ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ

Date: 26-08-2022

Location: ಬೆಂಗಳೂರು


ಬೊಂತಾದೇವಿ ವೈರಾಗ್ಯ ತಾಳಿದಳೆಂಬುದಕ್ಕಾಗಲಿ, ಶರಣೆಯಾಗಿದ್ದಳೆಂಬುದಕ್ಕಾಗಲಿ ಮುಖ್ಯವಾಗುವುದಿಲ್ಲ. ಕಾಶ್ಮೀರದಲ್ಲಿ ನಿರ್ಗತಿಕ ಮಹಿಳೆಯರ ನೋವಿಗೆ ದನಿಯಾದಳೆಂಬುವುದಕ್ಕಾಗಿ, ನೈತಿಕತೆಯ ಕಾರಣಕ್ಕೆ ಶಿವನನ್ನೇ ನಿರಾಕರಿಸಿದಳೆಂಬುದಕ್ಕಾಗಿ ಈ ಶರಣೆ ಗಮನ ಸೆಳೆಯುತ್ತಾಳೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಬೊಂತಾದೇವಿಯ ನಿಲುವನ್ನು ಕುರಿತು ಚರ್ಚಿಸಿದ್ದಾರೆ.

ಬೊಂತಾದೇವಿಯನ್ನು ಕುರಿತು ಅನೇಕ ಕೃತಿಗಳಲ್ಲಿ ಪ್ರಸ್ತಾಪಿಸಲಾಗಿದೆ. "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ", "ಸೋಮನಾಥ ಪುರಾಣ", "ಚೆನ್ನಬಸವ ಪುರಾಣ" ಈ ಮೊದಲಾದ ಪುರಾಣ ಕಾವ್ಯಗಳಲ್ಲಿ ಮತ್ತು ಶರಣರ ವಚನಗಳಲ್ಲಿ ಬೊಂತಾದೇವಿಯ ಉಲ್ಲೇಖಗಳಿವೆ. "ಶಿವಶರಣೆಯರ ಚರಿತ್ರೆ", "ಶಿವಶರಣ ಕಥಾರತ್ನಕೋಶ", "ಕರ್ನಾಟಕ ಕವಯತ್ರಿಯರು" ಈ ಮೊದಲಾದ ಆಧುನಿಕ ಕೃತಿಗಳಲ್ಲಿ ಬೊಂತಾದೇವಿಯನ್ನು ಕುರಿತು ಚರ್ಚಿಸಲಾಗಿದೆ. ಜಾನಪದದಲ್ಲಿಯೂ ಬೊಂತಾದೇವಿ ಕಾಣಿಸಿಕೊಂಡಿದ್ದಾಳೆ.

ನಡುಗನ್ನಡ ಪುರಾಣಕಾವ್ಯಗಳಲ್ಲಿ ಈಕೆ ಕಾಶ್ಮೀರ ದೇಶದ ಮಾಂಡವ್ಯಪುರದ ಅರಸನ ಮಗಳೆಂದು ಗೊತ್ತಾದರೆ, "ಪ್ರಭುದೇವರ ಪುರಾಣ"ದಲ್ಲಿ ಚೆನ್ನಬಸವಣ್ಣನಿಂದ ನಿಜದೇವಿಯ ವೃತ್ತಾಂತ ತಿಳಿದುಬರುತ್ತದೆ. ಬೊಂತಾದೇವಿಯಂತಹ ಮಹತ್ವದ ಶರಣೆ ಕಲ್ಯಾಣಕ್ಕೆ ಬಂದಿದ್ದಾಳೆಂದೂ, ಇಲ್ಲಿಯೇ ಗುಪ್ತಭಕ್ತಿಯನ್ನಾಚರಿಸುತ್ತಾಳೆಂದೂ ಚೆನ್ನಬಸಣ್ಣ ಈ ಪುರಾಣಕಾವ್ಯದಲ್ಲಿ ಹೇಳಿದ್ದಾನೆ. ಬೊಂತಾದೇವಿಗೆ-ಬೊಂತಲಾದೇವಿ, ಬಂತಲಾದೇವಿ, ಬೊಂತಾದೇವಿ, ನಿಜದೇವಿಯೆಂಬ ಹೆಸರುಗಳಿದ್ದುದು ತಿಳಿದುಬರುತ್ತದೆ. ಡಾ.ನೀಲಾಂಬಿಕಾ ಶೆರಿಕಾರ ಅವರ ಜನಪದ ಹಾಡುಗಳ ಸಂಗ್ರಹದಲ್ಲಿ ಬೊಂತಾದೇವಿಯ ಹಾಡು ಕಾಣಿಸಿಕೊಂಡಿದೆ.

