ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ


'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ಪುಸ್ತಕ, 'ಸಾವಿರದ ಒಂದು ಪುಸ್ತಕ', ಆಯ್ದ ವಿಮರ್ಶೆಗಳನ್ನು ಓದಿದಾಗ, ಈ ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ ಎನ್ನುವುದು ನನಗಂತೂ ಅರ್ಥವಾಗಿಬಿಟ್ಟಿತು' ಎನ್ನುತ್ತಾರೆ ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ನರೇಂದ್ರ ಪೈ ಅವರ 'ಸಾವಿರದ ಒಂದು ಪುಸ್ತಕ'ದ ಕುರಿತು ಬರೆದ ಅರ್ಥಪೂರ್ಣ ಲೇಖನ ನಿಮ್ಮ ಓದಿಗಾಗಿ.

ಇಂಗ್ಲೀಷ್ ನಲ್ಲಿ critique ಎಂದರೆ 'the art of criticism' ಎನ್ನುವ ಅರ್ಥ ಬರುತ್ತದೆ. criticism ಎಂದು ಬಿಟ್ಟರೆ ಟೀಕೆ ಎಂದಂತಾಗುತ್ತದೆ. ಈ ಟೀಕೆ ಎನ್ನುವ ಪದ ಕಲಾ ರಸಿಕ ಮತ್ತು ಕರ್ತೃ ಇಬ್ಬರನ್ನೂ ಬೆಸೆಯುವ ಮತ್ತು ಬೆಳೆಸುವ ಮಹತ್ವ ಉಳ್ಳದ್ದು. ಹಾಗಾಗಿಯೇ ಯಾವುದಾದರೂ ಪುಸ್ತಕವನ್ನು ಓದಿದ ನಂತರ ಟಿಪ್ಪಣಿ ಬರೆಯಬೇಕು ಎಂದು ತೀವ್ರವಾಗಿ ಅನಿಸಿದಾಗ ನಾನು ಅಪ್ಪಿ ತಪ್ಪಿಯೂ ಈ 'ವಿಮರ್ಶೆ' ಎನ್ನುವ ಪದವನ್ನು ಬಳಸುವುದಿಲ್ಲ. ನೇರವಾಗಿ ಹೇಳಬೇಕೆಂದರೆ ವಿಮರ್ಶೆ ಮಾಡುವಷ್ಟು ಚೆನ್ನಾಗಿ ಪುಸ್ತಕವನ್ನು ಓದಲು ಬರುವುದಿಲ್ಲ. ಪುಸ್ತಕಗಳ ಬರಹ ಪ್ರೌಢಿಮೆ ಮತ್ತು ಪ್ರತಿಭೆಯನ್ನು ಬೇಡುತ್ತದೆ ನಿಜ. ಆದರೆ ಓದುವುದೂ ಒಂದು ಕಲೆಯೇ ಎಂದು ಕೇಳಿದರೆ ಹೌದು ಎನ್ನುವೆ. ಅದರಲ್ಲೂ ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ಪುಸ್ತಕ, 'ಸಾವಿರದ ಒಂದು ಪುಸ್ತಕ', ಆಯ್ದ ವಿಮರ್ಶೆಗಳನ್ನು ಓದಿದಾಗ, ಈ ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ ಎನ್ನುವುದು ನನಗಂತೂ ಅರ್ಥವಾಗಿಬಿಟ್ಟಿತು. ಪುಸ್ತಕಗಳ ವಿಮರ್ಶೆಯನ್ನು ಇಷ್ಟು passionate ಆಗಿ, ಗಂಭೀರವಾಗಿ ಪರಿಗಣಿಸಿರುವ ಮತ್ತೊಬ್ಬ ವಿಮರ್ಶಕರನ್ನು ನಾನಂತೂ ಕಂಡಿಲ್ಲ. ನನ್ನ ಮಿತಿಗಳಲ್ಲೇ, ನನಗೆ ದಕ್ಕಿದ್ದಷ್ಟನ್ನೇ ಪುಸ್ತಕದ ತಿರುಳನ್ನಾಗಿಸಿ ಬರೆದುಬಿಡುವಾಗ ಇನ್ನು ಮುಂದೆ ಕೈ ನಡುಗುವುದಂತೂ ಖಂಡಿತ.

