ತುಮಕೂರು: ಡಿ. 29, 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಕಲ ಸಿದ್ಧತೆ

Date: 29-12-2025

Location: ತುಮಕೂರು


ತುಮಕೂರು : ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 17ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಡಿ. 29ರಂದು ಬೆಳಿಗ್ಗೆ 7.30ಕ್ಕೆ ಗಾಜಿನ ಮನೆ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದೆ. ನಂತರ ಬೆಳಿಗ್ಗೆ 8 ಗಂಟೆಗೆ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಈ ಮೆರವಣಿಗೆಯು ಎಂ.ಜಿ. ರಸ್ತೆ, ಗುಂಚಿಚೌಕ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮಾರ್ಗವಾಗಿ ಗಾಜಿನ ಮನೆಯವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು.

ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿ. 29ರಂದು ಬೆಳಿಗ್ಗೆ 10 ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ನವದೆಹಲಿಯ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ಸಮ್ಮೇಳನದ ನೆನಪಿನ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಸಾಹಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 4,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಡಿ. 29ರಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ (ವಿಶ್ವ ಮಾನವ ದಿನ) ಇರುವುದರಿಂದ, ಹಿರಿಯ ಲೇಖಕರಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಜೀವನ ಹಾಗೂ ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ದಲಿತ ಸಾಹಿತ್ಯ, ಕವಿಗೋಷ್ಠಿ ಹಾಗೂ ಆರು ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ. ಈ ಬಾರಿ ವಿಶೇಷವಾಗಿ ಮಕ್ಕಳ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸುಗಮ ಸಂಗೀತ, ನೃತ್ಯ, ರಂಗಗೀತೆ ಗಾಯನ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹರಿಕಥೆ ಸೇರಿದಂತೆ ವೈವಿಧ್ಯಮಯ ಕಲೆಗಳು ಪ್ರದರ್ಶನಗೊಳ್ಳಲಿವೆ.

ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ಎರಡು ದಿನಗಳ 'ಅನ್ಯಕಾರ್ಯದ ನಿಮಿತ್ತ' (OOD) ಸೌಲಭ್ಯ ನೀಡಲಾಗುವುದು. ಸಾರ್ವಜನಿಕರು, ಲೇಖಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

MORE NEWS

ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಇತಿಹಾಸ–ಗಿರಿಜನ ಸಂಸ್ಕೃತಿ ಗ್ರಂಥಗಳಿಗೆ ಭಾರೀ ಬೇಡಿಕೆ

30-12-2025 ರಾಂಚಿ

ರಾಂಚಿಯ ಜಿಲ್ಲಾ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುಸ್ತಕ ಮೇಳವು ಓದುಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿ...

ನಾಗರಿಕತೆಯ ಉತ್ಕೃಷ್ಟ ವಿಕಾಸಕ್ಕೆ ಪುಸ್ತಕಗಳ ಕೊಡುಗೆ ಅನುಪಮ; ಮಾನಸ

30-12-2025 ಚಿಕ್ಕಮಗಳೂರು

ಚಿಕ್ಕಮಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ವತಿಯಿಂದ ಇತ...

ನೈತಿಕ ಬದುಕಿನ ಸಾರ್ಥಕತೆಗೆ ಸಾಹಿತ್ಯ ಪೂರಕ : ಡಾ. ಎಂ. ವೇದಾಂತ್ ಏಳಂಜಿ

30-12-2025 ಚಿತ್ರದುರ್ಗ

ಚಿತ್ರದುರ್ಗ: ಆಶುಕವನಗಳಲ್ಲಿ ತತ್‌ಕ್ಷಣಕ್ಕೆ ಹೊಳೆಯುವ ವಿಚಾರಗಳನ್ನು ಅಭಿವ್ಯಕ್ತಿಸುವ ಕಲೆ ವಿರಳವಾದುದು. ಕವಿ ತಿಪ...