ವಾಟ್ಸಾಪ್‌ನಲ್ಲಿ ಮನೋಲ್ಲಾಸ ಹೆಚ್ಚಿಸುತ್ತಿರುವ ‘ಪಾರಿಜಾತ’ ಗಂಧ


ಪ್ರತಿಯೊಬ್ಬರ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸುವ ಸಾಮಾಜಿಕ ತಾಣಗಳು ಇಂದಿನ ‘ಮಾಧ್ಯಮ’ವೇ ಆಗಿವೆ. ಇಂತಹ ತಾಣಗಳಲ್ಲಿ ಒಂದಾದ ವಾಟ್ಸಾಪ್‌ನಲ್ಲಿ ಸಾಹಿತ್ಯಾಸಕ್ತ ವಿಷಯದ ಕುರಿತು ಚರ್ಚೆ-ಸಂವಾದದಲ್ಲಿ ತೊಡಗಿಸಿಕೊಂಡಿರುವ ವಿಶೇಷ ಗುಂಪುಗಳಲ್ಲಿ ಹೂವಿನ ಘಮಲನ್ನು ಎಲ್ಲೆಡೆ ಪಸರಿಸುತ್ತಿರುವ ‘ಪಾರಿಜಾತ ’ ವಾಟ್ಸಾಪ್‌ ಗುಂಪು ಅದರ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಶಿರಸಿಯ ಸಿಂಧುಚಂದ್ರ ಹೆಗಡೆ ಅವರು ಪರಿಚಯಿಸಿದ್ದಾರೆ. 

 

ಮೊದಲೆಲ್ಲಾ ‘ಗುಂಪಲ್ಲಿ ಗೋವಿಂದ’ ಎನ್ನುವ ಮಾತೊಂದಿತ್ತು. ಅಂದರೆ ಗುಂಪಲ್ಲಿ ಏನು ಮಾಡಿದರೂ ಗೊತ್ತಾಗುವುದಿಲ್ಲ, ಸಮುದ್ರದಲ್ಲಿ ಸೇರಿ ಹೋಗುವ ಮಳೆಹನಿಯಂತೆ ಎನ್ನುವ ಅರ್ಥದಲ್ಲಿ  ಆ ಮಾತನ್ನು ಬಳಸುತ್ತಿದ್ದರು.  ಆದರೆ ಈಗ  ಪರಿಸ್ಥಿತಿ ಹಾಗಿಲ್ಲ, ಗುಂಪುಗಳೆಂದರೆ ಗುಂಪಿನ ಸದಸ್ಯರ  ಸ್ವತಂತ್ರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡುವ, ಅವರ  ಸ್ವತಂತ್ರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ತಾಣಗಳಾಗಿವೆ. ಖಾಸಗಿಯಾಗಿ ಮಾಡಿಕೊಳ್ಳುತ್ತಿರುವ ವಾಟ್ಸಪ್ ಗುಂಪುಗಳು ಈಗ ಬಹಳ ಜನಪ್ರಿಯ. ಏಕೆಂದರೆ ಅವರವರ ಇಷ್ಟಕ್ಕನುಗುಣವಾಗಿ, ಅವರವರಿಗೆ ಬೇಕಾದವರನ್ನು  ಸೇರಿಸಿಕೊಂಡು ಗುಂಪುಗಳನ್ನು  ರಚನೆ ಮಾಡಿಕೊಂಡು  ಅವರ ವ್ಯಾಪ್ತಿಯಲ್ಲಿಯೇ ವಿಷಯಗಳನ್ನು ಹಂಚಿಕೊಳ್ಳುವುದು, ಚರ್ಚೆ ಮಾಡುವುದು ನಿತ್ಯ ಕಾಣುತ್ತಿರುವ ಗುಂಪುಗಳ ಕಾರ್ಯವೈಖರಿ. ನಾನು ಗಮನಿಸಿದ ಹಾಗೆ ಸಾಹಿತ್ಯದ ಗುಂಪುಗಳು, ಸಂಗೀತದ ಗುಂಪುಗಳು ತುಸು ಹೆಚ್ಚೇ ಎನ್ನುವಷ್ಟು ಹುಟ್ಟಿಕೊಂಡಿವೆ. ಒಂದು  ರಾಶಿ  ಗುಂಪುಗಳ ನಡುವೆ ತುಸು ಭಿನ್ನವಾಗಿ ಯೋಚಿಸಿ, ಸತ್ವವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ಸು ಕಂಡಿರುವ ಸಾಕಷ್ಟು ಗುಂಪುಗಳಿವೆ. ಗೋಪಾಲಕೃಷ್ಣ ಕುಂಟಿನಿಯವರ ‘ಕಥೆಕೂಟ’, ಮಾಲಿನಿ ಗುರುಪ್ರಸನ್ನ ಮತ್ತು  ಡಾ. ಗೋವಿಂದ ಹೆಗಡೆಯವರ ‘ ಕಾವ್ಯ ಕೇಳಿ’, ಆನಂದ ಋಗ್ವೇದಿಯವರ ‘ಪಾರಿಜಾತ’, ಇವೆಲ್ಲಾ ಈಗಾಗಲೇ ಸಾಕಷ್ಟು ಹೆಸರುಮಾತಾಗಿರುವ ಸಾಹಿತ್ಯಕ್ಕೆ ಸಂಬಂಧಿಸಿದ ಗುಂಪುಗಳಾಗಿವೆ.

“ಪಾರಿಜಾತ” ಇದು ಹೆಸರೇ ಸೂಚಿಸುವಂತೆ ತನ್ನ  ಪಾಡಿಗೆ ತಾನರಳಿ, ಅದರ ಬಳಿ ಹಾದು ಹೋದರೂ ಸಾಕು  ಅದರ ಘಮವನ್ನು ಮೈಗೆ ತುಸು ಬಳಿದು ಕಳಿಸುವ ,ಮಂದಹಾಸ ಬೀರುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುವ ಅನನ್ಯ ಹೂವಿನಂತಹ ಗುಂಪು. ಈ ಗುಂಪಿನ ಅಡ್ಮಿನ್ ಆನಂದ ಋಗ್ವೇದಿಯವರೇ ಹೇಳುವಂತೆ, ಕಾವ್ಯ ಕೇಳಿ ಗುಂಪಿನ ಉಪನಾವೆ ಈ ಪಾರಿಜಾತ ಗುಂಪು. ಕಾವ್ಯ ಕೇಳಿ ಮನೆಯ ಹಿರಿಯರಿರುವ ಹಜಾರವಾದರೆ , ಪಾರಿಜಾತ ಬಾಲ್ಕನಿ ಎಂಬ ಉಸಿರ್ದಾಣ.ಬಹಳ ಹಿರಿಯರು  ಮನೆಯ ಜಗುಲಿಯಲ್ಲಿ  ಮಾತನಾಡುತ್ತಿರುವಾಗ ಅಲ್ಲಿ  ಕಿರಿಯರು ಮೂಗು ತೂರಿಸಲು ಹೋದರೆ ಅನಾಹುತಗಳಾಗುವುದೇ ಜಾಸ್ತಿ ಎಂದೆನಿಸಿದಾಗ , ನಿರ್ಮಾಣವಾದಂತಹ ಗುಂಪು ಇದು.

ವಾಟ್ಸಾಪ್‌ ಗುಂಪುಗಳು ನಮಗೆ ನಿತ್ಯ ಪಾಠ ಹೇಳುತ್ತದೆ. ನಾವು ನಿತ್ಯ ಒಂದಲ್ಲ ಒಂದು ಹೊಸ ವಿಷಯವನ್ನು ಗುಂಪಿನ ಮೂಲಕ ಕಲಿಯುತ್ತಿರುತ್ತೇವೆ. ನಾವು ಬರೆದ ಲೇಖನಗಳನ್ನು/ಕವಿತೆಗಳನ್ನು  ನಾವೇ ಗುಂಪಿಗೆ ಹಾಕಿದಾಗ ಪ್ರತಿಕ್ರಿಯೆಗಳು ಕಡಿಮೆ, ಅದೇ ಬೇರೆಯವರು ಅದನ್ನು ಗುರುತಿಸಿ ಹಂಚಿಕೊಂಡಾಗ ಅದಕ್ಕೊಂದು ವಜನ್ ಬರುತ್ತದೆ ಎನ್ನುವುದು ನಾ ಕಂಡ ಸತ್ಯ’.

