ಸತ್ಯಪ್ಪರ ಸಾವಿನ ಹೆಜ್ಜೆಯೇ ‘ದಡ’ : ಸತೀಶ ಕುಲಕರ್ಣಿ


''ಕಥಾ ಮಾರ್ಗಕ್ಕೆ ಯಾವುದೂ ಅನಿವಾರ್ಯವೆಂಬುದಿಲ್ಲ. ಸಮಯಾಂತರದ ನೆನಪುಗಳೋ, ವಾಸ್ತವದ ಉರಿಉಂಡೆಗಳೋ ಅಥವಾ ನಾಳಿನ ಭೀಕರತೆಗಳೋ ಯಾವುದಾದರೂ ಕಥೆಗಳಲ್ಲಿ ಬಂದು ಸೇರಬಹುದು. ಕೊನೆಗೂ ಕಥಾನಕ ಶೈಲಿಯೇ ಪ್ರಾಮುಖ್ಯವಾದುದು. ಒಂದು ಕಥೆಯೊಳಗೆ ಕಾದಂಬರಿಯೂ ಹುಟ್ಟಬಹುದು. ಕರ್ಣಮ್ರವರು ಗೃಹಿಣಿಯಾಗಿ ತಮ್ಮ ಬಿಡುವಿನ ಸಮಯ ಮತ್ತು ಮನಸ್ಸನ್ನು ಬರವಣಿಗೆಯಲ್ಲಿ ತೊಡಗಿಸಿ ಮುನ್ನಡೆಯುತ್ತಿರುವುದು ಅಭಿನಂದನಾರ್ಹ ಎನ್ನುತ್ತಾರೆ ಲೇಖಕ ಸತೀಶ ಕುಲಕರ್ಣಿ. ಅವರು ಕತೆಗಾರ್ತಿ ಮಧುರಾ ಕರ್ಣಮ್ ಅವರ `ದಡ' ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ....

ಕತೆಗಾರ್ತಿ ಮಧುರಾ ಕರ್ಣಮ್ರದು ನನಗೆ ಹೊಸ ಪರಿಚಯ. ಮಯೂರ ಮಾಸ ಪತ್ರಿಕೆಯಲ್ಲಿ ಇವರ ಸಾಲು ಸಾಲು ಕಥೆಗಳನ್ನು ಓದಿದ್ದೆ. ನಾನು ಬೆಳೆದ ಪರಿಸರ, ಬಾಲ್ಯದಲ್ಲಿ ಕಂಡು ಕೇಳಿದ ಸಂಗತಿಗಳು ಇವರ ಕಥೆಗಳಲ್ಲಿ ಸುಳಿಯುತ್ತಿದ್ದವು. ಹೆಸರಿಗೆ ಮಾತ್ರ ಜಮೀನ್ದಾರಿಕೆ, ಅದು, ಕುಸಿದು ಮಧ್ಯಮ ವರ್ಗಕ್ಕೆ ಕ್ರಮೇಣ ಬದಲಾಗುವ ಸಂಕಟಗಳ ಕಾಲದ ಬ್ರಾಹ್ಮಣ ಮನೆತನದ ಸ್ಥಿತ್ಯಂತರಗಳನ್ನು ಇವರ ಕಥೆಗಳಲ್ಲಿ ಕಂಡಿದ್ದೆ. ಮುಳುಗಿ ಹೋಗಿದ್ದ ಬಾಲ್ಯದ ನೂರಾರು ಸ್ಮೃತಿ ಚಿತ್ರಗಳು ಮೇಲೆ ತೇಲಿ ಬಂದಂತೆ ಭಾಸವಾಗುತ್ತಿತ್ತು. ವಿಶೇಷವಾಗಿ ಧಾರವಾಡ - ಬೆಳಾಗಾವಿ ಭಾಗದ ಮಧ್ಯಮ ವರ್ಗದ ಮನೆ ಮಾತು ಜೀವನ ಶೈಲಿ ಗಟ್ಟಿಯಾಗಿ ಇವರ ಕಥೆಗಳಲ್ಲಿ ಧ್ವನಿಸಿದ್ದು ನನ್ನನ್ನು ಸೆಳೆದಿದ್ದವು.

