ವಿ. ಕೃ. ಗೊಕಾಕ್ ಜೀವನ ಮತ್ತು ಆದರ್ಶ: ಅನಿಲ್ ಗೋಕಾಕ್


'ನೀನು ಕನ್ನಡವನ್ನು ಕಲಿ’ ಎಂಬುದು ತಂದೆಯವರ ಮೂರನೆಯ ಮಾತಾಗಿತ್ತು. ಮನೆಯಲ್ಲಿ ಮರಾಠಿ, ಗುಜರಾತಿ ಭಾಷೆ ಬಳಸಿದರೆ ಬಹಳ ಜೋರಾಗಿ ಬೈಯ್ದು 'ನೀನು ಮನೆಯಲ್ಲಿ ಕನ್ನಡವನ್ನೇ ಮಾತನಾಡಬೇಕು’ ಎಂದು ಹೇಳುತ್ತಿದ್ದರು ಎನ್ನುತ್ತಾರೆ ಅನಿಲ್ ಗೋಕಾಕ್. ಅವರು 2023 ಏಪ್ರಿಲ್ 23ರಂದು ಬೆಂಗಳೂರಿನ ಶಿವರಾಮ ಕಾರಂತ ವೇದಿಕೆ ಮತ್ತು ವಿ. ಕೃ. ಗೋಕಾಕ್ ಟ್ರಸ್ಟ್ ಸಂಯುಕ್ತವಾಗಿ ವಿ. ಕೃ. ಗೋಕಾಕ್‍ರ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಗೋಕಾಕರ ಜೀವನ ಮತ್ತು ಆದರ್ಶ ವಿಶೇಷ ಉಪನ್ಯಾಸದಲ್ಲಿ ಮಾಡಿದ ಭಾಷಣದ ಅಕ್ಷರ ರೂಪ ಇಲ್ಲಿದೆ.

ನನ್ನ ತಂದೆ ವಿ. ಕೃ. ಗೋಕಾಕರರಿಂದ ವಿಶೇಷತಃ ಕಲಿತ ಆದರ್ಶದ ಬಗ್ಗೆ ಮೊದಲು ಹೇಳುತ್ತೇನೆ.

ನಾನು ದೇವರ ಕೃಪೆಯಿಂದ ಕೇವಲ ಐಎಎಸ್ ಅಷ್ಟೇ ಅಲ್ಲ ಇಂಡಿಯನ್ ಫಾರಿನ್ ಸರ್ವೀಸಿಗೂ ನಿಯುಕ್ತನಾಗಿದ್ದೆ. ಆಗ ನನಗೆ ಫಾರಿನ್ ಸರ್ವೀಸ್ ಸೇರಬೇಕೆಂದು ಬಹಳ ಹುರುಪಿತ್ತು. ಹಠ ಹಿಡಿದಿದ್ದೆ. ಆದರೆ ನನ್ನ ತಂದೆಯವರು `ಫಾರಿನ್ ಸರ್ವೀಸ್ ಸೇರಬೇಡ ಐಎಎಸ್ ಸೇರು’ ಎಂದಿದ್ದರು. ಕಾರಣ `ನಮ್ಮ ದೇಶವು ಬರಲಿರುವ ದಶಕಗಳಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಕ್ರಾಂತಿ ಕಾಣುತ್ತದೆ. ನೀನು ಐಎಎಸ್‍ನಲ್ಲಿದ್ದರೆ ಆ ಕ್ರಾಂತಿಯಲ್ಲಿ ನೇರವಾಗಿ ಭಾಗವಹಿಸಬಲ್ಲೆ. ಈ ರೋಮಾಂಚನ ನಿನಗೆ ಇಂಡಿಯನ್ ಫಾರಿನ್ ಸರ್ವೀಸ್‍ನಲ್ಲಿ ಸಿಗುವುದಿಲ್ಲ’ ಎಂಬ ಅಭಿಪ್ರಾಯ ಅವರದಾಗಿತ್ತು. ಅದಕ್ಕೆ ನಾನು ಒಪ್ಪಿದ್ದೆ. ಮುಂದೆ 36 ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರ ಉಪದೇಶದಲ್ಲಿದ್ದ ಜಾಣ್ಮೆಯ ಅರಿವು ನನಗಾಯಿತು. ಈ ದೇಶದಲ್ಲಿ ನಡೆದ ವಿವಿಧ ಕ್ರಾಂತಿಗಳನ್ನು ಕಣ್ಣಾರೆ ಕಂಡೆ. ನಾನೂ ಆ ಕ್ರಾಂತಿಗಳ ಉಪಕರಣವಾಗಿದ್ದೆ ಎಂಬ ಹೆಮ್ಮೆಯೂ ಇದೆ.

ತಂದೆಯವರು `ನೀನು ಭಗವದ್ಗೀತೆ, ರಾಮಾಯಣ, ಮಹಾಭಾರತದಂಥ ಕೃತಿಗಳನ್ನು ಓದು’ ಎಂದು ಹೇಳುತ್ತಿದ್ದರು. ನಾನು ಆ ಕಡೆಗೆ ಹೆಚ್ಚು ಲಕ್ಷ್ಯ ಕೊಡಲಿಲ್ಲ. ಅವರ ಮಾತಿನ ಪ್ರಸ್ತುತತೆಯ ಅರಿವಾದದ್ದು ನಾನು ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಹೋದಾಗ. ಒಮ್ಮೆ ಜಪಾನಿನಲ್ಲಿ ವಿಕಸನಶೀಲ ರಾಷ್ಟ್ರಗಳ ಸಮಾವೇಶಕ್ಕೆ ಹೋಗಬೇಕಾಗಿ ಬಂತು. ಆಗ ಟರ್ಕಿ ದೇಶದ ಪ್ರತಿನಿಧಿ ನನ್ನ ಹತ್ತಿರ ಬಂದು `ನೀವು ಭಾರತದ ಪ್ರತಿನಿಧಿಯಾ?’ ಎಂದು ಕೇಳಿದರು. `ಹೌದು’ ಎಂದೆ. `ನಿಮಗೆ ಭಗವದ್ಗೀತೆಯ ಬಗ್ಗೆ ಗೊತ್ತಿದೆಯಾ?’ ಕೇಳಿದರು. ನಾನು ಗೊತ್ತಿರುವಷ್ಟು ಹೇಳಿ `ನನ್ನ ಸಹೋದ್ಯೋಗಿ ಇದ್ದಾರೆ. ಅವರು ಇನ್ನಷ್ಟು ಮಾಹಿತಿ ಕೊಡುತ್ತಾರೆ’ ಎಂದು ಅವರ ಹತ್ತಿರ ಕಳುಹಿಸಿದೆ. ಅವರು ಯಾಕೆ ಪ್ರಶ್ನೆ ಕೇಳಿದರೆಂಬುದು ಕುತೂಹಲವಾಯ್ತು. `ಈ ಪ್ರಶ್ನೆ ಕೇಳಿದ ಕಾರಣ ಏನು?’ ಎಂದು ಅವರನ್ನು ಕೇಳಿದೆ. ಅವರು ಹೇಳಿದರು: `ನಮ್ಮ ದೇಶ ಸೈಪ್ರಸ್ ಮತ್ತು ಟರ್ಕಿ ಇವರಿಬ್ಬರ ನಡುವೆ ಯುದ್ದ ನಡೆದಾಗ ನಮ್ಮ ರಾಷ್ಟ್ರದ ಉಪಾಧ್ಯಕ್ಷರು ಭಗವದ್ಗೀತೆಯನ್ನು ಓದಿ ಸ್ಫೂರ್ತಿ ಪಡೆದರಂತೆ. ಅದು ಅವರಿಗೆ ನೈತಿಕ ಬಲ ನೀಡಿತಂತೆ’ ಎಂದು. ಆಗ ನನಗೆ ತಂದೆಯವರ ಮಾತಿನ ಮಹತ್ವ ಅರಿವಾಯಿತು.