"ಕಾಶ್ಮೀರ ರಾಜಾನ ಮಗಳು ಅವಳಂತೆ ಸುಗುಣಿ
ನಾಮದಲ್ಲಿ ನಿಜದೇವಿ ಕಲ್ಯಾಣಕ ಬಂದಾಳದೇವಿ ||ಪ||
ಶಿವ ಶಿವಯೆನ್ನುತ ಶಿವನಿಗೆ ನೆನಸುತಾ
ಬೆಟ್ಟಗುಡ್ಡೆಲ್ಲಾ ಸುತ್ತಾಂಳ್ಯ ನಾರಿ| ಹಾದ್ಯಾಗ ಕುಜನರು ಹೇಳ್ಯಾರ ದೇವಿಗಿ
ಬತ್ತಲೆಯಾದರ ಸಿಕ್ಕಾನ ಶಿವನೆಂದು"

- ಬೊಂತಾದೇವಿ ಹಾಡು

ಈ ಹಾಡಿನಲ್ಲಿ ಬೊಂತಾದೇವಿಯ ವೃತ್ತಾಂತ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಪುರಾಣಕಾವ್ಯಗಳಲ್ಲಿ ಬಂದಿರುವ ವಿಷಯವನ್ನೇ ಜನಪದರು ತಮ್ಮ ಹಾಡುಗಳಲ್ಲಿ ತುಂಬಿಕೊಟ್ಟಿದ್ದಾರೆ. ಕುಜನರು ಎಲ್ಲಾ ಕಾಲಕ್ಕೂ ಇರುತ್ತಾರೆ. ಅವರು ಹೇಳಿದ ಮಾತುಗಳನ್ನು ಕೇಳಿದ ಬೊಂತಾದೇವಿ ಇದು ನಿಜವೆಂದು ತಿಳಿದು ಉಟ್ಟ ಬಟ್ಟೆಯನ್ನು ಕಿತ್ತು ಬಿಸಾಕುತ್ತಾಳೆ. ತಾನು ಹೀಗೆ ಬೆತ್ತಲೆ ಹೋದರೆ ಜನ ಏನಂದುಕೊಂಡಾರೆಂಬ ವಿಚಾರವನ್ನೂ ಮಾಡದೆ, ಗುಪ್ತಭಕ್ತಿಯಿಂದ ಹಾಗೇ ಕಲ್ಯಾಣದತ್ತ ನಡೆದಿದ್ದಾಳೆ. ಕಲ್ಯಾಣ ಎರಡು ಹರದಾರಿ ದೂರದಲ್ಲಿದ್ದಾಗ ಜಂಗಮನ ವೇಷದಲ್ಲಿ ಶಿವ ಕಾಣಿಸಿಕೊಳ್ಳುತ್ತಾನೆ.

