ಪುಸ್ತಕ ಬರೆಯುವುದಕ್ಕಿಂತ ಅದಕ್ಕೆ ಹೆಸರಿಡುವುದೇ ಕಷ್ಟದ ಕೆಲಸ


'ಈ ಸಂಕಲನವನ್ನು 'ಬಿದಿರ ತಡಿಕೆ' ಎಂಬ ಹೆಸರಿನಿಂದ ಕರೆದಿರುವೆ. 'ಬಿದಿರು' ನಮ್ಮ ಕವಿಗಳಿಗೆ ಒಂದು ರೂಪಕವಾಗಿ ಕಂಡಿದೆ' ಎನ್ನುತ್ತಾರೆ ಡಾ. ಎಚ್.ಎಸ್. ಸತ್ಯನಾರಾಯಣ ಅವರು. ‘ಬಿದಿರ ತಡಿಕೆ’ ಲಲಿತ ಪ್ರಬಂಧ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

ಇದು ನನ್ನ ಎರಡನೆಯ ಲಲಿತ ಪ್ರಬಂಧಗಳ ಸಂಕಲನ. ಈ ಮೊದಲು ಪ್ರಕಟವಾದ 'ಪನ್ನೇರಳೆ'ಗೆ ಓದುಗರಿಂದ ದೊರೆತ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡು ಈಗ 'ಬಿದಿರ ತಡಿಕೆ'ಯ ಪ್ರಕಟಣೆಗೆ ಮುಂದಾಗಿದ್ದೇನೆ. ಓದುಗರು ಎಂದಿನಂತೆಯೇ ಪ್ರೀತಿಯಿಂದ ಬರಮಾಡಿಕೊಳ್ಳುವರೆಂಬ ನಿರೀಕ್ಷೆ ನನ್ನದು.

ಚಿಕ್ಕಂದಿನಿಂದಲೂ ರಸ್ತೆಯಲ್ಲಿ ಮಾರುತ್ತಾ ಮನೆಯಂಗಳಕ್ಕೆ ಬರುವ ಮಾರಾಟಗಾರರ ಬಗ್ಗೆ ನನಗೆ ಕುತೂಹಲ ಮತ್ತು ಆಸಕ್ತಿ. ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಸೊಪ್ಪು ಮಾರುತ್ತಾ ಕುಳಿತಿದ್ದ ಅಜ್ಜಿಯೊಡನೆ ಮಾತಾಡಿದ್ದೇ ನೆಪವಾಗಿ 'ಪ್ರಾತಃಕಾಲದ ದನಿಗಳು' ಪ್ರಬಂಧ ಬರೆದೆ. ವೃತ್ತಿಜೀವನದ ಬಗೆಬಗೆಯ ಅನುಭವಗಳಲ್ಲಿ ಪರೀಕ್ಷಾ ಕೆಲಸದ ಅನುಭವದಿಂದ 'ಪರೀಕ್ಷೆಗಳು ಸಾರ್ ಪರೀಕ್ಷೆಗಳು' ಪ್ರಬಂಧ ಬರೆದೆ. ಫೇಸ್ಬುಕ್ಕಿನಲ್ಲಿ ಹಾಕಿದ ಈ ಪ್ರಬಂಧ ನಾಡಿನ ನಾನಾ ಮೂಲೆಯ ಅಧ್ಯಾಪಕರ ವಲಯದಲ್ಲೆಲ್ಲಾ ಓಡಾಡಿತು. ಹಲವರು ಇದೇ ಬಗೆಯ ತಮ್ಮ ಅನುಭವಗಳನ್ನು ಉಲ್ಲೇಖಿಸಿ ನೀಡಿದ ಪ್ರತಿಕ್ರಿಯೆಯಿಂದ ನನ್ನ ಬರಹಕ್ಕೊಂದು ನಿರ್ದಿಷ್ಟತೆ ಮತ್ತು ಒಪ್ಪಿತ ಮುದ್ರೆಗಳು ದೊರೆತದ್ದು ನನಗೆ ಸಂತೋಷವನ್ನುಂಟು ಮಾಡಿದವು. ನಾಡಿನಾದ್ಯಂತ ಓಡಾಡುವಾಗ ಆದಷ್ಟೂ ರೈಲು ಸೇವೆಯನ್ನೇ ಬಳಸ ಬಯಸುವ ನಾನು ಆ ಅನುಭವಗಳನ್ನು 'ಕಾಲವೆಂಬ ರೈಲುಗಾಡಿ'ಯಲ್ಲಿ ದಾಖಲಿಸಿದ್ದೇನೆ. ರೈಲು ಭೋಗಿಯಂತೆಯೇ ತುಸು ದೀರ್ಘವಾಗಿರುವ ಈ ಪ್ರಬಂಧದಲ್ಲಿ ಪ್ರಸ್ತಾಪಿಸದೆ ಉಳಿದಿರುವ ಅನೇಕ ಸ್ವಾರಸ್ಯಕರ ಸಂಗತಿಗಳು ಬಾಕಿ ಇವೆ. ನಾನು ಓದಿದ್ದ 'ರೈಲುಗಾಡಿಯ ಪಯಣ' ಮತ್ತು ಆನಂದಕಂದರ 'ಮೂರನೇ ದರ್ಜೆಯ ಪ್ರಯಾಣ' ಪ್ರಬಂಧಗಳು ಕಾಣಿಸಿರುವ ನಂತರದ ರೈಲು ಪ್ರಯಾಣದ ಅಂದರೆ, ನಮ್ಮ ಕಾಲದ ಅನುಭವಗಳನ್ನು ಕಾಣಿಸುವುದು ನನ್ನ ಉದ್ದೇಶವಾಗಿದೆ. ಇದರಲ್ಲಿ ಎಷ್ಟು ಸಫಲತೆ ಸಾಧ್ಯವಾಗಿದೆಯೋ ಅರಿಯೆ! ಉಳಿದ ಪ್ರಬಂಧಗಳ ಬಗ್ಗೆ ಹೆಚ್ಚು ಹೇಳಲಾರೆ. ಅವೇ ನಿಮ್ಮೊಂದಿಗೆ ಮಾತಾಡಬಹುದು.

