ರಾಬರ್ಟ ಫ್ರಾಸ್ಟನ “Mending Wall”

Date: 19-06-2023

Location: ಬೆಂಗಳೂರು


“ಪ್ರತಿವರ್ಷವೂ ವಸಂತ ಕಾಲದಲ್ಲಿ ಪರಸ್ಪರರ ಹೊಲವನ್ನು ಪ್ರತ್ಯೇಕಿಸುವ ಗೋಡೆಯ ಬಿರುಕನ್ನು ಸರಿಪಡಿಸುವುದಕ್ಕಾಗಿ ಪರಸ್ಪರ ಭೇಟಿಯಾಗುವ ಅಕ್ಕಪಕ್ಕದ ಹೊಲಗಳಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳ ಅಭಿಫ್ರಾಯದ ಸುತ್ತ ಈ ಕವಿತೆ ಸುತ್ತುತ್ತದೆ. ಗೋಡೆ ಅವಶ್ಯಕವೋ ಅಥವಾ ಅನವಶ್ಯಕವೋ? ಎಂಬ ಪ್ರಶ್ನೆಯನ್ನು ಈ ಕವಿತೆ ಚರ್ಚಿಸುತ್ತದೆ,” ಎನ್ನುತ್ತಾರೆ ಅಂಕಣಗಾರ್ತಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ “ರಾಬರ್ಟ ಫ್ರಾಸ್ಟನ Mending Wall” ಕುರಿತು ಕಟ್ಟಿಕೊಟ್ಟಿದ್ದಾರೆ.

ನಾಲ್ಕು ಬಾರಿ ಕಾವ್ಯಕ್ಕೆ ಪುಲಿಟ್ಜರ್ ಪ್ರಶಸ್ತಿ ಪಡೆದ ರಾಬರ್ಟ ಫ್ರಾಸ್ಟ ಕವಿತೆಗಳು ಹೈಸ್ಕೂಲು ಮತ್ತು ಕಾಲೇಜು ಹಂತಗಳಲ್ಲಿ ಪಠ್ಯಗಳಾಗಿ ಗಮನ ಸೆಳೆದಿದ್ದವು. ಇಂಗ್ಲೀಷ ಕಾವ್ಯ ಜಗತ್ತಿನಲ್ಲಿ ತನ್ನದೇ ಸ್ಥಾನ ಪಡೆದ ‘ದಿ ರೋಡ್ ನಾಟ್ ಟೇಕನ್’ ಕವಿತೆ ತನ್ನ ವಿಶಿಷ್ಟ ಸೃಜನಶೀಲ ಅಭಿವ್ಯಕ್ತಿಯಿಂದ ಗಮನಸೆಳೆದಂತದ್ದು. ರೋಡ್ ಎನ್ನುವುದು ಇಲ್ಲಿ ಬದುಕಿನ ದಾರಿಯನ್ನು ಸಂಕೇತಿಸುತ್ತದೆ. ಬದುಕೆಂಬ ಕಾಡಿನಲ್ಲಿ ಈ ಜೀವನ ಉದ್ದಕ್ಕೆ ಸುದೀರ್ಘವಾಗಿರುವುದು. ನಾವು ಪ್ರಯಾಣಿಕರು, ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಾದವರು. ನಮ್ಮ ಮುಂದೆ ಹಲವು ದಾರಿಗಳು ಎದೆತೆರೆದು ಬಿದ್ದುಕೊಳ್ಳಬಹುದು. ಆದರೆ ಯಾವ ದಾರಿಯೆಡೆಗೆ ಹೆಜ್ಜೆ ಇಡುವೆವೋ ಆ ದಾರಿ ನಮ್ಮ ಮುಂದಿನ ಜೀವನವನ್ನು ನಿರ್ಧರಿಸುತ್ತವೆ. ಹಾಗಾಗಿ ಸರಿಯಾದ ದಾರಿ ನಮ್ಮನ್ನು ಸರಿಯಾದ ಮಾರ್ಗದೆಡೆಗೆ ನಡೆಸುತ್ತದೆ. ಅದೇ ತಪ್ಪು ಆಯ್ಕೆ ಮಾಡಿಕೊಂಡಲ್ಲಿ ಪುನಃ ಮರಳಿ ಬರಲಾಗದೇ ಆಯ್ದುಕೊಂಡ ಹಾದಿಯಲ್ಲೇ ನಮೆಯಬೇಕಾಗುತ್ತದೆ. ಎಲ್ಲರೂ ಆಯ್ದು ಕೊಳ್ಳುವ ಸಾಮಾನ್ಯ ಸವಾಲುಗಳಿಲ್ಲದ ನಿರುಮ್ಮಳವಾದ ಮಾರ್ಗ ನಮ್ಮ ನೆಮ್ಮದಿಗೆ, ಆರಾಮದಾಯಕ ಜೀವನಕ್ಕೆ ಧಕ್ಕೆ ತರದು. ಆದರೆ ವಿಶಿಷ್ಟವಾದದ್ದನ್ನು ಸಾಧಿಸುವ ಛಲ ಹೊತ್ತವನಿಗೆ ಈ ದಾರಿ ಎಂದೂ ಒಗ್ಗದು ಎಂಬುದನ್ನು ಈ ಕವಿತೆ ಬಣ್ಣಿಸಿದ ರೀತಿಯಿಂದ ಪ್ರಸಿದ್ಧವಾಗಿದೆ.