"ನಿಜದೇವಿ ಎದುರೀಗಿ ನಿಂತಾನ, ಯಾರೆಂದು ಕೇಳ್ಯಾಳ ಕೌದಿ ಮಾರುವ ಕಾಯಕದವನು ನಾನು|
ಕೌದಿಯು ಬೇಕಿಲ್ಲ ಜಮಖಾನಿ ಬೇಕಿಲ್ಲ
ಪರಮಾತ್ಮ ನಮಗ ಸಿಕ್ಕಾನೆಲ್ಲಿ"
ಎಂದು ಕೇಳಿದಾಗ ಸಾಕ್ಷಾತ್ ಶಿವನೇ ಅವಳ ಗುಪ್ತಭಕ್ತಿಗೆ ಮೆಚ್ಚಿ ತನ್ನಲ್ಲಿದ್ದ ಬೊಂತೆಯನ್ನು ಅವಳ ಮೈಗೆ ಹೊದಿಸಿ ಮಗಳೆಂದು ಕರೆದು ನೀನು ನಿಜದೇವಿಯೆಂದು ಹರಸುತ್ತಾನೆ. ಜನಪದರಲ್ಲಿ ಬೊಂತಾದೇವಿಯು ಶಿವನ ಮಗಳಾಗಿ ಕಾಣಿಸಿಕೊಂಡರೆ, ಶಿಷ್ಟಪುರಾಣ ಕಾವ್ಯಗಳಲ್ಲಿ ಶಿವನು ಅವಳ ಸೌಂದರ್ಯಕ್ಕೆ ಮಾರು ಹೋಗಿ ಪ್ರೀತಿಸಲು ಪ್ರಯತ್ನಿಸುತ್ತಾನೆ, ಆದರೆ ಬೊಂತಾದೇವಿ ಅವನನ್ನು ನಿರಾಕರಿಸುತ್ತಾಳೆ.

ಕಾಶ್ಮೀರ ದೇಶದ ಮಾಂಡವ್ಯಪುರದ ಅರಸನ ಮಗಳು ಬೊಂತಾದೇವಿ. ನಿಜದೇವಿಯೆಂಬುದು ಈಕೆಯ ಮೊದಲಿನ ಹೆಸರು. ಶಿವನು ಕೊಟ್ಟ ಬೊಂತೆಯನ್ನು (ಕೌದಿಯನ್ನು) ಹೊದ್ದುಕೊಂಡದ್ದರಿಂದ ಈಕೆಗೆ ಬೊಂತಾದೇವಿಯೆಂಬ ಹೆಸರು ಬಂದಿದೆ. ಅರಸನ ಮಗಳಾದರೂ ಸುಖ-ಸಂಭ್ರಮದಿಂದ ಇರಲಿಲ್ಲ. ಕಾಶ್ಮೀರದಲ್ಲಿರುವ ನಿರ್ಗತಿಕ ಮಹಿಳೆಯರ ದು:ಖ-ಸಂಕಟಗಳನ್ನು ನೋಡಿ, ಮನನೊಂದ ನಿಜದೇವಿ ವೈರಾಗ್ಯ ಹೊಂದಿ, ಎಲ್ಲ ಸುಖ-ಸಂಪತ್ತನ್ನು ತೊರೆದು ಉಟ್ಟಸೀರೆಯಲ್ಲಿಯೇ ಕಲ್ಯಾಣಕ್ಕೆ ಹೋಗುತ್ತಾಳೆ. ಹೀಗೆ ಹೋಗುವಾಗ ದಾರಿಯಲ್ಲಿ ಕಲ್ಲು-ಮುಳ್ಳುಗಳನ್ನು ತುಳಿಯುತ್ತ ಹಗಲು-ಇರುಳೆನ್ನದೆ ನಡೆಯುತ್ತಾಳೆ. ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ, ಕೆರೆದಂಡೆಯಲ್ಲಿಟ್ಟಿದ್ದ ಸೀರೆಯನ್ನು ಪ್ರಾಣಿಗಳು ಹೊಲಸು ಮಾಡಿಬಿಡುತ್ತವೆ. ತುಂಡು ಬಟ್ಟೆಯನ್ನೇ ಸುತ್ತಿಕೊಂಡು ಹೋಗುತ್ತಿದ್ದಾಗ, ಶಿವನು ಇವಳ ಮುಗ್ಧ ಭಕ್ತಿಗೆ ಮೆಚ್ಚಿ ಯುವಕನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇವಳ ಸೌಂದರ್ಯವನ್ನು ಕಂಡ ಯುವಕ ತನ್ನನ್ನು ಮದುವೆಯಾಗಬೇಕೆಂದು ಕೇಳುತ್ತಾನೆ. ಇವನು ಶಿವನೇ ಇದ್ದಾನೆಂದು ತನ್ನಂತರಂಗದ ಶಕ್ತಿಯಿಂದ ತಿಳಿದ ಬೊಂತಾದೇವಿ, ನಿನಗೆ ಹೆಂಡರು-ಮಕ್ಕಳಿದ್ದಾರೆ. ನಿನ್ನೊಡನೆ ಮದುವೆಯಾಗುವುದಿಲ್ಲವೆಂದು ಹೇಳುತ್ತಾಳೆ. ಇವಳ ನಿಷ್ಠಾಭಕ್ತಿಗೆ ಮೆಚ್ಚಿದ ಶಿವನು ಇವಳಿಗೆ ಬೊಂತೆಯನ್ನು ಹೊದ್ದುಕೊಳ್ಳಲು ಕೊಟ್ಟು ಅದೃಶ್ಯನಾಗುತ್ತಾನೆ. ಆಗ ಶಿವನು ಕೊಟ್ಟ ಬೊಂತೆಯನ್ನು ಹೊತ್ತುಕೊಂಡು ಕಲ್ಯಾಣಕ್ಕೆ ಬಂದುದರಿಂದ ಈಕೆಯನ್ನು