ಒಟ್ಟು ಒಂಬತ್ತು ಪ್ರಬಂಧಗಳ ಕಟ್ಟು ಇಲ್ಲಿದೆ. ಸಂಖ್ಯೆಗೆ ಮಹತ್ವ ಕೊಡದ ನಾನು ಇರುವಷ್ಟನ್ನೇ ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇನೆ. ಪುಸ್ತಕ ದೊಡ್ಡದಾದರೆ ಓದುಗರಿಗೆ ಪ್ರಕಾಶಕರಿಗೂ ಹೊರೆಯಾಗಬಹುದು ಆತಂಕ ದೊಡ್ಡ ಪುಸ್ತಕವನ್ನು ಓದುವ ವ್ಯವದಾನವನ್ನೇ ನಮ್ಮ ಕಾಲ ಕಿತ್ತುಕೊಂಡಿದೆ. ಲಲಿತ ಪ್ರಬಂಧಗಳ ಗುಣವೇ ಓದುಗರ ಮನಸ್ಸನ್ನು ಹಗುರಾಗಿಸುವುದೇ ಹೊರತು ಭಾರವಾಗಿಸುವುದಲ್ಲ. ಈ ಎಲ್ಲ ಕಾರಣಗಳಿಂದಲೂ ಇನ್ನೊಂದೆರಡು ಪ್ರಬಂಧಗಳನ್ನು ಸೇರಿಸಬಹುದಿತ್ತು ಎಂಬ ಆಸೆಯನ್ನು ಹತ್ತಿಕ್ಕಿಕೊಂಡಿದ್ದೇನೆ. ಅವು ಮುಂದಿನ ಸಂಕಲನಕ್ಕಾದೀತೆಂಬ ದುರಾಲೋಚನೆಯೂ ಇದೆ.