ಇಲ್ಲಿ ನೋಬಲ್ ಪುರಸ್ಕೃತ ಕೃತಿಗಳೂ ಸೇರಿದಂತೆ, ಭಾರತೀಯರೂ ಸೇರಿದಂತೆ, ದೇಶ ವಿದೇಶಗಳ ಲೇಖಕರ, ಬಹುತೇಕ ಸಮಕಾಲೀನರ, ಈಗಲೂ ಬರೆಯುತ್ತಿರುವವರ ಪುಸ್ತಕಗಳನ್ನೇ ಆಯ್ದುಕೊಂಡಿರುವುದು ವಿಶೇಷ. ಪ್ರತಿಯೊಬ್ಬರೂ ಓದಲೇಬೇಕಾದಂತಹ, ಬದುಕನ್ನು ಶ್ರೀಮಂತಗೊಳಿಸಬಹುದಾದ, ಸಾರ್ಥಕಗೊಳಿಸಬಹುದಾದ ಕೃತಿಗಳನ್ನು ನಮಗಾಗಿ ಹೆಕ್ಕಿ, ಸ್ಯಾಂಪಲ್ ಚಾಪ್ಟರ್ ಓದಿಸಿದಂತೆ ಪರಿಚಯಿಸಿ, ಓದುಗರಿಗೆ ಬೇಕಾದ ಪ್ರವೇಶಿಕೆಯನ್ನು ನೀಡಿ, ಈ ಕೃತಿಗಳ ಆಶಯದ ಕಡೆಗೆ ಓದುಗರನ್ನು orient ಮಾಡುವ ಈ ಕೃತಿ ಒಂದು ರೀತಿಯಲ್ಲಿ ಸ್ಪೂನ್ ಫೀಡಿಂಗ್ ಮಾಡಿದಂತಿದೆ. ಪ್ರಕಾಶಕರಾದ ಅಶ್ವತ್ ಎಸ್.ಎಲ್ ಹೇಳಿರುವಂತೆ ಸಾವಿರ ಪುಸ್ತಕಗಳು ನೀಡುವ ಹೊಳಹುಗಳನ್ನು, ಸಂವೇದನೆಗಳನ್ನು ಈ ಒಂದು ಪುಸ್ತಕ ನೀಡಿ, ನಮ್ಮ ವಿವೇಕಶೀಲತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿ, ಓದಿನ ವಿಸ್ತಾರವನ್ನು ಸಮೃದ್ಧಿ ಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಇಂಥ ಒಂದು ಶ್ರಮ ತೆಗೆದುಕೊಂಡಿರುವುದಕ್ಕೆ ನರೇಂದ್ರ ಪೈ ಅವರಿಗೆ ಧನ್ಯವಾದಗಳನ್ನು ಹೇಳಬೇಕು.