ಬೊಂತಾದೇವಿಯೆಂದು ಜನ ಕರೆದದ್ದರಿಂದ ಅದೇ ಹೆಸರು ಬಂದಿರಬಹುದಾಗಿದೆ. ಶಿವನ ಪವಾಡದ ಕಥೆಯೇನೇ ಇರಲಿ, ಬೊಂತಾದೇವಿಯ ನಿಲುವು ಇಲ್ಲಿ ಸ್ಪಷ್ಟವಾಗಿದೆ. ಒಮ್ಮೆ ಜೀವನದಲ್ಲಿ ವೈರಾಗ್ಯ ತಾಳಿ, ಆಧ್ಯಾತ್ಮದ ಸಾಧನೆಗಾಗಿ ಕಲ್ಯಾಣದ ದಾರಿ ಹಿಡಿದ ನಿಜದೇವಿ ಶಿವನ ಇಚ್ಛೆಯನ್ನೇ ತಿರಸ್ಕರಿಸುತ್ತಾಳೆ. ಪರಸತಿಯನ್ನು ಕಣ್ಣೆತ್ತಿ ನೋಡುವುದು ಹೇಗೆ ಪಾಪವೋ, ಪರಪುರುಷನನ್ನು ಕಣ್ಣೆತ್ತಿ ನೋಡುವುದೂ ಪಾಪವೆಂದು ತಿಳಿದ ಬೊಂತಾದೇವಿ ತಾನು ನಂಬಿದ ತತ್ವಗಳಿಗೆ ಬದ್ಧಳಾಗುತ್ತಾಳೆ.

ಅಕ್ಕಮಹಾದೇವಿಯಂತೆ ಈಕೆಯೂ ಕೂಡ ರಾಜಸತ್ತೆಯ ವೈಭೋಗವನ್ನು ತಿರಸ್ಕರಿಸಿ
ಬಂದಳಾಗಿದ್ದಾಳೆ. ಸುಖಭೋಗಗಳಿಗೆ ಹಾತೊರೆಯುತ್ತಿರುವ ಜನತೆಗೆ, ಬೊಂತಾದೇವಿ ದೊಡ್ಡ ಆದರ್ಶವಾಗಿ ಕಾಣುತ್ತಾಳೆ. ನಿರ್ಗತಿಕ ಮಹಿಳೆಯರ ಸಂಕಟ ಕಂಡ, ನಿಜದೇವಿ ತನಗೂ ಈ ಸುಖ ಬೇಡವೆಂದು ವೈರಾಗ್ಯ ತಾಳುವುದು ಬಹುಮುಖ್ಯ ಸಂಗತಿಯಾಗುತ್ತದೆ. ರಾಜಸಂಭ್ರಮವನ್ನು, ಅರಮನೆಯ ವೈಭವವನ್ನು ತೊರೆದು ಬರುವವರು ತುಂಬ ವಿರಳ, ಅಂತಹ ವಿರಳರಲ್ಲಿ ವಿರಳಳಾದ ಬೊಂತಾದೇವಿ ರಾಜವೈಭವವು ಸುಖ ನೀಡುವಂತಹದ್ದಲ್ಲವೆಂಬ ತೀರ್ಮಾನಕ್ಕೆ ಬರುತ್ತಾಳೆ. ಅಡವಿಯಲ್ಲಿ ಶಿವ ಪ್ರತ್ಯಕ್ಷನಾಗಿ ಮದುವೆಯಾಗಲು ಕೇಳಿಕೊಂಡಾಗ, ಸಂಸಾರಿಯಾದವನನ್ನು ಮದುವೆಯಾಗುವುದು ಪಾಪವೆಂದು ತಿಳಿದು ಶಿವನ ಪ್ರೀತಿಯನ್ನೇ ನಿರಾಕರಿಸುತ್ತಾಳೆ. ಈ ಎರಡು ಕಾರಣಗಳಿಂದ ಬೊಂತಾದೇವಿ ವಿಶಿಷ್ಟ ಶರಣೆಯಾಗಿ ಕಾಣಿಸಿಕೊಳ್ಳುತ್ತಾಳೆ. ಜಾಗತೀಕರಣದ ಈ