ಇಂತಹ ಆಪ್ತವಾದ ಕರ್ಣಮ್‌ ಕಥಾ ಸಂಕಲನಕ್ಕೆ ಮುಂದೊಂದು ದಿನ ಮುನ್ನುಡಿ ಬರೆಯುವ ಕಾಲ ಕೂಡಿ ಬರಬಹುದೆಂದು ಕಲ್ಪನೆಯೇ ಇರಲಿಲ್ಲ. ಇದಕ್ಕೆ ಕವಯತ್ರಿ ಶ್ರೀಮತಿ ವಿಭಾ ಪುರೋಹಿತರು ಕಾರಣ. ಮಧುರಾ ಕರ್ಣಮ್‌ ಸುಪ್ತಸಾಗರ ಮತ್ತು ದೀಪದ ಕೆಳಗಿನ ಕತ್ತಲು – ಎಂಬೆರಡು ಕಥಾ ಸಂಕಲನಗಳನ್ನು ತರಿಸಿಕೊಂಡು ಓದಿದ್ದೆ. 'ದಡ' ಇದು ಲೇಖಕಿಯ ಹೊಸ ಕಥಾ ಸಂಕಲನ. ಇಲ್ಲಿ ಹತ್ತು ವಿಭಿನ್ನ ಕವಿತೆಗಳಿವೆ. ಎಲ್ಲದರಲ್ಲೂ ಹೆಣ್ಣೆ ಪ್ರಾಮುಖ್ಯ. ಸತ್ಯಪ್ಪನ ಸಾವಿರ ಹೆಜ್ಜೆ ಮತ್ತು ಸ್ವಾತಿಮುತ್ತು ಸ್ವಲ್ಪ ಭಿನ್ನವಾದ ಕಥೆಗಳು.

ಅಕ್ಷರ, ಉದ್ಯೋಗ, ಸಾಮಾಜಿಕ ಅರಿವು ಬದಲಾವಣೆ, ಹೊಸ ಕಾಲದ ಸ್ತ್ರೀ ವಾದ ಅದರಾಚೆ ಮಿಡಿವ ಹತಾಶೆ, ನೋವು ಅನುಭವಿಸುವ ಪಾತ್ರಗಳು 'ದಡ' ಕಥಾ ಸಂಕಲನದಲ್ಲಿವೆ. ಒಂದು ರೀತಿಯಲ್ಲಿ ಹೆಣ್ಣು ಸಂಕಟದ ಕಥಾಕುಂಡವಿದೆ. ಬದಲಾದ ಜಾಗತಿಕ ಸ್ಥಿತ್ಯಂತರಗಳಿಗೆ ಚಾಚಿಕೊಳ್ಳುವ, ಐಟಿ.ಬಿಟಿ. ಕೊರೋನಾ ಸಂಕಷ್ಟಗಳಲ್ಲಿ ಮಧ್ಯಮ ವರ್ಗ ಅನುಭವಿಸುವ ಯಾತನೆಗಳು ಕೂಡಾ ಇಲ್ಲಿನ ಕಥೆಗಳಲ್ಲಿ ಮುಖ ಪಡೆದಿವೆ. ಒಟ್ಟು ಇವುಗಳಂತರಾಳದಲ್ಲಿ ಒಂದೇನೋ ಹುಡುಕಾಟವಿದೆ. ಹಳತನ್ನು ಕಳಚಿಕೊಳ್ಳದೆ, ಹೊಸದನ್ನು ಅಪ್ಪಿಕೊಳ್ಳಲಾಗದ 'ಥರ್ಡ್ ಅಂಪಾಯರ್' ಗೊಂದಲದ ಪರಸ್ಥಿತಿಯವು. 'ದಡ' ಸಂಕಲನ ಸೇರಿ ಮಧುರಾರ ಮೂರು ಕಥಾಸಂಕಲನಗಳನ್ನು ಓದಿದ ನಾನು, ಲೇಖಕಿ ಒಂದಿಷ್ಟು ದೂರ ಸಾಗಿದ್ದಾರೆ ಎಂದು ಅನ್ನಿಸದೆ ಇರಲಿಲ್ಲ. ವಸ್ತು ವಿವೇಚನೆ, ಶೈಲಿ ವಿಧಾನದಲ್ಲಿ ಬದಲಾವಣೆಗಳನ್ನು ಕಾಣುವ ಫ್ಲ್ಯಾಶ್ ಬ್ಯಾಕ್ ತಂತ್ರವೇ ಬಹುತೇಕ ಕಥೆಗಳಲ್ಲಿವೆ.