`ನೀನು ಕನ್ನಡವನ್ನು ಕಲಿ’ ಎಂಬುದು ತಂದೆಯವರ ಮೂರನೆಯ ಮಾತಾಗಿತ್ತು. ಮನೆಯಲ್ಲಿ ಮರಾಠಿ, ಗುಜರಾತಿ ಭಾಷೆ ಬಳಸಿದರೆ ಬಹಳ ಜೋರಾಗಿ ಬೈಯ್ದು `ನೀನು ಮನೆಯಲ್ಲಿ ಕನ್ನಡವನ್ನೇ ಮಾತನಾಡಬೇಕು’ ಎಂದು ಹೇಳುತ್ತಿದ್ದರು. ಕನ್ನಡವನ್ನು ಬಲವಂತವಾಗಿ ಕಲಿಸಿದರು. ಅದರ ಉಪಯೋಗ ನಾನು ದಿಲ್ಲಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಸೇವೆಸಲ್ಲಿಸುವಾಗ ಗೊತ್ತಾಯಿತು. ಒಂದು ಫೈಲ್ ಮೇಲಧಿಕಾರಿಗಳಿಂದÉ ಬಂತು. ಆ ಫೈಲ್‍ಗೂ ನನಗೂ ಸಂಬಂಧ ಇರಲಿಲ್ಲ. ಕುತೂಹಲದಿಂದ ನೋಡಿದೆ. ಅದರಲ್ಲಿ ಕೆಲವು ಕನ್ನಡ ವಾಕ್ಯಗಳಿದ್ದವು. ಆ ಫೈಲ್‍ನಲ್ಲಿ ಬರೆದಿದ್ದ ಷರಾ ವಿವರಗಳನ್ನು ನೋಡಿದೆ. ಅದರಲ್ಲಿದ್ದ ಮಹತ್ವದ ಸಂಗತಿಗಳು ವರಿಷ್ಠರ ಗಮನಕ್ಕೆ ಬಂದಿಲ್ಲ ಎಂಬುದು ಖಾತ್ರಿಯಾಯಿತು. ನಾನು ಐಎಎಸ್ ಅಧಿಕಾರಿಯಾಗಿದ್ದರಿಂದ `ಇದು ನನ್ನ ಕರ್ತವ್ಯ’ ಎಂದು `ಈ ಫೈಲ್‍ಗೂ ನನಗೂ ಯಾವ ಸಂಬಂಧವೂ ಇಲ್ಲ. ಆದರೆ ಈ ವಾಕ್ಯಗಳು ಕನ್ನಡದಲ್ಲಿವೆ. ಅದರ ಇಂಗ್ಲಿಷ್ ಭಾವಾನುವಾದ ಇಲ್ಲಿ ನೀಡಿದ್ದೇನೆ. ಈ ಸಂಗತಿಗಳನ್ನು ಲೆಕ್ಕದಲ್ಲಿಟ್ಟುಕೊಂಡು ವರಿಷ್ಠರು ಯಥೋಚಿತವಾಗಿ ನಿರ್ಣಯ ತೆಗೆದುಕೊಳ್ಳಬಹುದು’ ಎಂದು ಬರೆದು ಕಳಿಸಿದೆ. (ನಾನು ಆಗ ಡೆಪ್ಯೂಟಿ ಸೆಕ್ರೇಟರಿ ಆಗಿದ್ದೆ) ಅದುಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರವರೆಗೆ ಹೋಯಿತು. ಅದರಲ್ಲಿ ಎಲ್ಲರೂ ಸಹಿ ಹಾಕಿದ್ದರು. ಆಮೇಲೆ ಶ್ರೀಮತಿ ಇಂದಿರಾಗಾಂಧಿಯವರು ಅದರ ಬಗ್ಗೆ ಗಂಭೀರವಾಗಿ ಯೋಚಿಸಿದರು. ಕೆಲವು ಆದೇಶಗಳನ್ನು ಕೊಟ್ಟರು. ಹೀಗೆ ನಾನು ತಂದೆಯವರ ಕಡೆಯಿಂದ ಅನೇಕ ಮಹತ್ವದ ಸಂಗತಿಗಳನ್ನು ಕಲಿತೆ.

ಇನ್ನು ಅವರ ಜೀವನದ ಬಗ್ಗೆ ಸ್ವಲ್ಪ ವಿಶ್ಲೇಷಣಾತ್ಮಕವಾಗಿ ವಿವರಿಸುತ್ತೇನೆ. ಅವರ ಜೀವನದ ಮೊದಲ ಹಂತ 1909– 1925. ಇದು ಸವಣೂರಿನಲ್ಲಿ ಕಳೆದ ಕಾಲ. ಮನೆಯಲ್ಲಿ ಧಾರ್ಮಿಕ ವಾತಾವರಣವಿತ್ತು. ಪ್ರತಿದಿನ ಸಂಜೆ ಭಜನೆಯಾಗುತ್ತಿತ್ತು. ಸಣ್ಣತಿಮ್ಮಪ್ಪ ಎಂಬ ಪೂಜಾರಿ ದುರ್ಗಾದೇವಿಯ ಗುಡಿಯಲ್ಲಿದ್ದ. ಅವರ ಜೋಡಿ ಸ್ನೇಹ ಬೆಳೆಯಿತು. ಸವಣೂರಿನ ಧಾರ್ಮಿಕ ವಾತಾವರಣ. ಅಲ್ಲಿಯ ನವಾಬನ ನಿಷ್ಪಕ್ಷಪಾತ ಆಡಳಿತ, ಶಾಲೆಯಲ್ಲಿದ್ದ ಒಳ್ಳೆಯ ಮೇಷ್ಟ್ರು ಈ ತ್ರಿವಳಿ ಸಂಗಮದ ಮೂಲಕ ನಮ್ಮ ತಂದೆಯವರ ಶೈಕ್ಷಣಿಕ ಅಡಿಪಾಯ ಭದ್ರವಾಯಿತು.

