ರುಕ್ಮಿಣಿದೇವಿ ಅವರ ಮೇಲಿನ ಆರೋಪಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಈ ಕೃತಿ ರಚಿಸಿದ್ದೇನೆ: ವಿ.ಆರ್. ದೇವಿಕಾ

Date: 04-04-2024

Location: ಬೆಂಗಳೂರು


ಬೆಂಗಳೂರು: "ವ್ಯಕ್ತಿ ಚಿತ್ರಣಗಳನ್ನು ಬರೆಯುವುದು ಬಹಳ ಕಷ್ಟ. ಯಾಕೆಂದರೆ ತುಂಬಾ ವಿವಾದಗಳು ಆಗುವಂತಹ ಸಂಭವವಿರುತ್ತದೆ" ಎಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದ ನಿರ್ದೇಶಕ, ಕಲಾವಿದ ಎಚ್.ಎನ್. ಸುರೇಶ್ ಅಭಿಪ್ರಾಯ ಪಟ್ಟರು.

2024 ಏಪ್ರಿಲ್ 04 ಗುರುವಾರದಂದು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವಲ್ಡ್ ಕಲ್ಚರ್ ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಿಯೋಗಿ ಬುಕ್ಸ್‌ ಮತ್ತು ಭೂಮಿಜ ಟ್ರಸ್ಟ್‌ ಸಹಯೋಗದಲ್ಲಿ ನಡೆದ ಶಿಕ್ಷಣ ತಜ್ಞೆ, ಸಾಂಸ್ಕೃತಿಕ ಕಾರ್ಯಕರ್ತೆ, ಲೇಖಕಿ ಡಾ. ವಿ. ಆರ್‌. ದೇವಿಕಾ ಅವರ 'ರುಕ್ಮಿಣಿ ದೇವಿ ಅರುಂಡೇಲ್' ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

"ಇದದ್ದು ಇದ್ದ ಹಾಗೆ ಬರೆಯುವುದು ಬಹಳ ಕಷ್ಟ. ಎಲ್ಲಾ ರೀತಿಯ ಚಿತ್ರಣಗಳನ್ನು, ಸಾಧನೆಗಳನ್ನು ವ್ಯಕ್ತಿ ಚಿತ್ರಣದಲ್ಲಿ ಕಟ್ಟಿಕೊಟ್ಟರು ಕೂಡ ಕೆಲವೊಂದು ಸಂದರ್ಭದಲ್ಲಿ ಏನು ಮಾಡಿಲ್ಲ ಅನ್ನುವಂತಹ ಸಂದರ್ಭವು ವ್ಯಕ್ತಿಚಿತ್ರಣದಲ್ಲಿ ರೂಪುಗೊಳ್ಳುತ್ತದೆ. ಆದರೆ ದೇವಿಕಾ ಅವರು ಎಲ್ಲವನ್ನೂ ಮೀರಿ ಈ ವ್ಯಕ್ತಿ ಚಿತ್ರಣವನ್ನು ಚಿತ್ರಿಸಿದ್ದಾರೆ. ವಿಚಾರಗಳನ್ನು ಇದ್ದ ಹಾಗೆಯೇ ಪೋಣಿಸಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದೆ" ಎಂದರು.

‘ರುಕ್ಮಿಣಿ ದೇವಿ ಅರುಂಡೆಲ್’ ಕುರಿತು ಮಾತನಾಡಿದ ಶಿಕ್ಷಣ ತಜ್ಞೆ, ಸಾಂಸ್ಕೃತಿಕ ಕಾರ್ಯಕರ್ತೆ, ಲೇಖಕಿ ಡಾ. ವಿ. ಆರ್‌. ದೇವಿಕಾ "ರುಕ್ಮಿಣಿ ದೇವಿ ಅವರು ಬಹಳ ಗಟ್ಟಿಯಾದ ಮಹಿಳೆ. ನಾನು ಈ ಕೃತಿಯ ಮುಖೇನ ಅವರ ಜೀವನದಲ್ಲಿ ನಡೆದ ಘಟನೆಗಳು ಹಾಗೂ ಒಬ್ಬ ನೃತ್ಯ ಕಲಾವಿದೆಯಾಗಿ ಆಕೆ ಬದುಕಿದ ರೀತಿಯನ್ನು ಕಟ್ಟಿಕೊಟ್ಟಿದ್ದೇನೆ. ಇದು ಪ್ರತಿಯೊಬ್ಬ ನೃತ್ಯಗಾರನಿಗೂ ಕುತೂಹಲ ಮೂಡಿಸುವಂತಹ ಕೃತಿಯಾಗಿದೆ. ಇನ್ನು ನೃತ್ಯದಲ್ಲಿ ಯಾವ ಪ್ರಕಾರಗಳಿವೆ ಹಾಗೂ ಶೃಂಗಾರದ ರಸಗಳ ಬಗ್ಗೆಯು ಕೂಡ ಇಲ್ಲಿ ತಿಳಿಸಲಾಗಿದೆ," ಎಂದು ವಿವರಿಸಿದರು.