ಕುಟ್ಸಿ, ಮಿಲನ್ ಕುಂದೇರಾ, ಇಕೊ ಉಂಬರ್ತೊ, ಓರಾನ್ ಪಮುಕ್, ಜೆನ್ನಿ ಎರ್ಪೆನ್ ಬೆಕ್ , ಓಲ್ಗಾ ತೊಗಾರ್ಝುಕ್, ಯೋನ ಪಾಸೆ, ಅಂಜುಂ ಹಸನ್, ಅಜಿತನ್ ಕುರುಪ್, ಸೈರಸ್ ಮಿಸ್ತ್ರಿ, ಗೀತಾಂಜಲಿ ಶ್ರೀ ಹೀಗೆ ಪ್ರಸಿದ್ಧ ಲೇಖಕರ ಒಟ್ಟು ಹದಿನಾರು ಪುಸ್ತಕಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಕೃತಿಗಳ ಕಥಾ ವಸ್ತು, ಅದರ ಕೂಲಂಕುಷ ಚರ್ಚೆ, ಪ್ರಸ್ತುತತೆ, ಆಶಯ, ಲೇಖಕರ ಬರಹದ ಶೈಲಿ, ತಂತ್ರ, ಓದುಗರಿಂದ ಲೇಖಕ ನಿರೀಕ್ಷಿಸುವುದೇನು ಮತ್ತು ಓದುಗರು ಲೇಖಕರಿಂದ ಏನನ್ನು ನಿರೀಕ್ಷಿಸಬಹುದು, ವಸ್ತುವಿನ ಕುರಿತು ಬರೆಯುವಾಗಿನ ಲೇಖಕರ ನಿಲುವುಗಳೇನಿದ್ದಿರಬಹುದು, ಆ ಸಮಾಜದಲ್ಲಿ, ಆ ಸಂಸ್ಕೃತಿಯಲ್ಲಿ ಒಟ್ಟಾರೆ ನಾಗರೀಕತೆಯ ವಿಚಾರಗಳು, ಅಧೀರತೆಗಳು, ತಲ್ಲಣಗಳು, ಮನಸ್ಥಿತಿ, ಕಪ್ಪು ಬಿಳುಪು ಪಾತ್ರಗಳಿಗೆ ಜೋತು ಬಿದ್ದುಕೊಂಡೇ ಪಾತ್ರಗಳ ಮನಸ್ಸಿನ ಪ್ರಾಮಾಣಿಕ/ನೈಜ ಚಿತ್ರಣಗಳನ್ನು ತೋರಿಸುವುದು, ಕಡೆಗೆ ಈ ಕಥೆಗಳು ಓದುಗರಲ್ಲಿ ಹುಟ್ಟಿಸಬಹುದಾದ ಮತ್ತು ಹುಟ್ಟಿಸಬೇಕಾದ ಪ್ರಶ್ನೆಗಳೇನು, ಉತ್ತರಗಳನ್ನು ಕಂಡುಕೊಳ್ಳುವ ಬಗೆ (ಇದ್ದರೆ?), ಓದಿ ಮಡಿಚಿಟ್ಟ ಮೇಲೆ ಕಾಡಬಹುದಾದ, ಕಾಡಬೇಕಾದ ಅಂಶಗಳೇನು, ಒಂದೇ ವಸ್ತುವನ್ನು ವಿಭಿನ್ನ ಕಾಲಘಟ್ಟಗಳಲ್ಲಿ, ಜಾಗತಿಕ ನೆಲೆಗಳಲ್ಲಿ ತಮ್ಮದೇ ದೃಷ್ಟಿಕೋನದಿಂದ ಬರೆದಿರುವ ಇತರ ಲೇಖಕರು/ ಕೃತಿಗಳು, ಪ್ರತ್ಯೇಕಿಸಿ ನೋಡುವಾಗಲೂ ಎಲ್ಲೋ ಒಂದು ಕಡೆ ಎಲ್ಲವನ್ನೂ ಜೀವಪರವಾಗಿ ಬೆಸೆಯುವ ತಂತುಗಳೇನು ಎನ್ನುವ ಗಹನವಾದ ಆಲೋಚನೆಗಳು ಇವರ ಓದಿನ ವಿಸ್ತಾರತೆ, ಅಗಾಧತೆ, ಆಳಗಳಿಂದ ಒಮ್ಮೆ ಬೆರಗಾಗಿಸಿದರೆ ಇಂಥ ಒಂದು ದೊಡ್ಡ ಕ್ಯಾನ್ವಾಸ್ ದಿಗಿಲು ಮೂಡಿಸುತ್ತದೆ ಕೂಡ.

ಒಬ್ಬ ವಿಮರ್ಶಕನ ವಿಮರ್ಶನ ಪ್ರಕ್ರಿಯೆಯಲ್ಲಿನ ವ್ಯತ್ಯಸ್ಥ ಮನೋಧರ್ಮವನ್ನು ಗುರುತಿಸುವುದು ಮತ್ತು quantify ಮಾಡುವುದು, ದಾಖಲಿಸುವುದು ಹೇಗೆ ಎನ್ನುವ ಬಗ್ಗೆ ನಡೆಯಬೇಕಾದ ಚರ್ಚೆ ಮತ್ತು ಜಿಜ್ಞಾಸೆಯ ತೀವ್ರ ಅಗತ್ಯತೆಯನ್ನು ಮತ್ತು ಅದರ ಗೈರಿನಲ್ಲೇ ವಿಮರ್ಶಕರು, ಬಹುಮಾನ ವಿಜೇತರನ್ನು ನಿರ್ಧರಿಸುವವರು ಸದಾ ಟೀಕೆಗೆ ಗುರಿಯಾಗುತ್ತಿರುವುದು, ಜಾತಿ, ಲಿಂಗ, ಪ್ರಾಂತ್ಯ, ವರ್ಗ, ಭಾಷೆ ಮುಂತಾದ ಸಾವಿರಾರು ನೀತಿಗಳ ಬಂಧನದಲ್ಲಿ ಸಿಲುಕಿರುವ ವಿಮರ್ಶಕರ ಮಿತಿ, ಅವುಗಳೆಲ್ಲವನ್ನೂ ಒಪ್ಪಿಕೊಂಡು, ಅಂಥವುಗಳ ನಡುವೆಯೇ ಇದೆಲ್ಲ ಇದ್ದದ್ದೇ ಎಂದು ಒಪ್ಪಿಕೊಂಡಿರುವ ಸ್ಥಿತಿಯಲ್ಲಿ ವಿಮರ್ಶೆ ಕಳೆದುಕೊಂಡಿರುವ ಗೌರವ ಗುಣಗಳ ಕುರಿತೂ ಇಲ್ಲಿ ಹೇಳಿದ್ದಾರೆ.