ಮುಂದೆ 1925ರಿಂದ 1936ರವರೆಗಿನ ಜೀವನ ಎರಡನೆಯ ಹಂತ. ಇದರೊಳಗೆ ಎರಡು ಭಾಗಗಳಿವೆ. 1925-31 ಧಾರವಾಡ, 1931-36 ಪುಣೆ. ಧಾರವಾಡದಲ್ಲಿದ್ದಾಗ ಅವರಿಗೆ ಬೇಂದ್ರೆಯವರ ಪರಿಚಯವಾಯಿತು. ಅವರÀ ಪ್ರಭಾವದ ಮೂಲಕ ಕವನಗಳನ್ನು ಕೇವಲ ಇಂಗ್ಲಿಷಿನಲ್ಲಿ ಬರೆಯದೇ ಕನ್ನಡದಲ್ಲಿಯೂ ಬರೆಯಲು ಪ್ರಾರಂಭಿಸಿದರು. ಬೇಂದ್ರೆಯವರ ಮೂಲಕ ಅವರ ಮೇಲಾದ ಇನ್ನೊಂದು ಪ್ರಭಾವವೆಂದರೆ ಅರವಿಂದರ ತತ್ತ್ವಶಾಸ್ತ್ರದ ಪರಿಚಯ. `ಲೈಫ್ ಡಿವೈನ್’ ಮತ್ತು `ದಿ ಪ್ಯೂಚರ್ ಪೊಯಿಟ್ರಿ’ಯ ಮೂಲಕ ಅರವಿಂದರು ನನ್ನ ತಂದೆಯ ವ್ಯಕ್ತಿತ್ವ ಮತ್ತು ಸಾಹಿತ್ಯದ ಮೇಲೆ ಅಸಾಧಾರಣ ಪ್ರಭಾವ ಬೀರಿದರು. ಬೇಂದ್ರೆಯವರ ಗೆಳೆಯರ ಗುಂಪಿನ ಮೂಲಕ ಸಾಮರಸ್ಯದ ಮಹತ್ವವೂ ಅವರಿಗಾಯಿತು. ಯಾಕೆಂದರೆ ಆ ಗೆಳೆಯರ ಗುಂಪಿನ ಮೂಲಾಧಾರವೇ ಗೆಳೆತನವಾಗಿತ್ತು. ಇನ್ನು 1931-1936ರವರೆಗೆ ಅವರು ಪುಣೆಗೆ ಪ್ರಾಧ್ಯಾಪಕರಾಗಿ ಹೋದರು. ಅಲ್ಲಿ ಕಳೆದ ಕಾಲದ ಮಹತ್ವವೆಂದರೆ ಬೇಂದ್ರೆಯವರ ಸಂಬಂಧ ಮತ್ತೆ ಒದಗಿಬಂದದ್ದು. ಇಲ್ಲಿ ಬೇಂದ್ರೆಯವರು ನಮ್ಮ ತಂದೆಯವರ ವಿದ್ಯಾರ್ಥಿಯಾದರು. ಅವರು ಎಂ. ಎ. ಕಲಿಯಲು ಬಂದಿದ್ದರು. ಇಬ್ಬರೂ ಕೂಡಿ ಸುನೀತಗಳನ್ನು ಬರೆದರು. ಇನ್ನೊಂದು ಮಹತ್ವದ ಸಂಗತಿಯೆಂದರೆ ಇಡೀ ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಆದರ್ಶವಾದದ ಸ್ಥಾನವಿದೆ ಎಂಬುದು ಗೊತ್ತಾಯಿತು. ಏಕೆಂದರೆ ಅನೇಕ ಗಣ್ಯವ್ಯಕ್ತಿಗಳ ಜತೆಗೆ ಅವರ ನಿಕಟ ಸಂಬಂಧ ಬೆಳೆಯಿತು. ಅಲ್ಲಿ `ಕಲೋಪಾಸಕ’ `ತ್ರಿಶಂಕುವಿನ ಆಕಾಶಗಂಗೆ’ ಮೊದಲಾದ ಕೃತಿಗಳು ಪ್ರಕಟವಾದವು. ಇದು ಬಹುಶಃ ಕನಸುಗಾರಿಕೆಯ ಕಾಲ. ಅವರ ಕಾವ್ಯ ಪರಿಶ್ರಮ ಧಾರವಾಡದಲ್ಲಿ ಪ್ರಾರಂಭವಾಗಿತ್ತು. ಷೆಲ್ಲಿ, ಕೀಟ್ಸ್ ಮುಂತಾದವರ ಪ್ರಭಾವ ಮುಂದುವರೆದು ಪುಣೆಯಲ್ಲಿ ಆ ಪ್ರಭಾವ ಹೆಚ್ಚು ಉತ್ಕಟವಾಗಿ ಬೆಳೆಯಿತು. ಆಮೇಲೆ `ಜನನಾಯಕ’ ಎಂಬ ನಾಟಕವನ್ನು ಪುಣೆಯಲ್ಲಿಯೇ ಬರೆದರು. ಇದು ಅಲ್ಲಿ ಪ್ರದರ್ಶಿಸಲಾದ ಪ್ರಥಮ ಕನ್ನಡ ನಾಟಕ. ಮಹಾರಾಷ್ಟ್ರದ ಕಾಲೇಜಿನ ಗಣ್ಯವ್ಯಕ್ತಿಗಳೆಲ್ಲ ಅಲ್ಲಿ ಉಪಸ್ಥಿತರಿದ್ದರು.

ಮೂರನೆಯ ಹಂತ 1936 – 1940- ಇದು ಕ್ರಾಂತಿಕಾರಿ ಕಾಲ. ಇದರಲ್ಲಿ ಪ್ರಯಾಣ ಹೆಚ್ಚು. ಪ್ರಯಾಣದಲ್ಲಿ `ಸಮುದ್ರ ಗೀತೆ’ಗಳನ್ನು ಬರೆದರು. ಹೊಸ ಅನುಭವದಿಂದ ಹೊಸ ಸಾಹಿತ್ಯದ ನಿರ್ಮಿತಿ ಅಷ್ಟೇ ಅಲ್ಲ; ಎರಡು ನಾಗರಿಕತೆಗಳ ನಡುವಿನ ಸಂಘರ್ಷವನ್ನು ಅನುಭವಿಸಿದರು. (ಭಾರತೀಯ ನಾಗರಿಕತೆ - ಬ್ರಿಟಿಷರ ನಾಗರಿಕತೆಯಲ್ಲಿ ಕಂಡು ಸಂಘರ್ಷ) ಆಮೇಲೆ ಇಂಗ್ಲೆಂಡ್‍ಗೆ ತೆರಳಿದರು. ಅಲ್ಲಿ ಮಾಕ್ರ್ಸ್‍ವಾದದಿಂದ ಪ್ರಭಾವಿತರಾದರು. ಆಗ ಕನಸುಗಾರ ಕ್ರಾಂತಿಕಾರರ ನಡುವಿನ ಸಮನ್ವಯ ಸಾಧ್ಯವಿಲ್ಲವೆಂದೆನ್ನಿಸಿರಬೇಕು. ಮುಂದೆ ಅವರಿಗೆ ಆಪರೇಷನ್ ಆಯಿತು. ದೇವರ ಕೃಪೆಯಿಂದ ಬದುಕಿದರು. ಮೊದಲಿನಿಂದಲೂ ದೇವರನ್ನು ನಂಬುತ್ತಿದ್ದರು. ಈಗ ಅವರ ಪ್ರವೃತ್ತಿ ಭಕ್ತಿಯೆಡೆಗೆ ಸೆಳೆಯಿತು. ಆದರೆ ಮಾಕ್ರ್ಸ್‍ವಾದದ ಮೋಹ ಬಿಟ್ಟಿರಲಿಲ್ಲ. ಹೀಗಾಗಿ ಡೋಲಾಯಮಾನವಾದ ಸ್ಥಿತಿಯಲ್ಲಿ ಭಾರತಕ್ಕೆ ಮರಳಿದರು.