"ಇನ್ನು ರುಕ್ಮಿಣಿ ದೇವಿ ಅವರ ಕುರಿತು ಬಂದಿರುವಂತಹ ಆರೋಪಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿಯೇ ನಾನು ಈ ಕತೆಯನ್ನು ಬರೆದಿದ್ದೇನೆ. ರುಕ್ಮಿಣಿ ದೇವಿ ತಮ್ಮ 29ನೇ ವಯಸ್ಸಿನಲ್ಲಿ ನಾಟ್ಯವನ್ನು ಕಲಿತು, ಕಲೆಯನ್ನು ಜೀವಿಸಿದರು. ಅವರು ಮಾಡಿದಂತಹ ಸಾಧನೆ ಬರೀ ನಾಟ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ನಿಸರ್ಗ, ಪ್ರಾಣಿ ಪಕ್ಷಿಗಳ ಕುರಿತಾದಂತಹ ಆಸಕ್ತಿಗಳನ್ನು ಕೂಡ ಹೊಂದಿದ್ದರು. ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ತಮ್ಮ ಸೇವೆಯನ್ನು ನೀಡಿದ್ದರು," ಎಂದು ತಿಳಿಸಿದರು.

ಕಲಾಕ್ಷಿತಿ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಸಂಸ್ಥಾಪಕ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಅವರ ಶಿಷ್ಯ ಎಮ್.ಆರ್. ಕೃಷ್ಣಮೂರ್ತಿ ಮಾತನಾಡಿ, "ರುಕ್ಮಿಣಿ ದೇವಿ ನನಗೆ ಅತ್ತೆ ಆಗಬೇಕು. ಅವರೊಂದಿಗೆ ನಾನು 34 ನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಅವರು ಬಹಳ ವಿಶೇಷವಾದ ಸ್ವಭಾವವುಳ್ಳವರು. ಅವರ ನಾಟ್ಯ ಹಾಗೂ ನಾಟ್ಯದ ಭಾವಗಳು ನಿಜಕ್ಕೂ ಅಪರೂಪವಾದುದು. ಇನ್ನು ನಮ್ಮ ಕಲೆ ಉಳಿಯಬೇಕಾದರೆ ಹಳೆಯ ಬೇರನ್ನು ಎಂದಿಗೂ ಬಿಡಬಾರದು. ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಆಗ ಮಾತ್ರ ಕಲೆ ಉಳಿಯಲು ಸಾಧ್ಯ," ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ, ಕವಿ ಪ್ರತಿಭಾ ನಂದಕುಮಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವು ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಗಳಲ್ಲಿ ನೇರಪ್ರಸಾರವಾಯಿತು.

 

MORE NEWS

ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ

17-05-2024 ಬೆಂಗಳೂರು

ಬೆಂಗಳೂರು: ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ ಎಂದು ಹರಿದಾಸ ಸಂಪದ ಸಂಸ್ಥ...

ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳ ಆಹ್ವಾನ

17-05-2024 ಬೆಂಗಳೂರು

2023ನೇ ಸಾಲಿನ ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳನ್ನು ಆಹ್ವಾನಿಸಲಾಗಿದೆ. &nb...

ಲೇಖಕಿಯರ ಸಂಘದಿಂದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

16-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ...