ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

Date: 10-08-2022

Location: ಬೆಂಗಳೂರು


“ಪ್ರೇಮ ವಿಮುಖತೆಗೆ ಒಳಗಾದ ಎರಡು ಕವಿ ಹೃದಯಗಳ ಒಳ ತುಡಿತ, ನೋವು, ನಿರಾಶೆ, ಪ್ರಕಲ್ಪಗಳು ವಿರಹಿ ಹೃದಯಗಳ ತಟ್ಟುತ್ತವೆ. ಮುಟ್ಟುತ್ತವೆ. ಮಾರ್ದನಿಗೈಯುತ್ತವೆ” ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಇಬ್ಬರು ಪಾಶ್ಚಾತ್ಯ ಕವಯಿತ್ರಿಯರ ಬಗ್ಗೆ ಬರೆದಿದ್ದಾರೆ.

“The course of true love never did run smooth”- Shakespeare

ಪ್ರೀತಿ ವಿಚಿತ್ರವಾದದ್ದು, ಅನುಪಮವಾದದ್ದು ಕೂಡಾ. ಭಾವನಾತ್ಮಕ ಜಗತ್ತಿನ ಮೂಲ ಅಡಿಪಾಯವದು. ಪ್ರೀತಿ ಅಮೂರ್ತತೆಯಲ್ಲಿ ಸಾರ್ಥಕ್ಯ ಪಡೆಯಲಾರದು ಎನ್ನುತ್ತದೆ ಲೌಕಿಕದ ಹಂಗಿನ ಜಗತ್ತು. ಆದರೆ ಪ್ರೀತಿಯ ಶ್ರೇಷ್ಠತೆ ವ್ಯಕ್ತವಾಗುವುದು ಅಲೌಕಿಕತೆಯಲ್ಲಿ. ಯಾವ ಪ್ರೀತಿ ದೇಹಾಕಾಂಕ್ಷೆ ಮೀರಿದ ಭಾವಗಳಿಂದ ಸಂಪನ್ನವಾಗಿರುವುದೋ, ನಿರಪೇಕ್ಷಣೀಯವಾದ ಭಾವಗಳಿಂದ ಹೊಮ್ಮುವುದೋ ಅದು ನಿಸ್ಸಂದೇಹವಾಗಿ ನೈಜ ಪ್ರೀತಿ. ಬರಿಯ ದೇಹ ಬಯಸುವ ಪ್ರೀತಿಯ ಉತ್ಕಟತೆಯ ಭಾವ ಸಾವಿಗೆ ಉಪಮೆ, ಆತ್ಮದ ಒಳಗನ್ನು ಪ್ರವೇಶಿಸುವ ಪ್ರೀತಿ ಬದುಕಿಗೆ ಸಾಕ್ಷಿ. ಹಾಗಾಗೇ ಪ್ರೀತಿಯ ಅಗಲುವಿಕೆಯೂ ಬದುಕಿನ ಬಗ್ಗೆ ಅದಮ್ಯವಾದ ಕನಸನ್ನು ಹಾಗೇ ಉಳಿಸಿಬಿಡುತ್ತದೆ. ಒಳಗೊಳಗೆ ಬೇಯುತ್ತಾ ಬಲಿಯುತ್ತದೆ ಕೂಡಾ. ಆದರೆ ನೈಜ ಪ್ರೀತಿಯ ಹಾದಿ ಮಾತ್ರ ಶೇಕ್ಸಪಿಯರ್ ಅಂದಂತೆ ಅದೆಂದೂ ಹೂವಿನ ಹಾಸಿನ ಮೇಲಿನ ನಡಿಗೆಯಲ್ಲ.

ಪ್ರೀತಿಯು ಹೊರ ಳಿ ಮುಖ ತಿರುವಿಕೊಂಡರೆ, ಅದರ ನೆರಳು ಬೀರುವ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಅಂತಹ ಪ್ರೀತಿಗಾಗಿ, ಆ ಪ್ರೀತಿ ಕೊಟ್ಟವನ ನಿರಾಕರಣೆಗಾಗಿ ತಮ್ಮ ಬದುಕನ್ನೆ ಧಿಕ್ಕರಿಸಿದ, ಬಲಿಕೊಟ್ಟ ಎರಡು ಖ್ಯಾತ ಪಾಶ್ಚಾತ್ಯ ಕವಯತ್ರಿಯರನ್ನು ನೆನಪಿಸಿಕೊಳ್ಳುತ್ತೇನೆ.

ಸಿಲ್ವಿಯಾ ಪ್ಲಾತ್, ಅಮೇರಿಕನ್ ಕವಯತ್ರಿ. ತನ್ನ ಮೂವತ್ತು ವರ್ಷಗಳ ಚಿಕ್ಕ ಅವಧಿಯಲ್ಲಿ ಅನುಪಮ ಕಾವ್ಯವಾಗಿ ಬೆಳಗಿದವಳು. ಪತಿ ಟೆಡ್‍ಹ್ಯೂಸ್‍ನಿಂದ ತಿರಸ್ಕೃತಳಾದ ಆಕೆ ಅತಿಯಾದ ಡಿಪ್ರೆಶನ್ ಕಾಯಿಲೆಯಿಂದ ನರಳಿ, ಆತ್ಮಹತ್ಯೆಯಂತಹ ಘೋರ ತೀರ್ಮಾನ ಕೈಗೊಂಡು, ತನ್ನಿಬ್ಬರು ಮಕ್ಕಳನ್ನು ಮಲಗಿಸಿ, ಅಡುಗೆ ಕೋಣೆಗೆ ಹೋಗಿ ಗ್ಯಾಸ್ ಲೀಕ್ ಮಾಡಿ, ವಿಷಾನಿಲ ಸೇವಿಸಿ 30ನೇ ವಯಸ್ಸಿಗೆ ಸಾವನ್ನಪ್ಪುತ್ತಾಳೆ. ಬದುಕಿನ ಅತ್ಯಲ್ಪ ಅವಧಿಯಲ್ಲೇ ಜಾಗತಿಕ ಸಾಹಿತ್ಯದಲ್ಲಿ ಮೇರು ಕವಿಯಾಗಿ ಬೆಳಗುತ್ತಾಳೆ.

“I shut my eyes and all the world drops dead
I lift my lids and all is born again.

[I think I made you up inside my head]” ಇದು ಪ್ಲಾತ್ ಬರೆದ “Mad Girl’s Love Song” ಕವಿತೆಯ ಪ್ರಾರಂಭಿಕ ಸಾಲುಗಳು. ತನ್ನ ಪ್ರೀತಿ ನಿಜವೇ ಆಗಿತ್ತೇ ಎಂಬ ಭ್ರಮೆ ಆಕೆಯದು. ಯಾಕೆಂದರೆ ವಾಸ್ತವವೇ ಬೇರೆಯಾದ ಕಾರಣ ತನ್ನ ಪ್ರೀತಿಯನ್ನೆ ಆಕೆ ಸಂದೇಹಿಸುತ್ತಾಳೆ. ಅದು ಕೇವಲ ಊಹೆ ಮಾತ್ರ ಆಗಿದ್ದಿರಬಹುದೇ ಎಂಬ ಸಂದಿಗ್ಧತೆ ಆಕೆಯದು. ಆಕೆ ನುಚ್ಚುನೂರಾದ ಹೃದಯದಿಂದ ಹಾಡುತ್ತಾಳೆ. ಪ್ರೇಮ ನಿರಾಕರಣೆ ಮತ್ತು ಏಕಾಂಗಿತನ ಆಕೆಯನ್ನು ಇನ್ನಿಲ್ಲದಂತೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಭ್ರಮೆ ಮತ್ತು ವಾಸ್ತವಗಳ ಮಧ್ಯೆ ಆಕೆ ಜರ್ಜರಿತಳಾಗಿದ್ದಾಳೆ. ಹಾಗಾಗಿ “I think I made you up inside my head” ಸಾಲು ಪುನರಾವರ್ತಿತವಾಗುವುದನ್ನು ಕಾಣಬಹುದು.

“I fancied you would return the way you said
But I grow old and I forget your name
[I think I made you up inside my head]”

ಆಕೆಯ ಪ್ರೀತಿಯ ನಿರೀಕ್ಷೆಯನ್ನು ಆತ ಉಳಿಸಿಕೊಳ್ಳಲಿಲ್ಲ. ಆತನ ಮೇಲಿಟ್ಟ ಭರವಸೆ ಹುಸಿಯಾಗಿದೆ. ಮರಳಿ ಬರುವೆ ಎಂದವನು ಆ ಮಾತನ್ನು ಸುಳ್ಳಾಗಿಸಿದ್ದಾನೆ. ಬಯಸಿದ ಪ್ರೀತಿ ಸಿಗದ ಆಕೆ ಆ ಪ್ರೀತಿಯ ಅನಿಶ್ಚಿತತೆಯನ್ನು ತೆರೆದಿಡುತ್ತಾಳೆ. ಅವನನ್ನು ಪ್ರೀತಿಸುವ ಬದಲಿಗೆ ಥಂಡರ್‌ಬರ್ಡ್‌ ಪಕ್ಷಿ [ ಅಮೇರಿಕನ್ ಜನಪದ ಸಂಸ್ಕೃತಿಯಲ್ಲಿ ಬರುವ ಪೌರಾಣಿಕ ಪಕ್ಷಿ, ಶಕ್ತಿ ಮತ್ತು ಶಕ್ತಿಯ ಅಲೌಕಿಕ ಜೀವಿ]ಯನ್ನಾದರೂ ಪ್ರೀತಿಸಿದ್ದರೆ ಕನಿಷ್ಠ ಪಕ್ಷ ವಸಂತ ಮಾಸದಲ್ಲಾದರೂ ಮರಳಿ ಬಂದು ಮೊರೆಯುತ್ತಿತ್ತು ಎನ್ನುತ್ತಾಳೆ.

“I should have loved a thunderbird instead:
At least when spring comes they roar back again”

ಕವಿತೆಯ ಉದ್ದಕ್ಕೂ ಆಕೆ ತನ್ನ ಏಕಾಂಗಿತನ ಮತ್ತು ಪ್ರೇಮ ನಿರಾಕರಣೆಯ ಕಾರಣದಿಂದ ಬದುಕಿನಿಂದಲೇ ಪಲಾಯನ ಮಾಡುವ ಪ್ರಯತ್ನ ಮಾಡುತ್ತಾಳೆ.. “ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ” ಎಂದು ಕವಿ ಬೇಂದ್ರೆ ಪ್ರಕೃತಿಯ ನಿತ್ಯ ನೂತನ ಕ್ರಿಯೆಗೆ ಸಮೀಕರಿಸಿದರೆ ಪ್ರೇಮ ಫಲಿಸದ ಹೆಣ್ಣೊಬ್ಬಳು ಕಂಡುಕೊಂಡ ಬಗೆ ಇದು. ಜಗತ್ತಿನ ಜಂಜಡಗಳಿಂದ ಮುಕ್ತವಾಗಲು ಆಕೆ ತನ್ನ ಕಣ್ಣುಗಳನ್ನು ಮುಚ್ಚುತ್ತಾಳೆ. ಆದರೆ ಪುನಃ ತೆರೆದಾಗ ಅದೇ ಜಗತ್ತು ಆಕೆಯ ಮುಂದೆ ಎದ್ದು ನಿಲ್ಲುತ್ತದೆ. ಆದರೆ ಈ ಕವಿತೆ ಸಿಲ್ವಿಯಾ ಪ್ಲಾತ್ ತನ್ನ ಪತಿ ಟೆಡ್‍ಹ್ಯೂಸ್ ಬಗ್ಗೆ ಬರೆದ ಕವಿತೆಯಲ್ಲ. ಆಕೆಯ ಕಾಲೇಜು ದಿನಗಳಲ್ಲಿ ತನ್ನ 20ನೇ ವಯಸ್ಸಿಗೆ ಗೆಳೆಯನೊಬ್ಬನ ಕುರಿತು ಬರೆದ ಕವಿತೆ.

