Date: 27-11-2025
Location: ಬೆಂಗಳೂರು
ಬೆಂಗಳೂರು : ಭಾರತೀಯ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವಲ್ಲಿ ಲೇಖಕರ, ಪ್ರಕಾಶಕರ ಮುದ್ರಕರ ಪಾತ್ರ ಹೆಚ್ಚು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು. ಕರ್ನಾಟಕ ಪ್ರಕಾಶಕರ ಸಂಘ ರಾಜ್ಯೋತ್ಸವ ಸಂಭ್ರಮದಲ್ಲಿ ಏರ್ಪಡಿಸಿದ್ದ ಲಕ್ಷ್ಮಿ ಮುದ್ರಣಾಲಯಕ್ಕೆ `ಮುದ್ರಣ ಬೆಡಗು ಗೌರವ’ ವಿತರಿಸಿ ಮಾತಾನಾಡಿದರು. ಪ್ರಕಾಶನ ಎನ್ನುವುದು ಒಂದು ಸಮುದಾಯ. ಅದು ಲೇಖಕ, ಪ್ರಕಾಶಕ, ಕಲಾವಿದ, ಮುದ್ರಕ, ವಿತರಕ, ಮಾರಾಟಗಾರ, ಓದುಗ ಹೀಗೆ ಹಲವು ಶ್ರಮಜೀವಿಗಳನ್ನೊಳಗೊಂಡ ಕುಟುಂಬ. ನಿರಂತರವಾಗಿ ಬದಲಾಗುತ್ತಿರುವ ಆಧುನಿಕತೆಯ ಸವಾಲುಗಳನ್ನು ಒಳಗೊಳ್ಳುತ್ತಲೇ ಪುಸ್ತಕ ಸಂಸ್ಕೃತಿ ಬೆಳೆಯುತ್ತಿದೆ. ಎಷ್ಟೇ ಉದ್ಯಮ ಎಂದುಕೊಂಡರೂ ಮಾನವೀಯ ಅಂತಃಕರಣವನ್ನು ಬಿಟ್ಟುಕೊಡದ ಸೇವಾಕ್ಷೇತ್ರವಾಗಿ ಉಳಿಯಲು ಪ್ರಕಾಶಕರು ಮತ್ತು ಮುದ್ರಕರು ಪರಂಪರೆಯ ದನಿಯಾಗಿ ಶ್ರಮಿಸುತಿದ್ದಾರೆ ಎಂದರು.
ಮುದ್ರಣ ಬೆಡಗು ಗೌರವ ಸ್ವೀಕರಿಸಿ ಮಾತನಾಡಿದ ಲಕ್ಷ್ಮಿ ಮುದ್ರಣಾಲಯದ ಮಾಲೀಕರಾದ ಕೆ ಎಸ್ ಮಂಜು, 'ನಾವು ಹಣ ಸಂಪಾದನೆ ಮಾಡಬೇಕೆಂದಿದ್ದರೆ ರಿಯಲ್ ಎಸ್ಟೇಟ್‌ಗೆ ಹೋಗಬಹುದಿತ್ತು ಅಥವಾ ಬೇರೆ ಕೆಲಸ ಮಾಡಬಹುದಿತ್ತು. ಸಾಹಿತ್ಯ ಸೇವೆ ಎನ್ನುವುದು ಪವಿತ್ರವಾದ ಕೆಲಸ ಎಂಬ ಕಾರಣಕ್ಕೆ 45 ವರ್ಷಗಳಿಂದ ಮುದ್ರಣಸೇವೆ ಮಾಡುತ್ತಿದ್ದೇವೆ. ನಮ್ಮಲ್ಲಿ ಮುದ್ರಣವಾಗದ ಲೇಖಕರ ಪುಸ್ತಕಗಳಿಲ್ಲ. ಮಾಸ್ತಿ, ಅನಂತಮೂರ್ತಿ ಎಸ್ ಎಲ್ ಭೈರಪ್ಪ, ದೇವನೂರ ಮಹಾದೇವ, ಶ್ರೀರಂಗ, ಬೇಂದ್ರೆ, ಅನಕೃ, ವಚನ ಸಾಹಿತ್ಯ, ದಾಸ ಸಾಹಿತ್ಯ, ಅಂಬೇಡ್ಕರ್, ದೊಡ್ಡರಂಗೇಗೌಡ ಹೀಗೆ ಸಾವಿರಾರು ಲೇಖಕರ ಪುಸ್ತಕಗಳನ್ನು ಮುದ್ರಿಸಿದ ಹೆಮ್ಮೆ ನಮ್ಮದು. ಆಧುನಿಕ ತ್ರಂತ್ರಜ್ಞಾನದ ಕಾರಣಕ್ಕೆ ಪ್ರಿಂಟ್ ಆನ್ ಡಿಮಾಂಡ್ ನಂಥ ವ್ಯವಸ್ಥೆ ಬಂದಿದ್ದರೂ ಸಹ ನಮ್ಮಲ್ಲಿರುವ 35 ಜನ ಕುಶಲ ಕರ್ಮಿಗಳನ್ನು ಬೀದಿಪಾಲಾಗಬಾರದೆಂದು ನಮ್ಮ ಸೇವೆಯನ್ನು ಮುಂದುವರೆಸುತ್ತಿದ್ದೇವೆ’ ಎಂದರು.