ಉಂಬರ್ತೊ ಬರೆದ conception, communication, perception, analysis ಪ್ರಕ್ರಿಯೆಯಲ್ಲಿ ವಿಮರ್ಶೆಯ ಮಹತ್ವ, ಅಗತ್ಯಗಳನ್ನು ಕುರಿತೂ ಉಲ್ಲೇಖಿಸಿರುವುದು ವಿಶೇಷವಾಗಿ ಗಮನ ಸೆಳೆಯಿತು.

ಇಕೊ ಉಂಬರ್ತೊ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕೊಟ್ಟ ಆರು ಉಪನ್ಯಾಸಗಳ ಲಿಖಿತ ರೂಪದ ಕೃತಿ Six walks in the fictional woods ನಲ್ಲಿ ಜೆರಾರ್ಡ್ ಡಿ ನೆರ್ವಾಲನ ಸಿಲ್ವಿ ಕುರಿತ ಅಧ್ಯಾಯ 'ಕಾಡರಸಿ ಹೊರಟು ಕವಿತೆಯೊಂದಿಗೆ...' ಎನ್ನುವ ಅಧ್ಯಾಯ ನನಗೆ ಬಹಳ ಇಷ್ಟವಾಯಿತು. ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಚಲಿಸುತ್ತಾ, ಓದುಗರನ್ನು ಕಲ್ಪನೆ ಮತ್ತು ನೆನಪುಗಳಿಂದ ಹಿಂದೆ ಮುಂದೆ ಒಯ್ಯುತ್ತಾ ಕಥೆ ಹೇಳುವ ಲೇಖಕರ ಶೈಲಿ ಮತ್ತು ತಂತ್ರಗಳನ್ನು ಬಹಳ ಗಹನವಾಗಿ ಇಲ್ಲಿ ಚರ್ಚಿಸಿದ್ದಾರೆ. ನಿಜ ಹೇಳಬೇಕೆಂದರೆ ಇದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವೆ ಎಂದು ವಿಶ್ವಾಸದಿಂದ ಹೇಳಲಾರೆ. ಇದನ್ನು ಮತ್ತೊಂದೆರಡು ಬಾರಿ ಓದಬೇಕಿದೆ. ಇಲ್ಲಿ ಒಂದು ಚಿತ್ರದ ಮೂಲಕ ಅರ್ಥ ಮಾಡಿಸುವ ಪ್ರಯತ್ನವನ್ನು ನೋಡಿದಾಗ ನರೇಂದ್ರ ಪೈ ಅವರು ಈ ಕೃತಿಯನ್ನು ಅದೆಷ್ಟು passionate ಆಗಿ ಬರೆದಿದ್ದರೆ ಎನ್ನುವುದು ಅರ್ಥವಾಗುತ್ತದೆ.