ಇನ್ನೊಬ್ಬ ಕವಯತ್ರಿ ಜೂಲಿಯಾ ಡಿ. ಬರ್ಗೋಸ್. ಪೋರ್ಟೊ ರಿಕನ್ ಕವಿ. ಪೋರ್ಟೊ ರಿಕನ್ ನ್ಯಾಷನಲಿಸ್ಟ್ ಪಾರ್ಟಿಯ ಮಹಿಳಾ ಶಾಖೆಯ ಡಾಟರ್ಸ್ ಆಫ್ ಫ್ರೀಡಂನ ಜನರಲ್ ಸೆಕ್ರೆಟರಿಯಾಗಿ, ಮಹಿಳಾ ಹಕ್ಕುಗಳಿಗಾಗಿ, ಆಫ್ರಿಕನ್ ಮತ್ತು ಆಪ್ರೋ- ಕೆರೆಬಿಯನ್ ಬರಹಗಾರರ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟ ಮಹಿಳೆ. ಆದರೆ ತದನಂತರ ಬದುಕಿನ ವೈಫಲ್ಯಗಳಿಂದ ಜರ್ಜರಿತಳಾಗಿ, ಮೂರು ವಿವಾಹಗಳಿಂದಲೂ ಬಯಸಿದ ಬೆಂಬಲ ಸಿಗದೇ, ಡಿಪ್ರೆಶನ್ ಎಂಬ ಮನೋಕಾಯಿಲೆಯಿಂದ ಬಳಲಿ, ಅತಿಯಾದ ಮದ್ಯವ್ಯಸನಿಯಾಗಿ ಕೇವಲ 39 ವರ್ಷಕ್ಕೆ ಇಹಲೋಕ ತ್ಯಜಿಸಿದಳು. ಯಾರಿಗೂ ಹೇಳದೇ ಮನೆಯಿಂದ ಹೊರಬಿದ್ದು,ನ್ಯುಮೋನಿಯಾ ಪೀಡಿತೆಯಾಗಿ ರಸ್ತೆ ಬದಿಯ ಹೆಣವಾದಳು. ಮೂಲತಃ ಸ್ಪಾನಿಷ್ ಭಾಷೆಯಲ್ಲಿ ಬರೆದ ಆಕೆಯ ಕವಿತೆಗಳು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. “Bitter Song” ಬರ್ಗೋಸ್ ಬರೆದ ಪ್ರಸಿದ್ಧ ಕವಿತೆಗಳಲ್ಲೊಂದು.

“Nothing troubles my being, but I am sad
Something slow and dark strikes me
Though just behind this agony,
I have held the stars in my hand”

ಆಕೆಯದು ದೃಢ ಚಿತ್ತ. ಗಟ್ಟಿ ಅಸ್ತಿತ್ವ, ಆದರೂ ಆಕೆ ದುಃಖಿತೆ. ಕೈಯಲ್ಲಿ ನಕ್ಷತ್ರಗಳನ್ನು ಹಿಡಿದಿದ್ದರೂ ಕಾಣದ ಸಂಕಟಗಳು ಆಕೆಯನ್ನು ಹಿಂಸಿಸುತ್ತಿವೆ.