- ದೀಪಾ ಹಿರೇಗುತ್ತಿ, ಬರಹಗಾರ್ತಿ, ಪಾರಿಜಾತ ವಾಟ್ಸಾಪ್‌ ಗುಂಪಿನ ಸದಸ್ಯೆ

ಪಾರಿಜಾತದಲ್ಲಿ, ಇತ್ತೀಚೆಗೆ ಬರೆಯುತ್ತಿರುವವರು, ಬರವಣಿಗೆ ನಿಲ್ಲಿಸಿ ಮತ್ತೆ ಬರವಣಿಗೆಯೆಡೆಗೆ ಮುಖ ಮಾಡಿದವರು, ಅಂದರೆ ಕಿರಿವಯಸ್ಸಿನ , ಖ್ಯಾತನಾಮರಲ್ಲದ ಸದಸ್ಯರು ಹೆಚ್ಚಿದ್ದಾರೆ. ಹಾಗೆ ನೋಡಿದರೆ ಕವಯಿತ್ರಿಯರೇ ಜಾಸ್ತಿ. ಇಲ್ಲಿ ಎಲ್ರೂ ಕುಟುಂಬದ ಸದಸ್ಯರಂತೆ . ಪ್ರತಿಯೊಬ್ಬರ ಅನುಮತಿ ಪಡೆದೇ ಅವರನ್ನು ಗುಂಪಿಗೆ ಸೇರಿಸಲಾಗಿದೆ, ಎಂದು ಮುಗುಳ್ನಗುವ ಋಗ್ವೇದಿಯವರು, ವಾರದ ಪಾರಿಜಾತ ಎಂಬ ಕಾರ್ಯಕ್ರಮದ ಕುರಿತು ನೆನಪಿಸಿಕೊಳ್ಳುತ್ತಾರೆ. ಪ್ರತಿವಾರ ಪಾರಿಜಾತ ಗುಂಪಿನ ಸದಸ್ಯರೋರ್ವರ ಕೃತಿಗಳ ಬಗ್ಗೆ ಬರೆಯುವ ರೂಢಿಯನ್ನು ರೂಢಿಸಿಕೊಂಡಿದ್ದ ಋಗ್ವೇದಿಯವರ ಆ ಬರಹಗಳೆಲ್ಲವೂ ಈಗ ಪುಸ್ತಕ ರೂಪದಲ್ಲಿ  ಶಾಶ್ವತವಾಗುತ್ತಿದೆ.

