ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಅಡ್ಡಿಯಾಗಿದ್ದವಳು ಚೆನ್ನಾಭೈರಾದೇವಿ


"ಧೀರ ವನಿತೆಯ ಜೀವನವನ್ನು ಆಧರಿಸಿ ನಾನು ಬರೆದ 'ಚೆನ್ನಾಭೈರಾದೇವಿ'- ಕರಿಮೆಣಸಿನರಸಿಯ ಅಕಳಂಕ ಚರಿತೆ ಎಂಬ ಕಾದಂಬರಿಯನ್ನು ಕನ್ನಡ ನಾಡಿನ ಸಾಹಿತ್ಯ ಪ್ರಿಯರು ಪ್ರೀತಿಯಿಂದ ಸ್ವೀಕರಿಸಿದರು," ಎನ್ನುತ್ತಾರೆ ಗಜಾನನ ಶರ್ಮ. ಅವರು ಶ್ರೀ ಕೃಷ್ಣಮೂರ್ತಿ ಕವತ್ತಾರ್ ಅವರ ‘ಅವ್ವರಸಿ ರಾಣಿ ಚೆನ್ನಭೈರಾದೇವಿ’ ಕೃತಿ ಕುರಿತು ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಪೋರ್ಚುಗೀಸರಿಂದ 'ರೈನಾ ದ ಪೆಮೆಂಟಾ' ಎಂಬ ಬಿರುದು ಪಡೆದು ಕನ್ನಡ ನಾಡಿನ ಕರಾವಳಿ ಮತ್ತು ಪಶ್ಚಿಮ ಮಲೆನಾಡನ್ನು ಐವತ್ನಾಲ್ಕು ವರ್ಷಗಳಷ್ಟು ಸುಧೀರ್ಘ ಕಾಲ ರಾಜ್ಯವಾಳಿದ ವೀರಜಿನವನಿತೆ- ರಾಣಿ ಚೆನ್ನಭೈರಾದೇವಿ. 1552ರಿಂದ 1606ರವರೆಗೆ ಗೇರುಸೊಪ್ಪೆ ಮತ್ತು ಹಾಡುವಳ್ಳಿಗಳೆಂಬ ಜೋಡಿ ರಾಜ್ಯದ ಒಡತಿಯಾಗಿ, ಜನಾನುರಾಗಿಯಾಗಿ ರಾಜ್ಯಭಾರ ನಡೆಸಿದವಳು ಚೆನ್ನಾಭೈರಾದೇವಿ. ವಿದೇಶಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಶುಂಠಿ, ಶ್ರೀಗಂಧ, ಬೆಲ್ಲದಂತಹ ಪದಾರ್ಥಗಳನ್ನು ನಿರ್ಯಾತು ಮಾಡಿ ತನ್ನ ರಾಜ್ಯವನ್ನು ಅತ್ಯಂತ ಶ್ರೀಮಂತ ನಾಡನ್ನಾಗಿ ಕಟ್ಟಿ ನಿಲ್ಲಿಸಿದವಳು ರಾಣಿ ಚೆನ್ನಾಭೈರಾದೇವಿ. ತಾನಾಗಿ ಯಾರೊಬ್ಬರ ಮೇಲೂ ಧಾಳಿ ಮಾಡದೆ, ತನ್ನನ್ನು ಕೆಣಕಲು ಬಂದವರನ್ನು ತಲೆಯೆತ್ತಲು ಬಿಡದೆ ಪರಾಕ್ರಮ ತೋರಿದ ವೀರಾಗ್ರಣಿ ಈಕೆ. ಆಕೆಯ ಪ್ರಜೆಗಳು ಅವಳನ್ನು ಪ್ರೀತಿಯಿಂದ 'ಅವ್ವರಸಿ' ಎಂದು ಕರೆದು ಆರಾಧಿಸಿದರು, ಆಧರಿಸಿದರು, ಪ್ರೀತಿ ವಿಶ್ವಾಸ ತೋರಿದರು.

ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಅಡ್ಡಿಯಾಗಿದ್ದವಳು ಚೆನ್ನಾಭೈರಾದೇವಿ. ಅವರನ್ನು ದಕ್ಷಿಣ ಕೊಂಕಣಕ್ಕೆ ಕಾಲಿಡದಂತೆ ಕಾಳಿ ನದಿಯ ಆಚೆಯಲ್ಲೇ ತಡೆದು ನಿಲ್ಲಿಸಿದ ಕೀರ್ತಿ ಈಕೆಗೆ ಸಲ್ಲುತ್ತದೆ. ಗೇರುಸೊಪ್ಪೆಯಲ್ಲಿ ಚತುರ್ಮುಖ ಬಸದಿಯಂತಹ ಅಪರೂಪದ ಬಸದಿಯನ್ನು ನಿರ್ಮಿಸಿದ ಚೆನ್ನಭೈರಾದೇವಿ ಸರ್ವಧರ್ಮ ಸಮಭಾವದಿಂದ ನಾಡನ್ನು ಆಳಿದವಳು. ಇಂತಹ ಧೀರ ವನಿತೆಯ ಜೀವನವನ್ನು ಆಧರಿಸಿ ನಾನು ಬರೆದ 'ಚೆನ್ನಾಭೈರಾದೇವಿ'- ಕರಿಮೆಣಸಿನರಸಿಯ ಅಕಳಂಕ ಚರಿತೆ ಎಂಬ ಕಾದಂಬರಿಯನ್ನು ಕನ್ನಡ ನಾಡಿನ ಸಾಹಿತ್ಯ ಪ್ರಿಯರು ಪ್ರೀತಿಯಿಂದ ಸ್ವೀಕರಿಸಿದರು. ಈಗಾಗಲೇ ಐದು ಮುದ್ರಣವನ್ನು ಕಂಡ 'ಚೆನ್ನಾಭೈರಾದೇವಿ' ಕಾದಂಬರಿಯನ್ನು ಓದಿ ಮೆಚ್ಚಿಕೊಂಡ ಹಿರಿಯರಾದ ಎಂ.ಬಸವರಾಜು ಮತ್ತು ಹಿರಿಯ ನಟಿ ಲೀಲಾಬಸವರಾಜು ದಂಪತಿಗಳು, ಅದನ್ನು ಏಕ ವ್ಯಕ್ತಿ ಪ್ರದರ್ಶನಕ್ಕೆ ಆಯ್ದುಕೊಂಡರು. ಎಪ್ಪತ್ತೈದರ ಹರೆಯದ ಶ್ರೀಮತಿ ಲೀಲಾಬಸವರಾಜುರವರು ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ನಾಡಿನ ಖ್ಯಾತ ರಂಗ ನಿರ್ದೇಶಕರಾದ ನನ್ನ ಅನುಗಾಲದ ಸ್ನೇಹಿತ ಶ್ರೀ ಕೃಷ್ಣಮೂರ್ತಿ ಕವತ್ತಾರ್‌ರವರನ್ನು ಸಂಪರ್ಕಿಸಿ, ಅವರ ನಿರ್ದೇಶನದಲ್ಲಿ ಅದಮ್ಯ ಅದ್ಭುತವಾಗಿ ರಂಗಕ್ಕೆ ಅಳವಡಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಹೇಗೆ ರಾಣಿ ಚೆನ್ನಭೈರಾದೇವಿ - ಈ ನಾಡಿನ ಜನಕ್ಕೆ ಪ್ರೇರಣೆಯೋ ಹಾಗೆಯೇ ಶ್ರೀಮತಿ ಲೀಲಾ ಬಸವರಾಜು ಅವರ ಈ ಪ್ರಯತ್ನವೂ ನಾಡಿನ ಯುವ ಜನತೆಗೆ ಪ್ರೇರಣೆ ನೀಡುವಷ್ಟು ಸಮರ್ಥವಾಗಿ ಪ್ರದರ್ಶನ ಕಂಡಿತು. ಈಗ ಈ ರಂಗಾಸಕ್ತ ದಂಪತಿ ಅದನ್ನು ಪುಸ್ತಕ ರೂಪದಲ್ಲಿ ಹೊರತರಲು ಬಯಸಿದ್ದಾರೆ. 'ಅವ್ವರಸಿ ರಾಣಿ ಚೆನ್ನಭೈರಾದೇವಿ' ಕೃಷ್ಣಮೂರ್ತಿ ಕವತ್ತಾರ್‌ರ ರಂಗರೂಪ, ಅಕ್ಷರರೂಪ ಮಾಡಿ ಅವರ ನಿರ್ದೇಶನದಲ್ಲಿ ಕೇವಲ ಒಂದೆರಡು ಪ್ರದರ್ಶನಗಳನ್ನು ನೀಡಿ ಅದನ್ನು ಕೈ ಬಿಡದೆ, ಅದು ಇತರರಿಗೂ ದೊರೆಯುವಂತೆ ಕೃತಿ ರೂಪದಲ್ಲಿ ಪ್ರಕಟಿಸಲು ಮನಸ್ಸು ಮಾಡಿದ ಈ ಹಿರಿಯ ಕಲಾವಿದ ದಂಪತಿಗಳಿಗೆ ಅಭಿನಂದನೆ ಮತ್ತು ಅಭಿವಂದನೆ. ಅವರ ರಂಗ ಪ್ರಸ್ತುತಿಯಂತೆ ಈ ಕೃತಿಯೂ ಜನಮನ್ನಣೆ ಗಳಿಸಲೆಂದು ಆಶಿಸುತ್ತೇನೆ.