ಈ ಮೊದಲು ಮಧುರಾ ಕರ್ಣಮ್ ಹತ್ತು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಾಲ್ಯದ ಎಲ್ಲಾ ರೋಚಕ ನೆನಪುಗಳು, ಮನೆ ಮಾತಿನ ನಿತ್ಯ ವಹಿವಾಟು, ಹೇಳಿಕೊಳ್ಳಲಾಗದ ಆ ಕಾಲದ ಹೆಣ್ಣಿನ ಯಾತನೆಗಳು ಪ್ರಾಮುಖ್ಯತೆ ಪಡೆದುದವು. ನಮ್ಮ ಪೂರ್ವಜರ ಜೀವನ ಶೈಲಿ ಮತ್ತು ಮುಗ್ಧ ನಂಬಿಕೆಗಳು ಕ್ರಮೇಣ ಕಾಲು ಮುರಿದು ಹೊಸ ಹೊಂದಿಕೊಳ್ಳಲಾಗದ ಮನಃಸ್ಥಿತಿಗಳೇ ದಾಖಲಾದಂತಹವು. ಕೊನೆಗೂ ನಮ್ಮ ನೆನಪುಗಳು ದಾಖಲಾಗುವುದು ಸಾಹಿತ್ಯದಲ್ಲಿ ಮಾತ್ರ ಲೇಖಕರಿಗೆ ಬಾಲ್ಯವೇ ಬಂಡವಾಳ.

ಉಕ್ಕು, ದಡ, ಪರಿಧಿ, ಗುಳೆ ಮುಂತಾದ ಚಿಕ್ಕಚಿಕ್ಕ ಆಕರ್ಷಕ ಶೀರ್ಷಿಕೆಗಳ ಕುತೂಹಲ ಹುಟ್ಟಿಸುತ್ತವೆ. ಇವನ್ನು ಓದುತ್ತ ಹೋದಂತೆ ಪ್ರತಿ ಕಥೆಯಲ್ಲಿ ಮಾರ್ದನಿಸುತ್ತವೆ. 'ಉಕ್ಕು' ಎರಡು ತಲೆಮಾರುಗಳ ನಡುವಿನ ಸಂಘರ್ಷದ ಕಥೆ, ಕೊನೆಗೆ ಹೊಸ ಪೀಳಿಗೆಯ ಮಗಳು ಏನೂ ಆಗಿಲ್ಲ ಎಂಬಂತೆ ಗಂಡನೊಡನೆ ಹೊಂದಿಕೊಳ್ಳುವುದು ಕಥಾ ನಾಯಕಿ ಸ್ವಾತಿ, ತಾಯಿ ಗಾಯತ್ರಿಯ ಪಡಿಯಚ್ಚಾಗುತ್ತಾಳೆ. ಜೀನ್ಸ್ ತೊಟ್ಟರೂ ಮಗಳ ಮನೋಂತರಂಗದಲ್ಲಿ ಹೆಚ್ಚೇನೂ ಬದಲಾವಣೆಗಳು ಕಾಣುವುದಿಲ್ಲ. ಕಥೆಯ ಕೊನೆಯಲ್ಲಿ 'ಸಮುದ್ರದಲ್ಲಿ ದೊಡ್ಡ ದೊಡ್ಡ ತೆರೆಗಳು ಬರುತ್ತಿದ್ದಂತೆ ಜನ ಬಾಗಿ ಅವುಗಳಲ್ಲಿ ಮುಳುಗೇಳುತ್ತಿದ್ದರು ಎಂಬ ರೂಪಕದ ಮೂಲಕ ಕಥೆಗಾರ್ತಿ ಸೂಚ್ಯ ಸಂದೇಶ ನೀಡುತ್ತಾರೆ.