ಪಾರಿಜಾತ ಪರಿವಾರದಲ್ಲಿ ಡಾ.ಗೋವಿಂದ ಹೆಗಡೆ, ಮಾಲಿನಿ ಗುರುಪ್ರಸನ್ನ, ದೀಪಾ ಹಿರೇಗುತ್ತಿ, ದೀಪ್ತಿ ಭದ್ರಾವತಿ, ಮಂಜುಳಾ ಹಿರೇಮಠ, ನಂದಿನಿ ಹೆದ್ದುರ್ಗ, ಆಶಾ ಜಗದೀಶ, ಪೂರ್ಣಿÂಮಾ ಸುರೇಶ, ವೀಣಾ ನಿರಂಜನ, ಡಾ. ಅಜಿತ್ ಹರೀಶಿ, ನಾಗರಾಜ ಮತ್ತಿಗಾರ, ವೆಂಕಟೇಶ್,  ಧನಂಜಯ ಕುಂಬ್ಳೆ, ರೇಖಾ ಭಟ್, ಸ್ಮಿತಾ, ಜಿ ವಿವೇಕ್, ಡಾ. ಲಕ್ಷ್ಮಣ್, ರೇಣುಕಾ ರಮಾನಂದ, ಅಂಜನಾ ಹೆಗಡೆ, ಅಕ್ಷತಾ ಬೇಲೇಕೇರಿ, ಶಮಾ ನಂದಿಬೆಟ್ಟ, ಸೈಯದ್ ಫೈಜುಲ್ಲಾ, ವಿಷ್ಣು ಹೊಸ್ಮನೆ, ಹೀಗೆ ಅನೇಕ ಬರಹಗಾರರಿದ್ದಾರೆ.  50 ಕ್ಕೂ ಹೆಚ್ಚಿನ ಸದಸ್ಯರು ಇರುವ ಈ ಗುಂಪಿನಲ್ಲಿ  ತೀರಾ ಕಟ್ಟುನಿಟ್ಟಾದ ನಿಯಮಾವಳಿಗಳಿಲ್ಲ. ಬೇರೆಯವರು ಬರೆದ ಕವಿತೆಗಳನ್ನು ಲೇಖನಗಳನ್ನು   ಇಲ್ಲಿ  ತಂದು ಹಂಚಿಕೊಂಡು ಓದುವ ಖುಷಿಯನ್ನು  ಎಲ್ಲರೂ ಅನುಭವಿಸುತ್ತಾರೆ. ಮಂಜುಳಾ ಹೇಳುವಂತೆ, ಸಂಕೋಚದ ಸ್ವಭಾವದ ಬಹಳ ಜನರಿಗೆ ಆತ್ಮವಿಶ್ವಾಸವನ್ನು  ತುಂಬಿದ ಗುಂಪು ಇದಾಗಿದೆ. ಪಾರಿಜಾತ ಒಂದು ಅನೌಪಚಾರಿಕ ತಾಣವಾದರೂ , ಪ್ರತಿಭೆಯ ಅನಾವರಣ ಆಗುತ್ತಿರುವ ವೇದಿಕೆಯೂ ಹೌದು ಎಂದು ಡಾ. ಗೋವಿಂದ ಹೆಗಡೆಯವರು ಹೇಳುತ್ತಾರೆ. ಯಾವುದೇ ರೀತಿಯ ತಪ್ಪು ತಿಳುವಳಿಕೆಗಳಿಗೆ ಅವಕಾಶ ಕೊಡದೇ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ  ಅಡ್ಮಿನ್ನರ ಕೌಶಲ್ಯದ ಬಗ್ಗೆ ಆಶಾ ಜಗದೀಶ್ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ದೀರ್ಘಕಾಲದ ನಂತರ ನಾನು ಮತ್ತೆ ಬರೆಯುತ್ತಿದ್ದೇನೆಂದರೆ ಅದಕ್ಕೆ ಕಾರಣ ಪಾರಿಜಾತ ಎಂದು ನಗೆ ಬೀರುತ್ತಾರೆ ಅಂಜನಾ ಹೆಗಡೆ.

ಇದನ್ನು ಓದಿ: ಕತಾ ಚರ್ಚೆಯ ಚಾವಡಿ ‘ಕಥೆ ಕೂಟ’

ನನ್ನ ಹಳೆ ಗೆಳತಿ ದೀಪಾ ಹಿರೇಗುತ್ತಿ ತುಂಬಾ ಮಾತನಾಡಿದ್ದು ಈ ಗುಂಪಿನ ಮೂಲಕವೇ. ಖುದ್ದಾಗಿ ಅಂಕಣಗಾರ್ತಿಯಾಗಿರುವ ದೀಪಾ ಹೇಳುವಂತೆ ಈಗಂತೂ ಒಬ್ಬರೇ ನಾಲ್ಕಾರು ಸಾಹಿತ್ಯಿಕ ಗುಂಪುಗಳಲ್ಲಿರುವುದು ಸರ್ವೆ ಸಾಮಾನ್ಯ. ಹಾಗಂತ ತಮ್ಮ ಪ್ರತಿ ಬರಹಗಳನ್ನು  ಎಲ್ಲಾ ಗುಂಪುಗಳಲ್ಲಿ  ಹಾಕುತ್ತಾ ಬಂದರೆ , ಪದೇ ಪದೇ ಅದೇ ಪೋಸ್ಟನ್ನು ನೋಡಿ ಕಿರಿಕಿರಿ ಆಗುವ ಸಂಭವವೂ ಇದೆ ಎನ್ನುವುದು ದೀಪಾಳ ಅನಿಸಿಕೆ.