ಸಂದರ್ಭದಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬೊಂತಾದೇವಿಯಂತಹ ಶರಣೆ ದೊಡ್ಡ ಆದರ್ಶವಾಗಿ ಕಾಣಿಸುತ್ತಾಳೆ.ಬೊಂತಾದೇವಿ ವೈರಾಗ್ಯ ತಾಳಿದಳೆಂಬುದಕ್ಕಾಗಲಿ, ಶರಣೆಯಾಗಿದ್ದಳೆಂಬುದಕ್ಕಾಗಲಿ ಮುಖ್ಯವಾಗುವುದಿಲ್ಲ. ಕಾಶ್ಮೀರದಲ್ಲಿ ನಿರ್ಗತಿಕ ಮಹಿಳೆಯರ ನೋವಿಗೆ ದನಿಯಾದಳೆಂಬುವುದಕ್ಕಾಗಿ, ನೈತಿಕತೆಯ ಕಾರಣಕ್ಕೆ ಶಿವನನ್ನೇ ನಿರಾಕರಿಸಿದಳೆಂಬುದಕ್ಕಾಗಿ ಈ ಶರಣೆ ಗಮನ ಸೆಳೆಯುತ್ತಾಳೆ. ಕಲ್ಯಾಣಕ್ಕೆ ಬಂದ ನಂತರ ಬೊಂತಾದೇವಿ ಬೆಳೆದು ನಿಲ್ಲುತ್ತಾಳೆ. "ಬಿಡಾಡಿ" ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸುತ್ತಾಳೆ. ಐದು ವಚನಗಳು ಮಾತ್ರ ಪ್ರಕಟವಾಗಿ ಲಭ್ಯವಾಗಿವೆ. "ಬಿಡಾಡಿ" ಎಂಬ ಅಂಕಿತವೂ ಕೂಡ ಬಂಧನಮುಕ್ತತೆಯ ಸಂಕೇತವೇ ಆಗಿದೆ. ಆಧ್ಯಾತ್ಮದ ಎತ್ತರಕ್ಕೇರಿದ ಬೊಂತಾದೇವಿ, ಸಾಮಾಜಿಕ ಕಳಕಳಿಯ ಕಾರಣಕ್ಕೆ ಜಾತಿನಿರಸನದ ಮೌಲ್ಯ ಎತ್ತಿ ಹಿಡಿದದ್ದಕ್ಕಾಗಿ, ತುಂಬ ಮಹತ್ವದ ಶರಣೆಯಾಗಿ ಕಾಣಿಸಿಕೊಂಡಿದ್ದಾಳೆ.

"ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ?
ಎಲ್ಲಿ ನೋಡಿದಡೆ ಬಯಲೊಂದೆ
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ
ಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ"

- ಬೊಂತಾದೇವಿ (ಸ.ವ.ಸಂ5, ವ:1094)

ಈ ವಚನದಲ್ಲಿ, ಜಾತಿಭೇದ ಮಾಡುವವರನ್ನು ನೇರವಾಗಿ ಪ್ರಶ್ನಿಸಿದ್ದಾಳೆ. ಊರೊಳಗಿರುವವರು ಶ್ರೇಷ್ಠ, ಊರ ಹೊರಗಿರುವ ಅಸ್ಪೃಶ್ಯರು ಕನಿಷ್ಠವೆಂಬ ಭಾವನೆಯಿದ್ದ ಆ ಕಾಲದಲ್ಲಿ, ಈ ಶರಣೆ ಮಹತ್ವದ ಪ್ರಶ್ನೆಗಳನ್ನೆತ್ತುವುದರ ಮೂಲಕ ಜಾತಿವ್ಯವಸ್ಥೆಯನ್ನು ವಿರೋಧಿಸುತ್ತಾಳೆ.

ಬೊಂತಾದೇವಿಯ ನುಡಿ ತುಂಬ ಸರಳವಾಗಿದೆ, ಅಷ್ಟೇ ಗಹನವಾಗಿದೆ. ಆಕಾಶ, ಭೂಮಿ, ಬಯಲು ನಿಸರ್ಗದತ್ತವಾಗಿವೆ. ಸೂರ್ಯ ಹೇಗೆ ಎಲ್ಲ ಕಡೆ ಬೆಳಕು ಕೊಡುತ್ತಾನೋ, ಹಾಗೆ ಬಯಲು ಎಲ್ಲಾ ಕಡೆಯೂ ಒಂದೆಯಾಗಿದೆ. ಇಂತಹ ನೈಸರ್ಗಿಕ ಸತ್ಯದ ಮೂಲಕ, ತಾರತಮ್ಯ ಮಾಡುವವರಿಗೆ ಈ ಶರಣೆ ತಿಳಿಸಿ ಹೇಳಿದ್ದಾಳೆ. ಊರೊಳಗಿರುವುದು ಅದೇ ಬಯಲು, ಊರ ಹೊರಗಿರುವುದು ಅದೇ ಬಯಲು. ಒಂದೇ ಬಯಲಿನಲ್ಲಿದ್ದು, ಒಂದೇ ಬೆಳಕಿನಲ್ಲಿದ್ದು, ಒಂದೇ ಭೂಮಿಯಲ್ಲಿದ್ದು ಅದು ಬೇರೆ, ಇದು ಬೇರೆಯೆಂದು ಭೇದ ಹುಟ್ಟಿಸುವ ವ್ಯವಸ್ಥೆಗೆ ಈ ಶರಣೆ ನೇರವಾಗಿಯೇ ಪ್ರಶ್ನಿಸಿದ್ದಾಳೆ.

"ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಯ ಬಯಲೆಂದುಂಟೆ?" ಎಂದು ಈಕೆ ಕೇಳುವ ಪ್ರಶ್ನೆ ಜಾತಿವ್ಯವಸ್ಥೆಯ ಮರ್ಮಾಂಗಕ್ಕೆ ಮುಟ್ಟುವಂತಿದೆ. ಒಬ್ಬ ಅರಸನ ಮಗಳಾಗಿ ಹುಟ್ಟಿ, ಶರಣೆಯಾಗಿ ಬೆಳೆದ ಬೊಂತಾದೇವಿ, ಬಡವರ ಬಗೆಗೆ, ಅಸ್ಪೃಶ್ಯರ ಬಗೆಗೆ, ಕೆಳವರ್ಗದವರ ಬಗೆಗೆ ಅಪಾರ ಕಾಳಜಿ ಹೊಂದಿದ್ದಾಳೆ. ಈ ಜಾತಿವ್ಯವಸ್ಥೆಯ ವಿರುದ್ಧ ಕಾಳವ್ವೆ, ಸಂಕವ್ವೆಯರು ಮಾತನಾಡುವುದಕ್ಕಿಂತ ಬೊಂತಾದೇವಿಯಂತವರು ಮಾತನಾಡುವುದು ಬಹುಮುಖ್ಯವೆನಿಸುತ್ತದೆ. ವೈರಾಗ್ಯ-ನಿಷ್ಠೆ-ನೈತಿಕತೆ-ಸಮಾನತೆಗೆ ಹೆಸರಾಗಿರುವ ಬೊಂತಾದೇವಿ ಇಂದಿಗೂ ಪ್ರಸ್ತುತವಾಗಿದ್ದಾಳೆ.

