ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿ `ರಾಮಾಯಣ ಪರೀಕ್ಷಣಂ' 


"ಶ್ರೀರಾಮನು ವಾಲಿಯ ಸಂಹಾರ ಮಾಡಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ ಕಥೆ ನಮಗೆಲ್ಲಾ ಗೊತ್ತಿರುವುದೇ. ಇಲ್ಲಿ ವಾಲಿಯ ಪತ್ನಿ ತಾರೆಯು ತನ್ನ ಅಳಲನ್ನು ರಾಮನಲ್ಲಿ ತೋಡಿಕೊಳ್ಳುವಾಗ , ರಾಮನು ವಾಲಿಯನ್ನು ಕೊಂದದ್ದು ಯಾಕೆ ?ಸುಗ್ರೀವನ ಸಂಕಟವೇನು? ರಾಮ ಸುಗ್ರೀವರ ಸ್ನೇಹ ಎಂತದ್ದು ಎನ್ನುವುದನ್ನು ರಾಮ ಮತ್ತು ತಾರೆಯ ಸಂಭಾಷಣೆಗಳೇ ತಿಳಿಸುತ್ತದೆ," ಎನ್ನುತ್ತಾರೆ ಅಶ್ವಿನಿ ಸುನೀಲ್. ಅವರು ಡಾ. ರುಕ್ಮಿಣಿ ರಘುರಾಮ್ ಅವರ ‘ರಾಮಾಯಣ ಪರೀಕ್ಷಣಂ’ ಕೃತಿ ಕುರಿತು ಬರೆದ ಅನಿಸಿಕೆ.

ಪುಸ್ತಕದ ಹೆಸರು: ರಾಮಾಯಣ ಪರೀಕ್ಷಣಂ
ಲೇಖಕರು: ಡಾ. ರುಕ್ಮಿಣಿ ರಘುರಾಮ್
ಪ್ರಕಾಶಕರು: ಕದಂಬ ಪ್ರಕಾಶನ
ಪ್ರಥಮ ಮುದ್ರಣ: 2024
ಪುಟಗಳು: 184+ 32
ಬೆಲೆ: 300/

ರಾಮಾಯಣದ ಕಥೆ ಯಾರಿಗೆ ತಾನೇ ಗೊತ್ತಿಲ್ಲ? ನಮ್ಮಲ್ಲಿ ವೇದ, ಉಪನಿಷತ್ತು,ಮಹಾಭಾರತಗಳು ವಿಶೇಷ ಪ್ರಾಮುಖ್ಯತೆ ಪಡೆದಿದ್ದರೂ, ರಾಮಾಯಣವು ಸ್ವಲ್ಪ ಹೆಚ್ಚೇ ಭಕ್ತಿಯ ಭಾವವನ್ನು ಮೂಡಿಸುತ್ತದೆ. ರಾಮಾಯಣದ ಕಥೆ, ಪಾತ್ರಗಳು ಇಂದಿಗೂ ಬದುಕಿನ ಪಾಠವನ್ನು ಹೇಳುತ್ತದೆ, ಸ್ಪೂರ್ತಿ ತುಂಬುತ್ತದೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತರು ನಮಗೆ ಸದಾ ಆದರ್ಶಪ್ರಾಯರು. ಕವಿಗಳಿಗೆ, ಸಾಹಿತಿಗಳಿಗೆ ಕೃತಿ ರಚನೆಗೆ ರಾಮಾಯಣವು ಸ್ಪೂರ್ತಿಯಾಗಿದೆ.

ರಾಮಾಯಣದಲ್ಲಿ ಬರುವ ಸನ್ನಿವೇಶಗಳನ್ನು ನಾವೆಲ್ಲಾ ಓದಿ ತಿಳಿದುಕೊಂಡಿದ್ದೇವೆ. ಆದರೆ ರಾಮಾಯಣದ ಘಟನೆಗಳು ನಡೆದ ಸಂದರ್ಭದಲ್ಲಿ ಅಲ್ಲಿ ಇಲ್ಲದಿರುವ ವ್ಯಕ್ತಿಗೆ ಅದೇ ಸನ್ನಿವೇಶವನ್ನು ತಿಳಿಸಿದಾಗ ಹೇಗಿರುತ್ತದೆ ಎನ್ನುವುದನ್ನು ಯಾವತ್ತಾದರೂ ಊಹಿಸಿಕೊಂಡಿದ್ದೀರಾ?

ಲೇಖಕಿ ಡಾ. ರುಕ್ಮಿಣಿ ರಘುರಾಮ್ ಅವರ 'ರಾಮಾಯಣ ಪರೀಕ್ಷಣಂ' ಕೃತಿಯು ಇದೇ ರೀತಿಯ ಪರಿಕಲ್ಪನೆಯಲ್ಲಿ ಮೂಡಿರುವಂತದ್ದು. ರಾಮಾಯಣದ ಕೆಲವೊಂದು ಆಯ್ದ ಕಥೆಗಳನ್ನು ಪರಸ್ಪರ ಸಂಭಾಷಣೆಯ ಶೈಲಿಯಲ್ಲಿ ಸೊಗಸಾಗಿ ನಿರೂಪಿಸಲಾಗಿದೆ.