ರಾಬರ್ಟ ಫ್ರಾಸ್ಟನ ಅಮೇರಿಕನ್ ಕವಿ. ವರ್ಡವರ್ಥನಂತೆ ನಿಸರ್ಗದೊಂದಿಗೆ ಆತನ ಸಂವಾದ. ಆತನ ಕಾವ್ಯದ ಬೇರುಗಳು ಬೀಡು ಬಿಟ್ಟಿರುವುದು ನ್ಯೂ ಇಂಗ್ಲೆಂಡಿನ ಹಳ್ಳಿಗಾಡಿನ ಪ್ರದೇಶಗಳಲ್ಲಿ. ಕವಿಯ Farm Snow, Apple Picking, The Road not Taken, Tree, Woods, ಇತ್ಯಾದಿ ಕವಿತೆಗಳೆಲ್ಲಾ ನಿಸರ್ಗ ಮತ್ತು ಮನುಷ್ಯನ ನಡುವಿನ ಸಹಸಂಬಂಧಗಳ ತೆರೆದುತೋರುತ್ತವೆ. ಅಂತಹ ಇನ್ನೊಂದು ಗಮನಾರ್ಹ ಕವಿತೆ “Mending Wall” ಸರಳವಾಗಿದ್ದರೂ ತನ್ನ ವಿಷಯವಸ್ತುವಿನ ಕಾರಣ ಹೆಚ್ಚು ಜಾಗತಿಕ ಮನ್ನಣೆ ಮತ್ತು ಓದನ್ನು ಪಡೆದ ಕವಿತೆ.

ಗೋಡೆ ಪ್ರತ್ಯೇಕತೆಯನ್ನು ಬಿಂಬಿಸಲು ಬಳಸುವ ಸಾಧನವಾಗಿ, ಉಪಮೆ ರೂಪಕಗಳಾಗಿ ಕಾವ್ಯಗಳಲ್ಲಿ ಸಾಹಿತ್ಯದಲ್ಲಿ ಎಷ್ಟೆಲ್ಲ ಪ್ರಯೋಗಗಳನ್ನು ಕಂಡಿಲ್ಲ, ಗೋಡೆ ಸುರಕ್ಷತೆಯ ಸಂಕೇತವಾಗಿಯೋ, ಮಾನಸಿಕ ಅಂತರವನ್ನು ಬಿಂಬಿಸುವ ಸಂಕೇತವಾಗಿಯೋ, ಬಹು ಆಯಾಮದಲ್ಲಿ ಕಾವ್ಯಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಫ್ರಾಸ್ಟ ಬರೆದ ‘ಮೆಂಡಿಂಗ್ ವಾಲ್ ‘ ಕವಿತೆ ಈ ಎಲ್ಲ ಸಂಗತಿಗಳಿಂದ ಹೊರತಾದ ಇನ್ನೊಂದು ನೆಲೆಯಲ್ಲಿ ಗೋಡೆಯನ್ನು ಕಟ್ಟುತ್ತದೆ. ಸುರಕ್ಷತೆಯನ್ನೋ ಪ್ರತ್ಯೇಕತೆಯನ್ನೋ ಬಿಂಬಿಸುವ ಗೋಡೆ ಇಲ್ಲಿ ಸಂಬಂಧಗಳಲ್ಲಿ ಸುಮಧುರತೆಯನ್ನು ಕಾಯ್ದುಕೊಳ್ಳಲ ಎಷ್ಟು ಅಗತ್ಯ ಎಂಬುದನ್ನು ಧ್ವನಿಸುತ್ತದೆ. ಇದು ಕೇವಲ ಮನುಷ್ಯ ಮನುಷ್ಯರ ಸಂಬಂಧಗಳ ಬಗ್ಗೆ ಎಂದುಕೊಂಡರೆ ಅದಕ್ಕೂ ಮೀರಿದ ಅರ್ಥದಲ್ಲಿ ಮರುಕ್ಷಣ ತೋರುತ್ತದೆ. ಮನಸು ಮನಸ್ಸುಗಳ ನಡುವೆ, ದೇಶದೇಶಗಳ ನಡುವೆ, ಜಾತಿ ಜನಾಂಗಳ ನಡುವೆ, ಧರ್ಮ ಧರ್ಮಗಳ ನಡುವೆ ಈ ಗೋಡೆ ಎದ್ದಿರುವುದು ಅದನ್ನು ನಿವಾರಿಸಬೇಕಾದ ಅನಿವಾರ್ಯತೆಯನ್ನು, ಗೋಡೆ ಇಲ್ಲದೇ ಇರುವುದು ಎಷ್ಟು ಉತ್ತಮ ಎಂಬುದನ್ನು ಭಿನ್ನ ನೆಲೆಯಲ್ಲಿ ಕವಿ ಚರ್ಚಿಸುತ್ತಾರೆ. ಒಂದೇ ಸಂಗತಿಯಲ್ಲಿ ಎರಡು ನೋಟಗಳನ್ನು, ಎರಡು ವೈದೃಶ್ಯಗಳನ್ನು ಗುರುತಿಸುವುದು ಕಾವ್ಯದ ಗುಣ. ಸಾದೃಶ್ಯವು ಹೇಗೆ ಸುಂದರವೋ ವೈದೃಶ್ಯ ಸಂಪತ್ತು ಕಾವ್ಯಕ್ಕೆ ನೀಡುವ ಸೊಬಗು ವಿಶಿಷ್ಟ. ಯಾವುದೋ ಸಂಗತಿ ಮತ್ತು ವಸ್ತುವಿನ ಬಗ್ಗೆ ಒಬ್ಬರ ಅಭಿಮತದಂತೆ ಇನ್ನೊಬ್ಬನದಿರದು. “ಲೋಕೋ ಬಿನ್ನ ರುಚಿ:” ಎಂಬಂತೆ ಎಲ್ಲವೂ ವೈಯಕ್ತಿಕ ನೆಲೆಯಲ್ಲಿ ಭಿನ್ನವಾಗಿಯೇ ಗ್ರಹಿಸಲ್ಪಡುವುದು..

“Something there is that doesn’t love a wall
That sends the frozen ground swell under it,
And spills the upper boulders in the sun:
And makes gaps even two can pass abreast”

ಪ್ರತಿವರ್ಷವೂ ವಸಂತ ಕಾಲದಲ್ಲಿ ಪರಸ್ಪರರ ಹೊಲವನ್ನು ಪ್ರತ್ಯೇಕಿಸುವ ಗೋಡೆಯ ಬಿರುಕನ್ನು ಸರಿಪಡಿಸುವುದಕ್ಕಾಗಿ ಪರಸ್ಪರ ಭೇಟಿಯಾಗುವ ಅಕ್ಕಪಕ್ಕದ ಹೊಲಗಳಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳ ಅಭಿಫ್ರಾಯದ ಸುತ್ತ ಈ ಕವಿತೆ ಸುತ್ತುತ್ತದೆ. ಗೋಡೆ ಅವಶ್ಯಕವೋ ಅಥವಾ ಅನವಶ್ಯಕವೋ? ಎಂಬ ಪ್ರಶ್ನೆಯನ್ನು ಈ ಕವಿತೆ ಚರ್ಚಿಸುತ್ತದೆ. ಒಂದರ್ಥದಲ್ಲಿ ನೈಸರ್ಗಿಕ ಜೀವನವು ಗೋಡೆರಹಿತವಾದದ್ದು. ಹಾಗಾಗಿ ಅದು ಗೋಡೆಯನ್ನೆಂದೂ ಪ್ರೀತಿಸದು. “something there is that doesno’t love wall” ಎನ್ನುವ ನಿರೂಪಕ ಬದುಕನ್ನು ಸಹಜವಾಗಿ, ಕಟ್ಟಳೆಗಳ ನೆಲೆಯನ್ನು ಮೀರಿ ಸವಿಯಬಯಸುವವನು. ಸ್ವಾಯತ್ತ ಸಂಸ್ಕೃತಿಗೆ ಪರವಾಗಿ ಚಿಂತಿಸುವವನು. ಆದರೆ ಆದೇ ನೆರೆಯಾತ ಸಾಂಪ್ರದಾಯಿಕ ಮಿತಿ ಹೊತ್ತ ಸಂಸ್ಕೃತಿಯ ಪರಿಪಾಲಕ.