1940ರಿಂದ 1950 ಇದು ಅದರ ನಾಲ್ಕನೆಯ ಹಂತ. ಅದು ಸಾಂಗ್ಲಿ, ಧಾರವಾಡ, ಹೈದರಾಬಾದ್ ಕೊಲ್ಲಾಪುರದ ಅವರ ಜೀವನದ ಕಾಲಘಟ್ಟ. ಇಲ್ಲಿ ಅರವಿಂದರ ಪ್ರಭಾವವನ್ನು ಕಾಣುತ್ತೇವೆ. ಯಾಕೆಂದರೆ 1944-49ನಲ್ಲಿ ವೀಸ್‍ನಗರದಲ್ಲಿ ನಾವಿದ್ದೆವು. ಮನೆಯಲ್ಲಿ ಅರವಿಂದರ ಕೃತಿಗಳನ್ನು ಓದುತ್ತಿದ್ದರು. (ಆಗ ಅವರು ಓದುತ್ತಿದ್ದ ಪುಸ್ತಕಗಳು ಇನ್ನೂ ನನ್ನ ಮನೆಯಲ್ಲಿವೆ) ಒಬ್ಬ ವಿದ್ಯಾರ್ಥಿಯಂತೆ ಎಲ್ಲವನ್ನು ಓದಿ ಆ ಪುಸ್ತಕದ ಅಂಚಿನಲ್ಲಿ ಟಿಪ್ಪಣಿಗಳನ್ನು ಮಾಡಿರುವರು. ಈ ಎಲ್ಲದರ ಪರಿಣಾಮ `ಬಾಳದೇಗುಲದಲ್ಲಿ’ `ಊರ್ಣಾನಾಭ’, ಮುಂತಾದ ಕವನಗಳಲ್ಲಿ ವ್ಯಕ್ತವಾಗಿದೆ. `ಯುಗಾಂತರ’ ಅವರ ಮತ್ತೊಂದು ನಾಟಕ. `ಕನಸುಗಾರ’ ಮತ್ತು `ಕ್ರಾಂತಿಕಾರ’ರ ನಡುವೆ ಸಮನ್ವಯ ಸಾಧ್ಯವಿದೆ ಎಂಬ ಸಂದೇಶವೇ ಆ ನಾಟಕದ ತಿರುಳು. ಇದು 1942-1950ರ ಅವರ ಬದುಕು ಸಾಹಿತ್ಯದ ಮೇಲೂ ಪರಿಣಾಮ ಬೀರಿತು. ಸಾಂಗ್ಲಿಯಲ್ಲಿ ಅವರು ರಾಜೀನಾಮೆ ಕೊಟ್ಟು ಬಂದಿದ್ದರು. ಅವರಿಗೆ ಬೇರೆ ನೌಕರಿ ಸಿಕ್ಕಿರಲಿಲ್ಲ. ಆಗ ಅವರು ಅನುಭವಿಸಿದ ಕಟುತನ `ಸಮರಸವೇ ಜೀವನ’ ಕಾದಂಬರಿಯಲ್ಲಿ ಅಭಿವ್ಯಕ್ತಿ ಪಡೆದೆÉ. `ನರಹರಿಯ ವನವಾಸ’ ಎಂಬ ಅಧ್ಯಾಯದಲ್ಲಿ ಈ ಪ್ರಭಾವವನ್ನು ಗವiನಿಸಬಹುದು. ಆದರೆ ಇದೇ ಹಂತದಲ್ಲಿ ಅವರಿಗೆ ಅರವಿಂದರ ಪರಿಚಯವೂ ಆಗಿತ್ತು. ಅದಕ್ಕೆ ನರಹರಿಯ ವನವಾಸದ ಬಗ್ಗೆ ಬರೆಯುವಾಗ ಕೃತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾರೆ. ಆದರೆ ಒಬ್ಬ ತೇಜಸ್ವಿ ವ್ಯಕ್ತಿಯ ಗುರಿಯಲ್ಲಿ ಆದರ್ಶವನ್ನು ಕಾಣುತ್ತಾರೆ. ಅವನನ್ನು ನೋಡಿ ಪ್ರಭಾವಿತರಾಗಿ ಜೀವನದ ಹಾದಿಯೇ ಬೇರೆಯಾಗುತ್ತದೆ. ಇದು ಅರವಿಂದರು ಅವರ ಮೇಲೆ ಬೀರಿದ ಪ್ರಭಾವವೂ ಹೌದು. ಸ್ವಂತ ಬದುಕಿನಲ್ಲಿ ಹಣಕಾಸಿನ ತೊಂದರೆಯಾದಾಗ ಮನೋಹರ ಗ್ರಂಥಮಾಲೆಯ ಅಟ್ಟದ ಮೇಲೆ ಹೋಗಿ ಜಿ.ಬಿ ಜೋಶಿಯವರಿಗೆ `ಸಮರಸವೇ ಜೀವನ’ದ ಮುಂದಿನ ಅಧ್ಯಾಯಗಳನ್ನು ಬರೆದುಕೊಟ್ಟರು. ಅವರಿಗೆ ಅದರಿಂದ ರೂಪಾಯಿ 150 ಸಿಕ್ಕಿತ್ತು. ಹೀಗೆ ಹಣಕಾಸಿನ ಸಲುವಾಗಿಯೂ ಅವರು ಹೋರಾಡಿದರು.