ಪಾರಿಜಾತದಲ್ಲಿ ಮುಕ್ತವಾಗಿ ಮಾತನಾಡುವ ಆನಂದವಿದೆ ಎಂದು ಹೇಳಿದ ಪೂರ್ಣಿಮಾ ಸುರೇಶ್, ಇಲ್ಲಿ ಗಂಭೀರವಾಗಿರಬೇಕೆಂಬ ರಗಳೆಯಿಲ್ಲ ಎಂದು ನಿರಾಳವಾಗುತ್ತಾರೆ. ಅವರಿವರ ಬರಹಗಳಿಗೆ ಹೊಗಳುತ್ತಾ, ಕಾಲೆಳೆದುಕೊಳ್ಳುತ್ತಾ, ನಗುತ್ತಾ, ಹಾಡುತ್ತಾ, ಕೆಲವೊಮ್ಮೆ ಸಂತೈಸುತ್ತಾ, ಅವರವರ  ಸಂಸಾರ ಮತ್ತು ಕಾರ್ಯಕ್ಷೇತ್ರದ ಜಂಜಡಗಳಿಂದ ವಿರಮಿಸಿಕೊಳ್ಳಲು ವಿರಾಮತಾಣದಂತಿರುವ ಪಾರಿಜಾತ ಗುಂಪು ಎಲ್ಲಿಯೂ ಸದಸ್ಯರನ್ನು  ಸರಪಳಿಗಳಿಂದ ಬಂಧಿಸಿಟ್ಟಿಲ್ಲ.  ನೀತಿ ನಿಯಮಗಳನ್ನು  ತಲೆ ಮೇಲೆ ಹೇರಿಲ್ಲ. ಬಹುಶಃ ಈ ಕಾರಣಗಳಿಂದಾಗಿಯೇ ಅದು ಹೂವಿನಂತೆ ಸಹಜವಾಗಿ ಅರಳಿ      ಗಂಧ-ಅಂದದಿಂದ ಸದಸ್ಯರ ಮನಸ್ಸುಗಳನ್ನು  ಆವರಿಸಿಕೊಂಡಿದೆ. ಹಾಗಂತ ಇಲ್ಲಿ  ಫಾರ್ವರ್ಡ ಮೆಸೇಜ್ ಗಳಿರುವುದಿಲ್ಲ, ಬೇಕಾ ಬಿಟ್ಟಿ ಜೋಕ್ ಗಳು ಹರಿದಾಡುವುದಿಲ್ಲ,  ಅನಗತ್ಯ ಲಿಂಕ್ ಗಳು ಬಂದು ಬೀಳುವುದಿಲ್ಲ, ಸಂಪೂರ್ಣ ಸ್ವಾತಂತ್ರ್ಯವಿದ್ದರೂ ಎಲ್ಲಾ ಸದಸ್ಯರು ಅವರವರ ಮಿತಿಗಳನ್ನರಿತು ಈ ಗುಂಪಿನಲ್ಲಿ ಪೋಸ್ಟ್ ಮಾಡುತ್ತಾರೆ. ಸಾಹಿತ್ಯದ ಕುರಿತಾದ ಪೋಸ್ಟ್ ಗಳ ಕುರಿತಂತೆ ಆರೋಗ್ಯಕರ ಚರ್ಚೆಗಳಾಗುತ್ತವೆ. ಚರ್ಚೆ ವೈಯಕ್ತಿಕ ನೆಲೆಗಟ್ಟಿನಲ್ಲಿ  ಆಗದಿರುವಂತೆ ಪ್ರತಿಯೊಬ್ಬರೂ ಎಚ್ಚರವಹಿಸುತ್ತಾರೆ.  ಹೀಗೇ ಎಲ್ಲರ ನಲಿವನ್ನು  ತನ್ನದೆನ್ನುವಂತೆ ಮಡಿಲಿಗೆ ಹಾಕಿಕೊಂಡು ಸಂಭ್ರಮಿಸುವ,  ಪರಸ್ಪರರ ನೋವಿಗೆ ಸಾಂತ್ವನ ಹೇಳುವ ಗುಂಪು ಪಾರಿಜಾತದ ಪುಟ್ಟ ತುಣುಕು ನಾನು ಎನ್ನುವ ಬಗ್ಗೆ ಬಹಳ ಹೆಮ್ಮೆಯಿದೆ ನನಗೆ. ಸಣ್ಣ ಸಮಾವೇಶ ಮಾಡಿ ಪಾರಿಜಾತದ ಗಂಧ ವನ್ನು ಮೈ ಮನಗಳಿಗೆ  ಪಸರಿಸುವ ಕ್ಷಣಕ್ಕಾಗಿ ಕಾದಿರುವ ಅಡ್ಮಿನ್ ಋಗ್ವೇದಿಯವರ ಕನಸು ಬೇಗ ನೆರವೇರಲಿ  ಎಂಬ ಆಶಯ ನನ್ನದು ಹಾಗು ಎಲ್ಲ ಸದಸ್ಯರದು. ಕೊರೋನ ಕಾಲದಲ್ಲೂ ಮನೋಲ್ಲಾಸವನ್ನು ಕಾಪಾಡಿಕೊಳ್ಳಲು ನೆರವಾದ ಪಾರಿಜಾತ ಬಳಗಕ್ಕೆ ಶರಣು ಶರಣು.


