ಗ್ಯಾಬ್ರಿಯಲ್ ಒಕಾರಾನ ’Once upon a time’ : ಮುಖವಾಡದ ಜೊತೆ ಮುಖಾಮುಖಿ

Date: 12-07-2022

Location: ಬೆಂಗಳೂರು


“ಬದಲಾದ ಬಂಡವಾಳಶಾಹಿ ವ್ಯವಸ್ಥೆಯಿಂದ ಉದ್ಭವಿಸಿದ ಸಾಂಸ್ಕೃತಿಕ ಬಿಕ್ಕಟ್ಟಿನಿಂದ ಯಾಂತ್ರಿಕ ಜೀವನಶೈಲಿ, ಆಡಂಬರದ ಜೀವನ, ಅತಿ ಸ್ವಾರ್ಥ ಇವುಗಳೇ ಎಲ್ಲ ಕಡೆಯೂ ಕುಣಿಯುತ್ತಿದ್ದು, ಮನುಷ್ಯ ಸಂಬಂಧಗಳು, ಪರಸ್ಪರ ಕಳೆದ ಕ್ಷಣಗಳು ಎಲ್ಲವೂ ಲೆಕ್ಕಾಚಾರದಲ್ಲೆ ಮುಗಿದುಹೋಗುತ್ತಿವೆ” ಎನ್ನತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ, ಆಫ್ರಿಕನ್ ಕವಿ ಗ್ಯಾಬ್ರಿಯಲ್ ಒಕಾರಾನ ಕವಿತೆಯೊಂದನ್ನು ಈ ಹಿನ್ನೆಲೆಯೊಂದಿಗೆ ಚರ್ಚಿಸಿದ್ದಾರೆ.

ಮುಖ ಮತ್ತು ಮುಖವಾಡದ ನಡುವೆ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆ ನನ್ನನ್ನು ಹಲವು ಸಲ ಕಾಡಿದ್ದಿದೆ. ಇದು ಸಣ್ಣ ಮಗುವಿಗೂ ಗೊತ್ತಾಗುವ ವಿಚಾರ ಎನ್ನಬಹುದು ನೀವು.

ಇಲ್ಲೊಂದು ಸಣ್ಣ ವಿಚಾರವಿದೆ. ಮುಖ ವಯೋಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಆದರೆ ಮುಖವಾಡ ಬಹಳಷ್ಟು ಸಲ ಸ್ಥಳ, ಸನ್ನಿವೇಶ ಸಂದರ್ಭ, ನೋಡಿ ಬದಲಾಗುತ್ತದೆ.

ಇಂದಿನ ಪ್ರೌಢ ಜಗತ್ತು ಅದೆಷ್ಟು ಕೃತ್ರಿಮತೆಯನ್ನು ಮೈತುಂಬಾ ವ್ಯಕ್ತಪಡಿಸುತ್ತದೆ ಎಂದರೆ ಸ್ವತಃ ನನಗೇ ನಾನೇ ಪರಕೀಯಳಾದಂತೆ, ನನ್ನವರೆಲ್ಲರೂ ತಮ್ಮ ಸ್ವಾರ್ಥದ ನೆಲೆಯಲ್ಲಿ ಅಪ್ಪಟ ಪ್ರೀತಿಯನ್ನು ವ್ಯಕ್ತ ಮಾಡದಂತೆ, ಸದಾ ಮೇಲೊಂದು ಮುಖವಾಡವನ್ನು ಧರಿಸಿದಂತೆ ಕಾಣುತ್ತದೆ. ಪ್ರೀತಿ ಮಾತುಗಳು ಹೃದಯದಿಂದ ಬರುತ್ತಿಲ್ಲ. ನಗು ತೋರಿಕೆಯ ಆಭರಣವಾಗುತ್ತಿದೆ. ಮನೆಗೆ ನೆಂಟರಿಷ್ಟರು ಬಂದರೆ ಒಂದೆರಡು ದಿನವೂ ಸಹಿಸಲಾಗುವುದಿಲ್ಲ. ಅಂದಿನ ಯಾವೂದೂ ಇಂದಿಗೆ ಸಲ್ಲ. ಬದಲಾದ ಕಾಲಧರ್ಮಕ್ಕೆ ತಕ್ಕಂತೆ ಮನುಷ್ಯನ ವರ್ತನೆಗಳು ಹೇಗೆಲ್ಲ ಬದಲಾಗುತ್ತವೆ.