“There where it is we do not need the wall
He is all pine and I am apple orchard.
My apple trees will never get across
And eat the cones under his pines, i tell him
He only says, Good Fences make good neighbours”

ನಿರೂಪಕನಿಗೆ ಈ ಗೋಡೆಯ ಅಗತ್ಯವಾಗಲೀ ಅನಿವಾರ್ಯತೆಯಾಗಲೀ ಕಾಣುವುದಿಲ್ಲ. ಹಾಗಾಗಿ ಆತ ತನ್ನ ನೆರೆಯವನಿಗೆ ಗೋಡೆಯ ಬಿರುಕುಗಳು ಹಾಗೇ ಇರಲೆಂದು ಹೇಳುತ್ತಾನೆ. ಕಾರಣ ತನ್ನ ಹೊಲದಲ್ಲಿ ಬೆಳೆದಿರುವುದು ಆಪಲ್ ವೃಕ್ಷಗಳು ಮತ್ತು ನೆರೆಯವನ ಹೊಲದಲ್ಲಿ ಬೆಳೆದದ್ದು ಪೈನ್ ವೃಕ್ಷಗಳು. ಅವು ಆ ಬಿರುಕುಗಳಿಂದ ಆಚೆ ಇನ್ನೊಬ್ಬನ ಹೊಲಕ್ಕೆ ನುಗ್ಗಲಾರವು ಎನ್ನುತ್ತಾನೆ. ಆದರೆ ಆ ನೆರೆಯವನು ಈ ಮಾತನ್ನು ಒಪ್ಪುವುದಿಲ್ಲ. ಆತನ ಪ್ರಕಾರ ಈ ಬಿರುಕುಗಳು ಬೇಡದ ಸಂದೇಹಗಳಿಗೆ ಅವಕಾಶ ಮಾಡಿಕೊಡುತ್ತವೆ. ಸ್ನೇಹ ಸಂಬಂಧಗಳಲ್ಲಿ ಒಡಕು ಮೂಡಿಸುತ್ತವೆ ಎನ್ನುತ್ತಾನೆ. ಈಗಲೂ ನಿರೂಪಕ ಗೋಡೆಯನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ವಿರೋಧವಾಗಿಯೇ ನುಡಿಯುತ್ತಾನೆ. ಎರಡು ಕಡೆ ಹೊಲಗಳಲ್ಲಿ ದನಗಳಿಲ್ಲ. ಹಾಗಾಗಿ ಹೊಲ ಹಾಳಾಗುವ ಪ್ರಮೇಯವೇ ಇಲ್ಲ. ಹಾಳು ಮಾಡುವಂತಹ ಬೆಳೆ ಇಲ್ಲದಿದ್ದ ಮೇಲೆ ಅನಾವಶ್ಯಕವಾಗಿ ಸಂಶಯ ಪಟ್ಟು ಗೋಡೆಯನ್ನು ಪುನಃ ಪುನಃ ದುರಸ್ತಿ ಮಾಡುವುದು ಸಮಯ ಮತ್ತು ಶ್ರಮದ ವ್ಯರ್ಥ ಪ್ರಯತ್ನ ಎನ್ನುತ್ತಾನೆ. ನೆರೆಯಾತ ಕಲ್ಲುಗಳ ಮೇಲೆ ಕಲ್ಲು ತಂದು ಹಾಕುವ ಪರಿ ನಿರೂಪಕನಿಗೆ ಅನಾಗರಿಕ ವರ್ತನೆ ಎನಿಸುತ್ತದೆ. ಪೂರ್ವಜರು ಕಟ್ಟಿದ ಗೋಡೆಗಳು ಕಾಲಧರ್ಮಕ್ಕೆ ಸಹಜವಾಗಿ ಸವಕಳಿಯಾಗುತ್ತವೆ. ಅದು ನಿಸರ್ಗದ ನಿಯಮ. ಹಾಗಾಗಿ ಅದನ್ನು ಪುನಃ ದುರಸ್ತಿಗೊಳಿಸುವುದು ಅನಾಗರಿಕತೆ ಎನಿಸುತ್ತದೆ. ಆದರೆ ಆ ನೆರೆಯಾತ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ‘Good Fences make good neighbours’ಎಂದು ತನ್ನ ತಂದೆ ಹೇಳಿದ ಮಾತನ್ನೆ ಮತ್ತೆ ಉದ್ಘರಿಸುವ ಆತ ಸಂಪ್ರದಾಯದ ವಿರುದ್ಧ ನಡೆಯಲಾರ. ನೆರೆಯವನ ಪ್ರಕಾರ ಗೋಡೆ ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು ಅನಿವಾರ್ಯ. ವೈಯಕ್ತಿಕ ಹಿತಾಸಕ್ತಿಗಳಿಗೆ, ಖಾಸಗಿತನವನ್ನು ಅನುಭವಿಸಲು ಈ ಗೋಡೆಗಳು ಅಗತ್ಯ.