ಬರಹಗಾರ್ತಿ ಸಿಂಧುಚಂದ್ರ ಹೆಗಡೆ ವೃತ್ತಿಯಲ್ಲಿ ಖಾಸಗಿ ಬ್ಯಾಂಕ್‌ ಉದ್ಯೋಗಿಯಾಗಿದ್ದು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ನಗುತ್ತೇನೆ ಮರೆಯಲ್ಲಿ, ಕನಸಿನ ಕಾಡಿಗೆ, ರಸ್ತೆಯಲ್ಲಿ ಮೇ ಫ್ಲವರ್‌ ಇವರ ಪ್ರಮುಖ ಕೃತಿಗಳು. ಎಂ.ಕೆ. ಇಂದಿರಾ ಪ್ರಶಸ್ತಿ ಹಾಗೂ ಧಾರವಾಡ ಅವನಿ ರಸಿಕರ ರಂಗದ ದೇವಾಂಗನಾ ಪ್ರಶಸ್ತಿ ಪುರಸ್ಕೃತರು.


 

MORE FEATURES

ವೆಬ್‌ ಸಿರೀಸ್ ಕಥೆಯೊಂದನ್ನು ಕಾದಂಬರಿಯ ಮುಖಾಂತರ ನಿಮ್ಮ ಮುಂದಿಟ್ಟಿದ್ದೇನೆ: ಭಗೀರಥ

01-05-2024 ಬೆಂಗಳೂರು

‘ಕಲೆ ಎಂಬುದನ್ನು ವಿಸ್ತರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಅವಳಿ ಸಹೋದರರಾದ ಸಾಹಿತ್ಯ ಕ್ಷೇತ್ರ ಮತ್ತು ಸಿನಿಮಾ ಜ...

ಹೊಸ ತಲೆಮಾರಿಗಾಗಿ ‘ಅಮರ ಚಿಂತನೆ’ ಪುಸ್ತಕವನ್ನು ರೂಪಿಸಲಾಗಿದೆ

01-05-2024 ಬೆಂಗಳೂರು

'ಹೊಸ ತಲೆಮಾರಿನ ಯುವ ಮನಸುಗಳು ಹಾಗೂ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಪುಸ್ತಕವನ್ನು ರೂಪಿಸಲಾಗಿದೆ. ಇ...

ದೀರ್ಘವಾದ ಬರವಣಿಗೆಯೂ ಸರಾಗವಾಗಿ ಓದಿಸಿಕೊಳ್ಳುತ್ತದೆ: ಎಲ್.ಸಿ .ಸುಮಿತ್ರಾ

01-05-2024 ಬೆಂಗಳೂರು

ಇಪ್ಪತ್ತೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಲೇಖಕಿಯರ ಸಂಘದ ಒಂದು ದಿನದ ಸಾವಣ ದುರ್ಗ ಪ್ರವಾಸದಲ್ಲಿ ಮೊದಲು ಉಷಾ ಅವರನ್ನ...