ಅವರ ಐದನೆಯ ಹಂತ 1951 – 1965ರವರೆಗೆ-ಇದು ಪ್ರಯೋಗಶೀಲತೆಯ ಕಾಲ. ಅರವಿಂದರ ಪ್ರಭಾವ ಇನ್ನೂ ಹೆಚ್ಚು ಸ್ಪಷ್ಟವಾಗಿ ನಮಗೆ ಈ ಹಂತದಲ್ಲಿ ಕಂಡುಬರುತ್ತದೆ. ಅಮೆರಿಕ, ಜಪಾನ್, ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಅವರು ಭೇಟಿ ನೀಡಿದರು. ಇನ್ನೊಂದು ವಿಷಯವೆಂದರೆ ಅರವಿಂದರ ಸಾಹಿತ್ಯವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಂಡನಂತರ ಅವರಿಗೆ ಅರವಿಂದರ ತತ್ತ್ವಶಾಸ್ತ್ರ ವಿಶ್ವವ್ಯಾಪಕತೆ ಗೊತ್ತಾಗಿತ್ತು. ಈ ವಿಶ್ವವ್ಯಾಪಕತೆ ಅಮೆರಿಕ, ಜಪಾನ್ ಮುಂತಾದ ದೇಶಗಳಲ್ಲಿ ಭೇಟಿ ನೀಡಿದ ನಂತರ ಇನ್ನೂ ಖಚಿತಗೊಂಡಿತು. ಯಾಕೆಂದರೆ ಅಲ್ಲಿಯೂ ಆಧ್ಯಾತ್ಮಿಕ ವ್ಯಕ್ತಿಗಳನ್ನು ಕಂಡರು. ಅರವಿಂದರ ಶಿಷ್ಯರಲ್ಲಿ ಅಮೆರಿಕನ್ನರು, ಜಪಾನಿಯರು ಇದ್ದರು. ಹೀಗಾಗಿ ಮಾನವನ ಚೇತನದ ವಿಶ್ವವ್ಯಾಪಕತೆಯ ಪರಿಕಲ್ಪನೆ ಹೆಚ್ಚು ಭದ್ರಗೊಂಡಿತು. ಅವರ ಪ್ರಭಾವ `ದ್ಯಾವಪೃಥಿವಿ’, `ಊರ್ಣನಾಭ’, `ತ್ರಿಶಂಕುವಿನ…’ ಮುಂತಾದವುಗಳಲ್ಲಿ ಕಂಡುಬರುತ್ತದೆ. ಅರವಿಂದರ ತಂತ್ರಗಾರಿಕೆಯನ್ನು ನನ್ನ ತಂದೆ ನವ್ಯಕಾವ್ಯ ಪ್ರಯೋಗದಲ್ಲಿ ಬಳಸಿಕೊಂಡರು. ಒಂದು ಪೌರಾಣಿಕ ವಸ್ತುವನ್ನು ತೆಗೆದುಕೊಂಡು ಅದನ್ನು ಹೊಸ ಬೆಳಕಿನಲ್ಲಿ ಅರ್ಥೈಸಿ ನೂತನ ಕೃತಿಯೊಂದನ್ನು ರಚಿಸಿದರು. ಇದಕ್ಕೆ `ಸಾವಿತ್ರಿ’ ಮಹಾಕಾವ್ಯವೇ ಸಾಕ್ಷಿ.

1966 - 1971 ಇದು ಬೆಂಗಳೂರು ಮತ್ತು ಶಿಮ್ಲಾದಲ್ಲಿ ಕಳೆದ ಕಾಲ. ಇಲ್ಲಿ ಪ್ರಯೋಗಶೀಲತೆಯಿಂದ ಅವರು ಸಂಕೀರ್ಣತೆ ಕಡೆ ನಡೆದ ಪ್ರಯಾಣವನ್ನು ಕಾಣುತ್ತೇವೆ. ಸಾಯಿಬಾಬ ಅವರ ಪ್ರಭಾವವು 1965ರಿಂದ ಶುರುವಾಯಿತು. ಅವರ ಪ್ರಭಾವ ಅನೇಕ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಉದಾ: ಅರವಿಂದರ ಸಮನ್ವಯ ತತ್ತ್ವದ ಆಧಾರದ ಮೇಲೆ `ಸಮನ್ವಯ’ ಎಂಬ ತ್ರೈಮಾಸಿಕವನ್ನು ಪ್ರಕಟಿಸಿದರು. ಅಲ್ಲಿ ಅರವಿಂದರ `ಸಮನ್ವಯ ತತ್ತ್ವ’ವನ್ನು `ವಿಮರ್ಶಾಶಾಸ್ತ್ರ’ಕ್ಕೆ ಅನ್ವಯಿಸಿದರು. ಅದು ಸಮನ್ವಯದಲ್ಲಿ ಪ್ರಕಟವಾದ ನಾಗರಹೆಡೆ, ರಜೆ ಮುಂತಾದ ಕವನಗಳಲ್ಲಿಯೂ ಕಂಡುಬರುತ್ತದೆ. ಆಮೇಲೆ `ಕೊನೆಯ ದಿನ’ ಎಂಬ ಕವನವನ್ನು ಬರೆದರು. ಅದು ಅವರ `ಭಾರತ ಸಿಂಧೂರಶ್ಮಿ’ಗೆ ಪೂರ್ವಪೀಠಿಕೆಯಾದ ಕವನ ಎಂದು ಅವರೇ ಹೇಳಿದ್ದಾರೆ.

1971 – 80ಯವರೆಗಿನದು ಅವರ ಕಡೆಯ ಹಂತ. ಇಲ್ಲಿ ಅವರ `ಸಂಕೀರ್ಣತೆ’ ಮತ್ತು `ಅಧ್ಯಾತ್ಮಿಕತೆ’ ಇವುಗಳ ಸಫಲತೆಯನ್ನು ಕಾಣುತ್ತೇವೆ. ಸಂಕೀರ್ಣತೆಯ ಪಾರಮ್ಯವು `ಭಾರತ ಸಿಂಧೂರಶ್ಮಿ’ಯಲ್ಲಿದೆ. ಅವರು ಶಿಮ್ಲಾಕ್ಕೆ ಹೋಗದಿದ್ದರೆ ಆ ಕಾವ್ಯವನ್ನು ಬರೆಯುತ್ತಿರಲಿಲ್ಲ. ಕಾರಣ ಅಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿಯಲ್ಲಿ ರಾಜ್ಯದ ನಾಗರಿಕತೆಯ ಬಗ್ಗೆ ವಿದ್ವಾಂಸರು ಚರ್ಚಿಸುತ್ತಿದ್ದರು. ಅಲ್ಲಿಯ ಸಪ್ತಸಿಂಧು ಪ್ರದೇಶದ ಬಗ್ಗೆ ಮೇಲಿಂದ ಮೇಲೆ ಚರ್ಚೆಯಾಗುತ್ತಿತ್ತು. ಅದು `ಭಾರತ ಸಿಂಧೂರಶ್ಮಿ’ಯ ಮೇಲೆ ಪ್ರಭಾವ ಬಿರಿರುವ ಅಂಶ. ಅದರ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಕೇವಲ ಒಬ್ಬ ವ್ಯಕ್ತಿಯ(ವಿಶ್ವಾಮಿತ್ರ) ವಿಕಸನದ ಅನಾವರಣ ಅಲ್ಲ. ಬದಲಿಗೆ ದೇಶದ ವಿಕಸನದ ನಿರೂಪಣೆಯೂ ಹೌದು. ಭಾರತ ರಾಷ್ಟ್ರದ ಉಗಮ ಹೇಗಾಯಿತು. ಅದರ ವೈಶಿಷ್ಟ್ಯವೇನೆಂಬುದನ್ನು ನಾವು ಭಾರತ ಸಿಂಧೂರಶ್ಮಿಯಲ್ಲಿ ಕಾಣುತ್ತೇವೆ.