ಇಷ್ಟಾಗಿಯೂ ನಿರೂಪಕ ನೆರೆಯಾತನೊಂದಿಗೆ ಗೋಡೆ ದುರಸ್ತಿಯಲ್ಲಿ ವರ್ಷ ವರ್ಷವೂ ತೊಡಗಿಕೊಂಡಿದ್ದಾನೆ. ಇದರರ್ಥವೇನು? ಎಂಬುದು ಓದುಗನ ಕಾಡುವ ಪ್ರಶ್ನೆ. ಗೋಡೆ ಸರಿಪಡಿಸಲು ಅಥವಾ ಗೋಡೆಯನ್ನು ನೆಲಸಮಗೊಳಿಸಲು ಪರಸ್ಪರರಲ್ಲಿ ನಂಬುಗೆ ಮತ್ತು ಸಹಕಾರಗಳು ಬೇಕು. ಹಾಗಾಗಿ ನೆರೆಯಾತನಿಗೆ ನಿರೂಪಕ ಆ ಸತ್ಯ ಮನಗಾಣಿಸಲು ಜೊತೆಯಾಗಿರಬಹುದೇ? ಎಂಬ ಪ್ರಶ್ನೆ ಕಾಡುತ್ತದೆ.

ಸಹಜವಾಗಿ ಗೋಡೆ ನಮ್ಮ ವೈಯಕ್ತಿಕತೆಯನ್ನು ಎತ್ತಿ ಹಿಡಿದರೂ, ಅದೊಂದು ಮನುಷ್ಯ ಮನುಷ್ಯರ ನಡುವೆ ಒಂದು ಅಡ್ಡಿಯಾಗಿ ನಿಲ್ಲುತ್ತದೆ. ಬದುಕಿನ ಹತ್ತಾರು ಸಮಸ್ಯೆಗಳಿಗೆ ನಮ್ಮಲ್ಲಿರಬೇಕಾದ ಮಾನವೀಯ ಸ್ಪಂದನೆಗಳು ನಾಶವಾಗುತ್ತಿವೆ. ಪರಸ್ಪರ ಎಂಬ ಬದುಕು ಕೊನೆಗೊಳ್ಳುತ್ತಿದೆ. ಎಲ್ಲರೂ ತಮ್ಮ ತಮ್ಮ ಅಹಮ್ಮಿನ ಕೋಟೆಯಲ್ಲಿ ಬಂಧಿಗಳಾಗುತ್ತಿದ್ದಾರೆ. ಅದನ್ನೆ ಜಿ.ಎಸ್ ಎಸ್ ಹೇಳಿರುವುದಲ್ಲವೇ? “ಹತ್ತಿರಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ. ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ”ಇದನ್ನೆ ಫ್ರಾಸ್ಟ್ ಇನ್ನೊಂದು ಬಗೆಯಲಿ ಹೇಳುತ್ತಾನೆ.

“Before I built a wall I’d ask to know
What i was walling in or walling out”

ಈ ಸಾಲುಗಳಲ್ಲಿಯ ಮಾರ್ಮಿಕತೆ ಸಾಮಾನ್ಯವೆನಿಸುವುದಿಲ್ಲ. ಇಂದು ನಾವು ದ್ವೇಷ, ಅಸೂಯೆ, ಸ್ವಾರ್ಥಪರತೆ ಇಂತವುಗಳಿಂದ ಈ ಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದೇವೆ. ಸ್ನೇಹ, ಔದಾರ್ಯ, ಪ್ರೀತಿ ವಿಶ್ವಾಸಗಳನ್ನು ಕೆಡುವಿ ಹಾಕುತ್ತಿದ್ದೇವಲ್ಲವೇ?ಇದರ ಕಾರಣ ಮತ್ತೆ ಅನಾಗರಿಕತೆಯತ್ತ ಧಾಪುಗಾಲು ಹಾಕುತ್ತಿದ್ದೇವೆ.

