‘The House by the Side of the Road’  -  ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು

Date: 28-07-2022

Location: ಬೆಂಗಳೂರು


“ಜನರೊಂದಿಗೆ ಬೆರೆಯದೇ, ತಾನು ಇತರರಿಗಿಂತ ಭಿನ್ನ ಎಂಬ ಭ್ರಮೆಯಲ್ಲಿ ಬದುಕುವ, ಮೋಕ್ಷ, ಮುಕ್ತಿ, ತಪಸ್ಸು ಎನ್ನುತ್ತಾ ತನ್ನಿಂದಲೇ ಜಗತ್ತಿನ ಹೊಸ ಹಾದಿಗಳು ತೆರೆದುಕೊಂಡಿವೆ ಎಂದು ಭ್ರಮಿಸುವ ಜನರು ನಮ್ಮ ಸುತ್ತಲೂ ಇದ್ದಾರೆ. ಆದರೆ ಅವರು ತಮ್ಮ ಬದುಕಿನಿಂದಲೇ ಪಲಾಯನ ಮಾಡುತ್ತಿರುತ್ತಾರೆ” ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಈ ಸಲ ಅಮೇರಿಕನ್ ಕವಿ ಸ್ಯಾಮ್ ವಾಲ್ಟರ್ ಫಾಸ್‌ನ ಒಂದು ಕವಿತೆಯ ಬಗ್ಗೆ ಬರೆದಿದ್ದಾರೆ.

ಮರ ಹಣ್ಣು ಬಿಡುವುದು, ಹಸು ಹಾಲು ಕೊಡುವುದು, ನದಿ ಹರಿಯುವುದು ಎಲ್ಲವೂ ಪರೋಪಕಾರಕ್ಕಾಗಿ, ಮನುಷ್ಯನ ಈ ಶರೀರವೂ ಕೂಡ ಇರುವುದು ಪರೋಪಕಾರಕ್ಕಾಗಿಯೇ ಎಂದು ಹೇಳುವ ಸುಭಾಷಿತವೊಂದು ಬಹಳ ಸಲ ನನ್ನನ್ನು ಜಿಜ್ಞಾಸೆಗೆ ಈಡುಮಾಡುತ್ತದೆ. ಪ್ರಕೃತಿಯ ನಿರ್ಜೀವ ವಸ್ತುಗಳು, ಮೂಕ ಪ್ರಾಣಿಗಳು ಈ ಪರೋಪಕಾರದ ತತ್ವವನ್ನು ಪಾಲಿಸುತ್ತಾ ಸಹಬಾಳ್ವೆಯ ನೀತಿಯನ್ನು ಪೋಷಿಸುವಂತಹ ಉನ್ನತ ಗುಣ ಹೊಂದಿರುವಾಗ, ಸರಿ-ತಪ್ಪು , ಒಳಿತು- ಕೆಡಕುಗಳ ಅಂತರವರಿತ ಮನುಷ್ಯ ತನ್ನ ಸಹಜೀವಿಗಳ ಜೊತೆ ಹೇಗಿರಬೇಕು ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದಿದ್ದರೆ ಹೇಗೆ? ಎಂಬ ಪ್ರಶ್ನೆ,

ಬದುಕು ನನ್ನದು, ನನ್ನ ಬದುಕನ್ನು ಇತರರಿಗಾಗಿ ಮುಡಿಪಾಗಿಡಲೇ? ಇರುವ ಒಂದೇ ಬದುಕನ್ನು ನನ್ನ ಮನಕ್ಕೊಪ್ಪುವ ಹಾಗೆ ಬದುಕದೇ ತ್ಯಾಗ ಮಾಡುವುದೇ? ಸಂದಿಗ್ಧತೆ ಕಾಡುತ್ತದೆ. ಈ ದ್ವಂದ್ವಗಳ ನಡುವೆಯೇ ಪ್ರಕೃತಿ ಎಂಬ ಮಹಾನ್ ವಿಶ್ವವಿದ್ಯಾನಿಲಯ ಸಹಜವಾಗಿ ಬೋಧಿಸುವ “ಲಿವ್ ಅಂಡ್ ಲೆಟ್ ಲಿವ್” ಸಿದ್ಧಾಂತವೂ ಆಪ್ತವೆನಿಸುತ್ತದೆ.