'ಬಿಡುಗಡೆ' ಕಥೆಯ- ವೇಣು ಕೀರ್ತನಾ, 'ದಡ' – ಕಥೆಯ ರುಕ್ಕು ಮಂಚಿ ಎರಡು ಜೀವ ಚಿತ್ರಗಳು, ನಕ್ಷತ್ರಗಳು ನಕ್ಕಾಗ ದಲ್ಲಿನ, ವಾಸು ಭಾವ ಹಾಗೂ ಮೌಶಿ ಇವರೆಲ್ಲ ಏಕಚ್ಚಿನಲ್ಲಿ ಬರುವ ಪಾತ್ರಗಳು. ಹಳೆಯ ನೆನಪನ ಒಪ್ಪಲಾಗದ, ಹೊಸದನ್ನು ಸೂಕ್ಷ್ಮವಾಗಿ ಪರೀಕ್ಷಿಸುವ ಕಥೆಗಾರ್ತಿಯ ಒಟ್ಟು ಭೂಮಿಕೆ ಹಳ್ಳಿ ನಗರಗಳಲ್ಲಿ ವಿಸ್ತಾರಗೊಂಡಂತವು. ಕಲ್ಲೋಳಿ, ಉಗಾ ಕೊಲ್ಲಾಪೂರ, ಬೆಂಗಳೂರು ಇಂತಹ ಹಳ್ಳಿ ನಗರದ ಜೀವನ ಶೈಲಿ ಹಳವಂಡಿಸುವ ಕಥೆಗಾರ್ತಿ ಒಟ್ಟಾರೆ ತಾತ್ಪರ್ಯಕ್ಕೆ ಬಾರದೆ, ಓದುಗರ ಮೇಲೆ ನಿರ್ಣಯ ಬಿಡುತ್ತಾರೆ. ಕಾಲಚಕ್ರದ ಪಲ್ಲಟದಲ್ಲಿ ಸೃಷ್ಟಿಯಾದ ಪಾತ್ರಗಳು ದಡದಾಚೆ ನಿಂತು ನೋಡಿದ್ದು, ಮಧುರಾ ಕರ್ಣಮ್‌ರ ಸೂಕ್ಷ್ಮ ದೃಷ್ಟಿಕೋನ.

ಸತ್ಯಪ್ಪನ ಸಾವಿರ ಹೆಜ್ಜೆಗಳು, ಗುಳೆ, ದಡ ಹಾಗೂ ಸ್ವಾತಿ ಮುತ್ತು ಕಥೆಗಳಲ್ಲಿ ಲೇಖಕಿ ಹೊಸ ವಸ್ತುಗಳನ್ನು ಹುಡುಕುತ್ತಿದ್ದಾರೆ. ತಮ್ಮ ಕಥೆಗಳ ಒಳಹರವು ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆಂದೆನಿಸುವುದು. ಸತ್ಯಪ್ಪನ ಸಾವಿರ ಹೆಜ್ಜೆ, ಭಾರತ ಅಮೃತ ಮಹೋತ್ಸವದ ವರ್ಷಾಚರಣೆ ಸಂದರ್ಭದಲ್ಲಿ ವಿಶೇಷ ಅರ್ಥ ಪ್ರಾಪ್ತಿ ಪಡೆಯುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನಾಮಿಕ ಅಮರ ಸೇನಾನಿಗಳು ದೇಶದುದ್ದಗಲಕ್ಕೂ ಈಗಲೂ ದಂತ ಕಥೆಗಳಾಗಿದ್ದಾರೆ. ತಾವು ನಂಬಿದ ಆದರ್ಶ, ಕಂಡ ಕನಸುಗಳು ಎಷ್ಟೇ ಅಗ್ನಿಪಥ ಸೃಷ್ಟಿಸಿದರೂ ಅವರೆಲ್ಲರ ನಂಬುಗೆ ಕೊನೆಯುಸಿರಿರುವರೆಗೂ ಅಚಲವಾಗಿತ್ತು. ಗಾಂಧಿ ಎಂಬ ಕಾಲಪುರುಷನ ಸಂದರ್ಭದಲ್ಲಿ ಅರಳಿದ ಮುಗ್ಧ ಜೀವಿಗಳ ಬಲಿದಾನವೇ ಇಂದು ನಮ್ಮ ಧ್ವಜ ಕಟ್ಟೆಯೇನೊ? ಪಕ್ಕಾ ವ್ಯವಹಾರಸ್ಥ ಪುಢಾರಿಗಳಲ್ಲದ ಈ ಸ್ವಾತಂತ್ರ್ಯ ಪ್ರೇಮಿಗಳು ಈಗಿಲ್ಲ. ಅವರ ಆದರ್ಶಗಳು ಮಸುಕಾಗಿವೆ.