ಸಹಜವಾಗಿ ಗೋಡೆ ತನ್ನ ಸಾಂಕೇತಿಕ ಮೌಲ್ಯ ಹೊಂದಿರುವುದು ಅದು ಪ್ರತ್ಯೇಕತೆಯ ಉಪಮೆಯಾಗಿ ಬಳಸಲ್ಪಡುವ ಮುಖಾಂತರ. ಮನುಷ್ಯ ಮನುಷ್ಯರ ನಡುವೆ ಒಂದು ಬ್ಯಾರಿಯರ್ ಆಗಿ ಗೋಡೆ ಈ ಕವಿತೆಯಲ್ಲೂ ಬಳಸಲ್ಪಟ್ಟಿದೆ. ಆದರೆ ಕವಿತೆ ಓದುತ್ತಾ ಅದು ತೆರೆದು ತೋರುವ ಲೋಕಾಯತ ಸಂಗತಿಗಳು ಕವಿತೆಯ ಒಟ್ಟು ಅಂದವನ್ನು ಧ್ವನಿಯನ್ನು ಗಟ್ಟಿಗೊಳಿಸಿವೆ. ಓದುಗನನ್ನು ಈ ಕವಿತೆ ಚಿಂತನೆಗೆ ಹಚ್ಚುತ್ತದೆ. ಈ ಕವಿತೆಯಲ್ಲಿ ಗೋಡೆ ನಿಜವಾಗಿ ಏನನ್ನು ಪ್ರತಿನಿಧಿಸುತ್ತಿದೆ? ವರ್ಗ ಸಂಕರವನ್ನೊ? ಜನಾಂಗೀಯ ತಡೆಗೋಡೆಯನ್ನೋ ? ದೇಶ ದೇಶಗಳ ನಡುವಿನ ಭಿನ್ನಮತವನ್ನೋ? ಧಾರ್ಮಿಕ ವಿಚಾರದ ಮೂಲಕ ಮೂಡುವ ಭಿನ್ನತೆಯನ್ನೋ? ಎಂದು ಪ್ರಶ್ನಿಸಿಕೊಂಡರೆ ಆ ಎಲ್ಲ ಸಂಗತಿಗಳಿಗೂ ಇದು ಉತ್ತರವಾಗಿ ನಿಲ್ಲುತ್ತದೆ. “Something there is that doesn’t love a wall’’ ಎಂದು ನಿರೂಪಕನ ಅಭಿಮತದೊಂದಿಗೆ ಪ್ರಾರಂಭವಾಗುವ ಕವಿತೆ “Good Fences make good neighbours” ಎಂಬ ನೇರ ವಿರುದ್ಧ ಅಭಿಪ್ರಾಯದೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದು ಫ್ರಾಸ್ಟನ ಕವಿತಾಶಕ್ತಿಯ ಅನುಪಮ ಸೊಗಸು.

- ನಾಗರೇಖಾ ಗಾಂವಕರ

MORE NEWS

ಪ್ರಸಾರಿತ ಪದೋತ್ತಸನ ಮತ್ತು ಅರ್ಧ ಚಂದ್ರಾಸನ

19-05-2024 ಬೆಂಗಳೂರು

"ಪ್ರಸಾರಿತ ಪದೋತ್ತಸನ ಆಸನ ಸದಾ ತಲೆನೋವಿನಿಂದ ಬಳಲುವವರಿಗೂ ಹಾಗೂ ಶೀರ್ಷಾಸನ ಮಾಡಲಾಗದವರು ಈ ಆಸನದ ಅಭ್ಯಾಸದಿಂದ ಶೀ...

ಕನ್ನಡಮುಂ ಸಕ್ಕದಮುಂ 

18-05-2024 ಬೆಂಗಳೂರು

"ಸಂಸ್ಕೃತವು ಪ್ರಾಕ್ರುತಗಳ ಸಂಸ್ಕರಿಸಿದ ರೂಪ, ಪ್ರಾಕ್ರುತವು ಸಂಸ್ಕೃತದ ಬಳಕೆಯ ರೂಪ ಎಂಬ ಎರಡೂ ವಿಚಾರಗಳಿರುವಂತೆ, ...

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...