ಈ ಸಂಕಲನವನ್ನು 'ಬಿದಿರ ತಡಿಕೆ' ಎಂಬ ಹೆಸರಿನಿಂದ ಕರೆದಿರುವೆ. 'ಬಿದಿರು' ನಮ್ಮ ಕವಿಗಳಿಗೆ ಒಂದು ರೂಪಕವಾಗಿ ಕಂಡಿದೆ. ಒಂದು ಪ್ರಬಂಧದ ಶೀರ್ಷಿಕೆಯಾಗಿ ಕೆ.ಎಸ್. ನರಸಿಂಹಸ್ವಾಮಿಯವರ 'ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು' ಎಂಬ ಸಾಲನ್ನು ಬಳಸಿರುವುದರಿಂದ ಅದನ್ನೇ ಸಂಕ್ಷಿಪ್ತಗೊಳಿಸಿ 'ಬಿದಿರ ತಡಿಕೆ' ಎಂದಿಟ್ಟುಕೊಂಡಿರುವೆನೆ ಹೊರತು ಮತ್ತಾವ ರೂಪಕವೂ ಇದರ ಹಿಂದಿಲ್ಲ. ಪುಸ್ತಕದ ಹೆಸರು ಚಿಕ್ಕದಾಗಿದ್ದರೆ ನೆನಪಿಡಲು, ಉಲ್ಲೇಖಿಸಲು ಸುಲಭವೆಂಬ ಕಾರಣವೂ ಜೊತೆಗಿದೆ. ಪುಸ್ತಕ ಬರೆಯುವುದಕ್ಕಿಂತ ಅದಕ್ಕೆ ಹೆಸರಿಡುವುದೇ ಕಷ್ಟದ ಕೆಲಸ. ಮಕ್ಕಳಿಗೆ ಹೆಸರಿಡುವಾಗಲೂ ಇದೇ ಸಮಸ್ಯೆ ಹೆಸರು ಹೇಗಾದರೂ ಇರಲಿ, ಪ್ರಬಂಧಗಳು ಓದುಗರಿಗೆ ಇಷ್ಟವಾದರೆ ಸಾಕು.

ಮೊನ್ನೆ ನಮ್ಮ ಉತ್ಸಾಹಿ ಯುವ ಬರಹಗಾರರಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿಯವರು ಆಯೋಜಿಸಿದ್ದ ಕಥಾಕಮ್ಮಟಕ್ಕೆಂದು ಕುಪ್ಪಳಿಗೆ ಹೋಗಿದ್ದಾಗ ಮಾತಿನ ಮಧ್ಯೆ 'ನಿಮ್ಮದೊಂದು ಲಲಿತಪ್ರಬಂಧ ಸಂಕಲನವನ್ನು ಪ್ರಕಟಿಸುತ್ತೇವೆ, ಕೊಡುವಿರಾ?' ಎಂದು ಕೇಳಿದರು. ಎರಡೇ ಮಾತಿನಲ್ಲಿ ಪುಸ್ತಕದ ವಿನ್ಯಾಸ, ಮುಖಪುಟ ವಿನ್ಯಾಸ, ಬಿಡುಗಡೆ ಎಲ್ಲದರ ಬಗ್ಗೆಯೂ ಇಬ್ಬರೂ ಪಟಪಟನೆ ನಿರ್ಧರಿಸಿಬಿಟ್ಟರು. ಕುವೆಂಪು ಜನ್ಮತಳೆದ ನೆಲದಲ್ಲಿ ನನ್ನ ಪ್ರಬಂಧ ಸಂಕಲನದ ಪ್ರಕಟಣೆಯ ವಿಚಾರ ಎರಡು ಮೂರು ನಿಮಿಷದಲ್ಲಿ ನಿಶ್ಚಯಗೊಂಡಿತಲ್ಲ ಎಂಬ ಭಾವುಕತೆ ಕಾಡಿತು. ಪುಸ್ತಕ ಪ್ರಕಟಣೆ ಅತ್ಯಂತ ದೊಡ್ಡ ಸಾಹಸವಾಗಿರುವ ದಿನಗಳಲ್ಲಿ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ಅವರುಗಳು ನನ್ನ ವಿಚಾರದಲ್ಲಿ ತಳೆದ ಪ್ರೀತಿ ಮತ್ತು ಹೃದಯವಂತಿಕೆ ದೊಡ್ಡದು. ಅವರ ಮಿಂಚುಳ್ಳಿ ಪ್ರಕಾಶನದಿಂದ 'ಬಿದಿರ ತಡಿಕೆ' ಪ್ರಕಟವಾಗುತ್ತಿದೆ. ಈ ಇಬ್ಬರನ್ನೂ ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ. ಸಾಹಿತ್ಯ ಕೃಷಿಯ ಜೊತೆಜೊತೆಯಲ್ಲೇ ಪುಸ್ತಕ ಪ್ರಕಟಣೆಯ ಸಾಹಸಕ್ಕೂ ಮುಂದಾಗಿರುವ ಅವರಿಬ್ಬರ ಉತ್ಸಾಹ ಸದಾ ಚಲನಶೀಲವಾಗಿರಲಿ. ಕನ್ನಡದ ಓದುಗರು ಈ ತರುಣ ಲೇಖಕರ ಉತ್ಸಾಹಕ್ಕೆ ಬಲ ತುಂಬಲೆಂದು ಹಾರೈಸುತ್ತೇನೆ.

