶಾಸ್ತ್ರವನ್ನು ತಮ್ಮದಾಗಿಸಿಕೊಂಡ ಮತ್ತು ಅದು ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ತ್ಯಜಿಸಿಬಿಟ್ಟವರು. ಅವರು ಹೀಗೆ ತಂತ್ರದ ಹಿಂದೆ ಹೋದಾಗ ಸಿದ್ಧರನ್ನೂ ಕಂಡಿದ್ದಾರೆ. ಢೋಂಗಿ ಕಪಟ ಬಾಬಾರನ್ನೂ ಕಂಡಿದ್ದಾರೆ. ತಂತ್ರವನ್ನು ಭಾನಾಮತಿ, ಸ್ತ್ರೀ ವಶೀಕರಣದಂತಹ ದುಷ್ಟ ಕೃತ್ಯಗಳಿಗೆ ಬಳಸಿ, ಹಲವಾರು ಸ್ತ್ರೀಯರನ್ನು ಹಾಳು ಮಾಡಿ ಸಿಕ್ಕಿಬಿದ್ದು ಬದುಕಿಡೀ ರವರವ ನರಕವನ್ನು ಕಂಡ ದುಷ್ಟರನ್ನೂ ಕಂಡಿದ್ದಾರೆ. ವಾಸನೆಯಿಂದಲೇ ಕುರುಡನಾದ ಸಿದ್ಧ ವ್ಯಕ್ತಿಯನ್ನು ಗುರುತಿಸುವುದು, ಅವರು‌ ಬಂದ ಉದ್ದೇಶವನ್ನು ಕರಾರುವಕ್ಕಾಗಿ ಹೇಳುವ ಸಿದ್ಧರ ಬಗ್ಗೆ ಕುತೂಹಲಕಾರಿ ರೋಚಕ ಕಥೆಗಳಿವೆ. ಸೂರ್ಯಸಿದ್ಧಿಯಿಂದಾಗಿ ಮನೆತೋಟದ ಬಗೆಬಗೆಯ ಬಣ್ಣದ ಹೂಗಳು ನೀಲಿ ಆಗಮಾಡುವ ಚಮಾತ್ಕಾರದ ಸಿದ್ಧರು ಇವರು ಒಡನಾಡಿಗಳಾಗಿದ್ದವರು. ಸಿದ್ಧರು ತಮ್ಮ‌‌ ವಿದ್ಯೆಯೆನ್ನು‌ ಹೇಳಿಕೊಡುವ ಮೊದಲು ಅನೇಕ ಕಠಿಣ ಪರೀಕ್ಷೆಗಳಿಗೆ ಒಡ್ಡುತ್ತಾರೆ. ಅವುಗಳನ್ನು ತಾಳಿಕೊಂಡವನು ಬಾಳುತ್ತಾನೆ, ಅವನಿಗೆ ದೀಕ್ಷೆ ಸಿಗುತ್ತದೆ.

ತಂತ್ರದಲ್ಲಿ ವಾಮಾಚಾರ ಮತ್ತು‌ ಸಮಯಾಚಾರ ಎಂಬ ಎರಡು ಬಗೆಯ ಸಿದ್ಧಿಗಳಿವೆ. ಸತ್ಯಕಾಮರು ವಾಮಾಚಾರವನ್ನೆ ಹೆಚ್ಚು ಕಲಿತಂತೆ ಕಾಣುತ್ತದೆ.

ಹಲವಾರು ರೋಚಕ ಭೀಭತ್ಸ ಸನ್ನಿವೇಶಗಳಿವೆ. ಭೈರವಿ ಅವಳನ್ನು‌ ಸಂಪ್ರೀತಗೊಳಿಸಲು ಕೆಲವು ಶಾಸ್ತ್ರೋಕ್ತ ವಿಧಿ ವಿಧಾನಗಳಿವೆ. ಅವುಗಳಲ್ಲಿ ಪಂಚ "ಮ" ಕಾರಗಳೂ ಬಹುಮುಖ್ಯ. ಅವುಗಳಲ್ಲಿ ಮದ್ಯ, ಮೈಥುನ ಮತ್ತು ಮಾಂಸ ಇವು ಪ್ರಧಾನ. ಮತ್ತು ತಂತ್ರಸಾಧನೆಗಳಿಗೆ ಮಂಡಲಗಳು, ಶ್ರೀ ಚಕ್ರಗಳನ್ನು ಅತ್ಯಂತ ‌ಸುಂದರವಾಗಿ ಬಿಡಿಸಲಾಗುತ್ತದೆ. ಈ‌ ಶಾಸ್ತ್ರವನ್ನು‌ ಕಲಿಯುವವರು ಕೌಲರು.