ಇದನ್ನೇ ಗ್ಯಾಬ್ರಿಯಲ್ ಒಕಾರಾ ಎಂಬ ಆಫ್ರಿಕನ್ ಕವಿ ತನ್ನ “Once upon a time” ಎಂಬ ಕವಿತೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಡುತ್ತಾನೆ. ಇಂದಿನ ಸ್ನೇಹ ಮತು ಬಾಂಧವ್ಯದ ನೆಲೆಗಳಲ್ಲಿ ಟಿಸಿಲೊಡೆದ ಕೇವಲ ಸ್ವಾರ್ಥಪರತೆಯ ಮುಖವಾಡದ ಸಂಬಂಧಗಳ ಮೇಲೊಂದು ಕಟು ವ್ಯಾಖ್ಯಾನ ನೀಡುತ್ತಾನೆ. ಕವಿತೆ ಮೂರು ಹಂತಗಳಲ್ಲಿ ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬದಲಾದ ಅಭಿವ್ಯಕ್ತಿ ಚಹರೆಗಳನ್ನು ವಿಶ್ಲೇಷಿಸುತ್ತದೆ. ಮೊದಲನೆಯದಾಗಿ ಪರಿಚಯಸ್ಥರು, ಬಂಧುಗಳು, ಸ್ನೇಹಿತರು ಎದುರಾದಾಗಲೆಲ್ಲಾ ಸಹಜವಾಗಿ ಮುಖದಲ್ಲಿ ಮೂಡುವ ನಗು ಮತ್ತು ಕುಶಲೋಪರಿಯ ರೀತಿಗಳು, ಪರಸ್ಪರ ಶುಭಾಶಯಗಳ ವಿನಿಮಯದಲ್ಲಿ ಆದ ವ್ಯತ್ಯಾಸ, ನೆಂಟರಿಷ್ಟರನ್ನು ಸ್ನೇಹಿತರನ್ನು ಮನೆಗೆ ಕರೆಯುವ, ಅಥವಾ ಅವರು ಮನೆಗೆ ಬಂದಾಗ ಅತಿಥಿಗಳ ಆದರಿಸುವಿಕೆಯಲ್ಲಿನ ಬದಲಾವಣೆ, ಮೂರನೆಯದಾಗಿ ಬಂದ ನೆಂಟರು ಹೊರಟು ನಿಂತಾಗ ಉಂಟಾಗುವ ಭಾವನೆಗಳಲ್ಲಿ ಇಂದು ಆದಂತಹ ಭಿನ್ನತೆ. ಇಂತಹ ಸಂವೇದನೆಗಳಲ್ಲಿ ಆದ ಮಾರ್ಪಾಡನ್ನು ಕವಿ ಹೀಗೆ ಗುರುತಿಸುತ್ತಾನೆ.

Once upon a time,
They used to laugh with their hearts
And laugh with their eyes
But now they laugh with their teeth
While their ice-bold-cold eyes
Search behind my shadow.

“ಮಗನೇ, ಒಂದಾನೊಂದು ಕಾಲದಲ್ಲಿ ಈ ಜನ ಹೃದಯದಿಂದ ನಗುತ್ತಿದ್ದರು. ಪ್ರೀತಿ ತುಂಬಿದ ಕಣ್ಣುಗಳಲ್ಲಿ ನಗುತ್ತಿದ್ದರು. ಆದರಿಂದು ಅವರು ಕೇವಲ ಹಲ್ಲುಗಳ ತೋರಿ ನಗುತ್ತಾರೆ. ಅವರ ಹೆಪ್ಪುಗಟ್ಟಿದ ತಣ್ಣಗಿನ ಕಣ್ಣಗಳು ನನ್ನ ನೆರಳಿನ ಹಿಂದೆ ಏನನ್ನೋ ಹುಡುಕುತ್ತವೆ” ಎನ್ನುವಲ್ಲಿ ಪ್ರೀತಿ ವಿಶ್ವಾಸಗಳು ಬೇಕಿಲ್ಲದ ಕೇವಲ ತೋರಿಕೆಯ ಅಭಿವ್ಯಕ್ತಿಗಳು ಇಂದಿನ ಜಗತ್ತನ್ನು ನಡೆಸುತ್ತಿವೆ. ಮಾನವ್ಯ ಸಂಬಂಧಗಳು ಅರ್ಥಕಳೆದುಕೊಂಡಿವೆ ಎನ್ನುತ್ತಾನೆ.