ಗೋಕಾಕರ ಆದರ್ಶದ ಪರಿಕಲ್ಪನೆ:

ನನ್ನ ತಂದೆಯವರು ತಮ್ಮ ಒಂದು ಭಾಷಣದಲ್ಲಿ ಹೇಳಿದ್ದಾರೆ. `ನನಗೆ ಮೂರು ಸ್ಪಷ್ಟವಾದ ಗುರಿಗಳಿದ್ದವು. 1. ವಿದ್ಯಾಭ್ಯಾಸದ ಕೇಂದ್ರ 2. ಕ್ರಿಯಾಶೀಲ ಸಾಹಿತ್ಯದ ರಚನೆ 3. ಸತ್ಯದರ್ಶನ / ದೇವರ ದರ್ಶನ’ ಎಂದು. ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಅವರ ಬಗ್ಗೆ ಹೇಳುವುದು ಬೇಕಿಲ್ಲ್ಲ. ಅನೇಕ ಸಂಸ್ಥೆಗಳನ್ನು ಕಟ್ಟಿದರು. ವೀಸ್ ನಗರದ ಕಾಲೇಜು ಆಮೇಲೆ ಕೊಲ್ಲಾಪುರ, ಶಿಮ್ಲಾ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಮಾಡಿದ ಕೆಲಸಗಳು ಎಲ್ಲರಿಗೂ ಗೊತ್ತಿರುವಂಥದೇ. ಅವರು ಕೀಟ್ಸ್ ಇದ್ದ ಮನೆಗೆ ಭೇಟಿ ನೀಡಿದ್ದರು. ಆ ಮನೆಯ ಹತ್ತಿರ ಒಂದು ವಸ್ತು ಸಂಗ್ರಹಾಲಯವಿತ್ತು. ಆ ವಸ್ತು ಸಂಗ್ರಹಾಲಯ ಮತ್ತು ಅವರ ಮನೆಯನ್ನು ನೋಡಿದ ಮೇಲೆ ಅವರ ಮನಸ್ಸಿನಲ್ಲಿ ಉಕ್ಕಿದ ಭಾವನೆಯನ್ನು ಅವರೇ ಈ ರೀತಿ ಅಭಿವ್ಯಕ್ತಿಸಿದ್ದಾರೆ. `ಕವಿಯೇ ನಿನ್ನ ಪ್ರತಿಭೆಯು ನನ್ನ ಅಂತರಂಗವನ್ನೇ ಕಲಕಿದೆ. ಅದು ಅಲ್ಲಿ ಮನೆ ಮಾಡಿಕೊಳ್ಳಲಿ. ಸ್ವತಂತ್ರ ರಾಷ್ಟ್ರದ ನಿರಂಕುಶ ಕವಿಯು ನೀನು. ನನ್ನ ದೇಶವೂ ಸ್ವತಂತ್ರವಾಗಲಿ. ನೀನು ಕವಿಯಾದರೆ ಸಾಕಿತ್ತು. ನಾನು ಕಾರ್ಯತಂತ್ರನೂ ಆಗಬೇಕು. ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡಬೇಕು. ನನ್ನ ಸಮಾಜದ ಅಸ್ಥಿಭಾರವನ್ನು ನಿಲ್ಲಿಸಬೇಕು. ಇದಕ್ಕೆಲ್ಲ ನಿನ್ನ ದೈವ ಸಾಕಾಗಲಾರದು. ಯೌವ್ವನದ ಭರದಲ್ಲಿ ತೀರಿಹೋದ ಕೀಟ್ಸ್. ನಿನ್ನ ಪ್ರತಿಭೆಗೆ ನನ್ನ ದೈವವನ್ನು ಜೋಡಿಸುವಂತೆ ದೇವರು ಕರುಣಿಸಲಿ. ಎಂದು ನಾನು ಮನಸ್ಸಿನಲ್ಲಿಯೇ ಅಂದುಕೊಂಡಿರಬೇಕು.’ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೊಫೆಸರ್ ಒಂದು ಸರ್ಟಿಫಿಕೇಟ್ ಕೊಡುವಾಗ ನಮ್ಮ ತಂದೆಯವರ ಗುಣವನ್ನು ಹೀಗೆ ವಿವರಿಸಿದ್ದರು. `ಐ ಹ್ಯಾವ್ ದಿ ಅಟ್ಮೋಸ್ಟ್ ಕಾನ್ಫಿಡೆನ್ಸ್ ಅಟ್ ಹಿಮ್. ಹ್ಯಾವ್ ದಿ ಯೂನಿವರ್ಸಿಟಿ ಟೀಚರ್. ದಟ್ ದಿ ರಿಯಲ್ ಪಾಟ್ ಇನ್ ದಿ ಎಜುಕೇಷನಲ್ ರೀ ಜನರೇಷನ್...’ ಎಂದು. ತಂದೆಯವರು ಕೇವಲ ಕವಿಯಾಗಲಿಲ್ಲ, ಕೇವಲ ಪ್ರಾಧ್ಯಾಪಕರಾಗಲಿಲ್ಲ, ಶೈಕ್ಷಣಿಕ ಕ್ಷೇತ್ರದಲ್ಲಿ ಒಬ್ಬ ಕಾರ್ಯಕರ್ತರೂ ಆಗಿದ್ದರು. ಹೀಗಾಗಿ ತ್ರಿವೇಣಿ ಸಂಗಮದಂತೆ ಅವರು ಖ್ಯಾತಿ ಪಡೆದರು. ಒಂದು ಉದಾಹರಣೆ: ಒಮ್ಮೆ ಬೆಂಗಳೂರಿನಿಂದ ಹೈದರಾಬಾದಿಗೆ ವಿಮಾನ ಮಾರ್ಗದಲ್ಲಿ ಹೋಗಿದ್ದರು. ಹೈದರಾಬಾದ್ ಏರ್‍ಪೋರ್ಟ್‍ನಲ್ಲಿ ಆ ವಿಮಾನದ ಪೈಲೆಟ್ ಬಂದು ಅವರಿಗೆ ಸೆಲ್ಯೂಟ್ ಮಾಡಿದರು. ಎಲ್ಲರನ್ನು ನೋಡಿದರು. ಆಮೇಲೆ `ನಿಮ್ಮ ಗುರುತೇನು?’ ಎಂದು ಕೇಳಿದಾಗ, ಪೈಲೆಟ್ `ನಾನು ಕೊಲ್ಲಾಪುರದಲ್ಲಿ ನಿಮ್ಮ ವಿದ್ಯಾರ್ಥಿಯಾಗಿದ್ದೆ. ನೀವು ನನಗೆ ಕಠೋರ ಶಿಕ್ಷೆ ಕೊಟ್ಟಿದ್ದಿರಿ. ಆದರೆ ಆ ಶಿಕ್ಷೆಯಿಂದ ನನ್ನ ಉದ್ದಾರವಾಯಿತು. ನಾನು ಈಗ ನಿಮಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ’ ಎಂದರು ಎರಡನೆಯದು: ನಾನು ಎಲೆಕ್ಷನ್ ಕಮೀಷನ್‍ನ ವರಿಷ್ಠಾಧಿಕಾರಿಯಾಗಿ ಸಾಂಗ್ಲಿಗೆ ಹೋಗಿದ್ದೆ. ನನ್ನ ಕೆಲಸ ಮುಗಿದಿತ್ತು. ಒಬ್ಬ ವ್ಯಕ್ತಿ ಬಂದು `ನನ್ನ ಮನೆಗೆ ಬನ್ನಿ. ನಿಮಗೆ ಹತ್ತು ರೂಪಾಯಿಯ ನೋಟನ್ನು ತೋರಿಸುತ್ತೇನೆ’ ಎಂದು ಹೇಳಿದರು. ನಾನು `ಹತ್ತು ರೂಪಾಯಿ ನೋಟು ತಗೊಂಡ್ ನಾನ್ ಏನ್ ಮಾಡ್ಲಿ. ಏನ್ ನೋಡ್ಲಿ’ ಎಂದೆ. ಆಗ ಅವರು ಒಂದು ಕಥೆ ಹೇಳಿದರು. `ನಿಮ್ಮ ತಂದೆಯವರು ಕಾಲೇಜಿನಲ್ಲಿ ನಾನು ಸಿಗರೇಟ್ ಸೇದಿದ್ದಕ್ಕೆ ನನ್ನನ್ನು ಶಿಕ್ಷಿಸಿ ಹತ್ತು ರೂಪಾಯಿ ದಂಡ ವಿಧಿಸಿದ್ದರು. `ನಾನು ಬಡ ವಿದ್ಯಾರ್ಥಿ. ನನ್ನ ಶಿಕ್ಷಣವೇ ಮುಗಿದು ಹೋಗುತ್ತೆ’ ಎಂದು ಕೇಳಿಕೊಂಡಿದ್ದೆ. ಆ ಕಾಲದಲ್ಲಿ ಹತ್ತು ರೂಪಾಯಿ ಇಂದಿನ ಸಾವಿರ ರೂಪಾಯಿಗೆ ಸಮವಾಗಿತ್ತು. ಆಗ ಅವರು ತಂದೆಯನ್ನು ಭೇಟಿಯಾಗಲು ಮನೆಗೆ ಹೋಗಿದ್ದರು. ಆಗ ನಮ್ಮ ತಂದೆಯವರು `ನಾನು ಏನ್ ಆದೇಶ ಕೊಟ್ಟಿದ್ದೀನಿ ಅದನ್ನು ಹಿಂದೆ ತೆಗೆಯುವುದಕ್ಕಾಗಲ್ಲ. ಯಾಕೆಂದರೆ ಬೇರೆ ಎಲ್ಲರೂ ಅದರ ಬಗ್ಗೆ ಮಾತಾಡ್ತಾರೆ. ಆದರೆ ನೀನೊಬ್ಬ ಒಳ್ಳೆಯ ಹುಡುಗ. ನಿನಗೆ ವೈಯಕ್ತಿಕವಾಗಿ ಹಾನಿ ಮಾಡುವ ಉದ್ದೇಶ ನನಗಿರಲಿಲ್ಲ’ ಎಂದು ಹೇಳಿ ತಮ್ಮ ಹತ್ತು ರೂಪಾಯಿ ನೋಟು ತೆಗೆದು ಕೊಟ್ಟರಂತೆ. ಆ ಹತ್ತು ರೂಪಾಯಿ ನೋಟಿಗೆ ಪ್ರತಿದಿನ ಅವರು ಪೂಜೆ ಮಾಡುತ್ತಿದ್ದರÀಂತೆ. ಇದು ಅವರ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತೊಂದು ವಿಚಾರ.