-ಗಜಾನನ ಶರ್ಮ, ಹುಕ್ಕಲು

MORE FEATURES

ಮಣಿಪುರದ ಜನರ ನೋವಿಗೆ ದನಿಯಾಗುವ ಹೆಬ್ಬಯಕೆ ಈ ಕೃತಿಯದು

16-06-2024 ಬೆಂಗಳೂರು

'ಈ ಸಂಕಲನದ ಉದ್ದೇಶ ಮಣಿಪುರದ ಜನರ ನೋವಿಗೆ ದನಿಯಾಗುವ ಹೆಬ್ಬಯಕೆಯನ್ನು ಹೊತ್ತಿದೆ. ಮಣಿಪುರ ಘಟನೆಯನ್ನು ಖಂಡಿಸಿದ ಎಲ...

ಒಂದು ಊರಿನ ಕಥೆಯನ್ನು ನಮಗೆ ತೋಚಿದಂತೆ ಬರೆಯಲಾಗದು: ಶರಣ್ಯ ಕೋಲ್ಚಾರ್

16-06-2024 ಬೆಂಗಳೂರು

‘ಒಂದಷ್ಟು ವರ್ಷಗಳ ಹಿಂದೆ ಪ್ರತಿಯೊಂದು ಕ್ಷೇತ್ರದಲ್ಲೂ ಕೊಡಗು ಹೇಗೆ ಮುಂದುವರಿದಿತ್ತು ಎನ್ನುವುದನ್ನು ಬರಹದಲ್ಲಿ ...

ಶ್ರುತಿ ಅವರ ಮೊದಲ ಸಂಕಲನದಲ್ಲೇ ಅವರ ವೈಚಾರಿಕ ಸ್ಪಷ್ಟತೆಗೂ ಉದಾಹರಣೆಯಾಗಿ ಕವಿತೆಗಳಿವೆ

16-06-2024 ಬೆಂಗಳೂರು

‘ಇಡೀ ಸಂಕಲನದ ಪ್ರಾತಿನಿದಿಕವೆಂಬಂತೆ ಮೊದಲ ಕವಿತೆ ಇದೆ. ದನಿ, ಶೈಲಿ, ವಿಷಾದ ಎಲ್ಲವಕ್ಕೂ ಇದು ಮಾದರಿಯಂತಿದೆ&rsqu...