ಭೈರವಿಯನ್ನು ಶ್ರೀ ವಿದ್ಯಾ, ತ್ರಿಪುರ ಸುಂದರಿ ಶ್ರೀಬಾಲಾ ಮುಂತಾದ ಹೆಸರುಗಳಿಂದ ಆರಾಧಿಸಲಾಗುತ್ತದೆ. ಇದೊಂದು ಗೌಪ್ಯ ವಿದ್ಯೆ‌ ಸತ್ಯಕಾಮರು ಈ ತಂತ್ರಶಾಸ್ತ್ರದ ಭೀಭತ್ಸ ವಿಧಿಯಾದ ವಿಗ್ರಹ ಪೂಜೆಯ ಬಗ್ಗೆ ಬರೆಯುತ್ತಾರೆ. ಶ್ಮಶಾನವೆ ತಾಂತ್ರಿಕರ ಕಾರ್ಯಕ್ಷೇತ್ರ. ಅವರು ಯಾವುದಾದರೂ ಮುತ್ತೈದೆ ಹೆಣ್ಣು ಮಣ್ಣು ಮಾಡಿದ ಸ್ಥಳಕ್ಕೆ ಬಂದು ಮಣ್ಣು ಮಾಡಿದ ಜಾಗವನ್ನು ಅಗೆದು ಹೆಣವನ್ನು ಹೊರತೆಗೆದು ನದಿ ಸ್ನಾನ ಮಾಡಿಸುತ್ತಾರೆ. ಇಂತದೊಂದು ಹೆಣವನ್ನು‌ ನಿರೂಪಕನಿಗೆ ಸಿದ್ಧನು ಸ್ನಾನ ಮಾಡಿಸಿಕೊಂಡು ಬಾ ಎಂದು ಆಜ್ಞೆ ಮಾಡುತ್ತಾನೆ. ನಿರೂಪಕ ಆ ಹೆಣವನ್ನು ಹೊತ್ತುಕೊಂಡು ಒಂದೆರಡು ಮೈಲು ದೂರವಿರುವ ನದಿಯಲ್ಲಿ ಸ್ನಾನ ಮಾಡಿಸುತ್ತಾರೆ. ಆ ಹೆಣವು ಒಂದು ಸುಂದರವಾದ ಯುವತಿಯ ಹೆಣವಾಗಿತ್ತು. ನಿರೂಪಕ‌ ಬತ್ತಲೆ ಇರುವ ಆ ಹೆಣ್ಣಿನ ಸೌಂದರ್ಯವನ್ನು ವರ್ಣಿಸುತ್ತಾರೆ. ಅವಳ ಹೆಣವನ್ನು ಮೂರ್ತಿಯಂತೆ ತೊಳೆದು ಸಿದ್ಧನಲ್ಲಿಗೆ ವಾಪಸು ಬರುತ್ತಾನೆ. ಆ ಹೆಣವನ್ನು ಪದ್ಮಾಸನದಲ್ಲಿ‌ ಕುಳ್ಳರಿಸುವಂತೆ‌ ಮಾಡಲು‌ ನಿರೂಪಕನಿಗೆ ಆಜ್ಞೆ ಕೊಡಲಾಗುತ್ತದೆ. ನಿರೂಪಕ ಬಿದಿರು ಕೋಲಿನ‌ ಸಹಾಯದಿಂದ ಸೆಟೆದುಕೊಂಡ ಹೆಣವನ್ನು ಕಟ್ಟಿ ಕುಳ್ಳರಿಸುತ್ತಾನೆ

ಸಿದ್ಧ ವಿವಿಧ ಮಂತ್ರೋಚ್ಛಾರಣೆಯಿಂದ, ವಿವಿಧ ಆಚರಣೆಯಿಂದ ಮುಚ್ಚಿದ ಹೆಣದ ಕಣ್ಣುಗಳು ಅರಳುವಂತೆ ಮಾಡುತ್ತಾನೆ. ಮತ್ತು‌ ತುಟಿಯಲ್ಲಿ ಮುಗುಳ್ನಗೆ ಕಾಣುತ್ತದೆ. ಇಷ್ಟಾದ ಮೇಲೆ ಆ ಸಿದ್ಧ ನಿರೂಪಕನ್ನು ಬಿಟ್ಟು ಹೋಗುತ್ತಾನೆ. ಭೈರವಿ ಸಾಧಕನ ನೈತಿಕತೆ ನೋಡದೆ ಶಕ್ತಿಯನ್ನು ಕೊಟ್ಟುಬಿಡುತ್ತಾಳೆ. ಇದನ್ನು ಕಂಡು‌ ಸಿದ್ಧರು ನಿಂದಿಸುವುದೂ ಕೂಡ ಇದೆ.