ಇನ್ನು ಕ್ರಿಯಾಶೀಲ ಸಾಹಿತ್ಯದ ಬಗ್ಗೆ ಹೇಳುವುದಾದರೆ ಅವರು ಇಂಗ್ಲಿಷಿನಲ್ಲಿ ರಚಿಸಿದ ಸಾಹಿತ್ಯದ ಮಹತ್ವ- ಅವರು `ಗೋಲ್ಡನ್ ಟ್ರೆಜರಿ’ ಎನ್ನುತ್ತಾರಲ್ಲ ಹಾಗೆ ಸಂಪಾದಿಸಿದ ಕವನ ಸಂಕಲನ. ಭಾರತೀಯರು ಇಂಗ್ಲಿಷಿನಲ್ಲಿ ರಚಿಸಿದ ಒಂದು ಕೃತಿ ರಚಿಸಿದರು. ಈಗಲೂ 35ನೆಯ ಆವೃತ್ತಿಯಾಗಿ ಪ್ರಕಟಣೆಯಾಗಿದೆ. ಆ ರೀತಿಯ ಮತ್ತೊಂದು ಪ್ರಯತ್ನ ಈವರೆವಿಗೆ ಆಗಿಲ್ಲ. ಭಾರತೀಯರು ಇಂಗ್ಲಿಷಿನಲ್ಲಿ ರಚಿಸಿದ ಸಾಹಿತ್ಯಕ್ಕೆ ಒಂದು ಮೂರ್ತ ಸ್ವರೂಪದಂತಿದೆ ಆ ಕೃತಿ. ಆ ನಿಟ್ಟಿನ ಅಧ್ಯಯನಕ್ಕೆ ಒಂದು ಆಕರವೂ ಆಗಿದೆ. ಅಷ್ಟೇ ಅಲ್ಲ; ಭಾರತೀಯರು ಇಂಗ್ಲಿಷಿನಲ್ಲಿ ರಚಿಸಿದ ಸಾಹಿತ್ಯ ಇತರ ಭಾಷೆಗಳಲ್ಲಿ ರಚಿಸಿದ ಸಾಹಿತ್ಯದಂತೆಯೇ ಭಾರತೀಯರ ಅಭಿಲಾಶೆಗಳನ್ನು ವ್ಯಕ್ತಪಡಿಸುತ್ತದೆ. ಆಮೇಲೆ ಭಾರತೀಯರು ಇಂಗ್ಲಿಷಿನಲ್ಲಿ ರಚಿಸಿದ ಸಾಹಿತ್ಯ ವಿಶ್ವಕ್ಕೆ ಕೊಟ್ಟ ಕೊಡುಗೆಯ ಕುರುಹೂ ಆಗಿದೆ.