ಈ ಪ್ರಬಂಧ ಸಂಕಲನವನ್ನು ಹಿರಿಯ ಲೇಖಕಿ ವೈದೇಹಿಯವರಿಗೆ ಅರ್ಪಿಸಿದ್ದೇನೆ. ಸಣ್ಣಕಥೆ, ಲಲಿತ ಪ್ರಬಂಧ, ಕವಿತೆ, ಮಕ್ಕಳ ಸಾಹಿತ್ಯದಲ್ಲಿ ಗಣ್ಯ ಸಾಧನೆ ಮಾಡಿರುವ ವೈದೇಹಿಯವರ ಕಥಾಲೋಕ ನನ್ನಂಥ ಹಲವು ಓದುಗರ ಓದಿನ ಸೊಗಸನ್ನು ವೃದ್ಧಿಸಿದೆ. ಭಾವಲೋಕವನ್ನು, ಅನುಭವ ಜಗತ್ತನ್ನು ವಿಸ್ತರಿಸಿದೆ. ನನ್ನ ಬಗ್ಗೆ ಕರುಳುಬಳ್ಳಿಯ ಅಕ್ಕರೆ ತೋರುತ್ತಾ, ವಿಚಾರಿಸಿಕೊಳ್ಳುತ್ತಾ ಎಚ್ಚರದ ಕಣ್ಣಲ್ಲಿ ಪೊರೆವ ಅವರ ವಾತ್ಸಲ್ಯಕ್ಕೆ ಕೃತಜ್ಞತೆಯಿಂದ ಈ ಕೃತಿಯನ್ನು ಮುಡಿಪಿರಿಸಿದ್ದೇನೆ. ಅವರು ಈ ಪ್ರೀತಿ ಗೌರವದ ಕಾಣಿಕೆಯನ್ನು ಒಪ್ಪಿಸಿಕೊಳ್ಳುವರೆಂಬ ಆಶಯ ನನ್ನದು.

ನನ್ನನ್ನು ಬರೆವಣಿಗೆಯಲ್ಲಿ ತೊಡಗಿಸಿದ ಅನೇಕರಿಗೆ ನನ್ನ ನಮಸ್ಕಾರಗಳು ಸಲ್ಲಬೇಕು. ಬರೆದರೆ ಹೆಸರುಗಳ ದೊಡ್ಡ ಪಟ್ಟಿಯೆ ಆಗಿಬಿಡುವ ಅಪಾಯವನ್ನು ಮನಗಂಡು ಎಲ್ಲ ಹಿರಿಯ ಕಿರಿಯ ಲೇಖಕರೆಲ್ಲರನ್ನೂ ಇಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ. ಓದುಗರ ಪ್ರೋತ್ಸಾಹವೇ ಲೇಖಕರ ಶಕ್ತಿ. ನನ್ನ ಕೃತಿಗಳಿಗೆ ಸ್ಪಂದಿಸಿ ಮೆಚ್ಚುಗೆ ಸೂಚಿಸಿದ, ತಿದ್ದಿ ತೀಡಿದ, ಅರೆಕೊರೆಗಳನ್ನು ಗಮನಕ್ಕೆ ತಂದ ಎಲ್ಲರಿಗೂ ನನ್ನ ನಮಸ್ಕಾರಗಳು ಸಲ್ಲುತ್ತವೆ. 'ಬಿದಿರ ತಡಿಕೆ'ಯನ್ನೂ ಕನ್ನಡದ ಓದುಗರು ಪ್ರೀತಿಯಿಂದ ಬರಮಾಡಿಕೊಳ್ಳುವರೆಂದು ಆಶಿಸುತ್ತೇನೆ.

-ಡಾ.ಎಚ್.ಎಸ್. ಸತ್ಯನಾರಾಯಣ

MORE FEATURES

ವಿಮರ್ಶೆ ಎಂದರೆ ಪುಸ್ತಕದ ಆಳವಾದ ಓದು

18-05-2024 ಬೆಂಗಳೂರು

‘ವಿಮರ್ಶಾ ಬರಹಗಳ ಮುಖ್ಯ ಉದ್ದೇಶ ಓದುಗರ ಪುಸ್ತಕ ಓದಿನ ತಿಳಿವಳಿಕೆಗೆ ರಹದಾರಿ ಮಾಡಿಕೊಡುವುದಾಗಿದೆ’ ಎನ್ನು...

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...