ಇದಕ್ಕೆ ಸಾಕ್ಷಿಯಾದ ಸತ್ಯಪ್ಪನ ಸಾವಿರ ಹೆಜ್ಜೆಗಳು ಕಥೆ ಓದಿದಾಗ ಮೈ ಜುಮ್ಮೆನಿಸುವುದು. ಎಲ್ಲಿಯೋ ನಮ್ಮ ಮನೆತನದ ಹಿರಿಯನೋರ್ವನ ಹುಚ್ಚಾಟ ಇರಬಹುದೇ ಎಂದೆನಿಸದೆ ಇರಲಾರದು. ಇದನ್ನೆ ಕಥೆಗಾರ್ತಿ 'ಕಾಲಲ್ಲಿ ನಾಯಿಗೆರೆಗಳಿರುವಂತೆ, ಸತ್ಯ ಸುತ್ತತ್ತಲೇ ಇದ್ದ. ದಾರಿಗಳು- ದರ್ಶನ ಬೇರೆಯಾದವು. ಮೌಲ್ಯಗಳು ಬದಲಾದವು. ಜಗತ್ತುಗಳೇ ಭಿನ್ನವಾಗಿಬಿಟ್ಟವು' ಎಂದು ತುಂಬ ವಿಷಾದಿಂದ ಹೇಳುತ್ತಾರೆ. “ಇನ್ನೂ ಸಾವಿರ ಸಾವಿರ ಹೆಜ್ಜೆಗಳನ್ನು ಹಾಕಬಹುದು ಗಾಂಧೀಜಿಯ ಹೆಜ್ಜೆ ಗುರುತಗಳ ಮೇಲೆ. ಆ ಹುಡುಗಿಯನ್ನು ದಡ ಸೇರಿಸಬಹುದು. ಮುಂದೆ ಅವಳು ಲಕ್ಷ್ಮೋಪಲಕ್ಷ ಹೆಜ್ಜೆಗಳನ್ನಿಡಬಹುದು'. ಕಥಾ ನಾಯಕ ಸತ್ಯಪ್ಪ ಊರು ಬಿಟ್ಟು ಹೊರಟಾಗ ಹೇಳುವ ಮಾತುಗಳು ವಾಸ್ತವ ಕನಸುಗಾರಿಕೆಗಳ ನಡುವೆ ಸಿಕ್ಕಿರುವ ಇಂದಿನ ಪೀಳಿಗೆಗೆ ಯಾರ ಪರ ನಿಲ್ಲಬೇಕೆಂಬ ಸವಾಲು ಹಾಕುವ ರೀತಿಯದು.

ಇದಕ್ಕೆ ತದ್ವಿರುದ್ಧವಾಗಿ ಅಂತರ್ಯದಲ್ಲಿ ಮಾನವೀಯತೆ ತುಂಬಿಕೊಂಡಿದ್ದರೂ ಮೇಲ್ನೋಟಕ್ಕೆ ಹುಸಿ ಜಮೀನ್ದಾರಿ ಹೊದಿಕೆ ಹೊತ್ತ ಸ್ವಾತಿ ಮುತ್ತು ಇನ್ನೊಂದು ಗಟ್ಟಿ ಕಥೆ, ನಿನ್ನ ಮದ್ವಿ ಮಾಡುವ ಶಕ್ತಿ ನನಗಿಲ್ಲ. ನಾ ಖಾಲಿಯಾಗಿಬಿಟ್ಟೇನಿ. ಆದ್ರೆ ಶ್ರೀಮಂತಿಕಿದು ಪೊಳ್ಳು ಹೊದಿಸಿ, ಆದರ ಮ್ಯಾಲೆ, ನಾ ಜೀವಂತ ಇರೋತನಕ ಅದನ್ನ ಇಟಗೊಂಡು ಸಾಯೋವಾ, ನಿನ್ನ ಬಂಗಾರ ಸುದ್ದಾ ಏನೂ ಉಳಿದಿಲ್ಲಾ. ಎಲ್ಲ ಖರ್ಚಾಗೇದ, ನೀ ಹುಬ್ಬಳಾಗ ನಿನ್ನ ಹಿಂದೆ ಬಿದ್ದಾನಲ್ಲ. ಅವನ ಕಡೆ ಹೋಗಿಬಿಡು' ಕಥೆಯ ಅಪ್ಪ ಹೇಳುವ ಈ ಮಾತು ಕಾಲಕ್ಕೆ ತತ್ತರಿಸಿ ಸತ್ಯವನ್ನು ಒಳ ಹೊರಗೂ ಎದುರಿಸಲಾಗದ ಅಪರೂಪದ ಕಥೆ.