ಮಾನವ ಸಮಾಜಜೀವಿ.ನಿರಂತರ ಏಕಾಂಗಿಯಾಗಿರಲಾರ. ಕೇವಲ ಸ್ವ ಹಿತಾಸಕ್ತಿಗಾಗಿಯೇ ಸದಾಕಾಲ ಜೀವಿಸಲಾರ ಅಲ್ಲವೇ? ಯಾಕೆಂದರೆ ಮನುಷ್ಯ ಪರಸ್ಪರ ಸಹಚರ್ಯೆಯಲ್ಲಿ ಖುಷಿ ಕಾಣುವಾತ. ’Man’s attachment with man’. ಸಾಮಾನ್ಯ ಜನರು ಈ ಸಾಂಘಿಕತೆಯನ್ನು ಬಯಸುತ್ತಾರೆ. ಅನುಭವಿಸುತ್ತಾರೆ. ಅದನ್ನು ಬದುಕುತ್ತಾರೆ. ಆದರೆ ಸಾಧುಗಳು, ಸನ್ಯಾಸಿಗಳು, ಅತಿಪ್ರಾಜ್ಞರು, ಶ್ರೀಮಂತರು, ಬುದ್ಧಿಜೀವಿಗಳು ಅವರ ಜೀವನ ಸಂದೇಶಗಳು ಹೇಗಿರುತ್ತವೆ. ಸ್ವರ್ಗ, ನರಕಗಳ ಅತಿ ರಂಜಕ ಕಲ್ಪನೆಗಳನ್ನು ಬಿತ್ತುತ್ತಾ, ಮೋಕ್ಷ, ಧ್ಯಾನ, ಸಿಧ್ಧಿ, ಮಾನಸಿಕ ನಿಯಂತ್ರಣ ಇತ್ಯಾದಿ ಅಸ್ತ್ರಗಳ ಮುಖೇನ ಪ್ರತ್ಯೇಕರಂತೆ ಗುರುತಿಸಿಕೊಳ್ಳುವ ಜನರಿದ್ದಾರೆ. ತ್ಯಾಗದ ನೆಲೆಯಲ್ಲಿಯೂ ಹೆಸರಿನ ವ್ಯಾಮೋಹ ಹೊಂದಿರುವ ಜನರಿದ್ದಾರೆ. ಮಿತಿಮೀರಿದ ಹಣ, ಸಂಪತ್ತು, ಐಶ್ವರ್ಯ ಹೊಂದಿರುವ ಆ ಮೂಲಕ ಪ್ರತ್ಯೇಕವಾಗಿ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿರುವ ಜನರಿದ್ದಾರೆ. ಇದಕ್ಕೂ ಹೆಚ್ಚಾಗಿ ಜ್ಞಾನದ ಸಂಪತ್ತು ಹೊಂದಿರುವೆನೆಂಬ ಗರ್ವದ ಜ£ರು ಇದ್ದಾರೆ. ಇವರೆಲ್ಲ ಸದಾ ಜನರಿಂದ ದೂರವೇ ಇರುವುದನ್ನು ರೂಢಿಸಿಕೊಂಡಿರುತ್ತಾರೆ. ಇಲ್ಲ ಒಂದು ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಇವರ ನಡೆನುಡಿಯನ್ನು ಬದುಕಿನ ಆದರ್ಶವೆಂದು ಗ್ರಹಿಸುವ ಸಾಮಾನ್ಯರ ಬದುಕು ಇವರಿಗಿಂತ ಶ್ರೇಷ್ಟವೆನ್ನುತ್ತಾನೆ ಕವಿಯೊಬ್ಬ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಸುಂದರ ತೃಪ್ತ ಬದುಕನ್ನು ಹೊಂದುವುದೇ ಸಿದ್ಧಿ ಎನ್ನುತ್ತಾನೆ.

ಅಮೇರಿಕನ್ ಕವಿ ಸ್ಯಾಮ್ ವಾಲ್ಟರ್ ಫಾಸ್ ಕವಿತೆ ಬರೆಯುತ್ತಾನೆ.

“There are hermit souls that live withdrawn
In the place of their self –content:
There are souls like stars, that dwell apart,
In a fellowless firmament:
There are pioneer souls that blaze the paths
Where highways never run-
But let me live by the side of the road
And be friend to man”

ಇದು ’ದಿ ಹೌಸ್ ಬೈ ದಿ ಸೈಡ್ ಆಫ್ ದಿ ರೋಡ್’ ಕವಿತೆ ನೀಡುವ ಸಂದೇಶ. ಸಾರ್ವಕಾಲಿಕ ಮತ್ತು ಪ್ರಕೃತಿಯ ಭಾಗವೇ ಆದ ಮನುಷ್ಯ ಸಹಜ ಅರಿಯಲೇಬೇಕಾದ ಸಂದೇಶವಿದು.