ಅಷ್ಟೇ ಅಲ್ಲ, ಹಿಂದೆ ಹೃದಯ ತುಂಬಿದ ಭಾವನೆಗಳಿಂದ ಕೈಕುಲುಕಿ ಅಭಿನಂದಿಸುತ್ತಿದ್ದ ಜನ ಇಂದು ಕೈಕುಲುಕುವಾಗಲೂ ಎದುರಿಗಿದ್ದವನ ಆರ್ಥಿಕ ಸ್ಥಿತಿವಂತಿಕೆಯ ಲೆಕ್ಕಾಚಾರ ಹಾಕಿಯೇ ವರ್ತಿಸುವ ಪರಿ ಕವಿಯಲ್ಲಿ ತೀವ್ರ ಹತಾಶೆಗೆ ಕಾರಣವಾಗಿದೆ.

ಹೊರಮಾತಿಗೆ ಮನೆಗೆ ಆಹ್ವಾನಿಸುವ ಸ್ನೇಹಿತರೋ ಬಂಧುಗಳೋ ಕೇವಲ ಬಾಯಿಮಾತಿಗೆ ಕರೆಯುತ್ತಾರೆಯೇ ಹೊರತು, ಒಳ ಮನಸ್ಸಿನಲ್ಲಿ ತಮ್ಮ ಮನೆ ಮನದ ಬಾಗಿಲನ್ನು ಮುಚ್ಚಿಯೇ ಇಡುತ್ತಾರೆ. ಒಂದೆರಡು ಬಾರಿ ಹೋದಾಗ ಅಷ್ಟಿಷ್ಟು ಮಾತಾಡುವ ಜನರು ಮೂರನೇ ಬಾರಿ ಹೋದರೆ ಆ ಮನೆಯ ಬಾಗಿಲು ಖಂಡಿತ ಮುಚ್ಚಿರುತ್ತದೆ ಎಂಬ ನಮ್ಮ ನಿಮ್ಮೆಲ್ಲರ ಸ್ವಾನುಭವ ಸತ್ಯವನ್ನು ಎದುರಿಗಿಟ್ಟು ಆಧುನಿಕತೆಯಲ್ಲಿ ಕಳೆದುಕೊಂಡ ಬಾಂಧವ್ಯದ ಅರ್ಥವನ್ನು ಮನಗಾಣಿಸುತ್ತಾನೆ.

ಹಿಂದೆ ನೆಂಟರಿಷ್ಟರು ಮನೆಗೆ ಬಂದಾಗ ಅದೆಂಥ ಆನಂದವಿರುತ್ತಿತ್ತು. ಹಬ್ಬದ ಸಡಗರವಿರುತ್ತಿತ್ತು. ಆದರೆ ಇಂದಿಗೆ ಬಂದವರು ಎಂದು ಹೊರಟು ಹೋಗುವರೆಂಬ ಲೆಕ್ಕಾಚಾರದಲ್ಲೆ ಕಸಿವಿಸಿಗೊಳ್ಳುತ್ತಲೇ ಇರುವ ಜಗತ್ತು. ಬಂದವರು ಹೊರಟು ಹೋದಾಗ ಬಿಡುಗಡೆಯ ಭಾವದಲ್ಲಿ ನಿಟ್ಟುಸಿರಿಟ್ಟು ಸಮಾಧಾನಗೊಳ್ಳುವ ಸಂಬಂಧಗಳು. ಕ್ರಮೇಣ ಈ ಜಾಯಮಾನಕ್ಕೆ ತಾನೂ ಹೊರತಾಗಿಲ್ಲವೆಂಬ ಕೊರಗು ಕವಿಗೆ ಕಾಡುತ್ತಿದೆ. ತಾನೂ ಈಗ ಕೇವಲ ತೋರಿಕೆಯ ನಗುವನ್ನು ಮೈಗೂಡಿಕೊಂಡಿದ್ದಾಗಿ ಹೇಳುತ್ತಾನೆ. ಮುಖವಾಡವನ್ನು ಧರಿಸಿರುವುದಾಗಿ ಒಪ್ಪಿಕೊಳ್ಳುತ್ತಾನೆ.

“So I learned many things, son
I have learned to wear my faces
Like dresses-home face
Office face, street face, host face
Cocktail face with all their conforming smiles
Like a fixed portrait smile”