ಶ್ರೀರಾಮನು ವಾಲಿಯ ಸಂಹಾರ ಮಾಡಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ ಕಥೆ ನಮಗೆಲ್ಲಾ ಗೊತ್ತಿರುವುದೇ. ಇಲ್ಲಿ ವಾಲಿಯ ಪತ್ನಿ ತಾರೆಯು ತನ್ನ ಅಳಲನ್ನು ರಾಮನಲ್ಲಿ ತೋಡಿಕೊಳ್ಳುವಾಗ , ರಾಮನು ವಾಲಿಯನ್ನು ಕೊಂದದ್ದು ಯಾಕೆ ?ಸುಗ್ರೀವನ ಸಂಕಟವೇನು? ರಾಮ ಸುಗ್ರೀವರ ಸ್ನೇಹ ಎಂತದ್ದು ಎನ್ನುವುದನ್ನು ರಾಮ ಮತ್ತು ತಾರೆಯ ಸಂಭಾಷಣೆಗಳೇ ತಿಳಿಸುತ್ತದೆ.

ತನ್ನಂತಹ ಸಾತ್ವಿಕ ಸತಿ ಇದ್ದರೂ ಸೀತೆಯ ಮೇಲೆ ತನ್ನ ಪತಿಗಿರುವ ಮೋಹವನ್ನು ನೋಡುತ್ತಾ ರಾವಣನ ಪತ್ನಿ ಮಂಡೋದೀರಿಯ ಅಂತರಂಗದ ತೊಳಲಾಟ ಹೇಗಿರುತ್ತದೆ ?

ತನ್ನ ಪತಿಯನ್ನು ಹತ್ಯೆಗೈದ ರಾಮನನ್ನು ನೋಡಿದಾಗ ಉಂಟಾದ ರೋಷ ದುಃಖವನ್ನು ರಾವಣನ ಪತ್ನಿ ಮಂಡೋದರಿ ಹೇಗೆ ವ್ಯಕ್ತಪಡಿಸುತ್ತಾಳೆ? ಮಂಡೋದರಿಯನ್ನು ಸಮಾಧಾನಿಸಲು ರಾಮನು ಹೇಳಿದ ತಾತ್ವಿಕ ಮಾತುಗಳು ಎಂತಹದು? ಅವರಿಬ್ಬರೂ ಹೇಗೆ ಸಂಭಾಷಿಸಿದರು? ಊರ್ಮಿಳಯ ಚಿಂತೆ ಏನಿತ್ತು? ಭರತನ ಸಂದೇಹವೇನು? ಶತ್ರುಘ್ನನ ಕುತೂಹಲ ಎಂತದ್ದು ಎನ್ನುವುದು ಸಂಭಾಷಣೆಯ ರೂಪದಲ್ಲೇ ನಿರೂಪಿಸಲಾಗಿದೆ.

ಶ್ರೀರಾಮನು ಮರಳಿ ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಮುಗಿದು ಎಲ್ಲೆಲ್ಲೂ ಸಂತೋಷ ನೆಮ್ಮದಿ ಮೂಡಿದ್ದರೂ ಲಂಕೆಯಲ್ಲಿ ಅನುಭವಿಸಿದ ದುಃಖದ ದಿನಗಳನ್ನು ಮರೆಯಲು ಸೀತೆಗೆ ಸಾಧ್ಯವೇ? ವನವಾಸದ ದಿನಗಳು, ಲಂಕೆಯಲ್ಲಿ ತಾನು ಅನುಭವಿಸಿದ ದುಃಖ, ದುಗುಡವನ್ನು ಸೀತೆ ತನ್ನ ತಂಗಿಯರಾದ ಊರ್ಮಿಳ ಮಾಂಡವಿಯರಲ್ಲಿ ಹೇಗೆ ಹಂಚಿಕೊಂಡಳು? ಅಲ್ಲಿ ನಡೆದ ಘಟನೆಗಳನ್ನೆಲ್ಲ ಅವರಿಗೆ ಹೇಗೆ ವರ್ಣಿಸಿರಬಹುದು? ಅಯೋಧ್ಯೆಗೆ ಬಂದ ಬಳಿಕ ಸೀತೆಗೆ ಕಹಿ ನೆನಪುಗಳನ್ನು ಸುಲಭವಾಗಿ ಮರೆತಳೇ ಎಂದೆಲ್ಲಿ ನಿಮಗೇನಾದರೂ ಕುತೂಹಲವಿದ್ದರೆ 'ಸೀತೆಯ ತಲ್ಲಣ' ಅಧ್ಯಾಯವು ನಿಮ್ಮ ಕುತೂಹಲಕ್ಕೆ ಉತ್ತರವಾಗುತ್ತದೆ.

ಸಮಸ್ತ ಭಾರತೀಯರ ಕನಸಾದ ರಾಮಮಂದಿರ ನಿರ್ಮಾಣವಾದ ಸಮಯದಲ್ಲಿ 'ರಾಮಾಯಣ ಪರೀಕ್ಷಣಂ' ಕೃತಿಯು ಸಂದರ್ಭೋಚಿತವಾಗಿ ಬಂದಿದೆ. ಇದೆಲ್ಲದರ ಜೊತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಿಕೊಂಡು ಮೂಡಿಸಿರುವ ಚಂದದ ಚಿತ್ರಗಳು ಪಾತ್ರಗಳು ಮತ್ತಷ್ಟು ಕಾಲ ಮನಸ್ಸಿನಲ್ಲಿ ಅಚ್ಚಳಿಯದಂತೆ ಮಾಡುವುದರಲ್ಲಿ ಸಫಲವಾಗಿದೆ. ಮಕ್ಕಳು, ವಿದ್ಯಾರ್ಥಿಗಳು, ವಯಸ್ಕರು ಎಲ್ಲರಿಗೂ ಇಷ್ಟವಾಗಬಹುದಾದ, ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿಯಿದು.

MORE FEATURES

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...