ಕವಿತೆ ಮನುಷ್ಯ ಮನುಷ್ಯನಿಗಾಗಬೇಕಾದ ಮಹತ್ತರ ಸಂದೇಶವನ್ನು ತಿಳಿಸುತ್ತದೆ. ಸ್ವ ನೆಮ್ಮದಿಗಾಗಿ ಜನರಿಂದ ದೂರವಿರುವ, ತನ್ನ ಸಹ ಜನರೊಂದಿಗೆ ಬೆರೆಯದೇ, ತಾನು ಇತರರಿಗಿಂತ ಭಿನ್ನ ಎಂಬ ಭ್ರಮೆಯಲ್ಲಿ ಬದುಕುವ, ಮೋಕ್ಷ, ಮುಕ್ತಿ, ತಪಸ್ಸು ಎನ್ನುತ್ತಾ ತನ್ನಿಂದಲೇ ಜಗತ್ತಿನ ಹೊಸ ಹಾದಿಗಳು ತೆರೆದುಕೊಂಡಿವೆ ಎಂದು ಭ್ರಮಿಸುವ ಜನರು ನಮ್ಮ ಸುತ್ತಲೂ ಇದ್ದಾರೆ. ಆದರೆ ಅವರು ತಮ್ಮ ಬದುಕಿನಿಂದಲೇ ಪಲಾಯನ ಮಾಡುತ್ತಿರುತ್ತಾರೆ. ಸಹಬಾಳ್ವೆಯ ಸುಖವನ್ನು ಅರಿಯದೇ, ಸಮಾಜ ಮುಖಿಯಾಗದೇ ಬದುಕುವ ಈ ಬದುಕಿಗಿಂತ ರಸ್ತೆ ಬದಿಯಲ್ಲಿ ಪುಟ್ಟ ಮನೆಯೊಂದಿಗೆ ದಾರಿಯಲ್ಲಿ ಹೋಗಿ ಬರುವ ಜನರೊಂದಿಗೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಬದುಕುವ ಸಾಮಾನ್ಯನ ಆಸೆಯನ್ನು ಈ ಕವಿತೆ ಸುಂದರವಾಗಿ ನಿರೂಪಿಸುತ್ತದೆ.

ರಸ್ತೆ ಪಕ್ಕದ ಮನೆಯಿಂದಲೇ ದಾರಿಯುದ್ದಕ್ಕೂ ಸಾಗುವ ಜನ ಎಂಥವರು? ಎಂಬುದನ್ನು ಕವಿ ಕಾಣ ಸುತ್ತಾನೆ.
“The men who are good and the men who are bad
as good and as bad as I
i would not sit in the scorner;s seat,
or hurl the cynic’s ban”

ಅವರಲ್ಲಿ ಸಜ್ಜನಿಕೆಯೂ ಇದೆ. ಹಾಗೇ ದುಷ್ಟ ಗುಣಗಳೂ ಇವೆ. ಹೇಗೆಂದರೆ ತನ್ನೊಳಗಿನ ಒಳ್ಳೆಯ ಮತ್ತು ಕೆಟ್ಟ ಗುಣಗಳಿರುವಂತೆ. ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಗುಣ ದೋಷಗಳು, ದೌರ್ಬಲ್ಯಗಳು ಸಹಜ. ಹಾಗಾಗಿ ಟೀಕಾಕರನ ಕುರ್ಚಿಯಲ್ಲಿ ಕೂತು ಸದಾ ಇನ್ನೊಬ್ಬರ ಟೀಕಿಸುತ್ತಾ, ಕಟಕಿಯನ್ನು ಸಿಡಿಸುತ್ತಾ ಬದುಕಲಾರೆ ಎನ್ನುತ್ತಾನೆ.

ರಸ್ತೆ ಬದಿಯ ಮನೆಯಲ್ಲಿ ಕವಿ ಭೇಟಿಯಾಗುವ ಜನರೆಲ್ಲ ಹೇಗಿದ್ದಾರೆ?

“The men who press with ardour of hope
the men who are faint with the strife
but I turn not away from their smiles nor their tears
both parts of an infinite plan”