ಮತ್ತು ಇನ್ನೆಷ್ಟೋ ರೋಚಕ‌ ಘಟನೆಗಳು ನಡೆಯುತ್ತವೆ. ಆದರೆ ಸಾಧಕರದ ನಿರೂಪಕ ಎಲ್ಲಿಯೂ ಭಾವೋದ್ವೇಗಗೊಳ್ಳುವುದಿಲ್ಲ. ಗುರುಗಳನ್ನು ಶೃದ್ಧೆಯದಲೇ‌ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಮೈಥುನ ಅಂದರೆ ನಾವು ತಿಳಿದುಕೊಂಡ ಸಂಭೋಗವಲ್ಲ. ಆ ಕ್ರಿಯೆಯನ್ನು ನಿರ್ಲಿಪ್ತವಾಗಿ, ನಿರ್ಮೋಹದಿಂದ ಮಾಡಲಾಗುತ್ತದೆ.

ಇದು ಸತ್ಯಕಾಮ ಬರೆದಿರುವ ಕಾದಂಬರಿ. ಇದನ್ನು ಅವರ ನೈಜ ಅನುಭವವೆ ಇರಬಹುದೆಂದು‌ ತಿಳಿಯಬಹುದು. ಮತ್ತು ಈ ಕಾದಂಬರಿಯಲ್ಲಿ ತಂತ್ರಸಿದ್ಧಿಗಳ‌ ಪ್ರಕ್ರಿಯೆಯಲ್ಲಿ ಕಂಡುಬರುವ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಅತ್ಯಂತ ಕರಾರುವಕ್ಕಾಗಿ ನಿರೂಪಿಸಲಾಗಿದೆ.‌ ಓರ್ವ ಹೆಣ್ಣನ್ನು ಒಂದಿಬ್ಬರು ಮೂವರು ಢೋಂಗಿ ಸಾಧಕರು ಬಂದು ರಾತ್ರಿ ಕಾಡಿನಲ್ಲಿ ಅತ್ಯಾಚಾರ ಮಾಡುತ್ತಾರೆ. ಇವರು ಅವಳನ್ನು ರಕ್ಷಿಸಿ ಅವಳ ಮನೆಯವರೆಗೆ ಬಿಡುತ್ತಾರೆ. ಆಗ ಆ ಹೆಣ್ಣು ನಿರೂಪಕನ್ನೂ ಭಯದಿಂದ, ಅನುಮಾನದಿಂದ ನೋಡುತ್ತಾಳೆ. ಬತ್ತಲೆ ನಿಂತಿರುವ ಅವಳ ಮೇಮೇಲೆ ತಾವು ತೊಟ್ಟ ಅಂಗಿ ಮತ್ತು ಪಂಚೆಯನ್ನು ಹಾಕುತ್ತಾರೆ.

ಭಾನಾಮತಿ ಮಾಡಿ ಸ್ತ್ರೀ ವಶೀಕರಣ ಮಾಡಿದ ಢೋಂಗಿ ತಾಂತ್ರಿಕನ್ನು ತಾರಾಮಾರಾಗಿ ನಿಂದಿಸುತ್ತಾರೆ‌ ಮತ್ತು ಗುರು-ಶಿಷ್ಯರ ಸಂಬಂಧ ಮುಂತಾದವುಗಳು ರೋಚಕವಾಗಿ ನಿರೂಪಿತಗೊಂಡಿವೆ.

ಸತ್ಯಕಾಮರು ಸಂಸ್ಕೃತ ಸಾಹಿತ್ಯದ ಎಲ್ಲ ಕೃತಿಗಳನ್ನು, ಕಾವ್ಯ ಸಿದ್ಧಾಂತಗಳನ್ನು ಓದಿ ಅವುಗಳ ಮೇಲೆ‌ ಸಂಪೂರ್ಣ ಪ್ರಭುತ್ವ ಪಡೆದಿದ್ದರು ಎಂದು ಈ ಪುಸ್ತಕದಿಂದ ತಿಳಿಯುತ್ತದೆ. ಮತ್ತು‌ ಸಂಸ್ಕೃತ ‌ಭಾಷೆಯ ಅರಿವು‌‌ ತಂತ್ರಶಾಸ್ತ್ರ ಅರಿಯಲು‌‌‌ ಬಹುಮುಖ್ಯ. ಈ ಕೌಲ ಪದ್ಧತಿಯು "ಶಾಕ್ತಪಂಥ" ಮಾರ್ಗವಾಗಿದೆ.