ಸತ್ಯ ದರ್ಶನದ ಬಗ್ಗೆ ಹೇಳುವುದಾದರೆ ಚಿಕ್ಕವನಿರುವಾಗಲೇ ಅವರಿಗೆ ದೇವರ ಮೂರ್ತ ಸ್ವರೂಪವನ್ನು ಕಾಣಬೇಕು ಎಂದು ಒಂದು ದಿವಸ ಬೆಟ್ಟದ ಮೇಲೆ ದೇವರ ದರ್ಶನಕ್ಕೆ ಹೋಗಿದ್ದರು. ಆದರೆ ಆಗಲಿಲ್ಲ. `ಇನ್ನು ಕಾಯಬೇಕಾಗುತ್ತದೆ’ ಎಂದು ದಿ ರಿಯಲ್ ವಿಷನ್ ಎಂಬ ಇಂಗ್ಲಿಷ್ ಕವನದಲ್ಲಿ ಬರೆದಿದ್ದಾರೆ. ಮುಂದೆ ಬಾಳೆಕುಂದ್ರಿ, ಅರವಿಂದರು, ಸಾಯಿಬಾಬಾರವರ ಭೇಟಿಯಾಯಿತು. ಅವರು ಇವರ ಮೇಲೆ ಪ್ರಭಾವ ಬೀರಿದರು. ಸಾಯಿಬಾಬಾ ಅವರು ಬೀರಿದ ಪ್ರಭಾವ `ನರಹರಿ, ದಿ ಪ್ರಾಫಿಟ್ ಆಫ್ ನ್ಯೂ ಇಂಡಿಯಾ’ ಎಂಬ ಕಾದಂಬರಿಯಲ್ಲಿದೆ. ಇದು `ಸಮರಸವೇ ಜೀವನ’ದ ಐದನೆಯ ಭಾಗವೂ ಹೌದು. `ಇಜ್ಜೋಡು’, `ಸಮುದ್ರ ನಿರ್ವಹಣ’, `ನವಯುಗ ಪ್ರವರ್ತನ’, `ನರಹರಿ’, ಇವಿಷ್ಟೂ ಅವರ ಕಾದಂಬರಿಗಳು. ಇಜ್ಜೋಡಿನಲ್ಲಿ ಇದ್ದ ನರಹರಿ ನಮ್ಮ ತಂದೆಯ ಪ್ರತಿನಿಧಿ ಎಂದು ತಿಳಿಯಬಹುದು. ಆದರೆ ನೂತನಯುಗದ ಪ್ರವಾದಿ ಸಾಯಿಬಾಬಾರವರೇ ಆಗಿರುತ್ತಾರೆ. ನನ್ನ ತಂದೆಯವರು ಜಿಜ್ಞಾಸುವಿನ ಪಾತ್ರವನ್ನು ವಹಿಸುತ್ತಾರೆ. ಅವರು ಅನೇಕ ಪ್ರಶ್ನೆಗಳನ್ನು ನರಹರಿಗೆ ಕೇಳುತ್ತಾರೆ. ನರಹರಿ ಅದಕ್ಕೆ ಉತ್ತರಿಸುತ್ತಾರೆ. ಇನ್ನು ಅವರು ಸಾಯಿಬಾಬಾ ಅವರ ಕಡೆ ಬಂದ ಕಾರಣದ ಬಗೆಗೆ ಹೇಳುವುದಾದರೆ- ಅರವಿಂದರ ಬಗ್ಗೆ ತಂದೆಯವರಿಗೆ ಆದರವಿತ್ತು. ಯಾವಾಗಲೂ ದೂರದಿಂದ ಸಂದೇಶ ಕೊಡುತ್ತಾರೆ ಎಂದೂ ಅನ್ನಿಸುತ್ತಿತ್ತು. ಅವರಿಗೆ ನನ್ನ ಅಕ್ಕ ತೀರಿಹೋದ ನಂತರ ದೈವತ್ವದ ಸಾಮೀಪ್ಯವೂ ಬೇಕೆನಿಸಿದ್ದರಿಂದ ಆ ಗುಣವನ್ನು ಸಾಯಿಬಾಬಾ ಅವರಲ್ಲಿ ಕಂಡರು. ಅದಕ್ಕಾಗಿ ಅವರು ಸಾಯಿಬಾಬಾರ ಕಡೆಗೆ ಹೋದರು. ಆದರೆ ಸಾಯಿಬಾಬಾ ಅವರನ್ನು ಕಂಡ ಮೇಲೆ ಕೂಡ `ಸ್ವರ್ಗ ಎಷ್ಟು ಸಮೀಪವಿದೆ’ `ಆಧ್ಯಾತ್ಮಿಕತೆ ಎಷ್ಟು ಸುಲಭವಿದೆ’ ಎಂದೂ ಅನ್ನಿಸುತ್ತಿತ್ತು. ಒಮ್ಮೆ ನಾನು ಅವರಿಗೆ ಭೇಟಿಯಾದಾಗ `ನನ್ನ ಕೋಣೆಯಲ್ಲಿ ಏಕಾಂಗಿಯಾಗಿದ್ದಾಗ ಎಷ್ಟು ದೂರವಿದೆ ಅನ್ನಿಸುತ್ತದೆ. ಈ ಅಂತರವನ್ನು ದೂರ ಮಾಡಲು ನಾನು ಹವಣಿಸುತ್ತಿದ್ದೇನೆ’ ಎಂದು ಅವರು ಹೇಳಿದರು. ಇದೇ ಪ್ರವೃತ್ತಿ ಅವರು ಮರಣದ ಕೆಲ ತಿಂಗಳ ಹಿಂದೆ ಒಂದು ಇಂಗ್ಲಿಷ್ ಕವನದಲ್ಲಿದೆ. ನನ್ನ ಗಮನಕ್ಕೂ ಅವರ ಅನೇಕ ಕವನಗಳು ಬಂದಿರಲಿಲ್ಲ. ಅವರು ತೀರಿಹೋದ ನಂತರವೇ ನನ್ನ ಗಮನಕ್ಕೂ ಬಂತು. (ಅವನ್ನು ನಾನು ಪ್ರಕಟಿಸಿದೆ) 1992ರಲ್ಲಿ ಅವರು ತೀರಿಹೋದರು. ಹೀಗೆ ಅವರು ದೇವರ ಮತ್ತು ಮನುಷ್ಯರ, ಮಾನವ ಮತ್ತು ಮಾಧವರ ನಡುವಿನ ಅಂತರವನ್ನು ಕಡಿಮೆ ಮಾಡಲು ಅವರು ಸತತವಾಗಿ ಪ್ರಯತ್ನಿಸಿದರು. ಇದು ಅವರ ಜೀವನದ ಮೂರನೆಯ ಆದರ್ಶವಾಗುತ್ತಿತ್ತು.

-ಮಾತಿನಿಂದ ಬರಹಕ್ಕೆ ಸಚಿನ್ ಕೃಷ್ಣ.


MORE FEATURES

‘‌ವಿಕ್ಟರ್ ಫ್ರಾಂಕಲ್’ ಎಂಬ ಬೆಂಕಿಯಲ್ಲಿ ಅರಳಿದ ಹೂವು

11-05-2024 ಬೆಂಗಳೂರು

'ಈ ಪುಸ್ತಕವು ವಿಕ್ಟರ್ ಫ್ರಾಂಕಲ್ ಅವರ ಜೀವನ ಚರಿತ್ರೆ ಹೇಳುತ್ತಾ ಲೋಗೋಥೆರಪಿಯ ಬಗ್ಗೆ ಸ್ಥೂಲ ವಿವರಣೆ ನೀಡುತ್ತದೆ&z...

ಇಲ್ಲಿನ ಬರಹಗಳಲ್ಲಿ ಸೂಕ್ಷ್ಮವಾದ ಸ್ಪಂದನೆ ಮತ್ತು ಮನುಷ್ಯಪರವಾದ ಚಿಂತನೆಗಳಿವೆ

11-05-2024 ಬೆಂಗಳೂರು

‘ಈ ಕತೆಯು ಯಾವ ಭಾವುಕತೆಯೂ ಇಲ್ಲದೆ ತಾಯ್ತನದ ಬಗ್ಗೆ ಒಂದು ಹೊಸ ಚಿತ್ರವನ್ನೇ ಕಟ್ಟಿಕೊಡುತ್ತದೆ’ ಎನ್ನುತ್ತ...

ಲಘು ಧಾಟಿಯಲ್ಲಿದ್ದರೂ ಚಿಂತನೆಗೆ ಹಚ್ಚುವ ಗಂಭೀರ ವಿಚಾರಗಳೊನ್ನಳಗೊಂಡ ಕೃತಿ

11-05-2024 ಬೆಂಗಳೂರು

'ಒಟ್ರಾಸಿ ಪ್ರಸಂಗಗಳು' ಅವರ ಇತ್ತೀಚಿನ ಲಘು ಹರಟೆಗಳ ಸಂಕಲನ. ಇದರಲ್ಲಿರುವ ಹದಿನಾಲ್ಕು ಲೇಖನಗಳು ಲಘು ಧಾಟಿಯಲ್ಲ...