ಇಂದಿನ ಮುಖವಾಡದ ಅನಿವಾರ್ಯತೆ ಇದು. ಬಾಲ್ಯದಲ್ಲಿ ಕೇವಲ ಆಟಕ್ಕೆ ತೊಡುವ ಮುಖವಾಡವನ್ನು ಯೌವನಕ್ಕೆ ಬರುತ್ತಾ ನಿಧಾನವಾಗಿ ನಿಜವಾಗಿಯೂ ತೊಡುವುದನ್ನು ಮನುಷ್ಯರು ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಇದು ಬಾಲ್ಯದ ಆಟದ ಮುಖವಾಡದಂತಲ್ಲ. ತೊಡುವುದನ್ನು ಅಭ್ಯಾಸ ಮಾಡಿಕೊಂಡಂದಿನಿಂದ ಮುಖದಿಂದ ಕಿತ್ತು ತೆಗೆದಿಡಲಾಗದಂತೆ ಸನ್ನಿವೇಶಕ್ಕೆ, ಸಂದರ್ಭಕ್ಕೆ ತಕ್ಕಂತೆ ಬದಲಾಗುವಂತಹ ಮುಖವಾಡ. ಇದಕ್ಕೆ ಕಾರಣ ನಮ್ಮ ಸುತ್ತಮುತ್ತಲಿನ ಜಗತ್ತು ಮುಖವಾಡದಲ್ಲೇ ಮೆರೆಯುತ್ತಿರುವುದು ಈ ವಯಸ್ಸಿನಲ್ಲಿ ನಮ್ಮ ಅರಿವಿಗೆ ಬರುತ್ತದೆ. ನಡುವಯಸ್ಸಿನಲ್ಲಂತೂ ಈ ಮುಖವಾಡ ತೊಡದೇ ಇರುವ ಜನರೇ ಇಲ್ಲ. ಹಾಗಾಗಿ ನಾವೂ ಮುಖವಾಡ ಹಾಕೋದನ್ನು ಚೂರೂ ಚೂರೇ ಅಭ್ಯಾಸ ಮಾಡಿಕೊಳ್ಳುತ್ತೇವೆ. ಕವಿಯೂ ಅದಕ್ಕೆ ಹೊರತಲ್ಲ. ಆದರೂ ಬಾಲ್ಯದ ಆ ನಿಷ್ಕಲ್ಮಶ ನಗುವನ್ನು ಮತ್ತೊಮ್ಮೆ ಹೊಂದುವ ಆಸೆ. ಹಾಗಾಗಿ ಕವಿ ಮುಗ್ಧ ನಗುವನ್ನು ಮತ್ತೆ ಕಲಿಸುವಂತೆ, ಮಗನಿಗೆ ಹೇಳುತ್ತಾನೆ. ಮತ್ತೊಮ್ಮೆ ಆ ಸುಂದರ ಬಾಲ್ಯದ ನೈಜ ನಗುವನ್ನು ಬಯಸುತ್ತಾನೆ.

ಬದಲಾದ ಬಂಡವಾಳಶಾಹಿ ವ್ಯವಸ್ಥೆಯಿಂದ ಉದ್ಭವಿಸಿದ ಸಾಂಸ್ಕೃತಿಕ ಬಿಕ್ಕಟ್ಟಿನಿಂದ ಯಾಂತ್ರಿಕ ಜೀವನ ಶೈಲಿ, ಆಡಂಬರದ ಜೀವನ, ಅತೀ ಸ್ವಾರ್ಥ ಇವುಗಳೇ ಎಲ್ಲ ಕಡೆಯೂ ಕುಣಿಯುತ್ತಿದ್ದು, ಎಲ್ಲವೂ ಲೆಕ್ಕಾಚಾರ. ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ, ತೂಗಿ ಅಳೆದು, ತೊಂದರೆ ಇಲ್ಲ ಎನ್ನುವಲ್ಲಿ ಮಾತ್ರ ಬಿಟ್ಟುಕೊಳ್ಳುವುದು ಸಾಮಾನ್ಯ ಗುಣವಾಗುತ್ತಿದೆ. ಮನುಷ್ಯ ಸಂಬಂಧಗಳು, ಪರಸ್ಪರ ಕಳೆದ ಕ್ಷಣಗಳು ಎಲ್ಲವೂ ಲೆಕ್ಕಾಚಾರದಲ್ಲೆ ಮುಗಿದುಹೋಗುತ್ತಿವೆ.

ಆಧುನಿಕ ತಂತ್ರಜ್ಞಾನ ಎಲ್ಲವನ್ನೂ ರಿಮೋಟ್ ಕಂಟ್ರೋಲ್‍ಗಳ ಮೂಲಕವೇ ನಿಯಂತ್ರಿಸುತ್ತದೆ. ಹಾಗೇ ಮಾನವ ಸಹಜ ಸಂವೇದನೆಗಳನ್ನು ಈ ನಿಯಂತ್ರಣ ಗುಂಡಿಗಳು ನಿಯಂತ್ರಿಸುವ ವ್ಯವಸ್ಥೆಗೆ ನಾವು ಬದ್ಧರಾಗುತ್ತಿದ್ದೇವೆಯೇ? ಇವೆಲ್ಲ ಅತಿ ಸಂಸ್ಕೃತಿಯ ಕುಚೋದ್ಯವಲ್ಲವೇ?

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...