ಕರ್ನಾಟಕ ಪ್ರಕಾಶಕರ ಸಂಘದ ಅಧಕ್ಷೆ ಡಾ ವಸುಂಧರಾ ಭೂಪತಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಪ್ರಕಾಶನ, ಮುದ್ರಣವಲಯ ಅಸಂಘಟಿತರಾಗಿಯೇ ಉಳಿದಿದೆ. ನಮ್ಮ ಸಂಘ ಸರ್ಕಾರದ ಜತೆ ಸಂಪರ್ಕ ಬೆಳೆಸಿ ಕಲಾವಿದರಿಗೆ ಈಗ ಸಿಗುತ್ತಿರುವ ಮಾಶಾಸನ ದಂತೆ ಪ್ರಕಾಶಕರಿಗೂ ಮುದ್ರಕರಿಗೂ ಮಾಶಾಸನ ಕೊಡಿಸಲು ಪ್ರಯತ್ನಿಸುತ್ತದೆ ಎಂದರು.
ಕಾರ್ಯಕ್ರವನ್ನು ನ. ರವಿಕುಮಾರ್ ನಿರೂಪಿಸಿದರು. ಮುದ್ರಣಕಾರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಕನ್ನಡ ಗಣಕಪರಿಷತ್ತಿನ ನರಸಿಂಹಮೂರ್ತಿ, ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಕೆ ಎಲ್ ರಾಜಶೇಖರ, ಕರ್ನಾಟಕ ಪ್ರಕಾಶಕರ ಸಂಘದ ಉಪಾದ್ಯಕ್ಷ ಪ್ರೇಮಚಂದ್ರ, ಚಾರುಮತಿ ಪ್ರಕಾಶನದ ಬಿ ಎಸ್ ವಿದ್ಯಾರಣ್ಯ, ಭೂಮಿ ಬುಕ್ಸ್ ನ ವಿಶಾಲಾಕ್ಷಿ ಶರ್ಮ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಕೆ. ರಾಜಕುಮಾರ್, ಜನಾರ್ದನ್, ಗಿರಿಧರ ಖಾಸನೀಸ್, ಸರ್ವಮಂಗಳಾ, ಮಹಿಳಾ ವಿವಿಯ ನಿವೃತ್ತ ಕುಲಸಚಿವೆ ಸುನಂದಮ್ಮ, ಸಾಹಿತ್ಯ ಭಂಡಾರದ ಅರುಣ ಮುಂತಾದವರು ಉಪಸ್ಥಿತರಿದ್ದರು.
ಎಲ್ಲ ಲೇಖಕ ಪ್ರಕಾಶಕರಿಗೆ ಮುದ್ರಣಶಾಲೆಯ ವಿವಿಧ ಹಂತಗಳನ್ನು ಪ್ರಾತ್ಯಕ್ಷತೆಯ ಮೂಲಕ ಪರಿಚಯಿಸಲಾಯಿತು. ಲಕ್ಷ್ಮಿ ಮುದ್ರಣಾಲಯದ ಮಾಲಾ ಮತ್ತು ಪ್ರಸನ್ನ ಪ್ರಾತ್ಯಕ್ಷತೆ ನಡೆಸಿಕೊಟ್ಟರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.