ಕಥಾ ಮಾರ್ಗಕ್ಕೆ ಯಾವುದೂ ಅನಿವಾರ್ಯವೆಂಬುದಿಲ್ಲ. ಸಮಯಾಂತರದ ನೆನಪುಗಳೋ, ವಾಸ್ತವದ ಉರಿಉಂಡೆಗಳೋ ಅಥವಾ ನಾಳಿನ ಭೀಕರತೆಗಳೋ ಯಾವುದಾದರೂ ಕಥೆಗಳಲ್ಲಿ ಬಂದು ಸೇರಬಹುದು. ಕೊನೆಗೂ ಕಥಾನಕ ಶೈಲಿಯೇ ಪ್ರಾಮುಖ್ಯವಾದುದು. ಒಂದು ಕಥೆಯೊಳಗೆ ಕಾದಂಬರಿಯೂ ಹುಟ್ಟಬಹುದು. ಕಾದಂಬರಿಯೊಂದರೊಳಗೆ ನೂರಾರು ಮರಿ ಕಥೆಗಳೂ ಇರಬಹುದು. ಸಮಯ ಮಿತಿಯಲ್ಲಿಯೇ ಸಹಜ ಕುತೂಹಲ ಹುಟ್ಟು ಹಾಕುವ ಕಥಾ ಮಾರ್ಗ ಸದಾ ಹೊಚ್ಚ ಹೊಸದು. ಇಂತಹ ಮಾರ್ಗದಲ್ಲಿ ಸಾಗಿದ ಕರ್ಣಮ್ ರವರು ಗೃಹಿಣಿಯಾಗಿ ತಮ್ಮ ಬಿಡುವಿನ ಸಮಯ ಮತ್ತು ಮನಸ್ಸನ್ನು ಬರವಣಿಗೆಯಲ್ಲಿ ತೊಡಗಿಸಿ ಮುನ್ನಡೆಯುತ್ತಿರುವುದು ಅಭಿನಂದನಾರ್ಹ.

-ಸತೀಶ ಕುಲಕರ್ಣಿ

ಸತೀಶ ಕುಲಕರ್ಣಿ ಅವರ ಲೇಖಕ ಪರಿಚಯ ನಿಮ್ಮ ಓದಿಗಾಗಿ...

MORE FEATURES

ಯುವಜನರು ಕೊಂಡು ಓದಲೇಬೇಕಾದ ಪುಸ್ತಕ ‘ನಡು ಬಗ್ಗಿಸದ ಎದೆಯ ದನಿ’

22-02-2024 ಬೆಂಗಳೂರು

'ಸತ್ಯವನ್ನು ಸಾರ್ವಜನಿಕವಾಗಿ ಹೇಳಲು ವಿಪರೀತ ಭಯಪಡಬೇಕಾದ ಪರಿಸ್ಥಿತಿಯಿದೆ. ಮಹೇಂದ್ರ ಕುಮಾರ್ ಇದನ್ನೆಲ್ಲಾ ಖಡಕ್ಕಾಗ...

ವಡ್ಡರ್ಸೆ ರಘುರಾಮಶೆಟ್ಟರ ಬಗ್ಗೆ ಇನ್ನಿಲ್ಲದ ಕುತೂಹಲ: ಆದಿತ್ಯ ಭಾರದ್ವಾಜ್

22-02-2024 ಬೆಂಗಳೂರು

ದಿನೇಶ್ ಅಮಿನ್ ಮಟ್ಟು ಅವರು ಸಂಪಾದಕರಾಗಿ ರೂಪಿಸಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಬರಹಗಳ ಸಂಕಲನ 'ಬೇರೆಯೇ ಮಾತು...

ಕಥೆಗಳು ಹುಟ್ಟಿ, ಬೆಳೆದದ್ದು…

22-02-2024 ಬೆಂಗಳೂರು

'ನನ್ನ ಮೊದಲ ಕಥಾಸಂಕಲನ 'ಕಳೆದುಕೊಂಡವಳು ಹಾಗು ಇತರ ಕಥೆಗಳು' 1996ರಲ್ಲಿ ಪ್ರಕಟ ಆಯ್ತು. ಅದನ್ನು ಪಿ. ಲಂಕ...