ಕೆಲವರು ಖುಷಿಯಲ್ಲಿ, ಆನಂದದ ಪರಿಮಳ ಹೊತ್ತೇ ಸಾಗುತ್ತಿರುತ್ತಾರೆ. ಇನ್ನು ಕೆಲವರು ನಿಶ್ಯಕ್ತರಾಗಿ, ನಿರಾಶೆಯಿಂದ ಬಳಲುತ್ತಾ, ಕಣ್ಣೀರು ಸುರಿಸುತ್ತಾ ಸಾಗುತ್ತಿರುತ್ತಾರೆ. ಆದರೆ ಕವಿ ಸುಖದಲ್ಲಿದ್ದವನ, ಖುಷಿಯಲ್ಲಿದ್ದವನ ಭಾವನೆಗಳನ್ನು ಮಾತ್ರ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ದುಃಖಿತನ ನೋವಲ್ಲೂ ಸಹಭಾಗಿಯಾಗುತ್ತಾನೆ. ಆತನಿಗೆ ಗೊತ್ತು, ಇಂದು ಸುಖಿಯಾಗಿದ್ದವ ನಾಳೆ ದುಃಖ ಪಡಲೂಬಹುದು ಎಂಬ ನಿತ್ಯ ಸತ್ಯ. ಸುಖ ದುಃಖಗಳ ಸಮಾನವಾಗಿ ಸ್ವೀಕರಿಸುವುದೇ ಬದುಕು.

ಜೀವನ ಹೂವಿನ ಹಾಸಿಗೆಯಲ್ಲ. ಬದುಕಿನ ದಾರಿಯಲ್ಲಿ ಏರಲಾಗದಂತಹ ಪರ್ವತಗಳು, ಹಾದಿಯೇ ಕಾಣದಂತಹ ದಟ್ಟ ಹಬ್ಬಿದ ಹುಲ್ಲುಗಾವಲುಗಳು ಎದುರಾಗಬಹುದು. ಅವುಗಳನ್ನು ದಾಟುವುದು ಅಸಾಧ್ಯವೂ ಆಗಬಹುದು, ಇಲ್ಲವೇ ಸುದೀರ್ಘ ಕಾಲ ತೆಗೆದುಕೊಳ್ಳಬಹುದು. ನಡು ಮಧ್ಯಾಹ್ನ ಇಲ್ಲ ರಾತ್ರಿಯೂ ಆಗಬಹುದು. ರಸ್ತೆ ಬದಿಯ ಮನೆಯಲ್ಲಿದ್ದು, ಬದುಕ ಹಾದಿಯ ದಾರಿಹೋಕರಿಗೆ ಸ್ನೇಹಿತನಾಗಿ ಅವರ ಸಂಕಟಗಳನ್ನು ಅರಿಯುವ, ಅವರ ಅನುಭವಗಳನ್ನು, ಸಂಕಟಗಳನ್ನು ಹಂಚಿಕೊಂಡು ಸಮಾಧಾನಿಸುವ ಕವಿ ಸಾಮಾನ್ಯ ಬದುಕಿನ ನೈಜ ತೃಪ್ತಿ ಎಲ್ಲಿದೆ ಎಂಬುದನ್ನು ಮನಗಾಣಿಸುತ್ತಾನೆ.

“They are good, they are bad, they are weak, they are strong
Wise, foolish- so am I”

ಈ ಸಾಲುಗಳು ಎಷ್ಟೊಂದು ಮಾರ್ಮಿಕ. ಆದರೆ ನೀನು ಕೆಟ್ಟವ, ನೀನು ದುರ್ಬಲ, ನೀನು ಮೂರ್ಖ ಎಂದಾಗಲೆಲ್ಲಾ ಎದುರಿದ್ದವನ ಪ್ರತಿಕ್ರಿಯೆ ಹೇಗಿರುತ್ತದೆ? ಸಹಜವಾಗಿ ಒಪ್ಪಿಕೊಳ್ಳುವ ಜಾಯಮಾನ ಇದೆಯಾ? ಎಂಬುದನ್ನು ಸ್ವತಃ ವಿವೇಚಿಸಿಕೊಳ್ಳುವಂತೆ ಮಾಡುತ್ತವೆ ಈ ಸಾಲುಗಳು. ಹಾಗಿದ್ದರೂ ಒಪ್ಪದೆಯೂ ಒಪ್ಪಲೇಬೇಕಾದ ಮಾತುಗಳೂ ಆಗಿರುವುದು ಅಷ್ಟೇ ಸತ್ಯ. ಬದುಕೊಂದು ನಾಟಕ ರಂಗ. ಅಲ್ಲಿ ಶಿಷ್ಟ ಪಾತ್ರಗಳು, ದುಷ್ಟ ಪಾತ್ರಗಳು ಎಲ್ಲವೂ ಇರುತ್ತವೆ. ನಲಿವಿನ ಬೆನ್ನಲ್ಲೇ ನೋವು, ನೋವಿನ ಹಿಂದೆ ಬರುವ ನಲಿವು ಇರುತ್ತದೆ. ಪ್ರತಿ ಮನುಷ್ಯನಲ್ಲೂ ದೈವತ್ವವೂ ಧೂರ್ತತನವೂ ಇರುವುದು.

-ನಾಗರೇಖಾ ಗಾಂವಕರ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...