ಬೈರವಿಯನ್ನು ವರ್ಣಿಸುವಾಗ "ಗೀತಗೋವಿಂದ"ಮತ್ತು ಮೇಘದೂತದ ಕೆಲವು ಶ್ಲೋಕಗಳನ್ನು ಪಠಿಸಲಾಗುತ್ತದೆ.

ಕೆಲವು ನಮ್ಮ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ‌ ಎಲ್ಲ ಮಾನವ ಚಟುವಟಿಕೆಗಳಿಗೆ ಕಾಮವೆ ಮೂಲಧಾತು ಎಂಬ ಫ್ರಾಯ್ಡ್‌ ನ ಸಿದ್ಧಾಂತದ ಉಲ್ಲೇಖವಿದೆ. ಆದರೆ ತಂತ್ರಸಾಧನೆಯಲ್ಲಿ ಕಾಮಸಂಭೊಗದ ತನ್ಮಯತೆ ಇಲ್ಲ ಎಂದು ನಿರೂಪಕನ ಅಂಬೋಣ. ಒಂದೆಡೆ ಕರೆಯುತ್ತಾರೆ:" ಮನಸ್ಸು ಪ್ರಜಾಪ್ರಭುತ್ವಕ್ಕೆ ಅರ್ಹತೆ ಇಲ್ಲದ ಪ್ರಜೆಯ ಹಾಗೆ. ಹಕ್ಕು ಬೇಕು. ಹೊಣೆಗಾರಿಕೆ ಬೇಡ. ಎಲ್ಲವನ್ನೂ ಸರಕಾರ ಮಾಡಬೇಕು. ಸರಕಾರ ಈ ಕೆಲಸ ಮಾಡುವುದರಿಂದ ನಮಗೇನು? ಅನ್ನುವ ಪ್ರಜ್ಞೆ ಮನಸ್ಸು ಪ್ರತಿನಿಧಿಸುತ್ತದೆ. ತನ್ನ ಲಾಭದಿಂದ ದೇಶಕ್ಕೆ ಹಾನಿಯಾಗುತ್ತಿದ್ದರೂ ಅದು ದೊರೆಯದಿದ್ದರೆ ಅಂದೋಲನ‌‌ ಕರ್ಫ್ಯುೂ ಜಾರಿ ಮಾಡಿದಾಗ ಬಾಲ ಮಡಿಸಿಕೊಂಡು ಮನೆ ಸೇರುವುದು."

"ಅಧ್ಯಾತ್ಮಿಕ ಪಿಡುಗು ಪಟ್ಟಣವನ್ನು ಮಾತ್ರ ಹೊತ್ತಿ ಉರಿಯುವುದಿಲ್ಲ. ಅದು ಹಳ್ಳಿಯನ್ನೂ ಅಂಡಲೆಯುತ್ತಿದೆ ಈ ರೋಗದಿಂದಲೇ ಹಳ್ಳಿ ಪಟ್ಟಣಗಳು ಕ್ರಿಯಾಶಕ್ತಿಯನ್ನು‌ ಕಳೆದುಕೊಂಡವು‌ ಇಲ್ಲವೆ ದುರಪಯೋಗ ಮಾಡಿಕೊಂಡವು‌"

ರಾಹುಲ ಸಾಂಕೃತ್ಯಾಯನರು ಒಬ್ಬ ಸಾಧಕರೊಂದಿಗೆ ಮುಖಾಮುಖಿಯಾಗುತ್ತಾರೆ. ತುಂಬ ಸ್ವಾರಸ್ಯಕರ ಮಾತುಕತೆ ನಡೆಯುತ್ತದೆ. ಆ‌ ಸಾದಕರು‌ ಹೇಳಿದ್ದು ಹೀಗೆ:"ಅವನೊಬ್ಬ ಜಾಣ ಹುಚ್ಚ. ಅವನಿಗೆ ಓದಿನ ಹುಚ್ಚು ತುಂಬ. ಆತನಿಗೆ ಹಲವು ಸಲ‌ ಹೇಳಿದೆ. "ರಾಹುಲ,ನೀನು ಕೆಲವು ಪುಸ್ತಕ ಮಾತ್ರ‌‌ ಓದುತ್ತಿ. ಆದರೆ ಎಲ್ಲ ಪುಸ್ತಕದಲ್ಲಿ ಬರೆದುದನ್ನು ನಾನು ಹೇಳುತ್ತೇನೆ. ಬಾ" ಎಂದೆ.