"ಅಂತಾಯಿತ್ತಿಂತಾಯಿತ್ತೆಂತಾಯಿತ್ತೇನಬೇಡ, ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೋ ಬಿಂದುವೋ ಪ್ರಾಣವೋ ಇದಾವುದು? ಬಲ್ಲಡೆ ನೀ ಹೇಳಾ, ಬಿಡಾಡಿ.
ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ ಇದ ಪ್ರತಿ ಮಾಡಿ
ಶಬ್ದವೆ ಬ್ರಹ್ಮ, ಶಬ್ದವೇ ಸಿದ್ಧ, ಶಬ್ದವೇ ಶುದ್ದ ಕಾಣಿರೆ ಬಿಡಾಡಿ"
- ಬೊಂತಾದೇವಿ (ಸ.ವ.ಸಂ.5, ವ-1092, 1993)

ಈ ವಚನದಲ್ಲಿ ಬೊಂತಾದೇವಿಯು ಅನಂತತೆಯ ಮಹತ್ವವನ್ನು ಹೇಳಿದ್ದಾಳೆ.

ನಾದಬಿಂದು ಕಳಾತೀತವೆಂಬ ಸತ್ಯ ಇಲ್ಲಿ ಪ್ರಕಟವಾಗಿದೆ. ಬೊಂತಾದೇವಿಗೆ ಶಾಸ್ತ್ರಗಳ ಬಗೆಗೆ ಆಗಮಗಳ ಬಗೆಗೆ, ವೇದಗಳ ಬಗೆಗೆ ಪರಿಚಯವಿದ್ದುದು ಇದರಿಂದ ಸ್ಪಷ್ಟವಾಗುತ್ತದೆ.

ಶಬ್ಧವೆಂಬುದು ಅರ್ಥಹುಡುಕುವ ಮಾದ್ಯಮವಾಗಿರುವಂತೆ, ಹೊರಗಿನ ಮೂಲಕ ಒಳಗನ್ನು ಕಂಡುಕೊಳ್ಳುವ ಸಾಧನವಾಗಿಯೂ ಇಲ್ಲಿ ಕಾಣಿಸಿಕೊಂಡಿದೆ. ಇನ್ನೊಂದು ವಚನದಲ್ಲಿ "ಘಟದೊಳಗ ಬಯಲು" ಮತ್ತು "ಮಠದೊಳಗಣ ಬಯಲು" ಎಂಬ ಎರಡು ಪದಗಳನ್ನು ಬೊಂತಾದೇವಿ ಬಳಸಿದ್ದಾಳೆ. ಘಟವೆಂದರೆ ದೇಹ. ಮಠವೆಂದರೆ ನಾವು ಕಟ್ಟಿಕೊಂಡಿರುವ ವ್ಯವಸ್ಥೆ. ಇವೆರಡರಲ್ಲಿಯೂ ಬಯಲಿದೆ. ಆದರೆ ಮಠವ್ಯವಸ್ಥೆ ಬಯಲಿನಲ್ಲಿಯೇ ತಾರತಮ್ಯವನ್ನು ಹುಟ್ಟುಹಾಕಿ ಭೇದನೀತಿಯನ್ನು ಹೇಳಿದರೆ ತಾನೇ ಬಯಲಾಗುವ ದೇಹ ಇಲ್ಲಿ ಚಲನಶೀಲತೆಯ ಸಂಕೇತವಾಗಿದೆ. ಬೊಂತಾದೇವಿಯ ವಚನಗಳನ್ನು ವಿಶೇಷ ರೀತಿಯ ಅಧ್ಯಯನಕ್ಕೊಳಪಡಿಸಬೇಕಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...