To be and not want to be.. that is the
Motto.
The battle that exhausts all
Expectation.
To find, when the soul is almost dead
That the miserable body still has
Strength.

ಬದುಕಿನ ಎರಡು ಮಾರ್ಗಗಳು ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ, ಇಲ್ಲ ಅಸ್ತಿತ್ವ ರಾಹಿತ್ಯಕ್ಕಾಗಿ, ನಿತ್ಯ ಹೋರಾಟ.

ಆದರೆ ಆತ್ಮವೇ ಕಳಚಿಕೊಂಡಾಗ, ಉಳಿದ ಈ ಪ್ರಾಪಂಚಿಕ ಶರೀರ ಶಕ್ತವಾಗಿದ್ದರೂ ನಿರೀಕ್ಷೆಗಳು ಬುಡಮೇಲಾಗುತ್ತದೆ ಎನ್ನುತ್ತಾಳೆ. ಪ್ರೀತಿಯ ಕನವರಿಕೆಯೆ ಹಾಗೆ. ಕೊನೆಯಲ್ಲಿ ಬರುವ ಈ ಸಾಲುಗಳು

“Forgive me,oh love, if do not name
You!
Apart from your song I am dry wing
Death and I sleep together ..
Only when I sing to you, I awake”

ಪ್ರೇಮ ವೈಪಲ್ಯ ಮತ್ತು ಸಾವು ಜೊತೆಯಲ್ಲೆ ಸಾಗುವ ಸಂದೇಶ ನೀಡುತ್ತವೆ. ಈ ಹತಾಶೆ ಅವರ್ಣನೀಯ. ಪ್ರೇಮ ಏಕಮುಖಿ ವಾಹಿನಿಯಲ್ಲ. ಅದು ಪರಸ್ಪರ ಇಂಬುಗೊಳ್ಳುವಿಕೆಯಲ್ಲಿ ಅನನ್ಯತೆಯನ್ನು ಪಡೆಯುವಂಥದ್ದು. ಅನಂಗತೆಯ ಅಲಿಂಗನದಲ್ಲಿ ಪರಿಣಮಿಸುವಂಥದ್ದು, ನಿರಂತರ ಸಂಪರ್ಕಕ್ಕಿಂತಲೂ, ಅಗಲಿಕೆಯ ಬಯಲಿನೊಳಗೆ ಸ್ಪುಟಗೊಳ್ಳುವಂಥದ್ದು. ಆದರೂ ಪ್ರೀತಿಗೆ ಎರಡು ಮುಖಗಳು. ಒಂದು ಮುಖ ಎಷ್ಟು ಆಹ್ಲಾದಕರವೋ, ಅಷ್ಟೇ ಅದರ ಇನ್ನೊಂದು ಮುಖ ಹೃದಯವಿದ್ರಾವಕ. ಅದೇ ಪ್ರೇಮ ಸಾಫಲ್ಯ ಮತ್ತು ಪ್ರೇಮ ವೈಫಲ್ಯದ ಮುಖಗಳು. ಪ್ರೀತಿ ಎಷ್ಟು ರೋಮಾಂಚನ ನೀಡಬಲ್ಲುದೋ ಅಷ್ಟೇ ಹೃದಯವನ್ನು ಹೆಪ್ಪುಗಟ್ಟಿಸಬಲ್ಲದು.

ಪ್ರೇಮ ವಿಮುಖತೆಗೆ ಒಳಗಾದ ಎರಡು ಕವಿ ಹೃದಯಗಳ ಒಳ ತುಡಿತ, ನೋವು, ನಿರಾಶೆ, ಪ್ರಕಲ್ಪಗಳು ವಿರಹಿ ಹೃದಯಗಳ ತಟ್ಟುತ್ತವೆ. ಮುಟ್ಟುತ್ತವೆ. ಮಾರ್ದನಿಗೈಯುತ್ತವೆ.

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...