ರಾಹುಲ ಸಾಂಕೃತ್ಯಾಯನ‌ ತುಂಬ ಗಟ್ಟಿಗ. ನಂಬಿದ್ದನ್ನು‌‌ ಬೇಗ ಬಿಟ್ಟುಕೊಡುವವನಲ್ಲ. "ಎಲ್ಲ ಪುಸ್ತಕದಲ್ಲಿ ಬರೆದದ್ದನ್ನು ನೀವೇನು ಹೇಳುತ್ತೀರಿ? ಜನರನ್ನು ಮೋಸಗೊಳಿಸುತ್ತಲೇ ಬದುಕಿ‌‌ ಬಂದಿರಿ. ಜನ ಮೋಸ ಹೋಗುವುದನ್ನು ಬಿಡಲು ಕಷ್ಡ‌ ನೀವು ಅವರನ್ನು ಮೋಸಗೊಳಿಸುವುದನ್ನು ನಿಲ್ಲಿಸಿದರೆ ಉಪಕಾರ‌"

ದೇವರೆಂಬ‌ ಪೆಡಂಭೂತವನ್ನು ನಿರ್ಮಿಸಿ ನಿಮ್ಮನ್ನು ಪೂಜೆಮಾಡುವಂತೆ ಮಾಡುತ್ತೀರಿ‌ ನೀವೊಂದು‌ ತರದ ಶೋಷಕ‌ ರಾಕ್ಷಸರು‌" ರಾಹುಲ್ ತನ್ನ ಮನಸ್ಸಿನಲ್ಲಿದ್ದುದನ್ನು ಕಾರಲು ಪ್ರಯತ್ನಿಸಿದ‌. ನಾನು ಅವನ‌ ಮನಸ್ಸಿನೊಳಗಿನದನ್ನು ಬಲ್ಲೆ.

"ಅಯ್ಯಾ, ದೇವರನ್ನು‌ ನಂಬು ಎಂದು ನಾನು ನಿನಗೆ ಹೇಳಿದೆನೆ? ನೀನು ದೇವರನ್ನು ನಿರಾಕರಿಸುತ್ತಿ. ಆದರೆ ನಿನ್ನ‌ ಕಣ ಕಣದಲ್ಲಿಯೂ ಆ ಧೈರ್ಯ ಬಂದಿಲ್ಲ. ನಾನು ದೇವರನ್ನು ನಿರಾಕರಿಸುವುದಿಲ್ಲ. ಆದರೆ ಅನವಶ್ಯವಾಗಿ ಅವನನ್ನು ನಂಬುವ‌‌ ಗೊಡವೆಗೆ ಹೋಗಿಯೇ ಇಲ್ಲ. ದೇವರನ್ನು ನಂಬಬೇಕು, ಬಿಡಬೇಕು ಎಂದು ಯೋಚಿಸಲು‌ ನನಗೆ ಸಮಯವಿಲ್ಲ. ನೀನು ನಿನ್ನ ಅವಮನಸ್ಸಿನ‌‌ ತಳದೊಳಗೆ ತುಂಬ ದೇವರ ಬಗ್ಗೆ ನಂಬಿಕೆಯ‌‌ ಕೆಸರನ್ನಿಟ್ಟುಕೊಂಡು ತರ್ಕ, ಬುದ್ಧಿ ವಿಚಾರಗಳ ಗುಂಪಿಗೆ ಸಿಕ್ಕಿ ಅದನ್ನು ನಿರಾಕರಿಸುತ್ತೀ. ನಸನು ಶಕ್ತಿ ಗಳಿಸುವಾಗ ಇಲ್ಲವೆ ಕೊಡುವಾಗ ನನಗೆ ದೇವರ ಅಗತ್ಯವೆನಿಸಲೇ ಇಲ್ಲ. ರಾಹುಲ, ಬದುಕಿನಲ್ಲಿ ದೇವರನ್ನು ಕಡಿಮೆ ಬಳಸಿದವನು ಹೆಚ್ಚು‌ ಸುಖಿ ಇರುತ್ತಾನೆ.'

ಓದಿರಿ.

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...