ಓದುಗರ ಕಲ್ಪನಾಶಕ್ತಿಯನ್ನು ಉದ್ದೀಪನಗೊಳಿಸುವ, ಕಣ್ಣೆದುರಿಗೇ ಕಾಣುವಂತೆ ಬರೆಯುವ 'Ekphrasis' ಎನ್ನುವ ಒಂದು literary device ಅಥವಾ ತಂತ್ರದ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದಾರೆ. ಪದಗಳಲ್ಲೇ ತೋರಿಸಿ, ತಮ್ಮ ಕಲ್ಪನಾಶಕ್ತಿಯ ಬಗ್ಗೆ ಓದುಗರೇ ಬೆರಗಾಗುವಂತೆ ಬರೆಯುವ ಈ ಕಲೆ ಕುತೂಹಲ ಹುಟ್ಟಿಸಿತು. 'ಡಬಲ್ ಕೋಡಿಂಗ್' ಅಂದರೆ ಒಂದೇ ವಾಕ್ಯವು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ನೋಡಿದಾಗ ವಿಭಿನ್ನ ಅರ್ಥಗಳನ್ನು ಮೂಡಿಸುವ, ಬುದ್ಧಿವಂತಿಕೆಯ, ವ್ಯಂಗ್ಯ ಮತ್ತು ಚತುರೋಕ್ತಿಯ ಬಳಸುವ ತಂತ್ರದ ಬಗ್ಗೆಯೂ ಚೆನ್ನಾಗಿ ವಿವರಿಸಿದ್ದಾರೆ.

ಒಂದು ವಿಚಾರವನ್ನು ಮಂಡಿಸುವ ಮೊದಲು, ಲೇಖಕ ಬಯಸಿದಂತೆಯೇ ಓದುಗ ಗ್ರಹಿಸಲಿ ಎನ್ನುವ ಉದ್ದೇಶದಿಂದ ಓದುಗರನ್ನು ಹೇಗೆ ಸಿದ್ಧಗೊಳಿಸಬೇಕು ಎನ್ನುವ ಕುರಿತು #ಕೆವಿ_ತಿರುಮಲೇಶ್ ಹೇಳಿರುವುದನ್ನು, 'ನಾವು ನಮ್ಮ ಮೌನದಲ್ಲಿ ನಮಗೆ ಹೇಳಿಕೊಂಡ ಮಾತು ಇನ್ನೊಬ್ಬರಿಗೂ ತಲುಪಲು ಯೋಗ್ಯವಾಗಿದೆ ಅನಿಸಿದಾಗ ನಾನು ಬರೆಯುತ್ತೇನೆ' ಎಂದ #ಯು_ಆರ್_ಅನಂತಮೂರ್ತಿ ಯವರ ಮಾತನ್ನೂ, 'ನಿಮಗೆ ಈಗಾಗಲೇ ಗೊತ್ತಿರುವ ಕತೆಯನ್ನೇನು ಬರೆಯುವುದು, ಗೊತ್ತಿಲ್ಲದೇ ಇರುವ ಕತೆಯನ್ನು ಬರೆಯತೊಡಗಿ' ಎಂದು ಹೇಳಿರುವ #ಜಯಂತ್_ಕಾಯ್ಕಿಣಿ ಅವರ ಮಾತುಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ಉದಯೋನ್ಮುಖ ಲೇಖಕರಿಗೂ ಈ ಕೃತಿಯನ್ನು ಪ್ರಸ್ತುತವನ್ನಾಗಿಸಿದೆ.

ಈಗಾಗಲೇ ಇಲ್ಲಿ ಪಟ್ಟಿ ಮಾಡಿರುವ ಕೆಲವು ಪುಸ್ತಕಗಳನ್ನು ಓದಲು ಕೊಂಡುಕೊಂಡಿದ್ದೇನೆ. ಅವುಗಳನ್ನು ಓದುವ ಮೊದಲು ಈ ಕೃತಿಯನ್ನು ಓದಿದ್ದು ಏನನ್ನು ಮತ್ತು ಹೇಗೆ ಗ್ರಹಿಸಬೇಕು ಎಂದು ತಿಳಿಯಲು ಅನುಕೂಲವಾಯ್ತು. ಒಟ್ಟಾರೆ ಓದುಗರು ಮತ್ತು ಲೇಖಕರು ಇಬ್ಬರಿಗೂ ಬಹಳ ಉಪಯುಕ್ತವಾಗುವಂತಹ ಈ ಕೃತಿಯನ್ನು ಬರೆದ ನರೇಂದ್ರ ಪೈ ಅವರಿಗೂ ಮತ್ತು ಇದನ್ನು ಪ್ರಕಾಶಿಸಿದ 'ಪುಸ್ತಕ ಮನೆ' ಅವರಿಗೂ ಅಭಿನಂದನೆಗಳು.

-ಪೂರ್ಣಿಮಾ ಮಾಳಗಿಮನಿ

 

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...